ವ್ಯಕ್ತಿಯ ಆರ್ಥಿಕ ಸ್ಥಿತಿ ಬದಲಾಗಬಹುದು, ಆದರೆ ಆತನ ಜಾತಿಯ ಗುರುತು ಸಮಾಜದಲ್ಲಿ ಎಂದೆಂದಿಗೂ ಬದಲಾಗುವುದಿಲ್ಲ. ಸಮಾಜದಲ್ಲಿ ನಡೆಯುವ ಮರ್ಯಾದೆಗೇಡು ಹತ್ಯೆಗಳು ಹಾಗೂ ಸಾಮಾಜಿಕ ಬಹಿಷ್ಕಾರಗಳು ಆರ್ಥಿಕ ಸ್ಥಿತಿಯನ್ನು ನೋಡಿ ನಡೆಯುವುದಿಲ್ಲ, ಬದಲಾಗಿ ಜಾತಿಯನ್ನು ನೋಡಿ ನಡೆಯುತ್ತವೆ. ಹೀಗಿರುವಾಗ “ಮೀಸಲಾತಿ ರದ್ದುಗೊಳಿಸಿ” ಅಥವಾ “ಆದಾಯದ ಮೇಲೆ ನೀಡಿ” ಎಂದು ವಾದಿಸುವುದು ದಲಿತರ ದೈನಂದಿನ ರಕ್ತ-ಕಣ್ಣೀರನ್ನು ನಗಣ್ಯಗೊಳಿಸುವ ಬಾಲಿಶತನವಾಗಿದೆ.
“ಮೀಸಲಾತಿ ಎಂಬುದು ಬಡತನ ನಿರ್ಮೂಲನ ಅಸ್ತ್ರವಲ್ಲ; ಅದು ಆಡಳಿತಾತ್ಮಕ ಅಧಿಕಾರ ಹಂಚಿಕೆ ಮತ್ತು ಶತಮಾನಗಳಿಂದ ಅನುಭವಿಸಿದ ಚಾರಿತ್ರಿಕ ಶೋಷಣೆಗೆ ಸಂವಿಧಾನದ ಮೂಲಕ ನೀಡಿದ ರಕ್ಷಣಾ ಕವಚ.”
ಭಾರತೀಯ ಸಮಾಜದಲ್ಲಿ ಮೀಸಲಾತಿಯ ಕುರಿತು ಚರ್ಚೆಗಳು ಬಂದಾಗಲೆಲ್ಲಾ, “ಮೀಸಲಾತಿಯನ್ನು ಜಾತಿಯ ಆಧಾರದ ಮೇಲೆ ನೀಡುವ ಬದಲು ಆರ್ಥಿಕ ಸ್ಥಿತಿಯ ಆಧಾರದ ಮೇಲೆ ನೀಡಬೇಕು” ಅಥವಾ “ಮೀಸಲಾತಿಯಿಂದ ಅರ್ಹತೆಗೆ ಧಕ್ಕೆಯಾಗುತ್ತಿದೆ” ಎಂಬ ವಾದಗಳು ಮುನ್ನೆಲೆಗೆ ಬರುತ್ತವೆ. ಆದರೆ, ಈ ವಾದಗಳು ಸಮಾಜದ ಕಟು ವಾಸ್ತವಗಳಾದ ಜಾತಿ ದೌರ್ಜನ್ಯ, ನಿರಂತರ ಹಿಂಸೆ ಮತ್ತು ಶೋಷಿತರ ಆತ್ಮಗೌರವದ ಮೇಲಿನ ದಾಳಿಯನ್ನು ಮುಚ್ಚಿಹಾಕುವ ಯತ್ನಗಳಾಗಿವೆ.
ಸಮಾಜದಲ್ಲಿ ಮಲ ಹೊರುವ ಪದ್ಧತಿ, ಒಳಚರಂಡಿ ಹಾಗೂ ಮಲದ ಗುಂಡಿಗೆ ಇಳಿದು ಸ್ವಚ್ಛಗೊಳಿಸುವುದು, ಚಪ್ಪಲಿ ಹೊಲೆಯುವುದು, ಪೌರಕಾರ್ಮಿಕರ ಕಸ ಗುಡಿಸುವ ಕೆಲಸ ಮತ್ತು ಜೀತ ಪದ್ಧತಿಯಂತಹ ಅತ್ಯಂತ ಕಠಿಣ ಹಾಗೂ ಜೀವಾಪಾಯದ ಕೆಲಸಗಳಲ್ಲಿ ಶೇ. 90ಕ್ಕಿಂತ ಹೆಚ್ಚು ಶೋಷಿತ ಸಮುದಾಯದವರೇ (ವಿಶೇಷವಾಗಿ ದಲಿತರು) ತೊಡಗಿಸಿಕೊಂಡಿದ್ದಾರೆ.
ಈ ಅಪಾಯಕಾರಿ ಕೆಲಸಗಳನ್ನು ಮಾಡಲು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಅಥವಾ ‘ಮೆರಿಟ್’ (Merit) ಪ್ರಶ್ನೆ ಎದುರಾಗುವುದಿಲ್ಲ ಮತ್ತು ಯಾವುದೇ ಅರ್ಹತಾ ಪತ್ರಗಳು ಬೇಕಾಗಿಲ್ಲ. ಆದರೆ, ಅದೇ ಸಮುದಾಯದ ವ್ಯಕ್ತಿ ಶಿಕ್ಷಣ ಪಡೆದು ದೇಶದ ನೀತಿ ರೂಪಿಸುವ ಐಎಎಸ್ (IAS) ಅಥವಾ ಐಪಿಎಸ್ (IPS) ಅಧಿಕಾರಿಯಾಗಲು ಮುಂದಾದಾಗ ಮಾತ್ರ ‘ಮೀಸಲಾತಿ’ ಮತ್ತು ‘ಅರ್ಹತೆ’ಯ ಪ್ರಶ್ನೆ ತೀವ್ರವಾಗಿ ಮುನ್ನೆಲೆಗೆ ಬರುತ್ತದೆ. ಕೇಂದ್ರ ಸರ್ಕಾರದ ವರದಿಯ ಪ್ರಕಾರ, ಐಎಎಸ್ ಅಧಿಕಾರಿಗಳಲ್ಲಿ ಶೇ. 92 ಮತ್ತು ಐಪಿಎಸ್ ಅಧಿಕಾರಿಗಳಲ್ಲಿ ಶೇ. 90ರಷ್ಟು ಮಂದಿ ಸಾಮಾನ್ಯ ವರ್ಗದವರೇ ಆಗಿದ್ದು, ದಲಿತ, ಆದಿವಾಸಿ ಮತ್ತು ಒಬಿಸಿ ಪ್ರಾತಿನಿಧ್ಯ ಕೇವಲ ಶೇ. 8 ರಿಂದ 10ರ ಒಳಗೇ ಉಳಿದಿರುವುದು ಈ ತಾರತಮ್ಯಕ್ಕೆ ಕನ್ನಡಿ ಹಿಡಿಯುತ್ತದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ದತ್ತಾಂಶಗಳು ಭಾರತದಲ್ಲಿ ದಲಿತರು ಎದುರಿಸುತ್ತಿರುವ ನರಕಯಾತನೆಯನ್ನು ಸ್ಪಷ್ಟಪಡಿಸುತ್ತವೆ. 2020 ರಿಂದ 2022 ರ ಅವಧಿಯಲ್ಲಿ ಎಸ್‌ಸಿ ಮೇಲಿನ ಅಪರಾಧಗಳು 50,291 ರಿಂದ 57,582 ಕ್ಕೆ (ಶೇ. 14.50% ಏರಿಕೆ) ಹಾಗೂ ಎಸ್‌ಟಿ ಮೇಲಿನ ಅಪರಾಧಗಳು 8,272 ರಿಂದ 10,064 ಕ್ಕೆ (ಶೇ. 21.66% ಏರಿಕೆ) ಏರಿಕೆಯಾಗಿವೆ. ದೇಶದಲ್ಲಿ ಪ್ರತಿ 18 ನಿಮಿಷಕ್ಕೊಮ್ಮೆ ಒಬ್ಬ ದಲಿತನ ವಿರುದ್ಧ ಅಪರಾಧ ನಡೆಯುತ್ತಿದ್ದು, ಪ್ರತಿದಿನ 13 ದಲಿತರ ಕೊಲೆಯಾಗುತ್ತಿದೆ, ಪ್ರತಿ ವಾರ 5 ದಲಿತರ ಮನೆಗಳಿಗೆ ಬೆಂಕಿ ಇಡಲಾಗುತ್ತಿದೆ ಮತ್ತು 6 ದಲಿತರ ಅಪಹರಣವಾಗುತ್ತಿದೆ.
ವಿಶೇಷವಾಗಿ ದಲಿತ ಮಹಿಳೆಯರು ಜಾತಿ, ಲಿಂಗ ಮತ್ತು ಬಡತನ ಎಂಬ ಮೂರು ಹಂತದ ತಾರತಮ್ಯವನ್ನು ಏಕಕಾಲಕ್ಕೆ ಎದುರಿಸುತ್ತಿದ್ದಾರೆ. ಗ್ರಾಮೀಣ ಭಾರತದಲ್ಲಿ ಶೇ. 70ರಷ್ಟು ದಲಿತ ಮಹಿಳೆಯರು ಅಕ್ಷರಸ್ಥರಲ್ಲ. ಅತ್ಯಾಚಾರ ಮತ್ತು ದೈಹಿಕ ದೌರ್ಜನ್ಯಗಳು ಕೇವಲ ಕಾಮದ ಅಭಿವ್ಯಕ್ತಿಯಲ್ಲ, ಬದಲಿಗೆ ದಲಿತ ಸಮುದಾಯವನ್ನು ‘ತಮ್ಮ ಗೆರೆ ದಾಟದಂತೆ’ ಹೆದರಿಸಿ ಅಧೀನತೆಯಲ್ಲಿಡುವ ದಮನಕಾರಿ ಅಸ್ತ್ರವಾಗಿ ಬಳಕೆಯಾಗುತ್ತಿವೆ. ಎಷ್ಟೋ ದೌರ್ಜನ್ಯಗಳು ಪೊಲೀಸ್ ಠಾಣೆಯ ಮೆಟ್ಟಿಲನ್ನೇ ಏರದೆ ಮುಚ್ಚಿಹೋಗುತ್ತಿರುವುದು ದುರಂತ.
ನಗರ ಪ್ರದೇಶಗಳಲ್ಲಿ ಬದಲಾವಣೆಗಳು ಗೋಚರಿಸಿದರೂ, ಗ್ರಾಮೀಣ ಭಾರತದಲ್ಲಿ ಇಂದಿಗೂ ಅಸ್ಪೃಶ್ಯತೆ ಜೀವಂತವಾಗಿದೆ:
- ಮೂರರಲ್ಲಿ ಒಂದು ಗ್ರಾಮೀಣ ಶಾಲೆಗಳಲ್ಲಿ ದಲಿತ ಮಕ್ಕಳನ್ನು ಇತರ ಮಕ್ಕಳೊಂದಿಗೆ ಕುಳಿತುಕೊಳ್ಳಲು ಬಿಡುವುದಿಲ್ಲ. ಶೇ. 27.6ರಷ್ಟು ಹಳ್ಳಿಗಳಲ್ಲಿ ದಲಿತರಿಗೆ ಪೊಲೀಸ್ ಠಾಣೆ, ಗ್ರಾಮ ಪಂಚಾಯತ್ ಮತ್ತು ಸರ್ಕಾರಿ ಕಚೇರಿ ಪ್ರವೇಶಿಸುವುದಕ್ಕೂ ಅಡ್ಡಿಪಡಿಸಲಾಗುತ್ತಿದೆ.
- ಪ್ರತಿ ನಾಲ್ಕು ಹಳ್ಳಿಗಳಲ್ಲಿ ಒಂದರಲ್ಲಿ ಆರೋಗ್ಯ ಸಿಬ್ಬಂದಿ ದಲಿತರ ಮನೆ ಬಾಗಿಲಿಗೆ ಹೋಗುವುದಿಲ್ಲ.
- ಅರ್ಧದಷ್ಟು ಗ್ರಾಮಗಳಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಮೂಲಗಳಿಗೆ ಪ್ರವೇಶವಿಲ್ಲ ಮತ್ತು ಶೇ. 70ರಷ್ಟು ಹಳ್ಳಿಗಳಲ್ಲಿ ಮೇಲ್ಜಾತಿ ಮತ್ತು ದಲಿತರು ಒಟ್ಟಿಗೆ ಕುಳಿತು ಊಟ ಮಾಡುವ ವಾತಾವರಣವಿಲ್ಲ.
- ಅಂತರ್ಜಾತಿ ವಿವಾಹಗಳು ನಡೆದಾಗ ಮರ್ಯಾದೆಗೇಡು ಹತ್ಯೆಗಳು ನಡೆಯುತ್ತಿರುವುದು ನಮ್ಮ ಸಮಾಜದ ಮಣ್ಣುಮುಕ್ಕಿದ ಜಾತಿ ವ್ಯವಸ್ಥೆಯನ್ನು ಎತ್ತಿ ತೋರಿಸುತ್ತದೆ.
ವ್ಯಕ್ತಿಯ ಆರ್ಥಿಕ ಸ್ಥಿತಿ ಬದಲಾಗಬಹುದು, ಆದರೆ ಆತನ ಜಾತಿಯ ಗುರುತು ಸಮಾಜದಲ್ಲಿ ಎಂದೆಂದಿಗೂ ಬದಲಾಗುವುದಿಲ್ಲ. ಸಮಾಜದಲ್ಲಿ ನಡೆಯುವ ಮರ್ಯಾದೆಗೇಡು ಹತ್ಯೆಗಳು ಹಾಗೂ ಸಾಮಾಜಿಕ ಬಹಿಷ್ಕಾರಗಳು ಆರ್ಥಿಕ ಸ್ಥಿತಿಯನ್ನು ನೋಡಿ ನಡೆಯುವುದಿಲ್ಲ, ಬದಲಾಗಿ ಜಾತಿಯನ್ನು ನೋಡಿ ನಡೆಯುತ್ತವೆ. ಹೀಗಿರುವಾಗ “ಮೀಸಲಾತಿ ರದ್ದುಗೊಳಿಸಿ” ಅಥವಾ “ಆದಾಯದ ಮೇಲೆ ನೀಡಿ” ಎಂದು ವಾದಿಸುವುದು ದಲಿತರ ದೈನಂದಿನ ರಕ್ತ-ಕಣ್ಣೀರನ್ನು ನಗಣ್ಯಗೊಳಿಸುವ ಬಾಲಿಶತನವಾಗಿದೆ.
ಇದನ್ನೂ ಓದಿ ಮತಾಂಧರು ಮಾನವ ಸಹಜ ನಡವಳಿಕೆಯನ್ನೇ ಮರೆತಿದ್ದಾರೆ: ‘ವಂದೇ ಮಾತರಂ’ ನಿಯಮಕ್ಕೆ ಶಶಿ ತರೂರ್ ಆಕ್ಷೇಪ!
ಸಂವಿಧಾನ ನೀಡಿದ ಮೀಸಲಾತಿಯು ಶೋಷಿತರ ಉಸಿರು ಮತ್ತು ಪ್ರಜಾಪ್ರಭುತ್ವದ ಅಸ್ತಿತ್ವಕ್ಕೆ ಅತ್ಯಗತ್ಯವಾದ ಸಾಮಾಜಿಕ ನ್ಯಾಯದ ಹಕ್ಕಾಗಿದೆ. ಈ ವ್ಯವಸ್ಥೆಯಲ್ಲಿ ಇತರ ಹಿಂದುಳಿದ ವರ್ಗಗಳಿಗೆ (OBC), ಮಹಿಳೆಯರಿಗೆ, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ, ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ (EWS) ಹಾಗೂ ವಿವಿಧ ಪ್ರಾದೇಶಿಕ ಮತ್ತು ವೃತ್ತಿಪರ ವರ್ಗಗಳಿಗೆ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಆದ್ದರಿಂದ ಮೀಸಲಾತಿಯನ್ನು ಪ್ರಶ್ನಿಸುವ ಮುಂಚೆ ಶತಮಾನಗಳ ಚಾರಿತ್ರಿಕ ಅನ್ಯಾಯ ಮತ್ತು ಸಮಾಜದ ಕ್ರೂರ ಜಾತಿ ಪದ್ಧತಿಯನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
ಇದನ್ನೂ ಓದಿ ಡಿಜಿಟಲ್ ಹಿಂಸೆ : ಮಹಿಳೆಯರ ಧ್ವನಿಯನ್ನು ದಮನಗೊಳಿಸುವ ರಾಜಕಾರಣ
ದೇವರಾಜು ಆರ್
ಕಾನೂನು ವಿದ್ಯಾರ್ಥಿ



