ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯ ನಿಯಮಗಳಲ್ಲಿ ಮಹತ್ತರ ಬದಲಾವಣೆ ತರುವ ಅಗತ್ಯವಿದೆ ಎಂದು ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪ್ರತಿಪಾದಿಸಿದ್ದಾರೆ. ಮುಖ್ಯವಾಗಿ ‘ಇಂಪ್ಯಾಕ್ಟ್ ಪ್ಲೇಯರ್’ ನಿಯಮವನ್ನು ಕೈಬಿಡಬೇಕು ಮತ್ತು ಬೌಲರ್ಗಳಿಗೆ ತಲಾ 5 ಓವರ್ಗಳನ್ನು ಎಸೆಯಲು ಅವಕಾಶ ನೀಡಬೇಕು ಎಂದು ಅವರು ಪ್ರಮುಖ ಸಲಹೆ ನೀಡಿದ್ದಾರೆ.
ಇಎಸ್ಪಿಎನ್ ಕ್ರಿಕ್ಇನ್ಫೊ (ESPNcricinfo) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಟಿ20 ಮಾದರಿಯಲ್ಲಿ ಈ ನಿಯಮವು ಬ್ಯಾಟರ್ಗಳ ಪರವಾಗಿ ಅತಿಯಾಗಿ ವಾಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
2023ರ ಐಪಿಎಲ್ ಋತುವಿನಲ್ಲಿ ಪರಿಚಯಿಸಲಾದ ‘ಇಂಪ್ಯಾಕ್ಟ್ ಪ್ಲೇಯರ್’ ನಿಯಮದಿಂದಾಗಿ ಆಡುವ ಹನ್ನೊಂದರ ಬಳಗಕ್ಕೆ ಪಂದ್ಯದ ಯಾವುದೇ ಹಂತದಲ್ಲಿ ಐವರು ಬದಲಿ ಆಟಗಾರರ ಪೈಕಿ ಓರ್ವನನ್ನು ಬದಲಿಸುವ ಅವಕಾಶವನ್ನು ತಂಡಗಳಿಗೆ ನೀಡಲಾಗಿದೆ. ಆದರೆ ಇದು ಬೌಲರ್ಗಳ ಪಾಲಿಗೆ ಮಾರಕವಾಗಿದೆ ಎಂಬುದು ಸಚಿನ್ ಅಭಿಪ್ರಾಯ. “ಟಿ20 ಮಾದರಿಯಲ್ಲಿ ಕೇವಲ 20 ಓವರ್ಗಳ ಪಂದ್ಯವಿದ್ದಾಗ, ಬ್ಯಾಟಿಂಗ್ ಕ್ರಮಾಂಕಕ್ಕೆ ಮತ್ತೋರ್ವ ಬ್ಯಾಟರ್ ಅನ್ನು ಸೇರಿಸುವುದು ಸರಿಯಲ್ಲ. ಈಗಾಗಲೇ ಬೌಲರ್ಗಳು ತೀವ್ರ ಸವಾಲನ್ನು ಎದುರಿಸುತ್ತಿದ್ದಾರೆ, ಈ ನಿಯಮವು ಪಂದ್ಯದ ಸಮತೋಲನವನ್ನು ಕದಡುತ್ತಿದೆ. ವೈಯಕ್ತಿಕವಾಗಿ ಹೇಳುವುದಾದರೆ, ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಕೈಬಿಡಬೇಕು” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಜಮ್ಮು-ಕಾಶ್ಮೀರ ರಣಜಿ ಕಿರೀಟ, ಪಾಕ್ ಕ್ರಿಕೆಟ್ ಸಂಬಂಧ; ಬಿಸಿಸಿಐ ಮಿಥುನ್ ಮನದಾಳದ ಮಾತುಗಳು
ಬ್ಯಾಟರ್ಗಳಿಗೆ ಹೆಚ್ಚು ಅನುಕೂಲಕರವಾದ ಪಿಚ್ಗಳಲ್ಲಿ ತಂಡಗಳು ಬೃಹತ್ ಮೊತ್ತ ಕಲೆಹಾಕುತ್ತಿರುವುದನ್ನು ಉಲ್ಲೇಖಿಸಿದ ಅವರು, ಈ ನಿಯಮವು ಬ್ಯಾಟರ್ಗಳು ಮತ್ತು ಬೌಲರ್ಗಳ ನಡುವಿನ ಅಂತರವನ್ನು ಇನ್ನಷ್ಟು ಹೆಚ್ಚಿಸಿದೆ ಎಂದಿದ್ದಾರೆ. ಭಾರತ ತಂಡದ ನಾಯಕ ಶುಭಮನ್ ಗಿಲ್ ಹಾಗೂ ಮಾಜಿ ನಾಯಕ ರೋಹಿತ್ ಶರ್ಮಾ ಕೂಡ ಈ ಹಿಂದೆ ಆಲ್ರೌಂಡರ್ಗಳ ಪಾತ್ರ ಹಾಗೂ ಪಂದ್ಯದ ಸಮತೋಲನದ ಮೇಲೆ ಈ ನಿಯಮ ಬೀರಿದ ಪರಿಣಾಮಗಳ ಕುರಿತು ಪ್ರಶ್ನಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಈ ಅಸಮತೋಲನವನ್ನು ಸರಿಪಡಿಸುವ ನಿಟ್ಟಿನಲ್ಲಿ ಪವರ್ಪ್ಲೇ ನಿಯಮಗಳಿಗೂ ತಿದ್ದುಪಡಿ ತರುವಂತೆ ಸಚಿನ್ ಹೊಸದೊಂದು ಪ್ರಸ್ತಾಪ ಮುಂದಿಟ್ಟಿದ್ದಾರೆ. “ಹಾಲಿ ಇರುವ ಮೊದಲ 6 ಓವರ್ಗಳ ಪವರ್ಪ್ಲೇ ನಿಯಮದ ಬದಲಾಗಿ, ಮೊದಲ 4 ಓವರ್ಗಳನ್ನು ಮಾತ್ರ ಬ್ಯಾಟರ್ಗಳ ಪವರ್ಪ್ಲೇ ಆಗಿ ಸೀಮಿತಗೊಳಿಸಬೇಕು. ಈ ವೇಳೆ 30 ಗಜಗಳ ವೃತ್ತದಿಂದ ಹೊರಗೆ ಇಬ್ಬರು ಫೀಲ್ಡರ್ಗಳಿಗೆ ಮಾತ್ರ ಅವಕಾಶವಿರಬೇಕು. ಉಳಿದೆರಡು ಓವರ್ಗಳನ್ನು ಫೀಲ್ಡಿಂಗ್ ನಾಯಕ ತನಗೆ ಬೇಕಾದಾಗ ಬಳಸಿಕೊಳ್ಳುವಂತೆ ಅವಕಾಶ ನೀಡಬೇಕು. ಆ ಸತತ ಎರಡು ಓವರ್ಗಳಲ್ಲಿ ವೃತ್ತದ ಹೊರಗೆ ಹೆಚ್ಚುವರಿಯಾಗಿ ಮತ್ತೋರ್ವ ಫೀಲ್ಡರ್ ನಿಲ್ಲಿಸಲು ಅವಕಾಶ ನೀಡಿದರೆ, ಫೀಲ್ಡಿಂಗ್ ತಂಡಕ್ಕೆ ಪಂದ್ಯದ ಮೇಲೆ ಉತ್ತಮ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆ” ಎಂದು ಅವರು ವಿವರಿಸಿದ್ದಾರೆ.
ಇದರ ಜೊತೆಗೆ, ಬೌಲರ್ಗಳ ಕೋಟಾವನ್ನು ಹೆಚ್ಚಿಸುವ ಬಗ್ಗೆಯೂ ಸಚಿನ್ ಮಹತ್ವದ ಸಲಹೆ ನೀಡಿದ್ದಾರೆ. ಪ್ರಸ್ತುತ ಟಿ20 ಪಂದ್ಯದಲ್ಲಿ ಒಬ್ಬ ಬೌಲರ್ ಗರಿಷ್ಠ 4 ಓವರ್ಗಳನ್ನು ಮಾತ್ರ ಎಸೆಯಲು ಅವಕಾಶವಿದೆ. ಇದನ್ನು 5 ಓವರ್ಗಳಿಗೆ ಹೆಚ್ಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. “ಒಬ್ಬ ಬೌಲರ್ಗೆ 5 ಓವರ್ ಎಸೆಯಲು ಅವಕಾಶ ನೀಡಬೇಕು. ಏಕೆಂದರೆ, ತಂಡದ ಅತ್ಯುತ್ತಮ ಬೌಲರ್ ಆ ಐದನೇ ಓವರ್ ಎಸೆಯುವುದು ಖಚಿತ. ಆ ತಂಡದ ಅತ್ಯುತ್ತಮ ಬ್ಯಾಟರ್ಗಳು ಪೂರ್ಣ 20 ಓವರ್ಗಳ ಕಾಲ ಬ್ಯಾಟಿಂಗ್ ಮಾಡುವಾಗ, ತಂಡದ ಅತ್ಯುತ್ತಮ ಬೌಲರ್ಗೆ 5 ಓವರ್ ಎಸೆಯುವ ಅವಕಾಶವೇಕೆ ಇರಬಾರದು?” ಎಂದು ಮಾಸ್ಟರ್ ಬ್ಲಾಸ್ಟರ್ ಪ್ರಶ್ನಿಸಿದ್ದಾರೆ.




