ಚಿಲಿ ದೇಶದ ಜನರ ಸಾಮಾಜಿಕ ಬದುಕು ಹಾಗೂ ರಾಜಕೀಯ ಬೆಳವಣಿಗೆಗಳು ಹೆಣೆದುಕೊಂಡ ಘನವಾದ ಚರಿತ್ರೆಯ ಸಂಪುಟವಾಗಿ ಕಟ್ಟಿದ ಧೀಮಂತ ಸಿನೆಮಾ ಕಲಾವಿದ ಪ್ಯಾಟ್ರಿಷಿಯೊ ಗುಜ್ಮಾನ್, ಇತ್ತೀಚಿಗೆ ಇಲ್ಲವಾದರು. ಅವರ ಸೃಜನಶೀಲತೆ, ತುಡಿತ ಮತ್ತು ಕಟ್ಟಿಕೊಟ್ಟ ಸಾಕ್ಷ್ಯಚಿತ್ರಗಳತ್ತ ಒಂದು ನೋಟ...
ತನ್ನ ಪ್ರತಿ ಸಿನೆಮಾವನ್ನೂ ಚಿಲಿ ದೇಶದ ಜನರ ಸಾಮಾಜಿಕ ಬದುಕು ಹಾಗೂ ರಾಜಕೀಯ ಬೆಳವಣಿಗೆಗಳು ಹೆಣೆದುಕೊಂಡ ಘನವಾದ ಚರಿತ್ರೆಯ ಸಂಪುಟವಾಗಿ ಕಟ್ಟಿದ ಧೀಮಂತ ಸಿನೆಮಾ ಕಲಾವಿದ ಪ್ಯಾಟ್ರಿಷಿಯೊ ಗುಜ್ಮಾನ್(ಆಗಸ್ಟ್ 11, 1941- ಸೆಪ್ಟಂಬರ್ 15, 2026), ತಮ್ಮ 85ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅಪ್ಪಟ ಸಮಾಜವಾದಿ ಬದುಕಿನ ಕಣ್ಣೋಟದ ಗುಜ್ಮಾನ್, ಚಿಲಿಯ ಸಮಾಜವಾದಿ ಪಕ್ಷದ ನಾಯಕ ಸಲ್ವೋಡೊರ್ ಅಲಾಂಡೆ ಜನ ಸಾಮೂಹಿಕ ಚಳವಳಿಯ ಮೂಲಕ 1970ರಲ್ಲಿ ದೇಶದ ಅಧ್ಯಕ್ಷತೆ ವಹಿಸಿಕೊಂಡ ನಂತರದ ಒಂದು ವರ್ಷದ ಆಡಳಿತದ ಚಿತ್ರಣವನ್ನು ಕಟ್ಟಿಕೊಡುವ Primer Uno (First Year-1971) ಮೂಲಕ ಸಾಕ್ಷ್ಯ ಚಿತ್ರ ನಿರ್ದೇಶನದ ಬದುಕು ಆರಂಭಿಸಿದರು. 1973ರಲ್ಲಿ ಅಮೆರಿಕೆಯ CIAಯೊಂದಿಗೆ ಶಾಮೀಲಾಗಿ, ಜನರಲ್ ಪಿನೋಷೆಟಾ ಒಳಸಂಚಿನ ಮಿಲಿಟರಿ ಬುಡಮೇಲು ಕೃತ್ಯ ನಡೆಸಿ ಅಲಾಂಡೆಯ ಹತ್ಯೆಗೈದು ಮಿಲಿಟರಿ ಸರ್ವಾಧಿಕಾರ ಸ್ಥಾಪಿಸಿದಾಗ ಗುಜ್ಮಾನ್ ಬಂಧನಕ್ಕೆ ಒಳಗಾದರು. 1971-1973ರವರೆಗೆ ಚಿಲಿಯಲ್ಲಿನ ಬೆಳವಣಿಗೆಗಳನ್ನು ಗುಜ್ಮಾನ್ ಚಿತ್ರಿಸಿದ್ದರು; ಆ ರೀಲುಗಳನ್ನು ಉಪಾಯದಿಂದ ದೇಶದ ಹೊರಗೆ ಸಾಗಿಸಿ, ತಾವು ಹತ್ಯೆಯ ಅಪಾಯದಿಂದ ಪಾರಾಗಿ ಮೊದಲು ಕ್ಯುಬಾ, ನಂತರ ಸ್ಪೇನ್ ಮತ್ತು ಫ್ರಾನ್ಸ್‌ಗಳಲ್ಲಿ ದೇಶಭ್ರಷ್ಟನಾಗಿ ನೆಲೆಸಿದರು. ತಾವು ಚಿತ್ರಿಸಿದ್ದ ದೃಶ್ಯಗಳನ್ನು ಸಂಕಲಿಸಿ, ಇಂದಿಗೆ ಬಲು ಪ್ರಸಿದ್ಧಿ ಪಡೆದಿರುವ Battle of Chile ಎಂಬ ಮೂರು ಭಾಗಗಳ ಸಾಕ್ಷ್ಯಚಿತ್ರವನ್ನು ಕಟ್ಟಿ, ಸಾಕ್ಷ್ಯ ಚಿತ್ರಕ್ಕೆ ಚರಿತ್ರೆ ನಿರೂಪಣೆಯ ವ್ಯಾಕರಣವನ್ನು ರಚಿಸಿದರು.
ದೇಶ ಭ್ರಷ್ಟರಾಗಿ ಹೊರ ದೇಶಗಳಲ್ಲಿ ಬದುಕಿದರೂ, ಅವರ ಕಲಾ ಸೃಜನತೆಯ ಅನವರತ ಗಮನ ಚಿಲಿ ಹಾಗೂ ಅದರ ಜನ ಇತಿಹಾಸವಾಗಿತ್ತು. ತನ್ನ ನೆಲದ ಭೂಗೋಳ ವಿಶಿಷ್ಟತೆ, ಮಾನವ ಬದುಕಿನ ಹಾದಿ, ದೇಶ-ಪರದೇಶ ಅಧಿಕಾರ ದಾಹದಲ್ಲಿ ನಾಡು ಹಾದ ಬೆಂಕಿ ಕೊಂಡಗಳನ್ನು ಎಳೆ ಎಳೆಯಾಗಿ ಗ್ರಹಿಸಿ ಅವರು ಕಟ್ಟಿರುವ ತ್ರಿವಳಿಗಳಾದ- Nostalgia for light, The pearl button ಮತ್ತು The Cordillera of dreams- ಇವು ಸಾಕ್ಷ್ಯಚಿತ್ರ ಕಟ್ಟುವಿಕೆಗೆ ಹೊಸ ದಿಗಂತವನ್ನೇ ಸೃಷ್ಟಿಸಿದವು.
ಅವರ ಕೊನೆಯ ಕೃತಿ My Imaginary Country ಯು ಅಕ್ಟೋಬರ್ 2019ರಲ್ಲಿ ಚಿಲಿಯ ರಾಜಧಾನಿ ಸ್ಯಾಂಟಿಯಾಗೋದಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯು ಹೇಗೆ ನವ ಜನಾದೋಂಲನಕ್ಕೆ ಬೀಜವಾಗಿ, ದೇಶದ ಕಡೆಗಣಿತ ಜನ ಸಮೂಹವು ಸೆಟೆದೆದ್ದು ಹೊಸ ರಾಜಕೀಯ ದೆಸೆ ರೂಪಿಸಿತು ಎಂದು ನಿರೂಪಿಸುವ ಸಮಾಜಶಾಸ್ತ್ರದ ಕೈಪಿಡಿಯಾಗಿದೆ.
1973ರಲ್ಲಿ ಸಾಮ್ರಾಜ್ಯಶಾಹಿ ಕುಮ್ಮಕ್ಕಿನ ದೇಶಿ ಸರ್ವಾಧಿಕಾರದ ದಬ್ಬಾಳಿಕೆಯ ಕಾರಣ ದೇಶಭ್ರಷ್ಟನಾದ ಕಲಾವಿದನೊಬ್ಬ, ಐದು ದಶಕಗಳ ಕಾಲದ ತನ್ನ ಸಮಾಜವಾದಿ ತುಡಿತ, ಹತಾಶೆಗಳಿಗೆ- 1970-73ರ ಸಮಾಜವಾದಿ ನಾಡಿನ ಉಸಿರ ಕಣಗಳನ್ನು ಮೊಗೆದೆತ್ತಿ ಕೊಟ್ಟಂತೆ 80 ದಾಟಿದ ಗುಜ್ಮಾನ್‌ನನ್ನು ನವ ಯುವ ಚಳವಳಿ ಪುಳಕಿಸುವ ಬಗೆಯ ಭಾವತರಂಗಗಳ ದೃಶ್ಯ ಪ್ರತಿಮೆಗಳಿಗಾಗಿ My Imaginary Country ಯು ಅನನ್ಯವಾಗಿದೆ.
This video cannot be played in your browser. Open the video directly
ಹಿರಿಯ ಗೆಳೆಯ ದಾರ್ಶನಿಕ ಗುಜ್ಮಾನ್ ನೀವು ಚಿರಾಯು.

ಕೆ. ಫಣಿರಾಜ್
ಫಣಿರಾಜ್ ಅವರು ಬಳ್ಳಾರಿ ಜಿಲ್ಲೆಯ ಕೊಟ್ಟೂರಿನವರು. 35 ವರ್ಷಗಳ ಕಾಲ ಮಣಿಪಾಲದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೇಷ್ಟ್ರಾಗಿದ್ದು ವೃತ್ತಿ ವಿಶ್ರಾಂತಿ ಪಡೆದಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಕರ್ನಾಟಕದ ಎಡ-ದಲಿತ ಚಳವಳಿಗಳ ಸಂಗಾತಿಯಾಗಿದ್ದಾರೆ




