ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಸಂದರ್ಭದಲ್ಲಿ ಇರಾನ್ ಪರವಾಗಿ ಹೂಥೀ ನಾಯಕರು ಯುದ್ಧಕ್ಕೆ ಮುಂದಾಗಿದ್ದಾರೆ. ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲೆ ದಾಳಿ ನಡೆಸುವ ಮೂಲಕ ಇರಾನ್‌ಗೆ ಬೆಂಬಲ ನೀಡಲಾಗುವುದು ಎಂದು ಹೂಥೀ ನಾಯಕರು ಹೇಳಿದ್ದಾರೆ.
ಈ ಬಗ್ಗೆ ರಾಯಿಟರ್ಸ್‌ಗೆ ಹೂಥೀ ನಾಯಕ ಹೇಳಿಕೆ ನೀಡಿದ್ದಾರೆ. ಟೆಹ್ರಾನ್ ಪರವಾಗಿ ಒಗ್ಗಟ್ಟಿನಿಂದ ನಿಲ್ಲಲಾಗುವುದು. ಕೆಂಪು ಸಮುದ್ರದ ಹಡಗು ಮಾರ್ಗದ ಮೇಲೆ ಮತ್ತೆ ದಾಳಿ ಮಾಡಲು ಗುಂಪು ಸಿದ್ಧವಾಗಿದೆ ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಹೌತಿ ಬಂಡುಕೋರರಿಂದ ಶಂಕಿತ ಕ್ಷಿಪಣಿ ದಾಳಿ; ಕಂಟೇನರ್ ಹಡಗಿಗೆ ಹಾನಿ
“ಏನೇ ಬಂದರು ಎದುರಿಸಲು ಸಂಪೂರ್ಣವಾಗಿ ಮಿಲಿಟರಿ ಸಿದ್ಧವಾಗಿದೆ. ಯಾವ ಸಂದರ್ಭದಲ್ಲಿ ದಾಳಿ ನಡೆಸಬೇಕು ಎಂಬುದನ್ನು ನಾಯಕತ್ವ ನಿರ್ಧರಿಸುತ್ತದೆ” ಎಂದು ಹೂಥೀ ನಾಯಕರು ತಿಳಿಸಿರುವುದಾಗಿ ವರದಿಯಾಗಿದೆ.
ಹೂಥೀ ಗುಂಪು ಯೆಮೆನ್ ಬಳಿಯ ಸೂಯೆಜ್ ಕಾಲುವೆಯ ಕಡೆಗೆ ಸಾಗುವ ಬಾಬ್ ಎಲ್-ಮಂಡೇಬ್ ಜಲಸಂಧಿಯನ್ನು ಗುರಿಯಾಗಿಸಬಹುದು. ಈಗಾಗಲೇ ಹಾರ್ಮುಜ್ ಜಲಸಂಧಿ ನಿರ್ಬಂಧದಿಂದ ಜಾಗತಿಕ ತೈಲ ಬಿಕ್ಕಟ್ಟು ಎದುರಾಗಿರುವಾಗ, ಇದೀಗ ಮತ್ತೊಂದು ಜಲಸಂಧಿಯಲ್ಲಿ ದಾಳಿಯು ಇನ್ನಷ್ಟೂ ಬಿಕ್ಕಟ್ಟಿಗೆ ಕಾರಣವಾಗಬಹುದು.
ಯಾರು ಈ ಹೂಥೀಗಳು?
ಹೂಥೀಗಳು ಎಂಬುದು ಯೆಮೆನ್ ದೇಶದಲ್ಲಿ ಸಕ್ರಿಯವಾಗಿರುವ ಒಂದು ಸಶಸ್ತ್ರ ರಾಜಕೀಯ ಮತ್ತು ಧಾರ್ಮಿಕ ಚಳುವಳಿಯಾಗಿದೆ. ಅಧಿಕೃತವಾಗಿ ಇವರನ್ನು ‘ಅನ್ಸಾರ್ ಅಲ್ಲಾ’ (ದೇವರ ಬೆಂಬಲಿಗರು) ಎಂದು ಕರೆಯಲಾಗುತ್ತದೆ. ಇವರು ಶಿಯಾ ಇಸ್ಲಾಂನ ಉಪಪಂಗಡವಾದ ‘ಜೈದಿ’ ಸಮುದಾಯಕ್ಕೆ ಸೇರಿದವರು. ಈ ಚಳುವಳಿಯು 1990 ರ ದಶಕದಲ್ಲಿ ಯೆಮೆನ್‌ನ ಉತ್ತರ ಭಾಗದಲ್ಲಿ ಹುಟ್ಟಿಕೊಂಡಿತು. ಹುಸೇನ್ ಬದ್ರುದ್ದೀನ್ ಅಲ್-ಹೂಥೀ ಇದರ ಸ್ಥಾಪಕ ನಾಯಕ. ಅವರ ಹೆಸರಿನಿಂದಲೇ ಈ ಗುಂಪಿಗೆ ‘ಹೂಥೀ’ ಎಂಬ ಹೆಸರು ಬಂದಿದೆ.
ಸದ್ಯ ಹೂಥೀಗಳು ಯೆಮೆನ್ ಸರ್ಕಾರದ ಭ್ರಷ್ಟಾಚಾರ ಮತ್ತು ಪಶ್ಚಿಮ ದೇಶಗಳ ಪ್ರಭಾವವನ್ನು ವಿರೋಧಿಸಿ ಇವರು 2004 ರಿಂದ ಸಶಸ್ತ್ರ ಹೋರಾಟ ನಡೆಸುತ್ತಿದ್ದಾರೆ. 2014 ರಲ್ಲಿ ಇವರು ಯೆಮೆನ್‌ನ ರಾಜಧಾನಿ ಸನಾವನ್ನು ವಶಪಡಿಸಿಕೊಂಡಿದ್ದು, ಇದರಿಂದಾಗಿ ಸುದೀರ್ಘ ಅಂತರ್ಯುದ್ಧ ನಡೆದಿದೆ.




