“ಕೇಂದ್ರ ಸರ್ಕಾರವು ಭವಿಷ್ಯನಿಧಿ (ಪಿಎಫ್) ಸೌಲಭ್ಯದಲ್ಲಿ ಹೊಸ ಆದೇಶ ಮಾಡಿರುವುದು ಗಾರ್ಮೆಂಟ್ಸ್ ಕಾರ್ಖಾನೆ ಉದ್ಯೋಗಿಗಳಿಗೆ ಮಾರಕವಾಗಿದೆ’ ಎಂದು ಆರೋಪಿಸಿ ಮಹಿಳಾ ಉದ್ಯೋಗಿಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಬಂಕಾಪುರ ಬಳಿಯ ಶಾಹಿ ಗಾರ್ಮೆಂಟ್ಸ್ ಕಂಪನಿ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಳಿತ ಉದ್ಯೋಗಿಗಳು, ‘ಪಿಎಫ್ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ’ ಎಂದು ಪಟ್ಟು ಹಿಡಿದರು.
ದಿಢೀರ್ ಪ್ರತಿಭಟನೆಯಿಂದ ಹೆದ್ದಾರಿಯ ಒಂದು ಬದಿಯಲ್ಲಿ ವಾಹನ ಗಳ ಸಂಚಾರ ಬಂದ್ ಆಯಿತು. ಸುಗಮ ಸಂಚಾರಕ್ಕೆ ತೊಂದರೆಯಾಯಿತು. ಸ್ಥಳಕ್ಕೆ ಬಂದ ಪೊಲೀಸರು, ಸರ್ವೀಸ್ ರಸ್ತೆ ಮತ್ತು ಹೆದ್ದಾರಿಯ ಇನ್ನೊಂದು ಬದಿಯಲ್ಲಿ ಮಾತ್ರ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.
ಪ್ರತಿಭಟನೆಯಲ್ಲಿ ಮಹಿಳಾ ಉದ್ಯೋಗಿಗಳು ಮಾತನಾಡಿ “ಪಿಎಫ್ ಸೌಲಭ್ಯ ಹೊಂದಿರುವ ಉದ್ಯೋಗಿಗಳು, ಒಂದು ವರ್ಷದ ನಂತರ ಶೇ 75ರಷ್ಟು ಮಾತ್ರ ಹಣ ಪಡೆಯಲು ಆದೇಶ ಮಾಡಲಾಗಿದೆ. ಮೂರು ವರ್ಷದ ನಂತರ ಉಳಿದ ಶೇ 25ರಷ್ಟು ಹಣ ಕೊಡುವುದಾಗಿ ಕೇಂದ್ರ ಸರ್ಕಾರ ಆದೇಶಿಸಿದೆ. ಮೂರು ವರ್ಷ ಕಾಯಲು ಸಾಧ್ಯವಿಲ್ಲ” ಎಂದು ಹೇಳಿದರು.
ಸ್ಥಳಕ್ಕೆ ಭೇಟಿ ನೀಡಿದ ಹುಬ್ಬಳ್ಳಿಯ ಭವಿಷ್ಯ ನಿಧಿ ಸಂಸ್ಥೆಯ (ಪಿಎಫ್) ಅಧಿಕಾರಿ ಪ್ರಭಾಕರ ಮಾತನಾಡಿ, “ಪಿಎಫ್ ಸಂಬಂಧ ಹಲವು ತಿಂಗಳ ಹಿಂದೆಯೇ ಆದೇಶ ಹೊರಡಿಸಲಾಗಿದೆ. ಇದು, ಕಾರ್ಮಿಕರ ಭವಿಷ್ಯದ ದೃಷ್ಟಿಯಿಂದ ಲಾಭದಾಯಕವಾಗಿದೆ’ ಎಂದು ತಿಳಿಸಿದರು.
ಪ್ರತಿಭಟನಾ ಸ್ಥಳದಲ್ಲಿ ಮಾತನಾಡಿದ ಅವರು, ‘ಒಂದು ವರ್ಷ ಕೆಲಸ ಮಾಡಿದ ಕಾರ್ಮಿಕರು, 15 ಪ್ರಕಾರಗಳಲ್ಲಿ ನಿಗದಿತ ಶೇಕಡಾವಾರು ಪ್ರಮಾಣದಲ್ಲಿ ಮಾತ್ರ ಹಣ ವಾಪಸು ಪಡೆಯಲು ಅವಕಾಶವಿದೆ. 3 ವರ್ಷದ ನಂತರವೂ ಉಳಿದ ಹಣವನ್ನು ವಾಪಸು ನೀಡಲಾಗುವುದು. ಆಗ, ಶೇ 8ರಷ್ಟು ಲಾಭಾಂಶ ನೀಡಲಾಗುತ್ತದೆ. ಶಿಕ್ಷಣ, ಉದ್ಯೋಗ ಮತ್ತು ವಿವಾಹಕ್ಕಾಗಿ ಹಣ ಪಾವತಿ ಮಾಡಿಕೊಳ್ಳಬಹುದು’ ಎಂದು ಹೇಳಿದರು.
ಅಕ್ಟೋಬರ್ 9ರಂದು ಹೊಸ ಆದೇಶದ ಬಗ್ಗೆ ಸಭೆ ಇದೆ. ಅದಾದ ನಂತರ, ನಿರ್ಧಾರ ಗೊತ್ತಾಗಲಿದೆ. ಈಗ ಪ್ರತಿಭಟನೆ ಕೈಬಿಡಿ’ ಎಂದು ಅಧಿಕಾರಿಗಳು ಕೋರಿದರು. ಅದಕ್ಕೆ ಒಪ್ಪಿದ ಉದ್ಯೋಗಿಗಳು, ಪ್ರತಿಭಟನೆ ಹಿಂಪಡೆದರು.




