ಕನ್ನಡ ನಾಡು–ನುಡಿ, ಸಾಹಿತ್ಯ ಹಾಗೂ ಸಂಸ್ಕೃತಿಯ ಸೊಗಡನ್ನು ಪಸರಿಸುವ ಉದ್ದೇಶದಿಂದ ಜಮಖಂಡಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಅ.4ರಂದು ಬಸವ ಭವನದಲ್ಲಿ ನಡೆಯಲಿದೆ ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಜಗದೀಶ ಗುಡಗುಂಟಿ ತಿಳಿಸಿದರು.
ಸಮ್ಮೇಳನದ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಬೆಳಿಗ್ಗೆ ಧ್ವಜಾರೋಹಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದು, ಬಳಿಕ ಕನ್ನಡಾಭಿಮಾನಿಗಳ ಮೆರವಣಿಗೆ ನಡೆಯಲಿದೆ. ನಂತರ ಸಮ್ಮೇಳನದ ಉದ್ಘಾಟನಾ ಸಮಾರಂಭ, ಮಹಿಳಾ ಹಾಗೂ ದಲಿತ ಸಾಹಿತ್ಯ ಗೋಷ್ಠಿ, ಕವಿಗೋಷ್ಠಿ, ಉಪನ್ಯಾಸ, ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಸೇರಿದಂತೆ ವಿವಿಧ ಸಾಹಿತ್ಯಿಕ ಕಾರ್ಯಕ್ರಮಗಳು ಜರುಗಲಿವೆ. ಸಂಜೆ ಸಮಾರೋಪ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕವು ಸಾಹಿತ್ಯದ ದಾಖಲೀಕರಣಕ್ಕೂ ಆದ್ಯತೆ ನೀಡಿದ್ದು, ಜಮಖಂಡಿ ತಾಲ್ಲೂಕಿನ ಈವರೆಗಿನ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಭಾಷಣಗಳನ್ನು ಒಳಗೊಂಡ ‘ಜಮಖಂಡಿ 20’ ವಿಶೇಷ ಕೃತಿಯನ್ನು 10ನೇ ಸಮ್ಮೇಳನದ ಸವಿನೆನಪಿಗಾಗಿ ಲೋಕಾರ್ಪಣೆ ಮಾಡಲಾಗುವುದು ಎಂದು ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಹೇಳಿದರು.
ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಸ್ಥಳೀಯ ಸಾಹಿತ್ಯ ಪರಂಪರೆ ಹಾಗೂ ಸಮ್ಮೇಳನಗಳ ಮಹತ್ವವನ್ನು ಮುಂದಿನ ಪೀಳಿಗೆಗೆ ದಾಖಲಿಸುವ ನಿಟ್ಟಿನಲ್ಲಿ ‘ಜಮಖಂಡಿ 20’ ಕೃತಿ ಪ್ರಮುಖವಾಗಲಿದೆ ಎಂದರು.
ತಾಲ್ಲೂಕು ಕಸಾಪ ಅಧ್ಯಕ್ಷ ಸಂತೋಷ ತಳಕೇರಿ ಮಾತನಾಡಿ, “ಜಮಖಂಡಿಯ ನೆಲದ ಕನ್ನಡ ಸಾಹಿತ್ಯ, ಸಂಸ್ಕೃತಿ ಹಾಗೂ ಕಲಾ ಪರಂಪರೆಯನ್ನು ಪರಿಚಯಿಸುವ ವೇದಿಕೆಯಾಗಿ ಸಮ್ಮೇಳನ ರೂಪುಗೊಳ್ಳಲಿದೆ. ಸಾಹಿತ್ಯಾಸಕ್ತರು, ವಿವಿಧ ಸಂಘ–ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು” ಎಂದು ಮನವಿ ಮಾಡಿದರು.
ಕಾರ್ಯಾಧ್ಯಕ್ಷ ಶಿವಾನಂದ ಪಾಟೀಲ, ನಾಗಪ್ಪ ಸನದಿ, ಬಸವರಾಜ ಕಡ್ಡಿ, ಟಿ.ಪಿ. ಗಿರಡ್ಡಿ, ರುದ್ರಗೌಡ ಪಾಟೀಲ, ಬಿ.ಎನ್. ಅಸ್ಕಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲಕ್ಷ್ಮೀಕಾಂತ ದುದಗಿ, ಮಲ್ಲೇಶ ಆಳಗಿ, ನರಸಿಂಹ ಕಲ್ಲೊಳ್ಳಿ, ಪ್ರಭು ಹಿಡಕಲ್ ಹಾಗೂ ಉಮೇಶ ಸಿದರಡ್ಡಿ ಉಪಸ್ಥಿತರಿದ್ದರು.




