ಈ ದಿನ ಸಂಪಾದಕೀಯ | ತೃತೀಯ ರಂಗಕ್ಕೆ ಶಕ್ತಿ ತುಂಬಲಿದೆಯೇ ಕರ್ನಾಟಕದ ಗೆಲುವು?

Date:

ಪ್ರಾದೇಶಿಕ ಪಕ್ಷಗಳ ನೇತಾರರೆನಿಸಿಕೊಂಡವರು ಕೊಂಚ ತಗ್ಗಿ-ಬಗ್ಗಿ ನಡೆದರೆ, ತಮ್ಮ ಶಕ್ತಿ-ದೌರ್ಬಲ್ಯಗಳನ್ನು ಅರಿತು ಮುನ್ನಡಿಯಿಟ್ಟರೆ, ತೃತೀಯರಂಗಕ್ಕೊಂದು ಭವಿಷ್ಯವಿದೆ. ಕೋಮುವಾದಿ ವಿಷ ಬಿತ್ತುವ ಬಿಜೆಪಿಯನ್ನು ಬಗ್ಗು ಬಡಿಯಲೇಬೇಕಾಗಿದೆ. ಶಾಂತಿ, ಸಹಬಾಳ್ವೆ ಬಯಸುವವರೆಲ್ಲ ಒಂದಾಗಿ ಹೋರಾಡಿ ಗೆದ್ದ ಕರ್ನಾಟಕದ ಗೆಲುವು ಹೊಸ ಹುಮ್ಮಸ್ಸಿಗೆ, ತೃತೀಯ ರಂಗದ ಕನಸಿಗೆ ಕಣ್ಣಾಗಲಿ

ಮೇ 20, 2023- ಕರ್ನಾಟಕ ರಾಜಕಾರಣದ ಮಟ್ಟಿಗೆ ಐತಿಹಾಸಿಕ ದಿನ. ಬಿಜೆಪಿಯ ಕೋಮುವಾದಿ ಸರ್ಕಾರವನ್ನು ಕಿತ್ತೊಗೆದು, ದಕ್ಷಿಣ ಭಾರತವನ್ನು ಬಿಜೆಪಿ ಸರ್ಕಾರದಿಂದ ಮುಕ್ತ ಮಾಡಿ, ನಾಡಿಗೆ ಬೇಕಾದ ಬಹುತ್ವ ಸರ್ಕಾರವನ್ನು ಬರಮಾಡಿಕೊಂಡ ದಿನ. ಅಂದು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಪ್ರಮಾಣ ವಚನ ಸ್ವೀಕರಿಸಿದ ಕ್ಷಣಕ್ಕೆ ದೇಶದ ಪ್ರತಿಪಕ್ಷ ರಾಜಕಾರಣದ ಅತಿರಥ ಮಹಾರಥರೆಲ್ಲ ಸಾಕ್ಷಿಯಾಗಿದ್ದರು. ಕಾಶ್ಮೀರದ ಫಾರೂಕ್ ಅಬ್ದುಲ್ಲಾರಿಂದ ಹಿಡಿದು ತಮಿಳುನಾಡಿನ ಸ್ಟ್ಯಾಲಿನ್ ವರೆಗೆ, ಪ್ರಾದೇಶಿಕ ಪಕ್ಷಗಳ ಪೈಲ್ವಾನರು ಪಾಲ್ಗೊಂಡಿದ್ದರು. ಚದುರಿ ಹೋಗಿರುವ ವಿರೋಧ ಪಕ್ಷಗಳಿಗೆ ಮತ್ತು ಅದರ ಲಾಭ ಪಡೆದು ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿಗೆ ಸ್ಪಷ್ಟ ಸಂದೇಶ ರವಾನಿಸಿದ್ದರು. ಆ ಮೂಲಕ ತೃತೀಯ ರಂಗದ ಅಗತ್ಯ ಮತ್ತು ಅನಿವಾರ್ಯತೆಯನ್ನು ಕಣ್ಣಮುಂದಿರಿಸಿದ್ದರು.

ದೇಶದಾದ್ಯಂತ ನೆಲಮಟ್ಟ ಮುಟ್ಟಿದ್ದ ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದ ಗೆಲುವು ಹೊಸ ಹುಮ್ಮಸ್ಸು ಮತ್ತು ಚೈತನ್ಯ ನೀಡಿದೆ. 2024ರ ಲೋಕಸಭಾ ಚುನಾವಣೆಗೆ ತೃತೀಯ ರಂಗ ಒಗ್ಗೂಡುವ ಕನಸಿಗೆ ರೆಕ್ಕಪುಕ್ಕ ಮೂಡಿಸಿದೆ. ಅಂದು ಪ್ರಮಾಣವಚನ ಸಮಾರಂಭದಲ್ಲಿ ಭಾಗಿಯಾಗಿದ್ದ ಎನ್ಸಿಪಿ ನಾಯಕ ಶರದ್ ಪವಾರ್, `ನನಗೆ ಯಾವ ಅಧಿಕಾರದ ಆಸೆಯೂ ಇಲ್ಲ. ಬಿಜೆಪಿ ವಿರುದ್ಧ ಎಲ್ಲ ಪಕ್ಷಗಳು ಒಂದಾದರೆ, ಹೋರಾಟಕ್ಕೊಂದು ಶಕ್ತಿ ಸಂಚಯವಾಗುತ್ತದೆ. ಕರ್ನಾಟಕದಲ್ಲಿ ಸೃಷ್ಟಿಯಾಗಿರುವ ಬಿಜೆಪಿ ವಿರುದ್ಧದ ಅಲೆಯನ್ನು ಕರ್ನಾಟಕಕ್ಕಷ್ಟೇ ಸೀಮಿತಗೊಳಿಸಬಾರದು, ಇಡೀ ದೇಶಕ್ಕೆ ವಿಸ್ತರಿಸಬೇಕು’ ಎಂದಿದ್ದು ತೃತೀಯ ರಂಗದ ನಾಯಕರೆಲ್ಲರೂ ಕೂತು ಚಿಂತಿಸಬೇಕಾಗಿದೆ.

ಆದರೆ ಒಡೆದು ಆಳುವುದರಲ್ಲಿಯೇ ತಮ್ಮ ಅಸ್ತಿತ್ವ ಕಂಡುಕೊಂಡಿರುವ ಬಿಜೆಪಿ, ಸಣ್ಣಪುಟ್ಟ ಪ್ರಾದೇಶಿಕ ಪಕ್ಷಗಳನ್ನು ಆಪೋಶನ ತೆಗೆದುಕೊಳ್ಳುತ್ತ, ಕಾಂಗ್ರೆಸ್ ಮುಕ್ತ ಭಾರತದ ಘೋಷಣೆಯನ್ನು ಗಟ್ಟಿಗೊಳಿಸುತ್ತ ಸಾಗಿದೆ. ಮತ್ತು ಅದಕ್ಕೆ ಬೇಕಾದ ಹೊಸ ಬಗೆಯ ರಾಜಕಾರಣವನ್ನು ರೂಢಿಸಿಕೊಂಡಿದೆ. ರಾಷ್ಟ್ರೀಯತೆಯ ಮಾತನಾಡುತ್ತಲೇ, ರಾಜಕಾರಣಕ್ಕೆ ಕಾರ್ಪೊರೇಟ್ ಸ್ಪರ್ಶ ನೀಡಿ ಉದ್ಯಮವನ್ನಾಗಿ ಪರಿವರ್ತಿಸಿದೆ. ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ವಿರೋಧ ಪಕ್ಷಗಳು ಉಸಿರೆತ್ತದಂತೆ ಮಾಡಿದೆ. ಆ ಹಾದಿಯಲ್ಲಿ ದೇಶದ 32 ರಾಜ್ಯಗಳ ಪೈಕಿ ಈಗಾಗಲೇ 15 ರಾಜ್ಯಗಳಲ್ಲಿ ಬಿಜೆಪಿ ಕೈವಶ ಮಾಡಿಕೊಂಡಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಹಾಗಂತ ವಿರೋಧ ಪಕ್ಷಗಳು ಕಂಗಾಲಾಗಬೇಕಾದ್ದಿಲ್ಲ. ಗೆಲುವು ಸದಾ ಕಾಲ ಒಬ್ಬರ ಪರವಿರುವುದಿಲ್ಲ. ಬಿಜೆಪಿ ಕೂಡ ಒಂದು ಕಾಲದಲ್ಲಿ ಪುಟ್ಟ ಪಕ್ಷವಾಗಿತ್ತು. ಬಲಾಢ್ಯ ಕಾಂಗ್ರೆಸ್ ಪಕ್ಷವನ್ನು ಮಣಿಸಲು ಹವಣಿಸುತ್ತಿತ್ತು. 1975ರ ತುರ್ತು ಪರಿಸ್ಥಿತಿ ಕಾಂಗ್ರೆಸ್ ಪಕ್ಷದ ವಿರುದ್ಧ ಸಣ್ಣಪುಟ್ಟ ಪಕ್ಷಗಳು ಒಂದಾಗಲು ಉತ್ತಮ ವೇದಿಕೆ ನಿರ್ಮಿಸಿತ್ತು. ಆನಂತರ 1987ರಲ್ಲಿ ರಾಜೀವ್ ಗಾಂಧಿ ವಿರುದ್ಧ ಸೆಟೆದು ನಿಂತು ಕಾಂಗ್ರೆಸ್ಸಿನಿಂದ ಹೊರಬಂದ ವಿ.ಪಿ. ಸಿಂಗ್, ನ್ಯಾಷನಲ್ ಫ್ರಂಟ್ ರಚಿಸಿ, ಕೇವಲ 2 ವರ್ಷಗಳ ಅಂತರದಲ್ಲಿ ಪ್ರಧಾನಿಯಾದದ್ದು, ದೇಶದ ರಾಜಕೀಯ ಇತಿಹಾಸ ಬಲ್ಲವರಿಗೆಲ್ಲ ಗೊತ್ತಿದೆ.

ಇಂದು ಬಲಾಢ್ಯ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಕೂಡ ಇದೇ ಹಾದಿಯನ್ನು ಹಾದುಬಂದಿದೆ. ಹಾಗೆ ನೋಡಿದರೆ, ದೇಶದಾದ್ಯಂತ ಬಿಜೆಪಿಗೆ ಅದರದೇ ಆದ ನಾಯಕರ ಮತ್ತು ಕಾರ್ಯಕರ್ತರ ಕೊರತೆ ಇತ್ತು. ಅಧಿಕಾರಕ್ಕೆ ಏರಲೇಬೇಕು ಎಂದು ಹಟಕ್ಕೆ ಬಿದ್ದ ಬಿಜೆಪಿ ಹಲವಾರು ಪ್ರಾದೇಶಿಕ ಪಕ್ಷಗಳೊಂದಿಗೆ ಕೈ ಜೋಡಿಸುತ್ತ; ರಾಜ್ಯಗಳಲ್ಲಿ ಮೈತ್ರಿ ಸರ್ಕಾರಗಳನ್ನು ರಚಿಸುತ್ತ ಹಂತ ಹಂತವಾಗಿ ಅಧಿಕಾರಕ್ಕೇರಿತು. ದೇಶದ ರಾಜಕಾರಣ ಕಂಡರಿಯದ ದಾರಿಗಳನ್ನೆಲ್ಲ ಶೋಧಿಸಿ, ಶಾಸಕರನ್ನು ಹೊತ್ತೊಯ್ದು ಸರ್ಕಾರ ರಚಿಸಿತು. ಬಿಜೆಪಿ ಸ್ವಂತ ಶಕ್ತಿಯಿಂದ ಚುನಾವಣೆ ಎದುರಿಸಿ ಅಧಿಕಾರ ಹಿಡಿದಿರುವುದು ಕೇವಲ 5 ರಾಜ್ಯಗಳಲ್ಲಿ ಮಾತ್ರ. ಮಿಕ್ಕಂತೆ, ಮೈತ್ರಿ ಮತ್ತು ಅನೈತಿಕ ಹಾದಿಯಲ್ಲಿ ಅಧಿಕಾರ ಹಿಡಿದಿದೆ. ಹೀಗಾಗಿ ಬಹುತ್ವ ಭಾರತವನ್ನು ಬಿಜೆಪಿ ಕೈವಶ ಮಾಡಿಕೊಳ್ಳುವುದು, ಈ ಕಾಲಕ್ಕೆ ಸಾಧ್ಯವಾಗದ ಮಾತು.

ಇದನ್ನು ಓದಿದ್ದೀರಾ?: ‘ಈ ದಿನ’ ಸಂಪಾದಕೀಯ | ₹2000 ನೋಟು ರದ್ದತಿಯು ಮತ್ತೊಂದು ದುರಂತ ಪ್ರಹಸನಕ್ಕೆ ನಾಂದಿ ಆಗದಿರಲಿ

ಈ ಮಾತಿಗೆ ಮಹತ್ವ ಬರುವಂತೆ ಕರ್ನಾಟಕದಲ್ಲಿ ಬಿಜೆಪಿ ಸೋತಿದೆ. ಸತ್ತಂತಿದ್ದ ಕಾಂಗ್ರೆಸ್ ಗೆಲುವು ಸಾಧಿಸಿದೆ. ಇದು ಸಹಜವಾಗಿಯೇ ತೃತೀಯ ರಂಗದಲ್ಲಿ ಹೊಸ ಹುಮ್ಮಸ್ಸಿಗೆ ಕಾರಣವಾಗಿದೆ. ಸಮಸ್ಯೆ ಎಂದರೆ, ಪ್ರಾದೇಶಿಕ ಪಕ್ಷದ ನಾಯಕರು ಬಾವಿಯೊಳಗಿನ ಕಪ್ಪೆಗಳು. ಸ್ವಪ್ರತಿಷ್ಠೆಯಳ್ಳ ಸಿನಿಕರು. ತಾತ್ಕಾಲಿಕ ಲಾಭಕ್ಕೆ ಬಲಿ ಬಿದ್ದು, ಬಹುತ್ವ ಭಾರತವನ್ನು ಬಿಜೆಪಿ ಕೈಗೆ ಕೊಟ್ಟವರು. ದೆಹಲಿಯ ಅರವಿಂದ ಕೇಜ್ರಿವಾಲ್, ಉತ್ತರ ಪ್ರದೇಶದ ಅಖಿಲೇಶ್ ಯಾದವ್ ಮತ್ತು ಪಶ್ಚಿಮ ಬಂಗಾಲದ ಮಮತಾ ಬ್ಯಾನರ್ಜಿ ಅವರದೇ ಒಂದು ಗುಂಪು. ತೆಲಂಗಾಣದ ಚಂದ್ರಶೇಖರ್, ಆಂಧ್ರಪ್ರದೇಶದ ಜಗನ್ ಮೋಹನ್ ರೆಡ್ಡಿ ಮತ್ತು ಒರಿಸ್ಸಾದ ನವೀನ್ ಪಟ್ನಾಯಕ್‌ರದ್ದು ಇನ್ನೊಂದು ಗುಂಪು. ಫಾರೂಕ್ ಅಬ್ದುಲ್ಲಾರಿಂದ ಪಿಣರಾಯಿ ವಿಜಯನ್‌ವರೆಗೆ, ಅವರವರದೇ ಆದ ಗುಂಪುಗಳೂ ಇವೆ. ಇವರೆಲ್ಲರನ್ನು ಒಟ್ಟುಗೂಡಿಸುವ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ.

ಆ ಕೊರತೆಯನ್ನೇ ದೊಡ್ಡದು ಮಾಡಿದ ಬಿಜೆಪಿ ಮೋದಿಯವರನ್ನು ಮುಂದೆ ಮಾಡುತ್ತಿದೆ. ವಿಶ್ವಗುರು ಎನ್ನುತ್ತಿದೆ. 1989ರಿಂದ 1998ರವರೆಗೆ, ತೃತೀಯರಂಗದ ನಾಲ್ಕು ಸರ್ಕಾರಗಳು ರಚನೆಯಾಗಿ, ನಾಯಕತ್ವದ ಕೊರತೆ ಮತ್ತು ಸಂಘರ್ಷದ ಕಾರಣದಿಂದಾಗಿ ಯಾವ ಸರ್ಕಾರಗಳೂ ಅವಧಿ ಪೂರ್ಣಗೊಳಿಸಲಾಗಿಲ್ಲವೆನ್ನುವುದನ್ನು ಮತ್ತೆ ಮತ್ತೆ ಹೇಳುತ್ತಿದೆ. 2014ರಿಂದೀಚೆಗೆ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಹೊರಗಿಟ್ಟು ತೃತೀಯರಂಗ ರಚಿಸುವ ಯತ್ನಗಳು ನಡೆದು, ಯಾವ ಪ್ರಯತ್ನಗಳೂ ಯಶ ಕಂಡಿಲ್ಲದಿರುವುದನ್ನು ಎತ್ತಿ ಆಡುತ್ತಿದೆ.

ಆದರೆ, ಜಾತ್ಯತೀತ ಭಾರತವನ್ನು ಬಯಸುವ ಮನಸುಗಳಿಗೇನೂ ಕೊರತೆಯಾಗಿಲ್ಲ. ಪ್ರಾದೇಶಿಕ ಪಕ್ಷಗಳ ನೇತಾರರೆನಿಸಿಕೊಂಡವರು ಕೊಂಚ ತಗ್ಗಿ-ಬಗ್ಗಿ ನಡೆದರೆ, ತಮ್ಮ ಶಕ್ತಿ-ದೌರ್ಬಲ್ಯಗಳನ್ನು ಅರಿತು ಮುನ್ನಡಿಯಿಟ್ಟರೆ, ತೃತೀಯರಂಗಕ್ಕೊಂದು ಭವಿಷ್ಯವಿದೆ. ಕೋಮುವಾದಿ ವಿಷ ಬಿತ್ತುವ ಬಿಜೆಪಿಯನ್ನು ಬಗ್ಗು ಬಡಿಯಲೇಬೇಕಾಗಿದೆ. ಶಾಂತಿ, ಸಹಬಾಳ್ವೆ ಬಯಸುವವರೆಲ್ಲ ಒಂದಾಗಿ ಹೋರಾಡಿ ಗೆದ್ದ ಕರ್ನಾಟಕದ ಗೆಲುವು ಹೊಸ ಹುಮ್ಮಸ್ಸಿಗೆ, ತೃತೀಯರಂಗದ ಕನಸಿಗೆ ಕಣ್ಣಾಗಲಿ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಚುನಾವಣಾ ವಿಷಯವಾದ ’ಸಂವಿಧಾನ’ ಮತ್ತು ಮೋದಿ ಮಾತಿನ ಬೂಟಾಟಿಕೆ

ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರ್ಕಾರ ಅನುಸರಿಸಿದ ದಮನಕಾರಿ ನೀತಿಗಳನ್ನು ನೋಡಿದರೆ...

ಈ ದಿನ ಸಂಪಾದಕೀಯ | ಮೋದಿ ಅಹಮಿಕೆಯೇ ಬಿಜೆಪಿ ಪ್ರಣಾಳಿಕೆ- ಬಡಜನತೆಯ ಕಷ್ಟ ಕಣ್ಣೀರು ಲೆಕ್ಕಕ್ಕಿಲ್ಲ

ಪ್ರಣಾಳಿಕೆಯಲ್ಲೂ ಅಡಿಯೂ ಮೋದಿಯೇ, ಮುಡಿಯೂ ಮೋದಿಯೇ. ಆದಿಯೂ ಮೋದಿಯೇ, ಅಂತ್ಯವೂ ಮೋದಿಯೇ....

ಈ ದಿನ ಸಂಪಾದಕೀಯ | ಕುಮಾರಸ್ವಾಮಿಯವರನ್ನು ಸೋಲಿಸಲು ಬಿಜೆಪಿ ಸುಪಾರಿ ಕೊಟ್ಟಿದೆಯೇ, ಆತಂಕಕ್ಕೊಳಗಾಗಿದ್ದಾರೆಯೇ?

'ಮೋಶಾ'ಗಳ ಸೋಲಿಸುವ ಸುಪಾರಿಗೆ ವಿಚಲಿತರಾಗಿರುವ ಕುಮಾರಸ್ವಾಮಿಯವರು, ಬಿಜೆಪಿಯ ಹುನ್ನಾರವನ್ನು ಬಯಲು ಮಾಡಲಾಗದೆ...

ಈ ದಿನ ಸಂಪಾದಕೀಯ | ದೇವೇಗೌಡರ ದೈತ್ಯಶಕ್ತಿ, ಮೋದಿಯ ಮೋಡಿ ಮತ್ತು ದಂಗಾದ ಜನ

ಮೇಲ್ನೋಟಕ್ಕಿದು ಕೊಡು-ಕೊಳ್ಳುವ ಮೈತ್ರಿಯಂತೆ ಕಂಡರೂ, ಗೆದ್ದರೆ ಮಾತ್ರ ಇಬ್ಬರಿಗೂ ಲಾಭವಿದೆ. ಸೋತರೆ,...