ರೈಲ್ವೆ ಪ್ಲಾಟ್‌ಫಾರ್ಮ್‌ನಿಂದ ಜಾಗತಿಕ ಪಯಣ: ಸಣ್ಣ ಊರಿನ ಕನಸುಗಳಿಗೆ ರೆಕ್ಕೆ ಕಟ್ಟಿದ ‘ಧೋನಿ’ ಯುಗಾಂತ್ಯ

Date:

“ಧೋನಿ ಬರುವ ಮುನ್ನ ರಾಂಚಿಯ ಪೋಷಕರು ಮಕ್ಕಳ ವೈದ್ಯರು, ಎಂಜಿನಿಯರ್ ಆಗಬೇಕೆಂದು ಬಯಸುತ್ತಿದ್ದರು. ಅವರು ಬಂದ ಮೇಲೆ ಎಲ್ಲರೂ ಧೋನಿಯಾಗಲು, ವಿಕೆಟ್‌ಕೀಪರ್ ಆಗಲು ಬಯಸಿದರು” ಎನ್ನುತ್ತಾರೆ ಬಾಲ್ಯದ ಕೋಚ್ ಕೇಶವ್ ಬ್ಯಾನರ್ಜಿ. ಸೌರಭ್ ತಿವಾರಿ, ಪಾಟ್ನಾದಲ್ಲಿ ಹುಟ್ಟಿ ರಾಂಚಿಯಲ್ಲಿ ಅರಳಿದ ಇಶಾನ್ ಕಿಶನ್, ಕುಮಾರ್ ಕುಶಾಗ್ರ ಹಾಗೂ ರಾಬಿನ್ ಮಿಂಜ್ ಅಂತಹ ಪ್ರತಿಭೆಗಳು ಧೋನಿಯ ಹೆಜ್ಜೆಗುರುತುಗಳಲ್ಲೇ ಬೆಳೆದರು.

- Advertisement -

ಭಾರತೀಯ ಕ್ರಿಕೆಟ್ ಲೋಕದ ಅತ್ಯಂತ ಪ್ರಭಾವಿ ವ್ಯಕ್ತಿತ್ವ, ಕೋಟ್ಯಂತರ ಅಭಿಮಾನಿಗಳ ಪಾಲಿನ ‘ಕ್ಯಾಪ್ಟನ್ ಕೂಲ್’ ಹಾಗೂ ಚೆನ್ನೈನ ಅಭಿಮಾನಿಗಳ ದೇವರು ‘ತಲಾ’ ಮಹೇಂದ್ರ ಸಿಂಗ್ ಧೋನಿ ಎಲ್ಲ ಬಗೆಯ ಕ್ರಿಕೆಟ್ ಆಟಗಳಿಂದ ಸಂಪೂರ್ಣವಾಗಿ ನಿವೃತ್ತರಾಗಿದ್ದಾರೆ. 2014ರ ಡಿಸೆಂಬರ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಹಾಗೂ 2020ರ ಆಗಸ್ಟ್ 15ರಂದು ಸೀಮಿತ ಓವರ್‌ಗಳ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದ 45 ವರ್ಷದ ಧೋನಿ, ಇದೀಗ ನವೆಂಬರ್ 17ರಂದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಟಗಾರನ ಪಯಣಕ್ಕೂ ಅಧಿಕೃತ ತೆರೆ ಎಳೆದಿದ್ದಾರೆ. 2027ರ ಐಪಿಎಲ್ ಆವೃತ್ತಿಯ ಆಟಗಾರರನ್ನು ಉಳಿಸಿಕೊಳ್ಳುವ (ರಿಟೆನ್ಷನ್) ಕೊನೆಯ ದಿನದಂದು, ಆಟಗಾರನ ಜರ್ಸಿ ಕಳಚಿಟ್ಟ ಅವರು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಮಾರ್ಗದರ್ಶಕನಾಗಿ (ಟೀಮ್ ಮೆಂಟರ್) ಹೊಸ ಇನಿಂಗ್ಸ್ ಆರಂಭಿಸುವುದಾಗಿ ಘೋಷಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಂವಿಧಾನದ ಒಂಬತ್ತನೇ ಅನುಸೂಚಿ: ಉದ್ದೇಶ, ಕಾಯ್ದೆಗಳ ಸೇರ್ಪಡೆ ಮತ್ತು...

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೀಸಲಾತಿ ಕೋಟಾ ಹೆಚ್ಚಿಸಿ ರಾಜ್ಯ ರೂಪಿಸಿದ ಕಾಯ್ದೆಯನ್ನು ಉಚ್ಚ ನ್ಯಾಯಾಲಯ ರದ್ದುಗೊಳಿಸಿರುವುದನ್ನು, ಪರ್ಯಾಯ ಕಂಡುಕೊಳ್ಳದೆ, ರಕ್ಷಿಸಿಕೊಳ್ಳುವ ಉದ್ದೇಶದಿಂದ ಅನುಸೂಚಿ 9ಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ರವಾನಿಸಿದೆ....

ಭತ್ತಕ್ಕೆ ಬೆಲೆಯಿಲ್ಲ, ಅಕ್ಕಿ ದರ ಇಳಿಯುತ್ತಲೇ ಇಲ್ಲ!

ಮುಂಗಾರು ಹಂಗಾಮಿನಲ್ಲಿ ದೇಶಾದ್ಯಂತ ಭತ್ತ ಬಿತ್ತನೆ ಪ್ರದೇಶದಲ್ಲಿ ಗಣನೀಯ ಇಳಿಕೆಯಾಗಿದೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2025-26ನೇ ಸಾಲಿನಲ್ಲಿ 449.18 ಲಕ್ಷ ಹೆಕ್ಟೇರ್‌ಗಳಷ್ಟಿದ್ದ ಭತ್ತ ಬಿತ್ತನೆ ಪ್ರದೇಶ,...

ಸಾಮಾಜಿಕ ಜಾಲತಾಣದಲ್ಲಿ Belonging ಆತ್ಮಕಥನ ಬಿಡುಗಡೆ ಸಮಾರಂಭದ ಪಟಗಳದೇ...

ಒಬ್ಬ ತಾಯಿಯ ಬದುಕಿನ ಪುಟಗಳು ಪುಸ್ತಕವಾಗಿ ಹೊರಬಂದ ದಿನ, ಮಕ್ಕಳ ಕಣ್ಣಲ್ಲಿ ಹೆಮ್ಮೆ ಮತ್ತು ವಾತ್ಸಲ್ಯ ಒಟ್ಟಿಗೆ ತುಂಬಿಕೊಂಡಿತ್ತು. ತಾಯಿಯ ಮಾತುಗಳನ್ನು ತದೇಕಚಿತ್ತದಿಂದ ಆಲಿಸುತ್ತಿದ್ದ ರಾಹುಲ್ ಗಾಂಧಿ, ತನ್ನ ಬದುಕಿನ ಅಮೋಘ ಕ್ಷಣಗಳನ್ನು...
dhoni 07

ಮೈದಾನದಲ್ಲಿದ್ದಂತೆ ಯಾವುದೇ ಅಬ್ಬರವಿಲ್ಲದೆ, ವಿದಾಯದ ಭಾಷಣ ಅಥವಾ ಪತ್ರಿಕಾಗೋಷ್ಠಿಗಳಿಲ್ಲದೆ ಧೋನಿ ತಮ್ಮ ನಿರ್ಧಾರವನ್ನು ಅತ್ಯಂತ ಶಾಂತವಾಗಿಯೇ ತೆಗೆದುಕೊಂಡರು. 2027ರ ಹರಾಜಿಗೂ ಮುನ್ನ ಸಿಎಸ್‌ಕೆ ಆಡಳಿತ ಮಂಡಳಿಯೊಂದಿಗೆ ನಡೆದ ವಿಡಿಯೊ ಕರೆಯಲ್ಲಿ ಮಾತನಾಡಿದ ಅವರು, ತಂಡದಿಂದ ಬಿಡುಗಡೆ ಮಾಡುವ ಆಟಗಾರರ ಪಟ್ಟಿಗೆ ‘ನನ್ನ ಹೆಸರನ್ನೂ ಸೇರಿಸಿ’ ಎಂದು ಭಾವುಕರಾಗಿ ತಿಳಿಸಿದರು ಎಂದು ಫ್ರಾಂಚೈಸಿ ಅಧಿಕಾರಿ ರೂಪಾ ಗುರುನಾಥ್ ಸ್ಮರಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ರಿಟೆನ್ಷನ್ ಅವಧಿ ಮುಗಿಯುವ ಕೆಲವೇ ಗಂಟೆಗಳ ಮುನ್ನ ಸಿಎಸ್‌ಕೆ ಫ್ರಾಂಚೈಸಿಯು 83 ಪದಗಳ ಭಾವನಾತ್ಮಕ ಪ್ರಕಟಣೆ ಹಾಗೂ ವಿಡಿಯೊ ಮೂಲಕ ‘ಜೀವಮಾನದಲ್ಲಿ ಒಮ್ಮೆ ಮಾತ್ರ ಕಾಣಸಿಗುವ ಆಟಗಾರ’ನಿಗೆ ಗೌರವ ಸಲ್ಲಿಸಿತು. ಈ ಪ್ರಕ್ರಿಯೆಯಲ್ಲಿ 19 ಆಟಗಾರರನ್ನು ಉಳಿಸಿಕೊಂಡು 11 ಮಂದಿಯನ್ನು ಬಿಡುಗಡೆ ಮಾಡಿರುವ ಚೆನ್ನೈ ಬಳಿ 2027ರ ಹರಾಜಿಗೆ ₹28.05 ಕೋಟಿ ಬಾಕಿ ಇದೆ.

‘ಮೈ ಪಲ್ ದೋ ಪಲ್ ಕಾ ಶಾಯರ್ ಹೂಂ…’ ಹಾಡಿನ ಮರ್ಮ

ಆರು ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದಾಗ ಧೋನಿ 1976ರ ‘ಕಭಿ ಕಭಿ’ ಚಿತ್ರದ ‘ಮೈ ಪಲ್ ದೋ ಪಲ್ ಕಾ ಶಾಯರ್ ಹೂಂ’ (ನಾನೊಬ್ಬ ಕ್ಷಣಿಕ ಕಾಲದ ಕವಿ) ಎಂಬ ಗೀತೆಯನ್ನು ಆಯ್ದುಕೊಂಡಿದ್ದರು. ಇದೀಗ ಐಪಿಎಲ್‌ನಿಂದ ನಿವೃತ್ತರಾಗುವಾಗಲೂ ಅದೇ ಹಾಡನ್ನು ಸಾಮಾಜಿಕ ಜಾಲತಾಣದ ತಮ್ಮ ಪೋಸ್ಟ್‌ನಲ್ಲಿ ಬಳಸಿದ್ದಾರೆ. ಬದುಕಿನ ಮಹತ್ವದ ತಿರುವುಗಳಲ್ಲಿ ಮನುಷ್ಯರು ಪರಿಚಿತ ಹಾಡು, ನೆನಪು ಅಥವಾ ಸಣ್ಣ ಆಚರಣೆಗಳ ಮೊರೆಹೋಗುವುದನ್ನು ಮನಃಶಾಸ್ತ್ರಜ್ಞರು ‘ಸ್ವಯಂ-ನಿರಂತರತೆ’ (ಸೆಲ್ಫ್-ಕಂಟಿನ್ಯೂಟಿ) ಎಂದು ಕರೆಯುತ್ತಾರೆ.

dhoni 08

ನೆನಪುಗಳ (ನಾಸ್ಟಾಲ್ಜಿಯಾ) ಕುರಿತು ವ್ಯಾಪಕ ಸಂಶೋಧನೆ ನಡೆಸಿರುವ ಮನಃಶಾಸ್ತ್ರಜ್ಞ ಕಾನ್‌ಸ್ಟಂಟೈನ್ ಸೆಡಿಕಿಡಿಸ್ ಅವರ ಪ್ರಕಾರ, ಗತಕಾಲದ ಪರಿಚಿತ ಸಂಗತಿಗಳನ್ನು ಸ್ಮರಿಸುವುದು ಹಳೆಯದಕ್ಕೇ ಅಂಟಿಕೊಳ್ಳುವ ಸಂಕೇತವಲ್ಲ; ಬದಲಿಗೆ ಸಾಗಿ ಬಂದ ಹಾದಿಯ ಮೌಲ್ಯವನ್ನು ಅರ್ಥಮಾಡಿಕೊಂಡು ಹೊಸ ಅಧ್ಯಾಯದತ್ತ ಆತ್ಮವಿಶ್ವಾಸದಿಂದ ಹೆಜ್ಜೆ ಇಡುವ ಭಾವನಾತ್ಮಕ ಸೇತುವೆ. ಧೋನಿ ಅದೇ ಗೀತೆಯನ್ನು ಮತ್ತೊಮ್ಮೆ ಆಯ್ಕೆ ಮಾಡಿಕೊಂಡಿರುವುದು, ತಮ್ಮ ಯಶಸ್ಸು ಹಾಗೂ ಸ್ಥಾನಮಾನಗಳ ನಡುವೆಯೂ ಅವರು ಉಳಿಸಿಕೊಂಡಿರುವ ನಿರ್ಲಿಪ್ತತೆ ಮತ್ತು ಸರಳತೆಗೆ ಕನ್ನಡಿ ಹಿಡಿದಿದೆ.

ರಾಂಚಿಯ ಕನಸುಗಳ ದಿಕ್ಕನ್ನೇ ಬದಲಿಸಿದ ‘ಮಹಿ’

ಬಿಹಾರದಲ್ಲಿ ಜನಿಸಿ, ಉತ್ತರಾಖಂಡದ ಬೇರುಗಳನ್ನು ಹೊಂದಿ, ಜಾರ್ಖಂಡ್‌ನ ರಾಂಚಿಯಲ್ಲಿ ಬೆಳೆದ ಧೋನಿಯ ಕಥೆ ಸಣ್ಣ ನಗರಗಳ ಕೋಟ್ಯಂತರ ಯುವಕರಿಗೆ ಸ್ಫೂರ್ತಿಯ ಚಿಲುಮೆ. ರಾಂಚಿಯ ಶ್ಯಾಮಲಿಯ ಮೆಕಾನ್ ಕಾಲೊನಿಯಲ್ಲಿರುವ, ತಂದೆ ಪಾನ್ ಸಿಂಗ್ ಅವರಿಗೆ ಉದ್ಯೋಗದಾತರು ನೀಡಿದ್ದ ಸಣ್ಣ ಮನೆಯಿಂದ ಅವರ ಪಯಣ ಆರಂಭವಾಯಿತು. ಈಗ ಪೊದೆಗಳಿಂದ ಆವೃತವಾಗಿರುವ ಆ ಮನೆಯ ಬಳಿ ಹಾಲು ಹಂಚುತ್ತಿದ್ದ ಗಂಗು ರಾಮ್, ಬಾಲಕ ಮಹಿ ಮೂರು ಚಕ್ರದ ಸೈಕಲ್ ತುಳಿಯುತ್ತಿದ್ದ ದಿನಗಳನ್ನು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ನಗರದಲ್ಲಿ ಧೋನಿಯ ಪ್ರತಿಮೆಗಳಿಲ್ಲ, ದೊಡ್ಡ ಫ್ಲೆಕ್ಸ್‌ಗಳಿಲ್ಲ; ಆದರೂ “ಅವರ ನೆರಳು ಇಡೀ ರಾಂಚಿಯ ಮೇಲೆ ಹರಡಿದೆ” ಎನ್ನುತ್ತಾರೆ ಮೆಕಾನ್ ಕ್ರೀಡಾಂಗಣದ ಸಿಬ್ಬಂದಿ ರೋಹನ್ ಸಿಂಗ್. ಧೋನಿ ಬಾರಿಸಿದ ಸಿಕ್ಸರ್‌ಗಳಿಗೆ ಒಡೆದುಹೋದ ಕ್ರೀಡಾಂಗಣದ ನೀಲಿ ಕಿಟಕಿ ಗಾಜುಗಳು ಹಾಗೂ ‘ಬ್ಯಾಟ್ ಹಿಡಿದೇ ಮೌನವಾಗಿ ಓಡಾಡುತ್ತಿದ್ದ ಮಗನಂಥ ಹುಡುಗ’ ಎಂಬ ಹಿರಿಯ ಸಿಬ್ಬಂದಿ ಕಿಶನ್ ಲಾಲ್ ಅವರ ಮಾತುಗಳು ಅಲ್ಲಿನ ಜನರ ಪ್ರೀತಿಯನ್ನು ಸಾರುತ್ತವೆ.

dhoni 09

ವಲಸಿಗರೇ (‘ದಿಕು’ಗಳು) ಹೆಚ್ಚಿರುವ ರಾಂಚಿಗೆ ಒಲಿಂಪಿಕ್ ಹಾಕಿ ದಿಗ್ಗಜ ಹಾಗೂ ಆದಿವಾಸಿ ನಾಯಕ ಜೈಪಾಲ್ ಸಿಂಗ್ ಮುಂಡಾ ನಂತರ ಆಧುನಿಕ ಕಾಲಘಟ್ಟದಲ್ಲಿ ಒಂದು ಹೆಮ್ಮೆಯ ಅಸ್ಮಿತೆ ತಂದುಕೊಟ್ಟವರು ಧೋನಿ. ದೆಹಲಿ, ಮುಂಬೈ ಅಥವಾ ಚೆನ್ನೈನಲ್ಲಿ ನೆಲೆಸುವ ಅವಕಾಶವಿದ್ದರೂ ಅವರು ರಾಂಚಿಯನ್ನೇ ಆರಿಸಿಕೊಂಡರು; ಬಂಗಾಳದ ಪರ ಆಡುವಂತೆ ಮಾಜಿ ಆಯ್ಕೆಗಾರ ಸಬಾ ಕರೀಂ ನೀಡಿದ್ದ ಆಹ್ವಾನವನ್ನೂ ತಿರಸ್ಕರಿಸಿ ತಮ್ಮ ನೆಲದಲ್ಲೇ ಉಳಿದರು.

“ಧೋನಿ ಬರುವ ಮುನ್ನ ರಾಂಚಿಯ ಪೋಷಕರು ಮಕ್ಕಳು ವೈದ್ಯರು, ಎಂಜಿನಿಯರ್ ಆಗಬೇಕೆಂದು ಬಯಸುತ್ತಿದ್ದರು. ಅವರು ಬಂದ ಮೇಲೆ ಎಲ್ಲರೂ ಧೋನಿಯಾಗಲು, ವಿಕೆಟ್‌ಕೀಪರ್ ಆಗಲು ಬಯಸಿದರು” ಎನ್ನುತ್ತಾರೆ ಬಾಲ್ಯದ ಕೋಚ್ ಕೇಶವ್ ಬ್ಯಾನರ್ಜಿ. ಅವರು ಓದಿದ ಜವಾಹರ್ ವಿದ್ಯಾ ಮಂದಿರ ‘ಧೋನಿ-ವಾಲಾ ಸ್ಕೂಲ್’ ಎಂದೇ ಖ್ಯಾತವಾಗಿದೆ. ಬಾಲ್ಯದ ಗೆಳೆಯ ಪರಮ್‌ಜಿತ್ ಸಿಂಗ್ (ಛೋಟು) ಅವರ ‘ಪ್ರೈಮ್ ಸ್ಪೋರ್ಟ್ಸ್’ ಅಂಗಡಿಯಲ್ಲಿ ವಿಕೆಟ್‌ಕೀಪಿಂಗ್ ಗ್ಲೌಸ್‌ಗಳಿಗೆ ಬೇಡಿಕೆ ಗಗನಕ್ಕೇರಿತು.

dhoni 10

ಸೌರಭ್ ತಿವಾರಿ, ಪಟ್ನಾದಲ್ಲಿ ಹುಟ್ಟಿ ರಾಂಚಿಯಲ್ಲಿ ಅರಳಿದ ಇಶಾನ್ ಕಿಶನ್, ಕುಮಾರ್ ಕುಶಾಗ್ರ ಹಾಗೂ ರಾಬಿನ್ ಮಿಂಜ್ ಅಂಥ ಪ್ರತಿಭೆಗಳು ಧೋನಿಯ ಹೆಜ್ಜೆಗುರುತುಗಳಲ್ಲೇ ಬೆಳೆದರು. ರಾಬಿನ್ ತಂದೆ ಫ್ರಾನ್ಸಿಸ್ ಅವರನ್ನು ಭೇಟಿಯಾದಾಗಲೆಲ್ಲಾ ಆತ್ಮೀಯವಾಗಿ ವಿಚಾರಿಸಿ, ಬ್ಯಾಟ್-ಗ್ಲೌಸ್ ಉಡುಗೊರೆ ನೀಡಿದ್ದ ಧೋನಿ, ರಾಂಚಿಯ ಹಿನೂ-ಜಮ್ಷೆಡ್‌ಪುರ ಹೆದ್ದಾರಿಯಲ್ಲಿ ಸ್ಪೋರ್ಟ್ಸ್ ಬೈಕ್ ಅಥವಾ ಮರ್ಸಿಡಿಸ್-ಎಎಂಜಿ ಜಿ63 ಕಾರಿನಲ್ಲಿ ಸಾಗುತ್ತಾ, ಜೆಎಸ್‌ಸಿಎ ಕ್ರೀಡಾಂಗಣದಲ್ಲಿ ಬಿಲಿಯರ್ಡ್ಸ್ ಆಡುತ್ತಾ ಅಥವಾ ಮಾತಾ ದೇವರಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾ ಜನರ ನಡುವೆ ನಿಗೂಢ ಆಕರ್ಷಣೆಯಾಗಿ ಉಳಿದಿದ್ದಾರೆ.

ಖರಗ್‌ಪುರದ ರೈಲ್ವೆ ಕ್ವಾರ್ಟರ್ಸ್ ಮತ್ತು ‘ಹೆಲಿಕಾಪ್ಟರ್ ಶಾಟ್’ ಉಗಮ
ಧೋನಿಯ ಆಟಕ್ಕೆ ಮೊನಚು ಸಿಕ್ಕಿದ್ದು ಪಶ್ಚಿಮ ಬಂಗಾಳದ ಖರಗ್‌ಪುರದಲ್ಲಿ. 2001ರಿಂದ 2004ರವರೆಗೆ ಆಗ್ನೇಯ ರೈಲ್ವೆಯಲ್ಲಿ ಟಿಕೆಟ್ ಪರೀಕ್ಷಕರಾಗಿ (ಟಿಟಿಇ) ಕೆಲಸ ಮಾಡುತ್ತಿದ್ದಾಗ, ರೈಲ್ವೆ ಕ್ವಾರ್ಟರ್ಸ್‌ನ ಒಂಟಿತನವನ್ನು ಅವರು ‘ಭೂತ್ ಬಂಗಲೆ’ ಎಂದು ಕರೆಯುತ್ತಿದ್ದರು. ಗೆಳೆಯ ಜೈ ಶುಕ್ಲಾ ಜೊತೆ ಉಳಿದುಕೊಂಡಿದ್ದ ಸೇರ್ಸಾ (SERSA) ಕ್ರೀಡಾಂಗಣದ ಆ ಕೊಠಡಿ ಇಂದು ‘ಎಂ.ಎಸ್. ಧೋನಿ ವಸ್ತುಸಂಗ್ರಹಾಲಯ’ವಾಗಿ ಬದಲಾಗಿದ್ದು, ಅವರ ರೈಲ್ವೆ ನೇಮಕಾತಿ ಪತ್ರ, ಗ್ಲೌಸ್, ಪ್ಯಾಡ್ ಹಾಗೂ ಟ್ರೋಫಿಗಳನ್ನು ಅಲ್ಲಿ ಜೋಪಾನವಾಗಿರಿಸಲಾಗಿದೆ. ಒಂಟಿತನ ನೀಗಿಸಲು ಗೆಳೆಯ ರಾಬಿನ್ ಕುಮಾರ್ ಜೊತೆ ಸೇರಿ ಗೋಲ್‌ಖುಲಿಯ ದುರ್ಗಾ ಮಂದಿರದ ಬಳಿ ಬಾಡಿಗೆ ಮನೆ ಕೇಳಿದಾಗ, ಸ್ಥಳೀಯ ವಿಕೆಟ್‌ಕೀಪರ್ ಸೋಮ ಅವರು ‘ದುರ್ಗಾ ಸ್ಪೋರ್ಟಿಂಗ್ ಕ್ಲಬ್’ ಪರ ಆಡುವ ಷರತ್ತಿನ ಮೇಲೆ ಮನೆ ಕೊಡಿಸಿದರು. ಅಂದಿನಿಂದ ಅದು ‘ಧೋನಿ-ವಾಲಾ ಕ್ಲಬ್’ ಎಂದೇ ಹೆಸರಾಯಿತು.

dhoni 12

ಪಶ್ಚಿಮ ಬಂಗಾಳ ಹಾಗೂ ಒಡಿಶಾದಲ್ಲಿ ನಡೆಯುತ್ತಿದ್ದ ಟೆನಿಸ್ ಬಾಲ್ ಟೂರ್ನಿಗಳಲ್ಲಿ (‘ಖೇಪ್ ಖೇಲಾ’) ಧೋನಿ ಮಿಂಚಿದರು. ಉಳಿದವರಿಗೆ ₹500 ಸಿಗುತ್ತಿದ್ದರೆ ಧೋನಿಗೆ ₹2,000 ಸಂಭಾವನೆ ಸಿಗುತ್ತಿತ್ತು (ಆದರೆ ದುರ್ಗಾ ಕ್ಲಬ್‌ಗಾಗಿ ಎಂದೂ ಹಣ ಪಡೆಯಲಿಲ್ಲ). ಗೆಳೆಯ ರಾಬಿನ್‌ನ ಬಜಾಜ್ ಪಲ್ಸರ್ ಬೈಕ್‌ನಲ್ಲಿ ಮೈದಾನಕ್ಕೆ ಬರುತ್ತಿದ್ದ ಅವರ ಆಟ ನೋಡಲು ಜನ ಮುಗಿಬೀಳುತ್ತಿದ್ದರು. ಜಾಜ್‌ಪುರದ ಮೊಳಕಾಲುದ್ದ ಹುಲ್ಲಿನ ಮೈದಾನದಲ್ಲಿ ಒಂದೇ ಒಂದು ನೆಲಮಟ್ಟದ ಹೊಡೆತ ಆಡದೆ ಏಕಾಂಗಿಯಾಗಿ ಪಂದ್ಯ ಗೆದ್ದಿದ್ದು, 2002ರ ಪಂದ್ಯವೊಂದರಲ್ಲಿ ಕೆಟ್ಟ ಅಂಪೈರಿಂಗ್ ನಡುವೆಯೂ 30 ರನ್‌ಗಳಿಗೆ ಆಲೌಟ್ ಆದಾಗ ಮೈದಾನ ಬಿಡಲು ಒಪ್ಪದೆ, ಬಿರುಗಾಳಿಯಂತೆ ವೇಗದ ಬೌಲಿಂಗ್ ಮಾಡಿ ಪಂದ್ಯ ಟೈ ಮಾಡಿಸಿ ಟಾಸ್ ಮೂಲಕ ಗೆದ್ದಿದ್ದು ಇಂದಿಗೂ ಅಲ್ಲಿನ ದಂತಕಥೆ.

ದುರ್ಗಾ ಮಂದಿರದ ಮೈದಾನದಲ್ಲಿ ಆಫ್-ಸೈಡ್ ಬೌಂಡರಿ ದೂರವಿದ್ದು, ಲೆಗ್-ಸೈಡ್ ಹತ್ತಿರವಿದ್ದ ಕಾರಣ ಚೆಂಡನ್ನು ಕೆಳಗಿನಿಂದಲೇ ತಿರುಗಿಸಿ ಬಾರಿಸುವ ತಂತ್ರವನ್ನು ಸೋಮ ಪರಿಚಯಿಸಿದ್ದರು. ಅದನ್ನೇ ಸಿದ್ಧಿಸಿಕೊಂಡು ವಿಶ್ವವಿಖ್ಯಾತ ‘ಹೆಲಿಕಾಪ್ಟರ್ ಶಾಟ್’ ಆಗಿ ರೂಪಿಸಿದ್ದು ಧೋನಿ. ಬಿಡುವಿನ ವೇಳೆಯಲ್ಲಿ ಜಿಮ್‌ನಲ್ಲಿ ಬೆವರು ಹರಿಸುತ್ತಾ, 15 ವರ್ಷದೊಳಗಿನವರ ಕೋಚ್ ಎಸ್.ಕೆ. ಬ್ಯಾನರ್ಜಿ ಅವರೊಂದಿಗೆ ಅಭ್ಯಾಸ ಮಾಡುತ್ತಾ, ಯಾರೂ ಇಲ್ಲದಿದ್ದಾಗ ಗೋಡೆಗೆ ಚೆಂಡು ಎಸೆದು ಕ್ಯಾಚ್ ಅಭ್ಯಾಸ ಮಾಡುತ್ತಿದ್ದ ಅವರ ಶ್ರದ್ಧೆಯನ್ನು ಗೆಳೆಯ ದೀಪಕ್ ಸಿಂಗ್ ನೆನೆಯುತ್ತಾರೆ. ಕ್ರೀಡಾಂಗಣದ ಪಕ್ಕದ ಮೂಕ ವ್ಯಾಪಾರಿ ಥಾಮಸ್ ಅವರ ‘ಥಾಮಸ್ ಟೀ ಸ್ಟಾಲ್’ಗೆ ಖರಗ್‌ಪುರಕ್ಕೆ ಬಂದಾಗಲೆಲ್ಲಾ ಧೋನಿ ಇಂದಿಗೂ ಚಹಾ ಕುಡಿಯಲು ಭೇಟಿ ನೀಡುತ್ತಾರೆ. ಮಾರ್ಗದರ್ಶಕ ಎ.ಕೆ. ಗಂಗೂಲಿ ಅವರ ನೆರಳಿನಲ್ಲಿ ಬೆಳೆದ ಧೋನಿ, ಸಂಬಳ ಪಡೆಯುವ ದಿನ ಮಾತ್ರ ತಪ್ಪದೆ ಖರಗ್‌ಪುರ ನಿಲ್ದಾಣಕ್ಕೆ ಬರುತ್ತಿದ್ದರು ಎಂದು ಗೆಳೆಯರು ನಗುತ್ತಾ ಹೇಳುತ್ತಾರೆ. 2003ರ ಕೊನೆಯಲ್ಲಿ ಭಾರತ ‘ಎ’ ತಂಡಕ್ಕೆ ಆಯ್ಕೆಯಾದ ಬಳಿಕ 2004ರಲ್ಲಿ ರೈಲ್ವೆ ಉದ್ಯೋಗಕ್ಕೆ ವಿದಾಯ ಹೇಳಿದರು.

dhoni 13

‘ಮಂಜ ತಮಿಳನ್’: ಚೆನ್ನೈನ ದತ್ತುಪುತ್ರ ‘ತಲಾ’
ತಮಿಳಿನಲ್ಲಿ ‘ವಂದಾರೈ ವಾಳವೈಕ್ಕುಂ ಚೆನ್ನೈ’ (ಬಂದವರನ್ನು ಕೈಹಿಡಿದು ಬದುಕಿಸುವ ಚೆನ್ನೈ) ಎಂಬ ಮಾತಿದೆ. ಸಿನಿಮಾ, ರಾಜಕೀಯ, ಸಂಗೀತದಿಂದ ಹಿಡಿದು ಮಾವಿನಹಣ್ಣಿನವರೆಗೂ (ಕಮಲ್–ರಜನಿ, ಇಳಯರಾಜ–ಎ.ಆರ್. ರಹಮಾನ್, ವಿಜಯ್–ಅಜಿತ್, ಕರುಣಾನಿಧಿ–ಜಯಲಲಿತಾ, ಮಲ್ಗೋವಾ–ಸೆಂದೂರ) ಅಭಿಮಾನಿಗಳು ಎರಡು ಬಣಗಳಾಗಿ ವಿಭಜನೆಯಾಗುವ ತಮಿಳುನಾಡಿನಲ್ಲಿ, ಧೋನಿ ಮೇಲಿನ ಪ್ರೀತಿ ಮಾತ್ರ ಎಲ್ಲ ಭಿನ್ನಮತಗಳನ್ನು ಮೀರಿ ನಿಂತಿತು. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ 2021ರಲ್ಲಿ, “ನೀವು ಜಾರ್ಖಂಡ್‌ನವರಾಗಿರಬಹುದು, ಆದರೆ ತಮಿಳರು ‘ಪಚ್ಚ ತಮಿಳನ್’ ಆದರೆ ಧೋನಿ ನಮ್ಮ ಪಾಲಿನ ‘ಮಂಜ ತಮಿಳನ್’ (ಹಳದಿ ಬಣ್ಣದ ತಮಿಳಿಗ)” ಎಂದು ಬಣ್ಣಿಸಿದ್ದರು.

2008ರ ಚೊಚ್ಚಲ ಐಪಿಎಲ್ ಹರಾಜಿನಲ್ಲಿ ಸಿಎಸ್‌ಕೆ ಫ್ರಾಂಚೈಸಿ ಧೋನಿಯನ್ನು $1.5 ಮಿಲಿಯನ್ (ಅಂದಿನ ಮೌಲ್ಯ ಅಂದಾಜು ₹6 ಕೋಟಿ) ದಾಖಲೆ ಮೊತ್ತಕ್ಕೆ ಖರೀದಿಸಿ ನಾಯಕತ್ವ ನೀಡಿತು. ಅದೇ ವರ್ಷದಿಂದ ಆರಂಭವಾದ ‘ಯೆಲ್ಲವ್’ (ಹಳದಿ ಪ್ರೀತಿ) ಕಥೆ ಎರಡು ದಶಕಗಳ ಕಾಲ ಚೆಪಾಕ್ ಕ್ರೀಡಾಂಗಣವನ್ನು ಕ್ರಿಕೆಟ್ ದೇಗುಲವನ್ನಾಗಿಸಿತು. ಎರಡು ವರ್ಷಗಳ ನಿಷೇಧದ ಬಳಿಕ 2018ರಲ್ಲಿ ಸಿಎಸ್‌ಕೆ ಮರಳಿದಾಗ, ಬೆನ್ನ ಮೇಲೆ ‘THALA’ ಎಂದು ಬರೆದಿದ್ದ ಹಳದಿ ಜರ್ಸಿ ಧರಿಸಿ ಮೈದಾನಕ್ಕಿಳಿದ ಧೋನಿ ಚೆನ್ನೈ ಜನತೆಯ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದರು. 2023ರ ಅಹಮದಾಬಾದ್ ಫೈನಲ್‌ನ ಮಳೆಯ ನಡುವೆ ಕೊನೆಯ 2 ಎಸೆತಗಳಲ್ಲಿ 10 ರನ್ ಬೇಕಿದ್ದಾಗ (ಭಾನುವಾರ ಆರಂಭವಾಗಬೇಕಿದ್ದ ಪಂದ್ಯ ಮಂಗಳವಾರ ನಸುಕಿನ 1.30ಕ್ಕೆ ಮುಗಿದಿತ್ತು) ಸಿಎಸ್‌ಕೆ ಐದನೇ ಟ್ರೋಫಿ ಎತ್ತಿಹಿಡಿದ ಕ್ಷಣ ಅವರ ವೃತ್ತಿಜೀವನದ ಪರಮೋಚ್ಚ ಶಿಖರವಾಗಿತ್ತು.

dhoni 14

ಐಪಿಎಲ್ ಅಂಕಿ-ಅಂಶಗಳ ಅಜೇಯ ಶಿಖರ
ಸಿಎಸ್‌ಕೆ ಪರ 17 ಆವೃತ್ತಿಗಳಲ್ಲಿ ಗುರುತಿಸಿಕೊಂಡ ಧೋನಿ, 2016 ಮತ್ತು 2017ರಲ್ಲಿ ಚೆನ್ನೈ ನಿಷೇಧಕ್ಕೊಳಗಾದಾಗ ರೈಸಿಂಗ್ ಪುಣೆ ಸೂಪರ್‌ಜೈಂಟ್ ಪರ ಆಡಿದ್ದರು (2016ರಲ್ಲಿ ನಾಯಕರಾಗಿದ್ದರೆ, 2017ರಲ್ಲಿ ಸ್ಟೀವ್ ಸ್ಮಿತ್ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೇವಲ 1 ರನ್‌ನಿಂದ ಫೈನಲ್ ಸೋತಿದ್ದರು). ತಮ್ಮ ನಾಯಕತ್ವದಲ್ಲಿ ಸಿಎಸ್‌ಕೆ ತಂಡವನ್ನು 12 ಬಾರಿ ಪ್ಲೇ-ಆಫ್ ಹಾಗೂ 10 ಬಾರಿ ಫೈನಲ್‌ಗೆ ಕೊಂಡೊಯ್ದ ಅವರು, 2010, 2011, 2018, 2021 ಹಾಗೂ 2023ರಲ್ಲಿ ಐದು ಐಪಿಎಲ್ ಟ್ರೋಫಿ ಗೆದ್ದುಕೊಟ್ಟರು (ರೋಹಿತ್ ಶರ್ಮಾ ಜೊತೆಗೆ ಜಂಟಿ ದಾಖಲೆ). 2010 ಮತ್ತು 2011ರಲ್ಲಿ ಸತತ ಪ್ರಶಸ್ತಿ ಉಳಿಸಿಕೊಂಡ ಮೊದಲ ನಾಯಕ ಎನಿಸಿಕೊಂಡರಲ್ಲದೆ, 2010 ಹಾಗೂ 2014ರಲ್ಲಿ ಎರಡು ಚಾಂಪಿಯನ್ಸ್ ಲೀಗ್ ಟಿ20 ಪ್ರಶಸ್ತಿಗಳನ್ನೂ ತಂದುಕೊಟ್ಟರು.

ಒಟ್ಟು 278 ಐಪಿಎಲ್ ಪಂದ್ಯಗಳಿಂದ 38.30 ಸರಾಸರಿ ಮತ್ತು 137.45 ಸ್ಟ್ರೈಕ್ ರೇಟ್‌ನಲ್ಲಿ 5,439 ರನ್ ಗಳಿಸಿರುವ ಧೋನಿ, ಶತಕ ಬಾರಿಸದಿದ್ದರೂ 24 ಅರ್ಧಶತಕ ಸಿಡಿಸಿದ್ದಾರೆ. 2019ರಲ್ಲಿ ಅಜೇಯ 84 ರನ್ ಗಳಿಸಿದ್ದು ವೈಯಕ್ತಿಕ ಶ್ರೇಷ್ಠ ಮೊತ್ತ (ಆ ಆವೃತ್ತಿಯಲ್ಲಿ 83.20 ಸರಾಸರಿ). 2018ರ ಆವೃತ್ತಿಯಲ್ಲಿ 75.83 ಸರಾಸರಿ ಹಾಗೂ 150.66 ಸ್ಟ್ರೈಕ್ ರೇಟ್‌ನೊಂದಿಗೆ 455 ರನ್ ಕಲೆಹಾಕಿದ್ದು ಅವರ ಶ್ರೇಷ್ಠ ಬ್ಯಾಟಿಂಗ್ ಋತು. ಸಿಎಸ್‌ಕೆ ಪರ 272 ಪಂದ್ಯ (ಅತಿ ಹೆಚ್ಚು) ಆಡಿ 5,314 ರನ್ (ಎರಡನೇ ಗರಿಷ್ಠ) ಗಳಿಸಿದ್ದಾರೆ. 2023ರಲ್ಲಿ 250 ಐಪಿಎಲ್ ಪಂದ್ಯ ಆಡಿದ ಮೊದಲ ಆಟಗಾರ ಎನಿಸಿಕೊಂಡರು. ಮಂಡಿ ಶಸ್ತ್ರಚಿಕಿತ್ಸೆಯ ಬಳಿಕವೂ 2024ರಲ್ಲಿ ಕೇವಲ ಕೊನೆಯ ಓವರ್‌ಗಳಲ್ಲಿ ಬ್ಯಾಟಿಂಗ್ ಮಾಡಿ 73 ಎಸೆತಗಳಲ್ಲಿ 14 ಬೌಂಡರಿ, 13 ಸಿಕ್ಸರ್ ಸಹಿತ 161 ರನ್ (220.54 ಸ್ಟ್ರೈಕ್ ರೇಟ್) ಸಿಡಿಸಿ 250 ಐಪಿಎಲ್ ಸಿಕ್ಸರ್‌ಗಳ ಗಡಿ ದಾಟಿದರು. ಐಪಿಎಲ್ ಇತಿಹಾಸದಲ್ಲಿ ವಿಕೆಟ್‌ಕೀಪರ್ ಆಗಿ ಅತಿ ಹೆಚ್ಚು ಬಲಿ ಪಡೆದ ದಾಖಲೆಯೂ ಅವರ ಹೆಸರಿನಲ್ಲೇ ಭದ್ರವಾಗಿದೆ.

dhoni 11

ಭಾರತ ಕಂಡ ಸಾರ್ವಕಾಲಿಕ ಶ್ರೇಷ್ಠ ನಾಯಕನೇ?

2007ರಿಂದ 2017ರವರೆಗೆ ಭಾರತದ ಸೀಮಿತ ಓವರ್‌ಗಳ ತಂಡವನ್ನು ಹಾಗೂ 2008ರಿಂದ 2014ರವರೆಗೆ ಟೆಸ್ಟ್ ತಂಡವನ್ನು ಮುನ್ನಡೆಸಿದ ಧೋನಿ, 2007ರ ಚೊಚ್ಚಲ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ (28 ವರ್ಷಗಳ ಬಳಿಕ ಸಿಕ್ಸರ್ ಮೂಲಕ ಗೆಲುವು) ಹಾಗೂ 2013ರ ಚಾಂಪಿಯನ್ಸ್ ಟ್ರೋಫಿ — ಹೀಗೆ ಐಸಿಸಿಯ ಮೂರೂ ಪ್ರಮುಖ ವೈಟ್-ಬಾಲ್ ಟ್ರೋಫಿ ಗೆದ್ದ ವಿಶ್ವದ ಏಕೈಕ ನಾಯಕ. ಇದರೊಂದಿಗೆ ಎರಡು ಏಷ್ಯಾಕಪ್ ಹಾಗೂ ಭಾರತಕ್ಕೆ ಮೊಟ್ಟಮೊದಲ ಬಾರಿಗೆ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದ (ಟೆಸ್ಟ್ ಮೇಸ್) ಗೌರವ ತಂದುಕೊಟ್ಟರು. 90 ಟೆಸ್ಟ್, 350 ಏಕದಿನ ಹಾಗೂ 98 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಂದ 17,000ಕ್ಕೂ ಹೆಚ್ಚು ರನ್ ಗಳಿಸಿರುವ ಅವರನ್ನು 2025ರಲ್ಲಿ ಐಸಿಸಿ ‘ಹಾಲ್ ಆಫ್ ಫೇಮ್’ ಗೌರವಕ್ಕೆ ಸೇರ್ಪಡೆಗೊಳಿಸಲಾಗಿತ್ತು.

ಧೋನಿ ಭಾರತದ ಸಾರ್ವಕಾಲಿಕ ಶ್ರೇಷ್ಠ ನಾಯಕನೇ ಎಂಬ ಚರ್ಚೆಯಲ್ಲಿ ಕ್ರೀಡಾ ತಜ್ಞರ ಭಿನ್ನ ದೃಷ್ಟಿಕೋನಗಳೂ ಗಮನಾರ್ಹವಾಗಿವೆ. ಕ್ರೀಡಾ ಅಂಕಣಕಾರ ಅನಿಂದ್ಯ ದತ್ತಾ ಪ್ರಕಾರ, ಧೋನಿ ಕ್ಷಣಕ್ಷಣದ ಪರಿಸ್ಥಿತಿ ಅರಿತು ನಿರ್ಧಾರ ತೆಗೆದುಕೊಳ್ಳುವ ಅಪ್ರತಿಮ ‘ತಾಂತ್ರಿಕ ನಾಯಕ’ (2007ರ ಫೈನಲ್‌ನಲ್ಲಿ ಜೋಗಿಂದರ್ ಶರ್ಮಾ ಕೈಗೆ ಚೆಂಡು ಕೊಟ್ಟಿದ್ದು, 2011ರ ಫೈನಲ್‌ನಲ್ಲಿ ಬಡ್ತಿ ಪಡೆದು ಕಣಕ್ಕಿಳಿದಿದ್ದು); ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಅವರು ಅತ್ಯುತ್ತಮವಾದರೂ ಟೆಸ್ಟ್ ನಾಯಕತ್ವದಲ್ಲಿ ವಿರಾಟ್ ಕೊಹ್ಲಿ ಮತ್ತು ಸೌರವ್ ಗಂಗೂಲಿ ಹೆಚ್ಚು ಪರಿಣಾಮಕಾರಿಯಾಗಿದ್ದರು. ಆದರೆ ಗೆಲುವಿನ ಲೆಕ್ಕಾಚಾರದಲ್ಲಿ ಧೋನಿ ಅತ್ಯಂತ ಯಶಸ್ವಿ ನಾಯಕ ಎಂದು ಒಪ್ಪಿಕೊಳ್ಳುತ್ತಾರೆ. ನಾಯಕತ್ವದ ಅಳತೆಗೋಲು ಟ್ರೋಫಿಗಳೇ ಆಗಿದ್ದು, ಐಸಿಸಿಯ ಮೂರೂ ಪ್ರಶಸ್ತಿ ಗೆದ್ದ ಅವರ ಸಾಧನೆಗೆ ಸರಿಸಾಟಿಯಿಲ್ಲ; ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮಾತ್ರವಲ್ಲದೆ ಮ್ಯಾಥ್ಯೂ ಹೇಡನ್, ಶೇನ್ ವ್ಯಾಟ್ಸನ್ ಅಂಥ ವಿದೇಶಿ ದಿಗ್ಗಜರು ಹಾಗೂ ಯುವ ಕ್ರಿಕೆಟಿಗರು ಇಂದಿಗೂ ಸಲಹೆಗಾಗಿ ಧೋನಿ ಸುತ್ತ ನೆರೆಯುವುದೇ ಅವರ ನಾಯಕತ್ವದ ಶ್ರೇಷ್ಠತೆಗೆ ಸಾಕ್ಷಿ.

dhoni 15

ಇದೀಗ ಸಿಎಸ್‌ಕೆ ಇತಿಹಾಸದಲ್ಲೇ ಮೊದಲ ಬಾರಿಗೆ ‘ಟೀಮ್ ಮೆಂಟರ್’ ಹುದ್ದೆಯನ್ನು ಸೃಷ್ಟಿಸಲಾಗಿದ್ದು, ಧೋನಿ ಆ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಹಳದಿ ಬಣ್ಣದ ನಂ.7 ಜರ್ಸಿ ಇನ್ನು ಮೈದಾನದಲ್ಲಿ ಕಾಣಿಸದಿರಬಹುದು, ವಿಕೆಟ್‌ಕೀಪಿಂಗ್ ಗ್ಲೌಸ್ ಬದಿಗಿಟ್ಟಿರಬಹುದು; ಆದರೆ ಮೆಂಟರ್ ಟೋಪಿ ಧರಿಸಿ ಡಗೌಟ್‌ನಲ್ಲಿ ಕೂರುವ ‘ತಲಾ’ ಮೇಲಿನ ಅಭಿಮಾನ ಮತ್ತು ಅವರ ಕ್ರಿಕೆಟ್ ಪರಂಪರೆ ಎಂದೆಂದಿಗೂ ಅಜರಾಮರ.

blank profile picture 973460 640
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸ್ಟೆಲ್‌ನಿಂದ ಪರಾರಿ ಪ್ರಯತ್ನ: ವಿದ್ಯುತ್ ತಂತಿ ತಗುಲಿ 11ರ ಬಾಲಕಿ ದುರ್ಮರಣ

ಸರ್ಕಾರಿ ಶಾಲಾ ಆವರಣದಲ್ಲಿರುವ ಬಾಲಕಿಯರ ಹಾಸ್ಟೆಲ್‌ನಿಂದ ವಿದ್ಯಾರ್ಥಿನಿಯರು ತಪ್ಪಿಸಿಕೊಂಡು ಹೊರಗೆ ಹೋಗಲು...

‘ರೀಲ್ಸ್ ಮಾಡುವವರಿಗೆ ಪತ್ರಕರ್ತರ ರಕ್ಷಣೆ ಅನ್ವಯಿಸದು’: ಸುಪ್ರೀಂ ಕೋರ್ಟ್‌ಗೆ ದೆಹಲಿ ಪೊಲೀಸ್ ಅಫಿಡವಿಟ್‌!

 ಪ್ರತಿಭಟನೆಗಳನ್ನು ವರದಿ ಮಾಡಲು ಪತ್ರಕರ್ತರಿಗೆ ಯಾವುದೇ ಅಡ್ಡಿಯಾಗದಂತೆ ಸುಪ್ರೀಂ ಕೋರ್ಟ್ ನೀಡಿರುವ...

ಈ ದಿನ ಸಂಪಾದಕೀಯ | ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಲಿ

ಪ್ರತಿಯೊಂದು ಬೇಡಿಕೆಯನ್ನೂ ಹೋರಾಟದ ಮೂಲಕವೇ ಪಡೆಯಿರಿ ಎನ್ನುವ ಸರ್ಕಾರಗಳ ಧೋರಣೆಯು ಸರಿಯಲ್ಲ....

ಹೆಬ್ಬಂಡೆಯೊಳಗೊಂದು ಡೈನೋಸಾರ್ ಕೌತುಕ: 7.5 ಕೋಟಿ ವರ್ಷ ಹಳೆಯ ಪಳೆಯುಳಿಕೆ ಪತ್ತೆ!

ಆ ಡೈನೋಸಾರ್ ಬದುಕಿದ್ದು 750 ಲಕ್ಷ ವರ್ಷಗಳ ಹಿಂದೆ. ಮಾನವ ಪ್ರಭೇದದ...