ತನ್ನ ಕಾದಂಬರಿಗಳ ಪಾತ್ರಗಳಂತೆಯೇ ಜೀವಿಸಿದ್ದ ಜನಪ್ರಿಯ ಕಾದಂಬರಿಕಾರ ಜೆಫ್ರಿ ಆರ್ಚರ್!

Date:

ಜನಪ್ರಿಯ ಕಾದಂಬರಿಕಾರ ಜೆಫ್ರಿ ಆರ್ಚರ್, ತಮ್ಮ 86ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಸೇನೆ, ಪೊಲೀಸ್, ದೈಹಿಕ ಶಿಕ್ಷಣ ಶಿಕ್ಷಕ, ರಾಜಕಾರಣಿ, ಕಾದಂಬರಿಕಾರ... ಅವರ ಬದುಕೇ ಕಾದಂಬರಿಯ ಕಥಾವಸ್ತುವಾಗಿತ್ತು. ತಮ್ಮ ಬದುಕಿನ ಕೊನೆಯ ದಿನವೂ ಅವರು ಬರೆಯುತ್ತಿದ್ದರು. ಅವರು ಬರೆಯುತ್ತಿದ್ದ ಕಥೆಗೆ ಮಾತ್ರ ಅಂತ್ಯ ಬಾಕಿಯಿತ್ತು. ಬರಹಗಾರನ ಬದುಕಿಗೆ ಅಲ್ಲ...

ಕಾದಂಬರಿಯಲ್ಲಿ ಓದಿದರೆ ನಂಬಲಾಗದ ತಿರುವು. ಆದರೆ ಜೆಫ್ರಿ ಆರ್ಚರ್ ಅವರ ಬದುಕಿನಲ್ಲಿ ಅದು ನಿಜವಾಗಿಯೇ ನಡೆದಿತ್ತು.

- Advertisement -

1987ರಲ್ಲಿ ‘ಡೈಲಿ ಸ್ಟಾರ್’ ಪತ್ರಿಕೆ ಆರ್ಚರ್‌ರನ್ನು ವೇಶ್ಯೆಯೊಬ್ಬಳ ಜೊತೆ ಕಾಲ ಕಳೆದಿದ್ದ ಆರೋಪದೊಂದಿಗೆ ಸುದ್ದಿ ಮಾಡಿತು. ಆರ್ಚರ್ ಪತ್ರಿಕೆಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದರು. ತಾನು ಆ ರಾತ್ರಿ ಲಂಡನ್‌ನಲ್ಲೇ ಇರಲಿಲ್ಲ, ತನ್ನ ಮನೆಯಲ್ಲಿ ಪತ್ನಿ ಮೇರಿಯ ಜೊತೆ ಇದ್ದೆ ಎಂದು ಸಾಬೀತುಪಡಿಸಲು ನಕಲಿ ಡೈರಿಯೊಂದನ್ನೇ ಸೃಷ್ಟಿಸಿದರು. ಅದರಲ್ಲಿ ಆ ದಿನದ ಕಾರ್ಯಕ್ರಮಗಳನ್ನೂ ಹಿಂದಿನ ದಿನಾಂಕದಲ್ಲಿ ಬರೆದಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನಾಳೆ ಜಿಎಸ್‌ಟಿ ಮಂಡಳಿ ಸಭೆ: ಅಧಿಕಾರ ಹಂಚಿಕೆಯ ಅಸಮತೋಲನ;...

ಜಿಎಸ್‌ಟಿ ಮಂಡಳಿಯು ದೇಶದ 'ಸಹಕಾರ ಒಕ್ಕೂಟ ವ್ಯವಸ್ಥೆ'ಗೆ ಒಂದು ಉದಾಹರಣೆಯಾಗಿದ್ದರೂ, ಮತದಾನದ ಪ್ರಕ್ರಿಯೆಯಲ್ಲಿ ಕೇಂದ್ರಕ್ಕಿರುವ ಮೇಲುಗೈ ರಾಜ್ಯಗಳ ಸ್ವಾಯತ್ತತೆಗೆ ಧಕ್ಕೆ ತರುತ್ತಿದೆ ಎಂಬುದು ಸ್ಪಷ್ಟ. ಜಿಎಸ್‌ಟಿ ಜಾರಿಗೆ ಬಂದ ನಂತರ ರಾಜ್ಯಗಳು ತಮ್ಮ...

ಚುನಾವಣಾ ಆಯೋಗವು ತಾನೇ ಹಾಕಿಕೊಂಡ ಗಂಟುಗಳನ್ನು ಬಿಡಿಸಿಕೊಳ್ಳಬಲ್ಲದೇ? ಇದೇ...

SIR ನಡೆಸುವ ನಿರ್ಧಾರ ಸರ್ವಾನುಮತದಿಂದ ಕೂಡಿತ್ತು ಎಂದು ಜನ ನಂಬಬೇಕಾದರೆ, ಆಯೋಗವು ಸಂಬಂಧಿಸಿದ ಸಭೆಯ ಅಧಿಕೃತ ನಡಾವಳಿಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು. ಆ ಮೂಲಕ ಚುನಾವಣಾ ಆಯೋಗವು ತಾನೇ ಸೃಷ್ಟಿಸಿಕೊಂಡಿರುವ ಗೋಜಲುಗಳಿಂದ ಬಿಡಿಸಿಕೊಳ್ಳಬೇಕು. ಭಾರತೀಯ...

ನೊಬೆಲ್‌ ಪ್ರಶಸ್ತಿ ಸರಣಿ | ಕಣ ಭೌತವಿಜ್ಞಾನ-ಖಗೋಳವಿಜ್ಞಾನಗಳೆರಡರ ಸಮ್ಮಿಳನದ...

ಫ್ರಾನ್ಸಿಸ್ ಹಾಲ್ಜೆನ್ ಅವರ ಮೂಲ ಆಲೋಚನೆ ಕೇವಲ ಹಿಮದೊಳಗೆ ಸಂವೇದಕಗಳನ್ನು ಇಡುವ ಯೋಜನೆಯಾಗಿರಲಿಲ್ಲ. ಅದು ವಿಶ್ವವನ್ನು ನೋಡುವ ಹೊಸ ವಿಧಾನಕ್ಕೆ ಬಾಗಿಲು ತೆರೆಯುವ ಆಲೋಚನೆಯಾಗಿತ್ತು. ಅಗೋಚರವಾಗಿರುವ ಕಣಗಳನ್ನು ಹಿಡಿಯುವ ಮೂಲಕ, ವಿಶ್ವದ ಅತ್ಯಂತ...

ನ್ಯಾಯಾಲಯದಲ್ಲಿ ಪತ್ನಿ ಮೇರಿ ಆರ್ಚರ್ ಅವರ ಪರವಾಗಿ ಸಾಕ್ಷಿ ನೀಡಿದರು. ಆರ್ಚರ್‌ ಹೇಳಿಕೆಯನ್ನು ಆಕೆಯ ಸಾಕ್ಷ್ಯ ಬೆಂಬಲಿಸಿತು. ನ್ಯಾಯಾಲಯ ಆರ್ಚರ್ ಪರವಾಗಿ ತೀರ್ಪು ನೀಡಿತು. ‘ಡೈಲಿ ಸ್ಟಾರ್’ ಅವರಿಗೆ ಭಾರೀ ಪರಿಹಾರಧನ (ಐದು ಲಕ್ಷ ಪೌಂಡ್) ನೀಡಬೇಕಾಯಿತು.

ಆದರೆ ಕೆಲವು ವರ್ಷಗಳ ನಂತರ, ಆ ಗೆಲುವಿನ ಹಿಂದಿದ್ದ ಸತ್ಯ ಹೊರಬಂತು. ಡೈರಿ ನಕಲಿ ಎಂಬುದು ಪತ್ತೆಯಾಯಿತು. ಪತ್ನಿಯ ಸಾಕ್ಷ್ಯವೂ ಸುಳ್ಳಾಗಿತ್ತು. 1999ರಲ್ಲಿ ಸುಳ್ಳು ಸಾಕ್ಷ್ಯ ನೀಡಿದ ಹಾಗೂ ನ್ಯಾಯದ ಪ್ರಕ್ರಿಯೆಯನ್ನು ವಂಚಿಸಿದ ಆರೋಪಗಳಲ್ಲಿ ಆರ್ಚರ್ ದೋಷಿ ಎಂದು ತೀರ್ಪಾಯಿತು. ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.

ಒಬ್ಬ ಕಾದಂಬರಿಕಾರನಿಗೆ ಇಂತಹ ಕಥಾವಸ್ತು ಸಿಕ್ಕಿದ್ದರೆ, ಬಹುಶಃ ಅದನ್ನು Kane and Abel ಅಥವಾ A Matter of Honour ಮಟ್ಟದ ಕಥೆಯನ್ನಾಗಿ ಮಾಡುತ್ತಿದ್ದ. ಆದರೆ ಜೆಫ್ರಿ ಆರ್ಚರ್ ಅದನ್ನು ಬರೆದಿರಲಿಲ್ಲ… ಬದುಕಿದ್ದರು.

ತಮ್ಮ ಕಾದಂಬರಿಗಳ ಪಾತ್ರಗಳಂತೆ ಅವರು ಕೂಡ ಮಹತ್ವಾಕಾಂಕ್ಷೆ, ಹಣ, ಅಧಿಕಾರ, ಪ್ರೀತಿ, ಸುಳ್ಳು, ಅಪಾಯ ಮತ್ತು ಅದೃಷ್ಟದ ನಡುವೆ ಬದುಕಿದರು. ಅವರ ಬದುಕಿನಲ್ಲಿ ಕೆಲವೊಮ್ಮೆ ಕಾದಂಬರಿಗಿಂತಲೂ ದೊಡ್ಡ ತಿರುವುಗಳು ಬಂದವು. ಮತ್ತು ಅದಕ್ಕಾಗಿಯೇ ಜೆಫ್ರಿ ಆರ್ಚರ್ ಅವರ ಮರಣದ ಸುದ್ದಿ, ಒಬ್ಬ ಲೇಖಕನ ನಿಧನದ ಸುದ್ದಿಗಿಂತ ಹೆಚ್ಚಾಗಿ, ಒಂದು ಅಪರೂಪದ ಕಥೆಯ ಕೊನೆಯ ಅಧ್ಯಾಯದಂತೆ ಭಾಸವಾಗುತ್ತದೆ.

ಇದನ್ನು ಓದಿದ್ದೀರಾ?: ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌ ಪ್ರಶಸ್ತಿ ಪಡೆದ ಸಂಶೋಧನೆಯ ಸುತ್ತ ಒಂದು ನೋಟ

ಮೋಸ ಹೋದ ಕಾದಂಬರಿ ಬರೆದ!

Not a Penny More, Not a Penny Less (ಒಂದು ಪೈಸೆ ಜಾಸ್ತಿ ಕೇಳಲ್ಲ, ಒಂದು ಪೈಸೆ ಕಮ್ಮಿ ತಗೊಳಲ್ಲ!) ಜೆಫ್ರಿ ಆರ್ಚರ್ ಅವರ ಮೊದಲ ಕಾದಂಬರಿ. ಈ ಕಾದಂಬರಿ ಹುಟ್ಟಿದ್ದು ಸಾಹಿತ್ಯದ ಮಹತ್ವಾಕಾಂಕ್ಷೆಯಿಂದಲ್ಲ; ಮೋಸಹೋದ ಕೋಪದಿಂದ!

ಆರ್ಚರ್‌ರಿಗೆ ರಾಜಕೀಯದ ಮೇಲೂ, ಹಣದ ಮೇಲೂ ಅಪಾರ ಆಸಕ್ತಿ. ಮೊದಲ ಬಾರಿಗೆ ಎಂ.ಪಿ ಆಗಿದ್ದಾಗ, ಯಾರದೋ ಮಾತು ಕೇಳಿ ತಮ್ಮೆಲ್ಲಾ ದುಡ್ಡನ್ನು ಒಂದು ಕಂಪೆನಿ ಮೇಲೆ ಹೂಡಿಕೆ ಮಾಡಿ ಕಳೆದುಕೊಂಡರು. ತಾನು ಮೋಸ ಹೋದೆ ಅನ್ನೋದು ಅವರ ವಾದ. ಹಣವನ್ನು ಮರಳಿ ಪಡೆಯಲು ವಿಚಿತ್ರವಾದ ಪ್ರತೀಕಾರದ ಮಾರ್ಗ ಕಂಡುಕೊಂಡರು: ಕಾದಂಬರಿ ಬರೆಯುವುದು.

ಕಥೆಯಲ್ಲಿ ನಾಲ್ವರು ಶ್ರೀಮಂತರು ಒಬ್ಬ ವಂಚಕನಿಂದ ಮೋಸ ಹೋಗುತ್ತಾರೆ. ಕಾನೂನಿನ ಮೂಲಕ ತಮ್ಮ ಹಣವನ್ನು ವಾಪಸ್ ಪಡೆಯಲು ಸಾಧ್ಯವಾಗದ ಅವರು, ತಾವೇ ಒಂದು ಯೋಜನೆ ರೂಪಿಸಿ, ತಮಗೆ ಮೋಸ ಮಾಡಿದವನಿಂದ ಒಂದೊಂದು ಪೈಸೆಯನ್ನೂ ಮರಳಿ ಪಡೆಯುತ್ತಾರೆ.

1976ರಲ್ಲಿ ಪ್ರಕಟವಾದ ಈ ಮೊದಲ ಕಾದಂಬರಿಯೇ ಆರ್ಚರ್ ಅವರನ್ನು ರಾತ್ರೋರಾತ್ರಿ ಬೆಸ್ಟ್‌ಸೆಲ್ಲರ್ ಲೇಖಕರನ್ನಾಗಿ ಮಾಡಿತು. ಮುಂದೆ Kane and Abel, A Matter of Honour, A Twist in the Tale, The Fourth Estate, The Clifton Chronicles… ಒಂದರ ಹಿಂದೆ ಒಂದರಂತೆ ಬಂದ ಕಾದಂಬರಿಗಳು ಅವರನ್ನು ವಿಶ್ವದ ಅತ್ಯಂತ ಜನಪ್ರಿಯ ಕಥೆಗಾರರ ಸಾಲಿಗೆ ಕೊಂಡೊಯ್ದವು.

ವಿಶೇಷವೆಂದರೆ, ಆರ್ಚರ್ ಕಥೆ ಹೇಳುವುದನ್ನು ಮಾತ್ರ ಕಲಿತಿರಲಿಲ್ಲ. ಮೋಸ, ಪ್ರತೀಕಾರ, ಹಣ, ಅಧಿಕಾರ ಮತ್ತು ಅನಿರೀಕ್ಷಿತ ತಿರುವುಗಳನ್ನು ಬದುಕಿನಲ್ಲೇ ಅನುಭವಿಸಿದ್ದರು. ಅದಕ್ಕೇ ಅವರ ಕಥೆಗಳು ಕೇವಲ ಕಥೆಗಳಾಗಿ ಉಳಿಯಲಿಲ್ಲ; ಓದುಗನನ್ನು ಕೊನೆಯ ಪುಟದವರೆಗೂ ಹಿಡಿದುಕೊಳ್ಳುವ ಆಟಗಳಾದವು.

jeffrey archer1

ತಂದೆಯಿಂದ ಶುರುವಾಯಿತೇ ಕತೆ ಕಟ್ಟುವ ಚಾಳಿ?

ಜೆಫ್ರಿ ಆರ್ಚರ್ ಅವರ ಬದುಕಿನಲ್ಲಿ ಸತ್ಯ ಯಾವುದು, ಅವರು ಕಟ್ಟಿದ ಕಥೆ ಯಾವುದು ಎಂಬುದನ್ನು ಬೇರ್ಪಡಿಸುವುದು ಸುಲಭದ ಕೆಲಸವಲ್ಲ. ಬಹುಶಃ ಆ ಗೊಂದಲದ ಮೊದಲ ಅಧ್ಯಾಯವೇ ಅವರ ತಂದೆಯಿಂದ ಆರಂಭವಾಗುತ್ತದೆ.

ಆರ್ಚರ್ ತಮ್ಮ ತಂದೆ ವಿಲಿಯಂ ಅವರನ್ನು ಮೊದಲ ವಿಶ್ವಯುದ್ಧದ ಅಲಂಕೃತ ಯೋಧನಂತೆ ಬಿಂಬಿಸಿದ್ದರು. ಆದರೆ ನಂತರದ ತನಿಖೆಗಳು ಬೇರೆಯದೇ ಚಿತ್ರವನ್ನು ನೀಡಿದವು. ವಿಲಿಯಂ ಆರ್ಚರ್ ವಂಚನೆ ಪ್ರಕರಣಗಳಲ್ಲಿ ಸಿಕ್ಕಿಬಿದ್ದಿದ್ದ, ಬಿಗಮಿಸ್ಟ್ ಆಗಿದ್ದ ವ್ಯಕ್ತಿ; ಅಮೆರಿಕದಲ್ಲಿ ಇನ್ನೊಬ್ಬರ ಹೆಸರನ್ನು ಬಳಸಿಕೊಂಡು ಬದುಕಿದ್ದನೆಂಬ ದಾಖಲೆಗಳೂ ಹೊರಬಂದವು. ಜೆಫ್ರಿ ಅವರಿಗೆ ಕೇವಲ ಹತ್ತು ವರ್ಷವಾಗಿದ್ದಾಗ ತಂದೆ ನಿಧನರಾದರು. ಆತನ ತಾಯಿಗಿಂತ ತಂದೆ ನಲವತ್ತು ವರ್ಷ ದೊಡ್ಡವರು.

ಶಿಕ್ಷಣದ ವಿಷಯದಲ್ಲೂ ಆರ್ಚರ್ ಸುತ್ತ ಇಂಥದ್ದೇ ಗೊಂದಲ. ಅವರು ಸೋಮರ್‍ಸೆಟ್‌ನ ವೆಲ್ಲಿಂಗ್ಟನ್ ಸ್ಕೂಲ್‌ನಲ್ಲಿ ವಿದ್ಯಾರ್ಥಿವೇತನದಲ್ಲಿ ಓದಿದ್ದರು. ಆದರೆ ಹೇಳಿಕೊಂಡಿದ್ದು ಬರ್ಕ್‌ಶೈರ್‍‌ನ ಪ್ರಸಿದ್ಧ ವೆಲ್ಲಿಂಗ್ಟನ್ ಕಾಲೇಜಿನಲ್ಲಿ ಅಂತ. ಶಾಲೆ ಮುಗಿಸಿದಾಗ ಅವರ ವಿದ್ಯಾರ್ಹತೆ ಕೇವಲ ಮೂರು O-levelಗಳಿಗೆ ಸೀಮಿತವಾಗಿತ್ತು; ಹೇಳಿಕೊಂಡಿದ್ದು A-level.

ಆದರೂ ಮುಂದೆ ಅವರ ಶಿಕ್ಷಣದ ಕಥೆ ದೊಡ್ಡದಾಯಿತು. ಆಕ್ಸ್‌ಫರ್ಡ್‌ಗೆ ಹೋದದ್ದು ನಿಜ. 1963ರಲ್ಲಿ ಆಕ್ಸ್‌ಫರ್ಡ್ ಡಿಪಾರ್ಟ್‌ಮೆಂಟ್ ಆಫ್ ಎಜುಕೇಷನ್‌ನಲ್ಲಿ ಒಂದು ವರ್ಷದ ಡಿಪ್ಲೊಮಾ ಇನ್ ಎಜುಕೇಷನ್ ಕೋರ್ಸ್‌ಗೆ ಸೇರಿದರು; ಬ್ರೇಸ್‌ನೋಸ್ ಕಾಲೇಜಿನ ನ ಸದಸ್ಯರೂ ಆಗಿದ್ದರು. ಆದರೆ ಅವರು ಪೂರ್ಣ ಪದವಿ ಪಡೆದಂತೆ ಸಾರ್ವಜನಿಕವಾಗಿ ಮೂಡಿದ ಚಿತ್ರ ಸರಿಯಾಗಿರಲಿಲ್ಲ. ಅಲ್ಲೂ ಕೂಡ ಅರ್ಚರ್ ಖ್ಯಾತಿ ಪಡೆದಿದ್ದು ಬೀಟಲ್ಸ್‌ಗಳನ್ನು ನಿಧಿಸಂಗ್ರಹಣೆಗೆ ಕಾಲೇಜಿಗೆ ಕರೆಸಿದಕ್ಕೆ. ವಿದ್ಯಾರ್ಥಿಯಾಗಿ ಅದನ್ನು ಹೇಗೆ ಸಾಧಿಸಿದನೋ ಅವನೇ ಬಲ್ಲ.

ಶಾಲೆಯ ನಂತರ ಸೇನೆ, ಪೊಲೀಸ್, ದೈಹಿಕ ಶಿಕ್ಷಣ ಶಿಕ್ಷಕ, ಹೀಗೆ ಒಂದರ ಹಿಂದೆ ಮತ್ತೊಂದು ಪ್ರಯೋಗ. ಆಕ್ಸ್‌ಫರ್ಡ್‌ನಲ್ಲಿ ಓದಿಗಿಂತ ಅಥ್ಲೆಟಿಕ್ಸ್ ಮತ್ತು ನಿಧಿಸಂಗ್ರಹಣೆಯಲ್ಲಿ ಹೆಚ್ಚು ಹೆಸರು. ರಾಜಕೀಯಕ್ಕೆ ಕಾಲಿಡುವ ಹೊತ್ತಿಗೆ, ಜೆಫ್ರಿ ಆರ್ಚರ್ ಬಳಿ ದೊಡ್ಡ ಪದವಿ ಇರಲಿಲ್ಲ. ಆದರೆ ತನ್ನ ಬಗ್ಗೆ ದೊಡ್ಡ ಕಥೆಯನ್ನು ಹೇಳಿಕೊಳ್ಳುವ ಆತ್ಮವಿಶ್ವಾಸವಿತ್ತು.

jeffrey archer3
ಮಾರ್ಗರೆಟ್ ಥ್ಯಾಚರ್ ಜೊತೆ ಜೆಫ್ರಿ…

ಪ್ರಧಾನಿಯಾಗಬೇಕೆಂಬ ಮಹತ್ವಾಕಾಂಕ್ಷೆ!

1969ರಲ್ಲಿ, ತಮ್ಮ 29ನೇ ವಯಸ್ಸಿನಲ್ಲಿ, ಜೆಫ್ರಿ ಆರ್ಚರ್ ಲೋಥ್ ಕ್ಷೇತ್ರದಿಂದ ಕನ್ಸರ್ವೇಟಿವ್ ಪಕ್ಷದ ಸಂಸದರಾಗಿ ಆಯ್ಕೆಯಾದರು. ಬ್ರಿಟಿಷ್ ಸಂಸತ್ತಿಗೆ ಕಾಲಿಟ್ಟಾಗಲೇ ಅವರು ತಮ್ಮನ್ನು ಅತ್ಯಂತ ಕಿರಿಯ ಸಂಸದ ಎಂದು ಬಿಂಬಿಸಿಕೊಂಡರು. ಅದು ಕೂಡ ಅವರ ಬದುಕಿನಂತೆ ಸ್ವಲ್ಪ ಸತ್ಯ, ಸ್ವಲ್ಪ ಅತಿಶಯೋಕ್ತಿ. ಆದರೆ ರಾಜಕೀಯದಲ್ಲಿ ಅವರು ಕೇವಲ ಸಂಸದರಾಗಲು ಬಂದಿರಲಿಲ್ಲ. ಅವರ ಗುರಿ “10 Downing Street,” ಪ್ರಧಾನಮಂತ್ರಿಯ ಅಧಿಕೃತ ನಿವಾಸವಾಗಿತ್ತು!

ಯೌವನದಲ್ಲೇ ”ನಾನು ಪ್ರಧಾನಿಯಾಗುತ್ತೇನೆ” ಎಂದು ಹೇಳಿಕೊಂಡಿದ್ದ ಆರ್ಚರ್, ಮಾರ್ಗರೆಟ್ ಥ್ಯಾಚರ್ ಅವರ ಉದಯದೊಂದಿಗೆ ತಮ್ಮ ರಾಜಕೀಯ ಭವಿಷ್ಯವನ್ನೂ ಕಂಡಿದ್ದರು. ಥ್ಯಾಚರ್ ಅವರ ನಾಯಕತ್ವದ ಪ್ರಚಾರದಲ್ಲಿ ಯುವ ಕನ್ಸರ್ವೇಟಿವ್ ಕಾರ್ಯಕರ್ತನಾಗಿ ಸಕ್ರಿಯವಾಗಿ ಕೆಲಸ ಮಾಡಿದ್ದ ಆರ್ಚರ್, ಮುಂದೆ ಅವರ ಆಪ್ತ ವಲಯದ ಭಾಗವಾದರು. ಥ್ಯಾಚರ್ ಪ್ರಕಾರ, ಆರ್ಚರ್‌ಗೆ ಜನರನ್ನು ಸೆಳೆಯುವ ಶಕ್ತಿ ಅಪಾರವಾಗಿತ್ತು; ಆದರೆ ಆ ಶಕ್ತಿಗೆ ತಕ್ಕ ರಾಜಕೀಯ ವಿವೇಚನೆ ಯಾವಾಗಲೂ ಇರಲಿಲ್ಲ.

ಥ್ಯಾಚರ್ ಪ್ರಧಾನಿಯಾದ ನಂತರವೂ ಆರ್ಚರ್ ಅವರೊಂದಿಗೆ ಆತ್ಮೀಯತೆ ಮುಂದುವರಿಯಿತು. 1980ರ ದಶಕದಲ್ಲಿ ಕನ್ಸರ್ವೇಟಿವ್ ಪಕ್ಷದ ಉಪಾಧ್ಯಕ್ಷರಾಗಿಯೂ ಅವರು ಕೆಲಸ ಮಾಡಿದರು. ಪಕ್ಷದ ಸಭೆಗಳಲ್ಲಿ ಮಾತನಾಡಲು, ಹಣ ಸಂಗ್ರಹಿಸಲು, ಜನರನ್ನು ರಂಜಿಸಲು ಆರ್ಚರ್‌ಗೆ ಸರಿಸಾಟಿಯೇ ಇರಲಿಲ್ಲ. ರಾಜಕೀಯಕ್ಕಿಂತಲೂ ರಾಜಕೀಯದ ವೇದಿಕೆ ಅವರಿಗೆ ಹೆಚ್ಚು ಸಹಜವಾಗಿತ್ತು.

ಆದರೆ ರಾಜಕೀಯದ ಮೆಟ್ಟಿಲು ಹತ್ತುವಾಗಲೆಲ್ಲಾ ಅವರ ಬದುಕು ಒಂದು ಹೆಜ್ಜೆ ಮುಂದೆ, ಎರಡು ಹೆಜ್ಜೆ ಹಿಂದೆ ಸರಿಯುತ್ತಿತ್ತು. ಹಣವೆಲ್ಲ ಕಳೆದುಕೊಂಡಿದ್ದ ಕಾರಣ 1974ರಲ್ಲಿ ಸಂಸದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿಲ್ಲ. ನಂತರ ಬರವಣಿಗೆ ಅವರಿಗೆ ಅಪಾರ ಹಣ ಮತ್ತು ಖ್ಯಾತಿ ತಂದುಕೊಟ್ಟಿತು. ಮತ್ತೆ ರಾಜಕೀಯಕ್ಕೆ ಮರಳಿದಾಗ ಅವರು ಹಿಂದಿನ ಆರ್ಚರ್ ಆಗಿರಲಿಲ್ಲ. ಈಗ ಅವರು ಕೋಟ್ಯಾಧಿಪತಿ, ಬೆಸ್ಟ್‌ಸೆಲ್ಲರ್ ಲೇಖಕ, ಸೆಲಬ್ರಿಟಿ.

1992ರಲ್ಲಿ ಅವರಿಗೆ life peerage ದೊರೆಯಿತು. ”Lord Archer of Weston-super-Mare” ಎಂಬ ಬಿರುದಿನೊಂದಿಗೆ ಅವರು ಹೌಸ್ ಆಫ್ ಲಾರ್ಡ್ಸ್ ಪ್ರವೇಶಿಸಿದರು. ಆದರೂ ಲಾರ್ಡ್ ಆಗಿರುವುದೂ ಅವರಿಗೆ ಸಾಕಾಗಲಿಲ್ಲ. ಪ್ರಧಾನಿಯಾಗಬೇಕೆಂಬ ಹಳೆಯ ಕನಸು ಇನ್ನೂ ಸತ್ತಿರಲಿಲ್ಲ.

1999ರಲ್ಲಿ ಆ ಕನಸಿಗೆ ಮತ್ತೊಂದು ರೂಪ ಸಿಕ್ಕಿತು. ಹೊಸದಾಗಿ ಸೃಷ್ಟಿಯಾಗಲಿದ್ದ ಲಂಡನ್ ನಗರದ ನೇರವಾಗಿ ಚುನಾಯಿತ ಮೇಯರ್ ಹುದ್ದೆಗೆ ಕನ್ಸರ್ವೇಟಿವ್ ಪಕ್ಷದ ಅಭ್ಯರ್ಥಿಯಾಗಲು ಆರ್ಚರ್ ಮುಂದಾದರು. ಪಕ್ಷದ ಸದಸ್ಯರ ಬ್ಯಾಲೆಟ್‌ನಲ್ಲಿ ಗೆದ್ದು ಅಭ್ಯರ್ಥಿಯೂ ಆದರು. ಮಾರ್ಗರೆಟ್ ಥ್ಯಾಚರ್ ಕೂಡ ಅವರ ಅಭ್ಯರ್ಥಿತ್ವವನ್ನು ಬಹಿರಂಗವಾಗಿ ಬೆಂಬಲಿಸಿದ್ದರು. ಇದು ಕೇವಲ ಮತ್ತೊಂದು ಚುನಾವಣೆ ಆಗಿರಲಿಲ್ಲ. ಅದು ಆರ್ಚರ್ ಅವರ ರಾಜಕೀಯ ಪುನರಾಗಮನದ ಶಿಖರವಾಗಬಹುದಾಗಿತ್ತು.
ಆದರೆ ಅವರ ಬದುಕಿನ ಅತ್ಯಂತ ದೊಡ್ಡ ಐರನಿ ಕೂಡ ಅಲ್ಲಿಯೇ ಕಾದಿತ್ತು.

jeffrey archer2

ಒಮ್ಮೆ ತಮ್ಮ ರಾಜಕೀಯ ಬದುಕನ್ನು ನಾಶಮಾಡಬಹುದಾಗಿದ್ದ ಸುಳ್ಳನ್ನು ನ್ಯಾಯಾಲಯದಲ್ಲಿ ಗೆಲುವಾಗಿ ಪರಿವರ್ತಿಸಿಕೊಂಡಿದ್ದ ಆರ್ಚರ್, ಹನ್ನೆರಡು ವರ್ಷಗಳ ನಂತರ ಅದೇ ಸುಳ್ಳಿನ ಕಾರಣದಿಂದ ಲಂಡನ್ ಮೇಯರ್ ಆಗುವ ಕನಸನ್ನೇ ಕಳೆದುಕೊಂಡರು. ಹಳೆಯ ಸ್ನೇಹಿತ ಟೆಡ್ ಫ್ರಾನ್ಸಿಸ್ ಅವರು 1987ರ ಪ್ರಕರಣದಲ್ಲಿ ಆರ್ಚರ್ ಕೇಳಿಕೊಂಡಿದ್ದ ಸುಳ್ಳು ಅಲಿಬಿ(alibi)ಯನ್ನು ಬಹಿರಂಗಪಡಿಸಿದಾಗ, ಆರ್ಚರ್ ಮೇಯರ್ ರೇಸ್‌ನಿಂದ ಹೊರಬರಬೇಕಾಯಿತು.

ಪ್ರಧಾನಿಯಾಗುವ ಕನಸಿನಿಂದ ಆರಂಭವಾದ ರಾಜಕೀಯ ಪಯಣ, ಲಂಡನ್‌ನ ಮೊದಲ ಚುನಾಯಿತ ಮೇಯರ್ ಆಗುವ ಅವಕಾಶದ ಬಾಗಿಲಲ್ಲೇ ಮತ್ತೊಮ್ಮೆ ಕುಸಿಯಿತು. ಆದರೆ ಜೆಫ್ರಿ ಆರ್ಚರ್ ಅವರ ವಿಶೇಷತೆ ಏನೆಂದರೆ, ಅವರು ಹಿನ್ನಡೆಗಳನ್ನು ಎಂದಿಗೂ ಕೊನೆಯೆಂದು ಪರಿಗಣಿಸಲಿಲ್ಲ. ಪ್ರತಿ ಸೋಲನ್ನೂ ಮತ್ತೊಂದು ಪುನರಾಗಮನದ ಮುನ್ನುಡಿಯನ್ನಾಗಿ ಮಾಡಿಕೊಳ್ಳುವುದು ಅವರಿಗೆ ಚೆನ್ನಾಗಿ ಗೊತ್ತಿತ್ತು.

ಇದಾಗಿ ವರ್ಷಗಳ ನಂತರ ಅರ್ಚರ್ ಬರೆದ The Clifton Chronicles ಕಾದಂಬರಿ ಸರಣಿಯಲ್ಲಿ, ಈ ಸಾಲು ಬರುತ್ತದೆ, “Courtship is a waste of time, which is why prostitutes are so popular.” (ಪ್ರೀತಿ-ಪ್ರಣಯದಿಂದ ಸಮಯ ಹಾಳು. ಅದಕ್ಕೇ ವೇಶ್ಯೆಯರಿಗೆ ಬೇಡಿಕೆ ಹೆಚ್ಚು).

ಇದನ್ನು ಓದಿದ್ದೀರಾ?: SIR ಫಾರ್ಮ್-7 ಹಗರಣ | ಬದುಕಿದ್ದವರನ್ನೇ ‘ಸತ್ತಿದ್ದಾರೆ’ ಎಂದು ನಕಲಿ‌ ದಾಖಲೆ‌ ಕೊಟ್ಟ ಯತ್ನಾಳ್; ಸಿಐಡಿ ತನಿಖೆಗೆ ಜಾಗೃತ ಕರ್ನಾಟಕ ಆಗ್ರಹ

”ನಾನು ಬರಹಗಾರನಲ್ಲ, ಕಥೆಗಾರ.” ಜೆಫ್ರಿ ಆರ್ಚರ್ ತನ್ನನ್ನು ತಾನು ಹೀಗೆ ಕರೆದುಕೊಳ್ಳುತ್ತಿದ್ದರು. ಅದು ಕೇವಲ ವಿನಯದ ಮಾತಲ್ಲ. ತನ್ನ ಸಾಹಿತ್ಯದ ಬಗ್ಗೆ ಆತ ಹೊಂದಿದ್ದ ನಿಲುವೇ ಅದಾಗಿತ್ತು. ಗಂಭೀರ ಸಾಹಿತ್ಯದ ಮಾನದಂಡಗಳನ್ನು ಹಿಡಿದುಕೊಂಡಿದ್ದ ಅನೇಕರು ಆರ್ಚರ್‌ನನ್ನು ಅಷ್ಟೇ ಗಂಭೀರವಾಗಿ ಪರಿಗಣಿಸಲಿಲ್ಲ. ಅವರ ಪಾಲಿಗೆ ಆತ ಸಾಹಿತಿ ಅಲ್ಲ; ಜನಪ್ರಿಯ ಕಥೆಗಳನ್ನು ಬರೆದು ಕೋಟ್ಯಂತರ ಪ್ರತಿಗಳನ್ನು ಮಾರುವ ಕಮರ್ಷಿಯಲ್ ರೈಟರ್. ಆದರೆ ಒಂದು ಸಣ್ಣ ಸಮಸ್ಯೆ ಇತ್ತು. ಆತನನ್ನು ಕೀಳಾಗಿ ನೋಡುತ್ತಿದ್ದವರ ಪುಸ್ತಕಗಳನ್ನು ಓದುವವರಿಗಿಂತ, ಆರ್ಚರ್‌ನ ಪುಸ್ತಕಗಳನ್ನು ಓದುವವರ ಸಂಖ್ಯೆ ಹೆಚ್ಚಿತ್ತು. ಅವರ ಸಾಹಿತ್ಯಕ ಪ್ರತಿಷ್ಠೆ ಆತನಿಗಿಂತ ಹೆಚ್ಚಿರಬಹುದು; ಆದರೆ ಜನಪ್ರಿಯತೆ ಮತ್ತು ಸಂಪತ್ತಿನಲ್ಲಿ ಅವರನ್ನು ಆರ್ಚರ್ ಬಹಳ ಹಿಂದೆಯೇ ದಾಟಿದ್ದರು.

ಬಹುಶಃ ಅದಕ್ಕೇ ಆತ ಅವರನ್ನು ಇನ್ನಷ್ಟು ಕೆರಳಿಸುತ್ತಿದ್ದ. ಆರ್ಚರ್‌ಗೆ ಅದು ಗೊತ್ತಿತ್ತು. ಅದನ್ನು ಆತ ಆನಂದಿಸುತ್ತಲೂ ಇದ್ದ.

1990ರ ದಶಕದ ಬೆಂಗಳೂರಿನಲ್ಲಿ ಪುಸ್ತಕ ಓದುವವರ ಪೈಕಿ ಜೆಫ್ರಿ ಆರ್ಚರ್ ಓದಿಲ್ಲ ಎಂದು ಹೇಳುವವರು ಸಿಗುವುದು ಕಷ್ಟ. ಇವನ್ನೆಲ್ಲ ‘ಗಂಭೀರ ಸಾಹಿತ್ಯ’ ಎನ್ನುವವರು ಬಹುಶಃ ಒಪ್ಪಿಕೊಳ್ಳುತ್ತಿರಲಿಲ್ಲ. ‘ಏರ್‍‌ಪೋರ್ಟ್ ಆಥರ್‍ಸ್’ ಎಂದು ಕರೆಸಿಕೊಳ್ಳುತ್ತಿದ್ದ (ಸಾಹಿತಿಗಳ ಮೂದಲಿಕೆ ಇದು) ಜೆಫ್ರಿ ಆರ್ಚರ್, ಸಿಡ್ನಿ ಶೆಲ್ಡನ್, ರಾಬರ್ಟ್ ಲುಡ್ಲಮ್, ಹೆರಾಲ್ಡ್ ರಾಬಿನ್ಸ್ ಇವರುಗಳ ಕಾದಂಬರಿಗಳೇ ಹೆಚ್ಚು ಪೈರಸಿ ಆಗುತ್ತಿದದ್ದು. ಆದರೆ ಓದುಗರಿಗೆ ಅದರ ಬಗ್ಗೆ ಯಾವ ತಕರಾರೂ ಇರಲಿಲ್ಲ. ಇವತ್ತು ಜನಪ್ರಿಯ ಸಿನಿಮಾಗಳು ಬಿಡುಗಡೆಯಾದ ತಕ್ಷಣ ಪೈರಸಿ ಆಗಿ ಎಲ್ಲೆಡೆ ಸಿಗುತ್ತವಲ್ಲ? ಆಗ ಇದೇ ರೀತಿ ಜನಪ್ರಿಯ ಲೇಖಕರ ಪುಸ್ತಕಗಳ ಪೈರಸಿ ಪ್ರಿಂಟ್‌ಗಳು ಬರುತ್ತಿದ್ದವು; ಕಡಿಮೆ ಬೆಲೆ, ಕೈಗಂಟುವ ಮಸಿ, ಬಸ್ಸೋ, ರೈಲೋ ಪ್ರಯಾಣ ಮುಗಿಸೋ ಅಷ್ಟರಲ್ಲಿ ಮುಗಿಯುವ ಕಥೆ ಮತ್ತು ಪುಸ್ತಕದ ಆಯಸ್ಸು!

ಇವು ಅಂಗಡಿಯಲ್ಲಿ ಸಿಗದಿದ್ದರೂ ಪರವಾಗಿಲ್ಲ; ರಸ್ತೆಯಲ್ಲಿ ಸಿಗುತ್ತಿದ್ದವು, ತಳ್ಳುಗಾಡಿಗಳ ಮೇಲೂ ಇರುತ್ತಿದ್ದವು. ಪುಸ್ತಕ ಹೊಸದೋ ಹಳೆಯದೋ, ಪೈರಸಿಯೋ ಎಂಬುದಕ್ಕಿಂತ, ‘ಓದಿದ್ದೀಯಾ?’ ಎಂಬುದೇ ಮುಖ್ಯವಾಗಿತ್ತು.

jeffrey archer4

ಬರೆಯುತ್ತಲೇ ಮುಗಿದ ಬದುಕು

ಜೆಫ್ರಿ ಆರ್ಚರ್ ಅವರ ಬದುಕಿಗೆ ಕೊನೆಯ ತಿರುವು ಕೂಡ ಅವರದೇ ಕಾದಂಬರಿಯೊಂದರಿಂದ ಬಂದಂತೆ ಭಾಸವಾಗುತ್ತದೆ. 86ರ ವಯಸ್ಸಿನಲ್ಲೂ ಬರೆಯುವುದನ್ನು ನಿಲ್ಲಿಸಿರಲಿಲ್ಲ. Adam & Eve ಕಾದಂಬರಿಯನ್ನು ಮುಗಿಸಿದ ಬಳಿಕ, ಇದೇ ತಮ್ಮ ಕೊನೆಯ ಕಾದಂಬರಿ ಎಂದು ಘೋಷಿಸಿದ್ದರು. ”ಇದಕ್ಕಿಂತ ಉತ್ತಮವಾದದ್ದನ್ನು ಮತ್ತೆ ಬರೆಯಲು ಸಾಧ್ಯವಿಲ್ಲ” ಎಂಬ ಭಾವವನ್ನೂ ವ್ಯಕ್ತಪಡಿಸಿದ್ದರು. ಆರು ದಶಕಗಳ ಬರವಣಿಗೆಯ ಪಯಣಕ್ಕೆ ತೆರೆ ಎಳೆಯಲು ಅವರು ಸಿದ್ಧರಾಗಿದ್ದರು. ಆದರೆ ವಿಧಿಗೆ ಆ ಅಂತ್ಯವೂ ಸಾಲಲಿಲ್ಲ.

ಅಕ್ಟೋಬರ್ 5ರಂದು, ತಮ್ಮ ಮನೆಯಲ್ಲಿ ಎರಡು ಬರವಣಿಗೆ ಅವಧಿಗಳ ನಡುವಿನ ವಿರಾಮದಲ್ಲಿ, ಜೆಫ್ರಿ ಆರ್ಚರ್ ಹಠಾತ್ ಮತ್ತು ಶಾಂತಿಯುತವಾಗಿ ಕೊನೆಯುಸಿರೆಳೆದರು. ಮರುದಿನ, ಅಕ್ಟೋಬರ್ 6ರಂದು, ಅವರು ಕೊನೆಯ ಕಾದಂಬರಿ ಎಂದು ಘೋಷಿಸಿದ್ದ Adam & Eve ವಿಶ್ವದಾದ್ಯಂತ ಬಿಡುಗಡೆಯಾಯಿತು.

ಒಬ್ಬ ಕಥೆಗಾರನಿಗೆ ಇದಕ್ಕಿಂತ ಆರ್ಚರ್‌ಸಹಜವಾದ ಅಂತ್ಯವನ್ನು ಕಲ್ಪಿಸುವುದು ಕಷ್ಟ. ತಮ್ಮ ಬದುಕಿನ ಕೊನೆಯ ದಿನವೂ ಅವರು ಬರೆಯುತ್ತಿದ್ದರು. ತಮ್ಮ ಕೊನೆಯ ಕಾದಂಬರಿ ಬಿಡುಗಡೆಯಾಗುವುದಕ್ಕೆ ಕೆಲವೇ ಗಂಟೆಗಳ ಮೊದಲು ಅವರ ಬದುಕಿನ ಕಥೆ ಮುಗಿಯಿತು. ಅವರು ಬರೆಯುತ್ತಿದ್ದ ಕಥೆಗೆ ಮಾತ್ರ ಅಂತ್ಯ ಬಾಕಿಯಿತ್ತು. ಬರಹಗಾರನ ಬದುಕಿಗೆ ಅಲ್ಲ.

S shyamprasad
ಎಸ್. ಶ್ಯಾಮ್‌ಪ್ರಸಾದ್
+ posts

ಪತ್ರಕರ್ತರು, ಲೇಖಕರು

ಪೋಸ್ಟ್ ಹಂಚಿಕೊಳ್ಳಿ:

ಎಸ್. ಶ್ಯಾಮ್‌ಪ್ರಸಾದ್
ಎಸ್. ಶ್ಯಾಮ್‌ಪ್ರಸಾದ್
ಪತ್ರಕರ್ತರು, ಲೇಖಕರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗವು ತಾನೇ ಹಾಕಿಕೊಂಡ ಗಂಟುಗಳನ್ನು ಬಿಡಿಸಿಕೊಳ್ಳಬಲ್ಲದೇ? ಇದೇ ಈಗಿನ ಪ್ರಶ್ನೆ

SIR ನಡೆಸುವ ನಿರ್ಧಾರ ಸರ್ವಾನುಮತದಿಂದ ಕೂಡಿತ್ತು ಎಂದು ಜನ ನಂಬಬೇಕಾದರೆ, ಆಯೋಗವು...

ಶಿವಮೊಗ್ಗ | ಚಾಲಕನ ಬ್ಯಾಂಕ್‌ ಖಾತೆಗೆ ಸೈಬರ್ ಕನ್ನ; ರೂ. 4 ಲಕ್ಷ ವಂಚನೆ!

ಶಿವಮೊಗ್ಗದಲ್ಲಿ ಡ್ರೈವರ್​ ಒಬ್ಬರ ವೈಯಕ್ತಿಕ ಮಾಹಿತಿ ಪಡೆದು ಸೈಬರ್​ ವಂಚಕರು ಲಕ್ಷಾಂತರ...

ಆಕಾಶವಾಣಿ ಭವನಕ್ಕೆ ಬಲವಂತದ ಪ್ರವೇಶ ಆರೋಪ: ರಾಹುಲ್, ಪ್ರಿಯಾಂಕಾ ವಿರುದ್ಧ FIR

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧದ ಪ್ರತಿಪಕ್ಷಗಳ ಪ್ರತಿಭಟನೆ ವೇಳೆ...

ವಿಜಯಪುರ | ‘ಜಲಜೀವನ್ ಮಿಷನ್’ ಕಾಮಗಾರಿ ಪೂರ್ಣಗೊಳಿಸಲು ಡಿಸೆಂಬರ್‌ ಗಡುವು

ಗ್ರಾಮೀಣ ಭಾಗದಲ್ಲಿ ಬೇಸಿಗೆ ಸೇರಿದಂತೆ ಯಾವುದೇ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ...