ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಲವು ಗ್ರಾಮಗಳಲ್ಲಿ ಬೆಳೆದಿರುವ ಎಲೆಕೋಸು (ಕ್ಯಾಬೇಜ್) ಖರೀದಿಸುವವರೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಬೇಸತ್ತ ರೈತರು ಫಲಭರಿತ ಬೆಳೆಗಳನ್ನು ಹೊಲದಲ್ಲೇ ರೂಟರ್ ಹೊಡೆದು ನಾಶಪಡಿಸಲು ಮುಂದಾಗಿರುವುದು ಗಮನಾರ್ಹವಾಗಿದೆ.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಸ್ಥಳೀಯ ತರಕಾರಿ ಬೆಳೆಗಾರರ ಮೇಲೂ ತೀವ್ರವಾಗಿ ಬೀರಿದೆ. ಕಡೋಲಿ, ಕಾಕತಿ, ಹೊನಗಾ, ಚಂದನ ಹೊಸೂರ, ಜಾಫರ ವಾಡಿ, ಗೌಂಡವಾಡ, ಬೆಳಗುಂದಿ, ಹಂದಿಗುಂದ, ಯಳ್ಳೂರ, ಉಚಗಾಂವ, ಮುಚ್ಚಂಡಿ, ವಾಘಮರಿ, ತುರಮರಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಬೆಳೆದಿರುವ ಎಲೆಕೋಸು ಹೊಲದಲ್ಲೇ ಗೊಬ್ಬರವಾಗುತ್ತಿದೆ.
ಇಲ್ಲಿನ ತರಕಾರಿಗಳಿಗೆ ಬೆಳಗಾವಿ ಜಿಲ್ಲೆ ಮಾತ್ರವಲ್ಲದೆ ನೆರೆಯ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿಯೂ ಉತ್ತಮ ಬೇಡಿಕೆ ಇತ್ತು. ಆದರೆ ಈಗ ಅಲ್ಲಿಯೂ ಬೇಡಿಕೆ ಇಳಿಕೆಯಾಗಿರುವುದು ರೈತರ ಸಂಕಷ್ಟವನ್ನು ಮತ್ತಷ್ಟು ಗಂಭೀರಗೊಳಿಸಿದೆ.
ಸದ್ಯ ಸಗಟು ಮಾರುಕಟ್ಟೆಯಲ್ಲಿ 70 ಕೆಜಿ ಎಲೆಕೋಸಿನ ಒಂದು ಚೀಲ ಕೇವಲ ₹100ಕ್ಕೆ ಮಾರಾಟವಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಕೋಸು ₹1ರಿಂದ ₹2ಕ್ಕೆ ಇಳಿದಿದೆ. ಮೂರು ತಿಂಗಳ ಹಿಂದೆ ಕೆ.ಜಿಗೆ ₹40-₹50ವರೆಗೆ ಇದ್ದ ದರ, ಯುದ್ಧ ಆರಂಭವಾದ 15 ದಿನಗಳಲ್ಲಿ ಭಾರೀ ಕುಸಿತ ಕಂಡಿದೆ.
ಸರಕಾರ ತಕ್ಷಣ ಮಧ್ಯಪ್ರವೇಶ ಮಾಡಿ ಬೆಂಬಲ ಬೆಲೆ ನಿಗದಿ ಮಾಡಿ, ನಷ್ಟ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.



