ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ? – ಭಾಗ 1

Date:

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ ಹಿಡಿದು ರಾಜಕೀಯ ಹಸ್ತಕ್ಷೇಪ, ಭ್ರಷ್ಟಾಚಾರ, ಪೊಲೀಸ್-ಪಬ್ಲಿಕ್‌ ಸಂಬಂಧ, ಅಧಿಕಾರಿಗಳ ಸ್ವಾಯತ್ತತೆಯವರೆಗೆ ಇರುವ ಪ್ರಸ್ತುತ ಸವಾಲುಗಳಿಗೆ ಕೇವಲ ಸಮಿತಿಗಳ ರಚನೆಯಿಂದ ಪರಿಹಾರ ಸಾಧ್ಯವೇ? ಅಸಲಿಗೆ ಸರ್ಕಾರ ಪೊಲೀಸ್‌ ಸುಧಾರಣೆಯ ಅಗತ್ಯತೆಗೆ ಒತ್ತು ಕೊಡುತ್ತಿರುವುದೇಕೆ?

- Advertisement -

ಪೊಲೀಸ್‌ ಠಾಣೆ ಎಂದರೆ ಸಾರ್ವಜನಿಕರಿಗೆ ನ್ಯಾಯ ಸಿಗುವ ಭರವಸೆಯ ಮೊದಲ ಹಂತ. ಅಪರಾಧ ನಡೆದಾಗ ದೂರು ದಾಖಲಿಸುವುದರಿಂದ ಹಿಡಿದು ತನಿಖೆ, ಆರೋಪಿಗಳ ಪತ್ತೆ ಮತ್ತು ನ್ಯಾಯಾಲಯದಲ್ಲಿ ಸಾಕ್ಷ್ಯ ಒದಗಿಸುವವರೆಗೆ ಪೊಲೀಸ್‌ ಇಲಾಖೆಯ ಜವಾಬ್ದಾರಿ ಅತ್ಯಂತ ಮಹತ್ವದ್ದು. ಆದರೆ, ಅಂತಹ ಠಾಣೆಯ ಮೆಟ್ಟಿಲೇರುವ ಸಾಮಾನ್ಯ ವ್ಯಕ್ತಿಗೆ ಅಧಿಕಾರಿಯನ್ನು ಭೇಟಿಯಾಗುವುದೇ ಸವಾಲಾದರೆ, ದೂರು ದಾಖಲಿಸುವುದೇ ದುಸ್ತರವಾದರೆ. ತನಿಖಾ ಪ್ರಕ್ರಿಯೆಯ ನಿಷ್ಪಕ್ಷಪಾತತೆಯ ಬಗ್ಗೆಯೇ ಸಾರ್ವಜನಿಕ ವಲಯದಲ್ಲಿ ಗಂಭೀರ ಅನುಮಾನಗಳು ಮೂಡಿದರೆ, ಇಡೀ ಆಡಳಿತ ವ್ಯವಸ್ಥೆಯ ನೈತಿಕತೆ ಹಾಗೂ ಕಾರ್ಯವೈಖರಿಯ ಕುರಿತು ಪ್ರಶ್ನೆಗಳು ಏಳುವುದು ಸಹಜ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಮೊಳಗಿಸಿದ್ದ ಮತ ಹಕ್ಕಿನ ಕೂಗಿಗೆ...

ಮತದಾನ ಕೇವಲ ಹಕ್ಕಲ್ಲ, ಅದು ಪ್ರಜೆಯೊಬ್ಬನ ಘನತೆ ಹಾಗೂ ಅಸ್ತಿತ್ವದ ಸಂಕೇತ. 131 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಇದೇ ಮತಾಧಿಕಾರಕ್ಕಾಗಿ ಗಾಂಧೀಜಿ ಬ್ರಿಟಿಷರ ವಿರುದ್ಧ ಸಿಡಿದೆದ್ದಿದ್ದರು. ಆದರೆ, ಇಂದು ಸ್ವತಂತ್ರ ಭಾರತದಲ್ಲಿ...

ಪೊಲೀಸ್‌ ಇಲಾಖೆಯಲ್ಲಿ ಬೇರೂರಿರುವ ಇಂತಹ ದುಸ್ಥಿತಿ ಕೇವಲ ಕೆಲವೇ ಅಧಿಕಾರಿಗಳ ವೈಯಕ್ತಿಕ ಲೋಪದೋಷಗಳಿಗೆ ಸೀಮಿತಗೊಂಡಿಲ್ಲ. ಅದರ ಆಳ ಬೇರುಗಳು ದೋಷಪೂರಿತ ಆಡಳಿತಾತ್ಮಕ ರಚನೆ, ವೈಜ್ಞಾನಿಕವಲ್ಲದ ಸಿಬ್ಬಂದಿ ನಿರ್ವಹಣೆ, ಆರ್ಥಿಕ ಸಂಪನ್ಮೂಲಗಳ ಹಂಚಿಕೆ, ಮಿತಿಮೀರಿದ ರಾಜಕೀಯ ಪ್ರಭಾವ ಮತ್ತು ಇಲಾಖೆಯನ್ನು ತುಳಿದು ಆಳುವ ಅದೇ ಹಳೆಯ ದಬ್ಬಾಳಿಕೆಯ ಕಾರ್ಯಸಂಸ್ಕೃತಿಯಲ್ಲಿವೆ. ಹಾಗಾಗಿ ನಿಜವಾದ ಅರ್ಥದಲ್ಲಿ ‘ಪೊಲೀಸ್‌ ಸುಧಾರಣೆ’ ಎಂದರೆ ಗಸ್ತು ತಿರುಗಲು ಹೊಸ ಗಸ್ತು ವಾಹನಗಳ ಖರೀದಿಯಲ್ಲ, ಠಾಣೆಗಳಿಗೆ ಆಧುನಿಕ ಉಪಕರಣಗಳನ್ನು ತಂದು ಸುರಿಯುವುದಲ್ಲ, ತಾಂತ್ರಿಕತೆ ಅಳವಡಿಕೊಳ್ಳುವುದೂ ಅಲ್ಲ. ಅದು ಸಾರ್ವಜನಿಕರಿಗೆ ಒದಗಿಸುವ ಸೇವೆಯ ಗುಣಮಟ್ಟವನ್ನು ಮೂಲದಿಂದ ಬದಲಿಸುವುದರಿಂದ ಹಿಡಿದು, ಇಲಾಖೆಯ ಆಂತರಿಕ ವ್ಯವಸ್ಥೆಯ ರಕ್ತನಾಳಗಳನ್ನ ಶುದ್ಧೀಕರಿಸುವ ಸಮಗ್ರ ಕಾಯಕಲ್ಪದ ಪ್ರಕ್ರಿಯೆಯಾಗಿದೆ. ಈಗ ಇದೇ ಉದ್ದೇಶದಿಂದ ಗೃಹಸಚಿವ ಪ್ರಿಯಾಂಕ್‌ ಖರ್ಗೆ ಮುಂದಡಿ ಇಟ್ಟಿದ್ದಾರೆ.

ಕರ್ನಾಟಕದಲ್ಲಿ ಪೊಲೀಸ್‌ ಇಲಾಖೆಯ ಕಾರ್ಯವೈಖರಿಯನ್ನು ಸುಧಾರಿಸುವ ಉದ್ದೇಶದಿಂದ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ, ಸಾರ್ವಜನಿಕ ಸೇವೆಗಳ ಸುಧಾರಣಾ ಸಮಿತಿ, ಪೊಲೀಸ್‌ ಆಧುನೀಕರಣ ಸಮಿತಿ ಹಾಗೂ ವೃಂದ ಮತ್ತು ನೇಮಕಾತಿ ನಿಯಮಗಳ ಪರಿಷ್ಕರಣಾ ಸಮಿತಿ ಎಂಬ ಮೂರು ತಜ್ಞರ ಸಮಿತಿಗಳ ರಚನೆಯನ್ನು ಘೋಷಿಸಿದ್ದಾರೆ. ಸಾರ್ವಜನಿಕರಿಗೆ ಒದಗಿಸುವ ಪೊಲೀಸ್‌ ಸೇವೆಗಳ ಸುಧಾರಣೆ, ಇಲಾಖೆಯ ಆಧುನೀಕರಣ ಹಾಗೂ ವೃಂದ ಮತ್ತು ನೇಮಕಾತಿ ನಿಯಮಗಳ ಪರಿಷ್ಕರಣೆಯ ಸುತ್ತ ಈ ಸಮಿತಿಗಳು ಕೆಲಸ ಮಾಡುತ್ತವೆ. ಮೂರು ಸಮಿತಿಗಳಿಗೂ ಎರಡು ತಿಂಗಳ ಅವಧಿಯಲ್ಲಿ ಶಿಫಾರಸುಗಳ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

Advertisements

ನಿವೃತ್ತ ಡಿಜಿಪಿ ಆರ್‌.ಕೆ. ದತ್ತ ಅವರ ನೇತೃತ್ವದ ಸಾರ್ವಜನಿಕ ಸೇವೆಗಳ ಸುಧಾರಣಾ ಸಮಿತಿಯು ಎಫ್‌ಐಆರ್‌ ದಾಖಲಾತಿ, ದೂರು ಸ್ವೀಕಾರ, ತುರ್ತು ಸೇವೆಗಳು, ಕಳೆದುಹೋದ ವಸ್ತುಗಳ ವರದಿ, ಸೈಬರ್‌ ಅಪರಾಧಗಳ ದೂರುಗಳು, ಅನುಮತಿಗಳು ಮತ್ತು ಪ್ರಮಾಣಪತ್ರಗಳು ಸೇರಿದಂತೆ ಸಾರ್ವಜನಿಕರಿಗೆ ಲಭ್ಯವಿರುವ ಸೇವೆಗಳ ಗುಣಮಟ್ಟವನ್ನು ಪರಿಶೀಲಿಸಲಿದೆ. ಸೇವೆಗಳು ತ್ವರಿತವಾಗಿ, ಪಾರದರ್ಶಕವಾಗಿ ಮತ್ತು ಜನಸ್ನೇಹಿಯಾಗಿ ದೊರೆಯುವಂತೆ ಮಾಡುವುದರ ಜತೆಗೆ, ಪೊಲೀಸ್‌ ಠಾಣೆಗಳ ಕಾರ್ಯವೈಖರಿ, ಸಮುದಾಯ ಪೊಲೀಸ್‌ ವ್ಯವಸ್ಥೆ, ಸಿಬ್ಬಂದಿ ತರಬೇತಿ ಮತ್ತು ಸೇವೆಗಳ ಗುಣಮಟ್ಟ ಅಳೆಯುವ ಮಾನದಂಡಗಳ ಬಗ್ಗೆಯೂ ಶಿಫಾರಸು ಮಾಡಲಿದೆ. ನಾಗರಿಕರ ಹಕ್ಕುಗಳು ಮತ್ತು ಸೇವೆಗಳ ಕಾಲಮಿತಿಯನ್ನು ಸ್ಪಷ್ಟಪಡಿಸುವ ‘ಸಿಟಿಜನ್‌ ಚಾರ್ಟರ್‌’ ರೂಪಿಸುವ ಸಾಧ್ಯತೆಯನ್ನೂ ಪರಿಶೀಲಿಸಲಿದೆ.

ನಿವೃತ್ತ ಡಿಜಿಪಿ ಎಂ.ಎನ್‌. ರೆಡ್ಡಿ ಅವರ ನೇತೃತ್ವದ ಪೊಲೀಸ್‌ ಆಧುನೀಕರಣ ಸಮಿತಿಯು ಪೊಲೀಸ್‌ ಇಲಾಖೆಯ ಮೂಲಸೌಕರ್ಯ ಮತ್ತು ತಾಂತ್ರಿಕ ಸಾಮರ್ಥ್ಯವನ್ನು ಪರಿಶೀಲಿಸಲಿದೆ. ತುರ್ತು ಪ್ರತಿಕ್ರಿಯೆ ವ್ಯವಸ್ಥೆ, ನಿಯಂತ್ರಣ ಕೊಠಡಿಗಳು, 112 ಸಹಾಯವಾಣಿ, ವಿಧಿವಿಜ್ಞಾನ ಪ್ರಯೋಗಾಲಯಗಳು, ವಾಹನಗಳು, ಸಂವಹನ ವ್ಯವಸ್ಥೆ, ಸೈಬರ್‌ ಅಪರಾಧ ನಿಭಾಯಿಸುವ ಸಾಮರ್ಥ್ಯ, ಕೃತಕ ಬುದ್ಧಿಮತ್ತೆ (ಎಐ) ಮತ್ತು ಡಿಜಿಟಲೀಕರಣದ ಬಳಕೆ ಇದರ ಪರಿಶೀಲನೆಯ ವ್ಯಾಪ್ತಿಯಲ್ಲಿವೆ. ಪೊಲೀಸ್‌ ತರಬೇತಿ, ವಸತಿ ಮತ್ತು ಸಿಬ್ಬಂದಿ ಕಲ್ಯಾಣದ ಬಗ್ಗೆಯೂ ಪರಿಶೀಲನೆ ನಡೆಸಿ, ತಕ್ಷಣದ ಅಗತ್ಯಗಳು ಹಾಗೂ ದೀರ್ಘಾವಧಿಯ ಯೋಜನೆಗಳನ್ನು ಒಳಗೊಂಡ ಆಧುನೀಕರಣದ ಕಾರ್ಯಯೋಜನೆ ರೂಪಿಸುವುದು ಈ ಸಮಿತಿಯ ಉದ್ದೇಶವಾಗಿದೆ.

ನಿವೃತ್ತ ಡಿಜಿಪಿ ಕಮಲ್‌ ಪಂತ್‌ ಅವರ ನೇತೃತ್ವದ ವೃಂದ ಮತ್ತು ನೇಮಕಾತಿ ನಿಯಮಗಳ ಪರಿಷ್ಕರಣಾ ಸಮಿತಿಯು ಪೊಲೀಸ್‌ ಇಲಾಖೆಯ ಹುದ್ದೆಗಳ ಸಂಖ್ಯೆ, ವೃಂದ ರಚನೆ, ನೇಮಕಾತಿ ನಿಯಮಗಳು ಮತ್ತು ಸಿಬ್ಬಂದಿಯ ಕಾರ್ಯಭಾರವನ್ನು ಪರಿಶೀಲಿಸಲಿದೆ. ನೇರ ನೇಮಕಾತಿ ಮತ್ತು ಬಡ್ತಿಯ ಅನುಪಾತ, ಹುದ್ದೆಗಳ ಸೃಷ್ಟಿ ಮತ್ತು ಮರು ವರ್ಗೀಕರಣ, ತರಬೇತಿ, ಬಡ್ತಿ ಅವಕಾಶಗಳು ಹಾಗೂ ವೃತ್ತಿಪರ ಬೆಳವಣಿಗೆಗೆ ಸಂಬಂಧಿಸಿದ ಶಿಫಾರಸುಗಳನ್ನು ರೂಪಿಸಲಿದೆ. ಪ್ರಸ್ತುತ ಮತ್ತು ಭವಿಷ್ಯದ ಅಗತ್ಯಗಳಿಗೆ ಅನುಗುಣವಾಗಿ ಮಾನವ ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಈ ಸಮಿತಿಯ ಗುರಿಯಾಗಿದೆ.

ಹಾಗಾದರೆ ಸುಧಾರಣೆ ಅಗತ್ಯವಿರುವುದೇಕೆ?

ಹಿರಿಯ ಐಪಿಎಸ್‌ ಅಧಿಕಾರಿಯೊಬ್ಬರು ಹೇಳುವಂತೆ, ಸಮಸ್ಯೆಯ ಗಂಟು ಅನಾವರಣಗೊಳ್ಳುವುದೇ ಸಾರ್ವಜನಿಕನೊಬ್ಬ ತನ್ನ ಅಳಲು ತೋಡಿಕೊಳ್ಳಲು ಪೊಲೀಸ್‌ ಠಾಣೆಯ ಮೆಟ್ಟಿಲೇರಿದಾಗ. ಅಲ್ಲಿ ಕುಳಿತಿರುವ ಸಿಬ್ಬಂದಿ ದಾಟಿ ಒಬ್ಬ ಇನ್ಸ್‌ಪೆಕ್ಟರನ್ನು ನೇರವಾಗಿ ಭೇಟಿಯಾಗುವುದೇ ದೊಡ್ಡ ಸಾಹಸದಂತೆ ಭಾಸವಾಗುತ್ತದೆ. ಅಪರಾಧ ನಡೆದ ತಕ್ಷಣ ಎಫ್‌ಐಆರ್ ದಾಖಲಾಗಬೇಕು ಎನ್ನುತ್ತದೆ ಕಾನೂನು. ಆದರೆ ಇಂದು ಒಂದು ಸಣ್ಣ ಎಫ್‌ಐಆರ್ ದಾಖಲಿಸುವುದೇ ದುಸ್ತರ. ಇನ್ನು ತನಿಖೆಯ ಗುಣಮಟ್ಟವಂತೂ ಸಂಪೂರ್ಣ ಅನುಮಾನದ ನೆರಳಿನಲ್ಲೇ ಸಾಗುತ್ತದೆ. ಎಲ್ಲಿ ಕಾಂಚಾಣ ಹರಿಯುತ್ತದೆಯೋ, ತನಿಖೆಯ ದಿಕ್ಕು ಮತ್ತು ನಿಲುವು ಸಹ ಸಹಜವಾಗಿಯೇ ಆ ದಿಕ್ಕಿಗೇ ವಾಲುತ್ತದೆ. ಇದೇ ವ್ಯವಸ್ಥೆಯ ರಕ್ತ ಹೀರುತ್ತಿರುವ ಭ್ರಷ್ಟಾಚಾರ.

ಈ ವ್ಯವಸ್ಥಿತ ರೋಗಗ್ರಸ್ತ ಸ್ಥಿತಿಯ ಮೂಲವನ್ನು ಹುಡುಕುತ್ತಾ ಹೋದರೆ ಮೊದಲು ಕಣ್ಣಿಗೆ ಬೀಳುವುದು ನೇಮಕಾತಿ ಹಂತ. ಕಾಲೇಜು ದಿನಗಳಲ್ಲಿ ಖಾಕಿ ತೊಟ್ಟು ಸಮಾಜ ಸೇವೆ ಮಾಡಬೇಕು, ಇಲ್ಲವೇ ದೇಶ ಸೇವೆ ಮಾಡಬೇಕು ಎಂಬ ಆದರ್ಶ ಕನಸು ಹೊತ್ತು ಪೊಲೀಸ್ ಹುದ್ದೆಯತ್ತ ಹೆಜ್ಜೆ ಇಡುವ ಯುವಕನೊಬ್ಬನ ಹಾದಿ ಸುಲಭವಾಗಿರಲ್ಲ. ಗೌರವಾನ್ವಿತ ಸರ್ಕಾರಿ ಉದ್ಯೋಗಕ್ಕಾಗಿಯೋ, ಬದುಕಿನ ಭದ್ರತೆಗಾಗಿಯೋ ಅಥವಾ ಸಮಾಜದಲ್ಲಿ ತಾನೊಬ್ಬ ನಾಯಕನಾಗಬೇಕು ಎಂಬ ಕನಸಿನೊಂದಿಗೆ ಈ ವೃತ್ತಿಗೆ ಕಾಲಿಡುತ್ತಾರೆ. ಆದರೆ ಆಫೀಸರ್ ಆಗಿ ಕುಳಿತುಕೊಳ್ಳುವಷ್ಟರಲ್ಲಿ ಆ ಯುವಕ ಹತ್ತು ಹಲವು ಹಾದಿಗಳಲ್ಲಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿರುತ್ತಾನೆ. ಹೀಗೆ ಹುದ್ದೆ ಗಿಟ್ಟಿಸಲು ಹೂಡಿದ ಬಂಡವಾಳವನ್ನು ವಾಪಸ್ ಪಡೆಯುವ ಅನಿವಾರ್ಯತೆ ಆತನಿಗೆ ಎದುರಾಗುತ್ತದೆ. ನೇಮಕಾತಿ, ಸೆಲೆಕ್ಷನ್ ಹಾಗೂ ಕಠಿಣ ತರಬೇತಿಯ ಪ್ರತಿ ಹಂತದಲ್ಲೂ ಕಳೆದುಕೊಂಡ ಹಣವನ್ನು, ಅಧಿಕಾರಕ್ಕೆ ಬಂದ ಮೇಲೆ ಹಲವು ಪಟ್ಟು ಡಬಲ್ ಮಾಡಿಕೊಳ್ಳುವ ವಿಕೃತ ಹಾದಿಯನ್ನು ಆತ ಆಯ್ಕೆ ಮಾಡಿಕೊಳ್ಳುತ್ತಾನೆ. ಇಂದು ವ್ಯವಸ್ಥೆಯಲ್ಲಿ ಇದು ಅತ್ಯಂತ ಸಹಜ ಎಂಬಂತೆ ಬಿಂಬಿತವಾಗಿರುವುದು ವಿಪರ್ಯಾಸ. ಈ ವ್ಯವಸ್ಥಿತ ಪಿಡುಗಿಗೆ ಮೊದಲು ಕಡಿವಾಣ ಬಿದ್ದಾಗ ಮಾತ್ರ ಇಲಾಖೆಯಲ್ಲಿ ನಿಜವಾದ ಬದಲಾವಣೆ ಸಾಧ್ಯ.

ಪೊಲೀಸ್‌ ಠಾಣೆಗಳ ನಿರ್ವಹಣೆಗೆ ಸರ್ಕಾರ ನೀಡುವ ವೆಚ್ಚಕ್ಕೂ, ವಾಸ್ತವಿಕವಾಗಿ ಬೇಕಾಗುವ ವೆಚ್ಚಕ್ಕೂ ಇರುವ ಅಂತರ ದೊಡ್ಡದಾಗಿದೆ. ಠಾಣೆಯ ತಿಂಗಳ ನಿರ್ವಹಣಾ ವೆಚ್ಚವೇ ಲಕ್ಷಗಳನ್ನು ದಾಟಿರುತ್ತದೆ. ಆದರೆ ಸರ್ಕಾರ ಕೊಡೋದು ಸಾವಿರಗಳಲ್ಲಿ. ಈ ಅನುದಾನದ ಕೊರತೆಯೇ ವ್ಯವಸ್ಥೆಯೊಳಗೆ ನಾನಾ ರೀತಿಯ ಅನೌಪಚಾರಿಕ ವಸೂಲಿಗೆ ಫಲವತ್ತಾದ ಭೂಮಿ ಸೃಷ್ಟಿಸಿಬಿಡುತ್ತದೆ. ಠಾಣೆಗಳ ತಳಮಟ್ಟದ ನೈಜ ಅಗತ್ಯಗಳನ್ನು ಗುರುತಿಸಿ ಮುಕ್ತವಾಗಿ ಅನುದಾನ ಒದಗಿಸುವುದು ಕೂಡ ಬದಲಾವಣೆಯ ಮೊದಲ ಹೆಜ್ಜೆಯಾಗಬಹುದು.

ಇನ್ನು ಪೊಲೀಸ್‌ ವ್ಯವಸ್ಥೆಯ ಸುಧಾರಣೆಗೆ ತರಲು ಪ್ರಸ್ತಾವಿಸುತ್ತಿರುವ AI, ಹೈಟೆಕ್ ಉಪಕರಣಗಳು ಕೇವಲ ಕೆಲಸದ ವೇಗವನ್ನು ಹೆಚ್ಚಿಸಬಹುದೇ ಹೊರತು ಪ್ರಾಮಾಣಿಕತೆಯನ್ನು ತಂದುಕೊಡಲಾರವು. ಕೆಲಸದಲ್ಲಿ ಎಐ ಅಳವಡಿಸಿಕೊಳ್ಳಬಹುದು ಆದರೆ, ಅದನ್ನ ನಿರ್ವಹಿಸುವುದು ಮನುಷ್ಯನೇ. ಆ ಕೈಗಳ ಪ್ರಾಮಾಣಿಕತೆ, ಕಠಿಣ ತರಬೇತಿ ಮತ್ತು ಹೊಣೆಗಾರಿಕೆ ಮಾತ್ರ ಡೊಂಕಾದ ವ್ಯವಸ್ಥೆಯನ್ನು ನೇರವಾಗಿಸಬಲ್ಲವು.

ಇದನ್ನೂ ಓದಿ: ಈ ದಿನ ಸಂಪಾದಕೀಯ | ಯಾದಗಿರಿ ಬಾಲಕಿಯರ ಅನುಮಾನಾಸ್ಪದ ಸಾವು; ಸಂಶಯಕ್ಕೆ ತೆರೆ ಎಳೆಯಬೇಕಿದೆ ಪೊಲೀಸ್‌ ಇಲಾಖೆ

ಈ ಎಲ್ಲದರ ಜೊತೆಗೆ, ಖಾಕಿ ತೊಟ್ಟವನ ಮನುಷ್ಯತ್ವ ಮತ್ತು ಸಾರ್ವಜನಿಕರೊಂದಿಗೆ ಆತ ನಡೆದುಕೊಳ್ಳುವ ಕೀಳು ವರ್ತನೆಯೂ ಬುಡ ಸಮೇತ ಬದಲಾಗಬೇಕಿದೆ. ಠಾಣೆಯ ಹೊಸ್ತಿಲು ತುಳಿಯುವ ಅಸಹಾಯಕ ವ್ಯಕ್ತಿಯೊಬ್ಬನ ಆರ್ಥಿಕ ಸ್ಥಿತಿ, ಆತನ ಜಾತಿ, ಸಾಮಾಜಿಕ ಹಿನ್ನೆಲೆ ಅಥವಾ ವಿದ್ಯೆಯ ಮಟ್ಟವನ್ನು ನೋಡಿ ತಿರಸ್ಕಾರದಿಂದ ನಡೆಸಿಕೊಳ್ಳುವ ದರ್ಪ ಕೊನೆಯಾಗಬೇಕು. ಬಂದು ನಿಲ್ಲುವ ಪ್ರತಿಯೊಬ್ಬರಿಗೂ ಗೌರವಯುತವಾಗಿ ಸ್ಪಂದಿಸುವುದು, ಅವರ ಅಳಲನ್ನು ತಾಳ್ಮೆಯಿಂದ ಆಲಿಸುವುದು ಮತ್ತು ಕಾನೂನು ಪ್ರಕ್ರಿಯೆಗಳನ್ನು ಸರಳವಾಗಿ ವಿವರಿಸುವುದು ಮಾತ್ರವೇ ಜನಸಾಮಾನ್ಯರ ಮನಸ್ಸಿನಲ್ಲಿ ಪೊಲೀಸ್ ಇಲಾಖೆಯ ಮೇಲಿನ ವಿಶ್ವಾಸವನ್ನು ಮರಳಿ ತರಬಲ್ಲದು. ಇದಕ್ಕಾಗಿ ಸಿಬ್ಬಂದಿಗೆ ನಿರಂತರ ನಡವಳಿಕೆ ತರಬೇತಿ ನೀಡಿ, ಸಾರ್ವಜನಿಕ ಸಂಪರ್ಕ ಹಾಗೂ ಸಮುದಾಯ ಪೊಲೀಸ್‌ ವ್ಯವಸ್ಥೆಯನ್ನು ಬಲಪಡಿಸುವುದು ಅನಿವಾರ್ಯವಾಗಿದೆ ಎನ್ನುತ್ತಾರವರು.

ಹಳ್ಳ ಹಿಡಿದಿರುವ ಪೊಲೀಸ್ ಇಲಾಖೆಗೆ ಮೇಲ್ಮೈ ಪರಿಹಾರ ಎಂದಿಗೂ ನೈಜ ಕಾಯಕಲ್ಪ ನೀಡಲು ಸಾಧ್ಯವಿಲ್ಲ. ಸಮಸ್ಯೆಯ ಮೂಲವನ್ನು ಕೆದಕಿ ಸೂಕ್ತ ಪರಿಹಾರ ಕಂಡುಕೊಳ್ಳುವುದು ಅತ್ಯಂತ ತುರ್ತಾಗಿ ಬೇಕಾಗಿದೆ. ನೇಮಕಾತಿ ಹಂತದ ಪಾರದರ್ಶಕತೆಯಿಂದ ಹಿಡಿದು ಠಾಣೆಯ ದೈನಂದಿನ ಕಾರ್ಯನಿರ್ವಹಣೆಯವರೆಗೆ ಎಲ್ಲೆಡೆ ಹೊಣೆಗಾರಿಕೆ ನೆಲೆಸಿದಾಗ ಮಾತ್ರ ಪೊಲೀಸ್‌ ಇಲಾಖೆಯೊಂದಿಗೆ ಸವೆದುಹೋದ ಜನರ ನಂಬಿಕೆ ಮರುಹುಟ್ಟಲು ಸಾಧ್ಯ. ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯವೇನು ಎಂಬುದನ್ನು ತಿಳಿದಿಕೊಳ್ಳುವುದರ ಜತೆಗೆ ದೇಶ ಹಾಗೂ ರಾಜ್ಯದಲ್ಲಿ ಹಿಂದೆ ರಚನೆಯಾದ ಹಲವಾರು ಪೊಲೀಸ್ ಆಯೋಗಗಳ ವರದಿಗಳು ಹೇಗೆ ಧೂಳು ಹಿಡಿದವು, ಸಿಬ್ಬಂದಿ ಕೊರತೆ, ದೀರ್ಘ ಕೆಲಸದ ಅವಧಿ, ಪೊಲೀಸ್ ಸಿಬ್ಬಂದಿಯ ಒತ್ತಡ, ಜನಸ್ನೇಹಿ ಪೊಲೀಸ್ ವ್ಯವಸ್ಥೆ ಸಾಧ್ಯವೇ?, ಡಿಜಿಟಲ್ ಪೊಲೀಸ್ ವ್ಯವಸ್ಥೆ, ರಾಜಕೀಯ ಸ್ವಾಯತ್ತತೆ ಮತ್ತು ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನೂ ವಿಶ್ಲೇಷಿಸುವುದು ಅತೀ ಮುಖ್ಯ.

….ಮುಂದುವರೆಯುತ್ತದೆ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳದ ಸಾವಿನ ಪ್ರಮಾಣದಲ್ಲಿ ವ್ಯತ್ಯಾಸ; ನಿಜ ಪತ್ತೆಗೆ ಎಸ್‌ಐಟಿಗೆ ಸರ್ಕಾರದಿಂದ ಪೂರಕ ಬೆಂಬಲ ಅಗತ್ಯ: ಮಹಿಳಾ ಆಯೋಗದ ಅಧ್ಯಕ್ಷೆ

ಧರ್ಮಸ್ಥಳ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಸಾವುಗಳು...

ಅಮೆರಿಕದ ಗುಪ್ತಚರರಿಗೇ ಸುಳಿವು ನೀಡದೆ ಉಪಗ್ರಹ ಹೊಡೆದುರುಳಿಸಿದ್ದ ಭಾರತದ ಕ್ಷಿಪಣಿ

ದಶಕಗಳ ಬಳಿಕ, 2019ರಲ್ಲಿ 'ಮಿಷನ್ ಶಕ್ತಿ' ಕಾರ್ಯಾಚರಣೆಯ ಮೂಲಕ ಉಪಗ್ರಹ...

ಈ ದಿನ ಸಂಪಾದಕೀಯ | ಡಿಕೆಶಿ ಪ್ರತಿರೋಧಕ್ಕೆ ಮಣಿದ ಚುನಾವಣಾ ಆಯೋಗ; ಈವರೆಗಿನ ಅಕ್ರಮಗಳಿಗೆ ಹೊಣೆ ಯಾರು?

ಕರ್ನಾಟಕದಲ್ಲಿ ಎಸ್‌ಐಆರ್‌ ಆರಂಭವಾಗುವ ಮೊದಲೇ ನಾಗರಿಕ ಸಂಘಟನೆಗಳು ಕಾಂಗ್ರೆಸ್‌ ಗೆ ಎಸ್‌ಐಆರ್‌...