ತೆಲುಗು ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಬರೆಯುವ ಬಂಜಾರ ಸಮುದಾಯದ ಯುವ ಕವಿ ರಮೇಶ್ ಕಾರ್ತಿಕ್ ನಾಯಕ್ ಅವರ ಇಂಗ್ಲಿಷ್ ಕವಿತೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಸಿ. ಎಚ್. ಭಾಗ್ಯ
ಸಜ್ಜೆ ರೊಟ್ಟಿ
ನಾನು ಹೇಳಿದರೆ
ನೀವು ನಂಬುವುದಿಲ್ಲ
ನಮ್ಮ ಸಜ್ಜೆ ರೊಟ್ಟಿಯು
ಸೆಳೆಯುವುದು ನಿಮ್ಮನ್ನು
ನಮ್ಮ ತಾಂಡಾದೆಡೆಗೆ,
ಮಣ್ಣಿನೊಲೆಯಲ್ಲಿ
ನಮ್ಮ ಹೊಟ್ಟೆಗಳೇ
ಭೂಮಿಯನ್ನು ಬೆಚ್ಚಗಾಗಿಸುವ
ಕಾವಲಿಗಳು.
ಅರೆಸುಟ್ಟ ರೊಟ್ಟಿಗಳು
ಅಗಿದಗಿದು ಜಗಿದು
ನಾಲಿಗೆ ಸುರಿಸಿದ ಜೊಲ್ಲಿನಲಿ
ಕರಗಿ ಹೋಗುವುವು
ರೊಟ್ಟಿಗಳು ಎದ್ದು ಬರುವುವು
ಅವ್ವ ಅಜ್ಜಿಯರ ಕೈಗಳಿಂದ
ಹಿಟ್ಟು ನಾದುವ ಬೆರಳ
ಬಡಿತದಿಂದ
ಹಸಿವಿಗೆ ಆಕಾರ ಮೂಡುವುದು
ಗುಂಡನೆಯ ರೊಟ್ಟಿ
ಕೆಂಡ ಸೋಂಕಿದೊಡನೆ ನಾಚಿ ಕೆಂಪಾಗಿ ಅರಳುವುದು
ರೊಟ್ಟಿಯಂಚನು ಸುಟ್ಟು
ಕೆಟ್ಟ ದೃಷ್ಟಿ ನಿವಾಳಿಸಿ
ಅಜ್ಜಿ ಬೆಂಕಿಗೆ ಚೂರೊಂದನ್ನು ಅರ್ಪಿಸಿದಾಗ
ಕನಸುಗಳಿಗೆ ಗರಿ ಮೂಡುವುದು.
ಬುಟ್ಟಿಯ ಒಳಗೆ ರೊಟ್ಟಿಗಳ ಹರಹು
ಸೌರಮಂಡಲದಂತೆ
ನಾವು ರೊಟ್ಟಿಯನು ತಿನ್ನುವೆವು
ಹಸಿ ಮೆಣಸಿನ ಕಾಯಿ, ಈರುಳ್ಳಿ ಹಾಗೂ ಬೆಳ್ಳುಳ್ಳಿ ಉಪ್ಪಿನಕಾಯಿ ಜೊತೆ
ನಾವು ಅಲೆಮಾರಿಗಳು
ಚಲಿಸುವೆವು ಗಾಳಿಯೊಡನೆ
ಭೂಮಿಯಾಕಾರದ ರೊಟ್ಟಿಯಮೇಲೆ
ಪರಾಗದ ಹುಡಿಯಂತೆ.
ರೊಟ್ಟಿಯ ಕೆಳಗೆ
ನಮ್ಮ ತಾಂಡಾಗಳು ಒರಗುವುವು
ಜೋಳ ಸಜ್ಜೆಯ ತೆನೆ ಹಾಗೂ ಅರಿಸಿನದ ಬೆರಳುಗಳ ನೆರಳನ್ನಪ್ಪಿ
ನಮ್ಮ ಬದುಕನ್ನು
ಹಸಿರಾಗಿಸುತ್ತಾ…




