ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮುಂದಿನ ಎರಡು ದಿನಗಳ ಕಾಲ ಬಿರುಗಾಳಿ ಸಹಿತ ಮಳೆಯ ಮುನ್ಸೂಚನೆ ನೀಡಲಾಗಿದೆ. ಇಂದು ರಾಜ್ಯದ ಆರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಜಾರಿಯಲ್ಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.
IMD ಬೆಂಗಳೂರು ಕೇಂದ್ರದ ದೈನಂದಿನ ಹವಾಮಾನ ವರದಿ ಪ್ರಕಾರ, ಮಂಗಳವಾರ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಒಂದೆರಡು ಕಡೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಗುಡುಗು-ಮಿಂಚು ಸಮೇತ ಗಂಟೆಗೆ 30-40 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ.
ಇಂದು ಮತ್ತು ನಾಳೆ ಬಳ್ಳಾರಿ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೊಡಗು, ಕೋಲಾರ, ರಾಮನಗರ, ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಹಗುರದಿಂದ ಮಧ್ಯಮ ಪ್ರಮಾಣದ ಮಳೆಯಾಗಲಿದ್ದು, ಗುಡುಗು-ಮಿಂಚು ಮತ್ತು ಬಿರುಗಾಳಿಯ ಸಾಧ್ಯತೆ ಇದೆ.
ಸೆಪ್ಟೆಂಬರ್ 30 ಮತ್ತು ಅ.1ರಂದು ದಕ್ಷಿಣ ಒಳನಾಡಿನಲ್ಲಿ ಮಳೆ ಮುಂದುವರಿಯುವ ನಿರೀಕ್ಷೆಯಿದೆ. ಕೆಲವೆಡೆ ಭಾರೀ ಮಳೆಯ ಸಾಧ್ಯತೆಯೂ ಇದೆ. ನಾಗರಿಕರು ಮುನ್ನೆಚ್ಚರಿಕೆ ವಹಿಸಿ, ಸ್ಥಳೀಯ ಅಧಿಕಾರಿಗಳ ಸೂಚನೆಗಳನ್ನು ಪಾಲಿಸಬೇಕು ಎಂದು ಹವಾಮಾನ ಇಲಾಖೆ ಸಲಹೆ ನೀಡಿದೆ.
ರಾಜಧಾನಿಯ ಬೇಗೆ ತಣಿಸಿದ ರಾತ್ರಿ ಮಳೆ…
ಉಳಿದಂತೆ ನಿನ್ನೆ ನಟ್ಟಿರುಳು ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯಿಂದ ಹಲವು ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತಗೊಂಡಿವೆ. ವೈಟ್‌ಫೀಲ್ಡ್ ಮತ್ತು ಮಾರತ್ತಹಳ್ಳಿ ಪ್ರದೇಶಗಳಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆಯಾಗಿದೆ. ವಾಹನ ಸವಾರರು ನೀರಿನಲ್ಲಿ ಸಿಲುಕಿ ಪರದಾಟ ನಡೆಸುತ್ತಿದ್ದಾರೆ.
ಇದೇ ವೇಳೆ ಮಲ್ಲೇಶ್ವರಂನಲ್ಲಿ ಬೃಹತ್ ಮರವೊಂದು ಕಾರುಗಳ ಮೇಲೆ ಬಿದ್ದಿದೆ. ಮರ ಬಿದ್ದು ಕಾರುಗಳಿಗೆ ಹಾನಿಯಾಗಿದ್ದು, ಸ್ಥಳೀಯರು ತಕ್ಷಣದ ಸಹಾಯಕ್ಕೆ ಮುಂದಾಗಿದ್ದಾರೆ. ಅಧಿಕಾರಿಗಳು ಮರ ತೆರವು ಕಾರ್ಯ ಕೈಗೊಂಡಿದ್ದಾರೆ.
ನಗರದ ಹಲವು ಕಡೆಗಳಲ್ಲಿ ಮಳೆಯಿಂದ ಸಂಚಾರ ವ್ಯತ್ಯಯಗೊಂಡಿದ್ದು, ನಾಗರಿಕರು ಎಚ್ಚರಿಕೆಯಿಂದ ಸಂಚರಿಸುವಂತೆ ಸೂಚಿಸಲಾಗಿದೆ.




