ಐಪಿಎಲ್ 2026ರ 11ನೇ ಪಂದ್ಯವು ಭಾನುವಾರ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಕ್ರೀಡಾಪ್ರೇಮಿಗಳನ್ನು ಪ್ರಚೋದಿಸಲು ಬದ್ಧ ವೈರಿಗಳೆಂದು ಬಿಂಬಿಸಲಾಗಿರುವ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವೆ ಪಂದ್ಯ ನಡೆಯಲಿದೆ. ಪಂದ್ಯವು ರಾತ್ರಿ 7.30ಕ್ಕೆ ಆರಂಭವಾಗಲಿದೆ.
ಪ್ರಸ್ತುತ ಸೀಸನ್‌ನಲ್ಲಿ ಆರ್‌ಸಿಬಿ ತನ್ನ ಮೊದಲ ಪಂದ್ಯವನ್ನು ಭರ್ಜರಿಯಾಗಿ ಗೆದ್ದಿದ್ದರೆ, ಸಿಎಸ್‌ಕೆ ಸೋಲುಂಡಿದ್ದು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ 8 ವಿಕೆಟ್‌ಗಳ ಸೋಲು ಕಂಡಿದ್ದ ರುತುರಾಜ್ ಗಾಯಕ್ವಾಡ್ ನೇತೃತ್ವದ ತಂಡವು, ಪಂಜಾಬ್ ಕಿಂಗ್ಸ್ ವಿರುದ್ಧದ 2ನೇ ಪಂದ್ಯದಲ್ಲೂ 5 ವಿಕೆಟ್‌ಗಳಿಂದ ಪರಾಭವಗೊಂಡಿತ್ತು. ಈಗ, ಆರ್‌ಸಿಬಿ ವಿರುದ್ಧ ಸೆಣೆಸಾಟಕ್ಕೆ ಸಿದ್ಧವಾಗಿದೆ. ಈ ಪಂದ್ಯ, ಸಿಎಸ್‌ಕೆಗೆ ತನ್ನ ಸೋಲಿನ ಸರಣಿಯನ್ನು ಮುರಿಯಲು ಅಗತ್ಯವಾಗಿದ್ದರೆ, ಆರ್‌ಸಿಬಿಗೆ ತನ್ನ ತವರು ನೆಲದಲ್ಲಿ ಗೆಲುವಿನ ಓಟವನ್ನು ಮುಂದುವರೆಸಲು ಮುಖ್ಯವಾಗಿದೆ.
ಐಪಿಎಲ್ ಇತಿಹಾಸದಲ್ಲಿ ಈ ಎರಡು ತಂಡಗಳು ಇದುವರೆಗೆ ಒಟ್ಟು 35 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ಚೆನ್ನೈ 21 ಬಾರಿ ಮತ್ತು ಬೆಂಗಳೂರು 13 ಬಾರಿ ಜಯಗಳಿಸಿವೆ. ಒಂದು ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿದೆ.
ಈ ಪಂದ್ಯದಲ್ಲಿ ಉಭಯ ತಂಡಗಳ ಕೆಲವು ಆಟಗಾರರು ವಿಶೇಷ ಗಮನ ಸೆಳೆಯಲಿದ್ದಾರೆ. ಸಿಎಸ್‌ಕೆ ಪರ ಯುವ ಆಟಗಾರ ಮತ್ತು ಭಾರತದ ಅಂಡರ್-19 ವಿಶ್ವಕಪ್ ವಿಜೇತ ನಾಯಕ ಆಯುಷ್ ಮ್ಹಾತ್ರೆ ಕಳೆದ ಪಂದ್ಯದಲ್ಲಿ 43 ಎಸೆತಗಳಲ್ಲಿ 73 ರನ್ ಸಿಡಿಸಿ ಮಿಂಚಿದ್ದರು. ಸಂಜು ಸ್ಯಾಮ್ಸನ್ ಮತ್ತು ರುತುರಾಜ್ ಗಾಯಕ್ವಾಡ್ ಅಂತಹ ಸ್ಟಾರ್ ಆಟಗಾರರು ಫಾರ್ಮ್ ಕಂಡುಕೊಳ್ಳಲು ಪರದಾಡುತ್ತಿರುವುದರಿಂದ, ಮ್ಹಾತ್ರೆ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.
ಇನ್ನು ಆರ್‌ಸಿಬಿ ಪರ ನ್ಯೂಜಿಲೆಂಡ್‌ನ ವೇಗಿ ಜೇಕಬ್ ಡಫಿ ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ಪಂದ್ಯದಲ್ಲಿ 22 ರನ್ ನೀಡಿ 3 ವಿಕೆಟ್ ಪಡೆಯುವ ಮೂಲಕ ಪಂದ್ಯಶ್ರೇಷ್ಠ ಪ್ರದರ್ಶನ ನೀಡಿದ್ದರು. ಸಿಎಸ್‌ಕೆ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಡಫಿ ಪ್ರಮುಖ ಪಾತ್ರ ವಹಿಸಲಿದ್ದಾರೆ.
ಈ ಲೇಖನ ಓದಿದ್ದೀರಾ?: ಬಂಗಾಳ ಚುನಾವಣೆ | ಪಶ್ಚಿಮ ರಾಜ್ಯದಲ್ಲಿ ಕಾಂಗ್ರೆಸ್‌ನ 50 ವರ್ಷಗಳ ವನವಾಸ!
ಕ್ರಿಕೆಟ್ ಪ್ರೇಮಿಗಳಲ್ಲಿ ಪಂದ್ಯಕ್ಕೆ ಮಳೆ ಅಡ್ಡಿಯಾಗುವುದೇ ಎಂಬ ಆತಂಕವೂ ಇದೆ. ಆದರೆ, ಬೆಂಗಳೂರಿನಲ್ಲಿ ಭಾನುವಾರ ಮಳೆಯಾಗುವ ನಿರೀಕ್ಷೆಯಿಲ್ಲ. ಪಂದ್ಯ ಆರಂಭವಾಗುವ ವೇಳೆಗೆ ನಗರದಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ತಾಪಮಾನವು ಸುಮಾರು 21° ಸೆಲ್ಸಿಯಸ್ ಆಸುಪಾಸಿನಲ್ಲಿರಲಿದೆ. ಆದರೆ, ಮಳೆ ಬೀಳುವುದಿಲ್ಲ ಎಂದು ಹವಾಮಾನ ಇಲಾಖೆಯ ಮಾಹಿತಿ ತಿಳಿಸಿದೆ.
ರಜತ್ ಪಾಟಿದಾರ್ ನೇತೃತ್ವದ ಆರ್‌ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್ ಮತ್ತು ಭುವನೇಶ್ವರ್ ಕುಮಾರ್ ಅವರಂತಹ ಅನುಭವಿಗಳಿದ್ದರೆ, ಸಿಎಸ್‌ಕೆ ತಂಡವು ರುತುರಾಜ್, ಸಂಜು ಸ್ಯಾಮ್ಸನ್ ಮತ್ತು ಶಿವಂ ದುಬೆ ಅವರ ಬ್ಯಾಟಿಂಗ್ ಬಲವನ್ನು ನಂಬಿಕೊಂಡಿದೆ.



