ಅಮೆರಿಕದ ರಾಜಕೀಯ ಇತಿಹಾಸದಲ್ಲಿ ಹೊಸ ಶಕೆಯೊಂದು ಆರಂಭವಾಗಿದೆ. ಮಿಶಿಗನ್ ರಾಜ್ಯದಿಂದ ಡೆಮಾಕ್ರಟಿಕ್ ಪಕ್ಷದ ಪ್ರಗತಿಪರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಬ್ದುಲ್ ಎಲ್ ಸಯ್ಯದ್ ಅವರು ಅಮೆರಿಕದ ಉನ್ನತ ಸದನವಾದ ಸೆನೇಟ್‌ಗೆ ಆಯ್ಕೆಯಾಗಿದ್ದಾರೆ. ಈ ಮೂಲಕ ಅವರು ಅಮೆರಿಕದ ಸೆನೇಟ್ ಪ್ರವೇಶಿಸಲಿರುವ ದೇಶದ ಮೊದಲ ಮುಸ್ಲಿಂ ಎಂಬ ಐತಿಹಾಸಿಕ ಸಾಧನೆ ಮಾಡಿದ್ದಾರೆ. ತಮ್ಮ ಪ್ರತಿಸ್ಪರ್ಧಿ, ರಿಪಬ್ಲಿಕನ್ ಪಕ್ಷದ ಮೈಕ್ ರೋಜರ್ಸ್ ಅವರನ್ನು ಭಾರಿ ಅಂತರದಿಂದ ಮಣಿಸಿರುವ ಸಯ್ಯದ್, 2027ರ ಜನವರಿಯಲ್ಲಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಪಕ್ಷದೊಳಗಿನ ಭಿನ್ನಮತ ಹಾಗೂ ಎದುರಾಳಿಗಳ ಭಾರಿ ಚುನಾವಣಾ ವೆಚ್ಚದ ನಡುವೆಯೂ ಒಲಿದ ಈ ಗೆಲುವು, ಅಮೆರಿಕದ ಪ್ರಜಾಪ್ರಭುತ್ವದಲ್ಲಿ ಮಹತ್ವದ ಮೈಲಿಗಲ್ಲು ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ.
ನವೆಂಬರ್ 4ರಂದು ಫಲಿತಾಂಶ ಪ್ರಕಟವಾದ ಬಳಿಕ ಬೆಂಬಲಿಗರನ್ನು ಉದ್ದೇಶಿಸಿ ಮಾಡಿದ ವಿಜಯ ಭಾಷಣದಲ್ಲಿ ಅವರು, ಈ ಗೆಲುವನ್ನು ‘ಸಾಮಾನ್ಯ ಜನರ ಸಂಘಟಿತ ಶಕ್ತಿಯ ಪ್ರತಿಫಲ’ ಎಂದು ಬಣ್ಣಿಸಿದರು. ಚುನಾವಣಾ ಪ್ರಚಾರದ ಉದ್ದಕ್ಕೂ ಹರಿದಾಡಿದ ಭಾರಿ ಪ್ರಮಾಣದ ಕಾರ್ಪೊರೇಟ್ ಹಣದ ಪ್ರಭಾವವನ್ನು ಮೆಟ್ಟಿಬೆಳೆದಿರುವ ಈ ವಿಜಯ, ಹಣಬಲವನ್ನು ಜನಬಲ ಮಣಿಸಿದ ಸ್ಪಷ್ಟ ನಿದರ್ಶನವಾಗಿದೆ. “ರಾಜಕೀಯದ ಮೇಲೆ ದೊಡ್ಡ ಉದ್ಯಮಿಗಳು ಮತ್ತು ಕಾರ್ಪೊರೇಟ್ ಹಣದ ಪ್ರಭಾವವನ್ನು ತಗ್ಗಿಸುವುದು ನನ್ನ ಪ್ರಮುಖ ಆದ್ಯತೆಯಾಗಲಿದೆ” ಎಂದು ಸಯ್ಯದ್ ಘೋಷಿಸಿದರು.
ಜನಸಾಮಾನ್ಯರು ಮತ್ತು ಮಧ್ಯಮ ವರ್ಗದ ಕುಟುಂಬಗಳ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡಲು ತಕ್ಷಣದ ಆದ್ಯತೆ ನೀಡುವುದಾಗಿ ನೂತನ ಸೆನೇಟರ್ ಭರವಸೆ ನೀಡಿದರು. “ಇಂದಿನ ದಿನಗಳಲ್ಲಿ ಆಹಾರ, ಇಂಧನ, ವಸತಿ ಮತ್ತು ವೈದ್ಯಕೀಯ ಚಿಕಿತ್ಸೆಯ ವೆಚ್ಚಗಳನ್ನು ಭರಿಸುವುದು ಜನಸಾಮಾನ್ಯರಿಗೆ ಅತ್ಯಂತ ಕಷ್ಟಕರವಾಗುತ್ತಿದೆ. ಇದು ಹೀಗೆಯೇ ಮುಂದುವರಿಯಬಾರದು. ದೇಶದ ಪ್ರತಿಯೊಬ್ಬರಿಗೂ ಕೈಗೆಟಕುವ ದರದಲ್ಲಿ ಗುಣಮಟ್ಟದ ಆರೋಗ್ಯ ರಕ್ಷಣೆ ಸಿಗಬೇಕು” ಎಂದು ಅವರು ಆಗ್ರಹಿಸಿದರು. ಆರ್ಥಿಕ ನೀತಿಗಳು ಕೇವಲ ಶ್ರೀಮಂತರ ಪರವಾಗಿರದೆ, ದುಡಿಯುವ ವರ್ಗದ ಪರವಾಗಿರಬೇಕು ಎಂಬುದನ್ನು ಅವರು ತಮ್ಮ ಭಾಷಣದುದ್ದಕ್ಕೂ ಪ್ರತಿಪಾದಿಸಿದರು.
ಚುನಾವಣಾ ಪ್ರಚಾರದ ವೇಳೆ ತಮ್ಮ ಹೆಸರು ಮತ್ತು ಧರ್ಮವನ್ನು ಗುರಿಯಾಗಿಸಿಕೊಂಡು ನಡೆಸಿದ ದ್ವೇಷದ ಪ್ರಚಾರವನ್ನು ಮಿಶಿಗನ್ ಮತದಾರರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ ಎಂದು ಸಯ್ಯದ್ ಹರ್ಷ ವ್ಯಕ್ತಪಡಿಸಿದರು. “ಜನರ ದೈನಂದಿನ ಬದುಕಿನ ಜ್ವಲಂತ ಸಮಸ್ಯೆಗಳಿಗೆ ನನ್ನ ಧಾರ್ಮಿಕ ಗುರುತು ಖಂಡಿತಾ ಕಾರಣವಲ್ಲ” ಎಂದು ವಿರೋಧಿಗಳಿಗೆ ಕಟುವಾಗಿ ತಿರುಗೇಟು ನೀಡಿದರು. ವಿಭಿನ್ನ ಹಿನ್ನೆಲೆ, ಸಂಸ್ಕೃತಿ ಮತ್ತು ನಂಬಿಕೆಗಳನ್ನು ಹೊಂದಿರುವ ಪ್ರತಿಯೊಬ್ಬರಿಗೂ ಈ ದೇಶದಲ್ಲಿ ಸಮಾನ ಸ್ಥಾನ ಮತ್ತು ಅವಕಾಶಗಳಿರಬೇಕು ಎಂಬುದು ಅವರ ಭಾಷಣದ ಪ್ರಮುಖ ಸಂದೇಶವಾಗಿತ್ತು.
ದೇಶದ ವಿದೇಶಾಂಗ ನೀತಿ ಹಾಗೂ ತೆರಿಗೆ ಹಣದ ಬಳಕೆಯ ಕುರಿತೂ ಅವರು ತಮ್ಮ ದಿಟ್ಟ ನಿಲುವನ್ನು ಸ್ಪಷ್ಟಪಡಿಸಿದರು. “ಅಮೆರಿಕದ ತೆರಿಗೆದಾರರ ಕಷ್ಟದ ಹಣವನ್ನು ದೇಶದ ಒಳಗಿನ ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗೆ ಬಳಸಬೇಕೇ ವಿನಃ, ವಿದೇಶಿ ಯುದ್ಧಗಳಿಗೆ ಮತ್ತು ಶಸ್ತ್ರಾಸ್ತ್ರ ಮಾರಾಟಕ್ಕೆ ಸುರಿಯಬಾರದು” ಎಂದು ಅವರು ಕಟ್ಟುನಿಟ್ಟಾಗಿ ಹೇಳಿದರು. ಇಸ್ರೇಲ್‌ಗೆ ನೆರವು ಮತ್ತು ಯುದ್ಧಾಸ್ತ್ರ ಮಾರಾಟದಂತಹ ವಿಚಾರಗಳಲ್ಲಿ ಎಲ್ ಸಯ್ಯದ್ ಅವರ ಈ ನಿಲುವುಗಳು, ಸೆನೇಟ್‌ನಲ್ಲಿ ಭವಿಷ್ಯದ ವಿದೇಶಾಂಗ ನೀತಿಯ ಚರ್ಚೆಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ.
ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕುರಿತು ಮಾತನಾಡಿದ ಅವರು, ಪ್ಯಾಲೆಸ್ತೀನಿ ಮಕ್ಕಳ ಸುರಕ್ಷತೆ, ಅವರ ಶಾಂತಿ, ಘನತೆ ಮತ್ತು ಸ್ವನಿರ್ಣಯದ ಸಮಾನ ಹಕ್ಕುಗಳನ್ನು ಎತ್ತಿ ಹಿಡಿದರು. ಇಂತಹ ಅಪ್ಪಟ ಮಾನವೀಯ ಹಕ್ಕುಗಳನ್ನು ಬೆಂಬಲಿಸುವುದನ್ನೇ ‘ದ್ವೇಷ’ ಎಂದು ಚಿತ್ರಿಸುವ ಹಾಗೂ ಸತ್ಯವನ್ನು ತಿರುಚುವ ಕುತಂತ್ರಗಳನ್ನು ಅವರು ತೀವ್ರವಾಗಿ ಪ್ರಶ್ನಿಸಿದರು. ಜಾಗತಿಕ ಮಟ್ಟದಲ್ಲಿ ಎಲ್ಲರಿಗೂ ಸಮಾನ ಬದುಕುವ ಹಕ್ಕಿದೆ ಎಂಬುದನ್ನು ಅಮೆರಿಕದ ಸೆನೇಟ್‌ನಲ್ಲಿ ಪ್ರತಿಧ್ವನಿಸುವ ಸ್ಪಷ್ಟ ಮುನ್ಸೂಚನೆಯನ್ನು ಅವರು ನೀಡಿದರು.
ಇದೇ ವೇಳೆ, ಪ್ರಚಾರದ ಸಂದರ್ಭದಲ್ಲಿ ತಮ್ಮ ಹೆಸರನ್ನು ಪದೇಪದೇ ಲೇವಡಿ ಮಾಡಿದ್ದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಎಲ್ ಸಯ್ಯದ್ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದರು. “ಜನವರಿಯಲ್ಲಿ ನಾನು ಪ್ರಮಾಣವಚನ ಸ್ವೀಕರಿಸಿದ ಬಳಿಕ, ನೀವು ನನ್ನನ್ನು ಸೆನೇಟರ್ ಎಂದು ಕರೆಯಬಹುದು” ಎಂದು ಅವರು ನೀಡಿದ ಟಾಂಗ್ ಬೆಂಬಲಿಗರಲ್ಲಿ ಹೊಸ ಉತ್ಸಾಹ ಮೂಡಿಸಿತು. ಕೇವಲ ಅಧಿಕಾರಕ್ಕಾಗಿ ಒಂದು ಸ್ಥಾನವನ್ನು ಗೆಲ್ಲುವುದು ತಮ್ಮ ಗುರಿಯಲ್ಲ; ಬದಲಾಗಿ ಆ ಸ್ಥಾನವನ್ನು ಜನಪರವಾದ ನೈಜ ರಾಜಕೀಯ ಬದಲಾವಣೆಗೆ ಬಳಸಿಕೊಳ್ಳುವುದಾಗಿ ಅವರು ವಾಗ್ದಾನ ಮಾಡಿದರು.
ಅಬ್ದುಲ್ ಎಲ್ ಸಯ್ಯದ್ ಹಿನ್ನೆಲೆ ಮತ್ತು ಕರುನಾಡ ನಂಟು
42 ವರ್ಷದ ಸಯ್ಯದ್ ಮಿಶಿಗನ್‌ನಲ್ಲಿ ಜನಿಸಿದರು. ಈಜಿಪ್ಟ್‌ನಿಂದ ವಲಸೆ ಬಂದ ತಂದೆ ಹಾಗೂ ಮಿಶಿಗನ್ ಮೂಲದ ಮಲತಾಯಿಯ ಆರೈಕೆಯಲ್ಲಿ ಬೆಳೆದ ಅವರು, ಮಿಶಿಗನ್ ಮತ್ತು ಕೊಲಂಬಿಯಾ ವಿವಿಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆದರು. ಆಕ್ಸ್‌ಫರ್ಡ್ ವಿವಿಯಲ್ಲಿ ‘ರೋಡ್ಸ್ ಸ್ಕಾಲರ್’ ಆಗಿ 2ನೇ ಡಾಕ್ಟರೇಟ್ ಪೂರೈಸಿದರು. ವೈಯಕ್ತಿಕ ವೈದ್ಯಕೀಯ ವೃತ್ತಿಗಿಂತ ವ್ಯವಸ್ಥೆಯ ಮೂಲಭೂತ ಸಮಸ್ಯೆಗಳ ನಿವಾರಣೆಗೆ ಒತ್ತು ನೀಡಿದ ಅವರು, ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸಯ್ಯದ್ ಅವರ ಪತ್ನಿ ಸಾರಾ ಜುಕಾಕು ಮನೋವೈದ್ಯೆಯಾಗಿದ್ದು, ಇವರ ಪೋಷಕರು ಭಾರತೀಯ ಮೂಲದವರಾಗಿದ್ದು, ಕರ್ನಾಟಕದ ಕರಾವಳಿ ತೀರದ ಭಟ್ಕಳದವರಾಗಿದ್ದಾರೆ.




