ಯುವ ಟೆನಿಸ್ ಆಟಗಾರ ಅರ್ನವ್ ಪಾಪರ್ಕರ್ ಅವರು ಪ್ರತಿಷ್ಠಿತ ‘ಜೂನಿಯರ್ ವಿಂಬಲ್ಡನ್’ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್‌ಫೈನಲ್ (ಅಂತಿಮ ಎಂಟರ ಘಟ್ಟ) ಪ್ರವೇಶಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಮೂಲಕ ಕಳೆದ 36 ವರ್ಷಗಳಲ್ಲಿ ಜೂನಿಯರ್ ವಿಂಬಲ್ಡನ್‌ನಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಬುಧವಾರ ನಡೆದ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 18 ವರ್ಷದ ಅರ್ನವ್, ಜಪಾನ್‌ನ ರಿಯೊ ತಬಾಟಾ ಅವರನ್ನು ಕೇವಲ 52 ನಿಮಿಷಗಳಲ್ಲಿ 6-2, 6-1 ನೇರ ಸೆಟ್‌ಗಳಿಂದ ಮಣಿಸಿ ಎಂಟರ ಘಟ್ಟಕ್ಕೆ ಲಗ್ಗೆಯಿಟ್ಟರು. 1990ರಲ್ಲಿ ಜೂನಿಯರ್ ವಿಂಬಲ್ಡನ್ ಪ್ರಶಸ್ತಿ ಗೆದ್ದಿದ್ದ ದಿಗ್ಗಜ ಆಟಗಾರ ಲಿಯಾಂಡರ್ ಪೇಸ್ ಅವರ ನಂತರ, ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.
ಈ ಗೆಲುವಿನೊಂದಿಗೆ ಅರ್ನವ್ ಅವರು ಲಿಯಾಂಡರ್ ಪೇಸ್, ರಾಮನಾಥನ್ ಕೃಷ್ಣನ್ ಮತ್ತು ರಮೇಶ್ ಕೃಷ್ಣನ್ ಅವರನ್ನೊಳಗೊಂಡ ಭಾರತದ ದಿಗ್ಗಜರ ಗಣ್ಯರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಅಲ್ಲದೆ, 2009ರ ಯುಎಸ್ ಓಪನ್‌ನಲ್ಲಿ ಯೂಕಿ ಭಾಂಬ್ರಿ ಕ್ವಾರ್ಟರ್‌ಫೈನಲ್ ತಲುಪಿದ ಬಳಿಕ, ಜೂನಿಯರ್ ಗ್ರ್ಯಾನ್‌ಸ್ಲಾಮ್ ಟೂರ್ನಿಯೊಂದರಲ್ಲಿ ಎಂಟರ ಘಟ್ಟಕ್ಕೇರಿದ ಮೊದಲ ಭಾರತೀಯ ಎಂಬ ಕೀರ್ತಿಯೂ ಅವರದ್ದಾಗಿದೆ. ಕ್ವಾರ್ಟರ್‌ಫೈನಲ್‌ನಲ್ಲಿ ಅವರು ಅಮೆರಿಕದ ಅರ್ಹತಾ ಆಟಗಾರ ಜೋರ್ಡಾನ್ ಲೀ ಅವರನ್ನು ಎದುರಿಸಲಿದ್ದಾರೆ.
ಮಾಯಾ ರಾಜೇಶ್ವರನ್‌ಗೆ ಡಬಲ್ಸ್‌ನಲ್ಲಿ ಮುನ್ನಡೆ:ಜೂನಿಯರ್ ವಿಂಬಲ್ಡನ್‌ನ ಬಾಲಕಿಯರ ವಿಭಾಗದಲ್ಲಿ ಕಣಕ್ಕಿಳಿದಿದ್ದ ಭಾರತದ 17 ವರ್ಷದ ಪ್ರತಿಭೆ ಮಾಯಾ ರಾಜೇಶ್ವರನ್ ರೇವತಿ, ಸಿಂಗಲ್ಸ್‌ನ ಎರಡನೇ ಸುತ್ತಿನಲ್ಲಿ ಜರ್ಮನಿಯ ಎಮಿಲಿ ವಿಕ್ಟೋರಿಯಾ ಐಗೆಲ್ಸ್‌ಬಾಕ್ ಎದುರು 5-7, 2-6 ಅಂತರದಲ್ಲಿ ಪರಾಭವಗೊಂಡಿದ್ದಾರೆ. ಆದರೆ, ಡಬಲ್ಸ್ ವಿಭಾಗದಲ್ಲಿ ತಮ್ಮ ಜೊತೆಗಾರ್ತಿ ಥಿಯಾ ಫ್ರೋಡಿನ್ ಅವರೊಂದಿಗೆ ಕಣಕ್ಕಿಳಿದಿರುವ ಮಾಯಾ, ಇಲರಿ ಪಿಸ್ಟೋಲಾ ಮತ್ತು ಗಿಯುಲಿಯಾ ಸಫಿನಾ ಪೋಪಾ ಜೋಡಿಯನ್ನು ಮಣಿಸಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.
ಅರ್ನವ್ ಪಾಪರ್ಕರ್ ಯಾರು?
ಮಹಾರಾಷ್ಟ್ರದ ಪುಣೆ ಮೂಲದ 18 ವರ್ಷದ ಅರ್ನವ್, ಪ್ರಸ್ತುತ ಐಟಿಎಫ್ (ITF) ಜೂನಿಯರ್ ವಿಶ್ವ ರ್‍ಯಾಂಕಿಂಗ್‌ನಲ್ಲಿ 19ನೇ ಸ್ಥಾನದಲ್ಲಿದ್ದಾರೆ. ಆರು ಅಡಿಗೂ ಹೆಚ್ಚು ಎತ್ತರವಿರುವ ಇವರು, ಪುಣೆಯ ಹೇಮಂತ್ ಬೇಂದ್ರೆ ಟೆನಿಸ್ ಅಕಾಡೆಮಿಯಲ್ಲಿ (ಕೋಚ್ ಪ್ರಸೇನ್‌ಜಿತ್ ಪೌಲ್) ಹಾಗೂ ಸ್ಪೇನ್‌ನ ಸೊಟೊ ಅಕಾಡೆಮಿಯಲ್ಲಿ (ಕೋಚ್ ನಿಗೆಲ್ ಬೀವರ್ಸ್) ತರಬೇತಿ ಪಡೆಯುತ್ತಿದ್ದಾರೆ.
ಜೂನಿಯರ್ ವಿಂಬಲ್ಡನ್‌ನಲ್ಲಿನ ಅಮೋಘ ಪ್ರದರ್ಶನ:ಎರಡನೇ ಸುತ್ತಿನಲ್ಲಿ ಅಮೆರಿಕದ ಜೂನಿಯರ್ ವಿಶ್ವದ 3ನೇ ರ್‍ಯಾಂಕ್‌ನ ಆಟಗಾರ ಕೀಟನ್ ಹ್ಯಾನ್ಸ್ ಅವರನ್ನು 6-2, 6-3 ಅಂತರದಿಂದ ಸೋಲಿಸಿ ಅರ್ನವ್ ಎಲ್ಲರ ಗಮನ ಸೆಳೆದಿದ್ದರು. ಆ ಪಂದ್ಯದಲ್ಲಿ 6 ಏಸ್‌ಗಳನ್ನು ಸಿಡಿಸಿದ್ದ ಅವರು, ತಮ್ಮ ಸರ್ವ್‌ನಲ್ಲಿ ಎದುರಾದ ಎಲ್ಲಾ ಬ್ರೇಕ್‌ಪಾಯಿಂಟ್‌ಗಳನ್ನು ಉಳಿಸಿಕೊಂಡು, ಕೇವಲ 18 ಪಾಯಿಂಟ್‌ಗಳನ್ನು ಮಾತ್ರ ಬಿಟ್ಟುಕೊಟ್ಟು ವೃತ್ತಿಜೀವನದ ಅತಿದೊಡ್ಡ ಗೆಲುವು ದಾಖಲಿಸಿದ್ದರು.
ಜಪಾನ್‌ನ ರಿಯೊ ತಬಾಟಾ ವಿರುದ್ಧದ ಪಂದ್ಯದಲ್ಲೂ ಪ್ರಾಬಲ್ಯ ಮೆರೆದ ಅರ್ನವ್, 8 ಏಸ್‌ಗಳನ್ನು ಸಿಡಿಸಿದರು ಹಾಗೂ ತಮ್ಮ ಮೊದಲ ಸರ್ವ್‌ನಲ್ಲಿ 25ರ ಪೈಕಿ 23 ಪಾಯಿಂಟ್‌ಗಳನ್ನು ಗೆದ್ದರು. ಪಂದ್ಯದಲ್ಲಿ ಅವರ ಅತಿ ವೇಗದ ಸರ್ವ್ ಗಂಟೆಗೆ 208 ಕಿ.ಮೀ. ಹಾಗೂ ಸರಾಸರಿ ವೇಗ 196 ಕಿ.ಮೀ. ಇತ್ತು. ವಿಶೇಷವೆಂದರೆ, ತಬಾಟಾ ವಿರುದ್ಧ ಈ ಹಿಂದೆ ಆಡಿದ್ದ ಎರಡು ಪಂದ್ಯಗಳಲ್ಲೂ ಅರ್ನವ್ ಸೋತಿದ್ದರು. “ಹಿಂದಿನ ಆ ಸೋಲು ನನ್ನ ತಲೆಯಲ್ಲೇ ಇತ್ತು. ಆದರೆ ಈಗ ನಾನು ಮಾನಸಿಕವಾಗಿ ಹೆಚ್ಚು ಬಲಿಷ್ಠನಾಗಿದ್ದೇನೆ ಹಾಗೂ ಪ್ರಶಾಂತವಾಗಿದ್ದೇನೆ” ಎಂದು ಅವರು ಮಾಧ್ಯಮವೂಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಯಶಸ್ಸಿನ ಹಾದಿ:
2023: ಆಸ್ಟ್ರೇಲಿಯನ್ ಓಪನ್ 14-ವಯೋಮಿತಿಯ (U-14) ಏಷ್ಯಾ-ಪೆಸಿಫಿಕ್ ಎಲೈಟ್ ಟ್ರೋಫಿ ಚಾಂಪಿಯನ್.
16-ವಯೋಮಿತಿಯ (U-16) ರಾಷ್ಟ್ರೀಯ ಚಾಂಪಿಯನ್.2024: ತಮ್ಮ 16ನೇ ಹುಟ್ಟುಹಬ್ಬದಂದು ಎಟಿಪಿ ಚಾಲೆಂಜರ್ (ATP Challenger) ಟೂರ್ನಿಗೆ ಪದಾರ್ಪಣೆ.
2025: ಐಟಿಎಫ್ J60 ಮನಾಮ ಮತ್ತು ಮಲೇಷ್ಯಾದ J200 ಕೌಲಾಲಂಪುರ್ ಟೂರ್ನಿಗಳಲ್ಲಿ ಚಾಂಪಿಯನ್.
2026: ಎಐಟಿಎ (AITA) 18-ವಯೋಮಿತಿಯ ಬಾಲಕರ ರಾಷ್ಟ್ರೀಯ ರ್‍ಯಾಂಕಿಂಗ್‌ನಲ್ಲಿ ನಂಬರ್ 1 ಸ್ಥಾನಕ್ಕೇರಿ, 21 ವಾರಗಳ ಕಾಲ ಆ ಸ್ಥಾನ ಕಾಯ್ದುಕೊಂಡರು.
2026ರ ರೋಲ್ಯಾಂಡ್ ಗ್ಯಾರೋಸ್ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ 3ನೇ ಸುತ್ತು ಪ್ರವೇಶಿಸಿ ಟಾಪ್ 20ರೊಳಗೆ ಸ್ಥಾನ ಪಡೆದರು.




