ಮತದಾರರ ಪಟ್ಟಿಯಿಂದ ಅಕ್ರಮವಾಗಿ ಹೆಸರುಗಳನ್ನು ಕೈಬಿಟ್ಟಿರುವುದು ಹಾಗೂ ಚುನಾವಣಾ ಅಕ್ರಮಗಳನ್ನು ಖಂಡಿಸಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ತ್ವರಿತ ರಾಜೀನಾಮೆಗೆ ಆಗ್ರಹಿಸಿ ‘ಕಾಕ್‌ರೋಚ್ ಜನತಾ ಪಾರ್ಟಿ’ (ಸಿಜೆಪಿ) ಮುಂಬೈನಲ್ಲಿ ಬೃಹತ್ ಪ್ರತಿಭಟನೆ ನಡೆಸಿದೆ. ಒಂದು ವೇಳೆ ಸಿಇಸಿ ಸ್ಥಾನಕ್ಕೆ ಗ್ಯಾನೇಶ್ ರಾಜೀನಾಮೆ ನೀಡದಿದ್ದರೆ, ಅಕ್ಟೋಬರ್ 10 ರಂದು ದೇಶಾದ್ಯಂತ ಇರುವ ಪ್ರತಿಭಟನಾಕಾರರು ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಮಟ್ಟದಲ್ಲಿ ಜಮಾಯಿಸಿ ‘ದೆಹಲಿ ಚಲೋ’ (ಜಂತರ್ ಮಂತರ್ 2.0) ನಡೆಸಲಿದ್ದಾರೆ ಎಂದು ಸಿಜೆಪಿ ನಾಯಕ ಅಭಿಜೀತ್ ದೀಪ್ಕೆ ಎಚ್ಚರಿಕೆ ನೀಡಿದ್ದಾರೆ.
ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಪಾರ್ಕ್‌ನಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಪೊಲೀಸರು ಅನುಮತಿ ನಿರಾಕರಿಸಿದ್ದರೂ ಮತ್ತು ಬಿಸಿಲಿನ ತಾಪದ ನಡುವೆಯೂ ಯುವಕ-ಯುವತಿಯರು ಸೇರಿದಂತೆ ಸಾವಿರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ಬಯಸುವ ಪ್ರತಿಯೊಬ್ಬ ನಾಗರಿಕರು ಈ ಶಾಂತಿಯುತ ಆಂದೋಲನದಲ್ಲಿ ಕೈಜೋಡಿಸಬೇಕು ಎಂದು ದೀಪ್ಕೆ ಕರೆ ನೀಡಿದರು. ಇದೇ ವೇಳೆ 2025ರ ಮತದಾರರ ಪಟ್ಟಿಗಳನ್ನು ತಡೆಹಿಡಿಯಬೇಕು ಮತ್ತು ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆಯನ್ನು ನಿಯಂತ್ರಿಸುವ 2023ರ ಕಾಯ್ದೆಯನ್ನು ರದ್ದುಗೊಳಿಸಬೇಕು ಎಂದು ಸಿಜೆಪಿ ಮುಖಂಡ ಅಜಿಂಕ್ಯ ಶಿಂಧೆ ಒತ್ತಾಯಿಸಿದರು.
ಕಳೆದ ಎರಡು ವರ್ಷಗಳಲ್ಲಿ ದೇಶಾದ್ಯಂತ ಸುಮಾರು 13 ಕೋಟಿ ಮತದಾರರನ್ನು ಪಟ್ಟಿಯಿಂದ ಅಳಿಸಿಹಾಕಲಾಗಿದೆ ಎಂದು ದೀಪ್ಕೆ ಗಂಭೀರ ಆರೋಪ ಮಾಡಿದರು. 2024ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮತ್ತು ‘ಇಂಡಿಯಾ’ ಮೈತ್ರಿಕೂಟದ ನಡುವಿನ ಗೆಲುವಿನ ಅಂತರ ಕೇವಲ ಶೇ. 2ರಷ್ಟಿತ್ತು, ಈ ಅಂತರವನ್ನು ಹೆಚ್ಚಿಸುವ ಉದ್ದೇಶದಿಂದಲೇ ಚುನಾವಣೆಗೂ 15 ದಿನಗಳ ಮೊದಲು ಗ್ಯಾನೇಶ್ ಕುಮಾರ್ ಅವರನ್ನು ಸಿಇಸಿ ಆಗಿ ನೇಮಿಸಲಾಯಿತು ಎಂದು ಅವರು ದೂರಿದರು. ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಕ್ಷೇತ್ರದಲ್ಲಿ 40,000 ಮತದಾರರನ್ನು ಕೈಬಿಡಲಾಗಿದ್ದು, ಅವರು 4,000 ಮತಗಳಿಂದ ಸೋತರು. ತಮಿಳುನಾಡಿನಲ್ಲಿ ಎಂ.ಕೆ. ಸ್ಟಾಲಿನ್ ಅವರ ಕ್ಷೇತ್ರದಲ್ಲಿ ಸುಮಾರು ಒಂದು ಲಕ್ಷ ಮತದಾರರನ್ನು ಅಳಿಸಲಾಗಿದ್ದು 10,000 ಮತಗಳಿಂದ ಸೋಲು ಕಂಡರು. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಸೋಲಿಗೂ ಇದೇ ಕಾರಣ ಎಂದು ದೀಪ್ಕೆ ಆರೋಪಿಸಿದರು.
ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಗೂ ಮುನ್ನ 40 ಲಕ್ಷ ಹೊಸ ಮತದಾರರನ್ನು ಸೇರ್ಪಡೆಗೊಳಿಸುವ ಮೂಲಕ ಬಿಜೆಪಿ ಚುನಾವಣೆಯನ್ನು ಕದ್ದಿದೆ ಎಂದು ಸಿಜೆಪಿ ನಾಯಕರು ಕಿಡಿಕಾರಿದರು. ತೆಲಂಗಾಣ, ಕರ್ನಾಟಕ ಮತ್ತು ಜಾರ್ಖಂಡ್‌ನಲ್ಲಿ ವಿಪಕ್ಷಗಳು ಗೆದ್ದಿರುವ ಬಗ್ಗೆ ಬಿಜೆಪಿ ಬೆಂಬಲಿಗರ ವಾದಕ್ಕೆ ತಿರುಗೇಟು ನೀಡಿದ ದೀಪ್ಕೆ, “ಮ್ಯಾಚ್ ಫಿಕ್ಸಿಂಗ್ ಆದಾಗ, ಎಸೆಯುವ ಎಲ್ಲಾ ಚೆಂಡುಗಳೂ ನೋ-ಬಾಲ್ ಆಗಿರುವುದಿಲ್ಲ ಮತ್ತು ಎಲ್ಲಾ ಕ್ಯಾಚ್‌ಗಳನ್ನು ಕೈಚೆಲ್ಲುವುದಿಲ್ಲ” ಎಂದು ಮಾರ್ಮಿಕವಾಗಿ ನುಡಿದರು. ಆಡಳಿತರೂಢ ಬಿಜೆಪಿಯ ಅಸಲಿ ಉದ್ದೇಶ ‘ಒಂದು ದೇಶ, ಒಂದು ಚುನಾವಣೆ, ಒಂದೇ ಪಕ್ಷ’ ಎಂಬುದಾಗಿದ್ದು, ಮಹಾರಾಷ್ಟ್ರದ ಶಿವಸೇನೆ ಮತ್ತು ಎನ್‌ಸಿಪಿಯಂತಹ ಪ್ರಾದೇಶಿಕ ಪಕ್ಷಗಳನ್ನು ಮುಗಿಸುವುದು ಅವರ ಗುರಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗಾಂಧೀಜಿಯವರ ಜಯಂತಿಯಂದೇ ನಡೆದ ಈ ಪ್ರತಿಭಟನೆಯಲ್ಲಿ ಹಿರಿಯ ನಟರಾದ ನಾಸಿರುದ್ದೀನ್ ಷಾ, ಶಬಾನಾ ಅಜ್ಮಿ, ನಿರ್ದೇಶಕರಾದ ವಿಶಾಲ್ ಭಾರದ್ವಾಜ್, ಹನ್ಸಲ್ ಮೆಹ್ತಾ, ಗಾಯಕ-ಸಂಗೀತ ನಿರ್ದೇಶಕ ವಿಶಾಲ್ ದಾದ್ಲಾನಿ ಮತ್ತು ಮಹಾತ್ಮಾ ಗಾಂಧಿಯವರ ಮರಿಮೊಮ್ಮಗ ತುಷಾರ್ ಗಾಂಧಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ‘ಎಸ್‌ಎಫ್‌ಐ’ (SFI) ಹಾಗೂ ಪುಣೆ ಮೂಲದ ಎಐಎಸ್‌ಎಫ್ (AISF) ನಂತಹ ವಿದ್ಯಾರ್ಥಿ ಸಂಘಟನೆಗಳ ಕಾರ್ಯಕರ್ತರು ತ್ರಿವರ್ಣ ಧ್ವಜಗಳನ್ನು ಬೀಸುತ್ತಾ, ‘ಗದ್ದಾರ್ ಗ್ಯಾನು ಮಸ್ಟ್ ಗೋ’ ಸೇರಿದಂತೆ ವಿವಿಧ ಘೋಷವಾಕ್ಯಗಳಿದ್ದ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ವಂದೇ ಮಾತರಂ ಮತ್ತು ರಂಗ್ ದೇ ಬಸಂತಿ ಹಾಡುಗಳು ಮೊಳಗಿದವು. ಶಿವಸೇನೆಯ (ಯುಬಿಟಿ) ಶಾಸಕ ಮಹೇಶ್ ಸಾವಂತ್ ಕೂಡ ಪಾಲ್ಗೊಂಡು ಬೆಂಬಲ ಸೂಚಿಸಿದರು.
ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಕ್ಕಾಗಿ ಸಿಜೆಪಿ ನಾಯಕ ಸೌರವ್ ದಾಸ್ ಅವರು ದೆಹಲಿ ಪೊಲೀಸರ ವಿರುದ್ಧ ಹರಿಹಾಯ್ದರು. “ಪೊಲೀಸರು ದೌರ್ಜನ್ಯ ನಿಲ್ಲಿಸಿ ಸುಧಾರಿಸಿಕೊಳ್ಳಬೇಕು, ಇಲ್ಲದಿದ್ದರೆ ನಾವು ನಿಮ್ಮನ್ನು ಸುಧಾರಿಸುತ್ತೇವೆ” ಎಂದು ಎಚ್ಚರಿಸಿದರು. ಕಮ್ಯುನಿಸ್ಟ್ ಕಾರ್ಯಕರ್ತ ಶೈಲೇಶ್ ಕಾಂಬ್ಳೆ ಮತ್ತು ಕಾನೂನು ವಿದ್ಯಾರ್ಥಿ ಅಯಾನ್ ಪಟೇಲ್ ಮಾತನಾಡಿ, “ಮತದಾನ ಪ್ರತಿಯೊಬ್ಬರ ಹಕ್ಕು. ಆ ಹಕ್ಕನ್ನು ರಕ್ಷಿಸದಿದ್ದರೆ ಮುಂದಿನ ಪೀಳಿಗೆಯ ಭವಿಷ್ಯ ಕಷ್ಟಕರವಾಗಲಿದೆ” ಎಂದು ಕಳವಳ ವ್ಯಕ್ತಪಡಿಸಿದರು. ಆಡಳಿತದ ಬಗ್ಗೆ ಯುವಜನತೆ ಮತ್ತು ವಿದ್ಯಾರ್ಥಿಗಳಲ್ಲಿರುವ ತೀವ್ರ ಅಸಮಾಧಾನವನ್ನು ಈ ಪ್ರತಿಭಟನೆ ಎತ್ತಿತೋರಿಸಿದೆ.




