ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯ ಬಳಿಕ ನಡೆಯುತ್ತಿರುವ ರಾಜಕೀಯ ಹಿಂಸಾಚಾರಗಳು ತಾರಕಕ್ಕೇರಿವೆ. ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಮೇಲಿನ ಹಲ್ಲೆಯ ಘಟನೆ ಮಾಸುವ ಮುನ್ನವೇ, ಹಿರಿಯ ಟಿಎಂಸಿ ನಾಯಕ ಹಾಗೂ ಶ್ರೀರಾಂಪುರ ಲೋಕಸಭಾ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರ ಮೇಲೆ ಈಂಧೂ (ಮೇ 31) ಹೂಗ್ಲಿ ಜಿಲ್ಲೆಯಲ್ಲಿ ಹಲ್ಲೆ ನಡೆದಿದೆ. “ನನ್ನ ತಲೆಗೆ ಡ್ಯೂಸ್ ಬಾಲ್ನಿಂದ (ಕ್ರಿಕೆಟ್ ಲೆದರ್ ಚೆಂಡು) ಹೊಡೆದಿದ್ದಾರೆ,” ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಚುನಾವಣೋತ್ತರ ಹಿಂಸಾಚಾರದ ಹಿನ್ನೆಲೆಯಲ್ಲಿ ಟಿಎಂಸಿ ಕಾರ್ಯಕರ್ತರ ಬಂಧನವನ್ನು ವಿರೋಧಿಸಿ ಹೂಗ್ಲಿ ಜಿಲ್ಲೆಯ ಚಂಡಿತಾಲ ಪೊಲೀಸ್ ಠಾಣೆಗೆ ಮನವಿ ಪತ್ರ ಸಲ್ಲಿಸಲು ಕಲ್ಯಾಣ್ ಬ್ಯಾನರ್ಜಿ ತೆರಳುತ್ತಿದ್ದರು. ಈ ವೇಳೆ ಪೊಲೀಸ್ ಠಾಣೆಯ ಹೊರಗೆ ಜಮಾಯಿಸಿದ್ದ ಪ್ರತಿಭಟನಾಕಾರರು ಟಿಎಂಸಿ ನಿಯೋಗಕ್ಕೆ ಕಪ್ಪು ಬಾವುಟ ಪ್ರದರ್ಶಿಸಿ, ‘ಕಳ್ಳ, ಕಳ್ಳ’ ಎಂದು ಘೋಷಣೆ ಕೂಗಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಸಂಸದರ ಮೇಲೆ ಹಲ್ಲೆ ನಡೆಸಲಾಗಿದೆ.
“ನಾನು ಒಂಟಿಯಾಗಿ ಬರುತ್ತಿದ್ದೆ, ನನ್ನ ಜೊತೆ ಯಾರೂ ಇರಲಿಲ್ಲ. ಬಿಜೆಪಿ ಬೆಂಬಲಿಗರು ನಿಂದನಾತ್ಮಕ ಪದಗಳನ್ನು ಬಳಸಿ ನನ್ನ ತಲೆಗೆ ಡ್ಯೂಸ್ ಬಾಲ್ನಿಂದ ಹೊಡೆದರು. ನನ್ನ ತಲೆಯಿಂದ ರಕ್ತ ಸುರಿಯುತ್ತಿದೆ. ಇದೆಲ್ಲವೂ ಪೊಲೀಸರ ಎದುರೇ ನಡೆದಿದೆ. ಸಂಸದರನ್ನು ಈ ರೀತಿ ಗುರಿಯಾಗಿಸುವುದು ಸರಿಯೇ ಎಂಬುದನ್ನು ಜನರೇ ತೀರ್ಮಾನಿಸಬೇಕು,” ಎಂದು ರಕ್ತಸಿಕ್ತ ಹಿಂಭಾಗದ ತಲೆಗೆ ಒದ್ದೆ ಬಟ್ಟೆ ಒತ್ತಿ ಹಿಡಿದುಕೊಂಡಿದ್ದ ಕಲ್ಯಾಣ್ ಬ್ಯಾನರ್ಜಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಇದನ್ನು ಓದಿದ್ದೀರಾ? ಯಾರಿಗೆ ಕೊಕ್, ಯಾರಿಗೆ ಅವಕಾಶ; ನೂತನ ಸಂಪುಟದಲ್ಲಿ ಶುರುವಾಗಲಿದೆಯೆ ಮತ್ತಷ್ಟು ಪೀಕಲಾಟ?
ಘಟನೆಯ ನಂತರ ಪೊಲೀಸರ ನಿಷ್ಕ್ರಿಯತೆಯನ್ನು ಖಂಡಿಸಿ ಠಾಣೆಯೆದುರೇ ಅವರು ಧರಣಿ ಕುಳಿತರು. ಟಿಎಂಸಿ ನಾಯಕರ ಮೇಲಿನ ಈ ‘ಬಿಜೆಪಿ ಪ್ರಾಯೋಜಿತ’ ದಾಳಿಗಳ ವಿರುದ್ಧ ನಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದು ಅವರು ಎಚ್ಚರಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಮತ್ತು ಮುಂದಿನ ಅಹಿತಕರ ಘಟನೆಗಳನ್ನು ತಪ್ಪಿಸಲು ಭಾರಿ ಸಂಖ್ಯೆಯಲ್ಲಿ ಸ್ಥಳೀಯ ಪೊಲೀಸರು ಹಾಗೂ ಕೇಂದ್ರ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
ಈ ಘಟನೆಗೂ ಕೇವಲ ಒಂದು ದಿನದ ಮೊದಲು (ಮೇ 30), ದಕ್ಷಿಣ 24 ಪರಗಣ ಜಿಲ್ಲೆಯ ಸೋನಾರ್ಪುರದಲ್ಲಿ ಚುನಾವಣೋತ್ತರ ಹಿಂಸಾಚಾರದಿಂದ ಸಂತ್ರಸ್ತರಾದ ಟಿಎಂಸಿ ಕಾರ್ಯಕರ್ತರ ಕುಟುಂಬಗಳನ್ನು ಭೇಟಿಯಾಗಲು ತೆರಳಿದ್ದ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಅವರ ಮೇಲೂ ಹಲ್ಲೆ ನಡೆದಿತ್ತು. ಪ್ರತಿಭಟನಾಕಾರರ ಗುಂಪು ಅವರ ಕಾರನ್ನು ಸುತ್ತುವರೆದು ಮೊಟ್ಟೆ, ಕಲ್ಲು ಹಾಗೂ ಚಪ್ಪಲಿಗಳನ್ನು ಎಸೆದಿತ್ತು. ಅಲ್ಲದೆ, ಗುಂಪಿನಲ್ಲಿದ್ದ ಕೆಲವರು ಅವರನ್ನು ತಳ್ಳಿ, ಕಪಾಳಮೋಕ್ಷ ಮಾಡಿದ್ದರು ಎನ್ನಲಾಗಿದೆ. ಈ ಎರಡೂ ಘಟನೆಗಳಿಗೆ ಬಿಜೆಪಿ ಕುಮ್ಮಕ್ಕೇ ಕಾರಣ ಎಂದು ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ವಿರುದ್ಧದ ಟಿಎಂಸಿ ನಾಯಕರ ಆರೋಪಗಳನ್ನು ರಾಜ್ಯ ಬಿಜೆಪಿ ಸಾರಾಸಗಟಾಗಿ ತಳ್ಳಿಹಾಕಿದೆ. ಚುನಾವಣೋತ್ತರ ಹಿಂಸಾಚಾರಗಳಿಂದ ಬೇಸತ್ತಿರುವ ಸ್ಥಳೀಯ ನಿವಾಸಿಗಳು ಟಿಎಂಸಿ ನಾಯಕರ ವಿರುದ್ಧ ತಮ್ಮ ಆಕ್ರೋಶವನ್ನು ಈ ಮೂಲಕ ಹೊರಹಾಕುತ್ತಿದ್ದಾರೆಯೇ ಹೊರತು, ಇದರಲ್ಲಿ ಪಕ್ಷದ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿರುವ ಬಿಜೆಪಿ ನಾಯಕರು, ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.




