ಇಮ್ರಾನ್‌ ಖಾನ್ | ಅಂದು ಹೀರೋ, ಇಂದು ವಿಲನ್; ಇಬ್ಭಾಗವಾಗಲಿದೆಯಾ ಪಾಕಿಸ್ತಾನ?

Date:

Advertisements
70 ವರ್ಷದ ಇಮ್ರಾನ್ ಖಾನ್‌ ಅಷ್ಟೇ ಅಲ್ಲ, ಪಾಕಿಸ್ತಾನಕ್ಕೂ ಇದು ಅಗ್ನಿಪರೀಕ್ಷೆಯ ಕಾಲ. ಅಲ್ಲಿ ಈಗ ಅರಾಜಕತೆ ತಾಂಡವವಾಡುತ್ತಿದೆ. ವಿಶ್ವಕಪ್ ಎತ್ತಿಹಿಡಿದು ತನ್ನ ದೇಶದ ಹೀರೋ ಆಗಿದ್ದ ಇಮ್ರಾನ್ ಇದೀಗ ಅಲ್ಲಿನ ಸರ್ಕಾರ ಮತ್ತು ಸೇನೆಯ ಪಾಲಿಗೆ ವಿಲನ್ ಆಗಿದ್ದಾರೆ. 

ಪಾಕಿಸ್ತಾನ ಕೊತ ಕೊತ ಕುದಿಯುತ್ತಿದೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಂಧಿಸಿದಂದಿನಿಂದ ಅಲ್ಲಿನ ಸರ್ಕಾರ ಮತ್ತು ಸೇನೆಯ ವಿರುದ್ಧ ಜನ ತಿರುಗಿಬಿದ್ದಿದ್ದಾರೆ. ಸದ್ಯ ಇಮ್ರಾನ್‌ ಖಾನ್ ಜಾಮೀನಿನ ಮೇಲೆ ಹೊರಗಿದ್ದು, ಅಲ್ಲಿನ ಸುಪ್ರೀಂ ಕೋರ್ಟ್‌ನಲ್ಲಿ ಅವರ ವಿರುದ್ದದ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ.

ಶೆಹಭಾಜ್ ಷರೀಫ್ ನೇತೃತ್ವದ ಸಮ್ಮಿಶ್ರ ಸರ್ಕಾರ ಹಾಗೂ ನಿಜವಾದ ಅರ್ಥದಲ್ಲಿ ಅಲ್ಲಿನ ‘ಶಕ್ತಿ ಕೇಂದ್ರ’ವಾದ ಸೇನೆ ಎರಡೂ ಕಡೆಗಳಿಂದ ಇಮ್ರಾನ್ ಮೇಲೆ ಪ್ರಹಾರ ಮಾಡಲಾಗುತ್ತಿದೆ. ಇಮ್ರಾನ್ ಬೆಂಬಲಿಗರು ಸರ್ಕಾರದ ವಿರುದ್ದ ತಿರುಗಿಬಿದ್ದು, ಪ್ರತಿಭಟನೆಗೆ ಇಳಿದಿದ್ದಾರೆ. ಹಲವೆಡೆ ಪ್ರತಿಭಟನೆ ಹಿಂಸಾಚಾರಕ್ಕೂ ತಿರುಗಿ ಒಂದು ರೀತಿಯ ಅಂತರ್ಯುದ್ಧದ ಸ್ಥಿತಿ ಏರ್ಪಟ್ಟಿದೆ. ಪೇಶಾವರದಿಂದ ಕರಾಚಿವರೆಗೆ ಹಿಂಸಾಚಾರ ಹರಡಿದೆ. ಲಾಹೋರ್‌ನ ಸೇನಾ ಕಚೇರಿ ಸೇರಿದಂತೆ ಹಲವು ಕಚೇರಿಗಳನ್ನು ಗುರಿಯಾಗಿಸಿಕೊಂಡು ಹಿಂಸಾಚಾರ ಎಸಗಲಾಗುತ್ತಿದೆ.

ಇಮ್ರಾನ್ ಅಭಿಮಾನಿಗಳ ಗುರಿ ಪಾಕಿಸ್ತಾನ್ ಮುಸ್ಲಿಂ ಲೀಗ್ ನೇತೃತ್ವದ ಸರ್ಕಾರಕ್ಕಿಂತ ಅಲ್ಲಿನ ಸೇನೆಯೇ ಆಗಿರುವಂತೆ ಕಾಣುತ್ತಿದೆ. ಪಾಕಿಸ್ತಾನದಲ್ಲಿ ಹಿಂದೆಂದೂ ಸೇನೆಯ ವಿರುದ್ಧ ಸಾರ್ವಜನಿಕರು ಈ ರೀತಿ ಬಂಡೆದ್ದ ಉದಾಹರಣೆಗಳೇ ಇಲ್ಲ. ಇದುವರೆಗೆ ಯಾರೂ ಇಮ್ರಾನ್‌ನಂತೆ ಸೇನೆಯನ್ನು ಪ್ರಶ್ನಿಸಿರಲಿಲ್ಲ; ಸೇನೆಯನ್ನು ಕೇವಲ ಪ್ರಶ್ನಿಸುತ್ತಿರುವುದಷ್ಟೇ ಅಲ್ಲ, ಅದರ ಮೇಲೆ ದಾಳಿ ಕೂಡ ಮಾಡಲಾಗುತ್ತಿದೆ. ಇಮ್ರಾನ್ ಖಾನ್ ಪ್ರಧಾನಿಯಾಗಿದ್ದಾಗ ಭ್ರಷ್ಟಾಚಾರ ಮಾಡಿದ್ದರು ಎನ್ನುವ ಆರೋಪವೇ ಸದ್ಯ ಇದಕ್ಕೆಲ್ಲ ಕಾರಣವಾಗಿದೆ.

Advertisements

ಈ ಸುದ್ದಿ ಓದಿದ್ದೀರಾ: ಈ ದಿನ ಸಂಪಾದಕೀಯ | ತೃತೀಯ ರಂಗಕ್ಕೆ ಶಕ್ತಿ ತುಂಬಲಿದೆಯೇ ಕರ್ನಾಟಕದ ಗೆಲುವು?

ಪಾಕಿಸ್ತಾನದ ಯಾವ ಪ್ರಧಾನಿಯೂ ಅವರ ಅವಧಿಯನ್ನು ಪೂರ್ಣಗೊಳಿಸಿದ ಇತಿಹಾಸವೇ ಇಲ್ಲ. ಸೇನೆಯು ಅವಧಿಗೆ ಮುಂಚೆಯೇ ಅವರನ್ನು ಪದಚ್ಯುತಗೊಳಿಸಿ ಜೈಲಿಗೆ ತಳ್ಳುತ್ತದೆ, ಇಲ್ಲವೇ ಅವರು ವಿದೇಶಕ್ಕೆ ಪಲಾಯನ ಮಾಡುತ್ತಾರೆ. ಅಲ್ಲಿನ ಮಾಜಿ ಪ್ರಧಾನಿಗಳ ಪೈಕಿ ಜುಲ್ಫೀಕರ್ ಭುಟ್ಟೋಗೆ ಮರಣದಂಡನೆ ವಿಧಿಸಲಾಗಿತ್ತು. ಅವರ ಪುತ್ರಿ ಬೆನಜೀರ್ ಭುಟ್ಟೋ ಅವರನ್ನು 15 ವರ್ಷದ ಉಗ್ರನೊಬ್ಬ ಕೊಂದುಹಾಕಿದ್ದ. ನವಾಜ್ ಷರೀಫ್ ಅವರನ್ನು ದೇಶದಿಂದ ಗಡೀಪಾರು ಮಾಡಿದರೆ, ಶಾಹೀದ್ ಖಾಕನ್ ಅಬ್ಬಾಸಿ ಅವರನ್ನು ಜೈಲಿಗೆ ತಳ್ಳಲಾಗಿತ್ತು. ಇಮ್ರಾನ್ ಖಾನ್‌ ಅವರಿಗೂ ಇಂಥದ್ದೇ ಗತಿ ಕಾಣಿಸಲು ಅಲ್ಲಿನ ಸರ್ಕಾರ ಮತ್ತು ಸೇನೆ ಬಯಸುತ್ತಿರುವಂತಿದೆ. ಆದರೆ, ಅವರ ಆ ಆಸೆ ಅಷ್ಟು ಸುಲಭಕ್ಕೆ ಈಡೇರುವಂತೆ ಕಾಣುತ್ತಿಲ್ಲ.      

ಇಮ್ರಾನ್ ಖಾನ್ ಸಾಮಾನ್ಯನಲ್ಲ; ಸಿವಿಲ್ ಇಂಜಿನಿಯರ್ ಅಪ್ಪ ಮತ್ತು ಸೂಫಿ ಹಿನ್ನೆಲೆಯ ಅಮ್ಮನ ಮುದ್ದಿನ ಮಗ ಇಮ್ರಾನ್, ವಿದ್ಯಾಭ್ಯಾಸಕ್ಕೆಂದು ಇಂಗ್ಲೆಂಡ್‌ಗೆ ಹೋಗುವಷ್ಟು ಸ್ಥಿತಿವಂತನಾಗಿದ್ದರು. ಅತ್ಯಂತ ಸುಂದರಾಂಗನಾಗಿದ್ದ ಇಮ್ರಾನ್, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಓದುವಾಗ ತನ್ನ ಪ್ಲೇ ಬಾಯ್ ಗುಣದಿಂದ ಹೆಸರು ಮಾಡಿದ್ದರು. ಅಲ್ಲಿ ಹಲವು ಸುಂದರಿಯರೊಂದಿಗೆ ಸಲ್ಲಾಪ, ಪಾರ್ಟಿಗಳಲ್ಲಿ ಮಸ್ತಿ ಇತ್ಯಾದಿಗಳ ಮೂಲಕ ವಿದ್ಯಾರ್ಥಿ ದೆಸೆಯಲ್ಲಿಯೇ ಟ್ಯಾಬ್ಲಾಯ್ಡ್‌ಗಳಿಗೆ ಆಹಾರವಾಗಿದ್ದರು. ಇವೆಲ್ಲಕ್ಕಿಂತ, ಇಮ್ರಾನ್ ಹೆಚ್ಚು ಖ್ಯಾತಿ ಗಳಿಸಿದ್ದು ಒಬ್ಬ ಕ್ರಿಕೆಟ್ ಆಟಗಾರನಾಗಿ.

ಪಾಕಿಸ್ತಾನ

ಇಂಗ್ಲೆಂಡ್ ಇಮ್ರಾನ್‌ಗೆ ಎರಡನೇ ಮನೆ ಆಗಿತ್ತು. ಕ್ರಿಕೆಟ್ ಆಡಲು ಇಂಗ್ಲೆಂಡ್‌ನಿಂದ ಪಾಕಿಸ್ತಾನಕ್ಕೆ ಬರುತ್ತಿದ್ದ ಇಮ್ರಾನ್, ತನ್ನ ಆಳದ ಆಸಕ್ತಿ ಮತ್ತು ಪ್ರತಿಭೆಯಿಂದ ಆಟದಲ್ಲಿ ಬಹುಬೇಗನೇ ಯಶಸ್ಸು ಕಂಡರು. ತನ್ನ ನಾಯಕತ್ವದ ಗುಣದಿಂದ ಪಾಕಿಸ್ತಾನ ಕ್ರಿಕೆಟ್ ತಂಡದ ಕ್ಯಾಪ್ಟನ್ ಆದರು. ಹೀಗೆ ಕ್ಯಾಪ್ಟನ್ ಆಗಿದ್ದುಕೊಂಡೇ 1992ರಲ್ಲಿ ಪಾಕಿಸ್ತಾನಕ್ಕೆ ವಿಶ್ವಕಪ್ ತಂದುಕೊಟ್ಟರು. ನಂತರ ಪಾಕಿಸ್ತಾನದಲ್ಲಿ ಈತನ ಜನಪ್ರಿಯತೆ ವ್ಯಾಪಕವಾಗಿ ಹಬ್ಬಿತ್ತು. ದೇಶವಾಸಿಗಳ ಕಣ್ಣಲ್ಲಿ ಇಮ್ರಾನ್ ಸಾಟಿಯಿಲ್ಲದ ಹೀರೋ ಆಗಿದ್ದರು; ತನ್ನ ಜನಪ್ರಿಯುತೆಯನ್ನೇ ಬಳಸಿಕೊಂಡ ಇಮ್ರಾನ್ ಕ್ಯಾನ್ಸರ್‌ನಿಂದ ಸತ್ತ ತನ್ನ ತಾಯಿಯ ಜ್ಞಾಪಕಾರ್ಥವಾಗಿ ಲಾಹೋರ್‌ನಲ್ಲಿ ಬೃಹತ್ ಕ್ಯಾನ್ಸರ್ ಆಸ್ಪತ್ರೆಯನ್ನು ನಿರ್ಮಿಸಿದರು.    

ಈ ಸುದ್ದಿ ಓದಿದ್ದೀರಾ: ಸಿಎಂ ಅಧಿಕಾರಾವಧಿ ವಿಚಾರ | ಎಂಬಿ ಪಾಟೀಲ್‌ಗೆ ಎಚ್ಚರಿಕೆ ನೀಡಿದ ಸಂಸದ ಡಿಕೆ ಸುರೇಶ್

ಇಮ್ರಾನ್ ತನ್ನ 39ನೇ ವಯಸ್ಸಿನಲ್ಲಿ ಕ್ರಿಕೆಟ್‌ನಿಂದ ನಿವೃತ್ತಿ ಪಡೆದರು; ಅದಾಗಿ ನಾಲ್ಕು ವರ್ಷಗಳ ನಂತರ 1996ರಲ್ಲಿ ಪಾಕಿಸ್ತಾನ್ ತೆಹ್ರೀಖ್ ಇ ಇನ್ಸಾಫ್ (ಪಿಟಿಐ) ಪಕ್ಷವನ್ನು ಸ್ಥಾಪಿಸಿದರು. ಅಲ್ಲಿಯವರೆಗೂ ದೇಶದ ರಾಜಕಾರಣ, ಸಂಸ್ಕೃತಿ ಇತ್ಯಾದಿ ವಿಚಾರಗಳ ಬಗ್ಗೆ ಎಂದೂ ಮಾತನಾಡದಿದ್ದ ಇಮ್ರಾನ್, ಅಲ್ಲಿಂದ ಸಾರ್ವಜನಿಕವಾಗಿ ಮಾತನಾಡತೊಡಗಿದರು.

ಪಶ್ಚಿಮದ ಸ್ವಾತಂತ್ರ್ಯ, ಸಂಪತ್ತು, ಲೌಕಿಕ ಬದುಕು ಅನುಭವಿಸಿ ಬಂದಿದ್ದ ಇಮ್ರಾನ್‌ನ ಪರಿಭಾಷೆ ರಾಜಕೀಯಕ್ಕೆ ಬಂದ ತಕ್ಷಣ ಬದಲಾಯಿತು. ಹೆಣ್ಣುಮಕ್ಕಳ ಶಿಕ್ಷಣ, ಅವರ ಹಕ್ಕುಗಳ ಬಗ್ಗೆ ಸಂಪ್ರದಾಯವಾದಿ ಧೋರಣೆ, ತಾಲಿಬಾನ್‌ಗೆ ಬೆಂಬಲ ಇತ್ಯಾದಿ ಮಡಿವಂತ ನಿಲುವುಗಳನ್ನು ಅನುಸರಿಸತೊಡಗಿದರು. ಖ್ಯಾತಿಯ ಉತ್ತುಂಗದಲ್ಲಿದ್ದಾಗ ಇಮ್ರಾನ್‌ಗೆ ಮಹಮ್ಮದ್ ಜಿಯಾ ಉಲ್ ಹಕ್ ಮತ್ತು ನವಾಜ್ ಷರೀಫ್ ರಾಜಕೀಯಕ್ಕೆ ಸೇರಲು ಆಹ್ವಾನಿಸಿದ್ದರು. ಅದನ್ನು ಸುಲಭವಾಗಿ ನಿರಾಕರಿಸಿದ್ದ ಇಮ್ರಾನ್‌ಗೆ ರಾಜಕಾರಣದ ನಿಜವಾದ ಸೂಕ್ಷ್ಮ, ಸವಾಲುಗಳು ಅರ್ಥವಾಗಿದ್ದು ತಾನೇ ಸ್ವತಂತ್ರ ಪಕ್ಷವೊಂದನ್ನು ಕಟ್ಟಿದ ಮೇಲೆ.

1997ರ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ನಿಂತಿದ್ದ ಅವರು ಎರಡೂ ಕ್ಷೇತ್ರಗಳಲ್ಲಿ ಸೋತರು. ನಂತರ ಪರ್ವೇಜ್ ಮುಷರಫ್ ಅವರ ಮಿಲಿಟರಿ ಆಡಳಿತವನ್ನು ಬೆಂಬಲಿಸಿದರು. ನಂತರ ಸಾರ್ವಜನಿಕ ಬದುಕಿನಲ್ಲಿ ಹಲವು ಏಳುಬೀಳುಗಳನ್ನು ಕಂಡರು. ನಿಧಾನಕ್ಕೆ ಅವರ ದೆಸೆ ಕುದುರಿತು. ಅವರ ಭಾಷಣಕ್ಕೆ ಲಕ್ಷಾಂತರ ಜನರು ಸೇರತೊಡಗಿದರು. ಇಮ್ರಾನ್ ಆಳುವವರಿಗೆ ಕಂಟಕವಾಗಿ ಕಾಣತೊಡಗಿದರು. ಹತ್ತಾರು ವಿವಾದಗಳು ಅವರನ್ನು ಸುತ್ತುವರಿದವು. ಕೊನೆಗೆ 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದ ಇಮ್ರಾನ್ ಖಾನ್, ಪಾಕಿಸ್ತಾನದ 22ನೇ ಪ್ರಧಾನ ಮಂತ್ರಿ ಆದರು. ಅವತ್ತು ಸೇನೆ ಅವರನ್ನು ಬೆಂಬಲಿಸಿತ್ತು.   

ಇಮ್ರಾನ್ ಖಾನ್  ಅಧಿಕಾರದಲ್ಲಿದ್ದದ್ದು ಮೂರೂವರೆ ವರ್ಷಗಳ ಕಾಲ ಮಾತ್ರ. ಷರೀಫ್ ಕುಟುಂಬದ ಹಿಡಿತದಲ್ಲಿರುವ ಪಾಕಿಸ್ತಾನ್ ಮುಸ್ಲಿಂ ಲೀಗ್, ಮತ್ತು ಭುಟ್ಟೊ ಕುಟುಂಬದ ಹಿಡಿತದಲ್ಲಿರುವ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಏಪ್ರಿಲ್ 2022ರಲ್ಲಿ ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಿದ್ದವು. ಅಷ್ಟೊತ್ತಿಗೆ ಸೇನೆ ಇಮ್ರಾನ್‌ ಅವರಿಂದ ದೂರವಾಗಿತ್ತು.

ಈ ಸುದ್ದಿ ಓದಿದ್ದೀರಾ: ಎಐಸಿಸಿ ಅಧ್ಯಕ್ಷರಾಗಿ ಖರ್ಗೆ ಆಯ್ಕೆ ಕಾಂಗ್ರೆಸ್‌ನ ಅತ್ಯುತ್ತಮ ನಿರ್ಧಾರ: 9 ಕಾರಣಗಳು

ನಂತರ ಇಮ್ರಾನ್ ಸುಮ್ಮನೇ ಕೂರಲಿಲ್ಲ; ದೇಶಾದ್ಯಂತ ಸುತ್ತುತ್ತಾ ತನ್ನ ರಾಜಕೀಯ ವಿರೋಧಿಗಳನ್ನು, ಸೇನೆಯನ್ನು ಟೀಕಿಸತೊಡಗಿದ್ದರು. ದೇಶ ಚುನಾವಣೆಗೆ ಹೋಗಬೇಕು ಎನ್ನುವುದು ಅವರ ಒತ್ತಾಯವಾಗಿತ್ತು. ಚುನಾವಣೆ ನಡೆದರೆ ಮತ್ತೆ ತಾನೇ ಅಧಿಕಾರಕ್ಕೆ ಬರುತ್ತೇನೆ ಎನ್ನುವುದು ಇಮ್ರಾನ್ ನಂಬಿಕೆ. ತಾನು ಜೈಲು ಸೇರಲು ಲಂಡನ್‌ನಲ್ಲಿರುವ ನವಾಜ್ ಷರೀಫ್ ಮತ್ತು ಅವರ ಸೋದರ, ಪ್ರಧಾನಿ ಶಹನಾಜ್ ಷರೀಫ್ ಕಾರಣ ಎನ್ನುವುದು ಇಮ್ರಾನ್ ವಾದ.

ಈ ಹಿಂದಿನ ಪ್ರಧಾನಿಗಳಂತೆ ಇಮ್ರಾನ್ ಖಾನ್ ವಿರುದ್ಧವೂ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿವೆ. ಅಲ್ ಖಾದಿರ್ ಟ್ರಸ್ಟ್ ಪ್ರಕರಣ ಮತ್ತು ರಿಯಲ್ ಎಸ್ಟೇಟ್ ಸಂಸ್ಥೆಯಿಂದ ಇಮ್ರಾನ್ ಮತ್ತು ಆತನ ಪತ್ನಿ ಹಣ ಮತ್ತು ಜಮೀನು ಪಡೆದುಕೊಂಡಿದ್ದಾರೆ ಎನ್ನುವ ಆರೋಪಗಳು ಎದುರಾಗಿವೆ. ಇಂಥ ಆರೋಪಗಳು ಬರಲು ಅವರ ಮೂರನೇ ಪತ್ನಿ ಬುಶ್ರಾ ಮೇನಕಾ ಕಾರಣ ಎನ್ನಲಾಗುತ್ತಿದೆ. ಆಕೆ ಒಂದು ಬಗೆಯ ಅಧ್ಯಾತ್ಮ ಚಿಂತಕಿ. ಇಮ್ರಾನ್ ಇತ್ತೀಚೆಗೆ ಅಧ್ಯಾತ್ಮದ ಬಗ್ಗೆ ಹೆಚ್ಚಾಗಿ ಮಾತನಾಡುತ್ತಾರೆ ಎಂದರೆ, ಅದಕ್ಕೆ ಆಕೆಯೇ ಕಾರಣ.

ಇಮ್ರಾನ್ ಖಾನ್

ಷರೀಫ್ ಕುಟುಂಬ ಮತ್ತು ಭುಟ್ಟೋ ಕುಟುಂಬಗಳು ಪಾಕಿಸ್ತಾನವನ್ನು ಪೀಡಿಸುತ್ತಿರುವ ಮಾಫಿಯಾ ಕುಟುಂಬಗಳು ಎನ್ನುವುದು ಇಮ್ರಾನ್ ಅನಿಸಿಕೆ. ತನ್ನನ್ನು ಇಲ್ಲವಾಗಿಸುವುದೇ ಅವರ ಗುರಿ ಎಂದು ಇಮ್ರಾನ್ ಬಹಿರಂಗವಾಗಿಯೇ ಹೇಳುತ್ತಿದ್ದಾರೆ. ಕಳೆದ ವರ್ಷ ವಜೀರಾಬಾದ್‌ನಲ್ಲಿ ಇಮ್ರಾನ್ ಹತ್ಯೆಗೆ ಸಂಚು ನಡೆದಿತ್ತು. ಈಗಲೂ ಅಂಥ ಪ್ರಯತ್ನಗಳು ನಡೆಯುತ್ತಿವೆ ಎನ್ನುವುದು ಇಮ್ರಾನ್ ಖಾನ್ ಆರೋಪ. ಆದರೆ, ತನ್ನನ್ನು ಮುಗಿಸಿದರೆ, ಪಾಕಿಸ್ತಾನ ಮತ್ತೆ ಇಬ್ಬಾಗವಾಗುತ್ತದೆ ಎನ್ನುವ ಎಚ್ಚರಿಕೆಯನ್ನೂ ಇಮ್ರಾನ್ ಅಲ್ಲಿನ ಸರ್ಕಾರಕ್ಕೆ ಮತ್ತು ಸೇನೆಗೆ ನೀಡಿದ್ದಾರೆ.

ಪಾಕಿಸ್ತಾನದ ಜನ ಸೇನೆಯ ವಿರುದ್ಧ ತಿರುಗಿಬಿದ್ದಿರುವುದು ಇದೇ ಮೊದಲು. ವಿಶೇಷವಾಗಿ ಅಲ್ಲಿನ ಯುವಜನತೆ ಮತ್ತು ಮಹಿಳೆಯರು ಇಮ್ರಾನ್‌ರನ್ನು ಬೆಂಬಲಿಸುತ್ತಿದ್ದಾರೆ. ಹೀಗಾಗಿ ಸೇನೆ ಇಮ್ರಾನ್ ವಿಚಾರದಲ್ಲಿ ಯಾವುದೇ ಅತಿರೇಕದ ನಿರ್ಧಾರ ತೆಗೆದುಕೊಳ್ಳದೆ ಕಾದು ನೋಡುವ ತಂತ್ರದ ಮೊರೆ ಹೋಗಿದೆ.

ಈ ಸುದ್ದಿ ಓದಿದ್ದೀರಾ: 50 ವರ್ಷಗಳಲ್ಲಿ ಹವಾಮಾನ ವೈಪರೀತ್ಯದಿಂದ ವಿಶ್ವದಲ್ಲಿ 50 ಲಕ್ಷ ಸಾವು; ಭಾರತದಲ್ಲಿ ಲಕ್ಷ ದಾಟಿದ ಮರಣ ಸಂಖ್ಯೆ

ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಸದ್ಯಕ್ಕೆ ಅತ್ಯಂತ ಜನಪ್ರಿಯ ರಾಜಕಾರಣಿ. ಎಷ್ಟರ ಮಟ್ಟಿಗೆ ಎಂದರೆ, ವಿಚಾರಣೆಗಾಗಿ ಇಮ್ರಾನ್‌ ಅವರನ್ನು ಇತ್ತೀಚೆಗೆ ಅಲ್ಲಿನ ಸುಪ್ರೀಂ ಕೋರ್ಟ್‌ಗೆ ಕರೆದೊಯ್ದಾಗ ನ್ಯಾಯಮೂರ್ತಿಗಳು ‘ನೈಸ್ ಟು ಸೀ ಯು’ ಎಂದಿದ್ದರು. ನ್ಯಾಯಮೂರ್ತಿಗಳ ವರ್ತನೆ ಬಗ್ಗೆ ಸೇನೆ ಆಕ್ಷೇಪಣೆ ಎತ್ತಿದೆ.

70 ವರ್ಷದ ಇಮ್ರಾನ್ ಖಾನ್‌ಗೆ ಅಷ್ಟೇ ಅಲ್ಲ, ಪಾಕಿಸ್ತಾನಕ್ಕೂ ಇದು ಅಗ್ನಿಪರೀಕ್ಷೆಯ ಕಾಲ. ಅಲ್ಲಿ ಈಗ ಅರಾಜಕತೆ ತಾಂಡವವಾಡುತ್ತಿದೆ. ವಿಶ್ವಕಪ್ ಎತ್ತಿಹಿಡಿದು ತನ್ನ ದೇಶದ ಹೀರೋ ಆಗಿದ್ದ ಇಮ್ರಾನ್ ಇದೀಗ ಅಲ್ಲಿನ ಸರ್ಕಾರ ಮತ್ತು ಸೇನೆಯ ಪಾಲಿಗೆ ವಿಲನ್ ಆಗಿದ್ದಾರೆ. ಕ್ರಿಕೆಟಿಗನಾಗಿ ಯಶಸ್ಸು ಕಂಡಿದ್ದ ಇಮ್ರಾನ್, ಮೋಜಿನ ಜೀವನಕ್ಕೆ ಖ್ಯಾತನಾಗಿದ್ದ ಇಮ್ರಾನ್, ಹತ್ತಾರು ಸುಂದರಿಯರ, ಹಲವು ಪತ್ನಿಯರ ನಲ್ಲನಾದ ಇಮ್ರಾನ್ ಇಂದು ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಅವರ ಜೀವ ಅಪಾಯದಲ್ಲಿದೆ.

ಇಮ್ರಾನ್‌ ಉತ್ತಮ ರಾಜಕಾರಣಿಯೇನಲ್ಲ. ಉತ್ತಮ ಆಡಳಿತಗಾರರೂ ಆಗಿರಲಿಲ್ಲ. ಪ್ರಜಾಪ್ರಭುತ್ವದ ಅಗತ್ಯ, ನಾಯಕನೊಬ್ಬನ ಜವಾಬ್ದಾರಿ, ಮುತ್ಸದ್ದಿಯೊಬ್ಬನ ವಿವೇಕ, ತಂತ್ರಗಾರಿಕೆ, ಜನಸಮುದಾಯದ ನಾಡಿಮಿಡಿತ ಇದ್ಯಾವುದೂ ಇಮ್ರಾನ್‌ಗೆ ಗೊತ್ತಿಲ್ಲ. ಆದರೆ, ಇಮ್ರಾನ್ ಮಹಾ ಬಲಿಷ್ಠವಾದ ಸೇನೆಯನ್ನು ಎದುರು ಹಾಕಿಕೊಂಡಿದ್ದಾರೆ. ಪಾಕಿಸ್ತಾನದಲ್ಲಿ ಯಾವ ಸರ್ಕಾರ ಬಂದರೂ ತನ್ನ ನಿಯಂತ್ರಣದಲ್ಲೆ ಇರಬೇಕು ಎಂದು ಬಯಸುವ ಸೇನೆ ಇಮ್ರಾನ್‌ ವಿರುದ್ಧ ಕೆಂಡ ಕಾರುತ್ತಿದೆ. ದ್ವೇಷದ ರಾಜಕೀಯ ಚರಿತ್ರೆಯಿರುವ ಪಾಕಿಸ್ತಾನದಲ್ಲಿ ಇಮ್ರಾನ್‌ ಅವರ ಮುಂದಿನ ಪಾಡು ಏನಾಗಲಿದೆ ಎನ್ನುವುದನ್ನು ಕಾಲವೇ ಉತ್ತರಿಸಲಿದೆ.

222 e1692343004458
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಾಝಾದಲ್ಲಿ ಕದನ ವಿರಾಮ ಪ್ರಸ್ತಾಪಕ್ಕೆ ಒಪ್ಪಿಕೊಂಡ ಹಮಾಸ್: ವರದಿ

ಗಾಝಾದ ಮೇಲೆ ಇಸ್ರೇಲ್ ದಾಳಿ ಕೊನೆಗೊಳಿಸುವ ನಿಟ್ಟಿನಲ್ಲಿ ಕದನ ವಿರಾಮ ಪ್ರಸ್ತಾಪದ...

ಚುನಾವಣೆ ಆಯೋಗದ ಪತ್ರಿಕಾಗೋಷ್ಠಿ ಆರೋಪಗಳಿಗೆ ಉತ್ತರ ಕೊಟ್ಟಿತೆ? ಉಳಿದಿರುವ ಪ್ರಶ್ನೆಗಳೇನು?

ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳು ಆಯೋಗದ ಈ ನಡೆಯನ್ನು "ಸಂವಿಧಾನಕ್ಕೆ ಅಪಮಾನ"...

ದರೋಡೆ ಮಾಡಿ ಕೊಡುಗೆ ನೀಡುವ ಮಾಡರ್ನ್ ರಾಬಿನ್ ಹುಡ್- ಮೋದಿ!

ಇಂಗ್ಲೆಂಡಿನ ಜನಪದ ಕಳ್ಳ ರಾಬಿನ್ ಹುಡ್ ಶ್ರೀಮಂತರ ಬಂಗಲೆಗಳನ್ನು ದರೋಡೆ ಮಾಡಿ...

Download Eedina App Android / iOS

X