ಯೆಮೆನ್‌ನ ಹೌತಿ ಬಂಡುಕೋರರು ನಡೆಸಿದ್ದಾರೆ ಎನ್ನಲಾದ ಕ್ಷಿಪಣಿ ದಾಳಿಯಿಂದಾಗಿ ಗಲ್ಫ್ ಆಫ್ ಅಡೆನ್ ಮೂಲಕ ಪ್ರಯಾಣಿಸುತ್ತಿದ್ದ ಕಂಟೇನರ್ ಹಡಗಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ಭಾನುವಾರ ಹೇಳಿದ್ದಾರೆ. ಇಸ್ರೇಲಿ ವೈಮಾನಿಕ ದಾಳಿಗೆ ಪ್ರತಿಕಾರವಾಗಿ ಹೌತಿ ಬಂಡುಕೋರರು ಪ್ರತಿದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ.
ನವೆಂಬರ್‌ನಲ್ಲಿ ಗಾಜಾ ಪಟ್ಟಿಯಲ್ಲಿರುವ ಹಮಾಸ್ ಮೇಲೆ ಇಸ್ರೇಲ್ ದಾಳಿ ಪ್ರರಂಭವಾದಾಗಿನಿಂದ ದಾಳಿ-ಪ್ರತಿದಾಳಿಗಳು ನಡೆಯುತ್ತಿವೆ. ಇತ್ತೀಚಿಗೆ, ದಾಳಿಗಳು ಸ್ಥಗಿತಗೊಂಡಿದ್ದರು. ಆದರೆ, ಇರಾನ್‌ನಲ್ಲಿ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಅವರನ್ನು ಇಸ್ರೇಲ್ ಹತ್ಯೆಗೈದ ಬಳಿ, ಪ್ರತಿದಾಳಿಗಳು ಮತ್ತೆ ಆರಂಭವಾಗಿವೆ.
ಶನಿವಾರ ನಡೆದ ದಾಳಿಯಲ್ಲಿ, ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆದಿದೆ ಎಂದು ಹಡಗಿನ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ಹಗಡಿನಲ್ಲಿ ಯಾವುದೇ ಬೆಂಕಿ, ನೀರಿನ ಒಳಹರಿವು ಅಥವಾ ತೈಲ ಸೋರಿಕೆ ಕಂಡುಬಂದಿಲ್ಲ ಎಂದು ಬ್ರಿಟಿಷ್ ಮಿಲಿಟರಿಯ ಯುನೈಟೆಡ್ ಕಿಂಗ್‌ಡಮ್ ಮಾರಿಟೈಮ್ ಟ್ರೇಡ್ ಆಪರೇಷನ್ ಸೆಂಟರ್ ಹೇಳಿದೆ.
ಖಾಸಗಿ ಭದ್ರತಾ ಸಂಸ್ಥೆ ಅಂಬ್ರೆ ಕೂಡ ದಾಳಿಯ ಬಗ್ಗೆ ವರದಿ ಮಾಡಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನ ಫುಜೈರಾದಿಂದ ಸೌದಿ ಅರೇಬಿಯಾದ ಜೆಡ್ಡಾಕ್ಕೆ ಹೊರಟಿದ್ದ ಲೈಬೀರಿಯನ್ ಧ್ವಜದ ಕಂಟೈನರ್ ಹಡಗಿನ ಮೇಲೆ ದಾಳಿ ನಡೆದಿದೆ ಎಂದು ವರದಿ ಮಾಡಿವೆ.
ಹೌತಿ ಬಂಡುಕೋರರು ತಮ್ಮ ಕಾರ್ಯಾಚರಣೆಯಲ್ಲಿ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಹಾರಿಸುವ ಮೂಲಕ 70ಕ್ಕೂ ಹೆಚ್ಚು ಹಡಗುಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಈಗಾಗಲೇ ನಾಲ್ಕು ನಾವಿಕರನ್ನು ಕೊಂದಿದ್ದಾರೆ. ಒಂದು ಹಡಗನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ತಮ್ಮ ದಾಳಿಗಳು ಇಸ್ರೇಲ್, ಅಮೆರಿಕ ಅಥವಾ ಬ್ರಿಟನ್‌ಗೆ ಸಂಬಂಧಿಸಿರುವ ಹಡಗುಗಳನ್ನು ಗುರಿಯಾಗಿಸಿಕೊಂಡಿದ್ದು, ಆ ಮೂಲಕ ಗಾಜಾ ಪಟ್ಟಿಯಲ್ಲಿ ಇಸ್ರೇಲ್-ಹಮಾಸ್ ಯುದ್ಧವನ್ನು ನಿಲ್ಲಿಸಲು ಒತ್ತಾಯಿಸಲಾಗುತ್ತಿದೆ ಎಂದು ಹೌತಿಗಳು ಸಮರ್ಥಿಸಿಕೊಂಡಿದ್ದಾರೆ. ಆದಾಗ್ಯೂ, ದಾಳಿಗೊಳಗಾದ ಅನೇಕ ಹಡಗುಗಳು ಈ ರಾಷ್ಟ್ರಗಳಿಗೆ ಸಂಬಂಧಿಸಿದವಲ್ಲ. ಕೆಲವು ಇರಾನ್‌ಗೆ ಸಂಬಂಧಿಸಿದ ಹಡಗುಗಳಾಗಿವೆ ಎಂದು ಹೇಳಲಾಗಿದೆ.
ಹೌತಿಗಳು ಇಸ್ರೇಲ್ ಕಡೆಗೆ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಉಡಾಯಿಸಿದ್ದಾರೆ. ಜುಲೈ 19 ರಂದು ನಡೆದ ದಾಲಿಯಲ್ಲಿ ಟೆಲ್ ಅವಿವ್‌ನಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಇಸ್ರೇಲ್ ಮರುದಿನ ಹೌತಿಗಳ ಹಿಡಿತದಲ್ಲಿರುವ ಬಂದರು ನಗರವಾದ ‘ಹೊಡೆಡಾ’ದ ಮೇಲೆ ವಾಯುದಾಳಿ ನಡೆಸಿದ್ದು, ಇಂಧನ ಡಿಪೋಗಳು ಮತ್ತು ವಿದ್ಯುತ್ ಕೇಂದ್ರಗಳನ್ನು ಧ್ವಂಸಗೊಳಿಸಿದೆ. ಹಲವಾರು ಜನರನ್ನು ಹತ್ಯೆಗೈದಿದೆ ಎಂದು ಹೌತಿಗಳು ಆರೋಪಿಸಿದ್ದಾರೆ.
ಈ ವರದಿ ಓದಿದ್ದೀರಾ?: ಶೋಷಿತರ ವಿರುದ್ಧ ಅಸ್ತ್ರವಾದ ಅತ್ಯಾಚಾರ; ಇಸ್ರೇಲ್‌ನಿಂದ ಹೇಯ ಕೃತ್ಯ – ಭಾರತವೂ ಹೊರತಾಗಿಲ್ಲ
ಟೆಹ್ರಾನ್‌ನಲ್ಲಿ ಹಮಾಸ್ ನಾಯಕನ ಹತ್ಯೆಯು ಇಸ್ರೇಲ್-ಹಮಾಸ್ ನಡುವೆ ಹೊಸ ಪ್ರಕ್ಷುಬ್ದತೆಯನ್ನು ಹುಟ್ಟುಹಾಕಿದೆ. ಮಧ್ಯಪ್ರಾಚ್ಯಕ್ಕೆ ಫೈಟರ್ ಜೆಟ್ ಸ್ಕ್ವಾಡ್ರನ್ ಅನ್ನು ಕಳಿಸುವುದಾಗಿ ಮತ್ತು ಆ ಪ್ರದೇಶದಲ್ಲಿ ವಿಮಾನವಾಹಕ ನೌಕೆಯನ್ನು ನಿಯೋಜಿಸುವುದಾಗಿ ಅಮೆರಿಕ ಮಿಲಿಟರಿ ಹೀಗಾಗಲೇ ಹೇಳಿದೆ.
ಏತನ್ಮಧ್ಯೆ, ಶನಿವಾರ, ಅಮೆರಿಕ ಮಿಲಿಟರಿಯ ಸೆಂಟ್ರಲ್ ಕಮಾಂಡ್ ಪಡೆಗಳು ಯೆಮೆನ್‌ನಲ್ಲಿ ಹೌತಿ ಕ್ಷಿಪಣಿ ಮತ್ತು ಲಾಂಚರ್ ಅನ್ನು ನಾಶಪಡಿಸಿವೆ ಎಂದು ವರದಿಯಾಗಿದೆ.
1,200 ಜನರನ್ನು ಕೊಂದು, 250 ಜನರನ್ನು ಒತ್ತೆಯಾಳಾಗಿಸಿಕೊಂಡ ಇಸ್ರೇಲ್ ಮೇಲೆ ಹಮಾಸ್ ಅಕ್ಟೋಬರ್ 7ರಂದು ದಾಳಿ ನಡೆಸಿತ್ತು. ಈ ದಾಳಿಯು ಯುದ್ಧವನ್ನು ಹುಟ್ಟುಹಾಕಿತು. ಗಾಜಾಪಟ್ಟಿ ಮೇಲೆ ಇಸ್ರೇಲ್ ನಿರಂತರ ದಾಳಿ ನಡೆಸಿದ್ದು, ಈವರೆಗೆ ಕನಿಷ್ಠ 39,550 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದೆ ಎಂದು ವರದಿಯಾಗಿದೆ.