ಟ್ರಸ್ಟ್ ಗೆ ಪ್ರತಿ ಐದು ವರ್ಷಗಳಿಗೆ ಒಮ್ಮೆ ಟ್ರಸ್ಟ್ ಸದಸ್ಯರು ಆವರ್ತನ ರೂಪದಲ್ಲಿ ಬದಲಾಗಬೇಕು ಎಂದು ಟ್ರಸ್ಟ್ ನಿಯಮವಿದೆ(ಬೈಲಾ). ಅದನ್ನು ಈಗಿರುವ ಟ್ರಸ್ಟ್ ಸದಸ್ಯರು ಪಾಲಿಸುತ್ತಿಲ್ಲ ಎನ್ನುವುದು ಆರೋಪ. ಟ್ರಸ್ಟ್ ಸದಸ್ಯರ ವಿರುದ್ಧ ಈ ಹಿಂದೆ ಅವರ ಅಪಾರದರ್ಶಕ ನಡೆಯ ಕಾರಣದಿಂದ ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡಲಾಗಿತ್ತು. ಕೆಲವು ಕಾಲ ಟ್ರಸ್ಟ್ ಸೂಪರ್ ಸೀಡ್ ಕೂಡ ಆಗಿತ್ತು.
ಹರಿಹರ ವೀರಶೈವ ಪಂಚಮಸಾಲಿ ಪೀಠ ಆರಂಭಿಸುವ ಸಮಯದಲ್ಲಿ ಪೀಠಕ್ಕೆ ಯಾರನ್ನು ತರಬೇಕು ಎನ್ನುವ ಚಿಂತನೆ ಆರಂಭವಾಯಿತು. ಈಗ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದಿಂದ ಉಚ್ಛಾಟನೆಗೊಂಡಿರುವ ಬಸವ ಜಯಮೃತ್ಯುಂಜಯ ಸ್ವಾಮಿ ಆಗ ಚಿತ್ರದುರ್ಗದ ಮುರುಘಾ ಮಠದ ಶಾಖಾ ಮಠ, ದಾವಣಗೆರೆಯ ಶಿವಯೋಗಿ ಮಂದಿರದಲ್ಲಿದ್ದರು. ಸ್ಥಳೀಯರಾದ ಅವರನ್ನೆ ನೇಮಿಸಬೇಕು ಎಂದು ಯಾರೋ ಕೆಲವರು ಸಲಹೆ ನೀಡಿದರಂತೆ. ಆ ಸಲಹೆ ಮಾಡಿದವರ ಹಿಂದೆ ಮುರುಘಾ ಶರಣರ ಪ್ರಭಾವ ಇರಬೇಕೆಂದು ಉಳಿದವರು ಇವರ ಹೆಸರನ್ನು ಅನುಮೋದಿಸಲಿಲ್ಲ. ಕಾರಣ, ದಾವಣಗೆರೆ-ಚಿತ್ರದುರ್ಗ ಭಾಗದಲ್ಲಿ ಪಂಚಮಸಾಲಿಗಳಿಗು ಮುರುಘಾ ಶರಣರಿಗೂ ಅಷ್ಟಕ್ಕಷ್ಟೆ ಎನ್ನುವುದು ಒಂದು ಕಾರಣವಾದರೆ, ಜಯಮೃತ್ಯುಂಜಯ ಸ್ವಾಮಿ ಬಸವ ತತ್ವ ಮತ್ತು ಲಿಂಗಾಯತ ಧರ್ಮದಲ್ಲಿ ನಂಬಿಕೆಯುಳ್ಳವರು ಎನ್ನುವುದು ಎರಡನೆಯ ಕಾರಣವಾಗಿತ್ತು. ಹಾಗಾಗಿ ಹರಿಹರ ಪೀಠಕ್ಕೆ ಲಿಂಗಾಯತ ಹಾಗು ಬಸವವಾದಿಗಳಿಗೆ ಪ್ರವೇಶವಿಲ್ಲದಂತಾಯಿತು. ಮುಂದೆ ಅಲ್ಲಿ ವೀರಶೈವವಾದಿ ಒಬ್ಬರನ್ನು ನೇಮಿಸುವ ಕುರಿತು ಚಿಂತನೆ ನಡೆಯಿತು. ಟ್ರಸ್ಟ್ ಸದಸ್ಯರು ಪೀಠದ ಮೇಲೆ ಸಂಪೂರ್ಣ ಹಿಡಿತ ಹೊಂದಿದ್ದರು ಮತ್ತು ಟ್ರಸ್ಟ್ ಸದಸ್ಯರಲ್ಲದ ಯಾರನ್ನೂ ಪೀಠ ಹಾಗು ಟ್ರಸ್ಟ್ ವ್ಯವಹಾರಗಳ ಹತ್ತಿರ ಸುಳಿಯಲು ಬಿಡುತ್ತಿರಲಿಲ್ಲ. ಇಲ್ಲೊಂದು ಬಗೆಯ ಸರ್ವಾಧಿಕಾರಿ ವಾತಾವರಣ ನಿರ್ಮಿಸಲಾಯಿತು.
ಟ್ರಸ್ಟ್ ಗೆ ಪ್ರತಿ ಐದು ವರ್ಷಗಳಿಗೆ ಒಮ್ಮೆ ಟ್ರಸ್ಟ್ ಸದಸ್ಯರು ಆವರ್ತನ ರೂಪದಲ್ಲಿ ಬದಲಾಗಬೇಕು ಎಂದು ಟ್ರಸ್ಟ್ ನಿಯಮವಿದೆ(ಬೈಲಾ) ಎನ್ನುತ್ತಾರೆ ಕೆಲವು ಪಂಚಮಸಾಲಿ ಸಮಾಜದ ಸಾಮಾನ್ಯ ಜನರು. ಅದನ್ನು ಈಗಿರುವ ಟ್ರಸ್ಟ್ ಸದಸ್ಯರು ಪಾಲಿಸುತ್ತಿಲ್ಲ ಎನ್ನುವುದು ಅವರ ಆರೋಪ. ಟ್ರಸ್ಟ್ ಸದಸ್ಯರ ವಿರುದ್ಧ ಈ ಹಿಂದೆ ಅವರ ಅಪಾರದರ್ಶಕ ನಡೆಯ ಕಾರಣದಿಂದ ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡಲಾಗಿತ್ತು. ಕೆಲವು ಕಾಲ ಟ್ರಸ್ಟ್ ಸೂಪರ್ ಸೀಡ್ ಕೂಡ ಆಗಿತ್ತು. ಟ್ರಸ್ಟ್ ಸದಸ್ಯರಾಗಿರುವ ಬಸವರಾಜ ದಿಂಡೂರು, ಬಾವಿ ಬೆಟ್ಟಪ್ಪ ಮತ್ತು ಉಮಾಪತಿ ವಿರುದ್ಧ ಅಲ್ಲಿನ ಸಮಾಜದ ಜನರಿಗೆ ಒಳ್ಳೆಯ ಅಭಿಪ್ರಾಯವಿಲ್ಲ. ಇವರು ಪಂಚಮಸಾಲಿ ಸಮುದಾಯ ಸಂಘಟನೆಯ ವಿರುದ್ಧವಿದ್ದಾರೆ, ಪೀಠ ಬೆಳೆಯಲು ಬಿಡುತ್ತಿಲ್ಲ ಎನ್ನುವ ಆರೋಪಗಳಿವೆ. ತಾವು ಮಾತ್ರವಲ್ಲದೆ ಬೇರೆ ಯಾರೂ ಕೂಡ ಪಂಚಮಸಾಲಿ ಸಂಘಟನೆ ಮಾಡಲು ಇವರು ಬಿಡುವುದಿಲ್ಲ ಎನ್ನುವುದು ಇವರ ಮೇಲಿರುವ ಸಾಮಾನ್ಯ ಆರೋಪ. ಇದಕ್ಕೆ ಪೂರಕ ಎನ್ನುವಂತೆ ಅಲ್ಲಿ ಕೆಲವರು ಒಂದು ಘಟನೆಯನ್ನು ಉದಾಹರಿಸುತ್ತಾರೆ: ಈ ಹಿಂದೆ ಚಿತ್ರದುರ್ಗ ಜಿಲ್ಲೆಯ ಅಯ್ಯನಳ್ಳಿಯ ತಿಪ್ಪೇಸ್ವಾಮಿ ಎನ್ನುವ ವಿಕಲಚೇತನ ವ್ಯಕ್ತಿಯೊಬ್ಬರು ಜಿಲ್ಲಾ ಪಂಚಮಸಾಲಿ ಸಂಘಟನೆಯಲ್ಲಿ ತೀವ್ರವಾಗಿ ತೊಡಗಿದ್ದರಂತೆ. ಹೇಗಾದರೂ ಮಾಡಿ ಅದನ್ನು ತಡೆಯಲು ತಿಪ್ಪೇಸ್ವಾಮಿಯವರನ್ನು ಉಪಾಯವಾಗಿ ಬುಟ್ಟಿಗೆ ಹಾಕಿಕೊಂಡ ಉಮಾಪತಿ ಗುಂಪು ಬಡ ವಿದ್ಯಾರ್ಥಿಗಳಿಗಾಗಿ ವಸತಿ ಹಾಗು ಪ್ರಸಾದ ನಿಲಯ ನಡೆಸಿದರೆ ಟ್ರಸ್ಟ್ ವತಿಯಿಂದ ಸಹಾಯ ಮಾಡುವುದಾಗಿ ಭರವಸೆ ನೀಡಿದರಂತೆ.

ಇದನ್ನು ನಂಬಿ ಪಾಪ ಅಯ್ಯನೂರು ತಿಪ್ಪೇಸ್ವಾಮಿ ಅವರು ಸಮಾಜ ಸಂಘಟನೆಯ ಕಾರ್ಯ ನಿಲ್ಲಿಸಿ ಹಾಸ್ಟೆಲ್ ಮಾಡಿದರಂತೆ. ಉಪಾಪತಿ ಗುಂಪು ಐದಾರು ತಿಂಗಳು ಟ್ರಸ್ಟ್ ವತಿಯಿಂದ ತಿಪ್ಪೇಸ್ವಾಮಿಯವರಿಗೆ ಸಹಾಯ ಮಾಡಿ ಆಮೇಲೆ ಹಠಾತ್ ನಿಲ್ಲಿಸಿತಂತೆ. ಮುಂದೆ ತಿಪ್ಪೇಸ್ವಾಮಿ ಹಾಸ್ಟೆಲ್ ನಡೆಸಲಾಗದೆ ಅದನ್ನು ನಿಲ್ಲಿಸಿದರಂತೆ. ಈ ಕಾರಣಕ್ಕೆ ನೊಂದು ಭ್ರಮನಿರಸನಗೊಂಡು ಸಮಾಜ ಸಂಘಟನೆಯಿಂದ ತಿಪ್ಪೇಸ್ವಾಮಿ ದೂರ ಸರಿದರಂತೆ. ಹೀಗೆ ಈ ಉಮಾಪತಿ ಗುಂಪು ಯಾರನ್ನೂ ಸಮಾಜ ಸಂಘಟನೆ ಮಾಡಲು ಅವಕಾಶ ನೀಡುವುದಿಲ್ಲ ಮತ್ತು ಟ್ರಸ್ಟ್ ವ್ಯವಹಾರದಲ್ಲಿ ಯಾರೂ ತಲೆ ಹಾಕದಂತೆ ಮಾಡುವಲ್ಲಿ ನಿಸ್ಸೀಮರು ಎಂಬ ಮಾತು ಕೇಳಿ ಬರುತ್ತಿದೆ. ಆ ಪೀಠಕ್ಕೆ ಸ್ವಾಮಿಯಾಗಿ ಬಂದವರು ಈ ಗುಂಪಿನ ಗುಲಾಮರಾಗಿ ಇರಬೇಕು, ಈಗ ವಚನಾನಂದ ಸ್ವಾಮಿ ಕೂಡ ಹೀಗೆಯೆ ಇರಬೇಕಾಯಿತು ಎನ್ನುತ್ತಾರೆ ಆ ಭಾಗದ ಭಕ್ತರು. ಈ ಗುಂಪಿನ ಮಾತು ಕೇಳಿ ಹರಿಹರ ಮಾಜಿ ಶಾಸಕ ಎಚ್. ಎಸ್. ಶಿವಶಂಕರ್ ಅವರನ್ನು ವಚನಾನಂದ ಸ್ವಾಮಿ ಟೀಕಿಸುತ್ತಿದ್ದರು ಎಂದು ಮೊನ್ನೆ ಸ್ವತಃ ಶಿವಶಂಕರ್ ಅವರೇ ಆರೋಪ ಮಾಡಿದ್ದಾರೆ. ಆದರೂ, ಉಮಾಪತಿ ಗುಂಪನ್ನು ವಿರೋಧಿಸಲು ಈ ಉಚ್ಛಾಟಿತ ವಚನಾನಂದ ಸ್ವಾಮಿಯನ್ನು ಶಿವಶಂಕರ ಅವರು ಬೆಂಬಲಿಸುತ್ತಿರುವುದು ವಿಪರ್ಯಾಸ. ಹೇಗಿದೆ ಪಂಚಮಸಾಲಿಗಳ ‘ಶತ್ರುವಿನ ಶತ್ರು ಮಿತ್ರ’ ಅಥವಾ ‘ಸವತಿಯ ಗಂಡ ಸಾಯಲಿ’ ಎನ್ನುವ ನಡೆ! ಲಿಂಗಾಯತ ಧರ್ಮದ ಸಿದ್ಧಾಂತ, ಆಚರಣೆಗಳು ಮುಗ್ಧ ಪಂಚಮಸಾಲಿ ಜನರಿಗೆ ಗೊತ್ತಿಲ್ಲ ಎನ್ನುವುದು ಸಹಜ. ಆದರೆ ಪೀಠಕ್ಕೆ ಬಂದು ಕುಳಿತಿರುವ ವಚನಾನಂದ ಧಾರವಾಡದ ಮುರುಘಾ ಮಠದಲ್ಲಿ ಓದಿರುವವರು, ಬಸವ ತತ್ವ ಚೆನ್ನಾಗಿ ಬಲ್ಲವರು, ಮೇಲಾಗಿ ಹೆಸರು ಬೇರೆ ವಚನಾನಂದ.
This video cannot be played in your browser. Open the video directly
ಟ್ರಸ್ಟಿಗಳ ರಾಜಕೀಯ ಏನಾದರೂ ಇರಲಿ, ತಾನಾಯಿತು ತನ್ನ ಭಕ್ತರಾಯಿತು ಅಂತ ಬಸವ ತತ್ವ ಮತ್ತು ಲಿಂಗಾಯತ ಧರ್ಮದ ಆಚರಣೆಗಳು ಜನರಿಗೆ ಭೋದಿಸುತ್ತಾ ಇರಲು ಈ ಸ್ವಾಮಿಗಳಿಗೇನಾಗಿತ್ತು? ಒಮ್ಮೆ ಕೊರಳಿಗೆ ರುಂಡಮಾಲೆಯನ್ನು ಕಟ್ಟಿಕೊಂಡು ತಾಂತ್ರಿಕ ಪೂಜೆ ಮಾಡುವುದು, ಮತ್ತೊಮ್ಮೆ ಮಂತ್ರಾಲಯದ ಹರಿದಾಸ ಕವಿ ರಾಘವೇಂದ್ರನ ಪ್ರತಿಮೆ ತಲೆಯ ಮೇಲೆ ಹೊರುವುದು, ಮಗದೊಮ್ಮೆ ಲಿಂಗಾಯತ ಧರ್ಮ ವಿರೋಧಿ, ಬಸವದ್ರೋಹಿ, ಕೋಮುವಾದಿ ಕನೇರಿಯ ಬಾಪುಗೌಡ ಮೇಟಿಯನ್ನು ಓಲೈಸುವುದು ಮುಂತಾದ ಬಸವ ತತ್ವಕ್ಕೆ ವಿರುದ್ಧವಾಗಿರುವ ಚಟುವಟಿಕೆಗಳನ್ನು ವಚನಾನಂದ ಸ್ವಾಮಿ ಮಾಡಿದ್ದು ಜನರು ಗಮನಿಸಿದ್ದಾರೆ. ಉಪಾಧ್ಯ ಎನ್ನುವ ಪೀತ ಪಂಡಿತ ಬರೆದ ಬಸವಶೈವದಲ್ಲಿ ಹಿಂದುತ್ವ ಎಂಬ ವಿಕೃತ ಗ್ರಂಥ ಬಿಡುಗಡೆಯ ಜವಾಬ್ದಾರಿ ಈ ವಚನಾನಂದ ಸ್ವಾಮಿ ಹೊರುವ ಅಗತ್ಯವಿರಲಿಲ್ಲ. ಪಂಚಮಸಾಲಿ ಪೀಠವು ಯಾವ ಸಂಧಿಕಟ್ಟಿನ ಸಂದರ್ಭದಲ್ಲಿ ಹುಟ್ಟಿತು, ಯಾರ ವಿರುದ್ಧ ಪೀಠ ಸ್ಥಾಪಿಸಬೇಕಾಯಿತು ಎನ್ನುವ ಕನಿಷ್ಠ ಪ್ರಜ್ಞೆ ಹರಿಹರ ಪೀಠದ ಸ್ವಾಮಿಗಳಿಗಾಗಲಿ, ಅಲ್ಲಿನ ಟ್ರಸ್ಟ್ ಸದಸ್ಯರಿಗಾಗಲಿ, ಮತ್ತು ಕೂಡಲಸಂಗಮ ಪೀಠದ ಸ್ವಾಮಿಗಳಿಗಾಗಲಿ ಯಾಕೆ ಬರಲಿಲ್ಲ ಎನ್ನುವುದರ ಹಿಂದೆ ಒಂದು ಸುದೀರ್ಘ ಹಾಗು ಭಯಾನಕ ಕತೆ ಇದೆ, ಅದನ್ನು ಮುಂದಿನ ಕಂತುಗಳಲ್ಲಿ ಬರೆಯುವೆ. ಇಡೀ ಪಂಚಮಸಾಲಿ ಸಮುದಾಯ ಅಭಿಮಾನ ಶೂನ್ಯವಾಗಿ ತನ್ನ ಅಸ್ತಿತ್ವವನ್ನು ಮರೆತಿರುವುದು ವಿಪರ್ಯಾಸ. ಕಿತ್ತೂರು ಚೆನ್ನಮ್ಮ ತಾಯಿಯನ್ನು ಅಭಿಮಾನದ ಸಂಕೇತವಾಗಿ ಪರಿಗಣಿಸುವ ಇವರು ಕಿತ್ತೂರು ಸಂಸ್ಥಾನವನ್ನು ನಾಶಮಾಡಿದ ಚಿತ್ಪಾವನ ಬ್ರಾಹ್ಮಣ ಪೇಶ್ವೆಗಳು, ಬ್ರಾಹ್ಮಣ ಪಟವರ್ಧನರು ಮತ್ತು ವೆಂಕಟರಾವ್ ಹಾವೇರಿಯಂತ ಲಿಂಗಾಯತ ವಿರೋಧಿ ಬ್ರಾಹ್ಮಣವಾದಿಗಳ ಕಪಟತನ ಮರೆತು ಬ್ರಾಹ್ಮಣರ ರಾಜಕೀಯ ದಾಳವಾಗಿರುವ ಹಿಂದುತ್ವ ಎನ್ನುವ ವಿಷಕ್ಕೆ ಬಲಿಯಾಗುತ್ತಿರುವುದು ದುರಂತದ ಸಂಗತಿ.

ಪಂಚಮಸಾಲಿ ರಾಜಕಾರಣಿಗಳಿಗೆ ಪ್ರಬುದ್ಧತೆಯ ಕೊರತೆಯಿದೆ ಮತ್ತು ಸ್ವಾರ್ಥತೆ ಮಿತಿ ಮೀರಿದೆ. ಲಿಂಗಾಯತ ಧರ್ಮದ ದೊಡ್ಡ ಆಸ್ತಿಯಂತಿರುವ ಹಾಗು ಲಿಂಗಾಯತ ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿರುವ ತಮ್ಮ ಪುಣ್ಯಪುರುಷರ ಇತಿಹಾಸ ಪಂಚಮಸಾಲಿ ರಾಜಕಾರಣಿಗಳು ಓದಿಲ್ಲ, ಅಥವಾ ಸ್ವಾರ್ಥಕ್ಕಾಗಿ, ರಾಜಕೀಯ ಸ್ಥಾನಮಾನಕ್ಕಾಗಿ ಯಾರ್ ಬೇಕಾದವರೊಂದಿಗೆ ರಾಜಿಗೆ ಒಳಗಾಗುತ್ತಾರೆ. ಒಟ್ಟಾರೆ, ಈ ಟ್ರಸ್ಟ್ ಹಾಗು ಪೀಠಗಳು ಸ್ಥಾಪಿಸುವ ಮೊದಲು ವೀರಶೈವ ಪಂಚಪೀಠಗಳ ಜಾತಿ ಜಂಗಮರಿಗೆ ಪಂಚಮಸಾಲಿಗಳು ಸೇವೆ ಸಲ್ಲಿಸುತ್ತಿದ್ದರೂ ಸಮಾಜದಲ್ಲಿ ಆಗ ಇವತ್ತಿನಷ್ಟು ಬೃಹತ್ ಪ್ರಮಾಣದ ಗೊಂದಲಗಳಿರಲಿಲ್ಲ. ಆದರೆ ಸಮಾಜದ ಒಕ್ಕಟ್ಟಿಗಾಗಿ ಟ್ರಸ್ಟ್ ಹಾಗು ಪೀಠಗಳು ಸ್ಥಾಪಿಸಿದ ಮೇಲೆ ಇಡೀ ಪಂಚಮಸಾಲಿ ಸಮಾಜದಲ್ಲಿ ಹಿಂದೆಂದಿಗಿಂತ ಹೆಚ್ಚಿನ ಅರಾಜಕತೆ, ಗೊಂದಲ, ಒಳಜಗಳ ಹೆಚ್ಚಿದೆ. ಈಗ ಉದ್ಭವಿಸಿರುವ ಪಂಚಮಸಾಲಿ ಪೀಠಗಳ ಗೊಂದಲವು ಕೇವಲ ಪಂಚಮಸಾಲಿಗಳ ಸಮಸ್ಯೆಯಾಗಿರದೆ ಅದನ್ನು ಸಮಸ್ತ ಲಿಂಗಾಯತರ ಸಮಸ್ಯೆಯಾಗಿ ನೋಡಬೇಕಿದೆ. ಶಿಕ್ಷಣ ಅಷ್ಟಾಗಿ ಇರದ ಬ್ರಿಟಿಷ್ ಆಡಳಿತದಲ್ಲಿ ಪಂಚಮಸಾಲಿ ಸಮಾಜದ ಶ್ರೀಮಂತ ಹಾಗು ದೇಶಕತಿ ಮನೆತನಗಳು, ಸಂಸ್ಥಾನಗಳು ಲಿಂಗಾಯತ ಧರ್ಮದ, ಹಾಗು ಇಡೀ ಸಮಾಜದ ಉಳಿವಿಗಾಗಿ ಕೆಲಸ ಮಾಡಿವೆ. ದಾಸೋಹ, ಪರೋಪಕಾರಗಳಿಗೆ ಪಂಚಮಸಾಲಿ ಸಮಾಜ ಹೆಸರುವಾಸಿಯಾಗಿತ್ತು. ಮಠಗಳಿಗೆ ಆರ್ಥಿಕ ಬೆನ್ನೆಲುಬಾಗಿ ಪಂಚಮಸಾಲಿ ಸಮಾಜ ನಿಂತಿರುತ್ತಿತ್ತು. ಆದರೂ ಮಠಗಳಿಗೆ ಸಹಾಯ ಮಾಡಿದವರು ಬಣಜಿಗರು ಮಾತ್ರ ಎನ್ನುವಂತ ವಾತಾವರಣವನ್ನು ಸೃಷ್ಟಿಯಾಯಿತು, ಜಂಗಮರ ನಂತರ ಬಣಜಿಗರೇ ಪ್ರತಿಯೊಂದು ಮಠದ ಆಯಕಟ್ಟಿನ ಸ್ಥಾನಗಳಲ್ಲಿ ಪ್ರತಿಷ್ಠಾಪನೆಗೊಂಡರು.
ಪಂಚಮಸಾಲಿ ಸಮಾಜವು ನಾಡಿನ ಎಲ್ಲಾ ಲಿಂಗಾಯತ ವಿರಕ್ತ ಮಠಗಳಿಗಿಂತ ವೀರಶೈವ ಪಂಚಪೀಠಗಳ ಜಾತಿ ಜಂಗಮರಿಗೆ ಹೆಚ್ಚು ಸಹಾಯ ಮಾಡಿದೆ. ಆದರೆ, ಆ ಸಮಾಜ ಪಂಚಪೀಠಗಳಲ್ಲಿ ನಮಗೊಂದು ಪೀಠ ಕೊಡಿ ಎಂದು ದೈನೇಸಿಯಾಗಿ ಅತ್ಯಂತ ಗೌರವದಿಂದ ವೀರಶೈವ ಪಂಚಪೀಠಗಳ ಜಾತಿ ಜಂಗಮರನ್ನು ಅಂಗಲಾಚಿದಾಗ ಉಪಕಾರ ಮರೆತ ವೀರಶೈವ ಪಂಚಪೀಠಗಳ ಜಾತಿ ಜಂಗಮರು ಹೀನಾಯವಾಗಿ ಅವರನ್ನು ಅವಮಾನಿಸಿದರು. ನೀವು ಕೇವಲ ಭಕ್ತರು, ನಿಮಗೆ ಗುರುವಾಗುವ ಅರ್ಹತೆ ಇಲ್ಲ ಎಂದರು. ಈಗ ಪಂಚಮಸಾಲಿ ಪೀಠಗಳು ವೀರಶೈವ ಪಂಚಪೀಠಗಳ ಜಾತಿ ಜಂಗಮರು ಅಂದದನ್ನು ನಿಜವಾಗಿಸಿದವು. ಲಿಂಗಾಯತರು ಅಲ್ಪಸಂಖ್ಯಾತರ ಸೌಲಭ್ಯ ಕೇಳಿದಾಗ ಧರ್ಮ ಒಡೆದರು ಎಂದು ಹಲಬುವ ವೀರಶೈವ ಪಂಚಪೀಠಗಳ ಜಾತಿ ಜಂಗಮರು, ತಾವು ಪರಿಶಿಷ್ಟ ಬೇಡ ಜಂಗಮರ ಸೌಲಭ್ಯಕ್ಕಾಗಿ ಹೋರಾಡುತ್ತಾ ಇಡೀ ಲಿಂಗಾಯತ ಧರ್ಮವನ್ನು ಒಡೆಯುತ್ತಿದ್ದಾರೆ. ಪಂಚಮಸಾಲಿ ಪೀಠಗಳ ಇಂದಿನ ಗೊಂದಲವನ್ನು ಬಗೆಹರಿಸುವ ಕುರಿತು ಯಾವ ಪಂಚಪೀಠಗಳೂ ಪ್ರಯತ್ನಿಸಿಲ್ಲ, ಬದಲಾಗಿ ಇಡೀ ಲಿಂಗಾಯತ ಸಮಾಜದ ಯಜಮಾನಿಕೆ ಬಯಸುವ ಪಂಚಪೀಠಗಳು ಭಕ್ತವರ್ಗದ ಪೀಠಗಳ ಗೊಂದಲವನ್ನು ಒಳಗೊಳಗೆ ಸಂಭ್ರಮಿಸುತ್ತವೆ. ಇದಕ್ಕೆ ಉದಾಹರಣೆ ಎಂದರೆ, ಈಗ ಎದ್ದಿರುವ ವಿವಾದದ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೀರಶೈವ ಪಂಚಪೀಠಗಳ ಜಾತಿ ಜಂಗಮರ ಅನುಯಾಯಿಗಳು ಪ್ರತಿಕ್ರಿಯಿಸುತ್ತಾ ಇರುವ ಬಗೆ. ಈ ವೀರಶೈವ ಜಾತಿ ಜಂಗಮರು ಪಂಚಮಸಾಲಿಗಳು ಪಂಚಪೀಠಗಳ ವಿರುದ್ಧ ತಮ್ಮ ಪೀಠ ಸ್ಥಾಪಿಸಿದ ಪಾಪ ಕೃತ್ಯಕ್ಕೆ ಈ ಪರಿಸ್ಥಿತಿ ಬಂದಿದೆ ಎನ್ನುವ ಕಾಮೆಂಟ್ ಹಾಕುತ್ತಿದ್ದಾರೆ. ಅಷ್ಟೆ ಅಲ್ಲದೆ, ಗುರು ಆಗಬೇಕಾದರೆ, ಜಂಗಮರಿಗೆ ಮಾತ್ರ ಸಾಧ್ಯ, ಈ ಪಂಚಮಸಾಲಿ ಪೀಠದ ಸ್ವಾಮಿಗಳು ಜಂಗಮರಲ್ಲ, ಇವರಿಗೆ ಶಿವಯೋಗಿ ಮಂದಿರದ ಸಂಸ್ಕಾರವಿಲ್ಲ, ಆ ಕಾರಣದಿಂದ ಈ ಗೊಂದಲ ಉದ್ಭವಿಸಿದೆ ಎಂದು ಕುಹಕವಾಡುತ್ತಿದ್ದಾರೆ. ಇದನ್ನು ಪಂಚಮಸಾಲಿ ಸಮುದಾಯ ಗಂಭೀರವಾಗಿ ಪರಿಗಣಿಸಬೇಕಿದೆ.
ಇದನ್ನೂ ಓದಿ ಪಂಚಮಸಾಲಿ ಪೀಠಗಳ ಗೊಂದಲ- ಭಾಗ 6 : ‘ಬಸವಶೈವದಲ್ಲಿ ಹಿಂದುತ್ವ’ ಎನ್ನುವ ಲಿಂಗಾಯತ ಧರ್ಮ ಸಿದ್ಧಾಂತ ಕುಲಗೆಡಿಸುವ ಕೃತಿ
ಮುಂದುವರೆಯುವುದು….

ಡಾ ಜೆ ಎಸ್ ಪಾಟೀಲ್
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ




