ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ರಾಷ್ಟ್ರಗೀತೆಯನ್ನು ಸಂಪೂರ್ಣವಾಗಿ ಹಾಡುವುದನ್ನು ಕಡ್ಡಾಯಗೊಳಿಸಿರುವ ತಿದ್ದುಪಡಿ ಕಾಯ್ದೆಯನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ತೀವ್ರವಾಗಿ ಖಂಡಿಸಿದ್ದಾರೆ. “ಅತಿರೇಕದ ದೇಶಭಕ್ತರು (ಮತಾಂಧರು) ಮಾನವನ ಸಹಜ ನಡವಳಿಕೆ ಮತ್ತು ತಾಳ್ಮೆಯನ್ನೇ ಮರೆತಂತಿದೆ” ಎಂದಿದ್ದಾರೆ.
ಸಂಸತ್ತಿನಲ್ಲಿ ಯಾವುದೇ ಚರ್ಚೆಯಿಲ್ಲದೆ ಅಂಗೀಕಾರಗೊಂಡು, ಈಗ ರಾಷ್ಟ್ರಪತಿಗಳ ಅಂಕಿತ ಪಡೆದಿರುವ ಈ ಹೊಸ ನಿಯಮದ ಪ್ರಾಯೋಗಿಕ ತೊಡಕುಗಳನ್ನು ತರೂರ್ ಬೆಟ್ಟು ಮಾಡಿದ್ದಾರೆ. “ಸರ್ಕಾರಿ ಸಮಾರಂಭಗಳ ಆರಂಭ ಮತ್ತು ಅಂತ್ಯದಲ್ಲಿ ರಾಷ್ಟ್ರಗೀತೆ ‘ಜನ ಗಣ ಮನ’ ಜೊತೆಗೆ ‘ವಂದೇ ಮಾತರಂ’ ಗೀತೆಯನ್ನೂ ಪೂರ್ಣ ಪ್ರಮಾಣದಲ್ಲಿ ಹಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ತಮಗೆ ಎರಡೂ ಗೀತೆಗಳ ಬಗ್ಗೆ ಅಪಾರ ಗೌರವವಿದೆ. ಆದರೆ, ರಾಷ್ಟ್ರಗೀತೆ ‘ಜನ ಗಣ ಮನ’ ಹಾಡಲು ಕೇವಲ 52 ಸೆಕೆಂಡುಗಳು ಸಾಕು. ಆದರೆ, ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡಲು 3 ನಿಮಿಷ 10 ಸೆಕೆಂಡುಗಳು ಬೇಕಾಗುತ್ತವೆ. ಇದಲ್ಲದೆ, ತಮಿಳುನಾಡಿನಂತಹ ರಾಜ್ಯಗಳು ಈ ಎರಡಕ್ಕೂ ಮುನ್ನ 2 ನಿಮಿಷಗಳ ತಮ್ಮ ರಾಜ್ಯಗೀತೆಯನ್ನು ಹಾಡಲು ನಿರ್ಧರಿಸಿವೆ. ಹೀಗಿರುವಾಗ ಪ್ರತಿಯೊಂದು ಕಾರ್ಯಕ್ರಮದ ಆರಂಭ ಮತ್ತು ಅಂತ್ಯದಲ್ಲಿ ಜನರು ಸತತ 6 ನಿಮಿಷಗಳ ಕಾಲ (ಒಟ್ಟು 12 ನಿಮಿಷ) ಎದ್ದು ನಿಲ್ಲಬೇಕು. ಇದು ಎಷ್ಟರ ಮಟ್ಟಿಗೆ ಸಾಧ್ಯ” ಎಂದು ಪ್ರಶ್ನಿಸಿದ್ದಾರೆ.
The President has assented to the #VandeMataram Amendment, passed without discussion in Parliament, which requires the singing of the National Song in full at the start and ending of any official function, in addition to the National Anthem.
— Shashi Tharoor (@ShashiTharoor) August 11, 2026
As one who greatly respects both,…
“ಗೌರವ ಮತ್ತು ತಾಳ್ಮೆಯನ್ನು ಕಾನೂನಿನ ಮೂಲಕ ಹೇರಲು ಸಾಧ್ಯವೇ? ರಾಷ್ಟ್ರೀಯಗೀತೆಯ ಮೇಲಿನ ಗೌರವವನ್ನು ಹೆಚ್ಚಿಸುವ ಉದ್ದೇಶದಿಂದ ತರಲಾದ ಈ ಮಸೂದೆಯು, ಪ್ರಾಯೋಗಿಕವಾಗಿ ಜನರ ಮೇಲೆ ಗಂಟೆಗಟ್ಟಲೆ ನಿಲ್ಲುವ ಹೊರೆ ಹೊರಿಸುವ ಮೂಲಕ ತದ್ವಿರುದ್ಧ ಪರಿಣಾಮ ಬೀರಬಹುದು. ಕೇವಲ ನಿಯಮಗಳನ್ನು ಹೇರುವುದರಿಂದ ಜನರಲ್ಲಾಗಲಿ, ರಾಷ್ಟ್ರಪ್ರೇಮಿಗಳಲ್ಲಾಗಲಿ ನಿಜವಾದ ಗೌರವ ಮೂಡಲು ಸಾಧ್ಯವಿಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.




