ಅಥ್ಲೀಟ್‌ಗಳು ಬೀದಿಗಿಳಿದಿರುವುದು ನೋವು ತಂದಿದೆ; ಪ್ರತಿಭಟನಾನಿರತರಿಗೆ ನೀರಜ್‌ ಚೋಪ್ರಾ, ಕಪಿಲ್‌ ದೇವ್ ಬೆಂಬಲ

Date:

  • ನಿಷ್ಪಕ್ಷಪಾತ ತನಿಖೆ ನಡೆಯಬೇಕಿದೆ ಎಂದು ಹೇಳಿದ ನೀರಜ್‌ ಚೋಪ್ರಾ
  • ಮುಂಚೂಣಿ ಕ್ರಿಕೆಟಿಗರ ಮೌನ ಪ್ರಶ್ನಿಸಿದ ಕುಸ್ತಿಪಟು ವಿನೇಶ್ ಫೋಗಟ್

ಭಾರತೀಯ ಕುಸ್ತಿ ಫೆಡರೇಶನ್‌ನ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳುವಂತೆ ದೇಶದ ಅಗ್ರ ಕುಸ್ತಿಪಟುಗಳಾದ ಬಜರಂಗ್ ಪುನಿಯಾ, ವಿನೇಶ್ ಫೋಗಟ್ ಮತ್ತು ಸಾಕ್ಷಿ ಮಲಿಕ್ ನೇತೃತ್ವದಲ್ಲಿ ದೆಹಲಿಯ ಜಂತರ್‌ ಮಂತರ್‌ನಲ್ಲಿ ಕಳೆದ ವಾರದಿಂದ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳಿಗೆ ಒಲಿಂಪಿಕ್‌ ಪದಕ ವಿಜೇತ ನೀರಜ್‌ ಚೋಪ್ರಾ ಹಾಗೂ ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್‌ ದೇವ್‌ ಬೆಂಬಲ ವ್ಯಕ್ತಪಡಿಸಿದ್ದಾರೆ.

ತಮ್ಮ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿರುವ ನೀರಜ್ ಚೋಪ್ರಾ, “ನ್ಯಾಯಪಡೆಯಲು ನಮ್ಮ ಅಥ್ಲೀಟ್‌ಗಳು ಬೀದಿಗಿಳಿದಿರುವುದನ್ನು ನೋಡಿದರೆ ನನಗೆ ನೋವುಂಟಾಗುತ್ತದೆ. ಅವರು ನಮ್ಮ ಮಹಾನ್ ರಾಷ್ಟ್ರವನ್ನು ಪ್ರತಿನಿಧಿಸಲು ಮತ್ತು ಹೆಮ್ಮೆ ತರಲು ಶ್ರಮಿಸಿದ್ದಾರೆ. ರಾಷ್ಟ್ರಕ್ಕಾಗಿ  ಕ್ರೀಡಾಪಟು ಆಗಿದ್ದರೂ ಆಗಿಲ್ಲದಿದ್ದರೂ ಪ್ರತಿಯೊಬ್ಬ ವ್ಯಕ್ತಿಯ ಸಮಗ್ರತೆ ಮತ್ತು ಘನತೆ ಕಾಪಾಡುವ ಜವಾಬ್ದಾರರಾಗಿದ್ದಾರೆ. ಇದೊಂದು ಸೂಕ್ಷ್ಮ ವಿಷಯ, ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆಯಾಗಬೇಕಿದೆ. ನ್ಯಾಯ ಒದಗಿಸುವುದನ್ನು ಖಾತ್ರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು” ಎಂದು ಮನವಿ ಮಾಡಿದ್ದಾರೆ.

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಕೂಡ ಇನ್​ಸ್ಟಾಗ್ರಾಮ್​ನಲ್ಲಿ ಸ್ಟೇಟಸ್ ಹಾಕಿ ಪ್ರತಿಭಟನಾನಿರತ ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿದ್ದಾರೆ. “ಇವರಿಗೆ ಯಾವಾಗ ನ್ಯಾಯ ಸಿಗುತ್ತದೆ?” ಎಂದು ಬರೆದು ಬಜರಂಗ್ ಮತ್ತು ವಿನೇಶ್ ಸೇರಿದಂತೆ ಇತರರನ್ನು ಒಳಗೊಂಡ ಪತ್ರಿಕಾಗೋಷ್ಠಿಯ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಅದೇ ರೀತಿ, ಕುಸ್ತಿಪಟು ರವಿ ದಹಿಯಾ ಕೂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸಹೋದ್ಯೋಗಿಗಳ ಬೆಂಬಲಕ್ಕೆ ನಿಂತಿದ್ದು, “ಒಬ್ಬ ಸೇನಾಧಿಕಾರಿ ಮತ್ತು ಕ್ರೀಡಾಪಟು ಪ್ರತಿ ರಾಷ್ಟ್ರದ ಹೆಮ್ಮೆ. ಅವರನ್ನು ಗೌರವಿಸುವುದು ರಾಷ್ಟ್ರದ ಕರ್ತವ್ಯ” ಎಂದು ಬರೆದಿದ್ದಾರೆ.

ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ತಮ್ಮ ಪ್ರತಿಭಟನೆ ತೀವ್ರಗೊಳಿಸಿರುವ ಕುಸ್ತಿಪಟುಗಳು ಅವರನ್ನು ಲೈಂಗಿಕ ಶೋಷಣೆಯ ಆರೋಪಗಳಲ್ಲಿ ಬಂಧಿಸದ ಹೊರತು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಸಂಕಲ್ಪ ಮಾಡಿದ್ದಾರೆ. 2012ರಿಂದ ಭಾರತೀಯ ಕುಸ್ತಿ ಒಕ್ಕೂಟದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ 7 ಮಹಿಳಾ ಕುಸ್ತಿಪಟುಗಳು ಈ ಹಿಂದೆ ದೆಹಲಿಯ ಕೇಂದ್ರ ಭಾಗದಲ್ಲಿರುವ ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದರು.

ಪಿ ಟಿ ಉಷಾ ಹೇಳಿಕೆಗೆ ಸಂಸದೆ ಪ್ರಿಯಾಂಕಾ ಟೀಕೆ

ಭಾರತೀಯ ಕುಸ್ತಿ ಒಕ್ಕೂಟದ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳನ್ನು ವಿರೋಧಿಸುತ್ತಿರುವ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಅಧ್ಯಕ್ಷೆ ಪಿಟಿ ಉಷಾ ಅವರ ಟೀಕೆಗೆ ಶಿವಸೇನಾ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ ಶುಕ್ರವಾರ ಪ್ರತಿಕ್ರಿಯಿಸಿದ್ದು, “ನಾವು ಒಟ್ಟಾಗಿ ನಮ್ಮ ಕ್ರೀಡಾಪಟುಗಳ ಪರವಾಗಿ ಮಾತನಾಡಬೇಕಿದೆ” ಎಂದು ಹೇಳಿದ್ದಾರೆ.

“ನಮ್ಮಲ್ಲಿ ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಸಂಸದರು ಮುಕ್ತವಾಗಿ ತಿರುಗುತ್ತಿರುವಾಗ ಸಂತ್ರಸ್ತರು ನ್ಯಾಯಕ್ಕಾಗಿ ಹೋರಾಟ ನಡೆಸಿದರೆ ದೇಶದ ಪ್ರತಿಷ್ಠೆ ಹೇಗೆ ಹಾಳಾಗುತ್ತದೆ” ಎಂದು ಪ್ರಿಯಾಂಕಾ ಪ್ರಶ್ನಿಸಿದ್ದಾರೆ.

“ಕ್ಷಮಿಸಿ ಮೇಡಂ, ನಮ್ಮ ಕ್ರೀಡಾಪಟುಗಳು ನಮ್ಮ ದೇಶಕ್ಕಾಗಿ ಪ್ರಶಸ್ತಿಗಳನ್ನು ಗೆದ್ದು ನಮಗೆ ಹೆಮ್ಮೆ ತಂದಿದ್ದಾರೆ. ಅವರ ತ್ಯಾಗ ಪರಿಗಣಿಸದೆ, ದೇಶದ ವರ್ಚಸ್ಸನ್ನು​ಹಾಳು​ ಮಾಡುತ್ತಿದ್ದಾರೆ ಎಂದು ಆರೋಪಿಸಬೇಡಿ. ಅವರಿಗಾಗಿ ನಾವು ಒಟ್ಟಾಗಿ ಮಾತನಾಡಬೇಕು” ಎಂದು ಅವರು ತಿಳಿಸಿದ್ದಾರೆ.

ಇದಕ್ಕೂ ಮೊದಲು, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಅವರೂ ಉಷಾ ಅವರ ಹೇಳಿಕೆಯನ್ನು ಟೀಕಿಸಿದ್ದರು. “ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ, ಕುಸ್ತಿ ಫೆಡರೇಷನ್‌ ಅಧ್ಯಕ್ಷರ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್‌ ದಾಖಲಿಸಲು ನಿರಾಕರಿಸಿರುವುದು ಎಷ್ಟರಮಟ್ಟಿಗೆ ಸರಿ?” ಎಂದು ಮೊಯಿತ್ರಾ ಹೇಳಿದ್ದರು.

ರಾಜ್ಯಸಭಾ ಸದಸ್ಯೆಯು ಆಗಿರುವ ಪಿ ಟಿ ಉಷಾ, ಪ್ರತಿಭಟನೆ ಆತುರದ ನಿರ್ಧಾರ ಬೇಡವಾಗಿತ್ತು. ಪ್ರತಿಭಟನೆ ನಡೆಸುವ ಮೊದಲು ಆರೋಪಗಳನ್ನು ಪರಿಶೀಲಿಸುವ ಸಮಿತಿಯ ವರದಿ ಬರುವವರೆಗೂ ಕಾಯಬೇಕಿತ್ತು. ಲೈಂಗಿಕ ಕಿರುಕುಳದ ದೂರುಗಳಿಗಾಗಿ, ಭಾರತೀಯ ಒಲಿಂಪಿಕ್ ಸಂಸ್ಥೆಯ ಸಮಿತಿ ಮತ್ತು ಕ್ರೀಡಾಪಟುಗಳ ಆಯೋಗ ಇದೆ. ಆದರೆ ಕುಸ್ತಿಪಟುಗಳು ಬೀದಿಗೆ ಹೋಗುವ ಬದಲು, ನಮ್ಮ ಬಳಿಗೆ ಬರಬೇಕಿತ್ತು. ಅವರು ಐಒಎಗೆ ಬಂದಿಲ್ಲ. ಎಲ್ಲಾ ರಾಜಕೀಯ ಪಕ್ಷಗಳನ್ನು ತಮ್ಮ ಪ್ರತಿಭಟನೆಗೆ ಬೆಂಬಲ ನೀಡುವಂತೆ ಕೋರುತ್ತಿದ್ದಾರೆ‌. ಅದು ನನಗೆ ನಿರಾಸೆ ತಂದಿದೆ. ಇದು ಅಶಿಸ್ತು. ದೇಶದ ವರ್ಚಸ್ಸನ್ನು​ಹಾಳು​ ಮಾಡುತ್ತಿದ್ದಾರೆ. ಕುಸ್ತಿ ಫೆಡರೇಷನ್ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ” ಎಂದು ಹೇಳಿದ್ದರು.

ಭಾರತೀಯ ಕ್ರಿಕೆಟಿಗರ ಮೌನ ಪ್ರಶ್ನಿಸಿದ ವಿನೇಶ್ ಫೋಗಟ್

ಸ್ಟಾರ್ ಕ್ರಿಕೆಟಿಗರು ಮತ್ತು ಇತರ ಉನ್ನತ ಕ್ರೀಡಾ ಪಟುಗಳು ಲೈಂಗಿಕ ಕಿರುಕುಳಕ್ಕೆ ಒಳಗಾದ ಕುಸ್ತಿಪಟುಗಳ ಬಗ್ಗೆ ಮೌನ ವಹಿಸಿರುವುದಕ್ಕೆ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತ ವಿನೇಶ್ ಫೋಗಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಅವರಿಗೆ ಅಧಿಕಾರದಲ್ಲಿರುವವರನ್ನು ಎದುರಿಸಲು ಧೈರ್ಯವಿಲ್ಲ. ಇದು ನಮಗೆ ಬೇಸರ ತರಿಸಿದೆ. ನಮ್ಮ ದೇಶವು ಕ್ರಿಕೆಟ್ ಅನ್ನು ಆರಾಧಿಸುತ್ತದೆ. ಆದರೆ ಒಬ್ಬ ಕ್ರಿಕೆಟಿಗ ಕೂಡ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿಲ್ಲ. ನೀವು ನಮ್ಮ ಪರವಾಗಿ ಮಾತನಾಡುತ್ತೀರಿ ಎಂದು ನಾವು ಹೇಳುತ್ತಿಲ್ಲ. ಆದರೆ ನ್ಯಾಯ ಸಿಗಬೇಕೆಂಬ ಕನಿಷ್ಠ ಒಂದು ಸಂದೇಶವನ್ನಾದರೂ ನೀಡಿ. ಕ್ರಿಕೆಟಿಗರು, ಬ್ಯಾಡ್ಮಿಂಟನ್ ಆಟಗಾರರು, ಅಥ್ಲೆಟಿಕ್ಸ್, ಬಾಕ್ಸಿಂಗ್‌ಪಟುಗಳು ಬೆಂಬಲ ವ್ಯಕ್ತಪಡಿಸದೇ ಇರುವುದು ನೋವು ತಂದಿದೆ” ಎಂದರು.

“ನಾವು ಏನನ್ನಾದರೂ ಗೆದ್ದಾಗ ನೀವು ನಮ್ಮನ್ನು ಅಭಿನಂದಿಸಲು ಮುಂದೆ ಬರುತ್ತೀರಿ. ಆದರೆ ಈಗ ಏನಾಗಿದೆ. ವ್ಯವಸ್ಥೆಗೆ ನೀವು ತುಂಬಾ ಹೆದರುತ್ತೀರಾ? ಅಥವಾ ಅಲ್ಲಿಯೂ ಏನಾದರೂ ರಾಜಕೀಯ ನಡೆಯುತ್ತಿದೆಯೇ?” ಎಂದು ಪ್ರಶ್ನಿಸಿದರು.

“ದೊಡ್ಡ ಕ್ರೀಡಾಪಟುಗಳು ಮೌನವಾಗಿದ್ದರೆ, ಏನು ಪ್ರಯೋಜನ? ಪ್ರತಿ ಕ್ರೀಡಾ ಫೆಡರೇಶನ್‌ಗೆ ಸಮಸ್ಯೆ ಇದೆ ಮತ್ತು ಅನೇಕ ಕ್ರೀಡಾಪಟುಗಳು ನನ್ನ ಸ್ನೇಹಿತರಾಗಿದ್ದಾರೆ. ಆದರೆ ಇಂತಹ ಪರಿಸ್ಥಿತಿಯಲ್ಲಿ ಮೂಕ ಪ್ರೇಕ್ಷಕರಾಗಬಾರದು. ವ್ಯವಸ್ಥೆಯ ವಿರುದ್ಧ ಪ್ರತಿಭಟಿಸಬೇಕು. ತಮ್ಮ ವೈಯಕ್ತಿಕ ಲಾಭಗಳನ್ನು ಮೀರಿ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಬೇಕು” ಎಂದು ವಿನೇಶ್ ಫೋಗಟ್ ತಿಳಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬುಡಕಟ್ಟು ಮಹಿಳೆಯರು ಹಿಂದೂಗಳಲ್ಲ, ಮಂಗಳಸೂತ್ರ ಧರಿಸಬಾರದು ಎಂದು ಹೇಳಿದ ಶಿಕ್ಷಕಿ ಅಮಾನತು

ಬುಡಕಟ್ಟು ಮಹಿಳೆಯರು ಮಂಗಳಸೂತ್ರ ಧರಿಸಬಾರದು, ಕುಂಕುಮ ಅವರಿಗೆ ಅನ್ವಯವಾಗುವುದಿಲ್ಲ ಎಂದು ಹೇಳಿದ್ದ...

ಹೊಸ ಕೇಂದ್ರಾಡಳಿತ ಪ್ರದೇಶ ಘೋಷಿಸದಿದ್ದರೆ ಹಿಂದೂಗಳು ಕಣ್ಮರೆ: ಬಿಜೆಪಿ ಸಂಸದನ ವಿವಾದಾತ್ಮಕ ಹೇಳಿಕೆ

ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದ ಕೆಲವು ಭಾಗಗಳನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕು...

ಭಾರತದ ಕೆಲ ಪ್ರದೇಶಗಳಿಗೆ ತೆರಳಬೇಡಿ ಎಂದ ಅಮೆರಿಕ; ಮೋದಿ ನೇತೃತ್ವದ ಭಾರತಕ್ಕೆ ಇದೆಂಥಾ ಅಪಮಾನ?

ಇತ್ತೀಚಿನ ದಿನಗಳಲ್ಲಿ ಜಗತ್ತು ನಾನಾ ರೀತಿಯ ಘಟನೆಗಳು, ಬೆಳವಣಿಗೆಗಳು ಮತ್ತು ವಿದ್ಯಮಾನಗಳಿಗೆ...

ಇ ತ್ಯಾಜ್ಯ ಟೆಂಡರ್ ಅಕ್ರಮ: ಶಿಕ್ಷಣ ಇಲಾಖೆ ನಿರ್ದೇಶಕಿ ಸುಮಂಗಲಾ ಅಮಾನತು

ಬಹುಕೋಟಿ ಇ ತ್ಯಾಜ್ಯ ಟೆಂಡರ್ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯ...