ಕಳೆದ ಆಗಸ್ಟ್ ತಿಂಗಳಲ್ಲಿ ನೇಪಾಳದ ತ್ರಿಶೂಲಿ-ಭೋಟೆ ಕೋಶಿ ನದಿ ಪ್ರದೇಶದಲ್ಲಿ ಸಂಭವಿಸಿದ ಭೀಕರ ದಿಢೀರ್ ಪ್ರವಾಹದಲ್ಲಿ ನಾಪತ್ತೆಯಾಗಿದ್ದ 213 ಭಾರತೀಯ ಪ್ರಜೆಗಳನ್ನು ಮೃತರೆಂದು ಊಹಿಸಿ, ಅಧಿಕೃತವಾಗಿ ಘೋಷಿಸುವ ಪ್ರಕ್ರಿಯೆಯನ್ನು ನೇಪಾಳ ಸರ್ಕಾರ ಆರಂಭಿಸಿದೆ. ದುರಂತ ಸಂಭವಿಸಿ ಮೂರು ತಿಂಗಳು ಕಳೆದರೂ ಅವರ ಸುಳಿವು ಪತ್ತೆಯಾಗದ ಹಿನ್ನೆಲೆಯಲ್ಲಿ, ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ನವೆಂಬರ್ 25ರ ಬುಧವಾರದಂದು ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದೆ.
ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರವು (NDRRMA) ಮೃತರೆಂದು ಘೋಷಿಸಲು ಉದ್ದೇಶಿಸಿರುವ 213 ನಾಪತ್ತೆಯಾದ ಭಾರತೀಯ ಪ್ರಜೆಗಳ ತಾತ್ಕಾಲಿಕ ಪಟ್ಟಿಯನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಈ ಪಟ್ಟಿಯಲ್ಲಿರುವ ಹೆಸರುಗಳು ಅಥವಾ ವಿವರಗಳಿಗೆ ಸಂಬಂಧಿಸಿದಂತೆ ಯಾವುದೇ ಸೇರ್ಪಡೆ, ತೆಗೆದುಹಾಕುವಿಕೆ ಅಥವಾ ತಿದ್ದುಪಡಿಗಳಿದ್ದಲ್ಲಿ ಸಾರ್ವಜನಿಕರು ಮತ್ತು ಸಂತ್ರಸ್ತ ಕುಟುಂಬಗಳು ಆಕ್ಷೇಪಣೆಗಳನ್ನು ಸಲ್ಲಿಸಲು ಪ್ರಾಧಿಕಾರವು ಅವಕಾಶ ನೀಡಿದೆ.
ಇದನ್ನೂ ಓದಿ: ನೇಪಾಳ | ಎಲ್ಲವನ್ನೂ ಕೊಚ್ಚಿಕೊಂಡು ಹೋದ ಪ್ರವಾಹ ಇದೊಂದು ಮನೆಯನ್ನ ಬಿಟ್ಟದ್ದು ಹೇಗೆ?
ನಾಪತ್ತೆಯಾದವರ ಕುಟುಂಬ ಸದಸ್ಯರಿಗೆ ಈ ಪಟ್ಟಿಯ ಕುರಿತು ಯಾವುದೇ ಆಕ್ಷೇಪಣೆ ಅಥವಾ ಬದಲಾವಣೆಗಳನ್ನು ಸೂಚಿಸಲು ಡಿಸೆಂಬರ್ 2, 2026ರವರೆಗೆ ಕಾಲಾವಕಾಶ ನೀಡಲಾಗಿದೆ. ಸಂಬಂಧಪಟ್ಟ ಕುಟುಂಬಸ್ಥರು [email protected] ಇಮೇಲ್ ವಿಳಾಸದ ಮೂಲಕ ಅಥವಾ ವಾಟ್ಸಾಪ್ ಸೌಲಭ್ಯವಿರುವ +9779851316807 ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆಕ್ಷೇಪಣೆ ಮತ್ತು ತಿದ್ದುಪಡಿಗಳ ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನೇಪಾಳ ಸರ್ಕಾರವು ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿ, ಮರಣದ ಅಧಿಕೃತ ಘೋಷಣೆಯನ್ನು ಹೊರಡಿಸಲಿದೆ. ಇದಾದ ನಂತರ ಭಾರತೀಯ ರಾಯಭಾರ ಕಚೇರಿಯು ನೇಪಾಳದ ಸ್ಥಳೀಯ ಆಡಳಿತ ಸಂಸ್ಥೆಗಳಿಂದ ಮೃತರ ಅಧಿಕೃತ ಮರಣ ಪ್ರಮಾಣಪತ್ರಗಳನ್ನು ಪಡೆದುಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಲಿದ್ದು, ಈ ಹಂತದಲ್ಲಿ ಕುಟುಂಬಸ್ಥರಿಂದ ಹೆಚ್ಚುವರಿ ದಾಖಲೆಗಳನ್ನು ಕೇಳುವ ಸಾಧ್ಯತೆಯಿದೆ.
ಕಳೆದ ಆಗಸ್ಟ್ 26ರಂದು ನೇಪಾಳ-ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿದ ಹಿಮಪಾತ ಮತ್ತು ಬಂಡೆ ಕುಸಿತದಿಂದಾಗಿ ಭೋಟೆ ಕೋಶಿ ನದಿಯಲ್ಲಿ ಭೀಕರ ಪ್ರವಾಹ ಉಂಟಾಗಿತ್ತು. ಪ್ರಾಧಿಕಾರದ ಅಂಕಿಅಂಶಗಳ ಪ್ರಕಾರ, ಈ ದುರಂತದಲ್ಲಿ ಕನಿಷ್ಠ 1,453 ಮಂದಿ ಸಾವನ್ನಪ್ಪಿದ್ದು, 5,000ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದರು; ಅಲ್ಲದೆ ನೂರಾರು ಮನೆಗಳು, ವಾಹನಗಳು, ರಸ್ತೆಗಳು, ಸೇತುವೆಗಳು ಹಾಗೂ ಜಲವಿದ್ಯುತ್ ಯೋಜನೆಗಳು ತೀವ್ರ ಹಾನಿಗೊಳಗಾಗಿದ್ದವು.



