ವಯಸ್ಕನಾದ ವ್ಯಕ್ತಿಗೆ ತನ್ನಿಷ್ಟದ ಧರ್ಮವನ್ನು ಅನುಸರಿಸುವ ಹಾಗೂ ಜೀವನಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಪೂರ್ಣ ಸಂವಿಧಾನಾತ್ಮಕ ಹಕ್ಕಿದೆ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. ತನ್ನ ಮಗನಿಗೆ ‘ಬ್ರೇನ್‌ವಾಶ್’ ಮಾಡಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಲಾಗಿದೆ ಎಂಬ ತಂದೆಯ ವಾದವನ್ನು ನ್ಯಾಯಾಲಯ ತಳ್ಳಿಹಾಕಿದೆ.
ಉತ್ತರ ಪ್ರದೇಶದ ಶಾಮ್ಲಿ ನಿವಾಸಿ ಆಯುಷ್ ಮಲಿಕ್ (31) ಎಂಬ ಯುವಕನಿಗೆ ಸಂಬಂಧಿಸಿದ ಪ್ರಕರಣದಲ್ಲಿ ಹೈಕೋರ್ಟ್‌ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಸಂದೀಪ್ ಜೈನ್ ಈ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಮತಾಂತರ ವಿಚಾರದಲ್ಲಿ ಬಿಜೆಪಿಯ ಬೂಟಾಟಿಕೆ ಮತ್ತು ವಾಸ್ತವ
ಆಯುಷ್ ಮಲಿಕ್ ಅವರ ಸ್ನೇಹಿತ ಸುಲ್ತಾನ್ ಎಂಬುವವರು ಹೈಕೋರ್ಟ್‌ನಲ್ಲಿ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಆಯುಷ್ ತಾನು ಸ್ವಇಚ್ಛೆಯಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸಿ, ಮುಸ್ಲಿಂ ಯುವತಿಯನ್ನು ಮದುವೆಯಾಗಲು ನಿರ್ಧರಿಸಿದ್ದರು. ಆದರೆ, ಇದರಿಂದ ಕುಪಿತಗೊಂಡ ಅವರ ತಂದೆ ದೇವ್‌ರಾಜ್ ಸಿಂಗ್ ಮಲಿಕ್, ಮಗನನ್ನು ಅಕ್ರಮವಾಗಿ ಗೃಹ ಬಂಧನದಲ್ಲಿಟ್ಟಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.
ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಆಯುಷ್ ಅವರನ್ನು ತಮ್ಮ ಮುಂದೆ ಹಾಜರುಪಡಿಸುವಂತೆ ಪೊಲೀಸರಿಗೆ ಸೂಚಿಸಿತ್ತು. ಕೋರ್ಟ್‌ಗೆ ಹಾಜರಾದ ಆಯುಷ್, “ನಾನು ಯಾವುದೇ ಒತ್ತಡ, ಬೆದರಿಕೆ ಅಥವಾ ಆಮಿಷವಿಲ್ಲದೆ 2014ರಲ್ಲೇ ಸ್ವಇಚ್ಛೆಯಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದೇನೆ. ಜೂನ್ 4ರಿಂದ ನನ್ನ ಕುಟುಂಬಸ್ಥರು ನನ್ನನ್ನು ಅಕ್ರಮವಾಗಿ ಬಂಧನದಲ್ಲಿಟ್ಟಿದ್ದರು” ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಆದಾಗ್ಯೂ, ಆಯುಷ್ ಅವರ ತಂದೆ ದೇವ್‌ರಾಜ್, “ನನ್ನ ಮಗನಿಗೆ ಕೆಲವರು ಮರುಳು ಮಾಡಿ (Brainwash) ಧರ್ಮ ಪರಿವರ್ತನೆ ಮಾಡಿದ್ದಾರೆ” ಎಂದು ವಾದಿಸಿದರು.
ಎರಡೂ ಕಡೆಯ ವಾದ ಆಲಿಸಿದ ನ್ಯಾಯಮೂರ್ತಿಗಳು, “ತಂದೆಗೆ ಮಗನ ಬಗ್ಗೆ ಇರುವ ಕಾಳಜಿಯನ್ನು ಕುಟುಂಬದ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬಹುದು. ಆದರೆ, ಆ ಕಾಳಜಿಯು ಒಬ್ಬ ವಯಸ್ಕ ವ್ಯಕ್ತಿಯ ಸಂವಿಧಾನಾತ್ಮಕ ಸ್ವಾಯತ್ತತೆ ಮತ್ತು ಸ್ವತಂತ್ರ ನಿರ್ಧಾರವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದರು.
ಸಂವಿಧಾನದ ವಿಧಿ 25 (ಧಾರ್ಮಿಕ ಸ್ವಾತಂತ್ರ್ಯ) ಹಾಗೂ ವಿಧಿ 21 (ವೈಯಕ್ತಿಕ ಸ್ವಾತಂತ್ರ್ಯ) ಅನ್ನು ಉಲ್ಲೇಖಿಸಿದ ಪೀಠವು, ಆಯುಷ್ ಅವರಿಗೆ ತಮ್ಮಿಷ್ಟದ ಸ್ಥಳದಲ್ಲಿ ವಾಸಿಸಲು, ಇಷ್ಟಪಟ್ಟ ಧರ್ಮವನ್ನು ಆಚರಿಸಲು ಮತ್ತು ಕಾನೂನುಬದ್ಧವಾಗಿ ಮದುವೆಯಾಗಲು ಸಂಪೂರ್ಣ ಸ್ವಾತಂತ್ರ್ಯವಿದೆ ಎಂದು ತೀರ್ಪು ನೀಡಿ, ಅವರ ಮೇಲಿದ್ದ ನಿಯಂತ್ರಣಗಳನ್ನು ತೆರವುಗೊಳಿಸಿತು.




