ಚುನಾವಣಾ ಆಯೋಗವು ಚುನಾವಣೆಗಳ ಸಮಗ್ರತೆಯನ್ನು ಕಾಪಾಡಿಕೊಳ್ಳುವ ಪ್ರಾಥಮಿಕ ಸಂಸ್ಥೆಯಾಗಿದೆ. ಚುನಾವಣಾ ಆಯೋಗವು ಸಂಪೂರ್ಣವಾಗಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ಚುನಾವಣೆಗಳನ್ನು ನಡೆಸುವವರು ಸ್ಪರ್ಧಿಸುವವರ ಮೇಲೆ ಅವಲಂಬಿತರಾಗಿದ್ದರೆ, ಪ್ರಕ್ರಿಯೆಯ ತಟಸ್ಥತೆಯನ್ನು ಖಚಿತಪಡಿಸಿಕೊಳ್ಳಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ ವಿ ನಾಗರತ್ನ ಹೇಳಿದ್ದಾರೆ.
ಶನಿವಾರ ಪಟನಾದ ಚಾಣಕ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ರಾಜೇಂದ್ರ ಪ್ರಸಾದ್ ಸ್ಮಾರಕ ಉಪನ್ಯಾಸ ನಡೆಸಿದ ನಾಗರತ್ನ ಅವರು ಮತದಾನದ ಮೇಲ್ವಿಚಾರಣೆ ಬಗ್ಗೆ ಕಳವಳ ವ್ಯಕ್ತಪಡಿಸಿದರು. “ಚುನಾವಣೆಗಳು ಕೇವಲ ಒಂದು ಘಟನೆಗಳಲ್ಲ. ರಾಜಕೀಯ ಅಧಿಕಾರವನ್ನು ರಚಿಸುವ ಕಾರ್ಯವಿಧಾನ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಮಹಿಳಾ ಉದ್ಯೋಗಿಗಳಿಂದ ಮುಟ್ಟಿನ ಪುರಾವೆ ಕೇಳಿದ ಹರಿಯಾಣ ವಿಶ್ವವಿದ್ಯಾನಿಲಯ; ಸುಪ್ರೀಂ ನೋಟಿಸ್
“ನಮ್ಮ ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಸಕಾಲಿಕವಾಗಿ ಚುನಾವಣೆಗಳು ನಡೆಯುತ್ತಿರುವುದರಿಂದ ಸರ್ಕಾರದಲ್ಲಿ ಸುಗಮ ಬದಲಾವಣೆಗಳಾಗುತ್ತಿದೆ. ಆ ಪ್ರಕ್ರಿಯೆಯ ಮೇಲಿನ ನಿಯಂತ್ರಣ ಎಂದರೆ ವಾಸ್ತವವಾಗಿ ರಾಜಕೀಯ ಸ್ಪರ್ಧೆಯ ನಿಯಂತ್ರಣ. ಇವುಗಳ ಪಾರದರ್ಶಕತೆ ಕಾಪಾಡುವುದು ಆಯೋಗದ ಹೊಣೆಗಾರಿಕೆ” ಎಂದು ತಿಳಿಸಿದರು.
ಹಾಗೆಯೇ, “ಸಂವಿಧಾನದ ಆಶಯಗಳು ಉಳಿಯಬೇಕಾದರೆ ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಗಳು ಸ್ವತಂತ್ರವಾಗಿರುವುದು ಅತಿ ಅಗತ್ಯ” ಎಂದು ಅಭಿಪ್ರಾಯಿಸಿದರು.
ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ವಿಧಾನಸಭೆ ಚುನಾವಣೆ ಈ ತಿಂಗಳಲ್ಲೇ ನಡೆಯಲಿದೆ. ಈಗಾಗಲೇ ಚುನಾವಣಾ ಆಯೋಗವು ಬಿಜೆಪಿಗಾಗಿ ಕೆಲಸ ಮಾಡುತ್ತಿದೆ ಎಂದು ಹಲವು ವಿಪಕ್ಷಗಳು ಆರೋಪಿಸುತ್ತಿದೆ. ಈ ಆರೋಪಗಳ ನಡುವೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ನೀಡಿರುವ ಹೇಳಿಕೆಗೂ ಮಹತ್ವವನ್ನು ಪಡೆದಿದೆ.




