ಶುಕ್ರವಾರ ವಯನಾಡು ಭೂಕುಸಿತವಾದ ಸ್ಥಳದಲ್ಲಿ ಮತ್ತೊಂದು ಮೃತದೇಹ ಪತ್ತೆಯಾಗಿದ್ದು, ದುರಂತದಲ್ಲಿ ಸಾವನ್ನಪ್ಪಿದ ಒಟ್ಟು ಜನರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.
ಭೂಕುಸಿತದ ಬಳಿಕ ಪಶ್ಚಿಮ ಬಂಗಾಳದ ರಾಕೇಶ್ ಗುಚೈತ್ ಮತ್ತು ಹಿಮಾಚಲ ಪ್ರದೇಶದ ವಿಕ್ರಮ್ ರಾಣಾ ನಾಪತ್ತೆಯಾಗಿದ್ದರು. ಇದೀಗ ಒಬ್ಬರ ಮೃತದೇಹ ಪತ್ತೆಯಾಗಿದೆ. ಆದರೆ ಈ ಮೃತದೇಹ ಯಾರದ್ದು ಎಂಬುದು ಖಚಿತವಾಗಿಲ್ಲ. ಇನ್ನೂ ಒಬ್ಬರು ನಾಪತ್ತೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಘಟ್ಟಗಳ ಭೂಕುಸಿತ | ಮೊದಲು ನೈಸರ್ಗಿಕ ವಿಪತ್ತು, ಈಗ ಮಾನವ ನಿರ್ಮಿತ
ವಯನಾಡು ಭೂಕುಸಿತ ಸಂಭವಿಸಿ ನಾಲ್ಕು ದಿನಗಳಾಗಿವೆ. ಇಂದಿಗೂ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ಸಿಬ್ಬಂದಿ, ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳ ಹಲವಾರು ತಂಡಗಳು ಶೋಧ ಕಾರ್ಯಾಚರಣೆಯಲ್ಲಿ ತೊಡಗಿದೆ.
ವಯನಾಡು ಮತ್ತು ಕೋಝಿಕ್ಕೋಡ್ ಜಿಲ್ಲೆಗಳನ್ನು ಸಂಪರ್ಕಿಸುವ ಅನಕ್ಕೊಂಪೊಯಿಲ್ ಮೆಪ್ಪಾಡಿ ಸುರಂಗ ಯೋಜನೆಯ ಸ್ಥಳದಲ್ಲಿ ಜುಲೈ 7ರಂದು ಭೂಕುಸಿತ ಸಂಭವಿಸಿದೆ. ಸದ್ಯ ಮಣ್ಣನ್ನು ತೆರವುಗೊಳಿಸಲಾಗುತ್ತಿದ್ದು, ಗುರುವಾರದವರೆಗೆ, ಭೂಕುಸಿತ ಸ್ಥಳದಿಂದ ಆರು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇಂದು ಮತ್ತೊಂದು ಮೃತದೇಹ ಪತ್ತೆಯಾಗಿದೆ.
ಇನ್ನು ವಯನಾಡು ಭೂಕುಸಿತ ದುರಂತದ ಬೆನ್ನಲ್ಲೇ, ಕರ್ನಾಟಕದ ಪಶ್ಚಿಮ ಘಟ್ಟ ಮತ್ತು ಕರಾವಳಿ ಪ್ರದೇಶಗಳಲ್ಲೂ ಭೂಕುಸಿತ ಭೀತಿ ಉಂಟಾಗಿದೆ. ಜುಲೈ 11ರವರೆಗೆ ಕರ್ನಾಟಕದ ಪ್ರಮುಖ 7 ಜಿಲ್ಲೆಗಳಾದ ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಕೊಡಗು ಮತ್ತು ಹಾಸನದ ಘಟ್ಟ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಉತ್ತರ ಕನ್ನಡ ಜಿಲ್ಲೆಯನ್ನು ರೆಡ್‌ಝೋನ್ ಘೋಷಿಸಲಾಗಿದೆ.





