ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್ ಹೆಸರಿನಲ್ಲಿ ಸುಮಾರು 13 ಕೋಟಿಗೂ ಅಧಿಕ ಅರ್ಹ ಮತದಾರರನ್ನು ಮತಪಟ್ಟಿಯಿಂದ ಅಳಿಸಿಹಾಕುವ ಷಡ್ಯಂತ್ರಗಳು ನಡೆಸುತ್ತಿದೆ. ಈ ಕುತಂತ್ರವನ್ನು ಮೊದಲೇ ಅರಿತಿದ್ದ ರಾಹುಲ್ ಗಾಂಧಿ ಅವರು ಬಿಜೆಪಿಯೊಂದಿಗೆ ಚುನಾವಣಾ ಆಯೋಗ ಶಾಮೀಲಾಗಿ ‘ವೋಟ್ ಚೋರಿ’ ನಡೆಸುತ್ತಿವೆ ಎಂದು ದೇಶಾದ್ಯಂತ ಬೃಹತ್ ಅಭಿಯಾನ ನಡೆಸಿದರು. ಆದರೆ, ಇದು ರಾಹುಲ್ ಗಾಂಧಿ ಅವರಿಗೇ ಸೀಮಿತವಾಯಿತೇ ಹೊರತು, ಅವರೇನು ಹೇಳುತ್ತಿದ್ದಾರೆ ಎಂಬುದು ಕಾಂಗ್ರೆಸ್‌ನ ಇತರ ನಾಯಕರು ಗ್ರಹಿಸಲೇ ಇಲ್ಲ. ಈಗ, ದೇಶದ 17 ರಾಜ್ಯಗಳಲ್ಲಿ ಎಸ್‌ಐಆರ್ ಕಡೆಯ ಹಂತಕ್ಕೆ ತಲುಪಿದೆ. ಇದೀಗ, ತಡವಾಗಿಯಾದರೂ ಕರ್ನಾಟಕ ಮತ್ತು ತೆಲಂಗಾಣದ ಮುಖ್ಯಮಂತ್ರಿಗಳಿಗೆ ಎಸ್‌ಐಆರ್‌ನ ಅಪಾಯ ಮತ್ತು ಷಡ್ಯಂತ್ರಗಳು ಚೆನ್ನಾಗಿ ಮನವರಿಕೆಯಾಗಿವೆ. ಇಬ್ಬರೂ ಎಚ್ಚೆತ್ತುಕೊಂಡಿದ್ದಾರೆ. ಬೀದಿಗಿಳಿದು ಹೋರಾಟಕ್ಕೆ ಮುಂದಾಗಿದ್ದಾರೆ.
ಅದರಲ್ಲೂ, ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮತ್ತು ಪಶ್ವಿಮ ಬಂಗಾಳದ ಹಿಂದಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಎಸ್‌ಐಆರ್ ವಿರುದ್ಧ ತೋರಿದ ಧೈರ್ಯ ಮತ್ತು ಹಿಡಿದ ಹೋರಾಟದ ಹಾದಿ ದೇಶದ ಇಡೀ ವಿಪಕ್ಷಗಳ ನಾಯಕರಿಗೆ ಹೊಸ ದಿಕ್ಸೂಚಿಯಾಗಿ ನಿಂತಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಲು ಈ ಇಬ್ಬರು ನಾಯಕರು ಅನುಸರಿಸಿದ ತಂತ್ರಗಳು ಮತ್ತು ತೋರಿದ ಮನೋಭಾವವು ಚುನಾವಣಾ ರಾಜಕಾರಣದಲ್ಲಿ ಹೊಸ ಇತಿಹಾಸವನ್ನೇ ಬರೆದಿದೆ.
ಕರ್ನಾಟಕದಲ್ಲಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಅಕ್ರಮವಾಗಿ ತೆಗೆದುಹಾಕಲು ‘ಫಾರ್ಮ್-7’ ಅರ್ಜಿಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಗಂಭೀರ ಆರೋಪಗಳನ್ನು ನಾಗರಿಕ ಸಂಘಟನೆಗಳು ಸರ್ಕಾರದ ಗಮನಕ್ಕೆ ತಂದವು. ಈ ವಿಚಾರವಾಗಿ ಎಚ್ಚೆತ್ತ ಡಿ.ಕೆ. ಶಿವಕುಮಾರ್, ಎಸ್‌ಐಆರ್ ವಿರೋಧಿ ಹೋರಾಟವನ್ನು ಕೈಗೆತ್ತಿಕೊಂಡ ರೀತಿ ಅತ್ಯಂತ ಯೋಜಿತವಾಗಿತ್ತು ಮತ್ತು ತಂತ್ರಗಾರಿಕೆಯಿಂದ ಕೂಡಿತ್ತು. ಅವರು ಕೇವಲ ಸಾಂಪ್ರದಾಯಿಕ ಪತ್ರಿಕಾಗೋಷ್ಠಿ ನಡೆಸಿ ಸುಮ್ಮನಾಗಲಿಲ್ಲ. ನೇರವಾಗಿ ತಮ್ಮ ಸಚಿವರು ಮತ್ತು ಶಾಸಕರೊಂದಿಗೆ ಚುನಾವಣಾ ಆಯೋಗದ ಕಚೇರಿಗೆ ತೆರಳಿ ಧರಣಿ ಕುಳಿತರು. ಅಧಿಕಾರ ವರ್ಗ ಮತ್ತು ಬಿಜೆಪಿ ಏಜೆಂಟ್‌ಗಳ ಅಕ್ರಮವನ್ನು ಜಗಜ್ಜಾಹೀರುಗೊಳಿಸಿದರು. ಮತದಾರರ ಪಟ್ಟಿಯಿಂದ ನಿರ್ದಿಷ್ಟ ಸಮುದಾಯ ಅಥವಾ ವಿಪಕ್ಷಗಳ ಬೆಂಬಲಿಗರ ಹೆಸರುಗಳನ್ನು ಅಳಿಸಲು ಅಕ್ರಮವಾಗಿ ಮತ್ತು ಸುಳ್ಳು ಮಾಹಿತಿಯೊಂದಿಗೆ ಫಾರ್ಮ್-7 ಸಲ್ಲಿಸುತ್ತಿದ್ದ ಬಿಜೆಪಿಯ ಬಿಎಲ್‌ಎಗಳ ವಿರುದ್ಧ ತಕ್ಷಣವೇ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಗಿಪಟ್ಟು ಹಿಡಿದರು.
ಆಡಳಿತಾರೂಢ ಸರ್ಕಾರದಲ್ಲಿದ್ದುಕೊಂಡೇ, ವ್ಯವಸ್ಥೆಯ ಲೋಪಗಳ ವಿರುದ್ಧ ಚುನಾವಣಾ ಆಯೋಗದ ಮನೆ ಬಾಗಿಲಿಗೆ ಹೋಗಿ ಪ್ರತಿಭಟನೆ ನಡೆಸುವುದು ಸುಲಭದ ನಿರ್ಧಾರವಲ್ಲ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಮುಖ್ಯಮಂತ್ರಿಯೊಬ್ಬರು ಚುನಾವಣಾ ಆಯೋಗದ ಕಚೇರಿಗೆ ತೆರಳಿದ್ದು, ಅದರಲ್ಲೂ ಪಟ್ಟು ಹಿಡಿದು ಧರಣಿ ಕುಳಿತದ್ದು ಇದೇ ಮೊದಲು. ಅಂತಹದೊಂದು ಇತಿಹಾಸವನ್ನು ಡಿ.ಕೆ ಶಿವಕುಮಾರ್ ಬರೆದರು. ಮಾತ್ರವಲ್ಲ, “ಅಲ್ಪಸಂಖ್ಯಾತರು, ಬಡವರು ಮತ್ತು ಮತದಾರರ ಹಿತ ಕಾಪಾಡಲು ಸಾಧ್ಯವಿಲ್ಲ ಎಂದಾದರೆ, ನಾನು ಮುಖ್ಯಮಂತ್ರಿಯಾಗಿರಲು ಅರ್ಹನಲ್ಲ” ಎಂದ ಅವರ ಮಾತು ಪ್ರಜಾತಂತ್ರದ ಬುನಾದಿಯನ್ನು ಭದ್ರಪಡಿಸುವ ಆಶಾವಾದವನ್ನು ಹುಟ್ಟಿಸಿತು.
ಡಿ.ಕೆ. ಶಿವಕುಮಾರ್ ಅವರ ಈ ಐತಿಹಾಸಿಕ ಧರಣಿ ಮತ್ತು ಹೋರಾಟದ ಹಿಂದೆ ನಾಗರಿಕ ಸಮಾಜದ ಪಾತ್ರ ಅತ್ಯಂತ ಪ್ರಮುಖವಾಗಿತ್ತು. ‘ಮತ ಕಾವಲು ಸಮಿತಿ’, ‘ಎಸ್‌ಐಆರ್ ವಿರೋಧಿ ಒಕ್ಕೂಟ’, ‘ನಮ್ಮ ಮತ ನಮ್ಮ ಹಕ್ಕು’, ‘ಜಾಗೃತ ಕರ್ನಾಟಕ’ ಹಾಗೂ ಎಡಪಕ್ಷಗಳಂತಹ ತಳಮಟ್ಟದ ನಾಗರಿಕ ಸಂಘಟನೆಗಳು ಈ ಹುನ್ನಾರದ ವಿರುದ್ಧ ನಿರಂತರವಾಗಿ ಸರ್ಕಾರಕ್ಕೂ ಜಾಗೃತಿ ಮೂಡಿಸಿದವು. ವಿಶೇಷವಾಗಿ, ‘ಮತ ಕಾವಲು ಸಮಿತಿ’ಯು ರಾಜ್ಯಾದ್ಯಂತ ಸುಮಾರು ವಿಧಾನಸಭಾ ಕ್ಷೇತ್ರಗಳಲ್ಲಿ ಅಭಿಯಾನ ನಡೆಸಿ, ಎಸ್‌ಐಆರ್‌ನಿಂದ ತೊಂದರೆ ಅನುಭವಿಸಿದ ಅರ್ಹ ಮತದಾರರನ್ನು ಸಂಪರ್ಕಿಸಿ, ಅವರ ಅಳಲು, ಆತಂಕ, ಅಹವಾಲುಗಳನ್ನು ಆಲಿಸಿ ನೆಲಮಟ್ಟದ ನಿಜ ವರದಿಗಳನ್ನು ಚಳವಳಿಯ ಮುಂಚೂಣಿಗೆ ತಂದಿತು. ನಟ ಪ್ರಕಾಶ್ ರಾಜ್ ನೇತೃತ್ವದಲ್ಲಿ ಹಲವು ಪ್ರತಿನಿಧಿಗಳು ಡಿ.ಕೆ. ಶಿವಕುಮಾರ್ ಅವರನ್ನು ಸತತವಾಗಿ ಭೇಟಿಯಾಗಿ, ಮತದಾರರ ಪಟ್ಟಿಯಲ್ಲಿ ಆಗುತ್ತಿರುವ ಅಕ್ರಮಗಳ ದತ್ತಾಂಶ, ಪ್ರಕ್ರಿಯಾತ್ಮಕ ಸಮಸ್ಯೆಗಳನ್ನು ಎಳೆಎಳೆಯಾಗಿ ವಿವರಿಸಿ, ಅರ್ಥೈಸಿದರು.
ನಾಗರಿಕ ಸಂಘಟನೆಗಳು ನೀಡಿದ ಈ ನಿಖರ ಮಾಹಿತಿಯನ್ನು ರಾಜಕೀಯ ಅಸ್ತ್ರವಾಗಿ ಪರಿವರ್ತಿಸಿಕೊಂಡ ಶಿವಕುಮಾರ್, ಅದನ್ನು ಬೃಹತ್ ಹೋರಾಟದ ಮೊದಲ ಹೆಜ್ಜೆಯಾಗಿ ಪವರ್ತಿಸಿಕೊಂಡರು. ಚುನಾವಣಾ ಆಯೋಗದ ಕಚೇರಿಯಲ್ಲಿ ಪಟ್ಟುಹಿಡಿದು ಕೂರುವ ನಿರ್ಣಾಯಕ ನಿರ್ಧಾರ ತೆಗೆದುಕೊಂಡು, ತಮ್ಮ ತಂಡದ ಜೊತೆಗೆ, ಆಯೋಗದ ಕಚೇರಿಯಲ್ಲಿ ಮೊಕ್ಕಾಂ ಹೂಡಿದರು. ಅಕ್ರಮವಾಗಿ ಫಾರ್ಮ್-7 ಸಲ್ಲಿಸಿದ್ದ ಬಿಜೆಪಿಯ ಬಿಎಲ್‌ಎಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಇಆರ್‌ಒಗಳಿಗೆ ಚುನಾವಣಾ ಅಧಿಕಾರಿಗಳು ನಿರ್ದೇಶನ ನೀಡುವಂತೆ ಮಾಡಿದರು. ಇದು, ಅಕ್ಷರಶಃ ರಾಜ್ಯದ ನಾಗರಿಕ ಸಂಘಟನೆಗಳು ಮತ್ತು ಕಾರ್ಯಕರ್ತರು ಮಾಡಿದ ಸುರ್ದೀರ್ಘ ಹೋರಾಟ ಮತ್ತು ಪರಿಶ್ರಮಕ್ಕೆ ಫಲ ಮತ್ತು ಒಂದು ಹಂತದ ಯಶಸ್ಸು ತಂದಿತು.
ಇದೇ ರೀತಿಯಲ್ಲಿ ಎಸ್‌ಐಆರ್ ವಿರುದ್ಧ ಮತ್ತಷ್ಟು ದಿಟ್ಟ ಹೋರಾಟ ನಡೆಸಿದವರು ಮಮತಾ ಬ್ಯಾನರ್ಜಿ. ಪಶ್ಚಿಮ ಬಂಗಾಳದ ಪರಿಸ್ಥಿತಿ ತೀರಾ ಭಿನ್ನವಾಗಿತ್ತು ಮತ್ತು ಸವಾಲಿನಿಂದ ಕೂಡಿತ್ತು. ಬಿಜೆಪಿ ಅಧಿಕಾರಕ್ಕೇರಲು ಎಸ್‌ಐಆರ್‌ಅನ್ನು ಅಸ್ತ್ರವಾಗಿ ಬಳಸಲಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಅರಿತ ಮಮತಾ, ಮತದಾರರ ಹಕ್ಕುಗಳನ್ನು ರಕ್ಷಿಸಲು ಕಾವಲುಗಾರ್ತಿಯಾಗಿ ನಿಂತರು. ತಮ್ಮ ಜನಪ್ರಿಯತೆ ಮತ್ತು ಸುದೀರ್ಘ ಬೀದಿ ಹೋರಾಟದ ಅನುಭವದೊಂದಿಗೆ ಏಕಾಂಗಿಯಾಗಿ ಬೀದಿಗಳಿದರು. ಲಕ್ಷಾಂತರ ಜನರನ್ನು ಒಗ್ಗೂಡಿಸಿ ಬೃಹತ್ ಹೋರಾಟಗಳನ್ನು ನಡೆಸಿದರು. ಅಷ್ಟುಮಾತ್ರವಲ್ಲ, ಕಾನೂನು ಸಮರಕ್ಕೂ ಇಳಿದರು.
2026ರ ಫೆಬ್ರವರಿ 4ರಂದು, ಆಗ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಮಮತಾ, ಎಸ್‌ಐಆರ್ ವಿರುದ್ಧದ ಪ್ರಕರಣದ ವಿಚಾರಣೆಗೆ ಸ್ವತಃ ಸುಪ್ರೀಂ ಕೋರ್ಟ್‌ಗೆ ಹಾಜರಾದರು. ಕಾನೂನು ಪದವಿ ಹೊಂದಿರುವ ಅವರು, ಸ್ವತಃ ಕಪ್ಪು ಕೋಟು ಧರಿಸಿ ವಕೀಲರಾಗಿ ತಮ್ಮ ರಾಜ್ಯದ ಮತದಾರರ ಪರವಾಗಿ ಕೋರ್ಟ್ ಕಟಕಟೆಯಲ್ಲಿ ನಿಂತು ಸುದೀರ್ಘ ವಾದ ಮಂಡಿಸಿದರು. ರಾಜ್ಯದ ಮುಖ್ಯಮಂತ್ರಿಯಾಗಿ, ಸಾರ್ವಜನಿಕರ ಮತದ ಹಕ್ಕಿಗಾಗಿ ಕಪ್ಪು ಕೋಟು ಧರಿಸಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ ಆ ದೃಶ್ಯ ಭಾರತೀಯ ರಾಜಕೀಯ ಇತಿಹಾಸದಲ್ಲೇ ಅಪರೂಪದ್ದು. ಆದರೂ, ಎಸ್‌ಐಆರ್ ವಿರುದ್ಧದ ಅವರ ಹೋರಾಟಕ್ಕೆ ನ್ಯಾಯಾಂಗದಲ್ಲಿಯೂ ಫಲ ದೊರೆಯದೇ ಹೋದದ್ದು ಪ್ರಜಾತಂತ್ರದ ಅಣಕವೇ ಆಗಿತ್ತು.
ಇದೇ ಸಂದರ್ಭದಲ್ಲಿ, ದಕ್ಷಿಣ ಭಾರತದ ಇತರ ರಾಜ್ಯಗಳಾದ ತೆಲಂಗಾಣ, ಕೇರಳ ಹಾಗೂ ತಮಿಳುನಾಡಿನಲ್ಲೂ ಎಸ್‌ಐಆರ್ ವಿರುದ್ಧದ ಹೋರಾಟಗಳು ತಮ್ಮದೇ ಆದ ವಿಶಿಷ್ಟ ಸ್ವರೂಪವನ್ನು ಪಡೆದುಕೊಂಡಿದ್ದವು. ತೆಲಂಗಾಣದಲ್ಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ‘ಎಸ್‌ಐಆರ್ ಮೂಲಕ ಬಿಜೆಪಿ ವಿರೋಧಿ ಮತಗಳನ್ನು ತೆಗೆದುಹಾಕುವ ಯತ್ನ ನಡೆಯುತ್ತಿದೆ’ ಎಂದು ಆರೋಪಿಸಿ, ಪಕ್ಷದ ಕಾರ್ಯಕರ್ತರನ್ನು ಎಚ್ಚರಿಸುವ ಮೂಲಕ ರಾಜಕೀಯ ಪ್ರತಿರೋಧ ಕಟ್ಟಲು ಯತ್ನಿಸಿದರು. ಕೇರಳದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಸರ್ಕಾರವು 2025ರ ನವಂಬರ್‌ನಲ್ಲಿ ಸರ್ವಪಕ್ಷ ಸಭೆ ಕರೆದು, ಎಸ್‌ಐಆರ್ ವಿರುದ್ಧ ಕಾನೂನು ಹೋರಾಟ ನಡೆಸಿತು. ಮಾತ್ರವಲ್ಲದೆ, ಎಲ್ಲ ಮತದಾರರಿಗೂ ಅಗತ್ಯವಿದ್ದ ‘ಶಾಶ್ವತ ನಿವಾಸಿ ಪ್ರಮಾಣಪತ್ರ’ವನ್ನು ವಿತರಿಸಿತು. ಮತಪಟ್ಟಿಯಲ್ಲಿ ಹೆಚ್ಚಿನ ಮತಗಳು ಅಳಿಸಿಹೋಗದಂತೆ ನೋಡಿಕೊಂಡಿತು.
ಈ ಲೇಖನ ಓದಿದ್ದೀರಾ?: SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ: ಪ್ರಜಾಪ್ರಭುತ್ವದ ಹಕ್ಕನ್ನೇ ಕಸಿಯುವ ಹುನ್ನಾರ!
ಇನ್ನು ತಮಿಳುನಾಡಿನಲ್ಲಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಆರಂಭದಲ್ಲಿ ತಮ್ಮ ಸಂಘಟನಾ ಬಲದ ಅತಿಯಾದ ಆತ್ಮವಿಶ್ವಾಸದಲ್ಲಿತ್ತು. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಎನ್ಯುಮರೇಷನ್ ಫಾರ್ಮ್‌ಅನ್ನು ಸರಿಯಾಗಿ ತುಂಬುವಲ್ಲಿ ಮತದಾರರಿಗೆ ನೆರವು ನೀಡಲು ತಮ್ಮ ಕಾರ್ಯಕರ್ತರನ್ನು ಕಣಕ್ಕಿಳಿಸಿತು. ಆದರೆ, ಎನ್ಯುಮರೇಷನ್ ಫಾರ್ಮ್ ಭರ್ತಿ ನಂತರ ನಡೆಯಲಿದ್ದ ಎಸ್‌ಐಆರ್ ಹುನ್ನಾರವನ್ನು ಆಳವಾಗಿ ಅರ್ಥೈಸಿಕೊಳ್ಳುವಲ್ಲಿ ವಿಫಲವಾಯಿತು., ಕಡೆಯ ಸಮಯದಲ್ಲಿ ಎಚ್ಚೆತ್ತುಕೊಂಡು 2025ರ ಅಕ್ಟೋಬರ್ 27ರ ಎಸ್‌ಐಆರ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಆದರೆ, ಆ ವೇಳೆಗೆ, ಹಲವು ಮತದಾರರ ಹೆಸರುಗಳು ಆಯೋಗದ ಕಸದ ಬುಟ್ಟಿ ಸೇರಿದ್ದವು. ನಂತರ ನಡೆದ ಚುನಾವಣೆಯಲ್ಲಿ ಸ್ಟಾಲಿನ್ ಸರ್ಕಾರವೂ ಪತನಗೊಂಡಿತು.
ಈ ಎಲ್ಲ ರಾಜ್ಯಗಳ ಪ್ರಯತ್ನಗಳ ನಡುವೆಯೂ, ಡಿ.ಕೆ ಶಿವಕುಮಾರ್ ಮತ್ತು ಮಮತಾ ಬ್ಯಾನರ್ಜಿ ಅವರು ಪ್ರದರ್ಶಿಸಿದ ‘ಶೌರ್ಯ’ ಮತ್ತು ಧೈರ್ಯ ಗಮನಾರ್ಹವಾದ್ದು. ಇಬ್ಬರೂ ಎಸ್‌ಐಆರ್ ಅನ್ನು ಕೇವಲ ತಾಂತ್ರಿಕ ಅಥವಾ ಆಡಳಿತಾತ್ಮಕ ವಿವಾದವಾಗಿ ನೋಡದೆ, ‘ಮತದಾರರ ಹೆಸರೇ ಪ್ರಜಾಪ್ರಭುತ್ವ ಅಡಿಗಲ್ಲು’ ಎಂಬುದನ್ನು ಅರ್ಥೈಸಿಕೊಂಡು, ಹೋರಾಟದ ಕಣಕ್ಕೆ ಧುಮುಕಿದರು.
ಡಿ.ಕೆ. ಶಿವಕುಮಾರ್ ಆಯೋಗದ ಕಚೇರಿಯ ಬಾಗಿಲಿಗೆ ಹೋಗಿ ಕ್ರಮಕ್ಕೆ ಅಗ್ರಹಿಸಿದರು; ಮಮತಾ ಬ್ಯಾನರ್ಜಿ ಬೀದಿಯಿಂದ ಸುಪ್ರೀಂ ಕೋರ್ಟ್‌ವರೆಗೆ ಹೋಗಿ ಸಮರ ಸಾರಿದರು. ಸಾಂವಿಧಾನಿಕ ಸಂಸ್ಥೆಗಳನ್ನು ಸಂವಿಧಾನದ ಚೌಕಟ್ಟಿನೊಳಗೇ ನೇರವಾಗಿ ಪ್ರಶ್ನಿಸಬಹುದು, ಬೀದಿಯಲ್ಲೂ ಮತ್ತು ನ್ಯಾಯಾಲಯದಲ್ಲೂ ಹೋರಾಡಬಹುದು ಎಂಬುದನ್ನು ನಿರೂಪಿಸಿದರು.
ವಿಪಕ್ಷಗಳ ದನಿಯು ಕೇವಲ ಟ್ವೀಟ್‌ಗಳು, ಸುದ್ದಿಗೋಷ್ಠಿ ಅಥವಾ ಸಂಸತ್ತಿನ ಭಾಷಣಗಳಿಗೆ ಸೀಮಿತವಾಗುತ್ತಿದೆ ಎಂಬ ಆರೋಪಗಳಿದ್ದ ಸಮಯದಲ್ಲಿ, ಈ ಇಬ್ಬರು ನಾಯಕರು ತೋರಿದ ದಿಟ್ಟ ನಡೆ ಉಳಿದೆಲ್ಲ ವಿಪಕ್ಷಗಳ ನಾಯಕರಿಗೆ ಮಾದರಿ.



