ರಾಣಿ ಚನ್ನಮ್ಮನ ಚರಿತ್ರೆ ಹಾಗೂ ಅವರು ಪ್ರತಿಪಾದಿಸಿದ ಸ್ವಾತಂತ್ರ್ಯ, ಸ್ವಾಭಿಮಾನ, ಧೈರ್ಯ ಮತ್ತು ಸಾಹಸದ ಆದರ್ಶಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಸ್ತ್ರೀ ಸಬಲೀಕರಣಕ್ಕೆ ರಾಣಿ ಚನ್ನಮ್ಮನ ಜೀವನ, ಹೋರಾಟವೇ ಪ್ರೇರಣೆ ಅದರಲ್ಲೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಈ ಮೌಲ್ಯಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿಜಯಪುರದ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ.ಎಂ ತ್ಯಾಗರಾಜ ಸಲಹೆ ನೀಡಿದರು.
ವಿಜಯಪುರ ನಗರದ ಡಾ. ಫ.ಗು ಹಳಕಟ್ಟಿ ಸ್ನಾತಕೋತ್ತರ ಕೇಂದ್ರದಲ್ಲಿ ರಾಣಿ ಚನ್ನಮ್ಮ ಅಧ್ಯಯನ ಪೀಠದ ವತಿಯಿಂದ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಸ್ತ್ರೀ ಸಬಲೀಕರಣಕ್ಕೆ ರಾಣಿ ಚನ್ನಮ್ಮನ ಜೀವನ ಮತ್ತು ಹೋರಾಟ ಪ್ರೇರಣಾದಾಯಕವಾಗಿದೆ. ವಿದ್ಯಾರ್ಥಿಗಳು ಅವರ ಚರಿತ್ರೆಯನ್ನು ಕೇವಲ ಇತಿಹಾಸದ ಭಾಗವಾಗಿ ನೋಡದೆ, ಅವರ ಹೋರಾಟದ ಮೌಲ್ಯಗಳು ಹಾಗೂ ಆದರ್ಶಗಳನ್ನು ಅಧ್ಯಯನ ಮಾಡಬೇಕು” ಎಂದು ಹೇಳಿದರು.
“ರಾಣಿ ಚನ್ನಮ್ಮ ಅಧ್ಯಯನ ಪೀಠವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಯೋಜಿತ ಕಾಲೇಜುಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಕಿತ್ತೂರು ಸಂಸ್ಥಾನದ ಇತಿಹಾಸದ ಕುರಿತು ನಾಲ್ಕು ಮಹಾವಿದ್ಯಾಲಯಗಳಲ್ಲಿ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸಗಳನ್ನು ಆಯೋಜಿಸಿರುವುದು ಉತ್ತಮ ಬೆಳವಣಿಗೆಯಾಗಿದೆ” ಎಂದು ಪ್ರೊ. ತ್ಯಾಗರಾಜ ಅಭಿಪ್ರಾಯಪಟ್ಟರು.
ಡಾ. ಕೆ.ಎನ್. ದೊಡ್ಡಮನಿ ಮಾತನಾಡಿ, “ರಾಣಿ ಚನ್ನಮ್ಮ ಹಾಗೂ ಕಿತ್ತೂರು ಸಂಸ್ಥಾನದ ಇತಿಹಾಸಕ್ಕೆ ಸಂಬಂಧಿಸಿದ ಸಮಗ್ರ ಯೋಜನೆಗಳನ್ನು ರೂಪಿಸಿಕೊಂಡು ಸಂಶೋಧನಾ ಕಾರ್ಯಗಳನ್ನು ಕೈಗೊಳ್ಳಬೇಕು” ಎಂದು ಸಲಹೆ ನೀಡಿದರು.
ರಾಣಿ ಚನ್ನಮ್ಮ ಅಧ್ಯಯನ ಪೀಠದ ನಿರ್ದೇಶಕ ಪ್ರೊ. ಎಸ್.ಎಂ. ಗಂಗಾಧರಯ್ಯ, ಡಾ. ಫ.ಗು. ಹಳಕಟ್ಟಿ ಸ್ನಾತಕೋತ್ತರ ಕೇಂದ್ರದ ಸಂಯೋಜಕ ಡಾ. ಚಂದ್ರಕಾಂತ ಕೋಳಿಗುಡ್ಡೆ, ಉಪಕುಲಸಚಿವ ಡಾ. ಡಿ.ಕೆ. ಕಾಂಬಳೆ, ಸಿಂಡಿಕೇಟ್ ಸದಸ್ಯ ರಫೀ ಭಂಡಾರಿ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.




