ಮೈಸೂರು ಸಕ್ಕರೆ ಕಾರ್ಖಾನೆಯ ಯಶಸ್ಸು ಕೆಲವರಿಗೆ ಆತಂಕ ಉಂಟುಮಾಡಿದ್ದು, ಕಾರ್ಖಾನೆಯ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ರೈತರಿಗೆ ವಂಚನೆ ಮಾಡುವ ಉದ್ಯಮಿಗಳ ಅಗತ್ಯ ಮಂಡ್ಯ ಜಿಲ್ಲೆ ಹಾಗೂ ಮೈಸೂರಿಗೆ ಇಲ್ಲ ಎಂದು ಮೈಶುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ್ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಸಕ್ಕರೆ ಕಾರ್ಖಾನೆಯ ಯಶಸ್ವಿ ಕಾರ್ಯನಿರ್ವಹಣೆ ಹಾಗೂ ರೈತರಿಗೆ ಸಕಾಲದಲ್ಲಿ ಹಣ ಪಾವತಿ ಮಾಡುತ್ತಿರುವುದನ್ನು ಸಹಿಸದೆ ಕೆಲವರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಮುರುಗೇಶ್ ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದರು. ಕಳೆದ ಕೆಲವು ದಿನಗಳಿಂದ ಮೈಸೂರು ಸಕ್ಕರೆ ಕಾರ್ಖಾನೆಯ ಕುರಿತು ನಿರಾಣಿ ನೀಡುತ್ತಿರುವ ಹೇಳಿಕೆಗಳಿಗೆ ತಿರುಗೇಟು ನೀಡಿದ ಅವರು, ರೈತರಿಗೆ ನಿಜವಾಗಿಯೂ ನ್ಯಾಯ ಒದಗಿಸುವ ಉದ್ದೇಶವಿದ್ದರೆ ಕೆ.ಆರ್.ನಗರದ ಶ್ರೀರಾಮ್ ಸಕ್ಕರೆ ಕಾರ್ಖಾನೆಯನ್ನು ಆರಂಭಿಸಿ ರೈತರ ಹಿತ ಕಾಪಾಡಬೇಕಿತ್ತು. ಮೂರು ವರ್ಷಗಳಿಂದ ಕಾರ್ಖಾನೆಯನ್ನು ತೆಗೆದುಕೊಂಡಿದ್ದರೂ ಕಾರ್ಯಾರಂಭ ಮಾಡಿಸದೆ ಈಗ ಮೈಸೂರು ಸಕ್ಕರೆ ಕಾರ್ಖಾನೆಯ ಬಗ್ಗೆ ಮಾತನಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಕಾರ್ಮಿಕರಿಗೆ ಹಾಗೂ ರೈತರಿಗೆ ನೀಡಬೇಕಾದ ಹಣದ ವಿಚಾರದಲ್ಲಿ ಸರ್ಕಾರದ ಸೂಚನೆಯಂತೆ ₹50 ನೆರವು ನೀಡಲಾಗಿದೆ. ಸರ್ಕಾರದಿಂದ ಬಂದ ಹಣವನ್ನು ರೈತರಿಗೆ ಪಾವತಿಸಿದ್ದು, ಕಾರ್ಖಾನೆಯ ವತಿಯಿಂದ ನೀಡಬೇಕಾದ ಹಣವನ್ನೂ ಪಾವತಿಸಲಾಗಿದೆ. ಆದರೆ, ರೈತರಿಗೆ ವಂಚನೆ ಮಾಡುವ ರೀತಿಯಲ್ಲಿ ನಡೆದುಕೊಳ್ಳುವ ಉದ್ಯಮಿಗಳಿಂದ ಮಂಡ್ಯ ಜಿಲ್ಲೆಗೆ ಯಾವುದೇ ಪ್ರಯೋಜನವಿಲ್ಲ ಎಂದರು.
ಮೈಶುಗರ್ ಕಾರ್ಖಾನೆಯು ಸರ್ಕಾರದ ಆರ್ಥಿಕ ನೆರವಿನೊಂದಿಗೆ ಮಾತ್ರವಲ್ಲದೆ, ತನ್ನ ಸ್ವಸಾಮರ್ಥ್ಯ ಹಾಗೂ ಸ್ವಾವಲಂಬನೆಯಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ರೈತರಿಗೆ ಪಾವತಿ ವ್ಯವಸ್ಥೆಯಲ್ಲಿ ಉತ್ತಮ ಬದಲಾವಣೆ ತಂದಿದ್ದು, ಒಮ್ಮೆಲೆ ಹಣ ಪಾವತಿಸುವ ವ್ಯವಸ್ಥೆ ರಾಜ್ಯದ ಇತರ ಕಾರ್ಖಾನೆಗಳಿಗೂ ಮಾದರಿಯಾಗಿದೆ. ರೈತರಿಗೆ ಯಾವುದೇ ಬಾಕಿ ಉಳಿಸಿಕೊಳ್ಳದೆ ಪಾವತಿ ಮಾಡುತ್ತಿರುವುದರಿಂದ ರೈತರ ವಿಶ್ವಾಸ ಗಳಿಸಿದೆ ಎಂದು ಹೇಳಿದರು.
ಮೈಸೂರು ಸಕ್ಕರೆ ಕಾರ್ಖಾನೆಯ ಸಾವಿರಾರು ಕೋಟಿ ಮೌಲ್ಯದ ಸರ್ಕಾರಿ ಆಸ್ತಿಯ ಬಗ್ಗೆ ಮಾತನಾಡುವವರು ಮೊದಲು ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು. ಮಂಡ್ಯ ಜಿಲ್ಲೆಗೆ ಖಾಸಗಿ ಸಕ್ಕರೆ ಕಾರ್ಖಾನೆಗಳ ಅಗತ್ಯವಿಲ್ಲ. ಮೈಸೂರು ಸಕ್ಕರೆ ಕಾರ್ಖಾನೆಯನ್ನು ಖಾಸಗೀಕರಣ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಮುಖ್ಯಮಂತ್ರಿಗಳು ಮೈಶುಗರ್ ಕಾರ್ಖಾನೆಯ ಅಭಿವೃದ್ಧಿ ಮತ್ತು ಯಶಸ್ವಿ ಕಾರ್ಯನಿರ್ವಹಣೆಗೆ ಅಗತ್ಯ ಸಹಕಾರ ನೀಡುತ್ತಿದ್ದಾರೆ. ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಕಾರ್ಖಾನೆಯನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದರು.
ಕೆಲ ಖಾಸಗಿ ಸಕ್ಕರೆ ಕಾರ್ಖಾನೆಗಳೊಂದಿಗೆ ಕೈಜೋಡಿಸಿರುವ ವ್ಯಕ್ತಿಗಳು ಮೈಶುಗರ್ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಅನುಮಾನವಿದೆ. ನಿರಾಣಿ ಅವರು ಖಾಸಗೀಕರಣದ ವಿಚಾರ ಪ್ರಸ್ತಾಪಿಸಿದಾಗ ರೈತ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರೂ, ಇತ್ತೀಚಿನ ಹೇಳಿಕೆಗಳ ಬಗ್ಗೆ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಗಂಗಾಧರ್ ಹೇಳಿದರು.




