ಬಾಂಗ್ಲಾದೇಶದಿಂದ ಮಲೇಷ್ಯಾಕ್ಕೆ ತೆರಳುತ್ತಿದ್ದ ಸುಮಾರು 250ಕ್ಕೂ ಹೆಚ್ಚು ಜನರನ್ನು ಹೊತ್ತಿದ್ದ ಬೋಟ್ವೊಂದು ಅಂಡಮಾನ್ ಸಮುದ್ರದಲ್ಲಿ ಮುಳುಗಡೆಯಾಗಿದ್ದು, ಅದರಲ್ಲಿದ್ದವರೆಲ್ಲರೂ ನಾಪತ್ತೆಯಾಗಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಮತ್ತು ವಲಸೆ ಸಂಸ್ಥೆಗಳು (UNHCR & IOM) ಆತಂಕ ವ್ಯಕ್ತಪಡಿಸಿವೆ.
ಸಾಮರ್ಥ್ಯಕ್ಕೂ ಮೀರಿದ ಪ್ರಯಾಣಿಕರ ಸಂಖ್ಯೆ, ಸಮುದ್ರದಲ್ಲಿ ಬೀಸುತ್ತಿದ್ದ ಬಲವಾದ ಗಾಳಿ ಮತ್ತು ಏರುತ್ತಿದ್ದ ಅಲೆಗಳ ಅಬ್ಬರದಿಂದಾಗಿ ಚಾಲಕನ ನಿಯಂತ್ರಣ ತಪ್ಪಿದ ನೌಕೆ ಸಮುದ್ರದ ಮಧ್ಯದಲ್ಲೇ ಮುಳುಗಡೆಯಾಗಿದೆ ಎನ್ನಲಾಗಿದೆ. ಸದ್ಯ ನಾಪತ್ತೆಯಾದವರಿಗಾಗಿ ಶೋಧ ಕಾರ್ಯದ ಸ್ಥಿತಿಗತಿಯ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ಮ್ಯಾನ್ಮಾರ್ನ ರಾಖೈನ್ ಪ್ರಾಂತ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದಾಗಿ ರೋಹಿಂಗ್ಯಾ ನಿರಾಶ್ರಿತರು ಮರಳಿ ಸ್ವದೇಶಕ್ಕೆ ಹೋಗುವ ಪರಿಸ್ಥಿತಿಯಲ್ಲಿಲ್ಲ. ಅತ್ತ ಬಾಂಗ್ಲಾದೇಶದ ನಿರಾಶ್ರಿತರ ಶಿಬಿರಗಳಲ್ಲಿ ಶಿಕ್ಷಣ, ಉದ್ಯೋಗದ ಕೊರತೆ ಮತ್ತು ಸೀಮಿತ ಮಾನವೀಯ ನೆರವು ಇವರನ್ನು ಇಂತಹ ಅಪಾಯಕಾರಿ ಸಮುದ್ರ ಪ್ರಯಾಣಕ್ಕೆ ತಳ್ಳುತ್ತಿದೆ. ವಿದೇಶಗಳಲ್ಲಿ ಹೆಚ್ಚಿನ ವೇತನ ಮತ್ತು ಉತ್ತಮ ಅವಕಾಶಗಳ ಸುಳ್ಳು ಭರವಸೆಗಳನ್ನು ನಂಬಿ ಇವರು ಸಾವಿನ ಹಾದಿ ಹಿಡಿಯುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಹಾಗೂ ಅದರ ಅಂಗ ಸಂಸ್ಥೆಗಳು ವಿಷಾದ ವ್ಯಕ್ತಪಡಿಸಿವೆ.
ಇದನ್ನೂ ಓದಿ: ದಿಲ್ಲಿ ಮಾತು | ನೊಯಿಡಾ ಕೈಗಾರಿಕಾ ವಲಯದಲ್ಲಿ ಅಶಾಂತಿ: ಬೆವರು ಕಾರ್ಮಿಕನದು, ವಿಕಾಸ ಯಾರದ್ದು?
ಬಾಂಗ್ಲಾದೇಶದಲ್ಲಿ ಆಶ್ರಯ ಪಡೆದಿರುವ ಸುಮಾರು 10 ಲಕ್ಷಕ್ಕೂ ಹೆಚ್ಚು ರೋಹಿಂಗ್ಯಾ ನಿರಾಶ್ರಿತರ ಜೀವ ಉಳಿಸಲು ಮತ್ತು ಅವರಿಗೆ ಅಗತ್ಯ ನೆರವು ನೀಡಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಧನಸಹಾಯ ಹಾಗೂ ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಂದು ವಿಶ್ವಸಂಸ್ಥೆ ಆಗ್ರಹಿಸಿದೆ.




