‘ಅಹಿಂದ’ದಿಂದ ಬೆಳೆದ ಸಿದ್ದರಾಮಯ್ಯ, ‘ಅಹಿಂದ’ಕ್ಕೆ ಬದ್ಧರಾಗಿದ್ದಾರೆಯೇ?

Date:

ಸಿದ್ದರಾಮಯ್ಯ ಅವರಿಗೆ ʼಅಹಿಂದʼ ಅನಿವಾರ್ಯವಾಗಿತ್ತು. ʼಅಹಿಂದʼದಿಂದಲೇ ತಮ್ಮ ರಾಜಕೀಯ ಬಲವನ್ನು ಸಿದ್ದರಾಮಯ್ಯ ವೃದ್ಧಿಸಿಕೊಂಡರು. ಆದರೆ, ಈಗ ಅವರು ತಮ್ಮ ರಾಜಕೀಯದ ʼನಿರ್ಗಮನ ಬಿಂದುʼವಿನಲ್ಲಿದ್ದಾರೆ. ರಾಜಕೀಯದಲ್ಲಿ ಅವರಿಗೆ ಭವಿಷ್ಯ ಕಾಣಿಸುತ್ತಿಲ್ಲ. ಹಾಗಾಗಿ ಅವರಿಗೆ ʼಅಹಿಂದʼವೂ ಕಾಣಿಸುತ್ತಿಲ್ಲ.


ಕರ್ನಾಟಕ ರಾಜಕಾರಣದ “ಟಗರು” ಎಂದೇ ಹೆಸರಾದ ಸಿದ್ದರಾಮಯ್ಯ ಅವರ ಪ್ರಸ್ತುತ ರಾಜಕೀಯ ಸ್ಥಿತಿಗತಿ ಒಂದು ಕುತೂಹಲಕಾರಿ ತಿರುವಿನಲ್ಲಿದೆ. ಸಿದ್ದರಾಮಯ್ಯ ತಮ್ಮ ರಾಜಕೀಯ ವರ್ಚಸ್ಸನ್ನು ಕಳೆದುಕೊಂಡಿದ್ದಾರೆಯೇ ಅಥವಾ ಇದು ಕೇವಲ ಅಧಿಕಾರದ ಸಂಘರ್ಷದ ತಾತ್ಕಾಲಿಕ ಹಿನ್ನಡೆಯೇ ಎಂಬ ಪ್ರಶ್ನೆ ಈಗ ಉದ್ಭವವಾಗಿದೆ. ಅಹಿಂದ ನಾಯಕನಾಗಿ ಬೆಳೆದ ಸಿದ್ದರಾಮಯ್ಯ ಅವರು, ತಾನು ಪಾಲಿಸಿಕೊಂಡು ಬಂದ ಅಹಿಂದ ತತ್ವವನ್ನು ಮರೆತು ನಡೆಯುತ್ತಿದ್ದಾರೆಯೇ? ಇವೆಲ್ಲಾ ಅವರ ಇತ್ತೀಚೆಗಿನ ನಡೆಯ ಸುತ್ತ ಮೂಡುತ್ತಿರುವ ಪ್ರಶ್ನೆಗಳಾಗಿವೆ. 

ಸಿದ್ದರಾಮಯ್ಯನವರ ಶಕ್ತಿಯ ಮೂಲವೇ ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಮತ್ತು ದಲಿತ) ಸಮೀಕರಣ. ಇಂದಿಗೂ ಕರ್ನಾಟಕದ ಹಿಂದುಳಿದ ವರ್ಗಗಳ ಅತ್ಯಂತ ದೊಡ್ಡ ದನಿಯಾಗಿ ಸಿದ್ದರಾಮಯ್ಯ ಅವರು ಗುರುತಿಸಲ್ಪಡುತ್ತಾರೆ. ಅನ್ನಭಾಗ್ಯದಂತಹ ಯೋಜನೆಗಳು ತಳಮಟ್ಟದಲ್ಲಿ ಅವರ ಜನಪ್ರಿಯತೆಯನ್ನು ಉಳಿಸಿಕೊಂಡಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ದಲಿತ ಮತ್ತು ಹಿಂದುಳಿದ ವರ್ಗಗಳ ಇತರ ನಾಯಕರು (ಉದಾಹರಣೆಗೆ ಸತೀಶ್ ಜಾರಕಿಹೊಳಿ ಅಥವಾ ಪರಮೇಶ್ವರ್) ತಮ್ಮದೇ ಆದ ಅಸ್ತಿತ್ವ ಕಂಡುಕೊಳ್ಳುತ್ತಿರುವುದು ಮತ್ತು ಮುಡಾ (MUDA) ಹಗರಣದಂತಹ ಆರೋಪಗಳು ಅವರ ‘ಶುದ್ಧ ಹಸ್ತ’ದ ವರ್ಚಸ್ಸಿಗೆ ಸ್ವಲ್ಪ ಮಟ್ಟಿನ ಧಕ್ಕೆ ತಂದಿರುವುದು ಸುಳ್ಳಲ್ಲ.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತದಾರರು ಅಸಮಾಧಾನಗೊಂಡಾಗ ಸಿದ್ದರಾಮಯ್ಯ ಅವರು ಅಹಿಂದ ನಾಯಕರಾಗಿದ್ದುಕೊಂಡು ಅಲ್ಪಸಂಖ್ಯಾತರ ಪರವಾಗಿ ನಿಂತುಕೊಂಡಿಲ್ಲ ಎನ್ನುವ ಅಭಿಪ್ರಾಯವೂ ಮೂಡಿದೆ.

ಸಿದ್ದರಾಮಯ್ಯ ಅವರು ‘ಅಹಿಂದ’ (ಅಲ್ಪಸಂಖ್ಯಾತ, ಹಿಂದುಳಿದ, ದಲಿತ) ವರ್ಗಗಳ ಅಪ್ರತಿಮ ನಾಯಕ ಎಂಬ ಬಿಂಬಿತ ಚಿತ್ರಣದ ಸುತ್ತ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚರ್ಚೆಗಳು ಮತ್ತು ಟೀಕೆಗಳು ಕೇಳಿಬರುತ್ತಿವೆ. ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರನ್ನು ಹೈಕಮಾಂಡ್‌ ನಿರ್ದೇಶನದಂತೆ ಸಚಿವ ಸಂಪುಟದಿಂದಲೇ ವಜಾಗೊಳಿಸುವ ಸಂದರ್ಭ ಎದುರಾದಾಗ ಸಿದ್ದರಾಮಯ್ಯ ಅಸಹಾಯಕರಂತೆ ವರ್ತಿಸಿದ್ದು, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಪರವಾಗಿ ನಿಲ್ಲದ ಕಾರಣ ನಸೀರ್‌ ಅಹ್ಮದ್‌ ಅವರನ್ನು ಮುಖ್ಯಮಂತ್ರಿ ರಾಜಕೀಯ ಸಲಹೆಗಾರರ ಹುದ್ದೆಯಿಂದ ವಜಾಗೊಳಿಸಿದಾಗ, ನಸೀರ್‌ ಅಹ್ಮದ್‌ ಬಾಗಲಕೋಟೆ ಉಪಚುನಾವಣಾ ಜವಾಬ್ದಾರಿಯಲ್ಲಿದ್ದರು ಎಂದು ಹೇಳುವುದನ್ನೂ ಮಾಡದೇ, ಪಕ್ಷದ ತೀರ್ಮಾನವೇ ಅಂತಿಮ ಅಂದು ಹೇಳಿ ಸುಮ್ಮನಾಗಿದ್ದರು. ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರು ರಾಜೀನಾಮೆ ನೀಡಿದಾಗ, ಕೆಪಿಸಿಸಿ ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದಾಗ, ಪಕ್ಷದ ಸದಸ್ಯತ್ವದಿಂದಲೇ ಜಬ್ಬಾರ್‌ ಅವರನ್ನು ಅಮಾನತುಗೊಳಿಸಿದಾಗಲೂ ಸಿದ್ದರಾಮಯ್ಯ ಮೌನ ವಹಿಸಿದರು. ಇದು ಅವರ ಮೇಲೆ ಅಹಿಂದ ವರ್ಗದ ನಾಯಕರಲ್ಲೇ ವಿಶ್ವಾಸ ಕಳೆದುಕೊಳ್ಳುವ ಹಾಗೆ ಮಾಡುತ್ತಿದೆ.

ಸಿದ್ದರಾಮಯ್ಯ ಅವರು ʼಅಹಿಂದʼ ಕಟ್ಟಿದಾಗ ಅದು ಕೇವಲ ಒಂದು ರಾಜಕೀಯ ತಂತ್ರವಾಗಿರಲಿಲ್ಲ, ಬದಲಿಗೆ ದೇವರಾಜ ಅರಸು ಅವರ ಕಾಲದ ನಂತರ ಚದುರಿಹೋಗಿದ್ದ ಕೆಳಸ್ತರದ ಸಮುದಾಯಗಳನ್ನು ಒಗ್ಗೂಡಿಸುವ ಶಕ್ತಿಯಾಗಿತ್ತು ಎನ್ನುವುದು ಕೂಡ ಇಲ್ಲಿ ಮುಖ್ಯಾಂಶ. ಈ ವರ್ಗಗಳ ಮತಬಲದ ಮೇಲೆ ಸಿದ್ದರಾಮಯ್ಯಾ ಅವರು 2013ರಲ್ಲಿ ಪೂರ್ಣ ಬಹುಮತದ ಸರ್ಕಾರವನ್ನು ಮುನ್ನಡೆಸಿದರು, 2023ರಲ್ಲಿ ಗೆದ್ದು ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿಯುವುದಕ್ಕೂ ಅದೇ ಕಾರಣ.

ಇದನ್ನೂ ಓದಿ : ಭಾರತದ ಸಂವಿಧಾನವೇಕೆ ಗ್ರೇಟ್? ಸಾಮಾಜಿಕ ನ್ಯಾಯದ ವಿಶ್ವಾಸದ ಜ್ಯೋತಿ, ಪ್ರಜಾಪ್ರಭುತ್ವದ ಶಾಶ್ವತ ದಾರಿದೀಪ

- Advertisement -

ಅನ್ನಭಾಗ್ಯ, ಕ್ಷೀರಭಾಗ್ಯ ಮತ್ತು ಜಾತಿಗಣತಿಯಂತಹ ನಿರ್ಧಾರಗಳು ಅವರ ಅಹಿಂದ ಬದ್ಧತೆಗೆ ಸಾಕ್ಷಿ ಎಂದು ಅವರ ಬೆಂಬಲಿಗರು ವಾದಿಸುತ್ತಾರೆ. ಆದರೆ, ಸಿದ್ದರಾಮಯ್ಯ ಅವರ ಬಗ್ಗೆ ಸ್ವಪಕ್ಷದವರೇ ಒಳಗಿಂದೊಳಗೆ ಟೀಕಿಸುವುದಕ್ಕೆ ಈಗ ಆರಂಭಿಸಿದ್ದಾರೆ ಎನ್ನುವುದು ಮುಖ್ಯಾಂಶ. ಅದು ರಾಜಣ್ಣ, ನಸೀರ್‌ ಅವರ ವಜಾ ಬಳಿಕ ಅಂತೂ ಇನ್ನೂ ಹೆಚ್ಚಾಗಿದೆ ಎಂದೇ ಹೇಳಬಹುದು. ಸಿದ್ದರಾಮಯ್ಯ ಅವರು ಅಹಿಂದ ಹೆಸರಿನಲ್ಲಿ ತಮ್ಮ ಸುತ್ತ ಒಂದು  ನಿಷ್ಠಾವಂತ ಗುಂಪನ್ನು ಸೃಷ್ಟಿಸಿಕೊಂಡಿದ್ದಾರೆ ಎಂಬ ಆರೋಪವಿದೆ. ಅಹಿಂದ ವರ್ಗದ ಒಳಗಿರುವ ಎಲ್ಲಾ ಉಪಜಾತಿಗಳಿಗೆ ಸಮಾನ ಅವಕಾಶ ಸಿಗುತ್ತಿಲ್ಲ ಎಂಬುದು ರಾಜಣ್ಣ ಅವರಂತಹ ನಾಯಕರ ವಾದ. ಇದು ಸಿದ್ದರಾಮಯ್ಯ ಅವರ ಮೇಲಿನ ಪರೋಕ್ಷ ಸಿಟ್ಟಲ್ಲದೇ ಮತ್ತೇನಲ್ಲ. ಒಬ್ಬ ಅಹಿಂದ ನಾಯಕನಾಗಿ ಇಂತಹ ವಿಷಯಗಳ ಬಗ್ಗೆ ಸಿದ್ದರಾಮಯ್ಯ ದೃಢ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎನ್ನುವುದು ಅವರ ವಾದ. ಇನ್ನು, ಅಲ್ಪಸಂಖ್ಯಾತರ ಅಸಮಾಧಾನವೂ ಸಿದ್ದರಾಮಯ್ಯರ ರಾಜಕೀಯ ವರ್ಚಸ್ಸಿನ ಮೇಲೆ ನೇರ ಪರಿಣಾಮ ಬೀರುತ್ತಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಮತ ಪಡೆಯುವಾಗ ಅಲ್ಪಸಂಖ್ಯಾತರು ಬೇಕು, ಆದರೆ ಅಧಿಕಾರ ಹಂಚಿಕೆಯ ವೇಳೆ ಅಥವಾ ಸಂಕಷ್ಟದ ಸಮಯದಲ್ಲಿ ಸಿದ್ದರಾಮಯ್ಯ ಅವರು ನಿರೀಕ್ಷಿತ ಬೆಂಬಲ ನೀಡುತ್ತಿಲ್ಲ ಎನ್ನುವ ಅಲ್ಪ ಸಂಖ್ಯಾತರ ಅಸಮಾಧಾನ ಕೂಡ ಸಿದ್ದರಾಮಯ್ಯರ ಇತ್ತೀಚೆಗಿನ ನಡೆಯ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸದೇ ಇರುವುದಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕ್ಷಿಪಣಿ ಬಿಡಿಭಾಗಗಳ ಖರೀದಿಯಲ್ಲಿ ಸ್ವಜನಪಕ್ಷಪಾತ; ಬಿಡಿಎಲ್ ಮಾಜಿ ಮುಖ್ಯಸ್ಥನ...

ಕ್ಷಿಪಣಿಯ ಆಪ್ಟಿಕಲ್ ಸೈಟ್‌ಗಳ ಪೂರೈಕೆಗಾಗಿ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ತನ್ನದೇ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರ (CMD) ಪತ್ನಿಯ ಒಡೆತನದ ಖಾಸಗಿ ಕಂಪನಿಗೆ 'ತುರ್ತು' ನೆಪವೊಡ್ಡಿ 56.8 ಕೋಟಿ...

ನುಡಿ ನಮನ | ಚೆರುವಯಲ್ ರಾಮನ್ – ಭತ್ತದ...

ಕೃಷಿ ಎಂದರೆ ಕೇವಲ ಬೆಳೆ ಬೆಳೆಯುವುದಲ್ಲ; ಬಿತ್ತನೆಗೆ ಸೂಕ್ತವಾದ ಬೀಜಗಳನ್ನು ಆಯ್ಕೆ ಮಾಡುವುದು, ಅವುಗಳನ್ನು ಸಂಗ್ರಹಿಸುವುದು ಹಾಗೂ ಮುಂದಿನ ಋತುವಿಗೆ ಉಳಿಸುವುದೂ ಕೃಷಿಯ ಅವಿಭಾಜ್ಯ ಅಂಗ ಎನ್ನುತ್ತಿದ್ದ ರಾಮನ್, ತಮ್ಮ ಇಡೀ ಜೀವನವನ್ನೇ...

ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?

ನೀರಿನ ಅಭಾವ, ಪರಿಸರ ನಾಶ, ಸಾರ್ವಜನಿಕ ಹಣದ ವೆಚ್ಚದ ನಡುವೆ ಸರ್ಕಾರದ ಸಮರ್ಥನೆ; ಇತಿಹಾಸದ ಹೆಸರಿನಲ್ಲಿ ವಿವಾದ, ಆಡಳಿತದ ನಡೆಗೆ ಸಾರ್ವಜನಿಕರ ಪ್ರಶ್ನೆ. ರಾಜ್ಯದ ಜನತೆ ಬರಗಾಲದ ಸಂಕಷ್ಟ ಎದುರಿಸುತ್ತಿರುವಾಗ, ರೈತರು ಮಳೆ-ಬೆಳೆಯಿಲ್ಲದೆ ಕಂಗಾಲಾಗಿರುವಾಗ,...

ಇನ್ನು, ಅಹಿಂದ ವರ್ಗದೊಳಗೆ ಮತ್ತೊಬ್ಬ ಪ್ರಬಲ ನಾಯಕ ಬೆಳೆಯಲು ಸಿದ್ದರಾಮಯ್ಯ ಬಿಡುತ್ತಿಲ್ಲ ಎಂಬ ಸಣ್ಣ ಆರೋಪ ಸದಾ ಇದ್ದೇ ಇದೆ. ಅದು ಬಹಿರಂಗಗೊಳ್ಳದೇ ಉಳಿದಿದ್ದರೂ ಸತ್ಯಾಂಶ.


ಅಹಿಂದ ವರ್ಗಕ್ಕೆ ಸಿದ್ದರಾಮಯ್ಯ ಬದ್ಧರಾಗಿದ್ದಾರೆಯೇ?

ಸಿದ್ದರಾಮಯ್ಯ ಅವರ ರಾಜಕೀಯ ಇತಿಹಾಸವನ್ನು ಗಮನಿಸಿದರೆ, ಇಂತಹದ್ದೊಂದು ಆಯಾಮದ ಮುಖ ಕಾಣುತ್ತದೆ. ಹಿಂದುಳಿದ ವರ್ಗಗಳಿಗೆ ಬಜೆಟ್ ನಲ್ಲಿ ಹೆಚ್ಚಳ, ಸಾಮಾಜಿಕ ನ್ಯಾಯದ ವಿಚಾರದಲ್ಲಿ ರಾಜಿ ಮಾಡಿಕೊಳ್ಳದ ವ್ಯಕ್ತಿತ್ವ ಎನ್ನುವುದು ರಾಜಕೀಯವಾಗಿ ಅವರ ಬದ್ಧತೆಯನ್ನು ತೋರಿಸಿದರೆ, ಈಗಿನ ರಾಜಕೀಯದ ಸ್ಥಿತಿಗೆ ಅನಿವಾರ್ಯವಾಗಿ ನಡೆದುಕೊಳ್ಳುವ ಸವಾಲೂ ಅವರ ಮುಂದಿದೆ. ಅಧಿಕಾರವನ್ನು ತನ್ನಲ್ಲೇ ಕೇಂದ್ರೀಕರಿಸಿಕೊಳ್ಳುವುದು ಮತ್ತು ಅಹಿಂದ ಹೆಸರಿನಲ್ಲಿ ಕೇವಲ ಕುರುಬ ಸಮುದಾಯ ಅಥವಾ ತಮ್ಮ ಆಪ್ತ ಬಳಗಕ್ಕೆ ಮಾತ್ರ ಪ್ರಾಶಸ್ತ್ಯ ನೀಡುತ್ತಿದ್ದಾರೆ ಎನ್ನುವ ಆರೋಪವೂ ಸಿದ್ದರಾಮಯ್ಯ ಅವರ ಮೇಲೆ ಇದೆ.

ಈ ನಡುವೆ, ತಮ್ಮ ಮೇಲಿರುವ “ಸ್ವಜಾತಿವಾದಿ” ಅಥವಾ “ಸ್ವಪಕ್ಷೀಯರನ್ನೇ ತುಳಿಯುವ ನಾಯಕ” ಎಂಬ ಹಣೆಪಟ್ಟಿಯನ್ನು ಅಳಿಸಿಹಾಕಬೇಕಿರುವ ದೊಡ್ಡ ಸವಾಲು ಸಿದ್ದರಾಮಯ್ಯ ಅವರ ಮುಂದಿದೆ. ಡಿ.ಕೆ. ಶಿವಕುಮಾರ್ ಅವರಂತಹ ಪ್ರಬಲ ಒಕ್ಕಲಿಗ ನಾಯಕರ ಸವಾಲಿನ ನಡುವೆ, ಸಿದ್ದರಾಮಯ್ಯ ಅವರು ತಮ್ಮ ಅಹಿಂದ ಕೋಟೆಯನ್ನು ಭದ್ರವಾಗಿಟ್ಟುಕೊಳ್ಳಬೇಕಾದರೆ ಕೇವಲ ಹೆಸರಿಗೆ ಮಾತ್ರವಲ್ಲದೆ, ಅಹಿಂದ ಒಳಗಿನ ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿರುವುದು ಮತ್ತು ಅವರಿಗೆ ಅಭಯವಾಗಿ ನಿಲ್ಲಬೇಕಿರುವ ಅನಿವಾರ್ಯತೆ ಇದೆ.

ಸಿದ್ದರಾಮಯ್ಯ ಅವರು ಅಹಿಂದ ವರ್ಗದ ಧ್ವನಿ ಎನ್ನುವುದರಲ್ಲಿ ಸಂಶಯವಿಲ್ಲ, ಆದರೆ ಆ ಧ್ವನಿ ಈಗ ಕೇವಲ ಚುನಾವಣಾ ಘೋಷಣೆಯಾಗುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ. ರಾಜಣ್ಣ ಮತ್ತು ನಸೀರ್ ಅಹ್ಮದ್ ಅವರನ್ನು ಉಳಿಸಿಕೊಳ್ಳಲಾಗದೆ ಅಥವಾ ಅವರನ್ನು ಸಮರ್ಥಿಸಿಕೊಳ್ಳಲಾಗದೆ ಸಿದ್ದರಾಮಯ್ಯ ಅಸಹಾಯಕರಾಗಿದ್ದು, ಕಾಂಗ್ರೆಸ್‌ ವ್ಯವಸ್ಥೆಯೊಳಗೆ ಮತ್ತಿನ್ನೇನೋ ಬೇರು ಇಳಿಸುತ್ತಿದೆ ಎನ್ನುವುದನ್ನು ಸೂಚಿಸುತ್ತದೆ.

ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಾಗ ಸಿದ್ದರಾಮಯ್ಯ ಅವರಿಗೆ ʼಅಹಿಂದʼದ ಬಲ ಅನಿವಾರ್ಯವಿತ್ತು. ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವುದಕ್ಕೆ ʼಅಹಿಂದʼವೇ ಬೇಕಿತ್ತು. ʼಅಹಿಂದʼದಿಂದಲೇ ತಮ್ಮ ರಾಜಕೀಯ ಬಲವನ್ನು ಸಿದ್ದರಾಮಯ್ಯ ವೃದ್ಧಿಸಿಕೊಂಡರು. ಎರಡು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರವನ್ನೂ ಅನುಭವಿಸಿದರು. ತಮ್ಮ ರಾಜಕೀಯ ಉಳಿವಿಗೆ ಅಹಿಂದ ಬೇಕಾಗಿತ್ತು. ಕಾಂಗ್ರೆಸ್‌ ಅವರನ್ನು ರಾಷ್ಟ್ರಮಟ್ಟದಲ್ಲಿ ಅಹಿಂದ ನಾಯಕ ಎಂಬಂತೆ ಗುರುತಿಸಿ ಮೆರೆಸಿತ್ತು. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (AICC) ಒಬಿಸಿ (OBC) ಸಲಹಾ ಮಂಡಳಿಯ ಸದಸ್ಯರನ್ನಾಗಿ ನೇಮಿಸಿತ್ತು. ಆದರೆ, ಈಗ ಅವರು ತಮ್ಮ ರಾಜಕೀಯದ ʼನಿರ್ಗಮನ ಬಿಂದುʼವಿನಲ್ಲಿದ್ದಾರೆ. ರಾಜಕೀಯದಲ್ಲಿ ಅವರಿಗೆ ಭವಿಷ್ಯ ಕಾಣಿಸುತ್ತಿಲ್ಲ. ಹಾಗಾಗಿ ಅವರಿಗೆ ʼಅಹಿಂದʼವೂ ಕಾಣಿಸುತ್ತಿಲ್ಲ. 2013ರ ಆಡಳಿತಾವಧಿಯಲ್ಲಿ ಸಿದ್ದರಾಮಯ್ಯರ ಕಾರ್ಯವೈಖರಿ, ಈ ಆಡಳಿತಾವಧಿಯಲ್ಲಿ ಕಾಣುವುದಕ್ಕೆ ಸಿಗುತ್ತಿಲ್ಲ. ತಾವು ಈವರೆಗೆ ಬೆಳೆದ ಸಿದ್ಧಾಂತದ ಗಟ್ಟಿ ಧ್ವನಿಯಾಗಿ ಸಿದ್ದರಾಮಯ್ಯ ಕಾಣಿಸಿಕೊಳ್ಳುತ್ತಿಲ್ಲ.

ಇನ್ನು, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕುಟುಂಬ ರಾಜಕಾರಣದ ಚರ್ಚೆಗೆ ಬಂದರೆ, ಸಿದ್ದರಾಮಯ್ಯ ಕೂಡ ತಮ್ಮ ಮನಗನನ್ನು(ಯತೀಂದ್ರ) ತಮ್ಮ ರಾಜಕೀಯ ಪ್ರಭಾವದಿಂದ ಎಂಎಲ್‌ಸಿ ಮಾಡಿದ್ದಾರೆ. ಇಷ್ಟಾದ ಮೇಲೆ ಸಿದ್ದರಾಮಯ್ಯ ಕುಟುಂಬ ರಾಜಕಾರಣದ ಬಗ್ಗೆ ಧ್ವನಿ ಎತ್ತುವುದಕ್ಕೆ ಹೇಗೆ ಸಾಧ್ಯವಿದೆ? ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರ ಮಗ ಪ್ರಿಯಾಂಕ್‌ ಖರ್ಗೆ ಕೂಡ ಸಚಿವರಾಗಿದ್ದಾರೆ. ಇಡೀ ಕಾಂಗ್ರೆಸ್‌, ಕುಟುಂಬ ರಾಜಕಾರಣವನ್ನು ಪೊರೆಯುತ್ತಾ ಬಂದಿದೆ. ದಾವಣಗೆರೆಯಲ್ಲಂತೂ ಶಾಮನೂರು ಕುಟುಂಬಕ್ಕೆ ಇಡೀ ಕಾಂಗ್ರೆಸ್‌ ಮಾರಿಕೊಂಡಿದೆ. ಹೀಗಿರುವಾಗ ಅಲ್ಪಸಂಖ್ಯಾತರ ಪರವಾಗಿ ಸಿದ್ದರಾಮಯ್ಯ ಯಾವ ಮುಖ ಇಟ್ಟುಕೊಂಡು ಧ್ವನಿ ಎತ್ತುತ್ತಾರೆ? ಅಥವಾ ಅದನ್ನು ಹೇಗೆ ಸಿದ್ದರಾಮಯ್ಯರಿಂದ ನಿರೀಕ್ಷಿಸುವುದಕ್ಕೆ ಸಾಧ್ಯವಿದೆ? ಹೀಗಾಗಿಯೇ ಸಿದ್ದರಾಮಯ್ಯ ಅಹಿಂದ ವರ್ಗದ ಪರವಾಗಿದ್ದಾರೆಯೇ ಎನ್ನುವ ಪ್ರಶ್ನೆಯನ್ನೂ ಮೂಡಿಸದೇ ಇರುವುದಿಲ್ಲ.

ಅಧಿಕಾರ ಹಸ್ತಾಂತರ ಮತ್ತು ಆಂತರಿಕ ಸಂಘರ್ಷ

ಕಾಂಗ್ರೆಸ್ ಪಕ್ಷದ ಒಳಗಿನ “ಅಧಿಕಾರ ಹಂಚಿಕೆ”ಯ ಚರ್ಚೆ ಸಿದ್ದರಾಮಯ್ಯನವರ ವರ್ಚಸ್ಸಿನ ಮೇಲೆ ನೇರ ಪರಿಣಾಮ ಬೀರಿದೆ. ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯನವರ ನಡುವಿನ ‘ಸಿಎಂ’ ಕುರ್ಚಿಯ ಪೈಪೋಟಿ ಆಡಳಿತದ ಮೇಲೆ ಪ್ರಭಾವ ಬೀರಿದೆ. ಅಧಿಕಾರ ಹಸ್ತಾಂತರದ ಗೊಂದಲಗಳು ಜನರಲ್ಲಿ “ಸ್ಥಿರ ಸರ್ಕಾರ”ದ ಬಗ್ಗೆ ಅಪನಂಬಿಕೆ ಮೂಡಿಸುತ್ತಿವೆ. ಇನ್ನು,  ಹೈಕಮಾಂಡ್ ಮಟ್ಟದಲ್ಲಿ ಸಿದ್ದರಾಮಯ್ಯನವರ ಪಟ್ಟು ಸಡಿಲವಾಗುತ್ತಿದೆಯೇ ಎಂಬ ಪ್ರಶ್ನೆ ಎದ್ದಿದೆ. ಅವರ “ಸ್ವತಂತ್ರ ನಿರ್ಧಾರ”ಕ್ಕೆ ಹೈಕಮಾಂಡ್‌ ಮಣೆ ಹಾಕುತ್ತಿಲ್ಲವೇ ಎಂಬ ಚರ್ಚೆಗೆ ಕಾರಣವಾಗಿದೆ.

ಒಟ್ಟಿನಲ್ಲಿ, ಇತ್ತೀಚೆಗಿನ ಬೆಳವಣಿಗೆಯನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ ತಮ್ಮ ʼಅಹಿಂದʼ ವರ್ಚಸ್ಸನ್ನು ಕಳೆದುಕೊಂಡಿದ್ದಾರೆ ಎನ್ನುವುದಕ್ಕೆ ಸಾಧ್ಯವಿಲ್ಲ, ಆದರೆ ಅವರ ವರ್ಚಸ್ಸು ಪರಿಕ್ಷಾರ್ಹ ಹಂತದಲ್ಲಿದೆ. ಸಿದ್ದರಾಮಯ್ಯನವರು ಎಂದಿಗೂ ಸಂಕಷ್ಟದ ಸಮಯದಲ್ಲಿ ಪುಟಿದೆದ್ದ ನಾಯಕ. ಈಗ ಎದುರಾಗಿರುವ ರಾಜಕೀಯ ಸಂಘರ್ಷಗಳನ್ನು ಮೀರಿ ತಮ್ಮನ್ನು ತಾವು ಹೇಗೆ ಸಾಬೀತು ಮಾಡಿಕೊಳ್ಳುತ್ತಾರೆ ಎನ್ನುವುದು ಅವರ “ಅಹಿಂದ” ವರ್ಚಸ್ಸನ್ನು ನಿರ್ಧಾರ ಮಾಡಲಿದೆ ಎನ್ನುವುದರಲ್ಲಿ ಸಂಶಯವಿಲ್ಲ.  

IMG 20260316 WA0002
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ನ.28, 29ರಂದು 47ನೇ ಶರಣ ಕಮ್ಮಟ, ಅನುಭವಮಂಟಪ ಉತ್ಸವ

ವಿಶ್ವಬಸವಧರ್ಮ ಅನುಭವಮಂಟಪ, ಬಸವಕಲ್ಯಾಣ ವತಿಯಿಂದ ನವೆಂಬರ್ 28 ಮತ್ತು 29ರಂದು 47ನೇ...

ಕನ್ನಾಟ್ ಪ್ಲೇಸ್‌ನಲ್ಲಿ ಸಿಜೆಪಿ ಪ್ರತಿಭಟನೆ: ತಡೆ ನೀಡಲು ದೆಹಲಿ ಹೈಕೋರ್ಟ್ ನಕಾರ

ಮುಖ್ಯ ಚುನಾವಣಾ ಆಯುಕ್ತರ (ಸಿಇಸಿ) ರಾಜೀನಾಮೆಗೆ ಆಗ್ರಹಿಸಿ ಅಕ್ಟೋಬರ್ 16ರಂದು ದೆಹಲಿಯ...

ಔರಾದ್‌ | ನೀರು, ಆರೋಗ್ಯ ಸೇವೆ ಪರಿಶೀಲನೆ; ಕಾರ್ಮಿಕರ ಸಮಸ್ಯೆ ಆಲಿಸಿದ ಸಿಇಒ

ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಆರೋಗ್ಯ ಸೇವೆ ಹಾಗೂ ಅಭಿವೃದ್ಧಿ...