ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಕನಿಷ್ಠ 12 ಮಂದಿ ಬಲಿಯಾಗಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಮೃತರ ಪೈಕಿ ಒಂದೇ ಕುಟುಂಬದ ಎಂಟು ಸದಸ್ಯರಿದ್ದಾರೆ ಎಂದು ವರದಿಯಾಗಿದೆ.
ಭೂಕಂಪದ ಕೇಂದ್ರಬಿಂದುವನ್ನು ಈಶಾನ್ಯ ಬಡಾಕ್ಷನ್ ಪ್ರಾಂತ್ಯದಲ್ಲಿದೆ ಎಂದು ಗುರುತಿಸಲಾಗಿದೆ. ಕಾಬೂಲ್, ಪಂಜ್‌ಶಿರ್, ಲೊಗಾರ್, ನಂಗರ್ಹರ್, ಲಘ್ಮಾನ್ ಮತ್ತು ನುರಿಸ್ತಾನ್ ಪ್ರಾಂತ್ಯಗಳಲ್ಲಿ ಕಂಪನದ ತೀವ್ರತೆ ಹೆಚ್ಚಾಗಿತ್ತು. ದುರಂತ ಘಟನೆಯಲ್ಲಿ 5 ಮನೆಗಳು ಸಂಪೂರ್ಣವಾಗಿ ನೆಲಸಮವಾಗಿದ್ದು, 33 ಮನೆಗಳು ಭಾಗಶಃ ಹಾನಿಗೊಳಗಾಗಿವೆ ಎಂದು ವರದಿಗಳು ವಿವರಿಸಿವೆ.
ಕಾಬೂಲ್ ಪ್ರಾಂತ್ಯದ ಗೊಸ್ಫಾಂಡ್ ದಾರಾ ಪ್ರದೇಶದಲ್ಲಿ ಮನೆಯೊಂದು ಕುಸಿದುಬಿದ್ದಿದ್ದು, ಒಂದೇ ಕುಟುಂಬದ 8 ಮಂದಿ ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್, ಘಟನೆಯಲ್ಲಿ ಎರಡು ವರ್ಷದ ಮಗು ಬದುಕುಳಿದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಶ್ಚಿಮ ಕಾಬೂಲ್‌ನಲ್ಲಿ ಸಂಭವಿಸಿದ ಮತ್ತೊಂದು ಮನೆ ಕುಸಿತದ ಘಟನೆಯಲ್ಲಿ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ.
ಅಫ್ಘಾನಿಸ್ತಾನದ ರೆಡ್‌ಕ್ರೆಸೆಂಟ್ ಸೊಸೈಟಿಯ ವಕ್ತಾರರನ್ನು ಉಲ್ಲೇಖಿಸಿ ಎಎಫ್‌ಪಿ (AFP) ಸುದ್ದಿಸಂಸ್ಥೆ ಈ ವರದಿಯನ್ನು ಪ್ರಕಟಿಸಿದೆ. ಸದ್ಯ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.



