ಮಧ್ಯಪ್ರಾಚ್ಯದಲ್ಲಿ ಯುದ್ಧದ ಆತಂಕ ಮುಂದುವರಿದಿರುವ ನಡುವೆ, ಲೆಬನಾನ್ ಮೇಲಿನ ಸೇನಾ ದಾಳಿಯನ್ನು ಕಡಿಮೆಗೊಳಿಸುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಸಲಹೆ ನೀಡಿದ್ದಾರೆ. ಮುಂದಿನ ಚರ್ಚೆಗಳಿಗೆ ಅನುಕೂಲವಾಗುವಂತೆ ಈ ನಿರ್ಧಾರ ಕೈಗೊಳ್ಳಲು ಬುಧವಾರ ನಡೆದ ದೂರವಾಣಿ ಕರೆಯಲ್ಲಿ ಟ್ರಂಪ್ ಒತ್ತಾಯಿಸಿದ್ದಾರೆ.
”ನಾನು ಬೀಬಿ (ನೆತನ್ಯಾಹು) ಅವರೊಂದಿಗೆ ಮಾತನಾಡಿದ್ದೇನೆ, ಅವರು ದಾಳಿಯನ್ನು ತೀವ್ರಗೊಳಿಸುವುದಿಲ್ಲ. ನಾವು ಸದ್ಯಕ್ಕೆ ಸ್ವಲ್ಪ ಸಂಯಮದಿಂದ ಇರಬೇಕು ಎಂದು ನಾನು ಭಾವಿಸುತ್ತೇನೆ,” ಎಂದು ಗುರುವಾರ ನಡೆದಿದ್ದ ಸಂದರ್ಶನದಲ್ಲಿ ಟ್ರಂಪ್ ತಿಳಿಸಿದ್ದಾರೆ. ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಕೂಡ ಇದನ್ನೇ ಪುಷ್ಟೀಕರಿಸಿದ್ದು, ಇಸ್ರೇಲ್ ತನ್ನ ಆಕ್ರಮಣದಲ್ಲಿ ಸ್ವಲ್ಪ ನಿಯಂತ್ರಣ ಸಾಧಿಸಬಹುದು ಎಂದು ಹೇಳಿದ್ದಾರೆ.
ಇನ್ನೊಂದೆಡೆ, ಇರಾನ್ ಮತ್ತು ಅಮೆರಿಕ ನಡುವಿನ ಕದನವಿರಾಮವು ಅತ್ಯಂತ ಸೂಕ್ಷ್ಮ ಹಂತದಲ್ಲಿದೆ. ಲೆಬನಾನ್‌ನಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಒಂದು ದಿನದಲ್ಲಿಯೇ 300 ಕ್ಕೂ ಹೆಚ್ಚು ಜನರು ಹತರಾಗಿದ್ದಾರೆ. ಇದು ಈ ಸಂಘರ್ಷದಲ್ಲಿಯೇ ಅತ್ಯಂತ ಘೋರ ದಿನವಾಗಿದೆ. ಈ ದಾಳಿಗಳು ಮುಂದುವರಿದರೆ ಉಗ್ರ ಪ್ರತಿಕ್ರಿಯೆ ನೀಡುವುದಾಗಿ ಇರಾನ್ ಎಚ್ಚರಿಸಿದೆ.
ಇದನ್ನು ಓದಿದ್ದೀರಾ? ಸಾಮ್ರಾಜ್ಯಶಾಹಿಯ ಅಟ್ಟಹಾಸಕ್ಕೆ ಪ್ರತಿರೋಧದ ಕಿಚ್ಚು: ಅಮೆರಿಕ-ಇಸ್ರೇಲ್ ದಬ್ಬಾಳಿಕೆಯ ವಿರುದ್ಧ ಸಿಡಿದೆದ್ದ ಲೆಬನಾನ್
ಜಾಗತಿಕ ತೈಲ ಪೂರೈಸುವಲ್ಲಿ ಪ್ರಮುಖವಾಗಿರುವ ಹೊರ್ಮುಜ್ ಜಲಸಂಧಿಯ ಮೇಲಿನ ಹಿಡಿತವನ್ನು ಇನ್ನಷ್ಟು ಬಿಗಿಗೊಳಿಸುವುದಾಗಿ ಇರಾನ್ ನಾಯಕ ಮೊಜ್ತಬಾ ಖಮೇನಿ ಘೋಷಿಸಿದ್ದಾರೆ. ಯುದ್ಧದಿಂದ ಆದ ನಷ್ಟಕ್ಕೆ ಪರಿಹಾರ ಕೇಳುವುದಾಗಿ ಮತ್ತು ಆಕ್ರಮಣಕಾರರು ಇದಕ್ಕೆ ಬೆಲೆ ತೆರಬೇಕು ಎಂದು ಅವರು ಹೇಳಿದ್ದಾರೆ. ಈ ಮಧ್ಯೆ, “ಹೊರ್ಮುಜ್ ಜಲಸಂಧಿಯು ಸದ್ಯಕ್ಕೆ ಮುಕ್ತವಾಗಿಲ್ಲ, ಅದರ ಪ್ರವೇಶವನ್ನು ನಿಯಂತ್ರಿಸಲಾಗಿದೆ ಮತ್ತು ಷರತ್ತುಗಳಿಗೆ ಒಳಪಡಿಸಲಾಗಿದೆ” ಎಂದು ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿಯ ಮುಖ್ಯಸ್ಥ ಸುಲ್ತಾನ್ ಅಲ್ ಜಾಬರ್ ಕೂಡ ಆತಂಕ ವ್ಯಕ್ತಪಡಿಸಿದ್ದಾರೆ.
ಕುವೈತ್‌ನಲ್ಲಿ ಪ್ರಮುಖ ಸ್ಥಳಗಳ ಮೇಲೆ ನಡೆದ ಡ್ರೋನ್ ದಾಳಿಗಳಿಗೆ ಇರಾನ್ ಮತ್ತು ಅದರ ಬೆಂಬಲಿತ ತಂಡಗಳೇ ಕಾರಣ ಎಂದು ಆರೋಪಿಸಲಾಗಿದೆ. ಜೊತೆಗೆ, ಸೌದಿ ಅರೇಬಿಯಾದ ಮುಖ್ಯ ತೈಲ ಪೈಪ್‌ಲೈನ್‌ಗಳಿಗೂ ಹಾನಿಯಾಗಿದೆ ಎಂದು ದೃಢಪಟ್ಟಿದೆ. ಆದರೆ, ಕುವೈತ್ ಆರೋಪವನ್ನು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ತಳ್ಳಿಹಾಕಿದ್ದು, ಇದು ‘ಜಿಯೋನಿಸ್ಟ್ ಶತ್ರುಗಳು’ ಅಥವಾ ಅಮೆರಿಕದ ಕುತಂತ್ರ ಎಂದಿದೆ.




