ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರದ್ದು ಎನ್ನಲಾದ ಆಡಿಯೊ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಆಡಿಯೊ ಕುರಿತ ಯಾವುದೇ ಸುದ್ದಿ ಅಥವಾ ತುಣುಕುಗಳನ್ನು ಪ್ರಸಾರ ಮಾಡದಂತೆ ಮಯೋಹಾಲ್‌ನ 57ನೇ ಎಸಿಸಿ ಸೆಷನ್ಸ್ ನ್ಯಾಯಾಲಯವು ಮುದ್ರಣ, ವಿದ್ಯುನ್ಮಾನ ಹಾಗೂ ಡಿಜಿಟಲ್ ಮಾಧ್ಯಮಗಳಿಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಮಾಜಿ ಸಚಿವರ ಹೆಸರಿಗೆ ಮಸಿ ಬಳಿಯುವ ಉದ್ದೇಶದಿಂದ ದುರುದ್ದೇಶಪೂರಿತವಾಗಿ ಕಿಡಿಗೇಡಿಗಳು ಈ ನಕಲಿ ಆಡಿಯೊವನ್ನು ಸೃಷ್ಟಿಸಿ ಹರಿಬಿಟ್ಟಿದ್ದಾರೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪರವಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ನ್ಯಾಯವಾದಿ ಇಸ್ಮಾಯಿಲ್ ಝಬೀವುಲ್ಲಾ ಅವರು ವಾದ ಮಂಡಿಸಿದರು. ಯಾವುದೇ ಅಧಿಕೃತ ಆಧಾರಗಳಿಲ್ಲದೆ, ಸತ್ಯಾಸತ್ಯತೆ ಪರಿಶೀಲಿಸದೆ ಈ ನಕಲಿ ಆಡಿಯೊ ಬಗ್ಗೆ ವರದಿಗಳನ್ನು ಪ್ರಸಾರ ಮಾಡುವುದರಿಂದ ವೈಯಕ್ತಿಕ ಹಾಗೂ ರಾಜಕೀಯ ಘನತೆಗೆ ತೀವ್ರ ಧಕ್ಕೆಯಾಗುತ್ತದೆ ಎಂದು ನ್ಯಾಯವಾದಿ ಇಸ್ಮಾಯಿಲ್ ಅವರು ನ್ಯಾಯಾಲಯದ ಗಮನ ಸೆಳೆದರು.
ಇದನ್ನು ಓದಿದ್ದೀರಾ? ಅಫ್ಘಾನ್ ವಿರುದ್ಧ ಭಾರತಕ್ಕೆ ಇನಿಂಗ್ಸ್ ಹಾಗೂ 300 ರನ್‌ಗಳ ಭರ್ಜರಿ ಗೆಲುವು
ನ್ಯಾಯವಾದಿ ಇಸ್ಮಾಯಿಲ್ ಅವರ ವಾದವನ್ನು ಆಲಿಸಿ, ಅರ್ಜಿಯ ವಿಚಾರಣೆ ನಡೆಸಿದ 57ನೇ ಎಸಿಸಿ ಸೆಷನ್ಸ್ ನ್ಯಾಯಾಲಯವು, ಈ ಆಡಿಯೊದ ನೈಜತೆ ಮತ್ತು ಮೂಲ ಇನ್ನೂ ದೃಢಪಡದ ಕಾರಣ, ಅದನ್ನು ಆಧರಿಸಿ ಸುದ್ದಿವಾಹಿನಿಗಳು ಅಥವಾ ಇತರೆ ಡಿಜಿಟಲ್ ವೇದಿಕೆಗಳಲ್ಲಿ ಪ್ರಸಾರ ಮಾಡುವುದು ಸಮಂಜಸವಲ್ಲ ಎಂದು ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ, ಮುಂದಿನ ಆದೇಶದವರೆಗೆ ಈ ನಿರ್ದಿಷ್ಟ ವೈರಲ್ ಆಡಿಯೊಗೆ ಸಂಬಂಧಿಸಿದಂತೆ ಯಾವುದೇ ಸುದ್ದಿ, ಚರ್ಚೆ ಅಥವಾ ತುಣುಕನ್ನು ಬಿತ್ತರಿಸದಂತೆ ಎಲ್ಲ ಬಗೆಯ ಮಾಧ್ಯಮಗಳಿಗೆ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ಜಾರಿಗೊಳಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದೃಢಪಡದ ಮಾಹಿತಿಯ ನೈಜತೆಯನ್ನು ಖಚಿತಪಡಿಸಿಕೊಳ್ಳದೆ ಏಕಾಏಕಿ ವರದಿ ಮಾಡುವುದು ವ್ಯಕ್ತಿಯ ವರ್ಚಸ್ಸಿಗೆ ಸರಿಪಡಿಸಲಾಗದ ಹಾನಿಯನ್ನುಂಟುಮಾಡಬಹುದು ಎಂಬ ಅಂಶವನ್ನು ನ್ಯಾಯಾಲಯ ಗಣನೆಗೆ ತೆಗೆದುಕೊಂಡಿದೆ. ಪ್ರಕರಣದ ಮುಂದಿನ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡು ಸತ್ಯಾಂಶ ಹೊರಬರುವವರೆಗೆ ಈ ನಿರ್ಬಂಧ ಜಾರಿಯಲ್ಲಿರುತ್ತದೆ.





