ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಕುತೂಹಲ ತೀವ್ರವಾಗುತ್ತಿರುವ ನಡುವೆ, ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಮುಖ್ಯ ನಾಯಕ ಜೋಸೆಫ್ ವಿಜಯ್ ಅವರನ್ನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ರಾಜ್ಯಪಾಲರು ಆಹ್ವಾನಿಸದ ಹಿನ್ನೆಲೆಯಲ್ಲಿ, ಟಿವಿಕೆ ಕಾರ್ಯಕರ್ತರೊಬ್ಬರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಇಮೇಲ್ ಮೂಲಕ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಅವರು ತಮಿಳುನಾಡಿನಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕು ಮತ್ತು ಜನರ ತೀರ್ಪಿಗೆ ಗೌರವ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ತಮಿಳುನಾಡಿನಲ್ಲಿ ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ರಾಜಕೀಯ ಬೆಳವಣಿಗೆಗಳ ನಡುವೆ ಈ ಘಟನೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಅವರ ನೇತೃತ್ವದ ಟಿವಿಕೆ ಪಕ್ಷವು 108 ಸ್ಥಾನಗಳನ್ನು ಗೆದ್ದು, ರಾಜ್ಯದಲ್ಲಿಯೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ, ತಮಿಳುನಾಡು ರಾಜ್ಯಪಾಲರಾದ ರಾಜೇಂದ್ರ ಅರಳೇಕರ್ ಅವರು ಸರ್ಕಾರ ರಚಿಸಲು ವಿಜಯ್ ಅವರನ್ನು ತಕ್ಷಣ ಆಹ್ವಾನಿಸದ ಕಾರಣ ಪಕ್ಷದ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಇದು ಪ್ರಜಾತಾಂತ್ರಿಕ ವ್ಯವಸ್ಥೆಯ ಉಲ್ಲಂಘನೆ ಎಂದು ಆರೋಪಿಸಿ ಕಾರ್ಯಕರ್ತರೊಬ್ಬರು ನೇರವಾಗಿ ರಾಷ್ಟ್ರಪತಿಗಳಿಗೆ ದೂರು ನೀಡಿದ್ದಾರೆ.
234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು 118 ಶಾಸಕರ ಬೆಂಬಲದ ಅಗತ್ಯವಿದೆ. ವಿಜಯ್ ಅವರು ಮೊದಲಿಗೆ 112 ಶಾಸಕರ (108 ಟಿವಿಕೆ ಮತ್ತು 5 ಕಾಂಗ್ರೆಸ್ ಶಾಸಕರು) ಬೆಂಬಲದ ಪಟ್ಟಿಯನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದರು. ಆದರೆ ಪೂರ್ಣ 118 ಶಾಸಕರ ಬೆಂಬಲದ ದಾಖಲೆ ತಂದ ನಂತರವಷ್ಟೇ ಪ್ರಮಾಣ ವಚನಕ್ಕೆ ಬರುವಂತೆ ರಾಜ್ಯಪಾಲರು ವಿಜಯ್ ಅವರಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನು ಓದಿದ್ದೀರಾ? ಗಲ್ಲಾಪೆಟ್ಟಿಗೆಯಿಂದ ಮತಪೆಟ್ಟಿಗೆ; ಜೋಸೆಫ್ ವಿಜಯ್ ಎಂಬ ಹೀರೋವಿನ ಸೂಪರ್ ಡ್ಯೂಪರ್ ಹಿಟ್ ರಾಜಕೀಯ ಪ್ರವೇಶ!
ರಾಜ್ಯಪಾಲರ ಈ ನಿಲುವನ್ನು ವಿಸಿಕೆ (VCK), ಸಿಪಿಐ(ಎಂ) ಹಾಗೂ ಕಾಂಗ್ರೆಸ್ ಪಕ್ಷಗಳು ತೀವ್ರವಾಗಿ ಖಂಡಿಸಿವೆ. ‘ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿಕೆ ಪಕ್ಷಕ್ಕೆ ನಿಯಮಾನುಸಾರ ಮೊದಲು ಸರ್ಕಾರ ರಚಿಸಲು ಆಹ್ವಾನ ನೀಡಬೇಕು. ತದನಂತರ ವಿಧಾನಸಭೆಯ ಸದನದಲ್ಲಿ ಬಹುಮತ ಸಾಬೀತುಪಡಿಸಲು ಅವಕಾಶ ಕಲ್ಪಿಸಬೇಕು’ ಎಂದು ಈ ಪಕ್ಷಗಳು ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿವೆ. ರಾಜ್ಯಪಾಲರ ಈ ವಿಳಂಬ ನೀತಿಯು ರಾಜ್ಯದಲ್ಲಿ ಅನಗತ್ಯ ರಾಜಕೀಯ ಅಸ್ಥಿರತೆಗೆ ಕಾರಣವಾಗುತ್ತಿದೆ ಎಂದು ಎಡಪಕ್ಷಗಳು ಅಸಮಾಧಾನವನ್ನು ವ್ಯಕ್ತಪಡಿಸಿವೆ.
ಸದ್ಯಕ್ಕೆ ಟಿವಿಕೆ ಪಕ್ಷವು ಇಬ್ಬರು ಶಾಸಕರಿರುವ ವಿಸಿಕೆ ಹಾಗೂ ಸಿಪಿಐ ಪಕ್ಷಗಳ ಬೆಂಬಲ ಪಡೆಯಲು ನಿರಂತರ ಚರ್ಚೆ ನಡೆಸುತ್ತಿದೆ. ಪ್ರಜಾಪ್ರಭುತ್ವದ ನಿಯಮಗಳ ಅನುಸಾರ ಅತಿದೊಡ್ಡ ಪಕ್ಷವನ್ನು ಮೊದಲು ಆಹ್ವಾನಿಸುವುದು ಸಾಂವಿಧಾನಿಕ ಪದ್ಧತಿಯಾಗಿದ್ದು, ತಮಿಳುನಾಡಿನಲ್ಲಿ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಬೇಕು ಎಂದು ರಾಷ್ಟ್ರಪತಿಗಳಿಗೆ ಸಲ್ಲಿಸಿರುವ ಪತ್ರದಲ್ಲಿ ಆಗ್ರಹಿಸಲಾಗಿದೆ.




