ಹಾಸನ ಮಣ್ಣಿನ ಹೆಣ್ಣು ಬೇರುಗಳು | ಮಾತಿಗೊಂದು ಗಾದೆ ಹೊಸೆಯುವ- ಪುಟ್ಟತಾಯಕ್ಕ

Date:

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…

”ಊರ ಮುಂದ್ಲ ಬಾವಿಗೆ ಬಿದ್ರೂ ಚಿಂತಿಲ್ಲ. ಊರವರ ಬಾಯಿಗೆ ಬೀಳಬಾರದು” ಇದು ಪುಟ್ಟತಾಯಕ್ಕ ಪದೇ ಪದೇ ಹೇಳುವ ಗಾದೆ ಮಾತು. ಕಷ್ಟವಾದರೂ ಸರಿ, ಎಚ್ಚರದ ಹೆಜ್ಜೆಗಳನ್ನು ಇಡುತ್ತಾ ಜೀವನ ನಡೆಸಬೇಕು ಎಂಬ ಈ ಗಾದೆ ಮಾತಿನಂತೆಯೇ ಬದುಕುತ್ತಿರುವ, ಮಾತಿಗೊಂದು ಗಾದೆ ಹೇಳುವ ಕೃಷಿ ಮಹಿಳೆ- ಪುಟ್ಟತಾಯಕ್ಕ ಬೇಲೂರಿನ ಸಮೀಪದ ಸಾಣೇನಹಳ್ಳಿಯವರು. ಇವರ ತವರು ಸಂಪಿಗೆಮರದ ಕೊಪ್ಪಲು. ತಾಯಿ ಸಿದ್ದಮ್ಮ, ತಂದೆ ಗೊರಹರಳೆಗೌಡ- ಇವರ ಪುತ್ರಿಯಾಗಿ ಜನಿಸಿದವರು ಪುಟ್ಟತಾಯಕ್ಕ. ಬಾಲ್ಯದಲ್ಲಿ ಶಿಕ್ಷಕಿ ಆಗುವ ಕನಸು ಕಂಡವರು. ಆದರೆ ಚಿಕ್ಕ ವಯಸ್ಸಿಗೆ ತಾಯಿ ತೀರಿಹೋದ ಕಾರಣ ಅವರ ಕನಸು ನನಸಾಗಲಿಲ್ಲ.

- Advertisement -

ಇದನ್ನು ಓದಿದ್ದೀರಾ?: ಸ್ತ್ರೀ ಲೋಕದ ಅಸ್ಮಿತೆ- ಪದ್ಮಾ ಶ್ರೀರಾಮ್

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿಕ್ಷಣ ಮಾರಾಟ ಮಾಡಿದ ಶಾಲೆಗಳೇ ಈಗ ಮಾರಾಟಕ್ಕೆ!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19 ಆಕ್ರಮಣದ ನಂತರದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಭಾರೀ ಕುಸಿತ, ಪ್ರತಿಷ್ಠಿತ ಶಾಲೆಗಳ ಜೊತೆಗೆ ಪೈಪೋಟಿ, ಮೂಲಭೂತ ಸೌಕರ್ಯಕ್ಕೆ ತಕ್ಕಂತೆ ಲಾಭದ...

ಬಿಗಿದ ತುಟಿಯ ದೃಶ್ಯಭಾಷೆ: ನಿರ್ಬಂಧಗಳ ನೆರಳಲ್ಲಿ ರೂಪಕಗಳ ಪ್ರತಿರೋಧ

ಸಿನೆಮಾವನ್ನು ನಿಯಂತ್ರಿಸಲು ಅಧಿಕಾರಶಾಹಿ ಸದಾ ಹೊಸ ಕಟ್ಟುಪಾಡುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ; ಆದರೆ ಕಲೆಗೆ ಇರುವ ಶಕ್ತಿಯೆಂದರೆ, ಅದು ನಿರ್ಬಂಧಗಳ ಗೋಡೆಗಳನ್ನೇ ಹೊಸ ನೋಟದ ಕಿಟಕಿಗಳನ್ನಾಗಿಸಿಕೊಳ್ಳುತ್ತದೆ. ನೇರ ಮಾತನ್ನು ಕಸಿದುಕೊಂಡಷ್ಟೂ ರೂಪಕಗಳ ನಡಿಗೆ ಬಿಗಿಯಾಗುತ್ತದೆ,...

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಬೆಳೆಯುತ್ತಾ ಮನೆ ತುಂಬಾ ಜನ, ಕೈ ತುಂಬಾ ಕೆಲಸ ಎನ್ನುವಂತೆ ಬೆಳಗ್ಗೆ ಎದ್ದರೆ ಮುಗಿಯಿತು. ರಾಗಿ ಬೀಸು, ಭತ್ತ ಕುಟ್ಟು, ರೊಟ್ಟಿ ತಟ್ಟು, ಹುಣಸೆ ಹಿಂಡಿ ಹುಳಿ ಬೇಸು, ಅಂಬಲಿ ಮಾಡು, ಮುಯ್ಯಾಳು ದನ ಕರ ಕೋಳಿ ಕುರಿ ಮೇಸು… ಇವೆಲ್ಲಾ ಮನಸಿಗೆ ಇಷ್ಟವೋ ಕಷ್ಟವೋ ಒಟ್ಟಲ್ಲಿ ಬದುಕಿಗೆ ದಾರಿಯಾದವು. ಈ ಎಲ್ಲಾ ಕೆಲಸಗಳನ್ನು ಮಾಡುವಾಗ ಶ್ರಮದ ಏಕತಾನತೆ ಕಳೆಯಲು, ಮನಸಿನೊಳಗಿನ ದುಗುಡ ಮೀರಲು, ಪುಟ್ಟತಾಯಕ್ಕ ತಮ್ಮಷ್ಟಕ್ಕೇ ಹಾಡು ಹೇಳುವುದನ್ನು ಅಭ್ಯಾಸ ಮಾಡಿಕೊಂಡರು. ಎದುರಿಗೆ ಬಂದ ಆತ್ಮೀಯರೊಡನೆ ಮಾತಾಡುವಾಗ ಹಳೆಯ ಗಾದೆಗಳನ್ನು ಹೇಳತೊಡಗಿದರು. ಕ್ರಮೇಣ ಇದರಿಂದ ಖುಷಿ ಸಿಗಲಾರಂಭಿಸಿದಾಗ, ತಾವೇ ಹೊಸಹೊಸ ಗಾದೆ ಹೊಸೆದು ಹೇಳತೊಡಗಿದರು. ಗೆಳತಿಯರೂ ಖುಷಿ ಮತ್ತು ಅಚ್ಚರಿಯಿಂದ ‘ಎಲೆಲಾ…’ ಎನ್ನಲಾರಂಭಿಸಿದರು.

ಇದನ್ನು ಓದಿದ್ದೀರಾ?: ಜಾನಪದ ಕ್ಷೇತ್ರದ ಅನನ್ಯ ಸಾಧಕಿ- ಡಾ. ವೈ.ಸಿ.ಭಾನುಮತಿ

ಪುಟ್ಟತಾಯಮ್ಮ ಅವರಿಗೆ ಹದಿನೈದನೇ ವಯಸ್ಸಿಗೆ ಸಾಣೆನಹಳ್ಳಿ ನಿಂಗೆಗೌಡರ ಜೊತೆ ವಿವಾಹವಾಗುತ್ತದೆ. ಅವಿಭಕ್ತ ಕುಟುಂಬ, ಬದುಕು ಏನು ಎಂತು ಎಂದು ತಿಳಿಯದ ಕಾಲ ಅದು. ಕೆಲಸ ಒಂದು ಗೊತ್ತಾದ್ರೆ ಇನ್ನೊಂದು ಗೊತ್ತಾಗುತ್ತಿರಲಿಲ್ಲ. ಒಳ ಹೊರಗಿನ ಬಹಳ ಕಷ್ಟದ ದಿನಗಳು. ಪ್ರತಿ ದಿನ ಏನಾದರೂ ಒಂದು ಗಲಾಟೆ, ಜಗಳ ಮನೆಯಲ್ಲಿ. ನೆಮ್ಮದಿಯೇ ಇಲ್ಲ. ಇದರಲ್ಲೇ ಇಪ್ಪತ್ತೆಂಟು ವರ್ಷ ಕಳೆದು ನಂತರ ಪತಿಯ ಕುಟುಂಬದಿಂದ ಹೊರ ಬರುತ್ತಾರೆ. ಆಗಂತು ಹೊಸ ಸಮಸ್ಯೆಗಳು. ಇರಲು ಮನೆ ಇಲ್ಲ. ಮಕ್ಕಳು ಚಿಕ್ಕವರು. ಸಣ್ಣದೊಂದು ಗುಡಿಸಲು ಕಟ್ಟಿಕೊಂಡು ಜೀವನ ಆರಂಭಿಸುತ್ತಾರೆ. ಮುಯ್ಯಾಳು ಮಾಡುವುದು ಅಭ್ಯಾಸವಾಗಿತ್ತು. ಸುಮಾರು ಮೂವತ್ತೈದು ವರ್ಷ ಮುಯ್ಯಾಳು ಮಾಡಿ ಕೃಷಿ ಮಾಡಿದರು. ಭತ್ತ ರಾಗಿ ಜೋಳ ತರಕಾರಿ- ಇವರು ಸಾವಯವ ಕೃಷಿಯಲ್ಲಿ ಬೆಳೆದ ಬೆಳೆಗಳು. ಕೆರೆಯಲ್ಲಿ ನೀರಿಲ್ಲದ ಹೊತ್ತಿನಲ್ಲಿಯೂ, ಧೈರ್ಯಗೆಡದೇ ದೂರದ ಬಾವಿಯಿಂದ ನೀರು ತಂದು ಕೆಲಸ ಮಾಡುತ್ತಾ ಮಕ್ಕಳನ್ನು ಸಾಕಿ ಓದಿಸುತ್ತಾ ಜೀವನ ನಡೆಸಿದರು.

ಇದನ್ನು ಓದಿದ್ದೀರಾ?: ವಿಶೇಷ ಚೇತನರ ಆಶಾಕಿರಣ- ವಿಜಯಕುಮಾರಿ ಮುರಾರಪ್ಪ

ಆದರೆ ಕಷ್ಟ ಎಂದು ತಮ್ಮ ಹವ್ಯಾಸವನ್ನು ಕೈ ಬಿಡದೆ, ಹಬ್ಬ, ಸುಗ್ಗಿ ಮದುವೆ ಮನೆ ಕೆಲಸ ಮಾಡುವಾಗ ಜಾನಪದ ಗೀತೆ, ಸೋಬಾನೆ ಹಾಡುವುದನ್ನು, ಒಗಟು, ಗಾದೆ ಹೇಳುವುದನ್ನು ಬಿಡಲಿಲ್ಲ. ಹಾಸನ ಆಕಾಶವಾಣಿಯಲ್ಲಿ ಮತ್ತೆ ಮತ್ತೆ ಜಾನಪದ ಗೀತೆ ಮತ್ತು ಸೋಬಾನೇ ಹಾಡುಗಳನ್ನು ಹಾಡಿ ಶೋತೃಗಳ ಮನಗೆದ್ದರು. ಊರಲ್ಲಿ ಮಹಿಳಾ ಸಮಾಜದ ಸದಸ್ಯರಾಗಿ ಗ್ರಾಮ ಪಂಚಾಯತಿ ಸದಸ್ಯರಾಗಿ ಸೇವೆ ಸಲ್ಲಿಸಿದರು. ಅವರಿವರಿಂದ ಬಟ್ಟೆ ಹೊಲಿಯುವುದನ್ನು ಕಲಿತು, ಮೊದಲು ತಮ್ಮ ಹಿರಿ ಮಗಳಿಗೆ ಕಲಿಸಿ, ನಂತರ ಊರ ಇತರ ಹೆಣ್ಣುಮಕ್ಕಳಿಗೂ ಕಲಿಸಿದರು. ಭಾವಗೀತೆ ಭಕ್ತಿಗೀತೆ ಜಾನಪದಗೀತೆ ಸೋಬಾನೇ ಪದಗಳನ್ನು ಊರು ಮನೆಯ ಹೆಣ್ಣುಮಕ್ಕಳಿಗೆಲ್ಲ ಕಲಿಸಿ ಊರಿನ ಮನೆಮನೆಯ ಹೆಣ್ಣುಮಕ್ಕಳೂ ಹಾಡುವಂತಾಗಿದ್ದು, ತಂಡ ಸೇರಿ, ಕಾರ್ಯಕ್ರಮ ಇಲ್ಲದಿದ್ದಾಗಲೂ ಹಾಡುವಂತೆ ಮಾಡಿದ್ದು ಇವರ ವಿಶೇಷ ಗುಣ.

ಇದನ್ನು ಓದಿದ್ದೀರಾ?: ಭಜನೆ ಕಲಾವಿದೆ- ವಿರಕ್ತೆ ಸಾವಿತ್ರಮ್ಮ

ಊರ ಮಹಿಳಾ ಸಂಘಕ್ಕೆ ಸೇರಿರುವ ಪುಟ್ಟತಾಯಕ್ಕ ಅಲ್ಲೂ ಸದಾ ಹಾಡಿನಲ್ಲಿ ಸಕ್ರಿಯರು. ಹೊಲಗದ್ದೆಗಳಲ್ಲಿ ಕೆಲಸ ಮಾಡುವಾಗ, ಗುಂಪಾಗಿ ಹಾಡೇಳಿಕೊಂಡು ಕೆಲಸ ಮಾಡುತ್ತಿದ್ದರು. ಊರಿನ ಶುಭ ಕಾರ್ಯಕ್ರಮಗಳಲ್ಲಿ ಇಂದಿಗೂ ಪುಟ್ಟ ತಾಯಕ್ಕ ಹಾಡುತ್ತಾರೆ. ಮುತ್ತು ಬಂದಿದೆ ಕೇರಿಗೆ, ಶಿವನ ಮದುವೆಗೋಗನ ಬನ್ನಿ, ಸೋ ಎನ್ನಿರೆ ಸೋಬಾನೇ ಎನ್ನಿರೆ, ತಂಗಿಗೆ ಹೇಳಿದನು ಶ್ರೀ ಕೃಷ್ಣ ಬುದ್ಧಿ ಮಾತನು, ಚಂದದಲಿ ದೇವರನಾಮ ಹಾಡೋಣ ಬನ್ನಿರೆ, ಹೋಗನೇಳು ಜಾತುರಿಗೆ… ಇವೆಲ್ಲಾ ಪುಟ್ಟತಾಯಕ್ಕ ಬಹಳ ಪ್ರೀತಿಯಿಂದ ಹಾಡುವ ಹಾಡುಗಳು.

ಇದನ್ನು ಓದಿದ್ದೀರಾ?: ಬಾನು ಮುಷ್ತಾಕ್ ಎಂಬ ಬೆಳಗುವ ಹಣತೆ

ಅವರು ಕೇಳುವ ಕೆಲ ಒಗಟುಗಳ ನಮೂನೆ ಹೀಗಿವೆ- ”ಟಾಕು ಟೀಕಿನ ಮನೆ, ಟಗರು ಕೊಂಬಿನ ಮನೆ, ಬಾಚಿ ಮುಟ್ಟದ ಮನೆ, ಬಡಗಿ ಕೆತ್ತದ ಮನೆ” ಇದಕ್ಕೆ ಉತ್ತರ- ಹುತ್ತ! ಎಂದು ನಾವು ತಿಣುಕಾಡಿ ಹುಡುಕಬೇಕು. ”ಅಂಗೈ ಅಗಲ ಕೆರೆ, ಕೆರೆಗೆ ನೀರು, ನೀರಿಗೆ ಬೇರು, ಬೇರಿಗೆ ಬೆಂಕಿ” ಇದಕ್ಕೆ ಉತ್ತರ- ದೀಪ! ”ಒಂದು ಹಾಡುತ್ತೆ, ಒಂದು ಓಡುತ್ತೆ, ಒಂದು ನಿಲ್ಲುತ್ತೆ” ಇದಕ್ಕೆ ಉತ್ತರ-ನದಿ! ”ಒಂದು ಬಿದಿರೊಡೆದು ಒಂಬತ್ತು ಮನೆ ಕಟ್ಟಿ, ಸಾಲು ಕೇರಿಯ ಕಟ್ಟಿ, ಸಗರಪಟ್ಟಣ ಕಟ್ಟಿ, ನೋಡೋಕೆ ಅಂತ ಬಂದವರು ನೇಣ್ ಹಾಕ್ಕೊಂಡು ಸತ್ರು”, ಇದಕ್ಕೆ ಉತ್ತರ-ಮೀನು ಹಿಡಿಯುವ ಕೂಣಿ… ಎಂಬುದನ್ನು ತಿಪ್ಪರಲಾಗ ಹಾಕಿ ಯೋಚಿಸಬೇಕು. ಹೀಗೆ ಹತ್ತಾರು ಒಗಟುಗಳನ್ನು ಹುಟ್ಟಿಸಿ ಹುಟ್ಟಿಸಿ ಕೇಳುತ್ತಾರೆ. ಮಕ್ಕಳ ತಲೆಗೆ ಸದಾ ಯೋಚಿಸುವ ಕೆಲಸ ಕೊಡುತ್ತಾರೆ.

ಇದನ್ನು ಓದಿದ್ದೀರಾ?: ಅರಳುವ ಮುನ್ನವೇ ಉದುರಿಬಿದ್ದ ಮೊಗ್ಗು- ವಸು ಮಳಲಿ

ಗಾದೆಗಳು ನೂರಾರು. ಮಾತಾಡುತ್ತಾ ಆಡುತ್ತಾ ಹೇಳುವಂತವು. ಹುಟ್ಟುವಂತವು- ”ಅಳ್ತಾ ಹೋದ ನಾಯಿ ಮೊಲ ಹಿಡಿತಿತಾ”, ”ಅಂಗೈ ಹುಣ್ಣಿಗೆ ಕನ್ನಡಿ ಬೇಕೆ?”, ”ಕಳ್ಳ ಹೊಕ್ಕ ಮನೆ ಎಣ್ಣೆಗೇಡು”, ”ಊರ ಮುಂದ್ಲ ಬಾವಿಗೆ ಬಿದ್ರೂ ಚಿಂತಿಲ್ಲ. ಊರವರ ಬಾಯಿಗೆ ಬೀಳಬಾರದು”… ಇಂತಹ ಅದೆಷ್ಟೋ ಗಾದೆಗಳು ಅವರ ಮಾತಿನ ನಡುವೆ ಪುಂಖಾನುಪುಂಖವಾಗಿ ಬರುತ್ತಲೇ ಇರುವ ಗಾದೆಗಳು. ಪುಟ್ಟತಾಯಕ್ಕ ದೇಶ ಸುತ್ತಿದ್ದಾರೆ. ಅವರ ಮಕ್ಕಳು ಅವರನ್ನು ವಿಮಾನದಲ್ಲಿ ಕೂರಿಸಿದ್ದಾರೆ. ಅಯೋಧ್ಯೆ, ಬುದ್ಧಗಯಾ, ಕಾಶಿ, ಕೆಂಪು ಕೋಟೆ, ಸೂರ್ಯ ನಾರಾಯಣ ದೇವಾಲಯ, ಸರಸ್ವತಿ ನದಿ ಗುಪ್ತಗಾಮಿನಿಯಾಗಿ ಹರಿದ ಸ್ಥಳ… ಮುಂತಾದ ಕಡೆ ಪ್ರವಾಸ ಹೋಗಿ ಬಂದಿದ್ದಾರೆ. ಅಲ್ಲಿಯೂ ಮೈಮರೆತು ನಗುನಗುತಾ ಹಾಡಿಕೊಂಡಿದ್ದಾರೆ. ಕಂಬನಿ ಒಳಗೇ ನುಂಗಿಕೊಂಡಿದ್ದಾರೆ. ಅಡಗೂರು ಶಾಲೆಯ ಹಳೇ ವಿದ್ಯಾರ್ಥಿ ಪುಟ್ಟತಾಯಕ್ಕ ಇವತ್ತಿಗೂ ಪುಸ್ತಕ ಓದುವ ಹವ್ಯಾಸ ಇಟ್ಟುಕೊಂಡಿದ್ದಾರೆ. ಮಕ್ಕಳು ಮೊಮ್ಮಕ್ಕಳು ಸೊಸೆಯರ ಜೊತೆ ಬದುಕುತ್ತಿದ್ದಾರೆ. ಅವರ ಮಗ ಯೋಗೇಶಪ್ಪ ಇವರ ನೂರಾರು ಗಾದೆಗಳು ಮತ್ತು ಒಗಟುಗಳನ್ನು ಸಂಗ್ರಹಿಸಿದ್ದಾರೆ.

WhatsApp Image 2026 02 23 at 16.09.23

ಕಡೆಯಲ್ಲಿ ಪುಟ್ಟತಾಯಕ್ಕ ಹೇಳಿದ ಕಿವಿಮಾತು- ”ನನಗೆ 85 ವರ್ಷ ಕಳೆಯಿತು. ಮಕ್ಕಳು- ಶಿವಮ್ಮ, ಪುಷ್ಪಾವತಿ, ಮಲ್ಲಿಗ್ಯಮ್ಮ, ಯೋಗೇಶಪ್ಪ, ಸತೀಶ್ ಅಂತ. ಇಬ್ಬರು ಗಂಡು, ಮೂವರು ಹೆಣ್ಣುಮಕ್ಕಳು. ಮೊಮ್ಮಕ್ಕಳು ಕೂಡ ಇದ್ದಾರೆ. ಎಲ್ಲರೂ ಚೆನ್ನಾಗಿದ್ದಾರೆ. ಒಂದು ನೋವಿನ ಸಂಗತಿ ಎಂದರೆ ಬಹಳ ಚಿಕ್ಕ ವಯಸ್ಸಿಗೆ ಎರಡನೇ ಮಗಳು ತೀರಿಹೋದಳು. ಇನ್ನು ನಾನು ಆರೋಗ್ಯವಾಗಿದ್ದೇನೆ. ಕಣ್ಣು ಚೆನ್ನಾಗಿ ಕಾಣುತ್ತಿವೆ. ಕಿವಿ ಕೇಳುತ್ತಿವೆ. ನಿದ್ದೆ ಚೆನ್ನಾಗಿ ಬರುತ್ತವೆ. ಗಂಡಾಗಲಿ ಹೆಣ್ಣಾಗಲಿ ಕಷ್ಟಪಟ್ಟು ಶ್ರಮದ ಅನ್ನ ತಿನ್ನಬೇಕು. ದಿಟ್ಟತನದಿಂದ ಬದುಕಬೇಕು. ಒಳ್ಳೆ ದಾರೀಲಿ ನೆಡೀಬೇಕು. ನಾನು ಈಗಲೂ ಕುರಿ ಸಾಕಂಡಿದಿನಿ. ನಾಟಿ ಕೋಳಿ ಸಾಕಿದೀನಿ. ತರಕಾರಿ ಬೆಳೀತೀನಿ. ಇವತ್ತಿಗೂ ನಾನು ಒಂದ್ಕಡೆ ಕೂರಲ್ಲ. ಹಾಡೇಳದನ್ನ, ಗಾದೆ ಹೇಳದನ್ನ, ಒಗಟು ಕೇಳದನ್ನ ಪ್ರಾಣ ಓಗರ‍್ಗೂ ಬಿಡಲ್ಲ. ಪೇಟೆ ಪಟ್ಟಣದಲ್ಲಿ ಇರಬೇಕು ಅಂತ ಯಾವತ್ತೂ ಆಸೆ ಪಡಲ್ಲ. ನನಗೆ ನಮ್ಮ ಹಳ್ಳಿನೇ ಚಂದ”. ಅವರ ಮಾತು ಕೇಳುತ್ತಾ… ಹೀಗೆ ಈ ಹಿರಿಯ ಜೀವ ಪುಟ್ಟತಾಯಮ್ಮ, ರಾಗಿ ಪುಟ್ಟತಾಯಕ್ಕ, ರಾಗಿ ಪುಟ್ಟತಾಯಜ್ಜಿ- ಇಳಿ ವಯಸ್ಸಿನ ಸಾರ್ಥಕ ಜೀವನ ನಡೆಸಲು, ಮನಸು ನಿರಾಳವಾಗಿರಲು- ಇವರಿಗೆ ಆ ಹಾಡು, ಗಾದೆ, ಒಗಟುಗಳೇ ಶಕ್ತಿ ನೀಡ್ತಿರಬೇಕು. ಅವೇ ಅವ್ರನ್ನ ಕಾಪಾಡಲಿ ಎಂದು ಹಾರೈಸುತ್ತಾ ಹೊರ ಬಂದೆ.

-ಬಿ.ಎಂ. ಭಾರತಿ ಹಾದಿಗೆ  

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ ಬಿದ್ದ ಸಮುದಾಯ ಭವನ

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9 ತಿಂಗಳಲ್ಲಿ 28,000 ನಾಯಿ ಕಡಿತ ಪ್ರಕರಣ!

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ...

ಬೆಂಗಳೂರು | SIR ರದ್ದತಿಗೆ ಆಗ್ರಹ: ಚುನಾವಣಾ ಆಯೋಗ ಮುತ್ತಿಗೆಗೆ ಯತ್ನಿಸಿದ ಪ್ರತಿಭಟನಾಕಾರರ ಬಂಧನ

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ತಕ್ಷಣವೇ ರದ್ದುಗೊಳಿಸಬೇಕು...

ಉಜಿರೆಯಲ್ಲಿ ಸೌಜನ್ಯ ನ್ಯಾಯ ಯಾತ್ರೆ: ನೈಜ ಅಪರಾಧಿಗಳ ಬಂಧನಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಧರ್ಮಸ್ಥಳದ ಕುಮಾರಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನೈಜ ಆರೋಪಿಗಳನ್ನು...