ಚುನಾವಣಾ ಆಯೋಗದ (ಇಸಿಐ) ಸ್ವಾಯತ್ತತೆ ಮತ್ತು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಸುತ್ತ ಸೃಷ್ಟಿಯಾಗಿರುವ ರಾಜಕೀಯ ಹಗ್ಗಜಗ್ಗಾಟ ತೀವ್ರರೂಪ ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ವಿರುದ್ಧ ಇಂಡಿಯಾ ಒಕ್ಕೂಟದ ನಾಯಕರು ಸಾಲು ಸಾಲು ಆರೋಪಗಳನ್ನು ಮಾಡುತ್ತಿದ್ದು, ಅವರ ರಾಜೀನಾಮೆಗೆ ಆಗ್ರಹಿಸಿ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೇ ವೇಳೆ, ಚುನಾವಣಾ ಆಯೋಗ ಮತ್ತು ಗ್ಯಾನೇಶ್ ಕುಮಾರ್ ಪರವಾಗಿ ಬಿಜೆಪಿ ನಾಯಕರು ಧ್ವನಿ ಎತ್ತಿದ್ದಾರೆ.
ಮಹಾರಾಷ್ಟ್ರದ ನಾಯಕ ದೇವಿಂದ್ರ ಫಡ್ನವೀಸ್ ಮಾತನಾಡಿ, “ಬೋಗಸ್ ಹಾಗೂ ನಕಲಿ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕುವುದೇ SIRನ ಮುಖ್ಯ ಉದ್ದೇಶವಾಗಿದೆ. ವಿಪಕ್ಷಗಳು ಸೋಲಿನ ಭೀತಿಯಿಂದ ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಯ ಮೇಲೆ ಸುಳ್ಳು ನಿರೂಪಣೆಗಳನ್ನು ಸೃಷ್ಟಿಸಲು ಯತ್ನಿಸುತ್ತಿವೆ” ಎಂದು ಆರೋಪಿಸಿದ್ದಾರೆ. ಚುನಾವಣಾ ಆಯುಕ್ತರು ಸ್ಪಷ್ಟನೆ ನೀಡಿದ ಮೇಲೆಯೂ ವಿಪಕ್ಷಗಳು ಸುಳ್ಳು ಆರೋಪಗಳನ್ನು ಮುಂದುವರಿಸುತ್ತಿವೆ ಎಂದು ಪ್ರತಿಯುತ್ತರ ನೀಡಿದ್ದಾರೆ.
ಇದನ್ನೂ ಓದಿ: SIR | ಸತ್ಯ ಹೇಳದೇ ಸಹಿ ಪಡೆದರು; ಎಫ್‌ಐಆರ್ ದಾಖಲಾಗುತ್ತಿದ್ದಂತೆ ತಮ್ಮ ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತರ ಆಕ್ರೋಶ
ಮತ್ತೊಂದೆಡೆ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಸೇರಿದಂತೆ ವಿಪಕ್ಷ ನಾಯಕರು ಗ್ಞಾನೇಶ್ ಕುಮಾರ್ ನೇತೃತ್ವದ ಚುನಾವಣಾ ಆಯೋಗವು ಕೇಂದ್ರ ಸರ್ಕಾರ ಮತ್ತು ಬಿಜೆಪಿ ಪರವಾಗಿ ಏಕಪಕ್ಷೀಯವಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಮಹಾರಾಷ್ಟ್ರ ಮತ್ತು ಕರ್ನಾಟಕದ ಕೆಲವು ಕ್ಷೇತ್ರಗಳಲ್ಲಿ ಸಾವಿರಾರು ನಕಲಿ ಮತದಾರರು, ಒಂದೇ ವಿಳಾಸದಲ್ಲಿ ನೂರಾರು ಹೆಸರುಗಳು ಹಾಗೂ ನಕಲಿ ಭಾವಚಿತ್ರಗಳನ್ನು ಸೇರಿಸಲಾಗಿದೆ ಎಂದು ರಾಹುಲ್ ಗಾಂಧಿ ದೂರಿದ್ದಾರೆ.
ಗ್ಯಾನೇಶ್ ಕುಮಾರ್ ಅವರು ಸಂವಿಧಾನಬದ್ಧವಾಗಿ ಕೆಲಸ ಮಾಡುವ ಬದಲು ಆಡಳಿತ ಪಕ್ಷದ ಭಾಷೆಯನ್ನೇ ಮಾತನಾಡುತ್ತಿದ್ದಾರೆ ಮತ್ತು ಆಯೋಗದ ನಿರ್ಧಾರಗಳ ವಿರುದ್ಧ ಕೇಳಿಬರುತ್ತಿರುವ ಆಕ್ಷೇಪಣೆಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬ ಆರೋಪಗಳ ಬೆನ್ನಲ್ಲೇ ಬಿಜೆಪಿ ಗ್ಯಾನೇಶ್ ಕುಮಾರ್ ಪರವಾಗಿ ನಿಂತಿದ್ದಾರೆ.




