ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ನಡೆಸಿದ ವೈಮಾನಿಕ ದಾಳಿಯಲ್ಲಿ ಹತ್ಯೆಗೀಡಾಗಿದ್ದ ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆ, ಅವರ ಹುಟ್ಟೂರಾದ ಮಶಾದ್‌ನಲ್ಲಿರುವ ಇರಾನ್‌ನ ಅತ್ಯಂತ ಪವಿತ್ರ ಇಮಾಮ್ ರೆಜಾ ಮಸೀದಿಯಲ್ಲಿ ಶುಕ್ರವಾರ ಮುಂಜಾನೆ ಸಂಪನ್ನಗೊಂಡಿದೆ. ಕಳೆದ ಫೆಬ್ರವರಿ 28ರಂದು ಟೆಹ್ರಾನ್‌ನಲ್ಲಿ ನಡೆದಿದ್ದ ದಾಳಿಯಲ್ಲಿ ಮೃತಪಟ್ಟಿದ್ದ ಖಮೇನಿ ಅವರ ಅಂತ್ಯಕ್ರಿಯೆಯನ್ನು ಯುದ್ಧದ ಕಾರಣದಿಂದಾಗಿ ನಾಲ್ಕು ತಿಂಗಳ ಕಾಲ ಮುಂದೂಡಲಾಗಿತ್ತು.
ಅಂತ್ಯಕ್ರಿಯೆ ಪ್ರಕ್ರಿಯೆಗಳು ಖಾಸಗಿಯಾಗಿ ನಡೆದರೂ, ಅದಕ್ಕೂ ಮುನ್ನ ಇರಾನ್ ಹಾಗೂ ಇರಾಕ್‌ನಾದ್ಯಂತ ಒಂದು ವಾರಗಳ ಕಾಲ ನಡೆದ ಸಾರ್ವಜನಿಕ ಶ್ರದ್ಧಾಂಜಲಿ ಮೆರವಣಿಗೆಯಲ್ಲಿ ಒಟ್ಟು 1.5 ಕೋಟಿಗೂ ಅಧಿಕ ಮಂದಿ ಪಾಲ್ಗೊಂಡಿದ್ದರು ಎಂದು ಅಂದಾಜಿಸಲಾಗಿದೆ. ಆದರೆ, ಫೆಬ್ರವರಿಯಲ್ಲಿ ನಡೆದ ದಾಳಿಯ ಬಳಿಕ ಇದುವರೆಗೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಖಮೇನಿ ಅವರ ಪುತ್ರ ಹಾಗೂ ನೂತನ ಪರಮೋಚ್ಚ ನಾಯಕ ಮೊಜ್ತಾಬಾ, ಈ ಸಂಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮಗಳಲ್ಲಿಯೂ ಎಲ್ಲಿಯೂ ಕಾಣಿಸಿಕೊಳ್ಳದೆ ಗೈರಾಗಿದ್ದರು.
ಕಳೆದ ಶನಿವಾರ ಟೆಹ್ರಾನ್‌ನ ಗ್ರ್ಯಾಂಡ್ ಮೊಸಲ್ಲಾ ಧಾರ್ಮಿಕ ಸಂಕೀರ್ಣದಲ್ಲಿ ಆರಂಭವಾದ ಮೆರವಣಿಗೆ, ಆಜಾದಿ ಚೌಕದವರೆಗೆ 10 ಕಿ.ಮೀ ಸಾಗಿತು. ರಾಜಧಾನಿಯೊಂದರಲ್ಲೇ 1.2 ಕೋಟಿಗೂ ಹೆಚ್ಚು ಜನ ಸೇರಿದ್ದರು. ಬಳಿಕ ಖಮೇನಿ ಹಾಗೂ ಅವರ ಜೊತೆಗೇ ಹತ್ಯೆಯಾಗಿದ್ದ ನಾಲ್ವರು ಕುಟುಂಬಸ್ಥರ ಪಾರ್ಥಿವ ಶರೀರಗಳನ್ನು ಖೋಮ್ ನಗರ ಹಾಗೂ ನೆರೆಯ ಇರಾಕ್‌ನ ಶಿಯಾ ಪವಿತ್ರ ನಗರಗಳಾದ ನಜಾಫ್ ಮತ್ತು ಕರ್ಬಲಾದಲ್ಲೂ ಮೆರವಣಿಗೆ ಮಾಡಲಾಯಿತು. ಈ ವೇಳೆ ಹಮಾಸ್, ಹೆಜ್ಬೊಲ್ಲಾ ಸೇರಿದಂತೆ ಇರಾನ್‌ನ ಮಿತ್ರಪಡೆಗಳ ನಾಯಕರು ಭಾಗವಹಿಸಿದ್ದರು.
ಮೆರವಣಿಗೆಯುದ್ದಕ್ಕೂ ಇರಾನ್ ಧ್ವಜ ಹಿಡಿದಿದ್ದ ಲಕ್ಷಾಂತರ ಬೆಂಬಲಿಗರು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಸೇಡು ತೀರಿಸಿಕೊಳ್ಳುವ ಘೋಷಣೆಗಳನ್ನು ಕೂಗಿದರು. ಮಶಾದ್‌ನಲ್ಲಿ ಜನಸಾಗರ ಅತಿಯಾಗಿದ್ದರಿಂದ ಪಾರ್ಥಿವ ಶರೀರವನ್ನು ಹೆಲಿಕಾಪ್ಟರ್ ಮೂಲಕ ಮಸೀದಿಯೊಳಗೆ ಕೊಂಡೊಯ್ಯಬೇಕಾಯಿತು. ಇದೇ ವೇಳೆ ‘ಟ್ರಂಪ್‌ನನ್ನು ಕೊಲ್ಲುತ್ತೇವೆ’ ಎಂಬ ಭಿತ್ತಿಪತ್ರಗಳನ್ನು ಹಿಡಿದು ಮಹಿಳೆಯರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಅಂತ್ಯಕ್ರಿಯೆ ನಡೆಯುವ ಕೆಲವೇ ಗಂಟೆಗಳ ಮುನ್ನ, ಇರಾನ್‌ನ ಪ್ರಮುಖ ಪರಮಾಣು ಸ್ಥಾವರವಿರುವ ಬುಶೆಹರ್ ಹಾಗೂ ಕೊನರಾಕ್ ನಗರಗಳ ಸುತ್ತಮುತ್ತ ಹಲವು ಸ್ಫೋಟಗಳ ಸದ್ದು ಕೇಳಿಬಂದಿದೆ. ಆದರೆ, ಕಳೆದ ಕೆಲವು ಗಂಟೆಗಳಲ್ಲಿ ಇರಾನ್ ಮೇಲೆ ಯಾವುದೇ ಹೊಸ ದಾಳಿಗಳನ್ನು ನಡೆಸಿಲ್ಲ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಸ್ಪಷ್ಟಪಡಿಸಿದೆ.
ಹಾರ್ಮುಜ್ ಜಲಸಂಧಿ ವಿವಾದದ ಬೆನ್ನಲ್ಲೇ ಜೂನ್ 17ರಂದು ಉಭಯ ದೇಶಗಳ ನಡುವೆ ಏರ್ಪಟ್ಟಿದ್ದ ಶಾಂತಿ ಒಪ್ಪಂದ ಸಂಪೂರ್ಣವಾಗಿ ಮುರಿದುಬಿದ್ದಿದೆ. ಇರಾನ್ ನಾಯಕರನ್ನು ತೀವ್ರವಾಗಿ ಟೀಕಿಸಿರುವ ಟ್ರಂಪ್, ಒಪ್ಪಂದ ಅಂತ್ಯಗೊಂಡಿದೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ, ಕುವೈತ್, ಬಹ್ರೇನ್, ಕತಾರ್ ಹಾಗೂ ಜೋರ್ಡಾನ್‌ನಲ್ಲಿರುವ ಅಮೆರಿಕದ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದ್ದು, ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ದಟ್ಟವಾಗಿದೆ.




