ʼಅಮ್ಮ ಅರಿಯನ್‌ʼ ಗೆ ಪುನರ್ಜನ್ಮ ದಕ್ಕಿದ ಕಥೆ- ಕ್ಷಯಿಸುತ್ತಿರುವ ನಮ್ಮ ಚಿತ್ರಗಳ ಕಥೆ- ವ್ಯಥೆ

Date:

1986ರಲ್ಲಿ ಬಿಡುಗಡೆಗೊಂಡ ಮಲಯಾಳಂನ ʼಅಮ್ಮ ಅರಿಯನ್‌ʼ ಫ್ರಾನ್ಸ್‌ನ ಕಾನ್‌ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದೆ. ಈ ಚಿತ್ರವನ್ನು ಸಂಸ್ಕರಿಸಿದ ಶಿವೇಂದ್ರ ಸಿಂಗ್‌ ಡುಂಗರ್ಪುರ್‌ ಅವರನ್ನು ʼಈ ದಿನʼಕ್ಕಾಗಿ ಸಂದರ್ಶನ ಮಾಡಿದ್ದಾರೆ ಹಿರಿಯ ಪತ್ರಕರ್ತ ಮುರಳೀಧರ ಖಜಾನೆ.

- Advertisement -

Film Heritage Foundation ನ ಶಿವೇಂದ್ರ ಸಿಂಗ್‌ ಡುಂಗರ್ಪುರ್‌ ಅವರು ಜಾನ್‌ ಅಬ್ರಾಹಂ ಅವರ classic ಚಿತ್ರ ʼಅಮ್ಮ ಅರಿಯನ್‌ʼ ಚಿತ್ರಕ್ಕೆ ಒಂದು ರೀತಿಯಲ್ಲಿ ಪುನರ್ಜನ್ಮ ನೀಡಲು ಯೋಚಿಸಿದಾಗ ಅವರಿಗೆ ಚಿತ್ರ ನಿರ್ಮಾಪಕರ ಅನುಮತಿ ಸಿಗಲೇ ಇಲ್ಲ. ಆದರೆ ಕಣ್ಮರೆಯಾಗಿಬಿಡುವ ಒಂದು ಚಿತ್ರ ಪರಂಪರೆಯನ್ನು ಕಾಪಾಡಿಕೊಳ್ಳುವುದನ್ನು ಒಂದು ತಪಸ್ಸಿನಂತೆ ಕಾಣುತ್ತಿರುವ ಶಿವೇಂದ್ರ, ಹಿಡಿದ ಹಠ ಬಿಡದ ಕಾರಣ, ಕಾನ್‌ ಚಿತ್ರೋತ್ಸವದ ಕ್ಲಾಸಿಕ್‌ ಚಿತ್ರಗಳ ವಿಭಾಗದಲ್ಲಿ ಪ್ರದರ್ಶನಗೊಂಡಿತು. ʼಅಮ್ಮ ಅರಿಯನ್‌ʼ ಪ್ರದರ್ಶನ 113 ವರ್ಷಗಳ ಇತಿಹಾಸವಿರುವ ದೇಶದ ಚಿತ್ರರಂಗಕ್ಕೆ ಸಂದಿರುವ ಗೌರವ ಅದಕ್ಕೆ ಕಾರಣ ಡುಂಗರ್ಪುರ್‌.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ನಿಮಿಷಗಳ ಕಾಲದ ಕರತಾಡನ

ʻಅಮ್ಮ ಅರಿಯನ್‌ʼ ಚಿತ್ರ 79ನೇ ಕಾನ್‌ ಚಿತ್ರೋತ್ಸವದಲ್ಲಿ ಮೇ 16ರಂದು ಪ್ರದರ್ಶನಗೊಂಡಾಗ, ಈ ಚಿತ್ರವನ್ನು ಪುನಶ್ಚೇತನಗೊಳಿಸಿದ ಶಿವೇಂದ್ರ ಸಿಂಗ್‌ ಡುಂಗರ್ಪುರ್‌, ಚಿತ್ರದ Editor ಬೀನಾ ಪಾಲ್‌, ಚಿತ್ರದಲ್ಲಿ ಅಭಿನಯಿಸಿದ ಜೋಯ್‌ ಮ್ಯಾಥ್ಯೂ ಹಾಜರಿದ್ದರು. ಈ ಚಿತ್ರವನ್ನು ಪ್ರೇಕ್ಷಕರಿಗೆ ಕಾನ್‌ ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ಥಿಯ್ಯರಿ ಫ್ರೆಮ್ಯಾಕ್ಸ್‌ ಚಿತ್ರವನ್ನು ಸಭಾಂಗಣ ತುಂಬಿದ್ದ ಪ್ರೇಕ್ಷಕರಿಗೆ ಪರಿಚಯಿಸಿದರು. ನಂತರ ಚಿತ್ರದ ಬಗ್ಗೆ ಶಿವೇಂದ್ರ ಸಿಂಗ್‌ ಡುಂಗರ್ಪುರ್‌, ಚಿತ್ರದ Editor ಬೀನಾ ಪಾಲ್‌, ಚಿತ್ರದಲ್ಲಿ ಅಭಿನಯಿಸಿದ ಜೋಯ್‌ ಮ್ಯಾಥ್ಯೂ ತಮ್ಮ ಅನುಭವನ್ನು ಹಂಚಿಕೊಂಡರಲ್ಲದೆ ಜಾನ್‌ ಅಬ್ರಾಹಂ ಪ್ರತಿಭೆಯನ್ನು ಅಂಗುಲ-ಅಂಗುಲವಾಗಿ ಪ್ರೇಕ್ಷಕರಿಗೆ ಪರಿಚಯಿಸಿದರು. ಅಲ್ಲದೆ ಒಂದು ದೃಶ್ಯ ತಲೆಮಾರಿಗೆ ಅಬ್ರಾಹಂ ಹೇಗೆ ಗುರುವಾದರು ಮತ್ತು ಹೇಗೆ ʻಅಮ್ಮ ಅರಿಯನ್‌ʼ ಒಂದು Cult ಚಿತ್ರವಾಗಿ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ತನ್ನದೇ ಆದ ಅಧ್ಯಾಯವೊಂದನ್ನು ಸೃಷ್ಟಿಸಿತು ಎಂದು ವಿವರಿಸಿದರು. ಚಿತ್ರ ಬಿಡುಗಡೆಯಾದ ನಲವತ್ತು ವರ್ಷಗಳ ನಂತರ ಈ ಚಿತ್ರ ಪ್ರದರ್ಶನಗೊಂಡು ಮುಕ್ತಾಯವಾದಾಗ ಪ್ರೇಕ್ಷಕರು ಎದ್ದು ನಿಂತು ಕೆಲವು ನಿಮಿಷಗಳ ಕಾಲ ಕರತಾಡನದ ಅಭಿಮಾನ ಸೂಚಿಸಿದ್ದು, ನನ್ನ ಬದುಕಿನ ಮರೆಯಲಾಗದ ಅನುಭವ ಎಂದು ಡುಂಗರ್ಪುರ್‌ ಹೇಳಿದರು.

WhatsApp Image 2026 05 21 at 7.13.33 AM
ಶಿವೇಂದ್ರ ಸಿಂಗ್‌ ಡುಂಗರ್ಪುರ್‌

ಪುನಶ್ಚೇತನದ ಹಾದಿಯ ಕಲ್ಲು-ಮುಳ್ಳು

ಇದು ತೀರಾ ಇತ್ತೀಚಿನ ಇತಿಹಾಸ. ʼಅಮ್ಮ ಅರಿಯನ್‌ʼ ಚಿತ್ರಕ್ಕೆ ಡುಂಗರ್ಪುರ್‌ ಪುನರ್ಜನ್ಮ ನೀಡಿದ ಪ್ರಕ್ರಿಯೆಯನ್ನು ಕುರಿತು ಒಂದು ಕಥೆಯನ್ನೇ ಬರೆಯಬಹುದು. ಈ ಚಿತ್ರವನ್ನು ಮತ್ತೆ ದೊರಕಿಸುವಂತೆ ಮಾಡಲು ಪಟ್ಟಿರುವ ಕಷ್ಟವನ್ನು ಡುಂಗರ್ಪುರ್‌ ಅವರ ಮಾತುಗಳಲ್ಲೇ ಕೇಳಿದರೆ ಅರ್ಥಪೂರ್ಣ.

 “ಆಗ ಅಂದರೆ 1986 ರಲ್ಲಿ ನಿರ್ಮಿಸಿದಾಗ ಈ ಚಿತ್ರ ಯಾವುದೇ ಸ್ಟೂಡಿಯೋ ಆಸ್ತಿಯಾಗಿರಲಿಲ್ಲ. ಮೊದಲೇ ಹೇಳಿರುವಂತೆ ಇದು ಜಾನ್‌ ಅಬ್ರಾಹಂ ಅವರೇ ಹುಟ್ಟುಹಾಕಿದ ʼಒಡೆಸ್ಸಾ ಕಲೆಕ್ಟೀವ್‌ʼ ಎಂಬ ಚಿಂತಕರ ಗುಂಪು. ಈ ತಂಡ ಹಳ್ಳಿಹಳ್ಳಿಗಳಲ್ಲಿ ತಿರುಗಿ, ಬೀದಿ ನಾಟಕ ಪ್ರದರ್ಶಿಸಿ, ಆ ಮೂಲಕ ಜನರಿಂದ ಸಂಗ್ರಹಿಸಿದ ಹಣದಲ್ಲಿ ನಿರ್ಮಿಸಿದ ಚಿತ್ರ. ಈ ಚಿತ್ರ ನಿರ್ಮಿಸಿದವರೆಲ್ಲ ಚದುರಿಹೋಗಿದ್ದರು ಅಥವಾ ಇಹಲೋಕದ ಯಾತ್ರೆ ಮುಗಿಸಿದ್ದರು. ಉಳಿದವರನ್ನು ಒಗ್ಗೂಡಿಸಿ, ಅನುಮತಿ ಪಡೆದುಕೊಳ್ಳುವುದು ಅಷ್ಟು ಸುಲಭದ ಸಂಗತಿಯಾಗಿರಲಿಲ್ಲ. ಆಗ ನೆರವಿಗೆ ಬಂದವರು ಬೀನಾ ಪಾಲ್ (ಈ ಹೆಣ್ಣುಮಗಳು, 1986 ರಲ್ಲಿ ನಿರ್ಮಿಸಿದ ʼಅಮ್ಮ ಅರಿಯನ್”‌ ಚಿತ್ರದ ಸಂಪಾದಕಿ (Editor) ಆಗಿದ್ದವರು. ಈ ಬೀನಾ ಪಾಲ್‌ ಭಾರತ ಕಂಡ ಚಿತ್ರ Editorಗಳ ಪೈಕಿ ಅತ್ಯಂತ ಮುಖ್ಯರಾದವರು ಹಾಗೂ ಕೇರಳದ ಚಲನಚಿತ್ರ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದವರು. ಪುಣೆಯ Film and Television Institute of India (FTII) ನಲ್ಲಿ Editing ಕಲಿತವರು. ತಮ್ಮ ಚಿತ್ರರಂಗದ ಬದುಕಿನ ಪಯಣದಲ್ಲಿ50 ಕ್ಕೂ ಹೆಚ್ಚು ಕಥಾ ಮತ್ತು ಸಾಕ್ಷ್ಯಚಿತ್ರ ನಿರ್ದೇಶಿಸಿದವರು ಹಾಗು ಎರಡು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದವರು. ಇವರು Women in Cinema Collective ಅನ್ನು ಹುಟ್ಟುಹಾಕಿದ ಪ್ರಾಥಮಿಕ ಸದಸ್ಯರ ಪೈಕಿ ಒಬ್ಬರು).  ಹಾಗೂ ಪತ್ರಕರ್ತ ಸಿ. ಎಸ್.‌ ವೆಂಕಟೇಶ್ವರನ್.‌ ಇವರಿಬ್ಬರೂ Odessa Collective ನ ಅಳಿದುಳಿದ ಸದಸ್ಯರನ್ನು ಒಟ್ಟು ಸೇರಿಸಿ, ʼಅಮ್ಮ ಅರಿಯನ್‌ʼ ಚಿತ್ರದ ಪುನಶ್ಚೇತನದ ಅನುಮತಿ ದೊರಕಿಸಿಕೊಟ್ಟವರು ಎಂದು ಡುಂಗರ್ಪುರ್‌ ʼಈ ದಿನʼದೊಂದಿಗೆ ಮಾತನಾಡುತ್ತಾ ಹೇಳಿದರು.

“ಇಷ್ಟು ಕಷ್ಟಪಟ್ಟು ಚಿತ್ರದ ಪುನಶ್ಚೇತನಕ್ಕೆ ಅನುಮತಿ ಪಡೆದುಕೊಂಡದ್ದು ವ್ಯರ್ಥವೇನೂ ಆಗಲಿಲ್ಲ. ನಮ್ಮ ಲಾಭದ ನಿರೀಕ್ಷೆ ಇಲ್ಲದ Film Heritage Foundation ʼಅಮ್ಮ ಅರಿಯನ್ʼ ಚಿತ್ರವನ್ನು ಕಾನ್‌ ಚಿತ್ರೋತ್ಸವದ Classics ವಿಭಾಗದಲ್ಲಿ ಪ್ರದರ್ಶಿಸಲು ಅರ್ಹತೆ ಪಡೆದುಕೊಂಡಿತು. ಈ ಬಾರಿ ಕಾನ್‌ ಚಿತ್ರೋತ್ಸವದಲ್ಲಿ Classics ವಿಭಾಗದಲ್ಲಿ ಪ್ರದರ್ಶನಗೊಂಡ ಏಕೈಕ ಭಾರತೀಯ ಚಿತ್ರವಿದು” ಎಂದು ಡುಂಗರ್ಪುರ್‌ ಅವರು ಹೇಳಿದಾಗ ಅವರ ಧ್ವನಿಯಲ್ಲಿ ಧನ್ಯತಾ ಭಾವವಿತ್ತು.

ದಕ್ಕದ ಧ್ವನಿ ಮುದ್ರಣದ ಪ್ರತಿ

“ಆದರೆ ಅನುಮತಿ ದೊರೆತದ್ದು, ಕೇವಲ ಮೊದಲ ಹಂತ. ಈ ಚಿತ್ರದ ಮೂಲ ಪ್ರತಿಗಾಗಿ International Federation of Film Archives (FIAF) (ಇದು, ವಿಶ್ವದಾದ್ಯಂತ ಇರುವ ಅತ್ಯುತ್ತಮ ಕಲಾತ್ಮಕ ಮತ್ತು ಚಾರಿತ್ರಿಕ ಚಿತ್ರಗಳನ್ನು ಸಂರಕ್ಷಿಸುವ ಮತ್ತು ಅದರ ದಾಖಲೆಗಳನ್ನು ಸಂಗ್ರಹಿಸುವ ಸಂಸ್ಥೆಗಳ ಒಕ್ಕೂಟ) ವನ್ನು ಸಂಪರ್ಕಿಸಿದಾಗ, National Film Archives of India (NFAI) ದಲ್ಲಿದ್ದ 35 ಎಂ ಎಂ ನ ಪ್ರತಿಗಳು ಮಾತ್ರ ಲಭ್ಯವಿದೆ ಎಂದು ಗೊತ್ತಾಯಿತು. ಕ್ಯಾಮರಾದ Negetive ಪ್ರತಿ ಲಭ್ಯವಿರಲಿಲ್ಲ. ಆದರೆ ಅದರ ಧ್ವನಿ ಮುದ್ರಣದ ಪ್ರತಿ ದಕ್ಕಲೇ ಇಲ್ಲ. National Film Archives of India (NFAI) ದಲ್ಲಿದ್ದ 35 ಎಂ ಎಂ ನ ಪ್ರತಿಗಳು ಲಭ್ಯವಾದದ್ದಕ್ಕೆ ಭಾರತದ ಚಿತ್ರ ಸಂರಕ್ಷಣೆಯ ದಂತಕಥೆಯಾಗಿರುವ ಪಿ.ಕೆ. ನಾಯರ್‌ ಅವರ ದೂರದರ್ಶಿತ್ವದ ಪ್ರತಿಫಲವೆಂದು ಹೇಳದಿದ್ದರೆ, ಆ ವ್ಯಕ್ತಿಗೆ ಅನ್ಯಾಯ ಮಾಡಿದಂತೆ. ಆದರೆ ಆ ಎರಡು ಪ್ರತಿಗಳಲ್ಲಿ ಒಂದು ಪ್ರತಿಯಲ್ಲಿ ಮಾತ್ರ ಉಪ-ಶೀರ್ಷಿಕೆ (Subtitles) ದೃಶ್ಯದೊಂದಿಗೆ ಬೆರೆಸಲಾಗಿತ್ತು. ದುರಾದೃಷ್ಟವೆಂದರೆ ಇನ್ನೊಂದು ಪ್ರತಿಗೆ ಆ ಸಂಸ್ಕಾರವಾಗಿರಲಿಲ್ಲ. ಅನಿವಾರ್ಯವಾಗಿ ಉಪಶೀರ್ಷಿಕೆಗಳಿಲ್ಲದ ಮೂಲ ಪ್ರತಿಯನ್ನು ಸಂರಕ್ಷಣೆಗಾಗಿ ಬಳಸಲಾಗಿತು. ಉಪಶೀರ್ಷಿಕೆಗಳಿರುವ ಪ್ರತಿಯನ್ನ ದೃಶ್ಯ Negetive ನಲ್ಲಿರುವ ಕಾಲಿ ಜಾಗವನ್ನು ಭರ್ತಿ ಮಾಡಲು ಬಳಸಲಾಯಿತು. ಈ ತಂತ್ರ ಬಹಳ ಪ್ರಯಾಸದಾಯಕವಾಗಿತ್ತು. ಏಕೆಂದರೆ ಹಳೆಯ ಉಪ ಶೀರ್ಷಿಕೆಗಳನ್ನು ಅಷ್ಟು ಸುಲಭವಾಗಿ ತೆಗೆಯಲು ಸಾಧ್ಯವಾಗಲಿಲ್ಲ.  ಪ್ರಾಥಮಿಕ ಸಂರಕ್ಷಣೆಯ ಪ್ರಕ್ರಿಯೆಗಳ ನಂತರ, ಉಳಿದ ಸಂರಕ್ಷಣ ಕ್ರಮಗಳನ್ನು ಕೈಗೊಳ್ಳಲು ಇಟಲಿಯ ಬೊಲೋಗ್ನಾ ದಲ್ಲಿರುವ Ĺ Immagine Ritrovata and Digital Restore Private Limited ಗೆ ಕಳುಹಿಸಲಾಯಿತು. ಈ ಚಿತ್ರದ ಈ ಪ್ರಕ್ರಿಯೆಯಲ್ಲಿ ಒಟ್ಟು ನಾಲ್ಕು ಸಾವಿರ ಮಂದಿ ಧ್ವನಿ Negetive ನ ಜೊತೆ ಹೆಣಗಾಡಿದರು. ಅದರಲ್ಲಿರುವ ಶಬ್ದ ಹಾಗೂ ದೃಶ್ಯ ಪಟ್ಟಿಯಲ್ಲಿರುವ ವ್ಯತ್ಯಾಸಗಳನ್ನು ಸರಿಪಡಿಸಲು ಅವರು ಇನ್ನಿಲ್ಲದ ಪ್ರಯತ್ನ ಮಾಡಿದರು”, ಎಂದು ಡುಂಗರ್ಪುರ್‌ ನೆನಪಿಸಿಕೊಂಡರು.

ಅಬ್ರಾಹಂ ಅವರ ಅಸ್ವಾಭಾವಿಕ ಆಯ್ಕೆ

ಬೀನಾಪಾಲ್‌ ಮತ್ತು ವೇಣು ಅವರಿಂದಾಗಿ ಶಬ್ದಕ್ಕಂಟಿದ ಸಮಸ್ಯೆಗಳೆಲ್ಲ ಪರಿಹಾರವಾಯಿತು. ಅಬ್ರಾಹಂ ಉದ್ದೇಶಪೂರ್ವಕವಾಗಿಯೇ ಈ ಪರಿಸರದ ದಿನನಿತ್ಯದ ಸದ್ದನ್ನು (ಇಂಗ್ಲಿಷ್‌ ನಲ್ಲಿ Foley ಎಂದು ಕರೆಯುತ್ತಾರೆ) ತಮ್ಮ ಅಸ್ವಾಭಾವಿಕ ಅಯ್ಕೆಯನ್ನಾಗಿಸಿಕೊಂಡಿದ್ದು ಸ್ಪಷ್ಟವಾಯಿತು. ಯಾವುದೇ ರೀತಿಯಲ್ಲಿಯೂ, ಈ ಸದ್ದು ಅಥವ ಸುತ್ತಲಿನ ಶಬ್ದಗಳು ದೃಶ್ಯಗಳೆದರು ಮಂಕಾಗಬಾರದು ಎನ್ನುವುದು ಅವರ ಸ್ಪಷ್ಟ ನಿಲುವಾಗಿತ್ತು.  ಜಾನ್‌ ಈ ಶಬ್ದದ ಮಾದರಿಯನ್ನು ಇಷ್ಟಪಟ್ಟೇ ಮಾಡಿದ್ದರೂ, ಅದರ ಆರಾಧಕರೇನಾಗಿರಲಿಲ್ಲ ಎನ್ನುತ್ತಾರೆ ಬೀನಾ ಪಾಲ್.‌ ಸಾಮಾನ್ಯವಾಗಿ ಚಿತ್ರಕರ್ತರನೇಕರು ಈ ಸದ್ದುಗಳ ಬಳಕೆಯನ್ನು ಹಲವು ಪದರಗಳಲಿ ಬಳಸುತ್ತಾರೆ. ಅದು, ಹೆಜ್ಜೆಯ ಸಪ್ಪಳವಾಗಿರಬಹುದು ಅಥವ ಸುತ್ತಲಿನ ಜಗತ್ತಿನ ಪರಿಸರದ ಶಬ್ದಗಳನ್ನು ತಮ್ಮ ಸಾಂಪ್ರದಾಯಿಕ ರೀತಿಯಲ್ಲಿ ಬಳಸುತ್ತಾರೆ. ಆದರೆ ಜಾನ್‌, ಉದ್ದೇಶ ಪೂರ್ವಕವಾಗಿಯೇ ನಿಶ್ಯಬ್ದವನ್ನು ಆಯ್ಕೆ ಮಾಡಿಕೊಂಡು, ಆ ಮೂಲಕ ದೃಶ್ಯ ರೂಪಗಳು ತಮ್ಮದೇ ಸದ್ದನ್ನು ಸೃಷ್ಟಿಸಿಕೊಳ್ಳುವಂತೆ ಮಾಡುತ್ತಿದ್ದರು. ಈ ಮೂಲಕ ಪ್ರೇಕ್ಷಕನ ಅಂತರಂಗದ ನಿಶ್ಯಬ್ದಕ್ಕೆ ಹೊಸ ಧ್ವನಿ ನೀಡುವ ಪ್ರಯೋಗ ಮಾಡಿದ್ದರು. ಎಂದು ಶಬ್ದ ದಾಖಲುಕಾರ  (Sound recordist)  ಹೇಳುತ್ತಾರೆ. ಇದು ಒಂದು ರೀತಿಯಲ್ಲಿ ಚಿತ್ರವನ್ನು ಪುನಶ್ಚೇತನಗೊಳಿಸುವಾಗ ನೆರವಿಗೆ ಬಂತು. ಅದೊಂದು ದೃಶ್ಯ ಸೌಂದರ್ಯದ ಭಾಗವಾಗಿ ಬಳಕೆಗೆ ನೆರವಾಯಿತು ಎನ್ನುವುದು ಅವರ ಅನಿಸಿಕೆ.

WhatsApp Image 2026 05 21 at 5.12.43 AM
ನಿರ್ದೇಶಕ ಜಾನ್‌ ಅಬ್ರಹಾಂ

ದೃಶ್ಯ-ಶಬ್ದಗಳ ಮಿಳಿತದ ದುರ್ಗಮ ಹಾದಿ

ಹಾಗೆ ನೋಡಿದರೆ ನನಗೆ ದೃಶ್ಯದ ಪಾತ್ರ ಅತಿ ಮುಖ್ಯವಾಗಿತ್ತು. ಏಕೆಂದರೆ ಚಿತ್ರವೊಂದನ್ನು ನೀವು ವೀಕ್ಷಿಸುವಾಗ ದೃಶ್ಯದಲ್ಲಿಯೇ ಶಬ್ದವೂ ಮಿಳಿತವಾಗಿರುತ್ತದೆ ಎಂದು ನಿಮಗನ್ನಿಸಬೇಕು. ಏಕೆಂದರೆ, ಶಬ್ದಕ್ಕೂ ದೃಶ್ಯರೂಪ ದೊರಕುವುದು ಅ ಮೂಲಕವೇ ಎಂದು ಡುಂಗರ್ಪುರ್‌ ಹೇಳುತ್ತಾರೆ. ಹಾಗಾಗೇ ಚಿತ್ರವನ್ನು ಪುನರ್‌ ಚೇತನಗೊಳಿಸುವಾಗ  ಪುನಶ್ಚೇತನದ ಯಾವುದೇ, ಪ್ರಕ್ರಿಯೆಯೊಂದಿಗೆ ರಾಜಿ ಮಾಡಿಕೊಳ್ಳಲು ನಾವು ಸಿದ್ಧರಿರಲಿಲ್ಲ. ಏಕೆಂದರೆ, ಚಿತ್ರದ ಆತ್ಮವನ್ನು ಕಾಪಾಡಿಕೊಳ್ಳುವುದೂ ಕೂಡ ನಮಗೆ ಅಷ್ಟೇ ಮುಖ್ಯವಾಗಿತ್ತು. ಎನ್ನುತ್ತಾರೆ ಡುಂಗರ್ಪುರ್.‌ ಅವರು ಹೇಳುವಂತೆ ಚಿತ್ರವನ್ನು ತಿಳಿ ಬೆಳಕಿನಲ್ಲಿ ಕ್ಯಾಮರಾ ಚಲನೆಗೆ ಅನುಕೂಲವಾಗುವಂತೆ ಉದ್ದೇಶಪೂರ್ವಕವಾಗಿಯೇ ಚಿತ್ರಿಸಲಾಗಿತ್ತು. ಆ ಮೂಲಕ ಲಭ್ಯ ಬೆಳಕಿನ ತೆಳು ಒರಟುತನ  ಮತ್ತು ಸುತ್ತಲಿನ ಪರಿಸರದ ಆತ್ಮವನ್ನು ಸೆರೆಹಿಡಿಯಲು ಜಾನ್‌ ಗೆ ಸಾಧ್ಯವಾಗಿತ್ತು. ಜಾನ್‌ ಇದನ್ನು ಕ್ಯೂಬಾದ ಚಿತ್ರಕಲಾ ಶಾಲೆಯ ಮಾದರಿಯನ್ನು, ಅವರ ಗುರು ರಿತ್ವಿಕ್‌ ಘಟಕ್‌ ಅವರ ದೃಶ್ಯ ಕಟ್ಟುವಿಕೆಯ ತಿಳಿವಳಿಕೆ ಪರಂಪರೆಯನ್ನು ಒಂದು ರೀತಿಯಲ್ಲಿ ಮುಂದುವರಿಸಿದ್ದರು. ಹಾಗಾಗಿ ಆ ಪರಂಪರೆಗೆ ಧಕ್ಕೆ ಬರದಂತೆ ಚಿತ್ರವನ್ನು ಮತ್ತೆ ಜೀವಂತಗೊಳಿಸುವುದು ನಮ್ಮ ಗುರಿಯಾಗಿತ್ತು. ಚಿತ್ರ ಮಾಡುವ ಮುನ್ನವೇ ಆರಂಭ ಮತ್ತು ಅಂತ್ಯದ ಗಮ್ಯ ಸ್ಥಾನದ ದೃಶ್ಯಗಳನ್ನು ಜಾನ್‌ ಮೊದಲೇ ನಿರ್ಧರಿಸುತ್ತಿದ್ದರು. ಚಿತ್ರದ ಮಧ್ಯ ಭಾಗ ಮಾತ್ರ ಚಿತ್ರೀಕರಣ ಮುಂದುವರಿದಂತೆ, ತನ್ಮ ಸೃಜನಶೀಲ ಶಕ್ತಿ ತೋರಿಸಿದ ದಾರಿಯಲ್ಲಿ ನಡೆಸುತ್ತಿದ್ದರು ಎಂದು ಡುಂಗರ್ಪುರ್‌ ಹೇಳುತ್ತಾರೆ.

ʻಅಮ್ಮʼ ಇಂದಿಗೂ ಪ್ರಸ್ತುತ

 “ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಜೋಯ್‌ ಮ್ಯಾಥ್ಯೂ; “ಚಿತ್ರ ಮತ್ತು ಚಿತ್ರದ ಕಥೆ ಎರಡೂ, ಲೆಕ್ಕವಿಲ್ಲದಷ್ಟು ಕಥೆಗಳ ಕಣಜವಾಗಿದೆ. ಇದೊಂದು ರೀತಿಯಲ್ಲಿ ಸಾಕ್ಷ್ಯ-ಕಥಾಚಿತ್ರ. ಇದು ಆ ಕಾಲದ ಸಮಾಜೋರಾಜಕೀಯ ಸಂದರ್ಭವನ್ನು ಕಲಾತ್ಮಕವಾಗಿ ತೆರೆದಿಡುತ್ತದೆ. ಅಷ್ಟೇ ಅಲ್ಲ ಆ ಕಾಲದ ಎಡಪಂಥೀಯ ತೀವ್ರವಾದದ ಚಿಂತನೆಯ ಸೋಲನ್ನೂ ಚಿತ್ರಿಸುತ್ತದೆ. ಜಾನ್‌ ಅಬ್ರಾಹಂ ಗೆ ಸಿನಿಮಾ ಎನ್ನುವುದು ಕೇವಲ ಕಲೆಯ ಮಾಧ್ಯಮವಲ್ಲ. ಆದರೆ ಅದೊಂದು ಸಾರ್ವಜನಿಕ ಕ್ರಿಯೆ. ಹಾಗೆಯೇ ಪ್ರತಿಭಟನೆಯ ಕಲ್ಮಶರಹಿತ ಪ್ರೀತಿಯನ್ನು ಚಿತ್ರ ತೆರೆದಿಡುತ್ತದೆ” ಎನ್ನುತ್ತಾರೆ ಮ್ಯಾಥ್ಯೂ. 

“ಜಾನ್‌ ಗೆ ಸಿನಿಮಾ ಕೇವಲ ಕಲೆಯ ಮಾಧ್ಯಮವಾಗಿರಲಿಲ್ಲ. ಅದೊಂದು ಸಾರ್ವಜನಿಕ ಹೇಳಿಕೆಯಾಗಿತ್ತು. ಪ್ರತಿಭಟನೆಯ ಧ್ವನಿಯಾಗಿತ್ತು. ಜೊತೆಗೆ ಮಾನವತೆಯನ್ನು ಕುರಿತಾದ ಅಪ್ರತಿಮ ಪ್ರೀತಿಯಾಗಿತ್ತು” ಎಂದು ಮ್ಯಾಥ್ಯೂ ಹೇಳುತ್ತಾರೆ. ಮಾಡಿದ ಕಾಲಕ್ಕಿಂತಲೂ ಮತ್ತು ಅಂದೆಂದಿಗಿಂತಲೂ, ʼಅಮ್ಮ ಅರಿಯನ್‌ʼ ಇಂದು ಅತಿ ಪ್ರಸ್ತುತ ಚಿತ್ರವಾಗಿದೆ. ಇಂದಿನ ಪ್ರಜಾಸತ್ತೆ,, ಒಕ್ಕೂಟ ವ್ಯವಸ್ಥೆ ಕುಸಿಯುತ್ತಿರುವ ಸಂದರ್ಭದಲ್ಲಿ, ಧರ್ಮ ನಿರಪೇಕ್ಷತೆ ಎನ್ನುವುದು ಹಾಸ್ಯಾಸ್ಪದ ವಸ್ತುವಾಗಿ, ಸಂವಿಧಾನ ಆಟದ ವಸ್ತುವಾಗಿರುವ ಸಂದರ್ಭದಲ್ಲಿ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಆತಂಕವನ್ನು ಎದುರಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ, ʼಅಮ್ಮ ಅರಿಯನ್‌ʼ ಹೆಚ್ಚು ಪ್ರಸ್ತುತ ಎಂದು ಚಿತ್ರ ವೀಕ್ಷಿಸಿದ ಎಲ್ಲ ಪ್ರೇಕ್ಷಕರ ಅಭಿಪ್ರಾಯವಾಗಿತ್ತು. ಹಾಗಾಗಿ ಈ ಚಿತ್ರ ಪ್ರದರ್ಶನಕ್ಕೆ ಈಗ ದಕ್ಷಿಣ ಅಮೆರಿಕ ಮತ್ತು ಇತರ ದೇಶಗಳಿಂದ ಪ್ರದರ್ಶನಕ್ಕಾಗಿ ಬೇಡಿಕೆ ಬರುತ್ತಿದೆ ಎಂದು ಡುಂಗರ್ಪುರ್‌ ಹೇಳುವಾಗ ಅವರ ಮುಖದಲ್ಲಿ ಒಂದು ಯುದ್ಧಗೆದ್ದ ಭಾವವಿತ್ತು.

WhatsApp Image 2026 05 21 at 5.20.31 AM1

ʻಸಂಸ್ಕಾರʼಕ್ಕೆ ಪುನರ್‌ ಸಂಸ್ಕಾರ

ʻಅಮ್ಮ ಅರಿಯನ್‌ʼ ಮರುಜೀವ ಪಡೆದ ಕಥೆಯನ್ನು ಇಷ್ಟು ವಿವರವಾಗಿ ಹೇಳಲು ಕಾರಣ, ಭಾರತದ ನಮ್ಮ ಸಾವಿರಾರು ಚಿತ್ರಗಳಿಗೆ ಈ ಭಾಗ್ಯ ದಕ್ಕದ ವ್ಯಥೆ ಎಂದು ನಿರ್ವಾಹವಿಲ್ಲದೆ ಹೇಳಬೇಕಾಗುತ್ತದೆ.  ʻಈ ದಿನʼ ದೊಂದಿಗೆ ಮಾತನಾಡುವಾಗ ಡುಂಗರ್ಪುರ್‌ Film Heritage Foundation ತಮ್ಮ ಮುಂದಿನ ಪ್ರಯತ್ನವಾಗಿ 1970ರಲ್ಲಿ ಚಿತ್ರಕರ್ತ, ಕವಿ, ಸಾಮಾಜಿಕ ಕಾರ್ಯಕರ್ತ ಪಟ್ಟಾಭಿರಾಮರೆಡ್ಡಿ ಅವರು ನಿರ್ಮಿಸಿ, ನಿರ್ದೇಶಿಸಿದ ಕನ್ನಡದ Cult Classic ಎಂದೇ ಭಾವಿಸಲಾಗಿರುವ ʻಸಂಸ್ಕಾರʼ ಚಿತ್ರದ ಪುನಶ್ವೇತನ ಕ್ರಿಯೆಯನ್ನು ಕೈಗೆತ್ತಿಕೊಂಡಿರುವುದಾಗಿ ತಿಳಿಸಿದರು. ಇದು ಅನಂತಮೂರ್ತೀ ಅವರ ಖ್ಯಾತ ಕಾದಂಬರಿಯನ್ನು ಆಧರಿಸಿದ ಚಿತ್ರ. ಇದರ ನೆಗೆಟೀವ್‌ ಗಳು ಲಭ್ಯವಿದೆಯೋ ಇಲ್ಲವೋ ಗೊತ್ತಿಲ್ಲ. ಈ ಚಿತ್ರವನ್ನು Film Heritage Foundation ಪುನಶ್ಚೇತನಗೊಳಿಸುವ ಕಷ್ಟವನ್ನು ಅರ್ಥ ಮಾಡಿಕೊಂಡರೆ, ಭಾರತದ ದೃಶ್ಯ ಸಂಸ್ಕೃತಿಯನ್ನ ಹುಡುಕುವ, ರಕ್ಷಿಸುವ ಹಾಗೂ ಪುನಶ್ಚೇತನಗೊಳಿಸುವಲ್ಲಿ ನಾವು ಒಂದು ಶತಮಾನದಷ್ಟು ಹಿಂದಿರುವ ಸಂಗತಿ ಅರಿವಾಗುತ್ತದೆ. ಈಗಾಗಲೇ ಡುಂಗರ್ಪುರ್‌ ಅವರು ಗಿರೀಶ್‌ ಕಾಸರವಳ್ಳಿ ಅವರ ʻಘಟಶ್ರಾದ್ಧʼ ಚಿತ್ರವನ್ನು ಪುನಶ್ಚೇತನಗೊಳಿಸಿ, ವೆನಿಸ್‌ ಸೇರಿದಂತೆ ಹಲವರು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶಿಸಿರುವುದಾಗಿ ಕೂಡ ಹೇಳಿದರು. ಹಾಗಿದ್ದರೆ ಐವತ್ತು-ಅರವತ್ತರ ದಶಕದಲ್ಲಿ ನಿರ್ಮಾಣವಾದ ʻಉಯ್ಯಾಲೆʼ ʻನಾಂದಿʼಯಂಥ ಚಿತ್ರಗಳ ಕಥೆ ಏನು? ಎನ್ನುವುದು ಈ ಲೇಖಕನೂ ಸೇರಿದಂತೆ ಹಲವು ಚಿತ್ರ ಪ್ರೇಮಿಗಳ ಪ್ರಶ್ನೆ.

ಸಂಸ್ಕಾರ ಮತ್ತು ಹೊಸ ಅಲೆ

ಸರಿಯೋ ತಪ್ಪು ತೀರ್ಮಾನಿಸುವುದು ಕಷ್ಟ. ಆದರೆ, ಕನ್ನಡದ ಪ್ರಯೋಗಾತ್ಮಕ, ಹೊಸ ಅಲೆ ಚಿತ್ರಗಳ ಪರಂಪರೆಯ ಆರಂಭವನ್ನು ಎಲ್ಲರೂ ʻಸಂಸ್ಕಾರʼ ಚಿತ್ರದಿಂದ ಗುರುತಿಸುತ್ತಾರೆ. ಆದರೆ ಅದಕ್ಕೆ ಮುನ್ನ ಬಂದ ʻಉಯ್ಯಾಲೆʼ ಯಾಗಲಿ, ʻನಾಂದಿʼಯನ್ನಾಗಲಿ, ʻಮಿಸ್‌ ಲೀಲಾವತಿʼ ʻಭೂಧಾನʼ ಮುಂತಾದ ಚಿತ್ರಗಳನ್ನು ಯಾವ ಪರಂಪರೆಗೆ ಸೇರಿಸಬೇಕು? ಎಂಬ ಪ್ರಶ್ನೆಗೆ ಯಾರೂ ಸರಿಯಾಗಿ ಉತ್ತರಿಸುವುದಿಲ್ಲ. ಹೀಗಾಗಿ ಎಂ. ಆರ್.‌ ವಿಠಲ್‌, ಎನ್.‌ ಲಕ್ಷ್ಮಿನಾರಾಯಣ್‌ ಚಿತ್ರಗಳನ್ನು ಎಲ್ಲರೂ ಮರೆಯುವಂಥ ಸ್ಥಿತಿ ನಿರ್ಮಾಣವಾಗಿದೆ. ಕನ್ನಡದ Parallel Cinema ಕಾಲದ Classicsಗಳೆಂದೇ ಕರೆಸಿಕೊಳ್ಳುವ ಗಿರೀಶ್‌ ಕಾಸರವಳ್ಳಿಯವರ ʻಮೂರು ದಾರಿಗಳುʼ, ʼಮನೆʼ ʻತಬರನ ಕಥೆʼ, ʼಬಣ್ಣದ ವೇಶʼ, ʼಕ್ರೌರ್ಯ,  ʼಕುಬಿ ಮತ್ತು ಇಯಾಲಾʼ, ʼತಾಯಿ ಸಾಹೇಬʼ ಸೇರಿದಂತೆ ಹದಿಮೂರು ಚಿತ್ರಗಳು ಇಂದು ಕ್ಷಯಿಸುವ ಸ್ಥಿತಿಯಲ್ಲಿದೆ ಎಂದು ಸ್ವತಃ ಗಿರೀಶ್‌ ಕಾಸರವಳ್ಳಿ ಅವರೇ ಹೇಳಿದ್ದಾರೆ.

WhatsApp Image 2026 05 21 at 5.20.09 AM
ಶೂಟಿಂಗ್‌ ನಿರತ ಚಿತ್ರತಂಡ

ದೃಶ್ಯನಿಧಿಯ ಉತ್ಖನನ

ಹಳೆಯ ಚಿತ್ರವೊಂದನ್ನು ಹುಡುಕುವುದೆಂದರೆ ಅದೊಂದು ರೀತಿಯಲ್ಲಿ ʻನಿಧಿʼಯನ್ನು ಹುಡುಕಿದಂತೆ. ಹಾಗೆ ಹುಡುಕುವಾಗ ನಿಮಗೆ ಏನೇನು ದಕ್ಕುತ್ತದೋ, ಅದು ಆ ಸಮಾಜದ ಅದೃಷ್ಟವನ್ನು ಅವಲಂಬಿಸಿರುತ್ತದೆ. ಆದರೆ ಇನ್ನಷ್ಟು ನಿಧಿ ಸಿಗುವ ಸೂಚನೆಯಂತೂ ಸಿಕ್ಕೇ ಸಿಗುತ್ತದೆ ಎನ್ನುತ್ತಾರೆ ಪ್ರೆಂಚ್‌ ಲೇಖಕ ಮತ್ತು ಸಿನಿಮಾ ನಿರ್ಮಾಪಕ ಸೆರ್ಗೇ ಬ್ರೂಮ್ ಬರ್ಗ್.‌  ಈ ಮಾತು ಕನ್ನಡ ಮತ್ತು ಭಾರತೀಯ ಸಿನಿಮಾಗಳಿಗೂ ಅನ್ವಯಿಸುತ್ತದೆ ಎಂಬುದು ನನ್ನ ಅನಿಸಿಕೆ. ಈ ಲೇಖಕನ ಅಧ್ಯಯನದ ಪ್ರಕಾರ 1913 ರಿಂದ 1964ರ ವರೆಗಿನ ಸುಮಾರು ಹದಿಮೂರು ಸಾವಿರ ಭಾರತೀಯ ಚಿತ್ರಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ.  ತಯಾರಾದ ಒಟ್ಟು 1338 ಮೂಕಿ ಚಿತ್ರಗಳ ಪೈಕಿ, ನಮಗೆ ಇದುವರೆಗೆ ದಕ್ಕಿರುವುದು ಕೇವಲ 26 ಮಾತ್ರ. ಕನ್ನಡದ ಸ್ಥಿತಿಯಲ್ಲಿ ಅಂಥ ವ್ಯತ್ಯಾಸವೇನೂ ಕಾಣುವುದಿಲ್ಲ. ಕಳೆದ ತೊಂಭತ್ತು ವರ್ಷಗಳಲ್ಲಿ ತಯಾರಾದ 5000 ಚಿತ್ರಗಳ ಪೈಕಿ 3,500 ಚಿತ್ರಗಳು ಕಣ್ಮರೆಯಾಗಿರುವುದಂತೂ ಸತ್ಯ. ಇದರಿಂದಾಗಿ ಭಾರತದ ಮತ್ತು ಕನ್ನಡದ ಚಿತ್ರ ಸಂಸ್ಕೃತಿಗೆ ತುಂಬಲಾರದ ನಷ್ಟವಾಗಿದೆ. ಈಗಲೂ ಎಚ್ಚೆತ್ತುಕೊಳ್ಳದಿದ್ದರೆ, ಆಗುವ ನಷ್ಟ ನಮ್ಮ ಸಂಸ್ಕೃತಿಗೆ. ಸಂಸ್ಕೃತಿಯನ್ನು ಉಳಿಸಿ ಕಾಪಾಡುವುದೇ ಮುಖ್ಯವೆಂದು ಭಾವಿಸುವ ಇಂದಿನ ರಾಜಕೀಯ ವ್ಯವಸ್ಥೆ ಅದರತ್ತ ಗಮನ ನೀಡುವುದನ್ನು ಬಿಟ್ಟು, ಮತ್ತೆಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳದೆ ಬೇರೆ ದಾರಿ ಇಲ್ಲ. ಇದಕ್ಕೆ ಪ್ರಸಕ್ತ ರಾಜಕೀಯ ಆಡಳಿತ ಕಾರಣವೆಂದೇನೂ ನಾನು ದೂರುತ್ತಿಲ್ಲ. ಈ ಹಿಂದಿನ ಎಲ್ಲ ರಾಜಕೀಯ ಆಡಳಿತ ನೀತಿಗಳೇಲ್ಲ ಇದಕ್ಕೆ ಕಾರಣ. ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ದೃಶ್ಯ ಸಂಸ್ಕೃತಿಯನ್ನು ಸಂರಕ್ಷಿಸುವ ಮನಸ್ಸುಗಳು ತೀರಾ ಕಡಿಮೆ ಎಂದು ಹೇಳಬಹುದು. ದೃಶ್ಯ ಸಂಸ್ಕೃತಿಯ ಮೂಲಕ ಇತಿಹಾಸ, ಸಂಸ್ಕೃತಿಯನ್ನು ಜೀವಂತವಾಗಿರಿಸಿಕೊಳ್ಳಬಹುದು ಮತ್ತು ಇತಿಹಾಸವನ್ನು ಮನಬಂದಂತೆ ತಿರುಚುವ ಸಾಧ್ಯತೆಗಳನ್ನು ಕಡಿಮೆ ಮಾಡಬಹುದೆಂಬ ಕಲ್ಪನೆಯೂ ಆಡಳಿತ ಸೂತ್ರ ಹಿಡಿದವರಿಗೆ ಅರ್ಥವಾಗುತ್ತಿಲ್ಲ. ಸಾಂಸ್ಕೃತಿಕ ಪರಂಪರೆಯ ಅಗತ್ಯವನ್ನು ಮನಗಂಡ ಹಿಂದಿನ ಕಾಂಗ್ರೆಸ್‌ ಸರ್ಕಾರದ ಕಾಲದಲ್ಲಿ, ದೂರದೃಷ್ಟಿಯನ್ನು ಹೊಂದಿದ್ದ ದಾರ್ಶನಿಕ ಜವಹರಲಾಲ್‌ ನೆಹರೂ ಅವರು ೧1964ರಲ್ಲಿ ದೇಶದ ಮೊದಲ ಫಿಲಂ ಆರ್ಖೈವ್‌ The National Film Archives of India (NFAI) ಅನ್ನು ಪುಣೆಯಲ್ಲಿ ಸ್ಥಾಪಿಸಿದರು. ಇದರಿಂದಾಗಿ, ಭಾರತದ ಒಂದು ಚಿತ್ರ ಭಂಡಾರವೇ ಈಗ ನಮ್ಮಲ್ಲಿದೆ. ಆದರೆ ಈ ಚಿತ್ರ ಭಂಡಾರವನ್ನು ಉಳಿದ ಮೂರು ಸಂಸ್ಥೆಗಳೊಂದಿಗೆ ಬೆರೆಸಿಬಿಟ್ಟಿರುವ ಕಾರಣದಿಂದ ಅದು ತನ್ನ ಸ್ವತಂತ್ರ ಅಸ್ತಿತ್ವವನ್ನು ಕಳೆದುಕೊಂಡಿದೆ. ಇದಕ್ಕೆ ಯಾರು ಹೊಣೆ ಎಂದು ಕೇಳಿದವರೆಲ್ಲ, ದೇಶದ್ರೋಹಿಗಳಾಗಿದ್ದಾರೆ ಎನ್ನುವುದು ನಮ್ಮ ಕಾಲದ ದುರಂತ.

ಅನಾಥವಾದ ದೃಶ್ಯ ಸಂಸ್ಕೃತಿ

ನಮ್ಮ ದೇಶವನ್ನು ಹೊರತುಪಡಿಸಿ, ಪಶ್ಚಿಮದ ಎಲ್ಲ ದೇಶಗಳೂ ತಮ್ಮ ಚಿತ್ರ ಅಥವಾ ದೃಶ್ಯ ಸಂಸ್ಕೃತಿಯನ್ನು ಕಾಪಾಡುವುದಕ್ಕೆ ಹೆಚ್ಚಿನ ಗಮನ ನೀಡುತ್ತಿವೆ. ಅವು ಛಾಯಾಚಿತ್ರಗಳಾಗಿರಬಹುದು, ಕೈಬರಹವಾಗಿರಬಹುದು, ಚಲಿಸುವ ದೃಶ್ಯಗಳಾಗಿರಬಹುದು ಅವುಗಳಿಗೆ ಐತಿಹಾಸಿಕ ಮಹತ್ವವಿದೆ ಎಂದು ಆ ದೇಶಗಳಿಗೆ ಎಂದೋ ಮನವರಿಕೆಯಾಗಿಬಿಟ್ಟಿದೆ. ಆದರೆ ದುರಾದೃಷ್ಟವಾಶಾತ್‌ ನಮಗೆ ಇನ್ನೂ, ಇಷ್ಟನ್ನು ಕಳೆದುಕೊಂಡ ಮೇಲೂ ಮನವರಿಕೆಯಾಗಿಲ್ಲ. ಉಳಿದವರದ್ದು, ಕೇವಲ ನೂರಾರು ವರ್ಷಗಳ ಇತಿಹಾಸ, ನಮ್ಮದು ಸಾವಿರಾರು ವರ್ಷಗಳ ಇತಿಹಾಸ ಮತ್ತು ಸಂಸ್ಕೃತಿ ಎಂದು ಹೆಮ್ಮೆಯಿಂದ ಎದೆತಟ್ಟಿಕೊಳ್ಳುತ್ತಿರುವ ನಾವು ಅವುಗಳ ಉಳಿವಿಗೆ ಮಾಡಿರುವ ಪ್ರಯತ್ನವಾದರೂ ಏನು? ಹಾಗೆಂದು ಮಾಡೇ ಇಲ್ಲ ಎಂದು ಹೇಳುವಂತಿಲ್ಲ. 2016ರಲ್ಲಿ National Film Heritage Mission ಎಂಬ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿತು. ಇದರ ಉದ್ದೇಶ ಸಿನಿಮಾ ಪರಂಪರೆಯನ್ನು ರಕ್ಷಿಸುವುದು ಮತ್ತು ಅಳಿದುಳಿದಿರುವ ದೃಶ್ಯ ಸಂಸ್ಕೃತಿಯನ್ನು ಹೇಗಾದರೂ ಮಾಡಿ ರಕ್ಷಿಸುವುದು. ಇದಕ್ಕಾಗಿ ಸರ್ಕಾರ ಆಗ 596 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದೇ ಅಲ್ಲದೆ  ಈ ಪೈಕಿ ಸುಮಾರು 363 ಕೋಟಿ ರೂಪಾಯಿಗಳನ್ನು ವಿನಾಶದ ಅಂಚಿನಲ್ಲಿರುವ ಸಿನಿಮಾಗಳನ್ನು ಸಂರಕ್ಷಿಸುವುದು.  ಹಾಗೆ ನೋಡಿದರೆ, ಇದು ವಿಶ್ವದ ಅತಿ ದೊಡ್ಡ ಸಿನಿಮಾ ಸಂಸ್ಕೃತಿಯನ್ನು ರಕ್ಷಿಸುವ ಯೋಜನೆ. ಭಾರತೀಯ ಸಿನಿಮಾಗೆ ನೂರು ವರ್ಷ ತುಂಬಿದ ಸಂದರ್ಭದಲ್ಲಿ ಸಿನಿಮಾ ರಕ್ಷಣೆಗೆಂದು ರೂಪಿಸಿದ ಯೋಜನೆ. ಇದನ್ನು ಪ್ರಕಟಿಸಿದವರು ಅಂದಿನ ಪ್ರಸಾರ ಖಾತೆ ಸಚಿವರಾದ ಅನುರಾಗ್‌ ಠಾಕೂರ್.‌ ಇದಕ್ಕೆ ಆರ್ಥಿಕ ಇಲಾಖೆ ಕೂಡ ಅನುಮತಿ ನೀಡಿದ್ದು ಮಹತ್ವದ ಬೆಳವಣಿಗೆ. ಆದರೆ ಈ ಯೋಜನೆಯಿಂದ ಕರ್ನಾಟಕ ರಾಜ್ಯಕ್ಕೆ ಯಾವುದೇ ರೀತಿಯ ಲಾಭವಾಗಿಲ್ಲ. ರಾಜ್ಯವನ್ನು ಪ್ರತಿನಿಧಿಸುವ ಯಾವುದೇ ಸಂಸತ್‌ ಸದಸ್ಯ ಈ ಹಣವನ್ನು ಕೇಳಿಲ್ಲ ಎನ್ನುವುದು ದುರಂತವಲ್ಲದೆ ಮತ್ತೇನು? ಮೂಲತಃ devolution of fundsನಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಪ್ರಶ್ನಿಸಿದ ಈ ಬಿಜೆಪಿ ಸಂಸದರು, ಇನ್ನು ದೃಶ್ಯ ಸಂಸ್ಕೃತಿಯ ರಕ್ಷಣೆಗೆ ಪ್ರಯತ್ನಿಸುತ್ತಾರೆ ಎಂದು ನಂಬುವುದಾದರೂ ಹೇಗೆ? ಇದಕ್ಕೂ ಮುನ್ನ 2003ರಲ್ಲಿ NFAI ನಲ್ಲಿನ  ಸಿನಿಮಾ Vaults (ಚಿತ್ರಗಳನ್ನು ರಕ್ಷಿಸಿಡುವ ಕೋಶ) ಗೆ ಹತ್ತಿದ ಬೆಂಕಿಯಲ್ಲಿ ನೂರಾರು ಸಿನಿಮಾಗಳು ನಾಶವಾಗಿದೆ ಎಂದು ನಂಬಲಾಗಿದೆ.

WhatsApp Image 2026 05 21 at 5.19.01 AM2

ಕೇಂದ್ರ ಸರ್ಕಾರದಿಂದ ಹಣ ಬರಲಿಲ್ಲ ನಿಜ. ಆದರೆ ರಾಜ್ಯ ಸರ್ಕಾರ ಕನ್ನಡ ಚಿತ್ರರಂಗಕ್ಕೆ ತೊಂಭತ್ತು ವರ್ಷ ತುಂಬಿದ ಸಂದರ್ಭದಲ್ಲಿ ಹಮ್ಮಿಕೊಂಡ, ಸಿನಿಮಾ ಸಂಸ್ಕೃತಿ ರಕ್ಷಣೆಯ ಯೋಜನೆಯನ್ನು ಜಾರಿಗೆ ತರಲು ಹಣ ಮೀಸಲಿಟ್ಟರೂ ಅದರಿಂದ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. 2009ರಲ್ಲಿ ಕರ್ನಾಟಕದಲ್ಲಿ ಹದಿನೈದು ವರ್ಷಗಳ ಹಿಂದೆ ವಿ.ಎನ್.‌ ಸುಬ್ಬರಾವ್‌ ನೇತೃತ್ವದ ಸಮಿತಿ ಸಲ್ಲಿಸಿದ ವರದಿಯ ಆಧಾರದ ಮೇಲೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಸ್ಥಾಪನೆಯಾಯಿತು. ಈ ಅಕಾಡೆಮಿಯ ಉದ್ದೇಶವೇ ಕನ್ನಡ ಚಲನಚಿತ್ರ ಸಂಸ್ಕೃತಿಯನ್ನು ಉಳಿಸುವುದು ಬೆಳೆಸುವುದು. ಈ ಕಾರ್ಯಕ್ಕಾಗಿ ಕಾರ್ಯಕ್ರಮವೊಂದನ್ನು ರೂಪಿಸಲು ಸರ್ಕಾರ ಹಲವು ಸಮಿತಿಗಳನ್ನು ರಚಿಸಿತು. ಆದರೆ, 2022ರಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಸಿನಿಮಾ ತಜ್ಞ ಎನ್‌ ವಿದ್ಯಾಶಂಕರ ಅವರ ನೆರವಿನಿಂದ ಸಮಿತಿಯೊಂದುನ್ನು ಸ್ಥಾಪಿಸಿತು. ಅದರ ಅಧ್ಯಕ್ಷರು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಮುಖ್ಯಸ್ಥರು. ಈ ಸಮಿತಿಯ ಸದಸ್ಯರು, ಪುಣೆಯ NFAI ಭೇಟಿ ನೀಡಿ ಅಲ್ಲಿದ್ದ ತಂತ್ರಜ್ಞರೊಂದಿಗೆ ಚರ್ಚಿಸಿ, ಅಲ್ಲಿನ ಸಾಧ್ಯತೆಗಳನ್ನು ಅಧ್ಯಯನ ಮಾಡಿ, ಅಂಥದ್ದೇ ವ್ಯವಸ್ಥೆಯನ್ನು ರೂಪಿಸಲು ವರದಿಯೊಂದನ್ನು ಸಲ್ಲಿಸಿತು. ಈ ನಡುವೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಈ ಯೋಜನೆಗೆ ಹಣ ಮೀಸಲಿಟ್ಟು ಆ ಪೈಕಿ ಮೂರು ಕೋಟಿ ರೂಪಾಯಿಗಳನ್ನು ಆಯ-ವ್ಯಯದಲ್ಲಿ ಮೀಸಲಿಟ್ಟಿತು. ಆದರೆ ಸರ್ಕಾರಕ್ಕೆ ವಿದ್ಯಾಶಂಕರ ಮತ್ತಿತರರು ಸಲ್ಲಿಸಿದ ವರದಿ ಸರ್ಕಾರಕ್ಕೆ ತಲುಪಲೇ ಇಲ್ಲ. ಅದು ಎಂಥ ಉತ್ತಮವಾದ ವರದಿಯೆಂದರೆ, ಸರ್ಕಾರಕ್ಕೂ ಹೆಚ್ಚಿನ ಆರ್ಥಿಕ ಹೊರೆಯಾಗದಂತೆ ಕರ್ನಾಟಕ ಚಲನಚಿತ್ರ ಭಂಡಾರವನ್ನು ರೂಪಿಸುವುದು ಹಾಗೂ ಕರ್ನಾಟಕ ಚಲನಚಿತ್ರರಂಗದ ಇತಿಹಾಸವನ್ನು ಬಿಂಬಿಸುವ ವಸ್ತು ಸಂಗ್ರಹಾಲಯ ಕಟ್ಟುವುದು. ಅನಂತರ ಅಕಾಡೆಮಿ ತನ್ನ ಸ್ವಾರ್ಥ ಸಾಧನೆಗೆ ಮತ್ತೆ ಮತ್ತೆ ಸಮಿತಿಗಳನ್ನು ರೂಪಿಸಿತು. ಆದರೆ ಒಂದೇ ಒಂದು ಸಮಿತಿ ತನ್ನ ಅಧಿಕೃತ ವರದಿಯನ್ನು ಸಲ್ಲಿಸಿದ ನಿದರ್ಶನವಿಲ್ಲ. ವಿದ್ಯಾಶಂಕರ ಅವರ ಸಮಿತಿ ಸಲ್ಲಿಸಿದ ವರದಿಯನ್ನು ಜಾರಿಗೆ ತಂದರೆ ಕನ್ನಡದ್ದೇ ಆದ ಚಿತ್ರ ಭಂಡಾರ ನಿರ್ಮಾಣ ಸಾಧ್ಯ.

ಈ ಬಗ್ಗೆ ಈ ಲೇಖಕ ಹಲವಾರು ಬಾರಿ English ಹಾಗೂ ಕನ್ನಡದಲ್ಲಿ ಹಲವು ಲೇಖನಗಳನ್ನು ಬರೆದಿದ್ದಾರೆ. ಆದರೆ ಅತ್ಯಂತ ದುಃಖದ ಸಂಗತಿಯೆಂದರೆ, ಕರ್ನಾಟಕದ ಸಂದರ್ಭದಲ್ಲಿ ಈ ರೀತಿಯ ಬರಹಗಳು ಯಾರಿಗೆ ತಟ್ಟಬೇಕೋ, ಯಾರಿಗೆ ತಲುಪಬೇಕೋ, ಯಾರಿಗೆ ಅರಿವು ಮೂಡಿಸಬೇಕೋ ಅವರಿಗೆ ಮುಟ್ಟುವುದೇ ಇಲ್ಲ. ಮುಟ್ಟಿದರೂ, ಕೊಡವಿಕೊಂಡು, ಈ ರೀತಿ ಚಿತ್ರವನ್ನು ಉಳಿಸುವುದರಿಂದ ತಮಗೆ ವೈಯಕ್ತಿಕವಾಗಿ ಏನು ಲಾಭವಿದೆ ಎಂದು ಯೋಚಿಸುವ ಮಂದಿ ನಮ್ಮವರೆಂದು, ಈ ಚಿತ್ರ ಪರಂಪರೆಯ ಉಳಿಕೆಗಾಗಿ ಹಲವು ವರ್ಷಗಳಿಂದ ಬರೆಯುತ್ತಿರುವ ಈ ಪತ್ರಕರ್ತ-ಲೇಖಕನ ಅನುಭವ. ಆದರೂ, ಮರಳಿ ಯತ್ನವ ಮಾಡು ಎಂಬುದರಲ್ಲಿ ನಂಬಿಕೆ ಇರುವುದರಿಂದ, ಇದು ಮರಳಿ ಮಾಡಿದ ಮತ್ತೊಂದು ಪ್ರಯತ್ನ ಎಂದು ಓದುಗರು ಭಾವಿಸಿದರೆ ಧನ್ಯ. ಈ ಲೇಖನ-ವರದಿಯಾದರೂ, ಕರ್ನಾಟಕ ಸರ್ಕಾರಕ್ಕೆ ತಲುಪಲಿ ಎಂಬ ಕಾರಣಕ್ಕಾಗಿ ʼಅಮ್ಮ ಅರಿಯನ್‌ʼ ಚಿತ್ರದ ನೆಪದಲ್ಲಿ ಇವೆಲ್ಲವನ್ನೂ ಬರೆಯಬೇಕಾಯಿತು. ಸರ್ಕಾರಕ್ಕೆ ಇದನ್ನು ಓದಲು ಸಮಯವಿದೆಯೇ? ಈ ಬಗ್ಗೆ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಬಹುದೇ? ಹಾಗಾಗಲಿ ಎಂಬುದು ನಮ್ಮ ಬೇಡಿಕೆ. ಅದೂ ಕೂಡ ಸಿನಿಮಾ ಪರಂಪರೆಯನ್ನು ಪ್ರೀತಿಸುವ ಮಂದಿಯಿಂದ ಎನ್ನಬಹುದು.

IMG 20251121 WA0005
ಮುರಳೀಧರ ಖಜಾನೆ
+ posts

ಹಿರಿಯ ಪತ್ರಕರ್ತ. ಉದಯವಾಣಿ, ಪ್ರಜಾವಾಣಿ, ದಿ ಹಿಂದೂ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಸದ್ಯ ಸ್ವತಂತ್ರ ಪತ್ರಕರ್ತರಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಮುರಳೀಧರ ಖಜಾನೆ
ಮುರಳೀಧರ ಖಜಾನೆ
ಹಿರಿಯ ಪತ್ರಕರ್ತ. ಉದಯವಾಣಿ, ಪ್ರಜಾವಾಣಿ, ದಿ ಹಿಂದೂ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಸದ್ಯ ಸ್ವತಂತ್ರ ಪತ್ರಕರ್ತರಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುತ್ತಿಗೆಗಳು ಸುತ್ತುವರೆದಿರುವ ಗ್ಯಾನೇಶ್ ರಾಜೀನಾಮೆ ಸನ್ನಿಹಿತವೇ?

ದಿಲ್ಲಿ- ಮುಂಬಯಿಯಲ್ಲಿ‌ ಯುವಜನರು ಮತ್ತು  ಪ್ರತಿಪಕ್ಷಗಳ ಪ್ರತಿಭಟನೆಗಳು ಮುಂದುವರೆದಿವೆ. ಕಾಂಗ್ರೆಸ್ ಮತ್ತಿತರೆ ...

ವಿಜಯಪುರ | ಬರಪೀಡಿತ ಪ್ರದೇಶಗಳಿಗೆ ಡಿಸಿಎಂ ಪರಮೇಶ್ವರ್‌ ಭೇಟಿ

ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರು ಅ.8 ಹಾಗೂ 9ರಂದು ವಿಜಯಪುರ ಮತ್ತು...

ಮಲ್ಲೇಶ್ವರಂನಲ್ಲಿ ಫಾರ್ಮ್-7‌ ದುರ್ಬಳಕೆ ಆರೋಪ; ʼಈ ದಿನʼ ವರದಿ ಆಧರಿಸಿ ಕಾಂಗ್ರೆಸ್ ದೂರು

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

ಕಮಲನಗರ | ಅರ್ಹ ವೈದ್ಯಕೀಯ ಪದವಿ ಇಲ್ಲದೆ ವೈದ್ಯ ವೃತ್ತಿ: ಕ್ಲಿನಿಕ್ ಸೀಜ್

ಕಮಲನಗರ ತಾಲ್ಲೂಕಿನ ಚಾಂದೋರಿ ಗ್ರಾಮದಲ್ಲಿ ಯಾವುದೇ ವೈದ್ಯಕೀಯ ಪದವಿ ಇಲ್ಲದೆ ಅಕ್ರಮವಾಗಿ...