ಸಿದ್ದರಾಮಯ್ಯ ನಿರ್ಗಮನ ‘ಅಹಿಂದ’ ಮರಕ್ಕೆ ಕೊಡಲಿ ಏಟು: ಸಮುದಾಯದ ಮತಗಳು ಎತ್ತ?

Date:

ಒಂದು ಕಾಲದಲ್ಲಿ ರಾಜ್ಯದ ರಾಜಕಾರಣದ ಗತಿಯನ್ನೇ ಬದಲಿಸಿದ್ದ 'ಅಹಿಂದ' ಚಳವಳಿ ಇಂದು ನಾವಿಕನಿಲ್ಲದ ದೋಣಿಯಾಗಿದೆ. ಸಿದ್ದರಾಮಯ್ಯ ನಿರ್ಗಮನ, ಸ್ಟಿಂಗ್ ಆಪರೇಷನ್ ಆರೋಪ, ಸತೀಶ್ ಜಾರಕಿಹೊಳಿ ಹಿಂದಕ್ಕೆ ಮತ್ತು ಕೆ.ಎನ್. ರಾಜಣ್ಣನವರ ಅನಿಶ್ಚಿತತೆ… ಈ ಸಂದರ್ಭದಲ್ಲಿ ಅಹಿಂದ ಸಮುದಾಯಗಳು ಯಾರನ್ನು ನಂಬಬೇಕು? ಈ ಮತಗಳು ಯಾರ ಪಾಲಾಗಲಿವೆ?

ರಾಜ್ಯ ರಾಜಕೀಯ ಇತಿಹಾಸದಲ್ಲಿ ಕಳೆದ ಎರಡು ದಶಕಗಳಿಂದ ಅತ್ಯಂತ ಪ್ರಬಲ, ನಿರ್ಣಾಯಕ ಮತ್ತು ಸಾಮಾಜಿಕ ಪರಿವರ್ತನೆಗೆ ಹಾದಿ ಮಾಡಿಕೊಟ್ಟಿದ್ದು ‘ಅಹಿಂದ’ ಸಮುದಾಯ. ಅಂದರೆ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತ ಸಮುದಾಯ. ಈ ಸಾಮಾಜಿಕ ಒಕ್ಕೂಟವನ್ನು ಕೇವಲ ಪ್ರಚಾರದ ವೇದಿಕೆಯಾಗಿ ಮಾತ್ರವಲ್ಲದೆ, ಕಾಂಕ್ರೀಟ್ ಮತಬ್ಯಾಂಕ್ ಆಗಿ ಪರಿವರ್ತಿಸಿದ್ದು ಸಿದ್ದರಾಮಯ್ಯ. ಆದರೆ, ರಾಜ್ಯ ರಾಜಕೀಯದಲ್ಲಿ ಸಿದ್ದರಾಮಯ್ಯ ಅವರ ನಂತರದ ಯುಗ ಆರಂಭಗೊಳ್ಳುತ್ತಿರುವ ಈ ನಿರ್ಣಾಯಕ ಕಾಲಘಟ್ಟದಲ್ಲಿ, ಅಹಿಂದ ಸಮುದಾಯ ತೀವ್ರವಾದ ‘ರಾಜಕೀಯ ನಿರ್ವಾತ’ದ ಸ್ಥಿತಿಯಲ್ಲಿದೆ, ನಾಯಕತ್ವದ ಅಭಾವವನ್ನು ಎದುರಿಸುತ್ತಿದೆ.

- Advertisement -

ರಾಜ್ಯದಲ್ಲಿ ಸಿಎಂ ಬದಲಾವಣೆ ಎಂಬ ರಾಜಕೀಯದಾಟ ಹಲವು ತಿಂಗಳುಗಳ ಕಾಲ ನಡೆಯಿತು. ಕೊನೆಗೂ ಸಿದ್ಧರಾಮಯ್ಯ ಕೆಳಗಿಳಿದರು. ಒಕ್ಕಲಿಗ ಸಮುದಾಯದ ಪ್ರಬಲ ನಾಯಕ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೇರಿದರು. ಅದಾದ ಬಳಿಕ ಅಹಿಂದ ಸಮುದಾಯಗಳ ಒಳಗಿನ ದ್ವಂದ್ವ, ಗೊಂದಲ ಮತ್ತು ಆತಂಕಗಳು ಬಹಿರಂಗವಾಗಿ ಗೋಚರಿಸಲಾರಂಭಿಸಿವೆ. “ನಮಗಾಗಿ, ನಮ್ಮ ಧ್ವನಿಯಾಗಿ ಅಧಿಕಾರದ ಉನ್ನತ ಪೀಠದಲ್ಲಿ ನಿಲ್ಲುವ ನಾಯಕ ಯಾರು?” ಎಂಬ ಪ್ರಶ್ನೆ ಅಹಿಂದ ಸಮುದಾಯಗಳ ಪ್ರತಿಯೊಂದು ಶ್ರೇಣಿಯಲ್ಲೂ ಕೇಳಿಬರುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಲ್ಬೇನಿಯಾದಲ್ಲೇಕೆ ಜನಾಕ್ರೋಶ ಭುಗಿಲೆದ್ದಿದೆ? ಸುಪ್ರೀಂ ಕೋರ್ಟ್, ಪಾರ್ಲಿಮೆಂಟನ್ನು ಸುಟ್ಟದ್ದು...

ಅಲ್ಬೇನಿಯಾ ರಾಜಧಾನಿ ತಿರಾನಾದ ಬೀದಿಗಳಿಂದ ಜಾಗತಿಕ ರಾಜಧಾನಿಗಳವರೆಗೆ… ಬೆಲೆ ಏರಿಕೆ, ಭ್ರಷ್ಟಾಚಾರ ಮತ್ತು ಶಿಕ್ಷಣದ ಬಿಕ್ಕಟ್ಟಿನ ವಿರುದ್ಧ ಯುವ ಸಮೂಹ ಬೀದಿಗಿಳಿದಿದೆ. ಪ್ರಧಾನಿ ಎಡಿ ರಾಮಾ ಸರ್ಕಾರದ ವಿರುದ್ಧ ಅಲ್ಬೇನಿಯಾದಲ್ಲಿ ಭುಗಿಲೆದ್ದ ಜನಾಕ್ರೋಶ...

ಬಿಯಾಂಡ್ ಬೆಂಗಳೂರು: ಡಿಜಿಟಲ್ ಆರ್ಥಿಕತೆಯಲ್ಲಿ ರಾಯಚೂರಿಗೆ ಸಿಗುವುದೇ ಪ್ರತ್ಯೇಕ...

ಕರ್ನಾಟಕದ ಅಭಿವೃದ್ಧಿ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ರಾಜ್ಯದ ವಿವಿಧ ನಗರಗಳಿಗೂ ತಲುಪಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ‘Beyond Bengaluru’ ಯೋಜನೆಯನ್ನು ಜಾರಿಗೊಳಿಸಿದೆ. ಐಟಿ, ಐಟಿಇಎಸ್,...

ರಾಯಚೂರು | ಸ್ಥಳೀಯ ಸಂಸ್ಥೆ ಚುನಾವಣೆ: ಆಕಾಂಕ್ಷಿಗಳ ಲೆಕ್ಕಾಚಾರ...

ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ ಪ್ರಕಟವಾಗುತ್ತಿದ್ದಂತೆ ರಾಯಚೂರು ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮೀಸಲಾತಿ ಬದಲಾವಣೆಯಿಂದ ಕೆಲವರ ಸ್ಪರ್ಧೆಯ ಲೆಕ್ಕಾಚಾರ ತಲೆಕೆಳಗಾಗಿದ್ದರೆ, ಮತ್ತೊಂದೆಡೆ...

ಅಹಿಂದ ಎಂಬುದು ರಾಜಕೀಯವಾಗಿ ರಚನೆಗೊಂಡ ಮೂರು ಪ್ರಮುಖ ಸಾಮಾಜಿಕ ಗುಂಪುಗಳ ಅಕ್ಷರ ಸಂಯೋಜನೆ. ಅ (ಅಲ್ಪಸಂಖ್ಯಾತರು) ಅಂದರೆ ಪ್ರಮುಖವಾಗಿ ಮುಸ್ಲಿಂ, ಕ್ರಿಶ್ಚಿಯನ್ ಹಾಗೂ ಜೈನ ಸಮುದಾಯಗಳು. ಹಿಂ (ಹಿಂದುಳಿದ ವರ್ಗಗಳು) ಅಂದರೆ ಕುರುಬ, ಈಡಿಗ, ಮಡಿವಾಳ, ಸವಿತಾ ಸಮಾಜ, ಉಪ್ಪಾರ, ಗಂಗಾಮತಸ್ಥ ಸೇರಿದಂತೆ ರಾಜ್ಯದ ನೂರಾರು ಸಣ್ಣ ಹಾಗೂ ಮಧ್ಯಮ ಹಿಂದುಳಿದ ಜಾತಿಗಳು. ದ (ದಲಿತರು) ಎಂದರೆ ಪರಿಶಿಷ್ಟ ಜಾತಿ (ಎಸ್‌ಸಿ – ಬಲಗೈ, ಎಡಗೈ, ಭೋವಿ, ಲಂಬಾಣಿ ಇತ್ಯಾದಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಟಿ – ನಾಯಕ/ವಾಲ್ಮೀಕಿ ಸಮುದಾಯ) ವಿಶಾಲ ಸಮೂಹ.

ಇದನ್ನೂ ಓದಿ: ‘ಅಹಿಂದ’ದಿಂದ ಬೆಳೆದ ಸಿದ್ದರಾಮಯ್ಯ, ‘ಅಹಿಂದ’ಕ್ಕೆ ಬದ್ಧರಾಗಿದ್ದಾರೆಯೇ?

ಕರ್ನಾಟಕದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 60ಕ್ಕೂ ಹೆಚ್ಚಿನ ಪ್ರಮಾಣದಲ್ಲಿರುವ ಈ ಅಹಿಂದ ವರ್ಗವು ಒಟ್ಟುಗೂಡಿದಾಗ ರಾಜಕೀಯದಲ್ಲಿ ಯಾವುದೇ ಪಕ್ಷವನ್ನು ಅಧಿಕಾರಕ್ಕೆ ತರುವ ಅಥವಾ ಕೆಳಗಿಳಿಸುವ ಅಪಾರ ಬಲವನ್ನು ಹೊಂದಿದೆ. 2004-2006ರ ಅವಧಿಯಲ್ಲಿ ದೇವೇಗೌಡರ ಜೆಡಿಎಸ್ ತೊರೆದ ಸಿದ್ದರಾಮಯ್ಯ ಅವರಿಗೆ ಮರುಜೀವ ನೀಡಿದ್ದು ಇದೇ ಅಹಿಂದ ಚಳವಳಿ. ಆದರೆ ಈಗ ಈ ಸಮುದಾಯ ಒಡೆದು ಹೋಗುತ್ತಿರುವಂತೆ ಭಾಸವಾಗುತ್ತಿದೆ. ಸಮುದಾಯದಲ್ಲಿ ಅನಾಥಪ್ರಜ್ಞೆ ಕಾಡುತ್ತಿದೆ.

ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಸ್ಥಾನದ ನಿರ್ಗಮನದ ಸುತ್ತ ಹೆಣೆಯಲಾದ ರಾಜಕೀಯ ತಂತ್ರಗಳು ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿವೆ. ಪ್ರತಿಪಕ್ಷಗಳು ಮತ್ತು ಕೆಲವು ಪ್ರಭಾವಿ ಕೇಂದ್ರಗಳು ನಡೆಸಿದ ಯೋಜಿತ ‘ಸ್ಟಿಂಗ್ ಆಪರೇಷನ್’, ರಾಜಕೀಯ ಕಟ್ಟಿಹಾಕುವ ತಂತ್ರಗಳಿಂದಾಗಿಯೇ ಸಿದ್ದರಾಮಯ್ಯ ಅವರು ಸಿಎಂ ಸ್ಥಾನವನ್ನು ಬಿಟ್ಟುಕೊಡಬೇಕಾಯಿತು ಎಂಬ ಊಹಾಪೋಹಗಳಿವೆ. ಸ್ಟಿಂಗ್ ಆಪರೇಷನ್‌ನ ಹಿಂದಿರುವ ಶಕ್ತಿಗಳು ಮತ್ತು ರಾಜಕೀಯ ಸಂಚಿನ ಬಗ್ಗೆ ಕಳವಳ ವ್ಯಕ್ತವಾಗಿದೆ. ”ಪರಿಕಲ್ಪಿತ ಸಂಚಿನ ಮೂಲಕ ಅಹಿಂದ ನಾಯಕನನ್ನು ಅಧಿಕಾರದಿಂದ ಕೆಳಗಿಳಿಸಲಾಯಿತು” ಎಂಬ ಭಾವನೆ ಅಸಮಾಧಾನ ಮತ್ತು ಕಿಚ್ಚನ್ನು ಹೊತ್ತಿಸಿದೆ. ಇದು ಕಾಂಗ್ರೆಸ್ ಪಕ್ಷದ ಪರಂಪರಾಗತ ಬೆಂಬಲ ನೀಡುತ್ತ ಬಂದಿದ್ದ ಮೂಲಕ್ಕೆ ದೊಡ್ಡ ಧಕ್ಕೆ ತರುವ ಮುನ್ಸೂಚನೆ ನೀಡಿದೆ.

ಹೊಸ ನಾಯಕತ್ವವನ್ನು ಬೆಳೆಸದ ಈ ಹಿಂದಿನ ನಾಯಕತ್ವ

ಇವೆಲ್ಲವುದರ ನಡುವೆ ಸಿದ್ದರಾಮಯ್ಯನವರ ಬಳಿಕ ಅಹಿಂದ ಸಮುದಾಯವನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆ ಬಂದಾಗ ಉತ್ತರ ಸಿಗದು. ಅಹಿಂದ ಸಮುದಾಯ ಇಂದು ಎದುರಿಸುತ್ತಿರುವ ಅತಿದೊಡ್ಡ ಕಷ್ಟವೆಂದರೆ ‘ದ್ವಿತೀಯ ಹಂತದ ನಾಯಕರ ಅಭಾವ’. ಸಿದ್ದರಾಮಯ್ಯ ಅವರು ತಮ್ಮ ನಾಲ್ಕು ದಶಕಗಳ ರಾಜಕೀಯ ಪಯಣದಲ್ಲಿ ಅತ್ಯಂತ ಎತ್ತರದ ಅಹಿಂದ ನಾಯಕನಾಗಿ ಬೆಳೆದರಾದರೂ, ತಮ್ಮ ನಂತರ ಅಹಿಂದ ಚಳವಳಿಯನ್ನು ಮುನ್ನಡೆಸಬಲ್ಲ ಎರಡನೇ ಹಂತದ ಸಾಮೂಹಿಕ ನಾಯಕತ್ವವನ್ನು ರೂಪಿಸುವಲ್ಲಿ ಸಂಪೂರ್ಣವಾಗಿ ವಿಫಲರಾದರು ಎಂಬುದು ಸ್ಪಷ್ಟ.

ಸಿದ್ದರಾಮಯ್ಯ ಅವರು ತಮ್ಮ ವ್ಯಕ್ತಿಗತ ಪ್ರಭಾವವನ್ನು ಬೆಳೆಸಿಕೊಂಡಷ್ಟು, ತಮ್ಮ ಕೆಳಗಿನ ಸಮುದಾಯ ನಾಯಕರನ್ನು ಬೆಳೆಯಲು ಅವಕಾಶ ನೀಡಲಿಲ್ಲ. ಇದರ ಪರಿಣಾಮವಾಗಿ, ಸಿದ್ದರಾಮಯ್ಯ ನಿವೃತ್ತಿಯಂಚಿಗೆ ತಲುಪುತ್ತಿದ್ದಂತೆ ಇಡೀ ಅಹಿಂದ ರಾಜಕೀಯವೇ ನಾವಿಕನಿಲ್ಲದ ಹಡಗಿನಂತಾಗಿದೆ. ಇನ್ನೊಂದೆಡೆ ಅಹಿಂದ ಚಳವಳಿಯ ಮುಂದಿನ ನಾಯಕತ್ವ ವಹಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದ ಪರಿಶಿಷ್ಟ ಪಂಗಡದ (ವಾಲ್ಮೀಕಿ) ನಾಯಕ ಸತೀಶ್ ಜಾರಕಿಹೊಳಿ. ಆದರೆ ಅವರ ಬೆಳವಣಿಗೆಯನ್ನು ಕಾಂಗ್ರೆಸ್ ಆಂತರಿಕ ಶಕ್ತಿಗಳು ತಡೆದಿವೆ ಎಂಬ ಆರೋಪಗಳಿವೆ.

ಸತೀಶ್ ಜಾರಕಿಹೊಳಿ ಅವರು ಸೈದ್ಧಾಂತಿಕ ಬದ್ಧತೆ ಮತ್ತು ನಿಸ್ವಾರ್ಥ ಅಹಿಂದ ಪ್ರೇಮ ಹೊಂದಿರುವ ನಾಯಕ. ಆದರೂ, ಸಿದ್ದರಾಮಯ್ಯ ಅವರ ಸಮ್ಮುಖದಲ್ಲೇ ಅವರ ರಾಜಕೀಯ ವ್ಯಾಪ್ತಿಯನ್ನು ಬೆಳಗಾವಿ ಜಿಲ್ಲೆಗೆ ಮಾತ್ರ ಸೀಮಿತಗೊಳಿಸುವ ಪ್ರಯತ್ನಗಳು ನಡೆದವು. ಇತ್ತೀಚೆಗೆ ಸಿದ್ದರಾಮಯ್ಯ ಅವರ ನಿರ್ಧಾರಗಳ ವಿರುದ್ಧ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿ ಬರೆದಿದ್ದಾರೆ ಎನ್ನಲಾದ ಪತ್ರ ಅವರು ಉನ್ನತ ಸ್ಥಾನ ಅಥವಾ ಸಿಎಂ ಹುದ್ದೆಯ ರೇಸ್‌ನಿಂದ ಹೊರಬೀಳಲು ಕಾರಣವಾಯಿತು ಎಂಬ ಊಹಾಪೋಹಗಳು ರಾಜಕೀಯ ವಲಯದಲ್ಲಿ ದಟ್ಟವಾಗಿವೆ.

ಇನ್ನು ಮಧುಗಿರಿ ಶಾಸಕ ಮತ್ತು ಸಿದ್ಧರಾಮಯ್ಯ ಅವರೇ ಹೇಳುವಂತೆ ಸಹಕಾರ ರಂಗ ಎಂದರೆ ಜನಸೇವೆ ಎಂದು ಭಾವಿಸಿರುವ ಕೆ.ಎನ್. ರಾಜಣ್ಣ ಅವರಂತಹ ನೇರನುಡಿಯ ನಾಯಕರಿಗೂ ಸಚಿವ ಸಂಪುಟದಲ್ಲಾಗಲಿ ಅಥವಾ ಪಕ್ಷದ ಆಡಳಿತ ಶ್ರೇಣಿಯಲ್ಲಾಗಲಿ ಸೂಕ್ತ, ನಿರ್ಣಾಯಕ ಸ್ಥಾನಮಾನಗಳು ದೊರೆಯಲಿಲ್ಲ. ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿದ್ದರೂ, ಈ ನಾಯಕರು ಸ್ವತಂತ್ರವಾಗಿ ಅಹಿಂದ ಶಕ್ತಿಯನ್ನು ಸಂಘಟಿಸಲು ವಿಫಲರಾದರು.

ಇದನ್ನೂ ಓದಿ: ಸಿದ್ದರಾಮಯ್ಯ: ‘ಹಠವಾದಿ’ಯಿಂದ ‘ರಾಜಿ’ ರಾಜಕಾರಣದತ್ತ?

ಇನ್ನೊಂದಡೆ ಪರಿಶಿಷ್ಟ ಪಂಗಡದ (ST) ಪ್ರಬಲ ನಾಯಕರಾಗಿ ಬೆಳೆದವರು ಬಳ್ಳಾರಿ ನಾಗೇಂದ್ರರನ್ನು ಕಾಂಗ್ರೆಸ್ ಬಳಸಿಕೊಂಡಿತು. ಆದರೆ ಕಾನೂನು ವಿವಾದಗಳ ಕರಿನೆರಳು ಬಿದ್ದಾಗ ಅವರನ್ನು ನಾಯಕತ್ವದಿಂದ ಕೈಬಿಡಬೇಕಾಯಿತು. ಬಿ ನಾಗೇಂದ್ರ ಏನೋ ಪ್ರಕರಣದಲ್ಲಿ ಸಿಲುಕಿದ್ದರು ಎಂದಾದರೆ, ಇನ್ನೊಂದೆಡೆ ಅಲ್ಪಸಂಖ್ಯಾತ ಸಮುದಾಯದ ಪ್ರಭಾವಿ ಧುರೀಣರಾದ ಬಿ.ಜೆಡ್. ಜಮೀರ್ ಅಹ್ಮದ್ ಖಾನ್, ತನ್ವೀರ್ ಸೇಠ್ ಮುಂತಾದ ನಾಯಕರನ್ನು ಹಂತ ಹಂತವಾಗಿ ಸೀಮಿತಗೊಳಿಸಲಾಗುತ್ತಿದೆ ಎಂಬ ಚರ್ಚೆಗಳು ಅಹಿಂದ ಪಾಳಯದಲ್ಲಿ ದಟ್ಟವಾಗಿವೆ.

ಯು.ಟಿ. ಖಾದರ್ ಅವರು ಸೌಮ್ಯ ಸ್ವಭಾವದ, ಅನುಭವಿ ಹಾಗೂ ಅತ್ಯಂತ ಕ್ಲೀನ್ ಇಮೇಜ್ ಹೊಂದಿರುವ ನಾಯಕರೆಂಬುದರಲ್ಲಿ ಎರಡನೇ ಮಾತಿಲ್ಲ. ಆದರೆ ಇವರನ್ನು ಮುನ್ನೆಲೆಗೆ ತರುತ್ತಿರುವ ರಾಜಕೀಯ ಬೆಳವಣಿಗೆಯ ಹಿಂದೆ ಅಲ್ಪಸಂಖ್ಯಾತ ಮತಗಳ ಸಂಪೂರ್ಣ ಧ್ರುವೀಕರಣದ ಕೊರತೆಯಿದೆ. ಖಾದರ್ ಅವರ ಪ್ರಭಾವ ಮತ್ತು ರಾಜಕೀಯ ಅಸ್ತಿತ್ವವು ಪ್ರಮುಖವಾಗಿ ಕರಾವಳಿ ಕರ್ನಾಟಕಕ್ಕೆ ಅದರಲ್ಲೂ ದಕ್ಷಿಣ ಕನ್ನಡ ಭಾಗಕ್ಕೆ ಸೀಮಿತ. ಇವರನ್ನು ಇಡೀ ರಾಜ್ಯದ ಮುಸ್ಲಿಂ ಅಥವಾ ಅಹಿಂದ ಸಮುದಾಯದ ಏಕೈಕ ‘ಮಾಸ್ ಲೀಡರ್’ ಎಂದು ಬಿಂಬಿಸಿದಾಗ, ಇದು ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಮತ್ತು ಹಳೆಯ ಮೈಸೂರು ಭಾಗದ ಅಲ್ಪಸಂಖ್ಯಾತ ಮತದಾರರನ್ನು ಸಂಪೂರ್ಣವಾಗಿ ಸೆಳೆಯಲು ಸಾಕಾಗುವುದಿಲ್ಲ.

ಸಾಂಪ್ರದಾಯಿಕವಾಗಿ ದಲಿತ ಸಮುದಾಯದ ಒಂದು ದೊಡ್ಡ ಭಾಗ (ವಿಶೇಷವಾಗಿ ಬಲಗೈ ಸಮುದಾಯದ ಕೆಲ ವರ್ಗಗಳು ಮತ್ತು ಅಲ್ಪ ಪ್ರಮಾಣದ ಎಡಗೈ ಮತಗಳು) ಕಾಂಗ್ರೆಸ್‌ನೊಂದಿಗೆ ಗಟ್ಟಿಯಾಗಿ ಗುರುತಿಸಿಕೊಂಡು ಬಂದಿದೆ. ಅಹಿಂದದ ಹೆಸರಿನಲ್ಲಿ ಕಾಂಗ್ರೆಸ್ ಇಂದುಳಿದುಕೊಂಡಿರುವುದು ಈ ದಲಿತ ಮತಗಳ ಬಲದಿಂದ ಮಾತ್ರ ಎಂಬ ಮಾತುಗಳೂ ಇವೆ. ಅದರಲ್ಲೂ ಎಡಗೈ ಉಪಪಂಗಡದ ಮತದಾರರಲ್ಲಿ ಬಿಜೆಪಿ ಕಡೆಗೆ ಒಲವು ಹೆಚ್ಚಾಗುತ್ತಿದೆ.

ಈಗ ಅಹಿಂದ ಮತದತ್ತ ಜೆಡಿಎಸ್‌, ಬಿಜೆಪಿ ಚಿತ್ತ

ಸಿದ್ದರಾಮಯ್ಯ ಅವರ ನಿರ್ಗಮನದಿಂದ ಉಂಟಾಗಿರುವ ‘ಅಹಿಂದ ನಿರ್ವಾತ’ವನ್ನು ತಮಗೆ ಅನುಕೂಲವಾಗುವಂತೆ ಬಳಸಿಕೊಳ್ಳಲು ಬಿಜೆಪಿ ಮತ್ತು ಜೆಡಿಎಸ್ (ಎನ್‌ಡಿಎ ಮೈತ್ರಿಕೂಟ) ತೀವ್ರ ತರಹದ ಕಾರ್ಯತಂತ್ರಗಳನ್ನು ರೂಪಿಸುತ್ತಿವೆ. ಲಿಂಗಾಯತ ಮತಬ್ಯಾಂಕ್ ಹೊಂದಿರುವ ಬಿಜೆಪಿ, ಈಗ ದಲಿತ ಮತ್ತು ಹಿಂದುಳಿದ ವರ್ಗಗಳ ಸಣ್ಣ ಸಣ್ಣ ಜಾತಿಗಳನ್ನು (ಉದಾಹರಣೆಗೆ: ವಾಲ್ಮೀಕಿ, ಈಡಿಗ, ಕಾಡುಗೊಲ್ಲ, ಬೋವಿ) ಸೆಳೆಯಲು ಹೊಂಚು ನಡೆಸುತ್ತಿದೆ. ಕುರುಬ ಸಮುದಾಯದಲ್ಲಿ ಸಿದ್ದರಾಮಯ್ಯ ನಿರ್ಗಮನದಿಂದ ಉಂಟಾಗಿರುವ ನಿರಾಶೆಯನ್ನು ಹಿಡಿದು ಕಾಂಗ್ರೆಸ್ ವಿರುದ್ಧ ಎತ್ತಿಕಟ್ಟುವುದು ಬಿಜೆಪಿಯ ತಂತ್ರವಾಗಿದೆ.

ಇನ್ನೊಂದೆಡೆ ಒಕ್ಕಲಿಗರ ಆಧಾರಸ್ತಂಭವಾಗಿರುವ ಜೆಡಿಎಸ್, ಹಳೆಯ ಮೈಸೂರು ಭಾಗದಲ್ಲಿ ಅಹಿಂದ ಮತಗಳನ್ನು ಮರುಪಡೆಯಲು ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಹೆಜ್ಜೆಯಿಡುತ್ತಿದೆ. ಕುರುಬ ಮತ್ತು ಮುಸ್ಲಿಂ ಮತಗಳನ್ನು ಒಡೆದು, ಕಾಂಗ್ರೆಸ್‌ನ ಸಾಂಪ್ರದಾಯಿಕ ಅಹಿಂದ ಕೋಟೆಗೆ ಕನ್ನ ಹಾಕುವುದು ಇವರ ಯೋಜನೆಯಾಗಿದೆ. ಆದರೆ ಅಷ್ಟೊಂದು ಸುಲಭವಾಗಿಲ್ಲ. ಇವೆಲ್ಲವುದರ ಚಿತ್ರಣ ನಮಗೆ ಸ್ಪಷ್ಟವಾಗಿ ಚುನಾವಣೆ ವೇಳೆಗೆ ಅಥವಾ ಚುನಾವಣೆ ನಂತರವಷ್ಟೇ ದೊರಕಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ರಾಜ್ಯ ರಾಜಕಾರಣಲ್ಲಿ ಸಿದ್ದರಾಮಯ್ಯ ಅವರ ನಿರ್ಗಮನವು ಒಂದು ಯುಗದ ಅಂತ್ಯವನ್ನು ಸೂಚಿಸುತ್ತದೆ. ಒಕ್ಕಲಿಗ ಸಮುದಾಯದ ಡಿ.ಕೆ. ಶಿವಕುಮಾರ್ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಸರ್ಕಾರ ಮುನ್ನಡೆಯುತ್ತಿರುವಾಗ, ಅಹಿಂದ ಸಮುದಾಯವು ತಾನು ರಾಜಕೀಯವಾಗಿ ಉಪೇಕ್ಷಿಸಲ್ಪಟ್ಟಿದ್ದೇವೆ ಎಂಬ ಭಾವನೆಗೆ ಜಾರುವ ಆತಂಕವಿದೆ. ಸತೀಶ್ ಜಾರಕಿಹೊಳಿ ಅಥವಾ ಯತೀಂದ್ರ ಸಿದ್ದರಾಮಯ್ಯ ಅವರಂತಹ ಹೊಸ ಪೀಳಿಗೆಯ ನಾಯಕರು ಅಹಿಂದ ವೇದಿಕೆಯನ್ನು ಮರುಸಂಘಟಿಸಿ ರಾಜಕೀಯ ಶಕ್ತಿಯನ್ನಾಗಿ ಪರಿವರ್ತಿಸದಿದ್ದರೆ, ಮುಂದಿನ ದಿನಗಳಲ್ಲಿ ಅಹಿಂದ ಮತಗಳು ಛಿದ್ರಗೊಳ್ಳುವುದು ಖಚಿತ. ಸಿದ್ದರಾಮಯ್ಯ ಕಟ್ಟಿದ ಅಹಿಂದ ಕೋಟೆ ಇಂದು ನಾಯಕನಿಲ್ಲದೇ ಕದಡಿದ ನೀರಂತಾಗಿದೆ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುಂಬೈ | ಸಾಹಿಲ್ ವಾಕೋಡೆ ಸಾವು: ಮಗನ ತಿಥಿಯಂದೇ ಪೋಷಕರು, ವಿದ್ಯಾರ್ಥಿಗಳ ಬಂಧನ

ಐಐಟಿ ಬಾಂಬೆ ವಿದ್ಯಾರ್ಥಿ ಸಾಹಿಲ್ ವಾಕೋಡೆ ಅವರ ನಿಧನವಾಗಿ ಒಂದು ತಿಂಗಳ...

ರಾಜ್ಯ ಸಿಎಂ ಗಾದಿಗೆ ಕಣ್ಣಿಟ್ಟ ಎಚ್‌ಡಿಕೆ; ಬಿಹಾರದ ನಿತೀಶ್‌ ಹಾದಿಯಲ್ಲಿ ಕುಮಾರಸ್ವಾಮಿ?

ರಾಜ್ಯದ ಕಾಂಗ್ರೆಸ್‌ ಸರ್ಕಾರದ ದುರಾಡಳಿತಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. 2028ರಲ್ಲಿ ಕರ್ನಾಟಕದಲ್ಲಿ...

ಸಾರ್ವಜನಿಕ ಆಸ್ತಿ ಹರಾಜು ರದ್ದುಪಡಿಸುವ ಅಧಿಕಾರ ಸರ್ಕಾರಿ ಸಂಸ್ಥೆಗಳಿಗೆ ಇದೆ: ಸುಪ್ರೀಂ ಕೋರ್ಟ್

ಸಾರ್ವಜನಿಕ ಆಸ್ತಿಗಳ ಮಾರಾಟ ಅಥವಾ ಗುತ್ತಿಗೆ ಪ್ರಕ್ರಿಯೆಯಲ್ಲಿ ಹೆಚ್ಚಿನ ಆದಾಯ ಗಳಿಸುವ...