ಕರ್ನಾಟಕದ ಅಂತಿಮ ಮತದಾರರ ಪಟ್ಟಿಯಲ್ಲಿ ಒಬ್ಬ ಅರ್ಹ ನಾಗರಿಕನನ್ನೂ ಕೈಬಿಟ್ಟಿಲ್ಲ, ಒಬ್ಬ ಅನರ್ಹ ವ್ಯಕ್ತಿಯನ್ನೂ ಸೇರಿಸಿಲ್ಲ ಎಂದು ಚುನಾವಣಾ ಆಯೋಗ ಹೇಳುತ್ತದೆ. ಆದರೆ, ಮತದಾರರ ಪಟ್ಟಿಯಲ್ಲಿರುವ ಅಂಕಿಅಂಶಗಳು ಮತ್ತು ದಾಖಲೆಗಳು ಬೇರೆಯದ್ದೇ ಕಥೆ ಹೇಳುತ್ತಿವೆ.
“ಮತದಾರರ ಪಟ್ಟಿಯಿಂದ ಒಬ್ಬ ಅರ್ಹ ನಾಗರಿಕನನ್ನೂ ಹೊರಗಿಟ್ಟಿಲ್ಲ; ಒಬ್ಬ ಅನರ್ಹ ವ್ಯಕ್ತಿಯನ್ನೂ ಮತದಾರರ ಪಟ್ಟಿಯಲ್ಲಿ ಸೇರಿಸಿಲ್ಲ.”
– ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ, ಅಕ್ಟೋಬರ್ 27, 2026.
ಅಕ್ಟೋಬರ್ 27ರಂದು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳು ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದರು.
ಭಾರತದಲ್ಲಿ ಸ್ವಾತಂತ್ರ್ಯನಂತರದಿಂದ ಈವರೆಗೆ ನಡೆದಿರುವ ಮತಪಟ್ಟಿ ಪರಿಷ್ಕರಣೆಗಳ ಪೈಕಿ ಇದು ಎಂಟನೆಯದು. ಆದರೆ, ಹಿಂದಿನ ಏಳು ಪರಿಷ್ಕರಣೆಗಳಿಗಿಂತ ಈ ಪರಿಷ್ಕರಣೆ ಭಿನ್ನವಾಗಿದೆ. ಈ ಹಿಂದೆ, ನಡೆದ ಎಲ್ಲ ಏಳು ಪರಿಷ್ಕರಣೆಗಳಲ್ಲಿ ಮತದಾರರ ಸಂಖ್ಯೆ ಹೆಚ್ಚಾಗಿತ್ತು. ಆದರೆ, ಇದೇ ಮೊದಲ ಬಾರಿಗೆ ಮತದಾರರ ಸಂಖ್ಯೆ ಕಡಿಮೆಯಾಗಿದೆ. ಇದಕ್ಕೆ ಚುನಾವಣಾ ಆಯೋಗ ನೀಡಿರುವ ಕಾರಣಗಳೂ ಒಂದೇ ರೀತಿಯಾಗಿಲ್ಲ.
ಮುಖ್ಯ ಚುನಾವಣಾಧಿಕಾರಿಗಳ ‘ಸಾರಾಂಶ ಕೈಪಿಡಿ’ಯ ಪ್ರತಿಯೊಂದು ಪುಟದ ಕೆಳಭಾಗದಲ್ಲೂ ಒಂದೇ ಘೋಷಣೆಯನ್ನು ಮುದ್ರಿಸಲಾಗಿದೆ: “ಮತದಾರರ ಪಟ್ಟಿಯಿಂದ ಒಬ್ಬ ಅರ್ಹ ನಾಗರಿಕನನ್ನೂ ಹೊರಗಿಟ್ಟಿಲ್ಲ; ಒಬ್ಬ ಅನರ್ಹ ವ್ಯಕ್ತಿಯನ್ನೂ ಸೇರಿಸಿಲ್ಲ.”
ಕೇಳಲು ಇದು ಭರವಸೆ ಮೂಡಿಸುವ ಹೇಳಿಕೆ. ಆದರೆ, ಈ ಹೇಳಿಕೆ ಸಂಪೂರ್ಣ ಮತ್ತು ನಿರಪೇಕ್ಷವಾಗಿದೆ. ಈ ಹೇಳಿಕೆಗೆ ವಿರುದ್ಧವಾದ ಒಂದೇ ಒಂದು ಉದಾಹರಣೆ ಸಿಕ್ಕರೂ ಆ ಘೋಷಣೆಯ ಸತ್ಯಾಸತ್ಯತೆಯನ್ನು ಪ್ರಶ್ನಿಬಹುದು. ಆದರೆ, ಅಂತಹ ನೂರಾರು ಉದಾಹರಣೆಗಳು ನಮ್ಮೆದುರಿಗಿವೆ.
ದೇಶಾದ್ಯಂತ ಎಸ್ಐಆರ್ ಪ್ರಕ್ರಿಯೆಯ ಸಮಸ್ಯೆಗಳು ತೀವ್ರವಾಗಿ ವರದಿಯಾಗಿವೆ. ಹೊಸ ಸಮಸ್ಯೆಯೊಂದು ವರದಿಯಾದಾಗಲೆಲ್ಲ ‘ಇದರಲ್ಲಿ ಅಚ್ಚರಿಯೇನಿದೆ?’ ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ತಲುಪಿದೆ.
ಬಿಹಾರದಲ್ಲಿ ಒಂದೇ ರೀತಿಯ ನಕಲಿ ಮತದಾರರ ನಮೂದುಗಳು ಪತ್ತೆಯಾಗಿವೆ. ಜೀವಂತವಾಗಿರುವ ವ್ಯಕ್ತಿಗಳನ್ನು ಮೃತಪಟ್ಟಿದ್ದಾರೆಂದು ಗುರುತಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ 2002ರ ಮತದಾರರ ಪಟ್ಟಿಯಲ್ಲಿದ್ದವರನ್ನೇ ಪಟ್ಟಿಯಲ್ಲಿ ಇಲ್ಲ ಎಂದು ಹೇಳಲಾಗಿದೆ.
ಕರ್ನಾಟಕದಲ್ಲಿಯೂ ಅವಳಿ ಮಕ್ಕಳ ಜನನವನ್ನು ‘ತಾರ್ಕಿಕ ವ್ಯತ್ಯಾಸ’ ಎಂದು ಗುರುತಿಸಲಾಗಿದೆ. ಊರು ಬದಲಾಯಿಸದವರನ್ನೇ ಸ್ಥಳಾಂತರಗೊಂಡಿದ್ದಾರೆಂದು ದಾಖಲಿಸಲಾಗಿದೆ. ಕೆಲವು ಮತದಾರರ ಹೆಸರುಗಳನ್ನು ಯಾವುದೇ ಕಾರಣ ನೀಡದೆ ಕೈಬಿಡಲಾಗಿದೆ.
ಚುನಾವಣಾ ಆಯೋಗದ ಈ ಕೃತ್ಯದ ತುತ್ತಾದವರಲ್ಲಿ ಬೆಂಗಳೂರಿನ ಮತದಾರ ಪೃಥ್ವಿರಾಜ್ ಕೂಡ ಒಬ್ಬರು. ಅವರು, “ನಾನು ಮಾಡಬೇಕಾದ ಎಲ್ಲವನ್ನೂ ಮಾಡಿದ್ದೆ. ಆದರೂ ನನ್ನನ್ನು ಸ್ಥಳಾಂತರಗೊಂಡವನೆಂದು ಗುರುತಿಸಿದ್ದಾರೆ” ಎಂದಿದ್ದಾರೆ.
ಅಂತಿಮ ಮತದಾರರ ಪಟ್ಟಿ ಪ್ರಕಟವಾದ ಎರಡು ದಿನಗಳ ನಂತರ, ಅಮನ್ ಭಾರ್ಗವ ಅವರು 60,923 ಪಿಡಿಎಫ್ ದಾಖಲೆಗಳನ್ನು ವಿಶ್ಲೇಷಿಸಿ, ಸುಮಾರು 4.5 ಕೋಟಿ ನಮೂದುಗಳ ದತ್ತಾಂಶವನ್ನು ಸಿದ್ದಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ದಿ ಹಿಂದು ಪತ್ರಿಕೆಯು ಮತದಾರರ ಪಟ್ಟಿಯಲ್ಲಿ ಅರ್ಥಹೀನ ಹೆಸರುಗಳು ಇರುವುದನ್ನು ವರದಿ ಮಾಡಿತು. ಉದಾಹರಣೆಗೆ, ಕೆಲವು ಹೆಸರುಗಳು ಓದಲು ಸಾಧ್ಯವಾಗದ ಸಂಕೇತಗಳ ರೂಪದಲ್ಲಿದ್ದವು. ಕೆಲವರ ಸಂಬಂಧಿಕರ ಹೆಸರು ‘Husband Husband’ ಎಂದಿತ್ತು. ಮತ್ತೊಬ್ಬರ ತಂದೆಯ ಹೆಸರಿನ ಜಾಗದಲ್ಲಿ ಇಮೇಲ್ ವಿಳಾಸವಿತ್ತು.
ಅಮನ್ ಭಾರ್ಗವ ಅವರು ಪ್ರಕಟಿಸಿರುವ ದತ್ತಾಂಶದ ಪ್ರಕಾರ, ಎಸ್ಐಆರ್ನ ಇತ್ತೀಚಿನ ಮತಪಟ್ಟಿಯಲ್ಲಿ ಸುಮಾರು 1.88 ಲಕ್ಷ ಹೆಸರುಗಳನ್ನು ಕೈಬಿಡಲಾಗಿದೆ. ಆದರೆ, ರಾಜ್ಯದ ಜೂನ್ ತಿಂಗಳ ಮತಪಟ್ಟಿಗೆ ಹೋಲಿಸಿದರೆ, ಎಸ್ಐಆರ್ನಲ್ಲಿ 99.32 ಲಕ್ಷ ಹೆಸರುಗಳನ್ನು ಅಳಿಸಲಾಗಿದೆ.
ಈ ಎರಡು ಸಂಖ್ಯೆಗಳ ನಡುವೆ ಇಷ್ಟೊಂದು ವ್ಯತ್ಯಾಸ ಏಕೆ?
ಏಕೆಂದರೆ, 2024ರ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದ ಸುಮಾರು 1.08 ಕೋಟಿ ಮತದಾರರ ಹೆಸರುಗಳನ್ನು ಎಸ್ಐಆರ್ ಕರಡು ಪಟ್ಟಿ ಪ್ರಕಟಿಸುವ ಮೊದಲೇ ಎಎಸ್ಡಿಡಿಒ ವರ್ಗದಡಿ ಕೈಬಿಡಲಾಗಿತ್ತು. ಹೀಗೆ ಕೈಬಿಡಲಾದವರಿಗೆ ನಂತರ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಿ ಮತ್ತೆ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಯಿತು. ಬಳಿಕ, 1.08 ಕೋಟಿ ಮತದಾರರ ಪೈಕಿ, ಹೊಸ ಮತದಾರರು ಮತ್ತು ಸ್ಥಳಾಂತರಗೊಂಡವರು ಸೇರಿದಂತೆ 10.08 ಲಕ್ಷ ಹೆಸರುಗಳನ್ನು ಮತಪಟ್ಟಿಗೆ ಸೇರಿಸಲಾಯಿತು. ಈ ಸೇರ್ಪಡೆಯ ಅವಧಿಯಲ್ಲಿಯೂ 1.88 ಲಕ್ಷ ಮತದಾರರನ್ನು ತೆಗೆದುಹಾಕಲಾಗಿದೆ. ಆ ಮತದಾರರನ್ನು ಅಮನ್ ಭಾರ್ಗವ ಅವರ ದತ್ತಾಂಶ ಪತ್ತೆಹಚ್ಚಿದೆ.
ಈ ಪ್ರಕ್ರಿಯೆಯನ್ನು ಸ್ವತಂತ್ರವಾಗಿ ಪರಿಶೀಲಿಸಲು ಎಸ್ಐಆರ್ಗೂ ಮುನ್ನ ಇದ್ದ ಮತದಾರರ ಪಟ್ಟಿಗಳ ಅಗತ್ಯವಿತ್ತು. ಆ ಪಟ್ಟಿಗಳನ್ನು ‘ಮತ ಕಾವಲು ಸಮಿತಿ’ ಮತ್ತು ‘ಎದ್ದೇಳು ಕರ್ನಾಟಕ’ ಸಂಘಟನೆಗಳು ಡಿಜಿಟಲೀಕರಣಗೊಳಿಸಿದ್ದವು. ಅವುಗಳ ನೆರವಿನಿಂದ 2002ರ ಮತದಾರರ ಪಟ್ಟಿ, 2025ರ ಜನವರಿಯಲ್ಲಿದ್ದ ಮತದಾರರ ಪಟ್ಟಿ, 2026ರ ಎಸ್ಐಆರ್ ಕರಡು ಪಟ್ಟಿ ಹಾಗೂ ಕರಡು ಪಟ್ಟಿ ಪ್ರಕಟವಾಗುವ ಮೊದಲು ಕೈಬಿಡಲಾದ 1.08 ಕೋಟಿ ಮತದಾರರ ಮೊದಲ ಪಟ್ಟಿ ಮತ್ತು ಪ್ರತಿಯೊಬ್ಬರ ಹೆಸರನ್ನು ಕೈಬಿಟ್ಟ ಕಾರಣಗಳನ್ನು ಸುಲಭವಾಗಿ ದೊರೆತವು.
ಈ ಎಲ್ಲ ದಾಖಲೆಗಳನ್ನು ಬಳಸಿಕೊಂಡು 2002ರಿಂದ 2026ರ ಅಕ್ಟೋಬರ್ ಅಂತ್ಯದವರೆಗೆ ಒಬ್ಬ ಮತದಾರನ ಹೆಸರಿನಲ್ಲಿ ಏನೇನು ಬದಲಾವಣೆಗಳಾಗಿವೆ ಎಂಬುದನ್ನು ಪರಿಶೀಲಿಸಲು ಸಾಧ್ಯವಾಯಿತು.
ಮತದಾರರ ಗುರುತಿನ ಚೀಟಿ ಸಂಖ್ಯೆ (EPIC) ಆಧರಿಸಿ ಈ ಪಟ್ಟಿಗಳನ್ನು ಪರಸ್ಪರ ಜೋಡಿಸಿ, ಚುನಾವಣಾ ಆಯೋಗದ ಎರಡು ಪ್ರಮುಖ ಘೋಷಣೆಗಳನ್ನು ಪರಿಶೀಲಿಸಿದಾಗ, ಆಯೋಗ ಈ ಎರಡೂ ಹೇಳಿಕೆಗಳು ಸಂಪೂರ್ಣವಾಗಿ ನಿಜವಲ್ಲ ಎಂಬುದು ಕಂಡುಬಂದಿದೆ. ಜೊತೆಗೆ, ಒಂದಕ್ಕಿಂತ ಹೆಚ್ಚು ಬಾರಿ ನೋಂದಣಿಯಾಗಿರುವ ಮತದಾರರು, ಮೃತಪಟ್ಟಿದ್ದಾರೆಂದು ಘೋಷಿಸಲ್ಪಟ್ಟ ನಂತರ ಅದನ್ನು ಪ್ರಶ್ನಿಸಿದ ವ್ಯಕ್ತಿಗಳು, ಅರ್ಥಹೀನ ಹೆಸರುಗಳು ಹಾಗೂ ಒಂದೇ ನಿಯಮಗಳ ಅಡಿಯಲ್ಲಿ ಕೆಲಸ ಮಾಡುವ ವಿಧಾನಸಭಾ ಕ್ಷೇತ್ರಗಳ ನಡುವೆ ನೋಟಿಸ್ಗಳ ಸಂಖ್ಯೆಯಲ್ಲಿ ಕಂಡುಬಂದಿರುವ ಭಾರೀ ಅಸಮಾನತೆಗಳು ಪತ್ತೆಯಾಗಿವೆ.
ಎಸ್ಐಅರ್ ಪ್ರಕ್ರಿಯೆಯ ಅವಧಿಯಲ್ಲಿ ನಿಯಮಗಳನ್ನು ಹಲವು ಬಾರಿ ಬದಲಾಯಿಸಲಾಗಿದೆ. ಇದರಿಂದ ಇಡೀ ಪ್ರಕ್ರಿಯೆ ಸಾಕಷ್ಟು ಆತಂಕವನ್ನು ಉಂಟುಮಾಡಿತು.
ಅಧ್ಯಯನದಲ್ಲಿ ಪತ್ತೆಯಾದ ಪ್ರಮುಖ ಅಂಕಿಅಂಶಗಳು
‘ಒಬ್ಬ ಅನರ್ಹ ವ್ಯಕ್ತಿಯನ್ನೂ ಪಟ್ಟಿಯಲ್ಲಿ ಸೇರಿಸಿಲ್ಲ’ ಎಂಬ ಹೇಳಿಕೆಯ ಪರಿಶೀಲನೆ
| ಪತ್ತೆಯಾದ ದೋಷ | ಸಂಖ್ಯೆ |
| ಒಂದೇ ಮತಗಟ್ಟೆಯಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ನೋಂದಾಯಿತರಾದ ಮತದಾರರು | 8,992 |
| ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಣಿಸಿಕೊಂಡ ಒಂದೇ ಮತದಾರರ ಗುರುತಿನ ಸಂಖ್ಯೆಗಳು | 461 |
| ಒಂದೇ ಮನೆ ಸಂಖ್ಯೆಯಲ್ಲಿ 100 ಅಥವಾ ಅದಕ್ಕಿಂತ ಹೆಚ್ಚು ಮತದಾರರಿರುವ ಪ್ರಕರಣಗಳು | 381 |
| ಬಳಸಬಹುದಾದ ಸರಿಯಾದ ಮನೆ ಸಂಖ್ಯೆಯಿಲ್ಲದ ಮತದಾರರು | 20.7 ಲಕ್ಷ |
| ಸಂಕೇತಗಳ ರೂಪದಲ್ಲಿ ಮುದ್ರಿತವಾಗಿರುವ ಹೆಸರುಗಳು | 1,318 |
| ಒಬ್ಬರನ್ನೊಬ್ಬರು ತಂದೆ ಎಂದು ದಾಖಲಿಸಿಕೊಂಡಿರುವ ಮತದಾರರ ಜೋಡಿಗಳು | 296 |
‘ಒಬ್ಬ ಅರ್ಹ ನಾಗರಿಕನನ್ನೂ ಕೈಬಿಟ್ಟಿಲ್ಲ’ ಎಂಬ ಹೇಳಿಕೆಯ ಪರಿಶೀಲನೆ
| ಪತ್ತೆಯಾದ ಸಮಸ್ಯೆ | ಸಂಖ್ಯೆ |
| ಕರಡು ಪಟ್ಟಿ ಪ್ರಕಟಿಸುವ ಮೊದಲೇ ಕೈಬಿಡಲಾದ ಮತದಾರರು | 1.05 ಕೋಟಿ |
| ಅವರಲ್ಲಿ ಅಂತಿಮ ಪಟ್ಟಿಗೆ ಮರಳಿ ಸೇರ್ಪಡೆಯಾದವರು | 14,900 |
| 2002ರ ಪಟ್ಟಿಯಲ್ಲಿದ್ದರೂ ಅದರಲ್ಲಿ ಇಲ್ಲ ಎಂದು ನೋಟಿಸ್ ಪಡೆದವರು | 3,115 |
| 9 ತಿಂಗಳ ಅಂತರ ನಿಯಮದಲ್ಲಿ ನೋಟಿಸ್ ಪಡೆದ/ಕೈಬಿಡಲಾದವರು | 4,954 |
| ಮೃತಪಟ್ಟಿದ್ದಾರೆಂದು ಗುರುತಿಸಲಾಗಿದ್ದು, ನಂತರ ಅಂತಿಮ ಪಟ್ಟಿಗೆ ಮರಳಿದವರು | 332 |
| ಕೈಬಿಡಲಾದ ಮತದಾರರ ಗುರುತಿನ ಸಂಖ್ಯೆಯನ್ನು ಪಡೆದ ಹೊಸ ಮತದಾರರು | 234 |
ಮಾಹಿತಿ ಮೂಲಗಳು: ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ, ಮತ ಕಾವಲು ಸಮಿತಿ ಮತ್ತು Diagram Chasing.
ಬೊಮ್ಮನಹಳ್ಳಿಯಲ್ಲಿ 53%ರಷ್ಟು ಮತದಾರರ ಇಳಿಕೆ
2025ರ ಜನವರಿಯಿಂದ 2026ರ ಅಕ್ಟೋಬರ್ವರೆಗಿನ 224 ವಿಧಾನಸಭಾ ಕ್ಷೇತ್ರಗಳ ಮಾಹಿತಿಯನ್ನು ಪರಿಶೀಲಿಸಲಾಗಿದೆ. ಈ ಪೈಕಿ, ಬೊಮ್ಮನಹಳ್ಳಿಯಲ್ಲಿ ಅತೀ ಹೆಚ್ಚು ಅಂದರೆ, ಬರೋಬ್ಬರಿ 53%ರಷ್ಟು ಮತದಾರರ ಸಂಖ್ಯೆ ಕಡಿಮೆಯಾಗಿದೆ. ಆದರೆ, ರಾಜ್ಯದ ವಿಧಾನಸಭಾ ಕ್ಷೇತ್ರಗಳ ಸರಾಸರಿ ಕಡಿತವು 11%ರಷ್ಟಿದೆ.
ಬೊಮ್ಮನಹಳ್ಳಿಯ 46%ರಷ್ಟು ಮತದಾರರಿಗೆ ನೋಟಿಸ್ ನೀಡಲಾಗಿದ್ದರೆ, ಉಳಿದೆಲ್ಲ ಕ್ಷೇತ್ರಗಳ ಸರಾಸರಿಯು 5%ರಷ್ಟಿದೆ. ನೋಟಿಸ್ ಪಡೆದವರಲ್ಲಿ ಅನರ್ಹರೆಂದು ಕೈಬಿಟ್ಟವರ ಪ್ರಮಾಣ ಬೊಮ್ಮನಹಳ್ಳಿಯಲ್ಲಿ 4.0%ರಷ್ಟಿದ್ದರೆ, ಉಳಿದೆಡೆ ಸರಾಸರಿ 1.1%ರಷ್ಟಿದೆ. ಬೊಮ್ಮನಹಳ್ಳಿಯಲ್ಲಿ ಸರಿಯಾದ ಮನೆ ಸಂಖ್ಯೆಯಿಲ್ಲದ ಮತದಾರರ ಪ್ರಮಾಣ 0.3%ರಷ್ಟಿದ್ದು, ಇತರಡೆ 3%ರಷ್ಟಿದೆ.

ಇನ್ನು ಮುಂದೆ ಈ ಅಂಕಿಅಂಶಗಳ ಹಿಂದಿರುವ ಸಾಕ್ಷ್ಯಗಳನ್ನು ಒಂದೊಂದಾಗಿ ನೋಡೋಣ.
ಲೇಖನದ ವಿವಿಧ ಭಾಗಗಳಿಗೆ ಚಲನಚಿತ್ರಗಳ ಹೆಸರುಗಳನ್ನು ಬಳಸಲಾಗಿದೆ. ಇದಕ್ಕೆ ವಿಶೇಷ ಕಾರಣವೇನಿಲ್ಲ. ಸ್ವಲ್ಪ ಹಾಸ್ಯ ಬೆರೆಸುವುದು ಮತ್ತು ಓದುಗರನ್ನು ಸುದೀರ್ಘ ಲೇಖನ ಓದಲು ಪ್ರೋತ್ಸಾಹಿಸುವುದೇ ಉದ್ದೇಶ!
ಭಾಗ 1: ‘ಒಬ್ಬ ಅನರ್ಹ ವ್ಯಕ್ತಿಯನ್ನೂ ಸೇರಿಸಿಲ್ಲ’ ಎಂಬ ಹೇಳಿಕೆಯ ವಾಸ್ತವ
ಹಮ್ ಪಾಂಚ್ — ನಾವು ಐವರು
ಅನರ್ಹ ವ್ಯಕ್ತಿ ಎಂದರೆ ಯಾರು? ಇದು ತಾತ್ವಿಕ ಪ್ರಶ್ನೆಯಂತೆ ಕೇಳಿಸಬಹುದು. ಆದರೆ, ಅದಕ್ಕೆ ವಾಸ್ತವಿಕ ಉದಾಹರಣೆಗಳ ಮೂಲಕ ಉತ್ತರ ಹುಡುಕೋಣ.
ಶೋರಾಪುರದ ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾದವರ ಪುಟವೊಂದರಲ್ಲಿ 18 ವರ್ಷದ ಗೌಸಿಯಾ ಬೇಗಂ ಎಂಬ ಹೆಸರು ಐದು ಬಾರಿ ಕಾಣಿಸುತ್ತದೆ. ಐದು ನಮೂದುಗಳಲ್ಲಿಯೂ ಹೆಸರು, ತಂದೆಯ ಹೆಸರು, ಮನೆ ಸಂಖ್ಯೆ, ವಯಸ್ಸು ಹಾಗೂ ಲಿಂಗ ಒಂದೇ ಆಗಿವೆ. ಆದರೆ, ಐದು ನಮೂದುಗಳಿಗೂ ಐದು ವಿಭಿನ್ನ ಮತದಾರರ ಗುರುತಿನ ಸಂಖ್ಯೆಗಳಿವೆ.

ಅದೇ ಪುಟದಲ್ಲಿ 18 ವರ್ಷದ ಅಬ್ದುಲ್ ರಹಿಮಾನ್ ಮತ್ತು ಶಂಕರನಾಗ್ ಎಂಬವರ ಹೆಸರುಗಳೂ ತಲಾ ಎರಡು ಬಾರಿ ಕಾಣಿಸಿವೆ.
ಇದು ಶೋರಾಪುರಕ್ಕೆ ಮಾತ್ರ ಸೀಮಿತವಾಗಿರುವ ಸಮಸ್ಯೆಯಲ್ಲ.
ಪರಿಷ್ಕರಣೆಯ ಸಂದರ್ಭದಲ್ಲಿ 762 ನಕಲಿ ಮತದಾರರ ನಮೂದುಗಳನ್ನು ತೆಗೆದುಹಾಕಲಾಗಿದೆ. ಆದರೆ, ಇದೇ ಅವಧಿಯಲ್ಲಿ 8,268 ಹೊಸ ನಕಲಿ ನಮೂದುಗಳು ಸೇರ್ಪಡೆಯಾಗಿವೆ. ಅಂದರೆ, ತೆಗೆದುಹಾಕಲಾದ ಪ್ರತಿಯೊಂದು ನಕಲಿ ನಮೂದಿಗೆ ಸುಮಾರು 11 ಹೊಸ ನಕಲಿ ನಮೂದುಗಳು ಸೇರ್ಪಡೆಯಾಗಿವೆ.
ರಾಜ್ಯದಲ್ಲಿ ಕನಿಷ್ಠ 8,992 ವ್ಯಕ್ತಿಗಳ ಹೆಸರುಗಳು ಒಂದೇ ಮತಗಟ್ಟೆಯಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಕಾಣಿಸಿಕೊಂಡಿವೆ. ಇವುಗಳಲ್ಲಿ ಹೆಸರು, ಸಂಬಂಧಿಕರ ಹೆಸರು, ವಯಸ್ಸು ಮತ್ತು ಲಿಂಗ ಒಂದೇ ಆಗಿವೆ. ಈ 8,992 ವ್ಯಕ್ತಿಗಳ ಹೆಸರಿನಲ್ಲಿ ಒಟ್ಟು 18,271 ಮತದಾರರ ನಮೂದುಗಳಿದ್ದು, ಪ್ರತಿಯೊಂದಕ್ಕೂ ವಿಭಿನ್ನ ಗುರುತಿನ ಸಂಖ್ಯೆಗಳಿವೆ.

ನಕಲಿ ನಮೂದುಗಳ ವಿಶ್ಲೇಷಣೆ ಹೀಗಿದೆ:
| ವಿವರ | ಸಂಖ್ಯೆ |
| ಪರಿಷ್ಕರಣೆ ವೇಳೆ ನಕಲಿ ಎಂದು ತೆಗೆದುಹಾಕಲಾದ ನಮೂದುಗಳು | 762 |
| ಪರಿಷ್ಕರಣೆಯ ವೇಳೆ ಹೊಸದಾಗಿ ಸೇರ್ಪಡೆಯಾದ ನಕಲಿ ನಮೂದುಗಳು | 8,268 |
| ಮೊದಲಿನಿಂದಲೂ ಪಟ್ಟಿಯಲ್ಲಿದ್ದ ನಕಲಿ ನಮೂದುಗಳು | 1,011 |
ಈ ಅಧ್ಯಯನದಲ್ಲಿ ಒಂದೇ ಮತಗಟ್ಟೆಯಲ್ಲಿ ಒಂದೇ ಹೆಸರು, ಸಂಬಂಧಿಕರ ಹೆಸರು, ವಯಸ್ಸು ಮತ್ತು ಲಿಂಗ ಹೊಂದಿದ್ದು, ಒಂದೇ ಮನೆ ಸಂಖ್ಯೆ ಅಥವಾ ಹೊಸ ಸೇರ್ಪಡೆಯ ಸಂಬಂಧ ಹೊಂದಿರುವ ಹೆಚ್ಚುವರಿ ನಮೂದುಗಳನ್ನು ನಕಲಿ ನಮೂದುಗಳೆಂದು ಗುರುತಿಸಲಾಗಿದೆ.
ಡೂಪ್ಲಿಕೇಟ್ — ಒಂದೇ ಮತದಾರರ ಗುರುತಿನ ಸಂಖ್ಯೆ ಎರಡು ಕ್ಷೇತ್ರಗಳಲ್ಲಿ!
ನಿಯಮಗಳ ಪ್ರಕಾರ, ಒಬ್ಬ ವ್ಯಕ್ತಿಯ ಮತದಾರರ ಗುರುತಿನ ಸಂಖ್ಯೆ ವಿಶಿಷ್ಟವಾಗಿರಬೇಕು. ಅದು ಜೀವನಪೂರ್ತಿ ಆ ವ್ಯಕ್ತಿಗೆ ಸೇರಿರಬೇಕು.
ವ್ಯಕ್ತಿಯೊಬ್ಬರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಗೊಂಡಾಗ ಫಾರಂ-8 ಸಲ್ಲಿಸಬೇಕು. ಆಗ ಹಳೆಯ ಮತದಾರರ ಪಟ್ಟಿಯಲ್ಲಿದ್ದ ಅವರ ಹೆಸರನ್ನು ಕೈಬಿಡಬೇಕು.
ಆದರೆ, ಕೆಲವೊಮ್ಮೆ ಹಾಗಾಗುವುದಿಲ್ಲ.
ಬಾಗಲಕೋಟೆಯ ಮತದಾರರ ಪಟ್ಟಿಯಲ್ಲಿ 33 ವರ್ಷದ ಸಂಗಪ್ಪ ಎಂಬ ವ್ಯಕ್ತಿಯ ಹೆಸರು ಕಾಣಿಸುತ್ತದೆ. ಅದೇ ಸಂಗಪ್ಪನ ಹೆಸರು ಸುಮಾರು 500 ಕಿಲೋಮೀಟರ್ ದೂರದ ಯಶವಂತಪುರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿಯೂ ಕಾಣಿಸುತ್ತದೆ. ಅಲ್ಲಿ ಅವರ ಹೆಸರು, ತಂದೆಯ ಹೆಸರು, ವಯಸ್ಸು ಮತ್ತು ಮತದಾರರ ಗುರುತಿನ ಸಂಖ್ಯೆಯೂ ಒಂದೇ ಆಗಿದೆ.

ಈ ರೀತಿಯಾಗಿ ಕನಿಷ್ಠ 461 ಮತದಾರರ ಗುರುತಿನ ಸಂಖ್ಯೆಗಳು ಒಂದೇ ಸಮಯದಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ.
ಹೌಸ್ಫುಲ್ — ಒಂದೇ ಮನೆಯಲ್ಲಿ 688 ಮತದಾರರು!
ಕಾಗವಾಡ ವಿಧಾನಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಮನೆ ಸಂಖ್ಯೆ 396ರಲ್ಲಿ ಬರೋಬ್ಬರಿ 688 ಮತದಾರರು ವಾಸಿಸುತ್ತಿದ್ದಾರೆಂದು ದಾಖಲಿಸಲಾಗಿದೆ. ಆ ಮನೆಯ ಸಂಖ್ಯೆ ಹೊಂದಿರುವ ಮತದಾರರ ವಿವರಗಳು ಒಂದೆರಡು ಪುಟಗಳಿಗೆ ಸೀಮಿತವಾಗಿಲ್ಲ. ಮತದಾರರ ಪಟ್ಟಿಯ ಸುಮಾರು 30 ಪುಟಗಳಾದ್ಯಂತ ಕಾಣಿಸುತ್ತವೆ.

ಭಾರತದಲ್ಲಿ ಕೆಲವು ಮನೆಗಳು ಚಿಕ್ಕದಾಗಿರುತ್ತವೆ, ಕೆಲವು ದೊಡ್ಡದಾಗಿರುತ್ತವೆ ಎಂಬುದು ನಿಜ. ಆದರೆ, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS) ಪ್ರಕಾರ ಭಾರತದಲ್ಲಿ ಒಂದು ಕುಟುಂಬದ ಸರಾಸರಿ ಸದಸ್ಯರ ಸಂಖ್ಯೆ 4.4.
ಇಲ್ಲಿ ಒಂದೇ ಮನೆ ಸಂಖ್ಯೆಯಲ್ಲಿ 688 ಮಂದಿ ವಾಸಿಸುತ್ತಿದ್ದಾರೆ! ಇದು ಆ ಮತಗಟ್ಟೆಯ ಒಟ್ಟು ಮತದಾರರ ಸುಮಾರು ಮುಕ್ಕಾಲು ಭಾಗದಷ್ಟು.
ಇನ್ನೂ ವಿಚಿತ್ರವೆಂದರೆ, ಈ ಮತದಾರರು ಸುಮಾರು 418 ವಿಭಿನ್ನ ತಂದೆ, ಪತಿ ಅಥವಾ ತಾಯಂದಿರ ಹೆಸರುಗಳನ್ನು ದಾಖಲಿಸಿದ್ದಾರೆ.
ಇದಕ್ಕೆ ಚುನಾವಣಾ ಆಯೋಗ ನೀಡುವ ಸಮರ್ಥನೆಯೆಂದರೆ, ಇವು ‘ಕಾಲ್ಪನಿಕ ಅಥವಾ ಸೂಚಕ ಮನೆ ಸಂಖ್ಯೆಗಳು’ ಎಂಬುದು.
ಇದೂ ಕೂಡ ನಿಜವಾಗಿರಬಹುದು. ಆದರೆ, ಎಸ್ಐಆರ್ ಪರಿಷ್ಕರಣೆಯ ಮೊದಲ ಹಂತದಲ್ಲಿ ಮನೆಮನೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ ಎಂದು ಚುನಾವಣಾ ಆಯೋಗ ಹೇಳುತ್ತದೆ.
ಇದೇ ಪ್ರಕ್ರಿಯೆಯಲ್ಲಿ 65 ಲಕ್ಷ ಜನರನ್ನು ‘ಶಾಶ್ವತವಾಗಿ ಸ್ಥಳಾಂತರಗೊಂಡವರು’ ಮತ್ತು 19 ಲಕ್ಷ ಜನರನ್ನು ‘ಗೈರುಹಾಜರಾದವರು’ ಎಂದು ಗುರುತಿಸಿ ಕೈಬಿಡಲಾಗಿದೆ. ಹಾಗಾದರೆ, ಮನೆ ಸಂಖ್ಯೆ ಕೇವಲ ಸೂಚಕ ಸಂಖ್ಯೆಯಾಗಿರುವಾಗ, ಅಧಿಕಾರಿಯೊಬ್ಬರು ಆ ಮನೆಯಿಂದ ವ್ಯಕ್ತಿಯೊಬ್ಬರು ಸ್ಥಳಾಂತರಗೊಂಡಿದ್ದಾರೆ ಎಂಬುದನ್ನು ಹೇಗೆ ನಿರ್ಧರಿಸಿದರು?
ಮನೆ ಸಂಖ್ಯೆ 396 ಮಾತ್ರ ಇಂತಹ ಉದಾಹರಣೆಯಲ್ಲ. ರಾಜ್ಯದಲ್ಲಿ ಒಂದೇ ಮನೆ ಸಂಖ್ಯೆಯಡಿ 100 ಅಥವಾ ಅದಕ್ಕಿಂತ ಹೆಚ್ಚು ಮತದಾರರಿದ್ದು, ಕನಿಷ್ಠ 50 ವಿಭಿನ್ನ ಸಂಬಂಧಿಕರ ಹೆಸರುಗಳನ್ನು ಹೊಂದಿರುವ 381 ಪ್ರಕರಣಗಳು ಪತ್ತೆಯಾಗಿವೆ.
ಈ ಮನೆ ಸಂಖ್ಯೆಗಳ ಅಡಿಯಲ್ಲಿ ಒಟ್ಟು ಸುಮಾರು 54,778 ಮತದಾರರಿದ್ದಾರೆ.
ಇದಲ್ಲದೆ, ಅಂತಿಮ ಮತದಾರರ ಪಟ್ಟಿಯಲ್ಲಿರುವ 20.7 ಲಕ್ಷ ಮತದಾರರ ಮನೆ ಸಂಖ್ಯೆಯ ಜಾಗದಲ್ಲಿ ‘0’, ಒಂದು ಅಡ್ಡಗೆರೆ ಇದೆ ಅಥವಾ ಯಾವುದೇ ಮಾಹಿತಿಯೇ ಇಲ್ಲದೆ ಖಾಲಿ ಉಳಿದಿದೆ.
ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ 663 ಮತದಾರರ ಪೈಕಿ 545 ಮಂದಿಗೆ ಮನೆ ಸಂಖ್ಯೆಯೇ ಇಲ್ಲ. ಬಹುತೇಕರ ಮನೆ ಸಂಖ್ಯೆ ‘0’ ಎಂದಿದೆ.

ಮನೆ ಸಂಖ್ಯೆ ‘0’ ಇರುವ ಮನೆಗೆ ಬೂತ್ ಮಟ್ಟದ ಅಧಿಕಾರಿ (BLO) ಹೇಗೆ ಹೋಗಿ ಬಾಗಿಲು ತಟ್ಟುತ್ತಾರೆ?
ರಾಜ್ಯದ ಅಂತಿಮ ಮತದಾರರ ಪಟ್ಟಿ ಪ್ರಕಾರ, ಕನಿಷ್ಠ 20,73,689 ಮತದಾರರಿಗೆ ಸರಿಯಾದ ವಿಳಾಸವೇ ಇಲ್ಲ.
ಗುಮ್ನಾಮ್ — ಹೆಸರೇ ಇಲ್ಲದ ಮತದಾರರು!
ಹೆಸರು ಏನೇ ಇದ್ದರೂ ಗುಲಾಬಿಯ ಪರಿಮಳ ಬದಲಾಗುವುದಿಲ್ಲ ಎಂಬ ಮಾತಿದೆ. ಆದರೆ, ಮತದಾರರ ಹೆಸರು ಏನೇ ಇದ್ದರೂ ಪರವಾಗಿಲ್ಲ ಎಂದು ಹೇಳಬಹುದೇ?
ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯ ಒಂದು ಪುಟದಲ್ಲಿ ಇರುವ 30 ಮತದಾರರ ಪೈಕಿ 20 ಮಂದಿಯ ಹೆಸರು ಅಥವಾ ಸಂಬಂಧಿಕರ ಹೆಸರು ಓದಲು ಸಾಧ್ಯವಾಗದ ಸಂಕೇತಗಳ ರೂಪದಲ್ಲಿ ಮುದ್ರಿತವಾಗಿದೆ.
ಪರಿಣಾಮವಾಗಿ, ಚುನಾವಣಾ ಆಯೋಗದ ಸ್ವಂತ ಹುಡುಕಾಟ ಪೋರ್ಟಲ್ನಲ್ಲಿಯೇ ಈ ಮತದಾರರನ್ನು ಪತ್ತೆಹಚ್ಚಲು ಸಾಧ್ಯವಾಗುವುದಿಲ್ಲ.

ವಿಶೇಷವಾಗಿ ರಾಯಚೂರಿನಲ್ಲಿ ಫಾಂಟ್ ಸಮಸ್ಯೆಗಳು ಹೆಚ್ಚಾಗಿ ಕಂಡುಬಂದಿವೆ. ತಪ್ಪಾಗಿ ಮುದ್ರಿತವಾದ ಹೆಸರುಗಳಲ್ಲಿ ಅರ್ಧದಷ್ಟು ರಾಯಚೂರು ಗ್ರಾಮೀಣ ಕ್ಷೇತ್ರದ ಕೇವಲ ನಾಲ್ಕು ಮತಗಟ್ಟೆಗಳಲ್ಲಿ ಕಂಡುಬಂದಿವೆ.
ಹೆಸರು ಅಥವಾ ಸಂಬಂಧಿಕರ ಹೆಸರು ಸಂಕೇತಗಳ ರೂಪದಲ್ಲಿ ಮುದ್ರಿತವಾಗಿರುವ ಪ್ರಮಾಣ ಹೆಚ್ಚು ಕಂಡುಬಂದ 12 ಮತಗಟ್ಟೆಗಳ ವಿವರ ಹೀಗಿದೆ:
| ಕ್ಷೇತ್ರ ಮತ್ತು ಮತಗಟ್ಟೆ ಭಾಗ | ತಪ್ಪಾಗಿ ಮುದ್ರಿತ ಹೆಸರುಗಳ ಪ್ರಮಾಣ |
| ರಾಯಚೂರು ಗ್ರಾಮೀಣ – 244 | 25% |
| ಟಿ. ನರಸೀಪುರ – 166 | 22% |
| ರಾಯಚೂರು ಗ್ರಾಮೀಣ – 212 | 20% |
| ರಾಯಚೂರು ಗ್ರಾಮೀಣ – 216 | 19% |
| ರಾಯಚೂರು ಗ್ರಾಮೀಣ – 215 | 15% |
| ದಾಸರಹಳ್ಳಿ – 324 | 14% |
| ಹಾಸನ – 15 | 12% |
| ವಿಜಯನಗರ – 125 | 11% |
| ರಾಯಚೂರು – 127 | 8% |
| ರಾಯಚೂರು – 126 | 7% |
| ವಿಜಯನಗರ – 124 | 3% |
| ಚಾಮುಂಡೇಶ್ವರಿ – 52 | 1% |
ಹೆಚ್ಚಿನ ಕಡೆಗಳಲ್ಲಿ ಸಂಕೇತಗಳಿಂದ ಕೂಡಿರುವ ಹೆಸರುಗಳನ್ನು ಈ ಅಧ್ಯಯನದಲ್ಲಿ ತಪ್ಪಾಗಿ ಮುದ್ರಿತ ಹೆಸರುಗಳೆಂದು ಪರಿಗಣಿಸಲಾಗಿದೆ.

ಸಂಕೇತಗಳ ಸಮಸ್ಯೆಯ ಹೊರತಾಗಿಯೂ ಮತದಾರರ ಪಟ್ಟಿಯಲ್ಲಿ ಇನ್ನೂ ಹಲವು ವಿಚಿತ್ರ ಹೆಸರುಗಳಿವೆ. ಕೆಲವರ ಸಂಬಂಧಿಕರ ಹೆಸರಿನ ಜಾಗದಲ್ಲಿ ‘father’ ಎಂದು ಮಾತ್ರ ಇದೆ. ಇನ್ನೂ ಕೆಲವೆಡೆ ‘husband husband’ ಎಂದು ಮುದ್ರಿಸಲಾಗಿದೆ. ಕೆಲವರ ಹೆಸರು ಒಂದು ಅಕ್ಷರವಷ್ಟೇ ಇದೆ. ಮತ್ತೊಬ್ಬರ ತಾಯಿಯ ಹೆಸರು ಇರುವ ಜಾಗದಲ್ಲಿ ದೂರವಾಣಿ ಸಂಖ್ಯೆ ಇದೆ.
ಒಟ್ಟಾರೆ ಸುಮಾರು 10,000 ಮತದಾರರ ಹೆಸರು ಅಥವಾ ಸಂಬಂಧಿಕರ ಹೆಸರು ಇರುವ ಜಾಗದಲ್ಲಿ ಸರಿಯಾದ ಹೆಸರಿನ ಬದಲಿಗೆ ಬೇರೆ ಮಾಹಿತಿ/ಸೂಚಕಗಳು ಮುದ್ರಿತವಾಗಿವೆ.
ತಪ್ಪಾಗಿ ಮುದ್ರಿತವಾದ ಹೆಸರುಗಳ ವರ್ಗೀಕರಣ
| ದೋಷದ ಸ್ವರೂಪ | ನಮೂದುಗಳು |
| ಹೆಸರಿನ ಮಧ್ಯೆ ಅಂಕಿಗಳು ಸೇರಿರುವುದು | 3,209 |
| ‘father’ ಎಂದು ಮುದ್ರಿತವಾಗಿರುವುದು | 1,418 |
| ಓದಲು ಸಾಧ್ಯವಾಗದ ಸಂಕೇತಗಳು | 1,318 |
| ಒಂದೇ ಅಕ್ಷರ ಅಥವಾ ಅಂಕಿ | 1,254 |
| ‘nil’, ‘xxx’, ‘abc’ ಮುಂತಾದ ತಾತ್ಕಾಲಿಕ ನಮೂದುಗಳು | 869 |
| ‘husband’ ಎಂದು ಮುದ್ರಿತವಾಗಿರುವುದು | 533 |
| ‘mother’ ಎಂದು ಮುದ್ರಿತವಾಗಿರುವುದು | 527 |
| ‘father father’ | 343 |
| ‘wife’, ‘son’, ‘daughter’ ಮುಂತಾದ ಇತರ ಪದಗಳು | 161 |
| ‘husband husband’ | 135 |
| ‘mother mother’ | 102 |
| ಗುರುತಿನ ಸಂಖ್ಯೆ ಅಥವಾ ದೂರವಾಣಿ ಸಂಖ್ಯೆ | 55 |
| ‘self’ | 44 |
| ‘late’ | 28 |
| ಜನ್ಮದಿನಾಂಕ | 15 |
| ಇಮೇಲ್ ವಿಳಾಸ | 5 |
ಕನಿಷ್ಠ 1,318 ಮತದಾರರ ಹೆಸರುಗಳು ಓದಲು ಸಾಧ್ಯವಾಗದ ರೂಪದಲ್ಲಿವೆ.
ಹಮ್ ಆಪ್ಕೆ ಹೈ ಕೌನ್ — ನಾನು ನಿಮಗೆ ಯಾರು?
‘ಪಾ’ ಚಲನಚಿತ್ರದಲ್ಲಿ ಅಮಿತಾಭ್ ಬಚ್ಚನ್ ಅವರು ಅಭಿಷೇಕ್ ಬಚ್ಚನ್ ಅವರ ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮತದಾರರ ಪಟ್ಟಿಯನ್ನು ನೋಡಿದರೆ ಇಂತಹ ಸಂಬಂಧಗಳು ನಾವು ಊಹಿಸಿದ್ದಕ್ಕಿಂತಲೂ ಹೆಚ್ಚಾಗಿ ಕಂಡುಬರುತ್ತವೆ!
ಶೋರಾಪುರದ ಮತದಾರರ ಪಟ್ಟಿಯಲ್ಲಿ ಚಂದಾ ಸಾಬ್ ಎಂಬ 40 ವರ್ಷದ ವ್ಯಕ್ತಿಯ ಹೆಸರು ಇದೆ. ಅವರ ತಂದೆಯ ಹೆಸರು ಅಲ್ಲಿಸಾಬ್. ಇನ್ನೊಂದು ವಿಚಿತ್ರವೇನು ಗೊತ್ತೇ? ಅದೇ ಮನೆಯಲ್ಲಿರುವ ಅಲ್ಲಿಸಾಬ್ ಎಂಬ ಮತ್ತೊಬ್ಬ ವ್ಯಕ್ತಿಯ ವಯಸ್ಸೂ 40 ವರ್ಷ. ಅವರ ತಂದೆಯ ಹೆಸರು ಚಂದಾ ಸಾಬ್ ಎಂದು ದಾಖಲಿಸಲಾಗಿದೆ.
ಅಂದರೆ ಒಬ್ಬರನ್ನೊಬ್ಬರು ತಂದೆ ಎಂದು ಗುರುತಿಸಿಕೊಂಡಿರುವ ಇಬ್ಬರು ವ್ಯಕ್ತಿಗಳು ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆಂದು ಮತದಾರರ ಪಟ್ಟಿ ಹೇಳುತ್ತಿದೆ.

ಇಂತಹ 296 ಜೋಡಿಗಳನ್ನು ಅಧ್ಯಯನದಲ್ಲಿ ಪತ್ತೆಹಚ್ಚಲಾಗಿದೆ. ಈ ಜೋಡಿಗಳಲ್ಲಿ ಇಬ್ಬರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದು, ಅವರ ವಯಸ್ಸೂ ಸಮಾನವಾಗಿದೆ. ಆದರೆ, ಇಬ್ಬರೂ ಪರಸ್ಪರರ ಹೆಸರನ್ನು ತಂದೆಯ ಹೆಸರಾಗಿ ದಾಖಲಿಸಿಕೊಂಡಿದ್ದಾರೆ.
ಇವುಗಳಲ್ಲಿ 27 ಜೋಡಿಗಳಲ್ಲಿ ಇಬ್ಬರ ವಯಸ್ಸೂ ಒಂದೇ ಆಗಿದೆ.
ಬೆಂಗಳೂರಿನ ಕೆ.ಆರ್. ಪುರ ಕ್ಷೇತ್ರದಲ್ಲಿ ಸಯ್ಯದ್ ಮೊಹಮ್ಮದ್ ಸಲೀಂ ಮತ್ತು ಶೇಖ್ ನಸೀಮ್ ಬಾನು ಎಂಬ ಇಬ್ಬರ ವಯಸ್ಸೂ 43 ವರ್ಷ.
ಒಬ್ಬರು ಪುರುಷ, ಮತ್ತೊಬ್ಬರು ಮಹಿಳೆ.
ಇಬ್ಬರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದು, ಇಬ್ಬರೂ ಒಬ್ಬರನ್ನೊಬ್ಬರು ತಂದೆ ಎಂದು ದಾಖಲಿಸಿಕೊಂಡಿದ್ದಾರೆ.

ಈ ರೀತಿಯಲ್ಲಿ ಒಬ್ಬರನ್ನೊಬ್ಬರು ತಂದೆ ಎಂದು ದಾಖಲಿಸಿಕೊಂಡಿರುವ ಕನಿಷ್ಠ 296 ಮತದಾರರ ಜೋಡಿಗಳು ಪತ್ತೆಯಾಗಿವೆ.
ಭಾಗ 2: ‘ಒಬ್ಬ ಅರ್ಹ ನಾಗರಿಕನನ್ನೂ ಹೊರಗಿಟ್ಟಿಲ್ಲ’ ಎಂಬ ಹೇಳಿಕೆಯ ವಾಸ್ತವ
ಕರಡು ಪಟ್ಟಿ ಪ್ರಕಟವಾಗುವ ಮೊದಲೇ 1.08 ಕೋಟಿ ಮತದಾರರ ಹೆಸರು ಕೈಬಿಡಲಾಗಿದೆ
2026ರ ಜೂನ್ ಅಂತ್ಯದಿಂದ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆಮನೆಗೆ ತೆರಳಿ ಕರ್ನಾಟಕದ 5.54 ಕೋಟಿ ಮತದಾರರಿಗೆ ‘ಎನ್ಯುಮರೇಷನ್ ಫಾರ್ಮ್’ಗಳನ್ನು ವಿತರಿಸಿದರು. ಆದರೆ, 1.08 ಕೋಟಿ ಮತದಾರರು ತುಂಬಿದ ನಮೂನೆಗಳನ್ನು ಹಿಂದಿರುಗಿಸಲಿಲ್ಲ. ಈ 1.08 ಕೋಟಿ ಜನರ ಹೆಸರುಗಳನ್ನು ಕರಡು ಮತದಾರರ ಪಟ್ಟಿ ಪ್ರಕಟವಾಗುವ ಮೊದಲೇ ಕೈಬಿಡಲಾಯಿತು.
ಪ್ರತಿಯೊಬ್ಬರ ಹೆಸರನ್ನು ಕೈಬಿಡಲು ಒಂದೊಂದು ಕಾರಣವನ್ನು ದಾಖಲಿಸಲಾಯಿತು.
- ಗೈರುಹಾಜರಾದವರು (Absent)
- ಸ್ಥಳಾಂತರಗೊಂಡವರು (Shifted)
- ಮೃತಪಟ್ಟವರು (Dead)
- ನಕಲಿ ನಮೂದುಗಳು (Duplicate)
- ಇತರ ಕಾರಣಗಳು (Other)
ಹೀಗೆ ಸಿದ್ಧವಾದ ಪಟ್ಟಿಯನ್ನು ASDDO ಪಟ್ಟಿ ಎಂದು ಕರೆಯಲಾಯಿತು.
ತಪ್ಪಾಗಿ ಹೆಸರು ಕೈಬಿಡಲ್ಪಟ್ಟವರು ಹಕ್ಕು ಮತ್ತು ಆಕ್ಷೇಪಣೆಗಳ ಅವಧಿಯಲ್ಲಿ ಫಾರಂ-6 ಸಲ್ಲಿಸಿ ಹೊಸ ಮತದಾರರಂತೆ ಮತ್ತೆ ನೋಂದಾಯಿಸಿಕೊಳ್ಳಬೇಕಾಗಿತ್ತು. ಆದರೆ, ಈ 1.08 ಕೋಟಿ ಜನರಲ್ಲಿ ಎಷ್ಟು ಮಂದಿ ಅಂತಿಮ ಪಟ್ಟಿಗೆ ಮರಳಿ ಸೇರಿದ್ದಾರೆ ಎಂಬುದು ಮುಖ್ಯ ಪ್ರಶ್ನೆ!
2025ರ ಜನವರಿಯಲ್ಲಿದ್ದ ಮತದಾರರ ಪಟ್ಟಿಯಲ್ಲಿದ್ದ ಮತ್ತು ಎಸ್ಐಆರ್ ಪ್ರಕ್ರಿಯೆಯಲ್ಲಿ ASDDO ಪಟ್ಟಿ ಸೇರಿದ 1,05,48,148 ಮತದಾರರ ದಾಖಲೆಗಳನ್ನು ವಿಶ್ಲೇಷಿಸಿದಾಗ, ಕೇವಲ ಸುಮಾರು 2,300 ಮಂದಿ ಬೇರೆ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ತಮ್ಮ ಹಳೆಯ ಗುರುತಿನ ಸಂಖ್ಯೆಯೊಂದಿಗೆ ಕಾಣಿಸಿಕೊಂಡಿದ್ದಾರೆ. ಆದರೆ, ಬೃಹತ್ ಸಂಖ್ಯೆಯ ಮತದಾರರು ಪಟ್ಟಿಯಿಂದ ಹೊರಗುಳಿದಿದ್ದಾರೆ.
ಐವರಲ್ಲಿ ಒಬ್ಬ ಮತದಾರನ ಹೆಸರು ಕರಡು ಪಟ್ಟಿಗೂ ಮುನ್ನ ಕೈಬಿಡಲಾಗಿದೆ
| ವಿವರ | ಸಂಖ್ಯೆ |
| ಜೂನ್ 16, 2026ರ ಮತದಾರರ ಪಟ್ಟಿ | 5.54 ಕೋಟಿ |
| ಕರಡು ಪಟ್ಟಿಯಲ್ಲಿ ಉಳಿದವರು | 4.46 ಕೋಟಿ |
| ಕರಡು ಪಟ್ಟಿಗೂ ಮುನ್ನ ಕೈಬಿಡಲಾದವರು | 1.08 ಕೋಟಿ |
ಕೈಬಿಡಲಾದವರ ಕಾರಣವಾರು ವಿವರ:
| ಕಾರಣ | ಸಂಖ್ಯೆ |
| ಶಾಶ್ವತವಾಗಿ ಸ್ಥಳಾಂತರಗೊಂಡವರು | 65.5 ಲಕ್ಷ |
| ಗೈರುಹಾಜರಾದವರು | 19.0 ಲಕ್ಷ |
| ಮೃತಪಟ್ಟವರು | 16.4 ಲಕ್ಷ |
| ಈಗಾಗಲೇ ಬೇರೆಡೆ ನೋಂದಾಯಿತರು | 7.1 ಲಕ್ಷ |
ಈ ಜನರಲ್ಲಿ ಸುಮಾರು 14,900 ಮಂದಿ ಮಾತ್ರ ಮರಳಿ ಮತಪಟ್ಟಿಗೆ ಸೇರ್ಪಡೆಯಾಗಿದೆ ಸೇರಿದ್ದಾರೆ. ಅಂದರೆ, ಕೇವಲ ಶೇ.0.14ರಷ್ಟು! ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಹೆಸರು ಕೈಬಿಡಲಾದ ಪ್ರತಿ 708 ಮತದಾರರಲ್ಲಿ ಒಬ್ಬರು ಮಾತ್ರ ಮರಳಿ ಮತಪಟ್ಟಿಗೆ ಬಂದಿದ್ದಾರೆ.
75 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನ 8.9 ಲಕ್ಷ ಮತದಾರರ ಹೆಸರುಗಳನ್ನು ಕೈಬಿಡಲಾಗಿತ್ತು. ಅವರಲ್ಲಿ ಕೇವಲ 206 ಮಂದಿ ಮರಳಿ ಸೇರ್ಪಡೆಯಾಗಿದ್ದಾರೆ.
ಕಾರಣವಾರು ಪರಿಶೀಲಿಸಿದಾಗ ಈ ಅಂಕಿಅಂಶಗಳು ದೊರೆತಿವೆ:
| ಕೈಬಿಟ್ಟ ಕಾರಣ | ಪರಿಶೀಲನೆಯಲ್ಲಿ ಹೊಂದಾಣಿಕೆಯಾದವರು | ಮರಳಿ ಸೇರ್ಪಡೆಯಾದವರು |
| ಶಾಶ್ವತವಾಗಿ ಸ್ಥಳಾಂತರಗೊಂಡವರು | 64.0 ಲಕ್ಷ | 9,902 |
| ಗೈರುಹಾಜರಾದವರು | 18.5 ಲಕ್ಷ | 4,035 |
| ಮೃತಪಟ್ಟವರು | 16.3 ಲಕ್ಷ | 332 |
| ಬೇರೆಡೆ ನೋಂದಾಯಿತರು | 6.7 ಲಕ್ಷ | 623 |
ಈ ಫಲಿತಾಂಶವನ್ನು ಎರಡು ರೀತಿಯಲ್ಲಿ ಅರ್ಥಮಾಡಿಕೊಳ್ಳಬಹುದು. ಮೊದಲನೆಯದು, ಮತಗಟ್ಟೆ ಮಟ್ಟದ ಅಧಿಕಾರಿಗಳ ಪರಿಶೀಲನೆ ಅಸಾಧಾರಣವಾಗಿ ನಿಖರವಾಗಿತ್ತು. ಹೀಗಾಗಿ ಕೈಬಿಡಲಾದ ಸುಮಾರು ಒಂದು ಕೋಟಿ ಮತದಾರರಲ್ಲಿ 99.86%ರಷ್ಟು ಜನರು ನಿಜವಾಗಿಯೂ ಮೃತಪಟ್ಟಿದ್ದರು, ಸ್ಥಳಾಂತರಗೊಂಡಿದ್ದರು ಅಥವಾ ನಕಲಿ ನಮೂದುಗಳಾಗಿದ್ದರು. ಎರಡನೆಯದು, ತಪ್ಪಾಗಿ ಕೈಬಿಡಲಾದ ಬಹುತೇಕ ಮತದಾರರಿಗೆ ತಮ್ಮ ಹೆಸರು ಕೈಬಿಡಲಾಗಿದೆ ಎಂಬುದೇ ತಿಳಿದಿರಲಿಲ್ಲ. ತಿಳಿದಿದ್ದರೂ ಅದನ್ನು ಸರಿಪಡಿಸಲು ಸಾಧ್ಯವಾಗಲಿಲ್ಲ.
ಆರೂನ್ ದೀಪ್ ಮತ್ತೊಂದು ವಿವರಣೆಯನ್ನು ನೀಡುತ್ತಾರೆ: ಈ ಮತದಾರರಲ್ಲಿ ಹಲವರನ್ನು ಹಿಂದೆ ಯಾವಾಗಲೋ ಮತಗಟ್ಟೆ ಮಟ್ಟದ ಅಧಿಕಾರಿಯೊಬ್ಬರು ನೋಂದಾಯಿಸಿರಬಹುದು. ಅವರು ಸಾಮಾನ್ಯವಾಗಿ ಮತ ಚಲಾಯಿಸುವುದಿಲ್ಲ. ಮತ್ತೆ ನೋಂದಾಯಿಸಿಕೊಳ್ಳಲು ಹೆಚ್ಚಿನ ಆಸಕ್ತಿ ತೋರದಿರಬಹುದು ಎಂಬ ಲೆಕ್ಕಾಚಾರದ ಮೇಲೆಯೇ ಪರಿಷ್ಕರಣೆಯು ಅವಲಂಬಿತವಾಗಿರಬಹುದು.
ಕೈಬಿಡಲಾದ ಸುಮಾರು 1.05 ಕೋಟಿ ಮತದಾರರಲ್ಲಿ ಕೇವಲ 14,900 ಮಂದಿ ಮಾತ್ರ ಅಂತಿಮ ಪಟ್ಟಿಗೆ ಮರಳಿದ್ದಾರೆ.
ಮೈ ಹೂಂ ನಾ — ನಾನು ಇಲ್ಲೇ ಇದ್ದೇನಲ್ಲ!
ಎಸ್ಐಆರ್ ಪ್ರಕ್ರಿಯೆಯ ಮೂಲ ಉದ್ದೇಶದ ಪ್ರಕಾರ, ಮತದಾರರ ಹೆಸರು ಅಥವಾ ಅವರ ತಂದೆ-ತಾಯಿಯ ಹೆಸರು 2002–03ರ ಮತದಾರರ ಪಟ್ಟಿಯಲ್ಲಿ ಇದ್ದರೆ ಆತ ಅರ್ಹನಾಗಿರಬೇಕಿತ್ತು. 2002–03ರ ಪಟ್ಟಿಯಲ್ಲಿ ಹೆಸರು ಪತ್ತೆಯಾಗದಿದ್ದರೆ ‘ಹಿಂದಿನ ಎಸ್ಐಆರ್ ಪಟ್ಟಿಯೊಂದಿಗೆ ಹೊಂದಾಣಿಕೆಯಾಗಿಲ್ಲ’ (Unmapped with Last SIR) ಎಂದು ನೋಟಿಸ್ ನೀಡಲಾಗುತ್ತಿತ್ತು. ನಂತರ, ಆ ಮತದಾರನು ಅಗತ್ಯ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗಿ ತನ್ನ ಅಸ್ತಿತ್ವ ಮತ್ತು ಅರ್ಹತೆಯನ್ನು ಸಾಬೀತುಪಡಿಸಬೇಕಾಗಿತ್ತು.
ಆದರೆ, ಇಂತಹ ನೋಟಿಸ್ ಪಡೆದ ಕೆಲವು ಮತದಾರರ ಹೆಸರುಗಳು ಮುಖ್ಯ ಚುನಾವಣಾಧಿಕಾರಿಗಳೇ ಪ್ರಕಟಿಸಿರುವ 2002ರ ಮತದಾರರ ಪಟ್ಟಿಯಲ್ಲಿ, ಅದೇ ಗುರುತಿನ ಸಂಖ್ಯೆಯೊಂದಿಗೆ ಈಗಾಗಲೇ ಇದ್ದವು! ಅದರೂ, ಅವರಿಗೆ ನೋಟಿಸ್ ನೀಡಲಾಯಿತು. 95 ವರ್ಷದ ಹೊಬಳಮ್ಮ ಅವರ ಪ್ರಕರಣ ಇದಕ್ಕೆ ಒಂದು ಉದಾಹರಣೆ.

2002ರ ಪಟ್ಟಿಯಲ್ಲಿದ್ದರೂ ಹೊಂದಾಣಿಕೆಯಾಗಿಲ್ಲ ಎಂದು ಗುರುತಿಸಲು ಕಾರಣವೇನು ಎಂಬುದಕ್ಕೆ ಚುನಾವಣಾ ಆಯೋಗವು ವಿವರಣೆ ನೀಡಿಲ್ಲ. ಇಂತಹ ಸಮಸ್ಯೆ ಇತರ ರಾಜ್ಯಗಳಲ್ಲಿಯೂ ವರದಿಯಾಗಿದೆ.
ಹೊಬಳಮ್ಮ ಅವರಂತೆಯೇ ಕನಿಷ್ಠ 3,115 ಮತದಾರರಿಗೆ 2002ರ ಪಟ್ಟಿಯಲ್ಲಿ ಹೆಸರು ಇಲ್ಲ ಎಂದು ತಿಳಿಸಲಾಗಿದೆ. ಆದರೆ, ವಿಶ್ಲೇಷಣೆ ನಡೆಸಿದಾಗ ಅವರೆಲ್ಲರ ಗುರುತಿನ ಸಂಖ್ಯೆ, ಹೆಸರು ಮತ್ತು ವಯಸ್ಸುಗಳು 2002ರ ದಾಖಲೆಯಲ್ಲಿ ಹೊಂದಾಣಿಕೆಯಾಗಿವೆ.
2002ರ ಪಟ್ಟಿಯಲ್ಲಿ ಇದ್ದರೂ ಅದರಲ್ಲಿ ಇಲ್ಲ ಎಂದು ನೋಟಿಸ್ ಪಡೆದ ಕನಿಷ್ಠ 3,115 ಮತದಾರರು ಪತ್ತೆಯಾಗಿದ್ದಾರೆ.
ಜುಡ್ವಾ — ಅವಳಿ ಮಕ್ಕಳಿಗೂ ನೋಟಿಸ್!
ಚುನಾವಣಾ ಆಯೋಗದ ‘ತಾರ್ಕಿಕ ವ್ಯತ್ಯಾಸ’ಗಳ ಕಾರಣಗಳನ್ನು ಓದಿದರೆ, ಸರ್ಕಾರಿ ತಂತ್ರಾಂಶವು ಒಂದು ಸಾಮಾನ್ಯ ಕುಟುಂಬ ಹೇಗಿರಬೇಕು ಎಂದು ಭಾವಿಸಿದೆ ಎಂಬುದು ತಿಳಿಯುತ್ತದೆ.
ಈ ನಿಯಮಗಳಲ್ಲಿ ಕೆಲವು ಹೀಗಿವೆ:
- ತಂದೆ-ತಾಯಿ ಮತ್ತು ಮಗುವಿನ ವಯಸ್ಸಿನ ಅಂತರ 15 ವರ್ಷಕ್ಕಿಂತ ಕಡಿಮೆ.
- ತಂದೆ-ತಾಯಿ ಮತ್ತು ಮಗುವಿನ ವಯಸ್ಸಿನ ಅಂತರ 50 ವರ್ಷಕ್ಕಿಂತ ಹೆಚ್ಚು.
- ಅಜ್ಜ-ಅಜ್ಜಿ ಮತ್ತು ಮೊಮ್ಮಕ್ಕಳ ವಯಸ್ಸಿನ ಅಂತರ 40 ವರ್ಷಕ್ಕಿಂತ ಕಡಿಮೆ.
- ಒಬ್ಬರಿಗೆ ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳು.
- ಒಂದೇ ತಂದೆ-ತಾಯಿಯ ಇಬ್ಬರು ಮಕ್ಕಳ ಜನನದ ನಡುವಿನ ಅಂತರ ಒಂಬತ್ತು ತಿಂಗಳಿಗಿಂತ ಕಡಿಮೆ.
ಇವುಗಳಲ್ಲಿ ವಿಶೇಷವಾಗಿ ಗಮನ ಸೆಳೆಯುವುದು ಕೊನೆಯ ನಿಯಮ: ಒಂದೇ ತಂದೆ-ತಾಯಿಗೆ ಒಂಬತ್ತು ತಿಂಗಳಿಗಿಂತ ಕಡಿಮೆ ಅಂತರದಲ್ಲಿ ಇಬ್ಬರು ಮಕ್ಕಳು ಜನಿಸಲು ಸಾಧ್ಯವಿಲ್ಲ ಎಂಬುದು ಈ ನಿಯಮದ ಹಿಂದಿರುವ ತರ್ಕ.
ಆದರೆ, ಅವಳಿ ಮಕ್ಕಳು ಇದ್ದರೆ? ಅವರ ಹೆಸರುಗಳು ಈ ಒಂಬತ್ತು ತಿಂಗಳ ನಿಯಮದಿಂದ ಅಳಿಸಿಹೋಗುವ ಸಾಧ್ಯತೆ ಹೆಚ್ಚು
2026ರ ಆಗಸ್ಟ್ನಿಂದ ಅಕ್ಟೋಬರ್ರವರೆಗೆ ನೀಡಲಾದ ನೋಟಿಸ್ಗಳ ವಿವರ ಹೀಗಿದೆ:
| ನೋಟಿಸ್ನ ಕಾರಣ | ನೋಟಿಸ್ಗಳು | ಕೈಬಿಟ್ಟ ಪ್ರಮಾಣ | ಕೈಬಿಟ್ಟ ಮತದಾರರು |
| 2002ರ ಪಟ್ಟಿಯಲ್ಲಿ ಹೆಸರು ಪತ್ತೆಯಾಗಿಲ್ಲ | 23.4 ಲಕ್ಷ | 1.7% | 39,337 |
| 2002ರ ದಾಖಲೆಯೊಂದಿಗೆ ಹೆಸರು ಹೊಂದಾಣಿಕೆಯಾಗಿಲ್ಲ | 5.3 ಲಕ್ಷ | 0.7% | 3,485 |
| ತಂದೆ-ತಾಯಿಯ ವಯಸ್ಸಿನ ಅಂತರ 15 ವರ್ಷಕ್ಕಿಂತ ಕಡಿಮೆ | 3.9 ಲಕ್ಷ | 1.0% | 3,891 |
| ತಂದೆ-ತಾಯಿಯ ಹೆಸರು ಹೊಂದಾಣಿಕೆಯಾಗಿಲ್ಲ | 3.3 ಲಕ್ಷ | 0.9% | 2,941 |
| ಅಜ್ಜ-ಅಜ್ಜಿ ಮತ್ತು ಮೊಮ್ಮಕ್ಕಳ ವಯಸ್ಸಿನ ಅಂತರ 40 ವರ್ಷಕ್ಕಿಂತ ಕಡಿಮೆ | 2.6 ಲಕ್ಷ | 1.2% | 3,179 |
| ಸಹೋದರ-ಸಹೋದರಿಯರ ಜನನದ ನಡುವಿನ ಅಂತರ 9 ತಿಂಗಳಿಗಿಂತ ಕಡಿಮೆ | 1.7 ಲಕ್ಷ | 2.2% | 3,735 |
| ತಂದೆ-ತಾಯಿಯ ವಯಸ್ಸಿನ ಅಂತರ 50 ವರ್ಷಕ್ಕಿಂತ ಹೆಚ್ಚು | 78,934 | 0.9% | 682 |
| ಒಬ್ಬರಿಗೆ 6 ಅಥವಾ ಹೆಚ್ಚು ಮಕ್ಕಳು | 76,846 | 0.7% | 562 |
ಚಿಂತಾಮಣಿಯಲ್ಲಿ 36 ವರ್ಷದ ಸಹೋದರ ಮತ್ತು ಸಹೋದರಿಗೆ ನೋಟಿಸ್ ನೀಡಲಾಗಿದೆ. ಇಬ್ಬರ ತಂದೆಯ ಹೆಸರು ಒಂದೇ. ಇಬ್ಬರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ಆದರೆ, ಇಬ್ಬರ ಜನನದ ನಡುವಿನ ಅಂತರ ಒಂಬತ್ತು ತಿಂಗಳಿಗಿಂತ ಕಡಿಮೆ ಎಂದು ನೋಟಿಸ್ ನೀಡಲಾಗಿದೆ.
ಅಂತಿಮ ಪಟ್ಟಿಯಲ್ಲಿ ಸಹೋದರಿಯ ಹೆಸರನ್ನು ಅನರ್ಹರೆಂದು ಕೈಬಿಡಲಾಗಿದೆ. ಸಹೋದರನ ಹೆಸರು ಮಾತ್ರ ಉಳಿದಿದೆ.

ಈ ಸಮಸ್ಯೆ ಈಗಾಗಲೇ ಗುರುತಿಸಲ್ಪಟ್ಟ ತಾಂತ್ರಿಕ ದೋಷವಾಗಿದ್ದು, ದೇಶದ ಇತರ ಭಾಗಗಳಲ್ಲಿಯೂ ವರದಿಯಾಗಿದೆ.

ಕರ್ನಾಟಕದಲ್ಲಿ 9 ತಿಂಗಳ ನಿಯಮದಡಿ ನೋಟಿಸ್ ನೀಡಿ ಕನಿಷ್ಠ 4,954 ಮತದಾರರ ಹೆಸರುಗಳನ್ನು ಅನರ್ಹರೆಂದು ಅಳಿಸಲಾಗಿದೆ. ಅವರಲ್ಲಿ 3,735 ಮಂದಿಗೆ ಇದೇ ಒಂದೇ ಕಾರಣವನ್ನು ನೀಡಲಾಗಿದೆ.
ಆದರೆ, ಇವರಲ್ಲಿ ಎಲ್ಲರೂ ಅವಳಿ ಮಕ್ಕಳೇ ಆಗಿರಬೇಕೆಂದಿಲ್ಲ. ತಪ್ಪಾಗಿ ದಾಖಲಾದ ವಯಸ್ಸು ಅಥವಾ ತಪ್ಪಾಗಿ ಜೋಡಿಸಲಾದ ತಂದೆ-ತಾಯಿಯ ಮಾಹಿತಿಯೂ ಈ ನಿಯಮದಡಿ ಸಮಸ್ಯೆ ಸೃಷ್ಟಿಸಿರಬಹುದು.
ಒಂಬತ್ತು ತಿಂಗಳ ನಿಯಮದ ನೋಟಿಸ್ ನಂತರ ಕನಿಷ್ಠ 4,954 ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ.
ಪೆಹಚಾನ್ — ಮತದಾರರ ಗುರುತಿನ ಸಂಖ್ಯೆಯೇ ಮತ್ತೊಬ್ಬರಿಗೆ ವರ್ಗ!
ಕೆಲವರ ದೂರವಾಣಿ ಸಂಖ್ಯೆಗೆ ಸಂಬಂಧಿಸಿದ ಒಂದು ವಿಚಿತ್ರ ಸಮಸ್ಯೆಯಿದೆ. ಅವರು ಈಗ ಬಳಸುತ್ತಿರುವ ಸಂಖ್ಯೆ ಹಿಂದೆ ಮತ್ತೊಬ್ಬ ವ್ಯಕ್ತಿಗೆ ಸೇರಿದ್ದಾಗಿರುತ್ತದೆ. ಆದರೆ, ಮತದಾರರ ಗುರುತಿನ ಸಂಖ್ಯೆಯ ವಿಚಾರದಲ್ಲಿ ಇಂತಹ ಗೊಂದಲ ಉಂಟಾದರೆ ಪರಿಣಾಮಗಳು ಹೆಚ್ಚು ಗಂಭೀರವಾಗಿರುತ್ತವೆ.
ಮತದಾರರ ಗುರುತಿನ ಸಂಖ್ಯೆ ಪ್ರತಿಯೊಬ್ಬ ವ್ಯಕ್ತಿಗೂ ವಿಶಿಷ್ಟವಾಗಿರಬೇಕು. ಅದು ಜೀವನಪೂರ್ತಿ ಆತನಿಗೆ ಸೇರಿರಬೇಕು. ಆದರೆ, ಬೆಂಗಳೂರಿನ ದಾಸರಹಳ್ಳಿಯಲ್ಲಿ ಈ ಸಂಖ್ಯೆ ದೂರವಾಣಿ ಸಂಖ್ಯೆಯಂತೆ ಒಬ್ಬರಿಂದ ಮತ್ತೊಬ್ಬರಿಗೆ ವರ್ಗಗೊಳ್ಳುತ್ತಿರುವಂತೆ ಕಾಣುತ್ತಿದೆ. ಅದಕ್ಕೆ ಶಿವನಂಜಮ್ಮ ಅವರ ಪ್ರಕರಣ ಒಂದು ಉದಾಹರಣೆ.
2025ರ ಜನವರಿಯ ಮತದಾರರ ಪಟ್ಟಿಯಲ್ಲಿ 80 ವರ್ಷದ ಶಿವನಂಜಮ್ಮ ಎಂಬ ಮಹಿಳೆಯ ಹೆಸರು ದಾಖಲಾಗಿತ್ತು. ನಂತರ ಮತಗಟ್ಟೆ ಮಟ್ಟದ ಅಧಿಕಾರಿ ಸಿದ್ಧಪಡಿಸಿದ ASDDO ಪಟ್ಟಿಯಲ್ಲಿ ಶಿವನಂಜಮ್ಮ ಮೃತಪಟ್ಟಿದ್ದಾರೆ ಎಂದು ಗುರುತಿಸಲಾಯಿತು. ಬಳಿಕ, ಅಕ್ಟೋಬರ್ 27ರ ಅಂತಿಮ ಪಟ್ಟಿಯಲ್ಲಿ 19 ವರ್ಷದ ವೈಭವ್ ಎಂಬ ಹೊಸ ಮತದಾರನಿಗೆ ಶಿವನಂಜಮ್ಮ ಅವರದ್ದೇ ಮತದಾರರ ಗುರುತಿನ ಸಂಖ್ಯೆಯನ್ನು ನೀಡಲಾಗಿದೆ.

ದಾಸರಹಳ್ಳಿಯಲ್ಲಿ ಈ ರೀತಿಯಾಗಿ ಕನಿಷ್ಠ 234 ಹೊಸ ಮತದಾರರಿಗೆ, ಜನವರಿ 2025ರಲ್ಲಿ ಮತ್ತೊಬ್ಬ ವ್ಯಕ್ತಿಗೆ ಸೇರಿದ್ದ ಗುರುತಿನ ಸಂಖ್ಯೆಯನ್ನು ನೀಡಿರುವುದು ಪತ್ತೆಯಾಗಿದೆ.
ಈ ಹಿಂದೆ ಗುರುತಿನ ಸಂಖ್ಯೆಯನ್ನು ಹೊಂದಿದ್ದವರ ಹೆಸರುಗಳನ್ನು ಕರಡು ಪಟ್ಟಿ ಪ್ರಕಟವಾಗುವ ಮೊದಲೇ ಕೈಬಿಡಲಾಗಿತ್ತು. ಅವರಲ್ಲಿ ಬಹುತೇಕರನ್ನು ಸ್ಥಳಾಂತರಗೊಂಡವರು ಅಥವಾ ಗೈರುಹಾಜರಾದವರು ಎಂದು ಗುರುತಿಸಲಾಗಿತ್ತು. ಶಿವನಂಜಮ್ಮ ಅವರಂತೆಯೇ ಸುಮಾರು 10 ಮಂದಿಯನ್ನು ಮೃತಪಟ್ಟವರು ಎಂದು ಗುರುತಿಸಲಾಗಿತ್ತು.
ದಾಸರಹಳ್ಳಿಯಲ್ಲಿ ಗುರುತಿನ ಸಂಖ್ಯೆಯ ಮರುಬಳಕೆ
| ಹಿಂದಿನ ಮತದಾರರನ್ನು ಕೈಬಿಟ್ಟ ಕಾರಣ | ಹೊಸ ಮತದಾರರಿಗೆ ಅದೇ ಸಂಖ್ಯೆ ನೀಡಿದ ಪ್ರಕರಣಗಳು |
| ಮೃತಪಟ್ಟವರು | 10 |
| ಗೈರುಹಾಜರಾದವರು | 65 |
| ಸ್ಥಳಾಂತರಗೊಂಡವರು | 158 |
| ನಕಲಿ ನಮೂದು | 1 |
| ಒಟ್ಟು | 234 |
ಇಂತಹ ಕೆಲವು ಉದಾಹರಣೆಗಳಲ್ಲಿ ಹಿಂದಿನ ಮತ್ತು ಹೊಸ ಮತದಾರರ ವಯಸ್ಸು ಹಾಗೂ ಲಿಂಗ ಹೀಗಿವೆ:
| ಹಿಂದಿನ ಮತದಾರ | ಹೊಸ ಮತದಾರ |
| 88 ವರ್ಷದ ಪುರುಷ | 21 ವರ್ಷದ ಪುರುಷ |
| 80 ವರ್ಷದ ಮಹಿಳೆ | 19 ವರ್ಷದ ಪುರುಷ |
| 78 ವರ್ಷದ ಪುರುಷ | 40 ವರ್ಷದ ಪುರುಷ |
| 78 ವರ್ಷದ ಪುರುಷ | 64 ವರ್ಷದ ಪುರುಷ |
| 78 ವರ್ಷದ ಪುರುಷ | 22 ವರ್ಷದ ಪುರುಷ |
| 78 ವರ್ಷದ ಪುರುಷ | 18 ವರ್ಷದ ಪುರುಷ |
| 76 ವರ್ಷದ ಮಹಿಳೆ | 50 ವರ್ಷದ ಮಹಿಳೆ |
| 65 ವರ್ಷದ ಪುರುಷ | 35 ವರ್ಷದ ಮಹಿಳೆ |
| 63 ವರ್ಷದ ಪುರುಷ | 74 ವರ್ಷದ ಪುರುಷ |
| 49 ವರ್ಷದ ಪುರುಷ | 18 ವರ್ಷದ ಪುರುಷ |
ಜಿಂದಾ — ಬದುಕಿದ್ದರೂ ಸತ್ತವರು!
ಪುನರ್ಜನ್ಮ ಎಂಬುದು ಬಾಲಿವುಡ್ ಚಲನಚಿತ್ರಗಳ ಜನಪ್ರಿಯ ವಿಷಯ. ಈಗ ಚುನಾವಣಾ ಎಸ್ಐಆರ್ ಪ್ರಕ್ರಿಯೆಯಲ್ಲಿಯೂ ಪುನರ್ಜನ್ಮದ ಕಥೆಗಳು ಕಾಣಿಸುತ್ತಿವೆ! ಇದಕ್ಕೆ, ಬೆಳ್ತಂಗಡಿಯ ಮಹಿಳೆಯ ಪ್ರಕರಣ ಉದಾಹರಣೆ.
2025ರ ಜನವರಿಯಲ್ಲಿದ್ದ ಮತದಾರರ ಪಟ್ಟಿಯಲ್ಲಿ ಬೆಳ್ತಂಗಡಿಯ 53 ವರ್ಷದ ಮಹಿಳೆಯೊಬ್ಬರ ಹೆಸರು ದಾಖಲಾಗಿತ್ತು. ಕೆಲವು ತಿಂಗಳ ನಂತರ ಮತಗಟ್ಟೆ ಮಟ್ಟದ ಅಧಿಕಾರಿಯ ASDDO ಪಟ್ಟಿಯಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಗುರುತಿಸಲಾಯಿತು. ಆದರೆ, ಆ ಮಹಿಳೆ ಜೀವಂತವಾಗಿದ್ದರು.
ತಾವು ಬದುಕಿರುವುದನ್ನು ಸಾಬೀತುಪಡಿಸಿದ ನಂತರ, ಅದೇ ಮನೆ ಸಂಖ್ಯೆ ಮತ್ತು ಪತಿಯ ಹೆಸರಿನೊಂದಿಗೆ ಅವರು ಮತ್ತೆ ಮತದಾರರ ಪಟ್ಟಿಗೆ ಸೇರ್ಪಡೆಯಾದರು.
ಆದರೆ, ಅವರಿಗೆ ಹೊಸ ಮತದಾರರ ಗುರುತಿನ ಸಂಖ್ಯೆ ನೀಡಲಾಯಿತು.

ಈ ಘಟನೆ ‘ಓಂ ಶಾಂತಿ ಓಂ’ ಚಲನಚಿತ್ರವನ್ನು ನೆನಪಿಸುತ್ತದೆ. ಅದೃಷ್ಟವಶಾತ್, ಈ ರೀತಿಯ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದಿಲ್ಲ.
ಮೃತಪಟ್ಟಿದ್ದಾರೆ ಎಂದು ಗುರುತಿಸಿ ಕೈಬಿಡಲಾದ ಸುಮಾರು 16.3 ಲಕ್ಷ ಮತದಾರರ ಪೈಕಿ 332 ಮಂದಿ ಅಂತಿಮ ಪಟ್ಟಿಗೆ ಮರಳಿ ಸೇರಿದ್ದಾರೆ. ಇದು ಹೆಸರು ಕೈಬಿಡಲು ಬಳಸಿದ ನಾಲ್ಕು ಕಾರಣಗಳ ಪೈಕಿ ಅತ್ಯಂತ ಕಡಿಮೆ ಮರುಸೇರ್ಪಡೆ ಪ್ರಮಾಣವಾಗಿದೆ.
ಕಾರಣವಾರು ಮರುಸೇರ್ಪಡೆ ಪ್ರಮಾಣ
| ಕೈಬಿಟ್ಟ ಕಾರಣ | ಮರಳಿ ಸೇರ್ಪಡೆಯಾದ ಪ್ರಮಾಣ |
| ಗೈರುಹಾಜರಾದವರು | 0.22% |
| ಶಾಶ್ವತವಾಗಿ ಸ್ಥಳಾಂತರಗೊಂಡವರು | 0.15% |
| ಬೇರೆಡೆ ನೋಂದಾಯಿತರು | 0.09% |
| ಮೃತಪಟ್ಟವರು | 0.02% |
ವಯಸ್ಸಿನ ಆಧಾರದಲ್ಲಿ ಮರುಸೇರ್ಪಡೆ ಪ್ರಮಾಣ
| ವಯೋಮಿತಿ | ಮರಳಿ ಸೇರ್ಪಡೆಯಾದ ಪ್ರಮಾಣ |
| 18–29 ವರ್ಷ | 0.42% |
| 30–44 ವರ್ಷ | 0.14% |
| 45–59 ವರ್ಷ | 0.10% |
| 60–74 ವರ್ಷ | 0.07% |
| 75 ವರ್ಷ ಮತ್ತು ಮೇಲ್ಪಟ್ಟವರು | 0.02% |
ಒಂದೇ ವಿಧಾನಸಭಾ ಕ್ಷೇತ್ರದಲ್ಲಿ ಹೆಸರು, ಸಂಬಂಧಿಕರ ಹೆಸರು ಮತ್ತು ವಯಸ್ಸು ಹೊಂದಾಣಿಕೆಯಾದವರನ್ನು ಮರುಸೇರ್ಪಡೆಯಾದವರೆಂದು ಪರಿಗಣಿಸಲಾಗಿದೆ.
ಮೃತಪಟ್ಟಿದ್ದಾರೆ ಎಂದು ಗುರುತಿಸಿ ಕೈಬಿಡಲಾದ ಸುಮಾರು 16.3 ಲಕ್ಷ ಮತದಾರರ ಪೈಕಿ ಕನಿಷ್ಠ 332 ಮಂದಿ ತಾವು ಜೀವಂತವಾಗಿರುವುದನ್ನು ಸಾಬೀತುಪಡಿಸಿ ಅಂತಿಮ ಪಟ್ಟಿಗೆ ಮರಳಿದ್ದಾರೆ.
ಭಾಗ 3: ಒಂದೇ ನಿಯಮ, ಆದರೆ ಕ್ಷೇತ್ರದಿಂದ ಕ್ಷೇತ್ರಕ್ಕೆ ವಿಭಿನ್ನ ಫಲಿತಾಂಶ!
ಎಸ್ಐಆರ್ ಪ್ರಕ್ರಿಯೆಯು ಎಲ್ಲ ಮತದಾರರನ್ನೂ ಸಮಾನವಾಗಿ ಪರಿಗಣಿಸಿರುವಂತೆ ಕಾಣಿಸುವುದಿಲ್ಲ.
ನೀವು ಎಲ್ಲಿ ವಾಸಿಸುತ್ತೀರಿ, ನಿಮ್ಮ ಮತಗಟ್ಟೆ ಮಟ್ಟದ ಅಧಿಕಾರಿ ಯಾರು, ಚುನಾವಣಾ ನೋಂದಣಿ ಅಧಿಕಾರಿ ಯಾರು ಮತ್ತು ನಿಮ್ಮ ಮಾಹಿತಿ ಹೇಗೆ ದಾಖಲಾಗಿದೆ ಎಂಬುದರ ಮೇಲೆ ನಿಮಗೆ ಎದುರಾಗುವ ಪರಿಸ್ಥಿತಿ ಬದಲಾಗುವ ಸಾಧ್ಯತೆಯಿದೆ.
ಒಂದೇ ನಿಯಮಗಳು ಮತ್ತು ಒಂದೇ ರೀತಿಯ ನಮೂನೆಗಳನ್ನು ಬಳಸಿದ್ದರೂ ವಿವಿಧ ವಿಧಾನಸಭಾ ಕ್ಷೇತ್ರಗಳ ನಡುವೆ ಭಾರೀ ವ್ಯತ್ಯಾಸ ಕಂಡುಬಂದಿದೆ.
ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಕೇವಲ 57 ಮತದಾರರಿಗೆ ನೋಟಿಸ್ ನೀಡಲಾಗಿದೆ. ಇದು ಆ ಕ್ಷೇತ್ರದ ಒಟ್ಟು ಮತದಾರರ 0.03%ರಷ್ಟು ಮಾತ್ರ.
ಕೊಳ್ಳೇಗಾಲದಲ್ಲಿ ಕೇವಲ 65 ಮಂದಿಗೆ ನೋಟಿಸ್ ನೀಡಲಾಗಿದೆ.
ಆದರೆ, ಬೆಂಗಳೂರಿನ ಸಿ.ವಿ. ರಾಮನ್ ನಗರದಲ್ಲಿ 80,890 ಮತದಾರರಿಗೆ ನೋಟಿಸ್ ನೀಡಲಾಗಿದೆ. ಇದು ಆ ಕ್ಷೇತ್ರದ ಒಟ್ಟು ಮತದಾರರ 59%ರಷ್ಟು!
ಇಷ್ಟೊಂದು ದೊಡ್ಡ ವ್ಯತ್ಯಾಸ ಏಕೆ ಉಂಟಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಕರ್ನಾಟಕದ ಬೇರೆಲ್ಲ ಭಾಗಗಳಿಗಿಂತ ಬೆಂಗಳೂರಿನಲ್ಲಿ ನೋಟಿಸ್ ಪಡೆದ ಮತದಾರರ ಪ್ರಮಾಣ ಹೆಚ್ಚಾಗಿದೆ. ಬೆಂಗಳೂರಿನ ಎಲ್ಲ 28 ವಿಧಾನಸಭಾ ಕ್ಷೇತ್ರಗಳಲ್ಲಿಯೂ 25%ಕ್ಕಿಂತ ಹೆಚ್ಚು ಮತದಾರರಿಗೆ ನೋಟಿಸ್ ನೀಡಲಾಗಿದೆ.
ಆದರೆ, ನೋಟಿಸ್ ನಂತರ ಹೆಸರು ಕೈಬಿಡುವ ಪ್ರಕ್ರಿಯೆಯಲ್ಲಿಯೂ ಅಸಮಾನತೆ ಕಂಡುಬಂದಿದೆ. ಒಂಬತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ನೋಟಿಸ್ ನೀಡಲಾದವರಲ್ಲಿ ಒಬ್ಬರನ್ನೂ ಅನರ್ಹರೆಂದು ಕೈಬಿಟ್ಟಿಲ್ಲ. ಅದರಲ್ಲಿ, ಬೆಳಗಾವಿ ಉತ್ತರ ಕ್ಷೇತ್ರದಲ್ಲಿ 24,368 ಮತದಾರರಿಗೆ ನೋಟಿಸ್ ನೀಡಲಾಗಿದೆ. ಆದರೆ ಯಾರನ್ನೂ ಅನರ್ಹರೆಂದು ಕೈಬಿಟ್ಟಿಲ್ಲ.
ಇನ್ನೊಂದೆಡೆ ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದಲ್ಲಿ ನೋಟಿಸ್ ಪಡೆದವರಲ್ಲಿ 13%ರಷ್ಟು ಮಂದಿಯನ್ನು ಕೈಬಿಡಲಾಗಿದೆ.
ಮತದಾರರ ಸಂಖ್ಯೆ ಅತ್ಯಧಿಕವಾಗಿ ಇಳಿದ ಹತ್ತು ಕ್ಷೇತ್ರಗಳೂ ಬೆಂಗಳೂರಿನಲ್ಲಿವೆ
ಜನವರಿ 2025ರಿಂದ ಅಕ್ಟೋಬರ್ 2026ರವರೆಗಿನ ವಿವರ:
| ವಿಧಾನಸಭಾ ಕ್ಷೇತ್ರ | ಮತದಾರರ ಸಂಖ್ಯೆಯ ಇಳಿಕೆ | ನೋಟಿಸ್ ಪಡೆದವರು | ನೋಟಿಸ್ ನಂತರ ಕೈಬಿಟ್ಟ ಪ್ರಮಾಣ |
| ಬೊಮ್ಮನಹಳ್ಳಿ | 53% | 46% | 4.0% |
| ದಾಸರಹಳ್ಳಿ | 50% | 33% | 0.6% |
| ಬಿ.ಟಿ.ಎಂ. ಲೇಔಟ್ | 50% | 39% | 1.3% |
| ಸಿ.ವಿ. ರಾಮನ್ ನಗರ | 49% | 59% | 2.2% |
| ವಿಜಯನಗರ | 49% | 36% | 3.0% |
| ಗೋವಿಂದರಾಜನಗರ | 47% | 29% | 3.0% |
| ಬಸವನಗುಡಿ | 47% | 38% | 1.3% |
| ರಾಜಾಜಿನಗರ | 46% | 42% | 0.2% |
| ಮಲ್ಲೇಶ್ವರಂ | 46% | 37% | 1.8% |
| ಗಾಂಧಿನಗರ | 45% | 34% | 0.0% |
ಈ ಪಟ್ಟಿಯಲ್ಲಿ ನೋಟಿಸ್ ನಂತರ ಕೈಬಿಟ್ಟ ಪ್ರಮಾಣವು ನೋಟಿಸ್ ಪಡೆದವರ ಸಂಖ್ಯೆಗೆ ಸಂಬಂಧಿಸಿದೆ.
ರಾಜ್ಯದಲ್ಲಿ ನೋಟಿಸ್ ಪಡೆದವರ ಮಧ್ಯಮ ಪ್ರಮಾಣ 5%ರಷ್ಟಿದೆ. ನೋಟಿಸ್ ಪಡೆದವರಲ್ಲಿ ಕೈಬಿಡಲಾದವರ ಸರಾಸರಿ ಪ್ರಮಾಣ 1.1%ರಷ್ಟಿದೆ.
ಈ ಅಂಕಿಅಂಶಗಳು ಎಸ್ಐಆರ್ ಪ್ರಕ್ರಿಯೆಯ ಪರಿಣಾಮವು ವಿಧಾನಸಭಾ ಕ್ಷೇತ್ರದಿಂದ ಕ್ಷೇತ್ರಕ್ಕೆ ಎಷ್ಟೊಂದು ವಿಭಿನ್ನವಾಗಿತ್ತು ಎಂಬುದನ್ನು ತೋರಿಸುತ್ತವೆ.
ಜಾನೆ ಭೀ ದೋ ಯಾರೋ — ಇರಲಿ ಬಿಡಿ ಸ್ನೇಹಿತರೇ!
ಇಷ್ಟೆಲ್ಲ ಸಮಸ್ಯೆಗಳಿದ್ದರೂ, ‘ಅದರಿಂದ ಏನಾಯಿತು?’ ಎಂದು ನೀವು ಪ್ರಶ್ನಿಸಬಹುದು. ನಿಮ್ಮ ರಾಜಕೀಯ ನಿಲುವು ಏನೇ ಇರಲಿ, ಕನಿಷ್ಠ ನಾಲ್ಕು ಅಂಶಗಳನ್ನು ಪರಿಗಣಿಸುವುದು ಅಗತ್ಯ.
ಮೊದಲನೆಯದು: ಈ ಪ್ರಕ್ರಿಯೆಗೆ ತಗುಲಿದ ವೆಚ್ಚ
ಎಸ್ಐಆರ್ ಪ್ರಕ್ರಿಯೆಗಾಗಿ ನಾಗರಿಕರು ಮತ್ತು ಆಡಳಿತ ಯಂತ್ರ ತಿಂಗಳುಗಟ್ಟಲೆ ಸಮಯ, ಹಣ ಮತ್ತು ಶ್ರಮವನ್ನು ವ್ಯಯಿಸಬೇಕಾಯಿತು. ಮತಗಟ್ಟೆ ಮಟ್ಟದ ಅಧಿಕಾರಿಗಳಾಗಿ ಕೆಲಸ ಮಾಡುವವರಲ್ಲಿ ಬಹುತೇಕರು ಶಾಲಾ ಶಿಕ್ಷಕರು. ಅವರು ತಮ್ಮ ಶಿಕ್ಷಕ ವೃತ್ತಿಯ ಜೊತೆಗೆ ಚುನಾವಣಾ ಕರ್ತವ್ಯವನ್ನೂ ನಿರ್ವಹಿಸಬೇಕಾಯಿತು. ಈ ಕಾರಣದಿಂದ ಶಾಲಾ ತರಗತಿಗಳಿಗೆ ಅಡ್ಡಿಯುಂಟಾದ ಪ್ರಕರಣಗಳು ವರದಿಯಾಗಿವೆ.
ಶಿಕ್ಷಕರು ಚುನಾವಣಾ ಕೆಲಸದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದರಿಂದ ಕೆಲವು ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಂದ ಬೇರೆಡೆಗೆ ವರ್ಗಾಯಿಸಿರುವ ವರದಿಗಳೂ ಇವೆ.
ಕೆಲವು ಮತಗಟ್ಟೆ ಮಟ್ಟದ ಅಧಿಕಾರಿಗಳು ಕೆಲಸದ ಒತ್ತಡದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪಗಳೂ ವರದಿಯಾಗಿವೆ.
ಎರಡನೆಯದು: ಇದು ಕರಡು ಪಟ್ಟಿಯಲ್ಲ, ಅಂತಿಮ ಪಟ್ಟಿ!
ಈ ವರದಿಯಲ್ಲಿ ಪರಿಶೀಲಿಸಿರುವುದು ಅಂತಿಮ ಮತದಾರರ ಪಟ್ಟಿ. ಇದು ಇನ್ನೂ ಪೂರ್ಣಗೊಳ್ಳಬೇಕಿರುವ ಕರಡು ದಾಖಲೆ ಅಲ್ಲ. ಕೆಲವು ಮತಗಟ್ಟೆ ಮಟ್ಟದ ಅಧಿಕಾರಿಗಳು ದತ್ತಾಂಶ ದಾಖಲಿಸುವ ಸಂದರ್ಭದಲ್ಲಿಯೇ ತಪ್ಪಾಗಿ ಮುದ್ರಿತ ಹೆಸರುಗಳು ಮತ್ತು ವಿವರಗಳನ್ನು ಗಮನಿಸಿದ್ದರು.
ಈ ಕುರಿತು ದಿ ಹಿಂದು ಪತ್ರಿಕೆಯೊಂದಿಗೆ ಮಾತನಾಡಿದ ಕೆಲವು ಅಧಿಕಾರಿಗಳು ಅಂತಿಮ ದಾಖಲೆ ಅಪ್ಲೋಡ್ ಆದ ನಂತರ ಇಂತಹ ದೋಷಗಳನ್ನು ಸರಿಪಡಿಸಲಾಗುವುದು ಎಂದು ಹೇಳಿದ್ದರು.
ಆದರೆ ಈಗ ಅಂತಿಮ ದಾಖಲೆ ಪ್ರಕಟವಾಗಿದೆ. ಇನ್ನೂ ದೋಷಗಳು ಉಳಿದಿವೆ.
ಇಪ್ಪತ್ತು ವರ್ಷಗಳ ನಂತರ ಮತ್ತೊಂದು ಎಸ್ಐಆರ್ ನಡೆದರೆ, ಇಂದು ನಕಲಿ ನಮೂದುಗಳಾಗಿ ಕಾಣುತ್ತಿರುವ ಹೆಸರುಗಳು, ಮೃತಪಟ್ಟಿದ್ದಾರೆಂದು ಗುರುತಿಸಲ್ಪಟ್ಟು ಮತ್ತೆ ಸೇರ್ಪಡೆಯಾದವರು ಹಾಗೂ ಅವಳಿ ಮಕ್ಕಳ ಪ್ರಕರಣಗಳು ಮುಂದಿನ ಪರಿಷ್ಕರಣೆಯ ಮೂಲ ದಾಖಲೆಯ ಭಾಗವಾಗಿರುತ್ತವೆ.
ಭವಿಷ್ಯದ ಮತದಾರರಿಗೆ ಈ ದಾಖಲೆಗಳಲ್ಲಿನ ವ್ಯತ್ಯಾಸಗಳಿಗೆ ಸ್ಪಷ್ಟನೆ ನೀಡಬೇಕಾಗಬಹುದು. ಮತದಾರರ ಪಟ್ಟಿಯ ಮಹತ್ವವು ಮುಂದಿನ ದಿನಗಳಲ್ಲಿ ಮತದಾನಕ್ಕಷ್ಟೇ ಸೀಮಿತವಾಗದೇ ಇರಬಹುದು.
ಅಕ್ಟೋಬರ್ ಅಂತ್ಯದಲ್ಲಿ ಕೇಂದ್ರ ಸಚಿವ ರಾಜೀವ್ ರಂಜನ್ ಸಿಂಗ್ ಅವರು, ಪ್ರಸ್ತುತ ಆಧಾರ್ ಆಧಾರದಲ್ಲಿ ನೀಡಲಾಗುತ್ತಿರುವ ಕೆಲವು ಸೌಲಭ್ಯಗಳ ಪಾವತಿಗಳನ್ನು ಮುಂದಿನ ದಿನಗಳಲ್ಲಿ ಬಯೋಮೆಟ್ರಿಕ್ ಮಾಹಿತಿ ಮತ್ತು ಮತದಾರರ ಗುರುತಿನ ಸಂಖ್ಯೆಯ ಆಧಾರದಲ್ಲಿ ನೀಡಲಾಗುವುದು ಎಂದು ಹೇಳಿದ್ದರು.
ಮೂರನೆಯದು: ಮತದಾರರಿಗೆ ಒಂದು ನಿಯಮ, ಆಯೋಗಕ್ಕೆ ಮತ್ತೊಂದು?
ಈ ಪ್ರಕ್ರಿಯೆಯಲ್ಲಿ ಅತ್ಯಂತ ಗಮನಾರ್ಹವಾದ ಅಂಶವೆಂದರೆ ನಿಯಮಗಳ ಅಸಮಾನ ಅನ್ವಯ. ಮತದಾರನಾಗಿ ನಿಮಗೆ ತಪ್ಪು ಮಾಡಲು ಯಾವುದೇ ಅವಕಾಶವಿಲ್ಲ.
ತಪ್ಪಾದ ದಾಖಲೆ ಸಲ್ಲಿಸಿದರೆ, ವಿಚಾರಣೆಗೆ ಹಾಜರಾಗದಿದ್ದರೆ, ನಿಮ್ಮ ಊರಿಗೆ ಪ್ರಯಾಣಿಸಿ ಅಧಿಕಾರಿಗಳ ಮುಂದೆ ಹಾಜರಾಗದಿದ್ದರೆ, 2002ರ ಪಟ್ಟಿಯಲ್ಲಿರುವ ಹೆಸರಿಗೂ ಈಗಿನ ಹೆಸರಿಗೂ ವ್ಯತ್ಯಾಸವಿದ್ದರೆ ಅಥವಾ ನಿಮ್ಮ ತಂದೆಗೆ ಅಗತ್ಯ ದಾಖಲೆಗಳನ್ನು ಹುಡುಕಲು ಸಾಧ್ಯವಾಗದಿದ್ದರೆ, ನಿಮ್ಮ ಹೆಸರು ಪಟ್ಟಿಯಿಂದ ಹೊರಹೋಗಬಹುದು.
ಆದರೆ ಇಷ್ಟೊಂದು ಕಠಿಣ ನಿಖರತೆಯನ್ನು ಮತದಾರರಿಂದ ನಿರೀಕ್ಷಿಸುವ ಸಂಸ್ಥೆಯೇ ತನ್ನ ದಾಖಲೆಗಳಲ್ಲಿ ಅದೇ ಮಟ್ಟದ ನಿಖರತೆಯನ್ನು ಕಾಯ್ದುಕೊಂಡಿಲ್ಲ.
ನಾಲ್ಕನೆಯದು: ಸಾರ್ವಜನಿಕ ದಾಖಲೆಗಳನ್ನು ಪರಿಶೀಲಿಸುವುದೇ ಕಷ್ಟ!
ಈ ಎಲ್ಲ ದೋಷಗಳನ್ನು ಪರಿಶೀಲಿಸುವುದು ಅಗತ್ಯಕ್ಕಿಂತಲೂ ಹೆಚ್ಚು ಕಷ್ಟಕರವಾಗಿದೆ. ಚುನಾವಣಾ ಆಯೋಗದ ಬಳಿ ಮತದಾರರ ದತ್ತಾಂಶವಿದೆ. ಆದರೆ, ಆಯೋಗವು ಅವುಗಳನ್ನು ಪಿಡಿಎಫ್ ರೂಪದಲ್ಲಿ ಪ್ರಕಟಿಸುವ ಆಯ್ಕೆಯನ್ನು ಆಯ್ದುಕೊಂಡಿದೆ.
ಈ ದಾಖಲೆಗಳನ್ನು ಪರಿಶೀಲಿಸಲು ಬಯಸುವವರು ಮೊದಲು ಅವುಗಳನ್ನು ಡಿಜಿಟಲೀಕರಣಗೊಳಿಸಲು ಸಮಯ, ಹಣ ಮತ್ತು ಶ್ರಮವನ್ನು ವ್ಯಯಿಸಬೇಕಾಗುತ್ತದೆ.
ಈ ಸಾರ್ವಜನಿಕ ದಾಖಲೆಗಳ ಪರಿಶೀಲನೆಯು ಈಗ ಕಂಪ್ಯೂಟರ್ಗಳಲ್ಲಿ ಸಾಕಷ್ಟು ಸಂಗ್ರಹ ಸಾಮರ್ಥ್ಯ ಹೊಂದಿರುವ, ಹಣ ಮತ್ತು ಸಮಯ ವ್ಯಯಿಸಲು ಸಿದ್ಧರಿರುವ ಕೆಲವೇ ವ್ಯಕ್ತಿಗಳ ಸ್ವಯಂಪ್ರೇರಿತ ಪ್ರಯತ್ನವನ್ನು ಅವಲಂಬಿಸಿದೆ.
ಹತ್ತಾರು ಸಾವಿರ ದಾಖಲೆಗಳನ್ನು ಆಪ್ಟಿಕಲ್ ಕ್ಯಾರಕ್ಟರ್ ರೆಕಗ್ನಿಷನ್ (OCR) ತಂತ್ರಜ್ಞಾನದ ಮೂಲಕ ಸಂಸ್ಕರಿಸಬೇಕಾಗಿದೆ.
2018ರ ಅಕ್ಟೋಬರ್ 12ರಂದು ಕಮಲ್ನಾಥ್ vs ಭಾರತೀಯ ಚುನಾವಣಾ ಆಯೋಗ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ 25ನೇ ಪ್ಯಾರಾಗ್ರಾಫ್ನಲ್ಲಿ ಹೀಗೆ ಹೇಳಲಾಗಿತ್ತು: “ಅರ್ಜಿದಾರರು ಬಯಸಿದರೆ ದಾಖಲೆಗಳನ್ನು ತಾವೇ ಹುಡುಕಬಹುದಾದ ರೂಪಕ್ಕೆ ಪರಿವರ್ತಿಸಿಕೊಳ್ಳಬಹುದು. ಆದರೆ, ಅದಕ್ಕಾಗಿ ಅವರು ಸ್ವತಃ ಪ್ರಯತ್ನ ಮಾಡಬೇಕಾಗುತ್ತದೆ.”
ನಿಮ್ಮ ವಿಧಾನಸಭಾ ಕ್ಷೇತ್ರದ ಸ್ಥಿತಿಯನ್ನು ತಿಳಿದುಕೊಳ್ಳಿ
ಉದಾಹರಣೆ: ಸಿ.ವಿ. ರಾಮನ್ ನಗರ
ವಿಧಾನಸಭಾ ಕ್ಷೇತ್ರ ಸಂಖ್ಯೆ: 161
ಜಿಲ್ಲೆ: ಬೆಂಗಳೂರು ಉತ್ತರ
ಅಕ್ಟೋಬರ್ 27ರ ಅಂತಿಮ ಪಟ್ಟಿಯಲ್ಲಿರುವ ಮತದಾರರು: 1,37,623
ಪರಿಷ್ಕರಣೆಗೂ ಮುನ್ನ, ಜನವರಿ 2025ರಲ್ಲಿ ಇದ್ದ ಮತದಾರರು: 2,72,330
ಕರಡು ಪಟ್ಟಿಗೆ ಮೊದಲು ಕೈಬಿಟ್ಟವರು: 1,38,335
ಅರ್ಹತೆ ಸಾಬೀತುಪಡಿಸುವಂತೆ ನೋಟಿಸ್ ನೀಡಲಾದವರು: 80,890
ಪರಿಶೀಲನೆಯ ನಂತರ ಕೈಬಿಟ್ಟವರು: 1,763
ಅಕ್ಟೋಬರ್ 2026ರ ಅಂತಿಮ ಪಟ್ಟಿಯಲ್ಲಿ ಉಳಿದವರು: 1,37,623
ನಕಲಿ ಮತದಾರರ ನಮೂದುಗಳು: ಪ್ರತಿ 10,000 ಮತದಾರರಿಗೆ 6.1. ಹೋಲಿಕೆಯ ಸಾಮಾನ್ಯ ಕ್ಷೇತ್ರದ ಪ್ರಮಾಣ 6.6.
ಸರಿಯಾದ ವಿಳಾಸವಿಲ್ಲದ ಮತದಾರರು: ಪ್ರತಿ 450 ಮತದಾರರಲ್ಲಿ ಒಬ್ಬರು. ಹೋಲಿಕೆಯ ಸಾಮಾನ್ಯ ಕ್ಷೇತ್ರದಲ್ಲಿ ಪ್ರತಿ 30 ಮತದಾರರಲ್ಲಿ ಒಬ್ಬರು.
ಈ ವಿವರಗಳನ್ನು ಬಳಸಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಸ್ಥಿತಿಯನ್ನು ರಾಜ್ಯದ ಇತರ ಕ್ಷೇತ್ರಗಳೊಂದಿಗೆ ಹೋಲಿಸಬಹುದು.
ಅಧ್ಯಯನದ ಮಾಹಿತಿ
ಈ ಅಧ್ಯಯನಕ್ಕೆ 2002ರ ಮತದಾರರ ಪಟ್ಟಿ,2025ರ ಜನವರಿಯಲ್ಲಿನ ಮತದಾರರ ಪಟ್ಟಿ, 2026ರ ಜೂನ್-ಆಗಸ್ಟ್ನಲ್ಲಿನ ಎಸ್ಐಆರ್ ಪ್ರಕ್ರಿಯೆಯ ಎಎಸ್ಡಿಡಿಒ ಪಟ್ಟಿ (ಈ ದಾಖಲೆಯನ್ನು ‘ಮತ ಕಾವಲು ಸಮಿತಿ’ ಮತ್ತು ‘ಎದ್ದೇಳು ಕರ್ನಾಟಕ’ ಸಂಘಟನೆಗಳು ಡಿಜಿಟಲೀಕರಣಗೊಳಿಸಿವೆ), 2026ರ ಆಗಸ್ಟ್ನಿಂದ ಅಕ್ಟೋಬರ್ವರೆಗೆ ನೋಟಿಸ್ ನೀಡಲಾದವರ ಪಟ್ಟಿ, 2026ರ ಅಕ್ಟೋಬರ್ 27ರಂದು ಪ್ರಕಟವಾದ ಅಂತಿಮ ಮತದಾರರ ಪಟ್ಟಿ (ಇದನ್ನುDiagram Chasing ಡಿಜಿಟಲೀಕರಣಗೊಳಿಸಿದೆ) ಬಳಸಲಾಗಿದೆ.
ಈ ಎಲ್ಲ ದಾಖಲೆಗಳಲ್ಲಿರುವ ಮತದಾರರನ್ನು ಅವರ ಗುರುತಿನ ಸಂಖ್ಯೆ, ಹೆಸರು, ಸಂಬಂಧಿಕರ ಹೆಸರು ಮತ್ತು ವಯಸ್ಸಿನ ಆಧಾರದಲ್ಲಿ ಪರಸ್ಪರ ಹೋಲಿಸಲಾಗಿದೆ. ಚುನಾವಣಾ ಆಯೋಗದ ಎಲ್ಲ 60,923 ಮತಗಟ್ಟೆವಾರು ಪಿಡಿಎಫ್ ದಾಖಲೆಗಳನ್ನು ಡೌನ್ಲೋಡ್ ಮಾಡಿ, OCR ತಂತ್ರಜ್ಞಾನದ ಮೂಲಕ ಸಂಸ್ಕರಿಸಿ ಅಂತಿಮ ಮತದಾರರ ಪಟ್ಟಿಯ ಒಟ್ಟು ಸಂಖ್ಯೆಯನ್ನು ಲೆಕ್ಕಹಾಕಲಾಗಿದೆ. ಈ ರೀತಿ ಪಡೆದ ಅಂಕಿಅಂಶ ಮತ್ತು ರಾಜ್ಯದ ಅಧಿಕೃತ ಅಂಕಿಅಂಶಗಳ ನಡುವಿನ ವ್ಯತ್ಯಾಸ 0.01%ಕ್ಕಿಂತ ಕಡಿಮೆಯಿತ್ತು.
ಲೇಖಕರು: ಅಮನ್ ಭಾರ್ಗವ
ಮೂಲ: Diagram Chasing
ಕನ್ನಡಕ್ಕೆ: ಸೋಮಶೇಖರ್ ಚಲ್ಯ


