ಉತ್ತರ ಕನ್ನಡದಲ್ಲಿ ಜನ ಚಳವಳಿಗಳನ್ನು ಜೀವಂತವಾಗಿರಿಸಿದವರಲ್ಲಿ ವಿಠ್ಠಲ ಭಂಡಾರಿ ಪ್ರಮುಖರು. ಇಂದು ಅವರು ಇಲ್ಲವಾದ ದಿನ. ವಿಠ್ಠಲ ಅಗಲಿದ ಆನಂತರ ಅವನ ನೆನಪನ್ನೇ ಶಕ್ತಿಯನ್ನಾಗಿಸಿಕೊಂಡ ಯಮುನಾ ಗಾಂವ್ಕರ್ ರಾಜ್ಯದಾದ್ಯಂತ ಮುನ್ನಡೆದ ರೀತಿ ಅಭೂತಪೂರ್ವವಾದುದು.
‘ಈಗಲೂ ಆಗೀಗ ಬರೆಯುತ್ತಲೇ ಇರುತ್ತೇನೆ, ಕೆಲವೊಮ್ಮೆ ಶಾಯಿಯಲ್ಲಿ ಅದ್ದಿ, ಕೆಲವೊಮ್ಮೆ ಕಣ್ಣೀರಿನಲ್ಲಿ…’
-ಹೀಗೆ ಬರೆದದ್ದು ಯಮುನಾ ಗಾಂವ್ಕರ್.
ಯಮುನಾ ಯಾಕೆ ಹಾಗೆ ಬರೆಯುತ್ತಿದ್ದಾಳೆ ಎನ್ನುವುದು ನನಗೂ, ನಿಮಗೂ, ಎಲ್ಲರಿಗೂ ಗೊತ್ತು. ನಾವೆಲ್ಲರೂ ಹೋರಾಟದ ಒಡನಾಡಿ, ಆತ್ಮೀಯ ಬಂಧು ವಿಠ್ಠಲ ಭಂಡಾರಿಯನ್ನು ಕಳೆದುಕೊಂಡ ದಿನ ಇಂದು.
ಅವನು ಇಲ್ಲವಾಗಿ ಇವತ್ತಿಗೆ ಐದು ವರ್ಷಗಳು ಕಳೆದು ಹೋದವು. ಯಮುನಾ ಹೆಸರು ಹೇಳದೇ ವಿಠ್ಠಲನ ಬಗೆಗಿನ ಮಾತು ಮುಗಿಯುವುದಿಲ್ಲ, ಹಾಗೆಯೇ ವಿಠ್ಠಲನ ಹೆಸರು ಹೇಳದೆ ಯಮುನಾಳ ಬಗೆಗಿನ ಮಾತು ಸಹಾ. ಅಷ್ಟರಮಟ್ಟಿಗೆ ಅವರದ್ದು ಅಂಟಿಕೊಂಡ ಜೀವ.
‘ನಾವಿಬ್ಬರೂ ಕೇವಲ ಗಂಡ ಹೆಂಡತಿಯಷ್ಟೇ ಆಗಿರಲಿಲ್ಲ. ಅದನ್ನೂ ಮೀರಿದ ಸಂಗಾತಿತ್ವ ಭಾವ ನಮ್ಮದಾಗಿತ್ತು ಎಂಬುದು ನಮ್ಮನ್ನು ಸರಿಯಾಗಿ ಬಲ್ಲವರಿಗೆ ಗೊತ್ತು’ ಎನ್ನುವ ಯಮುನಾ ಕಳೆದ ಐದು ವರ್ಷಗಳಿಂದಲೂ ಸಂಗಾತಿ ವಿಠ್ಠಲ ಇಲ್ಲದೆ ತಹತಹಿಸಿರುವುದನ್ನು ಪ್ರತಿಯೊಬ್ಬರೂ ಬಲ್ಲರು.
‘ವಿಠ್ಠಲನ ಸಾವು ಎಂದರೆ ಬೆಳಕಿನ ಮೇಲೆ ಕತ್ತಲ ಬಣ್ಣ ಬಳಿದಂತೆ ಅನಿಸಿತು. ಅದು ತೊಳೆಯಲಾರದ, ಅಳಿಸಲಾರದ ಕಗ್ಗತ್ತಲೆಯೆ ಆವರಿಸುವಂತೆ ಮಾಡಿತು. ಕತ್ತಲು ಮುಟ್ಟಲು ರಾತ್ರಿ ಮಾತ್ರ ಕಾರಣವಲ್ಲ ಎಂಬ ಜೀವನಾನುಭವ ಆ ಮೇ 7ರ ಸಾಯಂಕಾಲ 6ರಿಂದ ಆವರಿಸಿತು’ ಎಂದು ಬರೆಯುತ್ತಾಳೆ ಯಮುನಾ.
ಇದನ್ನು ಓದಿದ್ದೀರಾ?: ಹೊಸ ಪುಸ್ತಕ | ಕಂಚ ಐಲಯ್ಯ ಅವರ ʼಶೂದ್ರ ಬಂಡಾಯʼ ಪುಸ್ತಕ ಭಾನುವಾರ ಬಿಡುಗಡೆ
ಯಮುನಾ ಅಂದಿನಿಂದಲೂ ವಿಠ್ಠಲನ ನೆನಪನ್ನು ಹೊತ್ತೇ ಸಾಗಿದ್ದಾಳೆ. ಹಾಗೆ ಅವನ ನೆನಪಲ್ಲಿ ಬರೆದ ಕವಿತೆಗಳನ್ನೇ ‘ಕಣ್ಮುಚ್ಚಿದ ಗುಬ್ಬಚ್ಚಿ’ಯಾಗಿ ಹೊರತಂದಿದ್ದಾಳೆ. ಪುಸ್ತಕದಲ್ಲಿನ ಅಷ್ಟೂ ಕವಿತೆಗಳು ಅವಳ ಕೈ ಬರಹದಲ್ಲಿಯೇ ಪ್ರಕಟವಾಗಿದೆ.
‘ಈ ಬರಹ ಹತಾಶೆಯದಲ್ಲ, ವಿರಹವಲ್ಲ. ಬದಲಿಗೆ ಜೀವದ ಸಂಗಾತಿಯಾಗಿ ಜೊತೆಗಿದ್ದು, ಸಮಾಜಮುಖಿಯಾಗಿ ದಿನವೂ ತೊಡಗಿ, ಕಣ್ಣಿಗೆ ಕಾಣುತ್ತ ಕಾಣುತ್ತ ಸಾವಿನೆಡೆಗೆ ನಡೆದು ಹೋದುದಿದೆಯಲ್ಲ ಆಗ ಉಂಟಾದ ಮನಸ್ಸಿನ ವಿಹ್ವಲತೆ ಮತ್ತು ಆ ನಂತರದಲ್ಲಿ ಇಬ್ಬರ ಕನಸನ್ನು, ಚಳವಳಿಯ ಕನಸನ್ನು ಹೊತ್ತು ಜೊತೆಗೆ ನಾನು ಸಮಾಜವನ್ನು ಸಹಿಸಿ ಇರುವುದಿದೆಯಲ್ಲ ಅದರ ಮೊತ್ತ ಈ ಸಂಕಲನ’.
‘ಸಾವಿನ ನೋವನ್ನು ಜೀರ್ಣಿಸಿಕೊಂಡು ಈ ಸಮಾಜವನ್ನು ಎದುರಿಸುತ್ತಾ ಮತ್ತೆ ಕೆಲಸದಲ್ಲಿ ತೊಡಗುವುದು ಒಂಟಿ ಹೆಣ್ಣುಮಕ್ಕಳಿಗೆ ಸವಾಲಿನ ಸಂಗತಿ. ಹತ್ತಿರವಿದ್ದವರು, ಹತ್ತಿರವಿದ್ದಂತೆ ಇದ್ದವರು ದೂರವಾಗುವ, ದೂರ ಮಾಡುವ ಸಂದರ್ಭ ಉಂಟು ಮಾಡುವವರು ಇರುವಾಗ ಆ ಮಹತ್ವದ ವ್ಯಕ್ತಿಯ ಸಾವಿನ ಹಿಂದೆ ಜೀವಂತ ಇದ್ದವರೂ ನೂರು ಬಾರಿ ಸಾಯುತ್ತಲೇ ಬದುಕಬೇಕಾದ ಪರಿಸ್ಥಿತಿಯ ಒತ್ತಡಗಳಿವೆಯಲ್ಲ ಅದನ್ನು ನೀವು ಊಹಿಸಬಹುದು. ಓದುವವರಿಗೆ ಸಖೇದಾಶ್ಚರ್ಯವಾದರೂ ನಾನು ಅನುಭವಿಸಿಯೇ ಬರೆದೆ. ಅದೇ ಈ ಸಂಕಲನ’ ಎನ್ನುವ ಯಮುನಾ ನೋವು ಇಲ್ಲಿನ ಪ್ರತೀ ಕವನದಲ್ಲೂ ನಮ್ಮ ಕೈಗೆಟುಕುತ್ತದೆ.
ಈ ಸಂಕಲನ ಬರೆದದ್ದು ಯಮುನಾ ಮಾತ್ರವಾದರೂ ಇದರೊಳಗೆ ಜೋಡಿ ನಿಟ್ಟುಸಿರು ಕೇಳುತ್ತದೆ.


ಜಿ ಎನ್ ಮೋಹನ್
ಹಿರಿಯ ಪತ್ರಕರ್ತ, ಪ್ರಕಾಶಕ



