ಕ್ರಿಕೆಟ್ ಪ್ರೇಮಿಗಳು ಉತ್ಸಾಹದಿಂದ ಕಾಯುತ್ತಿರುವ ಐಪಿಎಲ್-2026ರ ಫೈನಲ್ ಪಂದ್ಯ ಇಂದು (ಮೇ 31) ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣ ನಡೆಯಲಿದೆ. ಆರ್ಸಿಬಿ ಮತ್ತು ಜಿಟಿ ನಡುವೆ ಅಂತಿಮ ಸೆಣೆಸಾಟ ನಡೆಯುತ್ತಿದೆ. ಆದರೆ, ಇಂದಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದ್ದು, ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಒಂದು ವೇಳೆ, ಅಹಮದಾಬಾದ್ನಲ್ಲಿ ಮಳೆ ಆರ್ಭಟ ಜೋರಾದರೆ ಪಂದ್ಯದ ಭವಿಷ್ಯ ಏನಾಗಲಿದೆ ಪ್ರಶ್ನೆ ಕಾಡುತ್ತಿದೆ.
ಅಹಮದಾಬಾದ್ನಲ್ಲಿ ಇಂದು ಸಂಜೆ ಮತ್ತು ರಾತ್ರಿಯ ಅವಧಿಯಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಿಗದಿಯಂತೆ ಪಂದ್ಯವು ರಾತ್ರಿ 7.30 ಕ್ಕೆ ಆರಂಭವಾಗಬೇಕಿದೆ. ಆದರೆ, ಮಳೆಯ ಮುನ್ಸೂಚನೆ ಇರುವುದರಿಂದ ಟಾಸ್ ಮತ್ತು ಪಂದ್ಯದ ಆರಂಭ ವಿಳಂಬವಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.
ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ ಪಂದ್ಯವನ್ನು ಪೂರ್ಣಗೊಳಿಸಲು ಐಪಿಎಲ್ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿದೆ.
- ಹೆಚ್ಚುವರಿ 120 ನಿಮಿಷಗಳ ಸಮಯ (ಓವರ್ ಕಡಿತ ಇರುವುದಿಲ್ಲ)
ಒಂದು ವೇಳೆ ಮಳೆಯಿಂದಾಗಿ ಪಂದ್ಯದ ಆರಂಭ ವಿಳಂಬವಾದರೆ, ಪಂದ್ಯವನ್ನು ಪೂರ್ಣಗೊಳಿಸಲು ಹೆಚ್ಚುವರಿ 120 ನಿಮಿಷಗಳನ್ನು (2 ಗಂಟೆ) ತೆಗೆದುಕೊಳ್ಳಲಾಗುತ್ತದೆ. ಅದರಂತೆ ರಾತ್ರಿ 9.40 ರೊಳಗೆ ಪಂದ್ಯ ಆರಂಭವಾದರೆ ಉಭಯ ತಂಡಗಳಿಗೆ ಯಾವುದೇ ಓವರ್ ಕಡಿತ ಇರುವುದಿಲ್ಲ. ಎರಡೂ ತಂಡಗಳು ಪೂರ್ಣ 20 ಓವರ್ಗಳನ್ನು ಆಡಲಿವೆ.
- ರಾತ್ರಿ 9.40ರ ನಂತರ ಓವರ್ಗಳ ಕಡಿತ
ಅಕಸ್ಮಾತ್, ಮಳೆ ಮುಂದುವರಿದು ರಾತ್ರಿ 9.40ರ ಬಳಿಕ ಪಂದ್ಯ ಆರಂಭವಾದರೆ ಓವರ್ಗಳ ಸಂಖ್ಯೆಯನ್ನು ಕಡಿತಗೊಳಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ‘ಡಕ್ವರ್ತ್ ಲೂಯಿಸ್’ (DLS) ನಿಯಮದ ಪ್ರಕಾರ ಫಲಿತಾಂಶವನ್ನು ನಿರ್ಧರಿಸಬೇಕಾದರೆ, ಉಭಯ ತಂಡಗಳು ಕನಿಷ್ಠ ತಲಾ 5 ಓವರ್ಗಳನ್ನಾದರೂ ಕಡ್ಡಾಯವಾಗಿ ಆಡಿರಬೇಕು.
- ಮಧ್ಯರಾತ್ರಿ 1.30 ರವರೆಗೆ ಕಾಯುವಿಕೆ (5 ಓವರ್ಗಳ ಪಂದ್ಯ)
ಪಂದ್ಯವನ್ನು ಯಾವುದೇ ಲೀಗ್ ಹಂತದ ಪಂದ್ಯಗಳಿಗಿಂತ ಹೆಚ್ಚು ಸಮಯ ಕಾಯಲು ಫೈನಲ್ನಲ್ಲಿ ಅವಕಾಶವಿರುತ್ತದೆ. ಅದರಂತೆ, ಸೂಪರ್ ಓವರ್ ಅಥವಾ ಕನಿಷ್ಠ 5 ಓವರ್ಗಳ ಪಂದ್ಯವನ್ನು ಆಯೋಜಿಸಲು ಮಧ್ಯರಾತ್ರಿ 1.30 ರವರೆಗೆ ಸಮಯಾವಕಾಶ ಇರಲಿದೆ.
- ಮೀಸಲು ದಿನ
ಒಂದು ವೇಳೆ, ಮಧ್ಯರಾತ್ರಿ 1.30 ರೊಳಗೂ ಕನಿಷ್ಠ 5 ಓವರ್ಗಳ ಪಂದ್ಯವನ್ನು ನಡೆಸಲು ಸಾಧ್ಯವಾಗದಿದ್ದರೆ, ಪಂದ್ಯವನ್ನು ಸಂಪೂರ್ಣವಾಗಿ ರದ್ದುಗೊಳಿಸಿ ಸೋಮವಾರವನ್ನು ‘ಮೀಸಲು ದಿನ’ ಎಂದು ಘೋಷಿಸಲಾಗುತ್ತದೆ. ಸೋಮವಾರದಂದು ಫೈನಲ್ ಪಂದ್ಯವನ್ನು ಮರು ಆಯೋಜಿಸಲಾಗುವುದು.
ಈ ಲೇಖನ ಓದಿದ್ದೀರಾ?: ವರದಕ್ಷಿಣೆ ಎಂಬ ಬಲಿಪೀಠದಿಂದ ಹೆಣ್ಣುಮಕ್ಕಳ ರಕ್ಷಣೆ ಯಾವಾಗ?
ಆದಾಗ್ಯೂ, ದುರದೃಷ್ಟವಶಾತ್ ಮಳೆಯ ಆರ್ಭಟ ಮುಂದುವರಿದು, ಮೀಸಲು ದಿನದಂದು (ಸೋಮವಾರ) ಕೂಡ ಕನಿಷ್ಠ 5 ಓವರ್ಗಳ ಪಂದ್ಯವನ್ನು ನಡೆಸಲು ಸಾಧ್ಯವಾಗದಿದ್ದರೆ ಫೈನಲ್ ಪಂದ್ಯವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಲೀಗ್ ಹಂತದ 70 ಪಂದ್ಯಗಳ ಮುಕ್ತಾಯದ ನಂತರ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗುತ್ತದೆ.
ಪ್ರಸ್ತುತ, ಐಪಿಎಲ್ ಅಂಕ ಪಟ್ಟಿಯಲ್ಲಿ ಆರ್ಸಿಬಿ ತಂಡ ಮೊದಲ ಸ್ಥಾನದಲ್ಲಿದೆ. ಗುಜರಾತ್ ಟೈಟಾನ್ಸ್ ತಂಡ ದ್ವಿತೀಯ ಸ್ಥಾನದಲ್ಲಿದೆ. ಹಾಗಾಗಿ, ಮಳೆಯ ಕಾರಣದಿಂದಾಗಿ ಮೀಸಲು ದಿನದಲ್ಲೂ ಪಂದ್ಯ ರದ್ದಾದರೆ, ಅಂಕ ಪಟ್ಟಿಯ ನಿಯಮದನ್ವಯ ಆರ್ಸಿಬಿ ತಂಡವನ್ನು ಅಧಿಕೃತವಾಗಿ ಈ ಬಾರಿಯ ‘ಐಪಿಎಲ್ ಚಾಂಪಿಯನ್ಸ್’ ಎಂದು ಘೋಷಿಸಲಾಗುತ್ತದೆ.



