ಚಿತ್ರರಂಗದಲ್ಲಿ ನಿಗದಿತ 8 ಗಂಟೆಗಳ ಕೆಲಸದ ಅವಧಿ ಬೇಕೆಂಬ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಬೇಡಿಕೆಗೆ ನಿರ್ಮಾಪಕ ಕರಣ್ ಜೋಹರ್ ಮತ್ತು ನಟ ಅಕ್ಷಯ್ ಕುಮಾರ್ ಬಹಿರಂಗ ಬೆಂಬಲ ವ್ಯಕ್ತಪಡಿಸಿದ್ದಾರೆ. ‘ಅದು ಆಕೆಯ ಹಕ್ಕು’ ಎಂದಿದ್ದಾರೆ.
‘ಕಾಫಿ ವಿತ್ ಕರಣ್ ಸೀಸನ್ 9’ ಕಾರ್ಯಕ್ರಮದಲ್ಲಿ ಮಾತನಾಡಿದ ಕರಣ್ ಜೋಹರ್, “8 ಗಂಟೆಗಳ ಕೆಲಸ ಕೇಳುವುದು ದೀಪಿಕಾ ಅವರ ಹಕ್ಕು. ಈ ವಿಚಾರವನ್ನು ಏಕೆ ಇಷ್ಟೊಂದು ದೊಡ್ಡ ಚರ್ಚೆಯ ವಿಷಯವನ್ನಾಗಿ ಮಾಡಲಾಗುತ್ತಿದೆ” ಎಂದು ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್’ ಮತ್ತು ನಾಗ್ ಅಶ್ವಿನ್ ಅವರ ‘ಕಲ್ಕಿ 2898 ಎಡಿ’ ಸೀಕ್ವೆಲ್‌ನಂತಹ ಎರಡು ಬಹುನಿರೀಕ್ಷಿತ ಬಿಗ್ ಬಜೆಟ್ ಚಿತ್ರಗಳಿಂದ ದೀಪಿಕಾ ಪಡುಕೋಣೆ ಹೊರನಡೆದಿದ್ದರು. ಈ ಬಳಿಕ, ಚಿತ್ರರಂಗದಲ್ಲಿ ಕೆಲಸದ ಅವಧಿಯ ಕುರಿತು ಭಾರೀ ಚರ್ಚೆ ಆರಂಭವಾಗಿತ್ತು.
ಈ ಹಿನ್ನೆಲೆಯಲ್ಲಿ ಮಾತನಾಡಿದ ಕರಣ್ ಜೋಹರ್, “ನಟಿಯರಿಗೂ ತಮ್ಮ ಸಹನಟರಂತೆಯೇ ತಮ್ಮ ಕೆಲಸದ ಸಮಯವನ್ನು ನಿರ್ಧರಿಸುವ ಸಂಪೂರ್ಣ ಸ್ವಾತಂತ್ರ್ಯವಿರಬೇಕು” ಎಂದು ಹೇಳಿದ್ದಾರೆ.
“ಒಬ್ಬ ನಿರ್ಮಾಪಕನಾಗಿ ನಾನು ದೀಪಿಕಾ ಪಡುಕೋಣೆ ಅವರ ನಿರ್ಧಾರವನ್ನು ಗೌರವಿಸುತ್ತೇನೆ. ದೀಪಿಕಾ ಇಂತಹದ್ದೊಂದು ಬೇಡಿಕೆ ಇಟ್ಟಾಗ ಅದನ್ನೇಕೆ ದೊಡ್ಡ ವಿವಾದವನ್ನಾಗಿ ಮಾಡಲಾಗುತ್ತಿದೆಯೋ ನನಗೆ ತಿಳಿಯುತ್ತಿಲ್ಲ. ಅದು ಆಕೆಯ ಹಕ್ಕು, ಆಕೆ ಆ ಹಕ್ಕನ್ನು ಸಂಪಾದಿಸಿದ್ದಾರೆ. ದೀಪಿಕಾ ಒಬ್ಬ ಶ್ರಮಜೀವಿ; ಆಕೆ ಒಬ್ಬ ತಾಯಿ, ಪತ್ನಿ ಹಾಗೂ ವೃತ್ತಿಪರ ಕಲಾವಿದೆ. ಆಕೆಗೂ ತನ್ನದೇ ಆದ ವೈಯಕ್ತಿಕ ಜೀವನವಿದೆ. ಪುರುಷ ಸೂಪರ್‌ಸ್ಟಾರ್‌ಗಳು 8 ಗಂಟೆಗಳ ಕೆಲಸ ಕೇಳಿದಾಗ ಯಾರೂ ಪ್ರಶ್ನಿಸುವುದಿಲ್ಲ. ಆದರೆ, ಮಹಿಳಾ ಸೂಪರ್‌ಸ್ಟಾರ್ ಕೇಳಿದಾಗ ಮಾತ್ರ ಏಕೆ ಪ್ರಶ್ನೆಗಳು ಬರುತ್ತವೆ. ಈ ಲಿಂಗ ತಾರತಮ್ಯ? ಇದು ನ್ಯಾಯವಲ್ಲ” ಎಂದಿದ್ದಾರೆ.
“ದೀಪಿಕಾ ಅಥವಾ ಅಕ್ಷಯ್ ಕುಮಾರ್ ಅವರಿಗೆ ಸಹಿ ಹಾಕುವಂತೆ ಯಾರೂ ನಮ್ಮ ತಲೆಗೆ ಬಂದೂಕು ಹಿಡಿದು ಒತ್ತಾಯಿಸುವುದಿಲ್ಲ. ಅವರ ಕೆಲಸ ಮತ್ತು ಸಾಧನೆಯ ಮೇಲಿನ ಗೌರವದಿಂದ ನಾವೇ ಅವರನ್ನು ಆಯ್ಕೆ ಮಾಡಿಕೊಳ್ಳುತ್ತೇವೆ” ಎಂದು ಕರಣ್ ಖಡಕ್ ಆಗಿ ನುಡಿದಿದ್ದಾರೆ.
ಕರಣ್ ಅವರ ಈ ಅಭಿಪ್ರಾಯಕ್ಕೆ ಅಕ್ಷಯ್ ಕುಮಾರ್ ಕೂಡ ಸಂಪೂರ್ಣ ಸಹಮತ ವ್ಯಕ್ತಪಡಿಸಿದ್ದು, “ಶಿಸ್ತುಬದ್ಧ ಮತ್ತು ಸಮಯಮಿತಿಯ ಚಿತ್ರೀಕರಣವು ಸೃಜನಶೀಲತೆಗೆ ಯಾವುದೇ ಧಕ್ಕೆ ತರದೆ ಸೆಟ್‌ನಲ್ಲಿರುವ ಪ್ರತಿಯೊಬ್ಬರಿಗೂ ಅನುಕೂಲ ಮಾಡಿಕೊಡುತ್ತದೆ” ಎಂದಿದ್ದಾರೆ.
ವಿವಾದದ ಹಿನ್ನೆಲೆ ಏನು?
2025ರ ಮೇ ತಿಂಗಳಲ್ಲಿ ಕೆಲಸದ ಅವಧಿ ಮತ್ತು ಇತರ ವೃತ್ತಿಪರ ನಿಯಮಗಳ ಕುರಿತ ಭಿನ್ನಾಭಿಪ್ರಾಯದಿಂದಾಗಿ ದೀಪಿಕಾ ‘ಸ್ಪಿರಿಟ್’ ಚಿತ್ರದಿಂದ ಹೊರಬಂದಿದ್ದರು. ಇದಾದ ಕೆಲವು ತಿಂಗಳ ನಂತರ ‘ಕಲ್ಕಿ 2898 ಎಡಿ’ ಸೀಕ್ವೆಲ್‌ನಲ್ಲೂ ದೀಪಿಕಾ ಇರುವುದಿಲ್ಲ ಎಂದು ವೈಜಯಂತಿ ಮೂವೀಸ್ ಸಂಸ್ಥೆ ಘೋಷಿಸಿತ್ತು. ಈ ಕುರಿತು ಈ ಹಿಂದೆ ಸಂದರ್ಶನಗಳಲ್ಲಿ ಮಾತನಾಡಿದ್ದ ದೀಪಿಕಾ, “ಭಾರತೀಯ ಚಿತ್ರರಂಗದಲ್ಲಿ ಹಲವಾರು ಪುರುಷ ನಟರು ವರ್ಷಗಳಿಂದ ದಿನಕ್ಕೆ 8 ಗಂಟೆಗಳ ಶಿಫ್ಟ್‌ನಲ್ಲಿ ಮಾತ್ರ ಕೆಲಸ ಮಾಡುತ್ತಿದ್ದರೂ ಅದು ಎಂದಿಗೂ ಸುದ್ದಿಯಾಗಿಲ್ಲ. ಆದರೆ, ಒಬ್ಬ ಮಹಿಳೆಯಾಗಿ ನಾನು 8 ಗಂಟೆಯ ಕೆಲಸ ಅವಧಿ ಕೇಳಿದಾಗ ಅದನ್ನು ಬೇರೆಯದೇ ರೀತಿಯಲ್ಲಿ ಬಿಂಬಿಸಲಾಗುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದ್ದರು.


