ಟ್ರಾಫಿಕ್ ನಿಯಮಗಳು ಕಟ್ಟುನಿಟ್ಟಾಗಿರುವ ದುಬೈನಲ್ಲಿ ನಡೆದ ಅಪಘಾತ ಒಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಭಾರತೀಯ ಮೂಲದ 20 ವರ್ಷದ ವಿದ್ಯಾರ್ಥಿಗೆ ₹11.5 ಕೋಟಿ ಪರಿಹಾರ ದೊರೆತಿದೆ.
ಹೈದರಾಬಾದ್ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ಮುಹಮ್ಮದ್ ಬೇಗ್ ಮಿರ್ಝಾಗೆ ದುಬೈನ ಸುಪ್ರೀಂ ಕೋರ್ಟ್ 5 ಮಿಲಿಯನ್ ದಿರ್ಹಮ್ ಮೊತ್ತ ಪರಿಹಾರವನ್ನಾಗಿ ನೀಡಲು ಆದೇಶಿಸಿದೆ.
ಭಾರತೀಯ ಮೂಲದ ವ್ಯಕ್ತಿಯೊಬ್ಬರು ಯುಎಇನಲ್ಲಿ ಪಡೆಯುತ್ತಿರುವ ಅತಿಹೆಚ್ಚಿನ ಪರಿಹಾರದ ಮೊತ್ತ ಇದಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
2019ರ ಜುಲೈ 6ರಂದು ಒಮಾನ್‌ನಿಂದ ದುಬೈ ತೆರಳುತ್ತಿದ್ದ ಬಸ್, ದುಬೈನ ರಾಶಿದೀಯ ಮೆಟ್ರೋ ನಿಲ್ದಾಣ ಸಮೀಪದ ಓವರ್‌ಹೆಡ್ ಹೈಟ್ ಬ್ಯಾರಿಯರ್‌ಗೆ ಡಿಕ್ಕಿ ಹೊಡೆದಿತ್ತು. ಭೀಕರ ಅಪಘಾತದಲ್ಲಿ 12 ಭಾರತೀಯರು ಸೇರಿದಂತೆ ಒಟ್ಟು 17 ಜನರು ಮೃತಪಟ್ಟಿದ್ದರು.
ಘಟನೆಯಲ್ಲಿ ಮುಹಮ್ಮದ್ ಬೇಗ್ ಮಿರ್ಝಾ ತೀವ್ರವಾಗಿ ಗಾಯಗೊಂಡಿದ್ದರು. ಒಮಾನ್ ಮೂಲದ ಚಾಲಕನಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.

ಈ ಸುದ್ದಿ ಓದಿದ್ದೀರಾ?: ನ್ಯಾಟೊ ಸೇರಿದ ಫಿನ್‌ಲ್ಯಾಂಡ್; ರಷ್ಯಾ-ಉಕ್ರೇನ್ ಯುದ್ಧದ ಮೇಲೆ ಪ್ರಭಾವ ಸಾಧ್ಯತೆ
ಯುಎಇ ಪ್ರಾಥಮಿಕ ರಾಜಿ ನ್ಯಾಯಾಲಯವು ಆರಂಭದಲ್ಲಿ ಮಿರ್ಝಾ ಅವರಿಗೆ ₹2.25 ಕೋಟಿ ಪರಿಹಾರ ನೀಡಲು ವಿಮಾ ಪ್ರಾಧಿಕಾರಕ್ಕೆ ಆದೇಶಿಸಿತ್ತು. ಆದರೆ ಇದರ ವಿರುದ್ಧ ಮಿರ್ಝಾ ಕುಟುಂಬವು ಮೇಲ್ಮನವಿ ನ್ಯಾಯಾಲಯವನ್ನು ಸಮೀಪಿಸಿತ್ತು.
ʻಅಪಘಾತದಿಂದಾಗಿ ಮಿರ್ಝಾ ಇನ್ನೂ ಸಹ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಅವರ ಶಿಕ್ಷಣವು ಅರ್ಧದಲ್ಲೇ ಮೊಟಕುಗೊಂಡಿದೆʼ ಎಂದು ಮಿರ್ಝಾ ಪರ ವಕೀಲರು ನ್ಯಾಯಲಯದಲ್ಲಿ ವಾದ ಮಂಡಿಸಿದ್ದರು. ಇದನ್ನು ನ್ಯಾಯಾಧೀಶರು ಪುರಸ್ಕರಿಸಿ ಭಾರಿ ಮೊತ್ತದ ಪರಿಹಾರ ನೀಡಲು ಆದೇಶಿಸಿದ್ದಾರೆ.