ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವು ನಮ್ಮನ್ನು ತಟ್ಟದಿದ್ದರೆ, ನಮ್ಮ ಪ್ರಗತಿಯ ಬಗ್ಗೆ ಮತ್ತೊಮ್ಮೆ ಯೋಚಿಸಬೇಕಾಗುತ್ತದೆ. ಮತ್ತೊಬ್ಬರ ಹಸಿವು ನಮ್ಮ ಮನಸ್ಸಿನಲ್ಲಿ ಸಂವೇದನೆ ಮೂಡಿಸದಿದ್ದರೆ, ನಮ್ಮ ಮಾನವೀಯತೆಯ ಸ್ವರೂಪವನ್ನೇ ಪರಿಶೀಲಿಸಬೇಕಾಗುತ್ತದೆ.
ಆಧುನಿಕ ನಗರಗಳೆಂದರೆ ನೆನಪಾಗುವುದು ಸಿಲಿಕಾನ್ ಸಿಟಿ, ಮಾಹಿತಿ ತಂತ್ರಜ್ಞಾನ, ಆಕಾಶದೆತ್ತರದ ಕಟ್ಟಡಗಳು, ಐಷಾರಾಮಿ ಹೋಟೆಲ್ಗಳು, ಶಾಪಿಂಗ್ ಮಾಲ್ಗಳು, ವಾಹನಗಳ ಸಂಚಾರ ಮತ್ತು ಆಧುನಿಕ ಜೀವನಶೈಲಿ. ದೇಶದ ವಿವಿಧ ಭಾಗಗಳಿಂದ ಬದುಕು ಕಟ್ಟಿಕೊಳ್ಳುವ ಕನಸು ಹೊತ್ತು ಬರುವ ಲಕ್ಷಾಂತರ ಜನರಿಗೆ ಇಂತಹ ನಗರಗಳು ಉದ್ಯೋಗ ಮತ್ತು ಅವಕಾಶಗಳನ್ನು ಒದಗಿಸಿವೆ. ಕೆಲವರಿಗೆ ಇವು ಕನಸುಗಳನ್ನು ನನಸಾಗಿಸಿಕೊಳ್ಳುವ ನೆಲವಾದರೆ, ಮತ್ತೆ ಕೆಲವರಿಗೆ ಎರಡು ಹೊತ್ತಿನ ಊಟಕ್ಕಾಗಿ ಪ್ರತಿದಿನ ಬೆವರು ಸುರಿಸಬೇಕಾದ ಅನಿವಾರ್ಯತೆಯ ತಾಣಗಳಾಗಿವೆ.
ಒಂದು ಕಡೆ ಸಂಪತ್ತು ಮತ್ತು ಸಮೃದ್ಧಿ ಕಣ್ಣಿಗೆ ಬೀಳುತ್ತವೆ. ಮತ್ತೊಂದು ಕಡೆ ಅದೇ ನಗರದ ಬೀದಿಗಳಲ್ಲಿ ಹಸಿದ ಹೊಟ್ಟೆಗಾಗಿ ದುಡಿಯುವವರು, ಸಣ್ಣಪುಟ್ಟ ವಸ್ತುಗಳನ್ನು ಮಾರುವವರು, ತ್ಯಾಜ್ಯದಲ್ಲಿ ಬದುಕಿನ ಆಸರೆ ಹುಡುಕುವವರು ಮತ್ತು ಭಿಕ್ಷೆ ಬೇಡುವವರು ಕಾಣಿಸುತ್ತಾರೆ. ನಗರದ ಒಂದು ಮುಖ ಅಭಿವೃದ್ಧಿಯ ಕಥೆ ಹೇಳುತ್ತಿದ್ದರೆ, ಮತ್ತೊಂದು ಮುಖ ಹಸಿವು, ಬಡತನ ಮತ್ತು ಅನಿಶ್ಚಿತ ಬದುಕಿನ ವಾಸ್ತವವನ್ನು ತೆರೆದಿಡುತ್ತದೆ.
ಇಷ್ಟೊಂದು ಸಂಪತ್ತು ಸೃಷ್ಟಿಯಾಗುತ್ತಿರುವ ನಗರಗಳಲ್ಲಿ, ದುಡಿಯುವ ಜನರ ಬದುಕಿನಲ್ಲಿಯೇ ಇಷ್ಟೊಂದು ಅಸಮಾನತೆಗಳು ಏಕೆ ಉಳಿದಿವೆ ಎಂಬ ಪ್ರಶ್ನೆ ನಮ್ಮ ಅಭಿವೃದ್ಧಿಯ ಮಾದರಿ ಮತ್ತು ಸಾಮಾಜಿಕ ವ್ಯವಸ್ಥೆಯ ಕುರಿತು ಗಂಭೀರವಾಗಿ ಆಲೋಚಿಸುವಂತೆ ಮಾಡುತ್ತದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಾನು ಕಣ್ಣಾರೆ ಕಂಡ ಕೆಲವು ದೃಶ್ಯಗಳು ಈ ಚಿಂತನೆಗೆ ಕಾರಣವಾದವು. ‘ಅವು ಕೇವಲ ಒಂದು ನಗರದ ಚಿತ್ರಣವಲ್ಲ’. ದೇಶದ ಅನೇಕ ನಗರಗಳಲ್ಲಿ ಪ್ರತಿದಿನವೂ ನಮ್ಮ ಕಣ್ಣೆದುರು ನಡೆಯುತ್ತಿರುವ ಬದುಕಿನ ವೈರುಧ್ಯಗಳ ಪ್ರತಿಬಿಂಬವೂ ಹೌದು.
ಬಿರಿಯಾನಿ ಹೌಸ್ನ ಮೆಟ್ಟಿಲುಗಳ ಮೇಲೊಂದು ಬಾಲ್ಯ
ಇತ್ತೀಚೆಗೆ, ಬೆಂಗಳೂರಿನ ಪ್ರಸಿದ್ಧ ಬಿರಿಯಾನಿ ಹೌಸ್ಗೆ ಹೋಗಿದ್ದಾಗ ನನ್ನ ಕಣ್ಣಿಗೆ ಬಿದ್ದ ದೃಶ್ಯ ಮನಸ್ಸನ್ನು ಗಂಭೀರವಾಗಿ ಆಲೋಚಿಸುವಂತೆ ಮಾಡಿತು. ಬಿರಿಯಾನಿ ಸವಿಯಲು ಯುವಕ-ಯುವತಿಯರು ಸಾಮಾಜಿಕ ಜಾಲತಾಣಗಳಲ್ಲಿ ಹೋಟೆಲ್ಗಳ ವಿಳಾಸ ಹುಡುಕಿ, ಮೆಟ್ರೋ, ಆಟೋ ಅಥವಾ ಕ್ಯಾಬ್ಗಳಲ್ಲಿ ಪ್ರಯಾಣಿಸಿ ತಮಗಿಷ್ಟವಾದ ಆಹಾರವನ್ನು ಸವಿಯಲು ಬರುತ್ತಾರೆ. ಇತ್ತೀಚಿನ ದಿನಗಳಲ್ಲಿ ಇಷ್ಟದ ಆಹಾರವನ್ನು ಹುಡುಕಿಕೊಂಡು ಹೋಗುವುದು ಯುವಜನರ ಜೀವನಶೈಲಿಯ ಒಂದು ಭಾಗವಾಗಿದೆ. ತಮ್ಮ ದುಡಿಮೆಯ ಹಣವನ್ನಾಗಲಿ, ತಂದೆ-ತಾಯಿಯ ಹಣವನ್ನಾಗಲಿ ಖರ್ಚು ಮಾಡಿ ಇಷ್ಟದ ಆಹಾರ ಸವಿಯುವುದರಲ್ಲಿ ತಪ್ಪಿಲ್ಲ. ಪ್ರತಿಯೊಬ್ಬರಿಗೂ ತಮ್ಮ ಹಣವನ್ನು ತಮ್ಮ ಆಯ್ಕೆಯಂತೆ ಖರ್ಚು ಮಾಡುವ ಸ್ವಾತಂತ್ರ್ಯವಿದೆ.
ಆದರೆ, ಆ ಹೋಟೆಲ್ನ ಮೆಟ್ಟಿಲುಗಳ ಮೇಲೆ ಸುಮಾರು ಎಂಟು ವರ್ಷದ ಬಾಲಕನೊಬ್ಬ ಕೈಯಲ್ಲಿ ಪೆನ್ನುಗಳನ್ನು ಹಿಡಿದು ಮಾರಾಟ ಮಾಡಲು ನಿಂತಿದ್ದ. ಒಳಗೆ ಯುವಕ-ಯುವತಿಯರು ಆಹಾರ ಸವಿಯುತ್ತಾ, ಹರಟೆ ಹೊಡೆಯುತ್ತಾ, ಮೊಬೈಲ್ನಲ್ಲಿ ಛಾಯಾಚಿತ್ರಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದರು. ಹೊರಗೆ ಅದೇ ಹೋಟೆಲ್ನ ಮೆಟ್ಟಿಲುಗಳ ಮೇಲೆ ನಿಂತಿದ್ದ ಬಾಲಕ, ದಾರಿಹೋಕರನ್ನು ಉದ್ದೇಶಿಸಿ, “ಸರ್, ಸರ್, ಪೆನ್ನು ತಗೊಳ್ಳಿ ಸರ್. ಇಪ್ಪತ್ತು ರೂಪಾಯಿಗೆ ಎರಡು ಪೆನ್ನು ತಗೊಳ್ಳಿ ಸರ್” ಎಂದು ವಿನಮ್ರವಾಗಿ ಕೇಳುತ್ತಿದ್ದ.
ಒಂದೇ ಸ್ಥಳದಲ್ಲಿ ಕಂಡ ಈ ಎರಡು ದೃಶ್ಯಗಳ ಹಿಂದಿರುವ ಬದುಕಿನ ವಾಸ್ತವಗಳು ಎಷ್ಟು ಭಿನ್ನವಾಗಿವೆ!
ಆ ಬಾಲಕನ ಕುಟುಂಬದ ಪರಿಸ್ಥಿತಿ ಏನು, ಅವನು ಶಾಲೆಗೆ ಹೋಗುತ್ತಿದ್ದಾನೆಯೇ, ಯಾವ ಅನಿವಾರ್ಯತೆ ಅವನನ್ನು ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಬೀದಿಯಲ್ಲಿ ವ್ಯಾಪಾರ ಮಾಡುವಂತೆ ಮಾಡಿದೆ ಎಂಬುದು ನನಗೆ ತಿಳಿದಿಲ್ಲ. ಆದರೆ, ಆ ದೃಶ್ಯ ಮಾತ್ರ ನಮ್ಮ ಸಾಮಾಜಿಕ ವ್ಯವಸ್ಥೆಯ ಕುರಿತು ಯೋಚಿಸುವಂತೆ ಮಾಡಿತು.
ಕೆಲವರು ಅವನಿಂದ ಪೆನ್ನುಗಳನ್ನು ಖರೀದಿಸಿದರೆ, ಮತ್ತೆ ಕೆಲವರು “ಇಪ್ಪತ್ತು ರೂಪಾಯಿಗೆ ಮೂರು ಕೊಡು, ನಾಲ್ಕು ಕೊಡು” ಎಂದು ಚೌಕಾಸಿ ಮಾಡುತ್ತಿದ್ದರು. ಇನ್ನು ಕೆಲವರು ತಮ್ಮ ಬಳಿ ಪೆನ್ನು ಇದೆ ಎಂದು ಹೇಳಿ ಮುಂದೆ ಸಾಗುತ್ತಿದ್ದರು.
ದೊಡ್ಡ ಅಂಗಡಿಗಳಲ್ಲಿ ಸಾವಿರಾರು ರೂಪಾಯಿಗಳ ವಸ್ತುಗಳನ್ನು ಖರೀದಿಸುವಾಗ ಬೆಲೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ನಾವು, ಬೀದಿಯಲ್ಲಿ ಸಣ್ಣಪುಟ್ಟ ವಸ್ತುಗಳನ್ನು ಮಾರುವವರ ಬಳಿ ಮಾತ್ರ ಏಕೆ ಹೆಚ್ಚು ಚೌಕಾಸಿ ಮಾಡುತ್ತೇವೆ?
ಬೆಲೆ ಕೇಳುವುದು ಗ್ರಾಹಕರ ಹಕ್ಕು. ಆದರೆ, ಚೌಕಾಸಿ ಮಾಡುವಾಗ ಮತ್ತೊಬ್ಬರ ಶ್ರಮ ಮತ್ತು ಬದುಕಿನ ಅನಿವಾರ್ಯತೆಯನ್ನು ಅರ್ಥಮಾಡಿಕೊಳ್ಳುವ ಮನೋಭಾವವೂ ಇರಬೇಕಲ್ಲವೇ?
ಆ ಬಾಲಕನ ಕೈಯಲ್ಲಿದ್ದ ಪೆನ್ನುಗಳು ಕೇವಲ ಮಾರಾಟದ ವಸ್ತುಗಳಾಗಿರಲಿಲ್ಲ; ಅವು ಶಿಕ್ಷಣ ಪಡೆಯಬೇಕಾದ ವಯಸ್ಸಿನಲ್ಲಿ ದುಡಿಮೆಯ ಅನಿವಾರ್ಯತೆಗೆ ಸಿಲುಕಿರುವ ಬಾಲ್ಯದ ಸಂಕೇತಗಳಾಗಿದ್ದವು. ಮಕ್ಕಳ ಕೈಯಲ್ಲಿ ಪುಸ್ತಕಗಳಿರಬೇಕಾದ ವಯಸ್ಸಿನಲ್ಲಿ ಅವರು ಹೊಟ್ಟೆಪಾಡಿಗಾಗಿ ಬೀದಿಯಲ್ಲಿ ವಸ್ತುಗಳನ್ನು ಮಾರುವ ಪರಿಸ್ಥಿತಿ ನಿರ್ಮಾಣವಾಗಿರುವುದು ಸಮಾಜದ ಆತ್ಮಸಾಕ್ಷಿಗೆ ಎದುರಾಗುವ ಪ್ರಶ್ನೆಯಾಗಿದೆ.
ರಸ್ತೆಯೇ ಅಂಗಡಿ, ಜನಸಂದಣಿಯೇ ಗ್ರಾಹಕರು
ಸಿಲಿಕಾನ್ ಸಿಟಿಗಳ ಡಾಮರು ರಸ್ತೆಗಳುದ್ದಕ್ಕೂ, ವಾಹನಗಳ ದಟ್ಟಣೆಯ ನಡುವೆ ಸಣ್ಣಪುಟ್ಟ ವಸ್ತುಗಳನ್ನು ಮಾರುತ್ತಾ ಬದುಕು ಕಟ್ಟಿಕೊಳ್ಳುವ ಅನೇಕ ಜನರನ್ನು ನಾವು ಕಾಣುತ್ತೇವೆ.
ಕೆಲವರು ಹುರಿದ ಶೇಂಗಾ, ಕಡಲೆಕಾಯಿ ಮಾರುತ್ತಾರೆ. ಇನ್ನು ಕೆಲವರು ಬಣ್ಣಬಣ್ಣದ ಬಲೂನುಗಳನ್ನು ಹಿಡಿದು ಮಕ್ಕಳನ್ನು ಆಕರ್ಷಿಸುತ್ತಾರೆ. ಬಾಂಬೆ ಮಿಠಾಯಿ, ಗಿರಿಗಿಟ್ಟಲೆ ಮತ್ತು ಚಿಕ್ಕ ಮಕ್ಕಳ ಆಟಿಕೆಗಳನ್ನು ಮಾರುವವರು ವಾಹನ ಸವಾರರು ಹಾಗೂ ಪಾದಚಾರಿಗಳನ್ನು ನಿರೀಕ್ಷಿಸುತ್ತಾ ತಮ್ಮ ವ್ಯಾಪಾರದಲ್ಲಿ ತೊಡಗಿರುತ್ತಾರೆ. ಅವರ ಪಾಲಿಗೆ ರಸ್ತೆಯೇ ಅಂಗಡಿ; ಜನಸಂದಣಿಯೇ ಗ್ರಾಹಕರ ನಿರೀಕ್ಷೆ.
ಮಕ್ಕಳಿಗೆ ಬಲೂನು ಅಥವಾ ಆಟಿಕೆ ಖರೀದಿಸುವುದು ಕ್ಷಣಿಕ ಸಂತೋಷದ ಸಂಗತಿಯಾಗಿರಬಹುದು. ಆದರೆ, ಅದನ್ನು ಮಾರುವ ವ್ಯಕ್ತಿಗೆ ಅದೇ ವಸ್ತು ದಿನದ ಆದಾಯದ ಮೂಲವಾಗಿರುತ್ತದೆ. ವ್ಯಾಪಾರವಾದರೆ ಮಾತ್ರ ಮನೆಗೆ ಹಣ ತೆಗೆದುಕೊಂಡು ಹೋಗಲು ಸಾಧ್ಯ. ಬೆಳಗ್ಗಿನಿಂದ ಸಂಜೆಯವರೆಗೆ ಬಿಸಿಲಿನಲ್ಲಿ ನಿಂತರೂ ಆದಾಯ ಖಚಿತವಿಲ್ಲ. ಮಳೆ ಬಂದರೆ ಸರಕು ಹಾಳಾಗಬಹುದು. ಜನಸಂದಣಿ ಕಡಿಮೆಯಾದರೆ ವ್ಯಾಪಾರ ಕುಸಿಯಬಹುದು. ಮಾರಾಟವಾಗದೆ ಉಳಿದ ವಸ್ತುಗಳು ನಷ್ಟಕ್ಕೆ ಕಾರಣವಾಗಬಹುದು. ಇಂತಹ ಅನಿಶ್ಚಿತತೆಯ ನಡುವೆ ಅವರು ಬದುಕಿನ ಬಂಡಿಯನ್ನು ಎಳೆಯುತ್ತಾರೆ.
ಒಂದು ಬಲೂನಿನ ಬೆಲೆ ಕಡಿಮೆ ಮಾಡಿಸಿಕೊಳ್ಳುವಾಗಲೋ, ಒಂದು ಪೊಟ್ಟಣ ಕಡಲೆಕಾಯಿ ಖರೀದಿಸುವಾಗಲೋ, ಮಕ್ಕಳ ಆಟಿಕೆಗೆ ಚೌಕಾಸಿ ಮಾಡುವಾಗಲೋ ಅದನ್ನು ಮಾರುವ ವ್ಯಕ್ತಿಯ ಶ್ರಮವನ್ನೂ ನೆನಪಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಹೆಚ್ಚಿನ ಹಣವನ್ನೇ ಖರ್ಚು ಮಾಡಬೇಕೆಂಬುದು ಇಲ್ಲಿನ ಆಶಯವಲ್ಲ. ಆದರೆ, ಸಣ್ಣ ವ್ಯಾಪಾರಿಗಳ ಶ್ರಮಕ್ಕೆ ಗೌರವ ನೀಡಿ, ಸಾಧ್ಯವಾದಷ್ಟು ನ್ಯಾಯಯುತವಾಗಿ ವ್ಯವಹರಿಸುವ ಮನೋಭಾವ ನಮ್ಮದಾಗಬೇಕು.
ರಸ್ತೆಬದಿಯಲ್ಲಿ ವ್ಯಾಪಾರ ಮಾಡುವ ಪ್ರತಿಯೊಬ್ಬರ ಬದುಕೂ ಒಂದೇ ರೀತಿಯದ್ದಲ್ಲ. ಕೆಲವರು ಸ್ವಯಂ ಉದ್ಯೋಗದ ಭಾಗವಾಗಿ ವ್ಯಾಪಾರ ಮಾಡಬಹುದು; ಮತ್ತೆ ಕೆಲವರು ತೀವ್ರ ಆರ್ಥಿಕ ಸಂಕಷ್ಟದಿಂದ ಈ ಕೆಲಸಕ್ಕೆ ಬಂದಿರಬಹುದು. ಅವರ ಬದುಕಿನ ಪರಿಸ್ಥಿತಿಗಳು ಏನೇ ಇರಲಿ, ಅವರ ದುಡಿಮೆಗೆ ಗೌರವ ಮತ್ತು ವ್ಯಾಪಾರಕ್ಕೆ ಸೂಕ್ತ ಅವಕಾಶ ದೊರೆಯುವುದು ಮುಖ್ಯ.
ಹೂವು ಕಟ್ಟುವ ಕೈಗಳ ಬದುಕು
ವಿದ್ಯುತ್ ಕಂಬಕ್ಕೆ ಬೆನ್ನು ಕೊಟ್ಟು ಹೂವು ಕಟ್ಟುತ್ತಿದ್ದ ಮಹಿಳೆಯೊಬ್ಬಳು ನನ್ನ ಗಮನ ಸೆಳೆದಳು. ಹೂವುಗಳನ್ನು ದಾರದಲ್ಲಿ ಒಂದೊಂದಾಗಿ ಪೋಣಿಸುತ್ತಾ ಸುಂದರವಾದ ಮಾಲೆಗಳನ್ನು ರೂಪಿಸುತ್ತಿದ್ದ ಆಕೆಯ ಕೈಗಳಲ್ಲಿ ಶ್ರಮವಿತ್ತು. ಆಕೆ ಕಟ್ಟಿದ ಹೂಮಾಲೆಗಳು ದೇವರ ಕೊರಳಿಗೆ ಏರಬಹುದು; ಮದುವೆ-ಮುಂಜಿಗಳ ಸಂಭ್ರಮಕ್ಕೆ ಮೆರುಗು ನೀಡಬಹುದು. ಆದರೆ, ಹೂವುಗಳನ್ನು ಕಟ್ಟಿದ ಆ ಮಹಿಳೆಯ ಬದುಕಿನಲ್ಲಿ ನೆಮ್ಮದಿಯ ಹೂವು ಅರಳಿದೆಯೇ ಎಂಬುದು ನಮಗೆ ತಿಳಿದಿಲ್ಲ.
ಬೆಳಗ್ಗಿನಿಂದ ಸಂಜೆಯವರೆಗೆ ದುಡಿದರೂ ಸಾಕಷ್ಟು ಆದಾಯ ಸಿಗದಿದ್ದರೆ ಮನೆಯ ಖರ್ಚುಗಳನ್ನು ನಿಭಾಯಿಸುವುದು ಕಷ್ಟವಾಗಬಹುದು. ವ್ಯಾಪಾರವಾಗದೆ ಹೂವುಗಳು ಉಳಿದರೆ, ಅವುಗಳೊಂದಿಗೆ ಆಕೆಯ ಶ್ರಮವೂ ನಷ್ಟವಾಗುತ್ತದೆ.
ಒಂದು ಮೊಳ ಹೂವಿಗೆ ಐವತ್ತು ರೂಪಾಯಿ ಕೇಳಿದಾಗ ಕೆಲವರು ಇನ್ನಷ್ಟು ಹೂವುಗಳನ್ನು ಕೇಳಿ ಚೌಕಾಸಿ ಮಾಡಬಹುದು. ಆದರೆ, ಹೂವುಗಳನ್ನು ಸಂಗ್ರಹಿಸಿ, ಅವುಗಳನ್ನು ಜೋಡಿಸಿ, ಮಾಲೆ ಕಟ್ಟಲು ಬೇಕಾಗುವ ಸಮಯ ಮತ್ತು ಶ್ರಮವನ್ನು ಪರಿಗಣಿಸುವುದು ಅಗತ್ಯ.
ಹೂವುಗಳ ಸೌಂದರ್ಯವನ್ನು ಆಸ್ವಾದಿಸುವ ನಾವು, ಆ ಸೌಂದರ್ಯವನ್ನು ಸೃಷ್ಟಿಸಿದ ಕೈಗಳ ಪರಿಶ್ರಮವನ್ನು ಮರೆಯಬಾರದು. ಬಡತನದಲ್ಲಿರುವವರ ಬಗ್ಗೆ ಕನಿಕರ ತೋರುವುದು ಒಳ್ಳೆಯದು; ಅವರ ಶ್ರಮಕ್ಕೆ ಗೌರವ ನೀಡುವುದು ಅದಕ್ಕಿಂತಲೂ ಮುಖ್ಯ.
ಚಪ್ಪಲಿಗಳಿಗೆ ಬಾಳಿಕೆ ನೀಡುವ ಕೈಗಳು
ರಸ್ತೆಯ ಇನ್ನೊಂದು ಬದಿಯಲ್ಲಿ ಚರ್ಮಕಾರನೊಬ್ಬ ನನ್ನ ಗಮನ ಸೆಳೆದಿದ್ದ. ಆತನ ಮುಂದೆ ಹರಿದ ಚಪ್ಪಲಿಗಳ ರಾಶಿಯೇ ಬಿದ್ದಿತ್ತು. ಹರಿದ ಚಪ್ಪಲಿಗಳನ್ನು ಹೊಲಿಯುವುದು, ತುಂಡಾದ ಪಟ್ಟಿಗಳನ್ನು ಜೋಡಿಸುವುದು, ಕಿತ್ತುಹೋದ ಅಡಿಭಾಗವನ್ನು ಸರಿಪಡಿಸುವುದು ಮತ್ತು ಪಾಲಿಶ್ ಮಾಡುವುದು ಆತನ ದಿನನಿತ್ಯದ ಕೆಲಸ.
ಎಸೆದುಬಿಡಬಹುದಾದ ಚಪ್ಪಲಿಗಳಿಗೆ ಮತ್ತೆ ಬಾಳಿಕೆ ನೀಡುವ ಆತನ ಕೈಗಳು, ತನ್ನ ಬದುಕಿಗೂ ಬಾಳಿಕೆ ನೀಡಲು ನಿರಂತರವಾಗಿ ಶ್ರಮಿಸುತ್ತಿದ್ದವು.
ಒಂದು ಜೋಡಿ ಚಪ್ಪಲಿಗಳಿಗೆ ಪಾಲಿಶ್ ಮಾಡಲು ನಲವತ್ತು ರೂಪಾಯಿ ಕೇಳಿದರೆ, ಕೆಲವರು ಇಪ್ಪತ್ತು ರೂಪಾಯಿ ಕೊಡುವುದಾಗಿ ಹೇಳಬಹುದು. ಆದರೆ, ಆ ಕೆಲಸಕ್ಕೆ ಬೇಕಾದ ಸಮಯ, ಕೌಶಲ್ಯ ಮತ್ತು ಶ್ರಮವನ್ನು ನಾವು ಪರಿಗಣಿಸುತ್ತೇವೆಯೇ?
ನಮ್ಮ ಅಗತ್ಯವನ್ನು ಪೂರೈಸಿದ ಬಳಿಕ ಹಣ ಕೊಟ್ಟು ಮುಂದೆ ಸಾಗುತ್ತೇವೆ. ಆದರೆ, ಆ ದುಡಿಮೆಯಿಂದ ಬದುಕು ಕಟ್ಟಿಕೊಳ್ಳುವ ವ್ಯಕ್ತಿಗೂ ಕುಟುಂಬವಿದೆ, ಮಕ್ಕಳ ಶಿಕ್ಷಣದ ಜವಾಬ್ದಾರಿಯಿದೆ, ಆಹಾರ, ವಸತಿ ಮತ್ತು ಆರೋಗ್ಯದ ಅಗತ್ಯಗಳಿವೆ ಎಂಬುದನ್ನು ಮರೆಯಬಾರದು.
ಚಪ್ಪಲಿ ಹೊಲಿಯುವ ವೃತ್ತಿಯನ್ನು ಕೀಳಾಗಿ ನೋಡುವ ಮನೋಭಾವ ಸಮಾಜದಲ್ಲಿ ಇನ್ನೂ ಉಳಿದಿದ್ದರೆ, ಅದಕ್ಕಿಂತ ದುರದೃಷ್ಟಕರ ಸಂಗತಿ ಮತ್ತೊಂದಿಲ್ಲ. ಯಾವುದೇ ಪ್ರಾಮಾಣಿಕ ದುಡಿಮೆಯೂ ಕೀಳಲ್ಲ. ಮನುಷ್ಯನ ಘನತೆ ಅವನು ಮಾಡುವ ವೃತ್ತಿಯಿಂದ ನಿರ್ಧಾರವಾಗುವುದಿಲ್ಲ.
ಇಲ್ಲಿ ಪ್ರಶ್ನೆ ಇಪ್ಪತ್ತು ರೂಪಾಯಿಯದ್ದಲ್ಲ, ನಲವತ್ತು ರೂಪಾಯಿಯದ್ದೂ ಅಲ್ಲ; ಮತ್ತೊಬ್ಬರ ಶ್ರಮವನ್ನು ನಾವು ಎಷ್ಟು ಗೌರವದಿಂದ ಕಾಣುತ್ತೇವೆ ಎಂಬುದೇ ಮುಖ್ಯ.
ದೇವಸ್ಥಾನದ ಬಾಗಿಲಲ್ಲೂ ಹಸಿವಿನ ನೆರಳು
ನಗರದ ದೇವಸ್ಥಾನಗಳ ಮುಂದೆ ಹೋದಾಗ ಮತ್ತೊಂದು ಸಾಮಾಜಿಕ ವಾಸ್ತವ ಕಣ್ಣಿಗೆ ಬೀಳುತ್ತದೆ. ದೇವರ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಲ್ಲುವ ಭಕ್ತರು, ಹೂವು-ಹಣ್ಣುಗಳನ್ನು ಖರೀದಿಸುವವರು ಮತ್ತು ಕಾಣಿಕೆ ಸಲ್ಲಿಸುವವರ ನಡುವೆ ಕೆಲವರು ಕೈಚಾಚಿ ಭಿಕ್ಷೆ ಬೇಡುತ್ತಿರುತ್ತಾರೆ.
“ಅಮ್ಮಾ, ಸ್ವಲ್ಪ ಹಣ ಕೊಡಿ. ಅಪ್ಪಾ, ಊಟಕ್ಕೆ ಕಾಸು ಕೊಡಿ” ಎಂಬ ಅವರ ಮೊರೆ ಕೇಳಿಸುತ್ತದೆ. ಕೆಲವರು ತಮ್ಮ ಕೈಲಾದಷ್ಟು ಹಣ ನೀಡುತ್ತಾರೆ. ಇನ್ನು ಕೆಲವರು ನಿರ್ಲಕ್ಷಿಸಿ ಮುಂದೆ ಸಾಗುತ್ತಾರೆ.
ಭಿಕ್ಷೆ ಬೇಡುವ ಪ್ರತಿಯೊಬ್ಬರ ಪರಿಸ್ಥಿತಿಯೂ ಒಂದೇ ಆಗಿರುವುದಿಲ್ಲ. ಕೆಲವರಿಗೆ ಕುಟುಂಬದ ಆಸರೆಯಿಲ್ಲದಿರಬಹುದು; ಇನ್ನು ಕೆಲವರು ವಯಸ್ಸು, ಅನಾರೋಗ್ಯ ಅಥವಾ ಅಂಗವೈಕಲ್ಯದಿಂದ ದುಡಿಯಲು ಅಸಮರ್ಥರಾಗಿರಬಹುದು. ಬದುಕಿನಲ್ಲಿ ಎದುರಾದ ಆರ್ಥಿಕ ಸಂಕಷ್ಟಗಳೂ ಕೆಲವರನ್ನು ಈ ಸ್ಥಿತಿಗೆ ತಳ್ಳಿರಬಹುದು.
ದೇವರಿಗೆ ಕಾಣಿಕೆ ಸಲ್ಲಿಸುವುದು ಭಕ್ತಿಯ ಅಭಿವ್ಯಕ್ತಿಯಾದರೆ, ಹಸಿವಿನಿಂದ ಬಳಲುತ್ತಿರುವ ಮನುಷ್ಯನ ನೋವಿಗೆ ಸ್ಪಂದಿಸುವುದು ಮಾನವೀಯತೆಯ ಅಭಿವ್ಯಕ್ತಿ.
ಹಸಿದವನಿಗೆ ಆಹಾರ ನೀಡುವುದು ತಕ್ಷಣದ ನೆರವು. ಆದರೆ, ಬಡತನ, ನಿರುದ್ಯೋಗ, ಅನಾರೋಗ್ಯ ಮತ್ತು ಸಾಮಾಜಿಕ ಅಭದ್ರತೆಯಿಂದ ಜನರು ನಿರ್ಗತಿಕ ಸ್ಥಿತಿಗೆ ತಲುಪದಂತೆ ನೋಡಿಕೊಳ್ಳುವ ವ್ಯವಸ್ಥೆಯೂ ಅಗತ್ಯ. ಹಸಿವು ಮತ್ತು ನಿರ್ಗತಿಕತೆ ಕೇವಲ ವೈಯಕ್ತಿಕ ದುರದೃಷ್ಟವಲ್ಲ; ಅವು ಸಾಮಾಜಿಕ ಕಳಕಳಿಯಿಂದ ಗಮನಿಸಬೇಕಾದ ವಾಸ್ತವಗಳು.
ಹೂವು ಮಾರುವ ಬಾಲಕಿಯ ಬಾಲ್ಯ
ಹೂವುಗಳನ್ನು ಮಾರುತ್ತಿದ್ದ ಸುಮಾರು ಹದಿಮೂರು ವರ್ಷದ ಬಾಲಕಿಯೊಬ್ಬಳನ್ನೂ ನಾನು ಗಮನಿಸಿದ್ದೆ. ಆ ವಯಸ್ಸಿನಲ್ಲಿ ಆಕೆ ಶಾಲೆಯಲ್ಲಿ ಕುಳಿತು ಪಾಠ ಕೇಳುತ್ತಿರಬೇಕಿತ್ತು. ಪುಸ್ತಕಗಳನ್ನು ಓದುತ್ತಾ, ಗೆಳೆಯರೊಂದಿಗೆ ಆಟವಾಡುತ್ತಾ, ಭವಿಷ್ಯದ ಕನಸುಗಳನ್ನು ಕಟ್ಟಿಕೊಳ್ಳಬೇಕಿತ್ತು. ಆದರೆ, ಆಕೆಯ ಕೈಯಲ್ಲಿ ಹೂವಿನ ಪೊಟ್ಟಣಗಳಿದ್ದವು.
ಆಕೆ ಶಾಲೆಗೆ ಹೋಗುತ್ತಿದ್ದಾಳೆಯೇ ಅಥವಾ ಶಿಕ್ಷಣದಿಂದ ಹೊರಗುಳಿದಿದ್ದಾಳೆಯೇ ಎಂಬುದು ನನಗೆ ತಿಳಿದಿಲ್ಲ. ಬೀದಿಯಲ್ಲಿ ವಸ್ತುಗಳನ್ನು ಮಾರುತ್ತಿದ್ದಾಳೆ ಎಂಬ ಕಾರಣಕ್ಕೆ ಆಕೆ ಶಾಲೆ ಬಿಟ್ಟಿದ್ದಾಳೆ ಎಂದು ತೀರ್ಮಾನಿಸುವುದೂ ಸರಿಯಲ್ಲ. ಆದರೆ, ಆ ದೃಶ್ಯವು ಮಕ್ಕಳ ಶಿಕ್ಷಣ ಮತ್ತು ಬಾಲ್ಯದ ಹಕ್ಕುಗಳ ಕುರಿತು ಯೋಚಿಸುವಂತೆ ಮಾಡಿತು.
ಕುಟುಂಬದ ಆರ್ಥಿಕ ಸಂಕಷ್ಟದಿಂದ ಮಕ್ಕಳೇ ದುಡಿಮೆಗೆ ಇಳಿಯುವ ಪರಿಸ್ಥಿತಿ ನಿರ್ಮಾಣವಾದರೆ, ಅದರ ಪರಿಣಾಮ ಅವರ ಶಿಕ್ಷಣ ಮತ್ತು ಭವಿಷ್ಯದ ಮೇಲೆ ಬೀಳಬಹುದು. ಮಕ್ಕಳ ದುಡಿಮೆಯ ಹಿಂದೆ ಶೋಷಣೆ ಅಥವಾ ಹಕ್ಕುಗಳ ಉಲ್ಲಂಘನೆ ಇದ್ದರೆ, ಅದನ್ನು ನಿರ್ಲಕ್ಷಿಸುವಂತಿಲ್ಲ.
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಮತ್ತೆ ಶಿಕ್ಷಣದ ಮುಖ್ಯವಾಹಿನಿಗೆ ಕರೆತರುವುದು ಶಿಕ್ಷಣ ಇಲಾಖೆ, ಸ್ಥಳೀಯ ಆಡಳಿತ ಮತ್ತು ಮಕ್ಕಳ ಕಲ್ಯಾಣ ವ್ಯವಸ್ಥೆಗಳ ಪ್ರಮುಖ ಜವಾಬ್ದಾರಿಯಾಗಿದೆ. ಕುಟುಂಬದ ಬಡತನವೇ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಿದ್ದರೆ, ಆ ಕುಟುಂಬಗಳಿಗೆ ಸೂಕ್ತ ನೆರವು ದೊರೆಯುವಂತೆಯೂ ನೋಡಿಕೊಳ್ಳಬೇಕು.
ಮಕ್ಕಳ ಕೈಯಲ್ಲಿ ಪುಸ್ತಕಗಳಿರಬೇಕಾದ ವಯಸ್ಸಿನಲ್ಲಿ ಅವರು ಹೊಟ್ಟೆಪಾಡಿಗಾಗಿ ದುಡಿಯುವ ಪರಿಸ್ಥಿತಿ ನಿರ್ಮಾಣವಾಗಿರುವುದು ಕೇವಲ ಬಡ ಕುಟುಂಬಗಳ ಸಮಸ್ಯೆಯಲ್ಲ; ಅದು ಸಮಾಜದ ಒಟ್ಟಾರೆ ಜವಾಬ್ದಾರಿಯ ಪ್ರಶ್ನೆಯಾಗಿದೆ.
ತ್ಯಾಜ್ಯದಲ್ಲೂ ಬದುಕಿನ ಆಸರೆ
ಸಂಜೆಯಾಗುತ್ತಿದ್ದಂತೆ ದೊಡ್ಡ ಅಂಗಡಿಗಳ ಮುಂದೆ, ವಾಣಿಜ್ಯ ಮಳಿಗೆಗಳ ಸುತ್ತಮುತ್ತ ಮತ್ತು ರಸ್ತೆಯ ಬದಿಗಳಲ್ಲಿ ಬಿದ್ದಿರುವ ರಟ್ಟುಗಳು, ಖಾಲಿ ಪ್ಲಾಸ್ಟಿಕ್ ಚೀಲಗಳು ಹಾಗೂ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಸಂಗ್ರಹಿಸುವ ಜನರು ಕಾಣಿಸುತ್ತಾರೆ.
ನಮಗೆ ಬೇಡವಾದ ವಸ್ತುಗಳು ಅವರ ಪಾಲಿಗೆ ಆದಾಯದ ಮೂಲವಾಗುತ್ತವೆ. ಅವರು ರಟ್ಟುಗಳನ್ನು ಒಂದೊಂದಾಗಿ ಸಂಗ್ರಹಿಸುತ್ತಾರೆ. ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಕೊಳ್ಳುತ್ತಾರೆ. ಕೆಲವರು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಾರೆ; ಇನ್ನು ಕೆಲವರು ತಳ್ಳುಗಾಡಿಗಳಲ್ಲಿ ಸಾಗಿಸುತ್ತಾರೆ.
ಅವರ ದಿನದ ದುಡಿಮೆ ಎಷ್ಟು, ಸಂಗ್ರಹಿಸಿದ ವಸ್ತುಗಳಿಗೆ ಎಷ್ಟು ಹಣ ಸಿಗುತ್ತದೆ, ಆ ಆದಾಯದಿಂದ ಕುಟುಂಬದ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತದೆಯೇ ಎಂಬುದು ಹೊರಗಿನಿಂದ ನೋಡಿದವರಿಗೆ ತಿಳಿಯುವುದಿಲ್ಲ. ಆದರೆ, ನಾವು ಸುಲಭವಾಗಿ ಎಸೆದುಬಿಡುವ ವಸ್ತುಗಳಲ್ಲಿ ಅವರು ಬದುಕಿನ ಒಂದು ಅವಕಾಶವನ್ನು ಹುಡುಕುತ್ತಾರೆ.
ತ್ಯಾಜ್ಯ ಸಂಗ್ರಹಿಸುವವರ ಶ್ರಮವು ನಗರದ ಮರುಬಳಕೆ ಮತ್ತು ಸ್ವಚ್ಛತಾ ವ್ಯವಸ್ಥೆಗೆ ಕೊಡುಗೆ ನೀಡುತ್ತದೆ. ಆದರೂ ಅವರ ದುಡಿಮೆಗೆ ದೊರೆಯುವ ಗೌರವ, ಆರೋಗ್ಯ ಸುರಕ್ಷತೆ ಮತ್ತು ಆರ್ಥಿಕ ಭದ್ರತೆಯ ಬಗ್ಗೆ ಸಾಕಷ್ಟು ಗಮನ ಹರಿಸಲಾಗುತ್ತಿದೆಯೇ ಎಂಬುದು ಪರಿಶೀಲಿಸಬೇಕಾದ ಸಂಗತಿ.
ನಗರದ ಬೆಳವಣಿಗೆಯಲ್ಲಿ ದೊಡ್ಡ ಉದ್ಯಮಿಗಳ ಪಾತ್ರ ಎಷ್ಟು ಮುಖ್ಯವೋ, ಅದರ ದಿನನಿತ್ಯದ ಬದುಕಿಗೆ ತಮ್ಮ ಶ್ರಮದಿಂದ ಕೊಡುಗೆ ನೀಡುವ ಸಾಮಾನ್ಯ ಜನರ ಪಾತ್ರವೂ ಅಷ್ಟೇ ಮುಖ್ಯ.
ಹಸಿವು ವೈಯಕ್ತಿಕ ಸಮಸ್ಯೆಯಷ್ಟೇ ಅಲ್ಲ
ಹಸಿವು ಎಂದರೆ ಕೇವಲ ಹೊಟ್ಟೆಗೆ ಆಹಾರವಿಲ್ಲದ ಸ್ಥಿತಿಯಲ್ಲ. ಅದರ ಹಿಂದೆ ಉದ್ಯೋಗದ ಕೊರತೆ, ಅನಿಶ್ಚಿತ ಆದಾಯ, ದುಬಾರಿ ಜೀವನ ವೆಚ್ಚ, ಶಿಕ್ಷಣದ ಅಭಾವ, ಅನಾರೋಗ್ಯ, ವಸತಿಯ ಸಮಸ್ಯೆ ಮತ್ತು ಸಾಮಾಜಿಕ ಅಸಮಾನತೆಗಳಂತಹ ಅನೇಕ ಕಾರಣಗಳಿರಬಹುದು.
ದಿನಗೂಲಿ ಕೆಲಸ ಸಿಗದಿದ್ದರೆ ಕುಟುಂಬದ ಆದಾಯ ಕುಸಿಯುತ್ತದೆ. ಅನಾರೋಗ್ಯ ಬಂದರೆ ದುಡಿಯುವ ಸಾಮರ್ಥ್ಯ ಕಡಿಮೆಯಾಗಬಹುದು. ಆದಾಯವಿಲ್ಲದಿದ್ದರೆ ಆಹಾರ ಮತ್ತು ಬಾಡಿಗೆಗೆ ಹಣ ಹೊಂದಿಸುವುದೇ ಕಷ್ಟವಾಗುತ್ತದೆ. ಮಕ್ಕಳ ಶಿಕ್ಷಣಕ್ಕೂ ಅಡ್ಡಿಯಾಗಬಹುದು.
ಹೀಗೆ ಬಡತನದ ಒಂದು ಸಮಸ್ಯೆ ಮತ್ತೊಂದು ಸಮಸ್ಯೆಯನ್ನು ಹುಟ್ಟುಹಾಕುತ್ತದೆ. ಈ ಚಕ್ರದಿಂದ ಹೊರಬರಲು ವೈಯಕ್ತಿಕ ಪರಿಶ್ರಮದ ಜೊತೆಗೆ ಸೂಕ್ತ ಅವಕಾಶಗಳು ಮತ್ತು ಸಾಮಾಜಿಕ ಭದ್ರತೆಯೂ ಅಗತ್ಯವಾಗುತ್ತವೆ.
ಹೂವು ಕಟ್ಟುವ ಮಹಿಳೆ, ಚಪ್ಪಲಿ ಹೊಲಿಯುವ ಚರ್ಮಕಾರ, ರಸ್ತೆಬದಿಯಲ್ಲಿ ಕಡಲೆಕಾಯಿ ಮತ್ತು ಆಟಿಕೆಗಳನ್ನು ಮಾರುವವರು, ಪೆನ್ನುಗಳನ್ನು ಮಾರುವ ಮಗು, ಹೂವು ಮಾರುವ ಬಾಲಕಿ, ತ್ಯಾಜ್ಯ ಸಂಗ್ರಹಿಸುವ ವ್ಯಕ್ತಿ ಮತ್ತು ದೇವಸ್ಥಾನಗಳ ಮುಂದೆ ಭಿಕ್ಷೆ ಬೇಡುವವರು—ಇವರ ಬದುಕಿನ ಪರಿಸ್ಥಿತಿಗಳು ಒಂದೇ ರೀತಿಯಲ್ಲ. ಆದರೂ ಇವರ ಬದುಕುಗಳು ನಮ್ಮ ಮುಂದೆ ಒಂದು ಸಾಮಾನ್ಯ ವಾಸ್ತವವನ್ನು ತೆರೆದಿಡುತ್ತವೆ: ಸಮಾಜದಲ್ಲಿ ದುಡಿಯುವ ಪ್ರತಿಯೊಬ್ಬರಿಗೂ ಸಮಾನ ಅವಕಾಶ ಮತ್ತು ಘನತೆಯ ಬದುಕು ದೊರೆಯುತ್ತಿಲ್ಲ.
ಬಡತನವನ್ನು ವ್ಯಕ್ತಿಯ ಸೋಮಾರಿತನ ಅಥವಾ ವೈಯಕ್ತಿಕ ವೈಫಲ್ಯಕ್ಕೆ ಮಾತ್ರ ಸಂಬಂಧಿಸಿ ನೋಡುವುದು ತಪ್ಪು. ಎಲ್ಲರಿಗೂ ಸಮಾನ ಅವಕಾಶಗಳು ದೊರೆಯುವುದಿಲ್ಲ; ಎಲ್ಲರ ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಯೂ ಒಂದೇ ಆಗಿರುವುದಿಲ್ಲ. ಹೀಗಾಗಿ, ಬಡತನದಲ್ಲಿರುವವರನ್ನು ದೂಷಿಸುವುದಕ್ಕಿಂತ ಅವರ ಬದುಕಿನ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯ.
ಅಭಿವೃದ್ಧಿಯ ಅಳತೆಗೋಲು ಯಾವುದು?
ನಗರದಲ್ಲಿ ದೊಡ್ಡ ಹೋಟೆಲ್ಗಳು ನಿರ್ಮಾಣ, ಐಷಾರಾಮಿ ವಾಹನಗಳು ಓಡಾಟ,ಹೊಸ ತಂತ್ರಜ್ಞಾನ ,ಕೈಗಾರಿಕೆಗಳ ಅಭಿವೃದ್ಧಿ, ಯುವಜನರಿಗೆ ಉದ್ಯೋಗಾವಕಾಶಗಳು ಜನರು ದುಡಿದು ಸಂಪಾದಿಸಿ ನೆಮ್ಮದಿಯಿಂದ ಬದುಕುವುದೆಲ್ಲಾ ಅಭಿವೃದ್ಧಿಯ ಭಾಗಗಳೇ.
ಆದರೆ, ಅಭಿವೃದ್ಧಿಯ ಫಲ ಎಲ್ಲರನ್ನೂ ತಲುಪುತ್ತಿದೆಯೇ ಎಂಬುದನ್ನೂ ಗಮನಿಸಬೇಕು. ನಗರದ ಸಂಪತ್ತು ಹೆಚ್ಚಾಗುತ್ತಿದ್ದರೂ ಅದರ ಬೀದಿಗಳಲ್ಲಿ ದುಡಿಯುವ ಜನರ ಬದುಕು ಸುಧಾರಿಸದಿದ್ದರೆ, ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದರೆ, ಹಸಿವು ಮತ್ತು ನಿರ್ಗತಿಕತೆ ಮುಂದುವರಿದಿದ್ದರೆ, ಆ ಅಭಿವೃದ್ಧಿಯ ಸ್ವರೂಪದ ಬಗ್ಗೆ ಪ್ರಶ್ನೆಗಳನ್ನು ಎತ್ತಲೇಬೇಕಾಗುತ್ತದೆ.
ಒಂದು ಕಡೆ ಐಷಾರಾಮಿ ಹೋಟೆಲ್ಗಳಲ್ಲಿ ಆಹಾರ ಸವಿಯುವ ಜನರಿದ್ದಾರೆ. ಮತ್ತೊಂದು ಕಡೆ ಒಂದು ಹೊತ್ತಿನ ಊಟಕ್ಕಾಗಿ ಪರದಾಡುವವರಿದ್ದಾರೆ. ಒಂದು ಕಡೆ ಮಕ್ಕಳಿಗೆ ದುಬಾರಿ ಶಿಕ್ಷಣದ ಅವಕಾಶಗಳಿವೆ. ಮತ್ತೊಂದು ಕಡೆ ಕೆಲವು ಮಕ್ಕಳು ಬೀದಿಯಲ್ಲಿ ಪೆನ್ನು ಮತ್ತು ಹೂವುಗಳನ್ನು ಮಾರುತ್ತಿದ್ದಾರೆ. ಒಂದು ಕಡೆ ಸಾವಿರಾರು ರೂಪಾಯಿಗಳ ವಸ್ತುಗಳನ್ನು ಖರೀದಿಸುವಾಗ ಬೆಲೆಯ ಬಗ್ಗೆ ಹೆಚ್ಚು ಯೋಚಿಸದವರಿದ್ದಾರೆ. ಮತ್ತೊಂದು ಕಡೆ ಸಣ್ಣಪುಟ್ಟ ವಸ್ತುಗಳನ್ನು ಮಾರುವವರು ದಿನದ ವ್ಯಾಪಾರಕ್ಕಾಗಿ ಕಾಯುತ್ತಿದ್ದಾರೆ.
ಈ ವೈರುಧ್ಯಗಳು ಅಭಿವೃದ್ಧಿಯ ಬಗ್ಗೆ ಮತ್ತೊಮ್ಮೆ ಯೋಚಿಸುವಂತೆ ಮಾಡುತ್ತವೆ. ಒಂದು ಸಮಾಜದ ನಿಜವಾದ ಪ್ರಗತಿ ಎಂದರೆ ಕೆಲವರು ಎಷ್ಟು ಎತ್ತರಕ್ಕೆ ಏರಿದ್ದಾರೆ ಎಂಬುದಷ್ಟೇ ಅಲ್ಲ; ಅವಕಾಶಗಳಿಂದ ವಂಚಿತರಾದವರು ಎಷ್ಟು ಮುಂದೆ ಬರಲು ಸಾಧ್ಯವಾಗಿದೆ ಎಂಬುದೂ ಹೌದು.
ನಗರದ ನಿಜವಾದ ಅಭಿವೃದ್ಧಿ ಅದರ ಎತ್ತರದ ಕಟ್ಟಡಗಳು, ವಿಶಾಲ ರಸ್ತೆಗಳು ಮತ್ತು ತಂತ್ರಜ್ಞಾನದ ಪ್ರಗತಿಯಲ್ಲಿ ಮಾತ್ರ ಅಡಕವಾಗಿಲ್ಲ. ಆ ನಗರದ ಸಾಮಾನ್ಯ ಜನರ ಬದುಕಿನಲ್ಲಿ ಆಗುವ ಸುಧಾರಣೆಯೂ ಅದರ ಪ್ರಮುಖ ಮಾನದಂಡವಾಗಬೇಕು. ದುಡಿಯುವ ಕೈಗಳಿಗೆ ನ್ಯಾಯಯುತ ಪ್ರತಿಫಲ, ಮಕ್ಕಳಿಗೆ ಶಿಕ್ಷಣ, ಹಸಿದವರಿಗೆ ಆಹಾರ ಮತ್ತು ನಿರ್ಗತಿಕರಿಗೆ ಬದುಕಿನ ಆಸರೆ ದೊರೆತಾಗಲೇ ಅಭಿವೃದ್ಧಿ ಮಾನವೀಯ ಅರ್ಥವನ್ನು ಪಡೆದುಕೊಳ್ಳುತ್ತದೆ.
ಹಸಿದ ಬದುಕುಗಳಿಗೂ ಬೆಳಕಿನ ಹಕ್ಕಿದೆ
ಸಿಲಿಕಾನ್ ಸಿಟಿಯ ಬೀದಿಗಳಲ್ಲಿ ನಾನು ಕಂಡ ಈ ಬದುಕುಗಳು ಕೇವಲ ಕೆಲವು ವ್ಯಕ್ತಿಗಳ ವೈಯಕ್ತಿಕ ಕಥೆಗಳಲ್ಲ. ಅವು ನಮ್ಮ ಸಮಾಜದ ಅನೇಕ ಮುಖಗಳನ್ನು ಪರಿಚಯಿಸುತ್ತವೆ.
ಹೂವು ಕಟ್ಟುವ ಮಹಿಳೆಯ ಬೆರಳುಗಳಲ್ಲಿ ಶ್ರಮವಿದೆ. ಚಪ್ಪಲಿ ಹೊಲಿಯುವ ಚರ್ಮಕಾರನ ಕೈಗಳಲ್ಲಿ ಕೌಶಲ್ಯವಿದೆ. ಶೇಂಗಾ, ಕಡಲೆಕಾಯಿ ಮತ್ತು ಆಟಿಕೆಗಳನ್ನು ಮಾರುವವರ ಬದುಕಿನಲ್ಲಿ ದುಡಿಮೆಯ ಅನಿಶ್ಚಿತತೆಯಿದೆ. ಪೆನ್ನುಗಳನ್ನು ಮಾರುವ ಮಗುವಿನ ಬದುಕಿನಲ್ಲಿ ಉತ್ತರಿಸಬೇಕಾದ ಪ್ರಶ್ನೆಗಳಿವೆ. ಹೂವು ಮಾರುವ ಬಾಲಕಿಯ ಬದುಕಿನಲ್ಲಿ ರಕ್ಷಿಸಬೇಕಾದ ಬಾಲ್ಯವಿದೆ. ತ್ಯಾಜ್ಯ ಸಂಗ್ರಹಿಸುವವರ ದುಡಿಮೆಯಲ್ಲಿ ಬದುಕಿನ ಅನಿವಾರ್ಯತೆಯಿದೆ. ದೇವಸ್ಥಾನಗಳ ಮುಂದೆ ಭಿಕ್ಷೆ ಬೇಡುವವರ ಮೊರೆಯಲ್ಲಿ ಹಸಿವು ಮತ್ತು ಅಸಹಾಯಕತೆಯ ನೋವಿದೆ.
ಇವರಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ಬದುಕಿನ ಕಥೆಯಿದೆ. ಅವರ ಸಂಕಷ್ಟಗಳ ಸ್ವರೂಪ ಬೇರೆಬೇರೆಯಾಗಿರಬಹುದು. ಆದರೆ, ಪ್ರತಿಯೊಬ್ಬರಿಗೂ ಘನತೆಯಿಂದ ಬದುಕುವ ಹಕ್ಕಿದೆ.
ನಮ್ಮ ಸುತ್ತಲಿನ ದುಡಿಯುವ ಜನರನ್ನು ಗೌರವದಿಂದ ಕಾಣುವುದು, ಅವರ ಶ್ರಮಕ್ಕೆ ನ್ಯಾಯಯುತ ಬೆಲೆ ನೀಡುವುದು, ಸಾಧ್ಯವಾದಾಗ ಸಣ್ಣ ವ್ಯಾಪಾರಿಗಳಿಂದ ವಸ್ತುಗಳನ್ನು ಖರೀದಿಸುವುದು, ಹಸಿದವರಿಗೆ ಆಹಾರ ನೀಡುವುದು ಮತ್ತು ಸಂಕಷ್ಟದಲ್ಲಿರುವ ಮಕ್ಕಳ ಶಿಕ್ಷಣಕ್ಕೆ ನೆರವಾಗುವುದು ಮಾನವೀಯತೆಯ ಸರಳ ಅಭಿವ್ಯಕ್ತಿಗಳಾಗಿವೆ. ಅದಕ್ಕಿಂತ ಮುಖ್ಯವಾಗಿ, ಬಡತನ ಮತ್ತು ಅಸಮಾನತೆಗೆ ಕಾರಣವಾಗುವ ಸಾಮಾಜಿಕ ಪರಿಸ್ಥಿತಿಗಳನ್ನು ಅರ್ಥಮಾಡಿಕೊಂಡು, ಪ್ರತಿಯೊಬ್ಬರಿಗೂ ಬದುಕಿನಲ್ಲಿ ಮುಂದೆ ಬರಲು ಅವಕಾಶ ದೊರೆಯುವ ಸಮಾಜದ ನಿರ್ಮಾಣಕ್ಕೆ ಬೆಂಬಲ ನೀಡಬೇಕು.
ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವು ನಮ್ಮನ್ನು ತಟ್ಟದಿದ್ದರೆ, ನಮ್ಮ ಪ್ರಗತಿಯ ಬಗ್ಗೆ ಮತ್ತೊಮ್ಮೆ ಯೋಚಿಸಬೇಕಾಗುತ್ತದೆ. ಮತ್ತೊಬ್ಬರ ಹಸಿವು ನಮ್ಮ ಮನಸ್ಸಿನಲ್ಲಿ ಸಂವೇದನೆ ಮೂಡಿಸದಿದ್ದರೆ, ನಮ್ಮ ಮಾನವೀಯತೆಯ ಸ್ವರೂಪವನ್ನೇ ಪರಿಶೀಲಿಸಬೇಕಾಗುತ್ತದೆ.
ನಗರದ ನಿಜವಾದ ವೈಭವ ಅದರ ಎತ್ತರದ ಕಟ್ಟಡಗಳಲ್ಲಿ ಮಾತ್ರವಿಲ್ಲ; ಅದರ ಬೀದಿಗಳಲ್ಲಿ ಬದುಕಿಗಾಗಿ ಹೋರಾಡುವ ಸಾಮಾನ್ಯ ಮನುಷ್ಯನ ಬದುಕಿನಲ್ಲಿಯೂ ಇದೆ.
ಸಿಲಿಕಾನ್ ಸಿಟಿಗಳು ಬೆಳೆಯಲಿ; ಅವುಗಳ ಜೊತೆಗೆ ಮಾನವೀಯತೆಯೂ ಬೆಳೆಯಲಿ. ಸಂಪತ್ತು ಹೆಚ್ಚಲಿ; ಅದರೊಂದಿಗೆ ಹಂಚಿಕೊಳ್ಳುವ ಮನಸ್ಸೂ ಹೆಚ್ಚಲಿ. ತಂತ್ರಜ್ಞಾನ ಮುನ್ನಡೆಯಲಿ; ಅದರ ನೆರಳಿನಲ್ಲಿ ಬದುಕುವ ಸಾಮಾನ್ಯ ಮನುಷ್ಯನ ಬದುಕಿಗೂ ಬೆಳಕು ದೊರೆಯಲಿ.
ಅಭಿವೃದ್ಧಿಯ ಬೆಳಕು ಎತ್ತರದ ಕಟ್ಟಡಗಳನ್ನು ಮಾತ್ರ ಬೆಳಗಿಸದೆ, ನಗರದ ಬೀದಿಗಳಲ್ಲಿ ಬದುಕಿಗಾಗಿ ಹೋರಾಡುವ ಕಟ್ಟಕಡೆಯ ಮನುಷ್ಯನ ಗುಡಿಸಲನ್ನೂ ತಲುಪಬೇಕು. ಏಕೆಂದರೆ, ಒಂದು ನಗರದ ನಿಜವಾದ ಪ್ರಗತಿಯನ್ನು ಅದರ ಶ್ರೀಮಂತರ ಸಮೃದ್ಧಿಯಿಂದ ಮಾತ್ರವಲ್ಲ, ಬಡವರ ಬದುಕಿನಲ್ಲಿ ಮೂಡುವ ಬೆಳಕಿನಿಂದಲೂ ಅಳೆಯಬೇಕು.



