ಏಷ್ಯನ್ ಗೇಮ್ಸ್‌ನ ಗಾಲ್ಫ್ ಅಂಗಳದಲ್ಲಿ ಭಾರತ ಹೊಸ ಇತಿಹಾಸ ಬರೆದಿದೆ. ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡಿದ ಮೈಸೂರು ಮೂಲದ ಪ್ರಣವಿ ಅರಸ್ ಅವರು ಐತಿಹಾಸಿಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಏಷ್ಯನ್ ಗೇಮ್ಸ್ ಗಾಲ್ಫ್‌ನಲ್ಲಿ ಬಂಗಾರ ಗೆದ್ದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಏಷ್ಯನ್ ಗೇಮ್ಸ್‌ನಲ್ಲಿ ಕನ್ನಡಿಗರ ಹೆಮ್ಮೆಯನ್ನು ಇಮ್ಮಡಿಗೊಳಿಸಿದ್ದಾರೆ. ಜೊತೆಗೆ, ಇವರ ಈ ಶ್ರೇಷ್ಠ ಪ್ರದರ್ಶನದ ನೆರವಿನಿಂದ ಭಾರತದ ಮಹಿಳಾ ತಂಡವು ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದೆ.
ಅಂತಿಮ ಸುತ್ತಿನ ಹೋರಾಟದಲ್ಲಿ ರೋಚಕತೆ ಮನೆಮಾಡಿತ್ತು. 23 ವರ್ಷದ ಪ್ರಣವಿ ಅವರು ಮೂರನೇ ಹಾಲಿನಲ್ಲಿ (Hole) ತ್ರಿಪಲ್ ಬೋಗಿ ಎದುರಿಸಿ ತಮ್ಮ ಆರಂಭಿಕ ಮುನ್ನಡೆಯನ್ನು ಕಳೆದುಕೊಂಡಿದ್ದರು. ಆದರೆ, ಎದೆಗುಂದದೆ ತಕ್ಷಣವೇ ಚೇತರಿಸಿಕೊಂಡು ಮೂರು ಬರ್ಡಿಗಳನ್ನು ಬಾರಿಸುವ ಮೂಲಕ ಮರಳಿ ಅಗ್ರಸ್ಥಾನಕ್ಕೇರಿದರು. ಅಂತಿಮ ಸುತ್ತಿನಲ್ಲಿ ‘ಈವನ್-ಪಾರ್ 70’ (Even-par 70) ಕಲೆಹಾಕಿದ ಅವರು, ನಾಲ್ಕು ದಿನಗಳ ಮುಕ್ತಾಯಕ್ಕೆ ಒಟ್ಟು 15-ಅಂಡರ್ 265 ಸ್ಕೋರ್ ದಾಖಲಿಸಿದರು. ತಮ್ಮ ಸಮೀಪದ ಪ್ರತಿಸ್ಪರ್ಧಿಗಿಂತ ಒಂದು ಸ್ಟ್ರೋಕ್ ಅಂತರದ ಮುನ್ನಡೆಯೊಂದಿಗೆ ಪ್ರಣವಿ ಬಂಗಾರದ ಪದಕವನ್ನು ಕೊರಳಿಗೇರಿಸಿಕೊಂಡರು. 2002ರಲ್ಲಿ ಶಿವ್ ಕಪೂರ್ ಪುರುಷರ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ ಬಳಿಕ, ಏಷ್ಯನ್ ಗೇಮ್ಸ್ ಗಾಲ್ಫ್‌ನಲ್ಲಿ ಭಾರತಕ್ಕೆ ಒಲಿದ ಮೊಟ್ಟಮೊದಲ ಚಿನ್ನದ ಪದಕ ಇದಾಗಿದೆ.
ಪ್ರಣವಿ ಅವರ ಈ ಏಕಸ್ವಾಮ್ಯದ ಸಾಧನೆ ಭಾರತ ತಂಡಕ್ಕೆ ಬೆಳ್ಳಿ ಪದಕ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿತು. ಅಂತಿಮ ಸುತ್ತಿನಲ್ಲಿ ತಂಡದ ಮತ್ತೋರ್ವ ಸ್ಟಾರ್ ಆಟಗಾರ್ತಿ ಬೆಂಗಳೂರಿನ ಅದಿತಿ ಅಶೋಕ್ 67 ಸ್ಕೋರ್ ಮಾಡಿದರೆ, ದೀಕ್ಷಾ ಡಾಗರ್ 77 ಸ್ಕೋರ್ ಕಲೆಹಾಕಿದರು. ತಂಡದ ಪದಕಕ್ಕಾಗಿ ಇಬ್ಬರು ಅತ್ಯುತ್ತಮ ಆಟಗಾರರ ಸ್ಕೋರ್‌ಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಅದರಂತೆ ಪ್ರಣವಿ, ಅದಿತಿ ಹಾಗೂ ದೀಕ್ಷಾ ಡಾಗರ್ ಅವರನ್ನೊಳಗೊಂಡ ಭಾರತ ತಂಡವು ಒಟ್ಟು 14-ಅಂಡರ್ 546 ಸ್ಕೋರ್‌ನೊಂದಿಗೆ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತು. ಇದೇ ವೇಳೆ 22-ಅಂಡರ್ 538 ಸ್ಕೋರ್ ಮಾಡಿದ ಚೀನಾ ತಂಡ ಚಿನ್ನದ ಪದಕ ಗೆದ್ದುಕೊಂಡಿತು.
ಮೈಸೂರು ಕುವರಿಯ ಕ್ರೀಡಾ ಹಿನ್ನೆಲೆ:
This video cannot be played in your browser. Open the video directly
ಕರ್ನಾಟಕದ ಮೈಸೂರಿನ ಲಕ್ಷ್ಮೀಪುರಂನ ಕ್ರೀಡಾ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದ ಪ್ರಣವಿ ಶರತ್ ಅರಸ್, ತಮ್ಮ ಐದನೇ ವಯಸ್ಸಿನಲ್ಲೇ ಗಾಲ್ಫ್ ಸ್ಟಿಕ್ ಹಿಡಿದವರು. ಇವರ ಕ್ರೀಡಾ ಪಯಣಕ್ಕೆ ತಂದೆ ಶರತ್ ಚಂದ್ರ ರಾಜ್ ಅರಸ್ ಹಾಗೂ ಸಹೋದರ ಸಮರ್ಥ್ ಅರಸ್ ಅವರ ಪ್ರೋತ್ಸಾಹವೇ ಪ್ರಮುಖ ಕಾರಣ. ಕಠಿಣ ತರಬೇತಿ ಹಾಗೂ ಸಣ್ಣ ವಯಸ್ಸಿನಲ್ಲೇ ವೃತ್ತಿಪರ ಗಾಲ್ಫ್‌ಗೆ ಕಾಲಿಡಲು ಬೆಂಬಲವಾಗಿ ನಿಂತ ತಾಯಿ ಎಂ.ಎಲ್. ಕೈವಲ್ಯ ಅರಸ್ ಅವರ ಪಾತ್ರವೂ ದೊಡ್ಡದು. ಇವರ ಕುಟುಂಬದ ಬೇರುಗಳು ಮೈಸೂರು ರೇಸ್ ಕ್ಲಬ್‌ಗೂ ವ್ಯಾಪಿಸಿವೆ.
ವಿಶೇಷವೆಂದರೆ, ಪ್ರಣವಿ ಅವರ ಕುಟುಂಬದಲ್ಲೇ ಗಾಲ್ಫ್ ಪ್ರತಿಭೆಗಳು ಅಡಗಿವೆ. ಪ್ರಣವಿ ಅವರ ಸಂಬಂಧಿ ವಿಧಾತ್ರಿ ಕೆ. ಅರಸ್ ಕೂಡ ಗಾಲ್ಫ್ ಕ್ರೀಡೆಯಲ್ಲಿ ಅತ್ಯುನ್ನತ ಹೆಸರು ಮಾಡಿದ್ದಾರೆ. ಅಖಿಲ ಭಾರತ ಲೇಡೀಸ್ ಗಾಲ್ಫ್ ಚಾಂಪಿಯನ್‌ಶಿಪ್ ಗೆದ್ದು ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ವಿಧಾತ್ರಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಗುರಿ ಹೊಂದಿದ್ದಾರೆ. ಇದೀಗ ಪ್ರಣವಿ ಅವರ ಐತಿಹಾಸಿಕ ಚಿನ್ನದ ಪದಕವು ಅರಸ್ ಕುಟುಂಬದ ಕ್ರೀಡಾ ಪರಂಪರೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದೆ.





