ದಿಲ್ಲಿ ಮಾತು | ನೊಯಿಡಾ ಕೈಗಾರಿಕಾ ವಲಯದಲ್ಲಿ ಬಂಡಾಯ: ಬೆವರು ಕಾರ್ಮಿಕರದು, ಬೆಳವಣಿಗೆ ಯಾರದ್ದು?

Date:

ಈ ಕಾರ್ಮಿಕರ ಪ್ರತಿಭಟನೆಯನ್ನು ಕೇವಲ ವೇತನದ ಬೇಡಿಕೆ ಎಂದು ಗ್ರಹಿಸಿಕೊಂಡರೆ ಈ ದೇಶದ ಸಾಮಾಜಿಕ ವಾಸ್ತವಿಕತೆಯನ್ನು ನೋಡದಂತೆ ಕಣ್ಣು ಮುಚ್ಚಿಕೊಂಡಂತಾಗುತ್ತದೆ. ಪಶ್ಚಿಮ ದೇಶಗಳಲ್ಲಿನ ಯುದ್ಧ ಅಶಾಂತಿ, ಅದರ ಪರಿಣಾಮವನ್ನು ಅನುಭವಿಸುತ್ತಿರುವ ದೇಶಗಳಲ್ಲಿ ಭಾರತವೂ ಒಂದು. 

ಮೊನ್ನೆ (13 ಎಪ್ರಿಲ್) ನೊಯಿಡಾದ ಸೆಕ್ಟರ್ 62 ರಿಂದ 82ರ ವರೆಗಿನ ಔದ್ಯೋಗಿಕ ಸ್ಥಳಗಳಲ್ಲಿ ಭಾರಿ ಪ್ರಮಾಣದಲ್ಲಿ ಕಾರ್ಮಿಕರು ಆಂದೋಲನ ನಡೆಸಿದರು. ಗುಂಪು ಗಲಭೆ ಆಕ್ರೋಶದಲ್ಲಿ ಕಲ್ಲು ತೂರಾಟ, ಬೆಂಕಿ ಹಚ್ಚುವ, ಪೊಲೀಸ್ ವ್ಯಾನ್ ಉರುಳಿಸಿದ ಘಟನೆಗಳು ನಡೆದಿವೆ. ಹತ್ತು ವರ್ಷಗಳ ಕಾಲ ನಾನು ಈ ಪ್ರದೇಶದಲ್ಲಿ ಓಡಾಡಿದ್ದೇನೆ. ಇವರಂತಹದ್ದೇ ಖಾಸಗಿ ಕಂಪನಿಯಲ್ಲಿ ಉದ್ಯೋಗವನ್ನೂ ಮಾಡಿರುವೆ. ಆದರೆ, ಈ ಪ್ರಮಾಣದಲ್ಲಿ ಕಾರ್ಮಿಕರು ಬೀದಿಗಿಳಿದಿದ್ದನ್ನು ನೋಡಿಲ್ಲ. ನನ್ನ ಕಂಪನಿಯನ್ನೂ ಒಳಗೊಂಡು ಕಾರ್ಮಿಕರ ಸಮಸ್ಯೆಗಳನ್ನು ಕಂಪನಿಯ ಅಧಿಕಾರಿಗಳಲ್ಲಿ, ಸ್ನೇಹಿತರಲ್ಲಿ ಚರ್ಚಿಸುತ್ತಲೇ ಬಂದಿರುವೆ. ಬಹಳ ಕಾಲದಿಂದಲೂ ಒಳಗೆ ಅದುಮಿಟ್ಟುಕೊಂಡ ನೋವು ಹತಾಶೆಯನ್ನು ಪ್ರದರ್ಶಿಸಲು ಕಾರ್ಮಿಕ ವರ್ಗ ಕೊನೆಗೆ ಬೀದಿಗಿಳಿಯಲೇಬೇಕಾಯ್ತು.

- Advertisement -

ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಯ ನೊಯಿಡಾ ಮತ್ತು ಗ್ರೇಟರ್ ನೊಯಿಡಾ ಭಾಗಗಳು ಭಾರತದ ಅತಿದೊಡ್ಡ ಉತ್ಪಾದನಾ ಹಬ್‌ಗಳಲ್ಲಿ ಒಂದಾಗಿವೆ. ಈ ಪ್ರದೇಶಗಳು ಭಾರತದ ‘ಎಲೆಕ್ಟ್ರಾನಿಕ್ಸ್ ಹಬ್’ ಎಂದು ಕರೆಯಲ್ಪಡುತ್ತವೆ. ಇಲ್ಲಿ ಸಾವಿರಾರು ಬಹುರಾಷ್ಟ್ರೀಯ ಕಂಪನಿಗಳು ಮತ್ತು ಸ್ಯಾಮ್‌ಸಂಗ್, ಒಪ್ಪೋ, ವಿವೋ ಮತ್ತು ಲಾವಾದಂತಹ ದೈತ್ಯ ಮೊಬೈಲ್ ತಯಾರಿಕಾ ಘಟಕಗಳಿವೆ. ಏಷ್ಯನ್, ಬರ್ಜರ್ ಪೇಂಟ್ ತಯಾರಿಸುವ ಕಾರ್ಖಾನೆಗಳಿವೆ. ಆದರೆ, ಈ ಹೊಳೆಯುವ ದೊಡ್ಡ ದೊಡ್ಡ ಕಾರ್ಖಾನೆಗಳ ಹಿಂದೆ ಕಾರ್ಮಿಕರ ಅಸಮಾಧಾನದ ದೊಡ್ಡ ಜ್ವಾಲಾಮುಖಿಯೇ ಇದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕ್ಷಿಪಣಿ ಬಿಡಿಭಾಗಗಳ ಖರೀದಿಯಲ್ಲಿ ಸ್ವಜನಪಕ್ಷಪಾತ; ಬಿಡಿಎಲ್ ಮಾಜಿ ಮುಖ್ಯಸ್ಥನ...

ಕ್ಷಿಪಣಿಯ ಆಪ್ಟಿಕಲ್ ಸೈಟ್‌ಗಳ ಪೂರೈಕೆಗಾಗಿ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ತನ್ನದೇ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರ (CMD) ಪತ್ನಿಯ ಒಡೆತನದ ಖಾಸಗಿ ಕಂಪನಿಗೆ 'ತುರ್ತು' ನೆಪವೊಡ್ಡಿ 56.8 ಕೋಟಿ...

ನುಡಿ ನಮನ | ಚೆರುವಯಲ್ ರಾಮನ್ – ಭತ್ತದ...

ಕೃಷಿ ಎಂದರೆ ಕೇವಲ ಬೆಳೆ ಬೆಳೆಯುವುದಲ್ಲ; ಬಿತ್ತನೆಗೆ ಸೂಕ್ತವಾದ ಬೀಜಗಳನ್ನು ಆಯ್ಕೆ ಮಾಡುವುದು, ಅವುಗಳನ್ನು ಸಂಗ್ರಹಿಸುವುದು ಹಾಗೂ ಮುಂದಿನ ಋತುವಿಗೆ ಉಳಿಸುವುದೂ ಕೃಷಿಯ ಅವಿಭಾಜ್ಯ ಅಂಗ ಎನ್ನುತ್ತಿದ್ದ ರಾಮನ್, ತಮ್ಮ ಇಡೀ ಜೀವನವನ್ನೇ...

ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?

ನೀರಿನ ಅಭಾವ, ಪರಿಸರ ನಾಶ, ಸಾರ್ವಜನಿಕ ಹಣದ ವೆಚ್ಚದ ನಡುವೆ ಸರ್ಕಾರದ ಸಮರ್ಥನೆ; ಇತಿಹಾಸದ ಹೆಸರಿನಲ್ಲಿ ವಿವಾದ, ಆಡಳಿತದ ನಡೆಗೆ ಸಾರ್ವಜನಿಕರ ಪ್ರಶ್ನೆ. ರಾಜ್ಯದ ಜನತೆ ಬರಗಾಲದ ಸಂಕಷ್ಟ ಎದುರಿಸುತ್ತಿರುವಾಗ, ರೈತರು ಮಳೆ-ಬೆಳೆಯಿಲ್ಲದೆ ಕಂಗಾಲಾಗಿರುವಾಗ,...

ನೊಯಿಡಾದಲ್ಲಿ ನಡೆಯುವ ಬಹುತೇಕ ಗಲಭೆಗಳಿಗೆ ಕೇವಲ ಒಂದು ತಕ್ಷಣದ ಕಾರಣವಿರುವುದಿಲ್ಲ, ಬದಲಿಗೆ ದೀರ್ಘಕಾಲದ ಶೋಷಣೆ ಕಾರಣವಾಗಿರುತ್ತದೆ:

ಈ ಕಾರ್ಮಿಕರ ಪ್ರತಿಭಟನೆಯನ್ನು ಕೇವಲ ವೇತನದ ಬೇಡಿಕೆ ಎಂದು ಗ್ರಹಿಸಿಕೊಂಡರೆ ಈ ದೇಶದ ಸಾಮಾಜಿಕ ವಾಸ್ತವಿಕತೆಯನ್ನು ನೋಡದಂತೆ ಕಣ್ಣು ಮುಚ್ಚಿಕೊಂಡಂತಾಗುತ್ತದೆ. ಪಶ್ಚಿಮ ದೇಶಗಳಲ್ಲಿನ ಯುದ್ಧ ಅಶಾಂತಿ, ಅದರ ಪರಿಣಾಮವನ್ನು ಅನುಭವಿಸುತ್ತಿರುವ ದೇಶಗಳಲ್ಲಿ ಭಾರತವೂ ಒಂದು.  ಭ್ರಷ್ಟರು, ಕಳ್ಳಸಂತೆಕೋರರು ಹಾಗೂ ಅಸಮಾನತೆಯೇ ತುಂಬಿ ತುಳುಕುತ್ತಿರುವ ಈ ದೇಶದಲ್ಲಿ ಯುದ್ಧದ ಬಿಸಿ ತುಸು ಹೆಚ್ಚೇ ತಗಲುತ್ತಿದೆ. ಅಡುಗೆ ಅನಿಲವನ್ನು ಸಾವಿರ, ಸಾವಿರದ ನೂರು- ಇನ್ನೂರಿಗೆ ಖರೀದಿಸುತ್ತಿದ ಜನರು ಬ್ಲ್ಯಾಕ್‌ನಲ್ಲಿ ರೂ. 3000 ಕೊಟ್ಟು ಖರೀದಿಸಬೇಕಾಗಿದೆ. ಗುಜರಾತಿನ ಎಷ್ಟೋ ಕಾರ್ಖಾನೆಗಳ ಕಾರ್ಮಿಕರು ಹಳ್ಳಿಗಳಿಗೆ ಮರಳುತ್ತಿದ್ದಾರೆ. ಹಣ್ಣು ತರಕಾರಿ, ಧಾನ್ಯಗಳು ಹೀಗೆ ಆಹಾರ  ಸಾಮಗ್ರಿಗಳ ಬೆಲೆಯೂ ಗಗನಕ್ಕೇರಿದೆ. ಇಂತಹ ಸಮಯದಲ್ಲಿ ಕೆಲಸ ಮಾಡುವ ಕಂಪನಿಗಳು ಕಾರ್ಮಿಕರ ಸಮಸ್ಯೆಗಳನ್ನು ಕೇಳುವ ಬದಲು ಕಿವುಡಾಗಿವೆ. ಅವು ಲಾಭಮಾಡಿಕೊಳ್ಳುತ್ತಿದ್ದರೂ ತಮ್ಮ ಕೆಲಸಗಾರರನ್ನು ಗುಲಾಮರೆಂಬಂತೆ ದುಡಿಸಿಕೊಳ್ಳುತ್ತವೆಯೇ ಹೊರತು ಮನುಷ್ಯರಂತೆ ನಡೆಸಿಕೊಳ್ಳುತ್ತಿಲ್ಲ. ಇದು ಕಾರ್ಮಿಕರ ಸಂಬಳದ ಪ್ರಶ್ನೆಯಷ್ಟೇ ಅಲ್ಲ; ಸಂವಿಧಾನದ ಆತ್ಮ ಮತ್ತು ಸಾಮಾಜಿಕ ನ್ಯಾಯದ ನಡುವೆ ಉಂಟಾಗಿರುವ ಭಾರೀ ಅಂತರದ ಸ್ಫೋಟ.

ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಬಹಳ ಹಿಂದೆಯೇ ಎಚ್ಚರಿಸಿದ್ದರು: “ರಾಜಕೀಯ ಸಮಾನತೆ ಮತ್ತು ಸಾಮಾಜಿಕ-ಆರ್ಥಿಕ ಅಸಮಾನತೆ ಒಂದೇ ಸಮಯದಲ್ಲಿ ಮುಂದುವರಿದರೆ ಪ್ರಜಾಪ್ರಭುತ್ವದ ಕಟ್ಟಡವೇ ಕದಡುವುದು”. ಇಂದು ನೊಯಿಡಾದ ಬೀದಿಗಳಲ್ಲಿ ಕೇಳಿಬರುವ ಕೂಗು ಅದೇ ಎಚ್ಚರಿಕೆಯ ಪ್ರತಿಧ್ವನಿ.

ಒಂದೆಡೆ ದೇಶ “ಅಭಿವೃದ್ಧಿ”, “ವಿಶ್ವಗುರು”, “ಮಹಾಶಕ್ತಿ” ಎಂಬ ಘೋಷಣೆಗಳಲ್ಲಿ ತೇಲುತ್ತಿದೆ. ಮತ್ತೊಂದೆಡೆ ಆ ಅಭಿವೃದ್ಧಿಯ ಕಾರ್ಖಾನೆಗಳು ನಿರಂತರವಾಗಿ ನಡೆಯುತ್ತಿರುವಂತೆ ತಮ್ಮ ಬೆವರು, ಆರೋಗ್ಯ, ಜೀವನವನ್ನೇ ಹೂಡುತ್ತಿರುವ ಕಾರ್ಮಿಕನು ಬದುಕಲು ಬೇಕಾದ ಕನಿಷ್ಠ ಸಂಬಳಕ್ಕಾಗಿ ಬೀದಿಗಿಳಿಯಬೇಕಾದ ಸ್ಥಿತಿ ಬಂದಿದೆ. ಇದು ಕೇವಲ ಆಡಳಿತ ವೈಫಲ್ಯವಲ್ಲ — ಇದು ಆರ್ಥಿಕ ಅನ್ಯಾಯದ ರಾಜಕೀಯ ರಚನೆ ಎನ್ನಬೇಕಾಗುತ್ತದೆ. ನರೇಂದ್ರ ಮೋದಿ ಸರ್ಕಾರ ವರ್ಷಗಳಿಂದ “ಸಬ್ಕಾ ಸಾಥ್, ಸಬ್ಕಾ ವಿಕಾಸ್“ ಎಂಬ ಘೋಷಣೆಯನ್ನು ಸಮಗ್ರ ಅಭಿವೃದ್ಧಿಯ ಮಂತ್ರವಾಗಿ, ಮೂಲ ಧ್ಯೇಯವಾಗಿ ಪ್ರಚಾರಮಾಡುತ್ತದೆ. ಆದರೆ, ಈ “ಸಬ್ಕಾ ವಿಕಾಸ್”ನಲ್ಲಿ ಬಡ ಕಾರ್ಮಿಕರ ಪಾಲು ಎಲ್ಲಿದೆ? ಅವರ ವಿಕಾಸವೆಲ್ಲಿದೆ?  

noida workers protest 1 pti

ನೋಯಿಡಾ ಹಾಗೂ ಗ್ರೇಟರ್ ನೊಯಿಡಾಗಳನ್ನು ಪ್ರಪಂಚದ ಸುಂದರ ವ್ಯವಸ್ಥಿತ ನಗರಗಳೆಂದು ಪ್ರಶಂಸಿಸುತ್ತಾರೆ. ಜಗಮಗಿಸುವ ವಿದ್ಯುತ್‌ ದೀಪಗಳಿಂದ ಗಗನಚುಂಬಿ ಕಟ್ಟಡಗಳಿಂದ, ವಿಶಾಲವಾದ ಚತುಷ್ಪಥ, ಷಟ್ಪಥ ಹೆದ್ದಾರಿಗಳು ವಾಹನಸಂಚಾರವನ್ನು ಸುಲಭಗೊಳಿಸಿವೆ. ಹಲವಾರು ಎಕ್ಸ್‌ಪ್ರೆಸ್ ವೇಗಳು ನಿರ್ಮಾಣಗೊಂಡಿವೆ. ಇನ್ನೂ ನಿರ್ಮಾಣಗೊಳ್ಳುತ್ತಲಿವೆ. ವಿದೇಶಿ ಹೂಡಿಕೆಗಳ ಅಂಕೆಗಳು ಹೊಳೆಯುತ್ತಿವೆ. ಆದರೆ ಇಷ್ಟೆಲ್ಲಾ ಬೆಳವಣಿಗೆಯ ನೆಲೆಯನ್ನು, ಅವುಗಳ ಮೆಟ್ಟಿಲನ್ನು ಮೇಲಕ್ಕೇರಿಸಿ ಕಟ್ಟಿದ ಕಾರ್ಮಿಕನು ಕನಿಷ್ಠ ಸಂಬಳಕ್ಕಾಗಿ ಬೀದಿಗಿಳಿಯಬೇಕಾದರೆ ಅಭಿವೃದ್ಧಿ ಘೋಷಣೆ ಮತ್ತು ವಾಸ್ತವದ ನಡುವೆ ಇರುವ ಅಂತರ ಸ್ಪಷ್ಟವಾಗುತ್ತದೆ. ಅಭಿವೃದ್ಧಿಯ ಲಾಭವು ಮೇಲಿನ ವರ್ಗಗಳಿಗೆ, ಕಂಪನಿಗಳ ಲಾಭಕ್ಕೆ ಷೇರು ಮಾರುಕಟ್ಟೆಯ ಏರಿಕೆಗೆ ಮಾತ್ರ ಸೀಮಿತವಾದರೆ ಕೆಳಗಿನ ವರ್ಗದ ಶ್ರಮಜೀವಿಗಳಿಗೆ ಅದು ಮತ್ತಷ್ಟು ದುಡಿಮೆ ಮತ್ತು ಕಡಿಮೆ ಸಂಬಳದ ಬದುಕಾಗುತ್ತದೆ. ಇದನ್ನು “ಸಬ್ಕಾ ವಿಕಾಸ್” ಎನ್ನಲು ಬರುತ್ತದೆಯೇ? 

“ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನಕ್ಕಿಂತ ಕಡಿಮೆ ಸಂಬಳ ನೀಡುವುದು ಕಾನೂನುಬಾಹಿರ. 1948ರ ಕನಿಷ್ಠ ವೇತನ ಕಾಯ್ದೆಯಡಿ, ಕಾರ್ಮಿಕರಿಗೆ ನಿಗದಿತ ದರಕ್ಕಿಂತ ಕಡಿಮೆ ವೇತನ ನೀಡುವಂತಿಲ್ಲ; ಹೀಗೆ ಮಾಡಿದರೆ ಉದ್ಯೋಗದಾತರು ದಂಡ ಅಥವಾ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಕಾರ್ಮಿಕರು ಈ ಬಗ್ಗೆ ಕಾರ್ಮಿಕ ಇಲಾಖೆಗೆ ದೂರು ನೀಡಬಹುದು” ಎನ್ನುತ್ತದೆ ಕಾನೂನು. ಎಲ್ಲಾ ಕಾನೂನುಗಳು ಕಾಗದದಲ್ಲಿ ಚೆಂದ ಕಾಣುತ್ತವೆಯೇ ಹೊರತು ವಾಸ್ತವದಲ್ಲಿ ಅಲ್ಲ. ಒಂದುವೇಳೆ ಕಾರ್ಮಿಕನು ತನ್ನ ಉದ್ಯೋಗದಾತನ ವಿರುದ್ಧವಾಗಿ ದೂರು ಕೊಟ್ಟರೆ ಅವನ ಬದುಕು ಇನ್ನಷ್ಟು ದುಸ್ತರವಾಗುತ್ತದೆ. ಬಹುತೇಕ ಯಾವ ಕಾರ್ಮಿಕನೂ ಈ ಹೆಜ್ಜೆಯನ್ನು ಇಡಲಾರ. ತನ್ನ ಉದ್ಯೋಗ ಸುರಕ್ಷೆಯ ದೃಷ್ಟಿಯಿಂದ ಆತ ಬಾಯಿಮುಚ್ಚಿಕೊಂಡು ಕೊಟ್ಟಷ್ಟು ಸಂಬಳ ಪಡೆಯುತ್ತಾ ಹೇಳಿದಷ್ಟು ಕೆಲಸ ಮಾಡಿಕೊಂಡಿರ ಬೇಕಾಗುವುದು ಅನಿವಾರ್ಯವಾಗುತ್ತದೆ. ಈಗಂತೂ ಯಾವ ಕಂಪನಿಗಳೂ ನೇರವಾಗಿ ಕಾರ್ಮಿಕರನ್ನು ನೇಮಿಸಿಕೊಳ್ಳುತ್ತಿಲ್ಲ. ಅವರ ವ್ಯವಹಾರವೆಲ್ಲ ಗುತ್ತಿಗೆದಾರರ ಮೂಲಕವೇ ನಡೆಯುತ್ತಿದೆ.  ಹೀಗೆ ಕಾರ್ಮಿಕನ ಪಾಲಿಗೆ ಗುತ್ತಿಗೆ ಉದ್ಯೋಗ, ಅಸ್ಥಿರತೆ, ಕಡಿಮೆ ಸಂಬಳ ಮತ್ತು ಭಯ ಮಾತ್ರ ಉಳಿದಿದೆ.

ಹಾಗಾದರೆ ಕಾರ್ಮಿಕನ ಶ್ರಮದಿಂದ ನಿರ್ಮಾಣವಾಗುವ ಸಂಪತ್ತು ಯಾರ ಕೈಗೆ ಹೋಗುತ್ತಿದೆ?  ಲಾಭ ಮಾಲೀಕರಿಗೆ, ಪ್ರಶಂಸೆ ಸರ್ಕಾರಕ್ಕೆ, ಆದರೆ ಹಸಿವು ಕಾರ್ಮಿಕನ ಮನೆಗೆ — ಈ ವ್ಯವಸ್ಥೆಯನ್ನು ನಾವು ಅಭಿವೃದ್ಧಿ ಎಂದು ಕರೆಯಬಹುದೇ?

ಬಾಬಾ ಸಾಹೇಬ್ ಇಲ್ಲಿ ಅಂಬೇಡ್ಕರ್‌ ಅವರು ಸಮಾನತೆಯನ್ನು ಕೇವಲ ಮತದಾನದ ಹಕ್ಕಿನಲ್ಲಿ  ನೋಡಲಿಲ್ಲ; ಆರ್ಥಿಕ ಅವಕಾಶಗಳ ಸಮಾನ ಹಂಚಿಕೆ, ಗೌರವಯುತ ಬದುಕು, ಶ್ರಮಕ್ಕೆ ನ್ಯಾಯಯುತ ಪ್ರತಿಫಲ — ಇವೆಲ್ಲವೂ ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗಗಳೆಂದೇ ನೋಡಿದರು.

ನೊಯಿಡಾದ ಪ್ರತಿಭಟನೆ ನಮಗೆ ಒಂದು ಅಸಹಜ ಸತ್ಯವನ್ನು ನೆನಪಿಸುತ್ತದೆ: ಈ ದೇಶದಲ್ಲಿ ಕಾರ್ಮಿಕನನ್ನು ಇನ್ನೂ ನಾಗರಿಕನಂತೆ ಕಾಣದೇ, ಉತ್ಪಾದನಾ ಯಂತ್ರದ ಒಂದು ಭಾಗದಂತೆ ನೋಡಲಾಗುತ್ತಿದೆ. ಬೀದಿಗಳಲ್ಲಿ ಕಾರ್ಮಿಕನು ಕೂಗುತ್ತಿದ್ದಾನೆಂದರೆ  ಅದು ಕೇವಲ ಸಂಬಳಕ್ಕಾಗಿ ಅಲ್ಲ;  “ನನ್ನನ್ನೂ ಮನುಷ್ಯನಂತೆ ನೋಡಿ” ಎಂಬ ಅಳಲು.

ಕಂಪನಿಗಳು ತಮ್ಮ ಕಾನೂನಾತ್ಮಕ ಜವಾಬ್ದಾರಿಯಿಂದ ನುಣುಚಿಕೊಳ್ಳಲು, ಈ ಗುತ್ತಿಗೆದಾರ ವ್ಯವಸ್ಥೆಯನ್ನು ಪಾಲಿಸುತ್ತಿವೆ. ಯಾಕೆಂದರೆ ಒಬ್ಬ ಕಾರ್ಮಿಕ ಕಾರ್ಖಾನೆಯ ಯಂತ್ರದಲ್ಲಿ ಸಿಕ್ಕು ಅಂಗವಿಕಲನಾದರೆ, ಸತ್ತು ಹೋದರೆ ಆಗ ಎಲ್ಲಾ ಜವಾಬ್ದಾರಿಯನ್ನು ಗುತ್ತಿಗೆದಾರ ಹೊರುತ್ತಾನೆಯೇ ಹೊರತು ಮಾಲಿಕನಲ್ಲ. ಮಾಲಿಕನ ನಯಾಪೈಸೆಯೂ ಖರ್ಚಾಗುವುದಿಲ್ಲ. ಪೊಲೀಸರ ಕೈಬೆಚ್ಚಗೆ ಮಾಡಲು ಕೈಬಿಚ್ಚುತ್ತಾನೆಯೇ ಹೊರತು ಅಂಗವಿಕಲರಾದ ಕಾರ್ಮಿಕನಿಗೆ, ಸತ್ತುಹೋದ ಕಾರ್ಮಿಕನ ಕುಟುಂಬಕ್ಕೆ ಏನನ್ನೂ ಸಹಾಯ ಮಾಡಬೇಕಾದ ನೈತಿಕ ಹೊಣೆಯನ್ನೂ ಹೊರುವುದಿಲ್ಲ. ಇದು ಸುಡುವಾಸ್ತವ!       

ಹೀಗೆ ಇಲ್ಲಿನ ಶೇ. 70-80ರಷ್ಟು ಕಾರ್ಮಿಕರು ನೇರವಾಗಿ ಕಂಪನಿಯ ಅಡಿಯಲ್ಲಿ ಕೆಲಸ ಮಾಡುವುದಿಲ್ಲ. ಬದಲಿಗೆ ಥರ್ಡ್ ಪಾರ್ಟಿ ಏಜೆನ್ಸಿಗಳ ಮೂಲಕ ನೇಮಕವಾಗುತ್ತಾರೆ. ಇದರಿಂದ ಅವರಿಗೆ ಕಂಪನಿಯ ಸೌಲಭ್ಯಗಳು ಸಿಗುವುದಿಲ್ಲ ಮತ್ತು ಕೆಲಸದ ಭದ್ರತೆ ಶೂನ್ಯವಾಗಿರುತ್ತದೆ.

ಕಂಪನಿಯ ಯಾವ ಸೌಲಭ್ಯಗಳೂ ಇಲ್ಲದೇ ಹೆಚ್ಚುವರಿ ಕೆಲಸದ ಒತ್ತಡದಲ್ಲಿ ಕಾರ್ಮಿಕರು ದುಡಿಯುತ್ತಾರೆ. ಮೊಬೈಲ್ ಮತ್ತು ಆಟೋಮೊಬೈಲ್ ಘಟಕಗಳಲ್ಲಿ ‘ಟಾರ್ಗೆಟ್’ ಪೂರ್ಣಗೊಳಿಸಲು ಕಾರ್ಮಿಕರನ್ನು 12 ಗಂಟೆಗಳ ಕಾಲ ದುಡಿಸಿಕೊಳ್ಳಲಾಗುತ್ತದೆ. ವಿಶ್ರಾಂತಿ ಸಮಯದ ಕೊರತೆಯು ಮಾನಸಿಕ ಒತ್ತಡಕ್ಕೆ ಕಾರಣವಾಗಿ, ಸಣ್ಣ ಘಟನೆಯೂ ದೊಡ್ಡ ಗಲಭೆಗೆ ಕಾರಣವಾಗುತ್ತದೆ. 

ಮೊದಲಾದರೆ ಕಾರ್ಮಿಕರ ಸಮಸ್ಯೆಗಳನ್ನು ಮಾಲಿಕರ ಗಮನಕ್ಕೆ ತರಲು, ನ್ಯಾಯ ಒದಗಿಸಿಕೊಡಲು ಟ್ರೇಡ್ ಯೂನಿಯನ್‌ಗಳಿರುತ್ತಿದ್ದವು. ಈಗವು ಮಾಯವಾಗಿವೆ. ಕೋಟ್ಯಾಧಿಪತಿ ಮಾಲೀಕರುಗಳಿಗೆ ಕಾರ್ಮಿಕರ ಕೂಗು, ಘೋಷಣೆ , ಹರತಾಳಗಳು ಹಿಡಿಸುವುದಿಲ್ಲ. ಆ ಕಾರಣಕ್ಕಾಗಿಯೇ ಅವರು ಈ ಟ್ರೇಡ್ ಯೂನಿಯನ್ನುಗಳನ್ನು ವಿರೋಧಿಗಳಂತೆ ಕಾಣುತ್ತಾರೆ. ಅನೇಕ ಕಂಪನಿಗಳು ಕಾರ್ಮಿಕ ಸಂಘಗಳನ್ನು (Trade Unions) ರಚಿಸಲು ಬಿಡುವುದಿಲ್ಲ. ಕಾರ್ಮಿಕರಿಗೆ ತಮ್ಮ ನೋವನ್ನು ಹೇಳಿಕೊಳ್ಳಲು ಸರಿಯಾದ ವೇದಿಕೆ ಇಲ್ಲದಿದ್ದಾಗ, ಅವರು ಹಿಂಸಾಚಾರದ ಹಾದಿ ಹಿಡಿಯುತ್ತಾರೆ.

ಕೆಲವು ವರ್ಷಗಳ ಹಿಂದೆ ನೊಯಿಡಾ ಸೆಕ್ಟರ್‌ಗಳಲ್ಲಿರುವ ಮೊಬೈಲ್ ಬಿಡಿಭಾಗ ತಯಾರಿಕಾ ಘಟಕಗಳಲ್ಲಿ ನಡೆದ ಗಲಭೆಗಳು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದವು. ವೇತನ ಪಾವತಿಯಲ್ಲಿ ತಿಂಗಳುಗಟ್ಟಲೆ ವಿಳಂಬವಾದಾಗ, ಕಾರ್ಮಿಕರು ಕಂಪನಿಯ ಕಿಟಕಿ ಗಾಜುಗಳನ್ನು ಒಡೆದು, ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದರು. ಇದಕ್ಕೆ ಪ್ರಮುಖ ಕಾರಣ ‘ಮಧ್ಯವರ್ತಿಗಳು’ (Middlemen) ಕಾರ್ಮಿಕರ ಸಂಬಳದಲ್ಲಿ ಕಮಿಷನ್ ಪಡೆಯುವುದು  ಮತ್ತು ಸಮಯಕ್ಕೆ ಸರಿಯಾಗಿ ಹಣ ನೀಡದಿರುವುದು.

ನೊಯಿಡಾ ಹಾಗೂ ಗ್ರೇಟರ್ ನೊಯಿಡಾ  ದಿಲ್ಲಿಯ ಹೊರವಲಯದಲ್ಲಿ ಬರುತ್ತವೆ. ದಿಲ್ಲಿಯಲ್ಲಿ ಕೆಲಸಮಾಡುವ ಒಬ್ಬ ಅಪ್ರಶಿಕ್ಷಿತ ಕಾರ್ಮಿಕನ ಸಂಬಳ 18,500 /- ಪ್ರತಿ ದಿನಕ್ಕೆ 710/-  ಇದ್ದರೆ ಹತ್ತಿರದ  ನೊಯಿಡಾದಲ್ಲಿ ಕೆಲಸಮಾಡುವ ಅನ್ ಸ್ಕಿಲ್ಡ್‌ ಅಥವಾ ಅಪ್ರಶಿಕ್ಷಿತ ಕಾರ್ಮಿಕನ ಸಂಬಳ ಬರೀ ರೂ. 13,500-  ಅಂದಾಜು 526/- ಪ್ರತಿದಿನಕ್ಕೆ. ಇಷ್ಟು ಹತ್ತಿರದಲ್ಲಿಯೇ ವೇತನದಲ್ಲಿ ಇಷ್ಟೊಂದು ವ್ಯತ್ಯಾಸವಿದೆ. ಆದರೆ ಕಂಪನಿ ಇಷ್ಟು ವೇತನ ಕೊಡುವುದಿಲ್ಲ. ಒಂದುವೇಳೆ ಕೊಟ್ಟರೂ ಗುತ್ತಿಗೆದಾರ ತನ್ನ ಲಾಭವನ್ನು ಕಡಿದುಕೊಂಡು ಅವರಿಗೆ ಹತ್ತುಸಾವಿರ ಪಾವತಿಸಿದರೆ ಅದೇ ಪುಣ್ಯ. ಹೀಗಿದೆ ಇಲ್ಲಿನ ವ್ಯವಹಾರ. ಇನ್ನು ಗುತ್ತಿಗೆದಾರರಿಂದ ಮಹಿಳಾ ಕಾರ್ಮಿಕರ ಮೇಲೆ ಲೈಂಗಿಕ ದೌರ್ಜನ್ಯ, ಶೋಷಣೆ,   ಕೆಲಸದಿಂದ ವಜಾಗೊಳಿಸುವ ಬೆದರಿಕೆಯಲ್ಲಿ ಅವರನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ಅಧಮರ ಸಂಖ್ಯೆ ಬಹಳ ದೊಡ್ದದಿದೆ. ಒಟ್ಟಿನಲ್ಲಿ ಕೆಲಸ ಮಾಡುವ ಕಾರ್ಮಿಕರ ಬದುಕು ಯಾವ ರೀತಿಯಲ್ಲಿಯೂ  ನೆಮ್ಮದಿಯಾಗಿಲ್ಲ.

ಹೀಗಿರುವಾಗ ಬೆಲೆಯೇರಿದ ಈ ದುರಿತ ದಿನಗಳಲ್ಲಿ ಕಾರ್ಮಿಕರು ವೇತನವನ್ನು ಹೆಚ್ಚು ಮಾಡಿ ಎಂದು ಕೇಳಿ ಪ್ರತಿಭಟನೆಗೆ ಇಳಿದಿದ್ದರೆ ಅದು ನ್ಯಾಯಯುತವಾಗಿಯೇ ಇದೆ ಹೊರತು ಯಾವ ಅಪರಾಧವೂ ಇಲ್ಲ. ಇನ್ನು ಪೊಲೀಸ್ ವ್ಯವಸ್ಥೆಯ ಬಗ್ಗೆ ಹೆಚ್ಚು ಹೇಳುವುದೇನಿದೆ? ಗಲಭೆಯ ನಂತರ ಸಾವಿರಾರು ಅಪರಿಚಿತ ಕಾರ್ಮಿಕರ ಮೇಲೆ ಕೇಸ್ ದಾಖಲಿಸಲಾಗುತ್ತದೆ. ಇದರಿಂದ ಅಮಾಯಕ ಕಾರ್ಮಿಕರು ಕಾನೂನು ಸಂಕಷ್ಟಕ್ಕೆ ಸಿಲುಕಿ, ಮುಂದಿನ ಜೀವನ ಪರ್ಯಂತ ಉದ್ಯೋಗ ಸಿಗದೆ ಪರದಾಡಬೇಕಾಗುತ್ತದೆ. ಭಾರತವು ‘ಮೇಕ್ ಇನ್ ಇಂಡಿಯಾ’ ಮೂಲಕ ಹೂಡಿಕೆದಾರರನ್ನು ಸೆಳೆಯುತ್ತಿರುವಾಗ, ಇಂತಹ ಗಲಭೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟ ಸಂದೇಶ ರವಾನಿಸುವುದಿಲ್ಲವೇ ?

ಪರಿಸ್ಥಿತಿಯನ್ನು ಸುಧಾರಿಸಲು ಪೊಲೀಸ್ ಬಲವನ್ನು ಬಳಸಿದರಷ್ಟೇ ಸಾಲದು ಬದಲಿಗೆ ಈ ಕೆಳಗಿನ ಬದಲಾವಣೆಗಳು ಅಗತ್ಯ:
ನೇರ ವೇತನ ಪಾವತಿ: ಕಂಪನಿಗಳು ಏಜೆನ್ಸಿಗಳ ಮೂಲಕ ಸಂಬಳ ನೀಡುವ ಬದಲು, ನೇರವಾಗಿ ಕಾರ್ಮಿಕರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಬೇಕು.
ದೂರು ವಿಲೇವಾರಿ ಸಮಿತಿ: ಪ್ರತಿ ಕಾರ್ಖಾನೆಯಲ್ಲೂ ಕಾರ್ಮಿಕರ ದೂರುಗಳನ್ನು ಆಲಿಸಲು ಒಂದು ಆಂತರಿಕ ಸಮಿತಿ ಇರಬೇಕು.
ಕನಿಷ್ಠ ವೇತನ ಪರಿಷ್ಕರಣೆ: ಉತ್ತರ ಪ್ರದೇಶ ಸರ್ಕಾರವು ಹಣದುಬ್ಬರಕ್ಕೆ ಅನುಗುಣವಾಗಿ ಕೈಗಾರಿಕಾ ಕಾರ್ಮಿಕರ ಕನಿಷ್ಠ ವೇತನವನ್ನು ಹೆಚ್ಚಿಸಬೇಕು.
ಓವರ್ ಟೈಮ್ –  ಭಾರತದ ಫ್ಯಾಕ್ಟರೀಸ್ ಆಕ್ಟ್ (Factories Act) ಪ್ರಕಾರ, ಒಬ್ಬ ವ್ಯಕ್ತಿಯು ನಿಗದಿತ ಸಮಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ, ಅವರಿಗೆ ಸಾಮಾನ್ಯ ಗಂಟೆ ವೇತನದ ಎರಡರಷ್ಟು(Double the ordinary rate of wages) ಹಣವನ್ನು ನೀಡಬೇಕು. ಆದರೆ ಕೆಲವು ಕಂಪನಿಗಳು ತಮ್ಮದೇ ಆದ ನಿಯಮಗಳ ಪ್ರಕಾರ ಅತ್ಯಂತ ಕಡಿಮೆ ಪ್ರತಿ ಗಂಟೆ ವೇತನವನ್ನು ನಿಗದಿಸಿರುತ್ತವೆ. ನಮ್ಮದೇ ಕಂಪನಿಯಲ್ಲಿ ಇಪ್ಪತ್ತು ವರ್ಷಗಳಿಂದಲೂ ಗಂಟೆಗೆ 22 ರೂ. 50 ಪೈಸೆಯಂತೆ ಓವರ್ ಟೈಮ್ ನೀಡುತ್ತಿದ್ದರು. ಆ ಔದ್ಯೋಗಿಕ ಪರಿಸರದಲ್ಲಿಯೇ ಅದು ಅತ್ಯಂತ ಕನಿಷ್ಠ ಬೆಲೆಯಾಗಿತ್ತು. ಲಕ್ಷಗಟ್ಟಲೆ ಸಂಬಳ ಪಡೆಯುವ ಅಧಿಕಾರಿಗಳು ಕಾರ್ಮಿಕರ ಹಿತಕ್ಕಾಗಿ ಯಾವ ಪ್ರಯತ್ನವನ್ನೂ ಮಾಡುವುದಿಲ್ಲ ಎಂಬುದು ಇನ್ನೊಂದು ಕಟುವಾಸ್ತವ. ಅಂತಹ ದಯಾಳುಗಳನ್ನು ಮಾಲೀಕರು ಇಟ್ಟುಕೊಳ್ಳುತ್ತಾರೆಯೇ?   ಅಷ್ಟು ದೊಡ್ದ ಹೃದಯ ಹಣವಂತರಿಗಿರುತ್ತದೆಯೇ? 

ಒಟ್ಟಿನಲ್ಲಿ ಇಲ್ಲಿನ ಕಾರ್ಮಿಕರ ಸಮಸ್ಯೆಗಳು ಸುಲಭದಲ್ಲಿ ಪರಿಹಾರವಾಗುವಂತಹದ್ದಲ್ಲ. ನೊಯಿಡಾ ಕಾರ್ಮಿಕ ಗಲಭೆಗಳು ಕೇವಲ ಕಾನೂನು ಸುವ್ಯವಸ್ಥೆಯ ಸಮಸ್ಯೆಯಲ್ಲ, ಅವು ಆಳವಾಗಿ ಬೇರೂರಿರುವ ಆರ್ಥಿಕ ಅಸಮಾನತೆಯ ಪ್ರತಿಬಿಂಬ. ಮಾಲೀಕರು ಮತ್ತು ಕಾರ್ಮಿಕರ ನಡುವೆ ಪರಸ್ಪರ ಗೌರವ ಮತ್ತು ಪಾರದರ್ಶಕತೆ ಇದ್ದಾಗ ಮಾತ್ರ ಇಂತಹ ಘಟನೆಗಳನ್ನು ತಡೆಯಲು ಸಾಧ್ಯ ಹಾಗೂ ನ್ಯಾಯಯುತವಾದ  ಬದಲಾವಣೆಗಳನ್ನು ನಿರೀಕ್ಷಿಸಲು ಸಾಧ್ಯವಾಗಬಹುದು. 

ಇಂದು ಕಾರ್ಮಿಕನು ಕೇಳುತ್ತಿರುವ ಪ್ರಶ್ನೆ ಒಂದೇ – ನನ್ನ  ಶ್ರಮದ ಮೌಲ್ಯ ಎಲ್ಲಿದೆ?  ನನ್ನ ಬದುಕಿನ ಗೌರವ ಎಲ್ಲಿದೆ? 

WhatsApp Image 2025 11 17 at 5.18.15 PM
ರೇಣುಕಾ ನಿಡಗುಂದಿ
+ posts

ಲೇಖಕಿ, ದೆಹಲಿ ನಿವಾಸಿ

ಪೋಸ್ಟ್ ಹಂಚಿಕೊಳ್ಳಿ:

ರೇಣುಕಾ ನಿಡಗುಂದಿ
ರೇಣುಕಾ ನಿಡಗುಂದಿ
ಲೇಖಕಿ, ದೆಹಲಿ ನಿವಾಸಿ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕನ್ನಾಟ್ ಪ್ಲೇಸ್‌ನಲ್ಲಿ ಸಿಜೆಪಿ ಪ್ರತಿಭಟನೆ: ತಡೆ ನೀಡಲು ದೆಹಲಿ ಹೈಕೋರ್ಟ್ ನಕಾರ

ಮುಖ್ಯ ಚುನಾವಣಾ ಆಯುಕ್ತರ (ಸಿಇಸಿ) ರಾಜೀನಾಮೆಗೆ ಆಗ್ರಹಿಸಿ ಅಕ್ಟೋಬರ್ 16ರಂದು ದೆಹಲಿಯ...

ಔರಾದ್‌ | ನೀರು, ಆರೋಗ್ಯ ಸೇವೆ ಪರಿಶೀಲನೆ; ಕಾರ್ಮಿಕರ ಸಮಸ್ಯೆ ಆಲಿಸಿದ ಸಿಇಒ

ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಆರೋಗ್ಯ ಸೇವೆ ಹಾಗೂ ಅಭಿವೃದ್ಧಿ...

ರಾಜ್ಯದ 12 ಜಿಲ್ಲೆಗಳಲ್ಲಿ ಮುಂದಿನ 3 ದಿನ ಭಾರೀ ಮಳೆ: ಹವಾಮಾನ ಇಲಾಖೆ

ತೀವ್ರ ಮಳೆ ಕೊರತೆಯಿಂದ ಕೂಡಿದ್ದ ಮುಂಗಾರು ಹಂಗಾಮು ಕೊನೆಗೊಂಡಿದೆ. ಹಿಂಗಾರು ಆರಂಭವಾಗಿದೆ....