ನಾಯಕರ ನಡುವಿನ ಬಾಂಧವ್ಯ ರಾಜತಾಂತ್ರಿಕತೆಗೆ ಸಹಕಾರಿಯಾಗಬಹುದು. ಆದರೆ ಗೋದಿ ಮೀಡಿಯಾಗಳು ಅದನ್ನು ಸಿನಿಮಾ ಮಾದರಿಯಲ್ಲಿ ಬಿಂಬಿಸಿ ಗಂಭೀರ ಚರ್ಚೆಗಳನ್ನು ಮೂಲೆಗುಂಪು ಮಾಡಿದಾಗ, ಅದು ಸಾರ್ವಜನಿಕ ವಲಯದಲ್ಲಿ ಖಂಡಿತವಾಗಿಯೂ ಭಟ್ಟಂಗಿತನ ಮತ್ತು ಅತಿರೇಕ ಎಂದೇ ಅನಿಸಿಕೊಳ್ಳುತ್ತದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ರೀಲ್ಸ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ, ಚರ್ಚೆಗೆ ಒಳಗಾಗುತ್ತಿದೆ. ಮೆಲೊನಿ ಮತ್ತು ಮೋದಿ ಸೇರಿ ‘ಮೆಲೊಡಿ’ ಎಂಬ ಬಣ್ಣನೆ, ಮೋದಿ-ಮೆಲೊನಿ ಜೋಡಿ ಎಂಬಂತೆ ಬಿಂಬಿಸುವುದು – ಹೀಗೆ ಗೋದಿ ಮೀಡಿಯಾಗಳ ಕಪೋಕಲ್ಪನೆಯ ಮುಂದುವರೆದ ಭಾಗವೇ ಮಾಧ್ಯಮಗಳ ತಾಸುಗಟ್ಟಲೆ ಎಳೆಯುವ ‘ಮೆಲೊಡಿ ಪ್ರೈಮ್ ಸ್ಟೋರಿ’. ಹಲವು ವರ್ಷಗಳಿಂದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ, ಕಾಂಗ್ರೆಸ್ ನಾಯಕರುಗಳಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಚಾರಿತ್ರ್ಯಹರಣದಲ್ಲೇ ತೊಡಗಿರುವ ಗೋದಿ ಮೀಡಿಯಾಗಳು ಈಗ ಮೋದಿ ಭಟ್ಟಂಗಿತನದ ಅತಿರೇಕವನ್ನು ತಲುಪಿದೆ.
ನರೇಂದ್ರ ಮೋದಿ ಪ್ರಧಾನಿಯಾಗುವುದಕ್ಕೂ ಮುಂಚಿನಿಂದಲೂ ಕಾಂಗ್ರೆಸ್ ನಾಯಕರುಗಳನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಕೆಲವು ಮುಖ್ಯವಾಹಿನಿ ಮಾಧ್ಯಮಗಳಲ್ಲಿ ವ್ಯವಸ್ಥಿತವಾಗಿ ಸುಳ್ಳು ಸುದ್ದಿ ಅಥವಾ ತಿರುಚಿದ ಇತಿಹಾಸವನ್ನು ಹರಡುವ ಕಾರ್ಯಗಳು ನಡೆಯುತ್ತಲೇ ಇದೆ. ಅದರಲ್ಲೂ ಮೋದಿ ಪ್ರಧಾನಿಯಾದ ಬಳಿಕ ಇವೆಲ್ಲವೂ ಅತಿಶಯವಾಗಿದೆ. ಇನ್ನೊಂದೆಡೆ ಪ್ರಧಾನಿಯ ಹೊಗಳುಬಟ್ಟತನವೂ ಮಿತಿಮೀರಿ ಅಸಭ್ಯ, ಅಶ್ಲೀಲ ಎನಿಸುವ ಮಟ್ಟಿಗೆ ತಲುಪಿದೆ. ಮೋದಿ ಅನುಯಾಯಿಗಳೇ ಮೋದಿಯ ಚಾರಿತ್ರ್ಯವನ್ನ ಹರಿದು ಹಿಪ್ಪೆಹಾಕುತ್ತಿರುವಂತೆ ಕಾಣುತ್ತಿದೆ.
ಇದನ್ನು ಓದಿದ್ದೀರಾ? ಅಮೆರಿಕದಲ್ಲೂ ನೀರಿಗೆ ಪರದಾಟ; ಡೇಟಾ ಸೆಂಟರ್‌ಗಳು ಎಬ್ಬಿಸಿರುವ ಜಾಗತಿಕ ಸಂಕಷ್ಟ!
ಸದ್ಯ ಪ್ರಧಾನಿ ಮೋದಿ ಮತ್ತು ಮೆಲೊನಿ ನಡುವಿನ ಗೆಳೆತನವನ್ನು ಅತಿರೇಕದಲ್ಲಿ ಗೋದಿ ಮೀಡಿಯಾಗಳು, ಮೋದಿ ಭಕ್ತರು ಬಿಂಬಿಸುತ್ತಿರುವುದು ಮೇಲ್ನೋಟದ ಮನರಂಜನೆಯಾಗಿ ಕಾಣಬಹುದು. ಆದರೆ ಇದೇ ಪರೋಕ್ಷವಾಗಿ ಮುಖಭಂಗವೂ ಹೌದು. ಇನ್ನೊಂದೆಡೆ ಗಮನವನ್ನು ಬೇರೆಡೆ ಸೆಳೆಯುವ ತಂತ್ರವೂ ಹೌದು.
ಬಿಜೆಪಿಯಲ್ಲಿ ಮೋದಿ ಪೂಜೆ ಆರಂಭವಾಗಿ ಹಲವು ವರ್ಷಗಳಾಗಿವೆ. ಅದರ ಫಲವೇ ಮೋದಿ ಮಾಡಿದ್ದೆಲ್ಲವೂ ಸರಿ ಎಂಬ ವಾದ. ಜೈ ಮೋದಿ ಎಂಬ ಕಾಮೆಂಟ್‌ಗಳು. ಸದ್ಯ ಇಬ್ಬರು ಪ್ರಜಾಪ್ರಭುತ್ವ ರಾಷ್ಟ್ರಗಳ ಉನ್ನತ ನಾಯಕರನ್ನು ಗಂಭೀರ ರಾಜತಾಂತ್ರಿಕ ಹಿನ್ನೆಲೆಯಲ್ಲಿ ನೋಡುವ ಬದಲು, ಸಿನಿಮಾ ಜೋಡಿಯಂತೆ ರೀಲ್ಸ್ ಮತ್ತು ಮೀಮ್‌ಗಳ ಮೂಲಕ ವೈಭವೀಕರಿಸಲಾಗುತ್ತದೆ. ನಮ್ಮ ನಾಯಕರು ಮಾಡಿರುವುದೂ ಅದನ್ನೇ.
ವಿದೇಶ ಪ್ರಯಾಣ ಮಾಡಬೇಡಿ ಎಂದು ಜನರಿಗೆ ಸಲಹೆ ನೀಡಿ ವಿದೇಶಕ್ಕೆ ಹೋದ ಪ್ರಧಾನಿಯನ್ನು ಪ್ರಶ್ನಿಸಬೇಕಾದ ಜನರು ‘ಮೆಲೊಡಿ’ ನಿನಾದದಲ್ಲಿ ಮುಳುಗಿದ್ದಾರೆ. ಇದು ಸಾಮಾನ್ಯ ಜನರ ತಪ್ಪಲ್ಲ ಬಿಡಿ. ಗೋದಿ ಮೀಡಿಯಾಗಳ ಪ್ರೊಪಗಂಡಾದ ಫಲ. ಅಷ್ಟಕ್ಕೂ ಪ್ರಧಾನಿ ಮಟ್ಟದ ನಾಯಕರನ್ನು ಕೇವಲ ಮನರಂಜನೆಯ ವಸ್ತುವನ್ನಾಗಿ ಮಾಡುವುದು ದೇಶದ ಮತ್ತು ಆ ಹುದ್ದೆಯ ಘನತೆಗೆ ತಕ್ಕುದಲ್ಲ.
ಅದರಲ್ಲೂ ಮಾಧ್ಯಮಗಳು ದೇಶದ ಆರ್ಥಿಕತೆ, ನಿರುದ್ಯೋಗ, ಅಥವಾ ದ್ವಿಪಕ್ಷೀಯ ಒಪ್ಪಂದಗಳ ಒಳಹೊರಗುಗಳನ್ನು ಚರ್ಚಿಸುವ ಬದಲು, ಇಬ್ಬರು ನಾಯಕರ ಮುಗುಳ್ನಗೆ ಅಥವಾ ಹಸ್ತಲಾಘವವನ್ನು ಗಂಟೆಗಟ್ಟಲೆ ವಿಶ್ಲೇಷಿಸುವುದು ಕೇವಲ ಭಟ್ಟಂಗಿತನ ಮತ್ತು ನೈಜ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನವಷ್ಟೆ.
ಇಂದಿನ ಡಿಜಿಟಲ್ ಮತ್ತು ಯುವ ಪೀಳಿಗೆಯ ಜಗತ್ತಿನಲ್ಲಿ, ಕಠಿಣ ಮತ್ತು ನೀರಸ ರಾಜತಾಂತ್ರಿಕ ವಿಷಯಗಳಿಗಿಂತ ಇಂತಹ ಹಗುರವಾದ ವಿಷಯಗಳು ಜನರ ಗಮನವನ್ನು ಬೇಗನೆ ಸೆಳೆಯುತ್ತವೆ. ಇದು ವಿದೇಶಾಂಗ ನೀತಿಯನ್ನು ಜನಸಾಮಾನ್ಯರಿಗೆ ತಲುಪಿಸುವ ಒಂದು ತಂತ್ರ ಎಂಬ ಪೊಳ್ಳು ವಾದವನ್ನು ಖಂಡಿತವಾಗಿಯೂ ಒಪ್ಪಲಾಗದು. ಅಷ್ಟಕ್ಕೂ ಸಾಮಾಜಿಕ ಮಾಧ್ಯಮಗಳ ಲೈಕ್ಸ್ ಮತ್ತು ವೀಕ್ಷಣೆಗಾಗಿ ರಾಜತಾಂತ್ರಿಕತೆಯನ್ನು ಇಷ್ಟು ಕೆಳಮಟ್ಟಕ್ಕೆ ಇಳಿಸುವುದು ಅಶ್ಲೀಲತೆಯ ಸೀಮೆಯನ್ನು ದಾಟುತ್ತದೆ.
ಒಟ್ಟಾರೆಯಾಗಿ ಅಂತಾರಾಷ್ಟ್ರೀಯ ಸಂಬಂಧಗಳು ಮತ್ತು ದೇಶದ ರಾಜಕಾರಣವು ಗಂಭೀರವಾದ ನೀತಿ-ನಿಯಮಗಳ ಮೇಲೆ ನಡೆಯಬೇಕೇ ಹೊರತು, ಕೇವಲ ಸಾಮಾಜಿಕ ಮಾಧ್ಯಮಗಳ ವೈರಲ್ ಟ್ರೆಂಡ್‌ಗಳ ಮೇಲಲ್ಲ. ನಾಯಕರ ನಡುವಿನ ಬಾಂಧವ್ಯ ರಾಜತಾಂತ್ರಿಕತೆಗೆ ಸಹಕಾರಿಯಾಗಬಹುದು. ಆದರೆ ಗೋದಿ ಮೀಡಿಯಾಗಳು ಅದನ್ನು ಸಿನಿಮಾ ಮಾದರಿಯಲ್ಲಿ ಬಿಂಬಿಸಿ ಗಂಭೀರ ಚರ್ಚೆಗಳನ್ನು ಮೂಲೆಗುಂಪು ಮಾಡಿದಾಗ, ಅದು ಸಾರ್ವಜನಿಕ ವಲಯದಲ್ಲಿ ಖಂಡಿತವಾಗಿಯೂ ಭಟ್ಟಂಗಿತನ ಮತ್ತು ಅತಿರೇಕ ಎಂದೇ ಅನಿಸಿಕೊಳ್ಳುತ್ತದೆ.




